ಈ ದಿನ ಸಂಪಾದಕೀಯ | ‘ಸುಪ್ರೀಮ್’ ನೀಡಿದ ಎರಡು ವ್ಯತಿರಿಕ್ತ ತೀರ್ಪುಗಳು! ಅರವಿಂದ್‌ಗೆ ಒಂದು ನ್ಯಾಯ, ಉಮರ್‌ಗೆ ಮತ್ತೊಂದೇ?

Date:

“ಮೂರರಿಂದ ಹದಿನೇಳು ತಿಂಗಳುಗಳ ಜೈಲುವಾಸಕ್ಕೆ ಸಂಬಂಧಿಸಿದ ಅನೇಕ ಕೇಸುಗಳಲ್ಲಿ, ದೀರ್ಘಾವಧಿಯ ಜೈಲುವಾಸದ ಕಾರಣವನ್ನು ಉಲ್ಲೇಖಿಸಿ ಜಾಮೀನು ಮಂಜೂರು ಮಾಡಿದೆ. ವಿಚಾರಣೆಯನ್ನೇ ಆರಂಭಿಸದೆ, ಇಲ್ಲವೇ ವಿಚಾರಣೆಯ ನ್ಯಾಯಯುತ ಪ್ರಗತಿ ಕಾಣದೆ, ವಿಚಾರಣಾಧೀನ ಕೈದಿಯನ್ನು ದೀರ್ಘಾವಧಿ ಕಾಲ ಜೈಲಿನಲ್ಲಿ ಇಡುವಂತಿಲ್ಲ. ಹೀಗೆ ವಿಚಾರಣೆಗೆ ಮುನ್ನವೇ ದೀರ್ಘಾವಧಿ ಜೈಲಿನಲ್ಲಿಡುವುದು ವಿಚಾರಣಾಪೂರ್ವದಲ್ಲೇ ಶಿಕ್ಷೆಗೆ ಗುರಿ ಮಾಡಿದಂತೆ ಆಗುತ್ತದೆ” ಎಂದು ಸುಪ್ರೀಮ್ ಕೋರ್ಟು ಮಂಗಳವಾರ ನೀಡಿದ ತೀರ್ಪಿನಲ್ಲಿ ಸ್ಪಷ್ಟವಾಗಿ ಮತ್ತು ಖಚಿತವಾಗಿ ವಿಧಿಸಲಾಗಿದೆ.

‘ಜಾಮೀನೇ ನಿಯಮ-ಜೈಲು ವಿನಾಯಿತಿ’ (Bail is the rule and Jail is the exception) ಎಂಬ ಮಾತು ಭಾರತೀಯ ನ್ಯಾಯಶಾಸ್ತ್ರದ ತಳಪಾಯ ತತ್ವ. ಆರೋಪಿಗೆ ಶಿಕ್ಷೆಯಾಗುವ ಮುನ್ನವೇ ಜೈಲಿನಲ್ಲಿಟ್ಟು, ಸ್ವಾತಂತ್ರ್ಯಕ್ಕೆ ಎರವಾಗುವುದು ಸರಿಯಲ್ಲ. ವಿಚಾರಣೆ ಬಾಕಿ ಇರುವಂತೆಯೇ ಜಾಮೀನು ನೀಡಬೇಕು ಎಂಬುದು ಮೇಲ್ಕಂಡ ತತ್ವದ ಸರಳ ಅರ್ಥ.

ತಪ್ಪಿತಸ್ಥಳು-ತಪ್ಪಿತಸ್ಥನೆಂದು ರುಜುವಾತಾಗುವ ತನಕ ಆರೋಪಿಯು ಅಮಾಯಕ ಎಂದು ಪರಿಗಣಿಸಬೇಕು. ವಿಚಾರಣೆಗೆ ಮುನ್ನ ಮಾಡುವ ದಸ್ತಗಿರಿಗೆ ಶಿಕ್ಷೆಯ ರೂಪ ನೀಡತಕ್ಕದ್ದಲ್ಲ. 1977ರಲ್ಲಿ ಸುಪ್ರೀಮ್ ಕೋರ್ಟಿನಲ್ಲಿ ಸ್ಟೇಟ್ ಆಫ್ ರಾಜಸ್ತಾನ್ ವರ್ಸಸ್ ಬಾಲ್ಚಂದ್ ಮೊಕದ್ದಮೆ ಸಂಬಂಧ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಅವರು ನೀಡಿದ್ದ ಐತಿಹಾಸಿಕ ತೀರ್ಪಿನ ಭಾಗವಾಗಿ ಬಂದ ತತ್ವವಿದು- ‘ಜಾಮೀನು ಎಂಬುದು ಮೂಲ ನಿಯಮ, ಜೈಲು ಅಲ್ಲ’ (“The basic rule may perhaps be tersely put as bail, not jail”).

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂವಿಧಾನದ 21ನೆಯ ಕಲಮು, ಪ್ರಾಣ ಮತ್ತು ವ್ಯಕ್ತಿಗತ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದೆ. ಕಾನೂನಿನ ಅಗತ್ಯ ಪ್ರಕ್ರಿಯೆಯಿಲ್ಲದೆ ಯಾವುದೇ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಚ್ಯುತಿ ತರಕೂಡದು ಎಂದು ಸಾರಿದೆ.

ಜಾಮೀನೇ ನಿಯಮ, ಜೈಲು ವಿನಾಯತಿ ಎಂಬ ತತ್ವವನ್ನು ಸುಪ್ರೀಮ್ ಕೋರ್ಟು ಹತ್ತಾರು ಕೇಸುಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಮತ್ತೆ ಮತ್ತೆ ಒತ್ತು ಕೊಟ್ಟು ಹೇಳಿದೆ. ಯು.ಎ.ಪಿ.ಎ. (ಅಕ್ರಮ ಚಟುವಟಿಕೆಗಳ ನಿಗ್ರಹ ಕಾಯಿದೆ) ಮತ್ತು ಪಿ.ಎಂ.ಎಲ್.ಎ. (ಅಕ್ರಮ ಹಣ ವರ್ಗಾವಣೆ ಕಾಯಿದೆ) ತರಹದ ಕಠೋರ ಕಾಯಿದೆಗಳಿಗೂ ಅನ್ವಯ ಆಗುವುದೆಂದೂ ಸಾರಿದೆ.

ಪ್ರೇಮ್ ಪ್ರಕಾಶ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಜಲಾಲುದ್ದೀನ್ ಖಾನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟು 2024ರಲ್ಲಿ ನೀಡಿರುವ ತೀರ್ಪುಗಳನ್ನೇ ಪರಿಗಣಿಸಬಹುದು. ವಿಶೇಷ ಕಾಯಿದೆಗಳಿಗೆ ಸಂಬಂಧಿಸಿದಂತೆಯೂ “bail is the rule and jail is the exception” ಎಂದೇ ವಿಧಿಸಿದೆ. ಪರಾರಿಯಾಗುವ, ಸಾಕ್ಷ್ಯಗಳನ್ನು ತಿರುಚುವ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಇಲ್ಲವೇ ಮಾಡಿದ ಗಂಭೀರ ಅಪರಾಧವನ್ನೇ ಮತ್ತೆ ಮಾಡುವ ಸಾಧ್ಯತೆಗಳಿದ್ದಾಗ ಮಾತ್ರವೇ ‘ಜಾಮೀನು ನಿಯಮ…’ ಎಂಬ ತತ್ವವನ್ನು ಪಕ್ಕಕ್ಕೆ ಸರಿಸಲು ಬಂದೀತು ಎಂದೂ ಸ್ಪಷ್ಟಪಡಿಸಿದೆ.

ಮಂಗಳವಾರ (06.01.2026) ಸುಪ್ರೀಮ್ ಕೋರ್ಟ್ ನೀಡಿದ ಮತ್ತೊಂದು ತೀರ್ಪು ಪರೋಕ್ಷವಾಗಿ ಈ ತತ್ವವನ್ನೇ ಎತ್ತಿ ಹಿಡಿದಿದೆ. ‘ಅಪರಾಧದ ಸ್ವರೂಪವು ಎಂತಹುದೇ ಆಗಿದ್ದರೂ, ತ್ವರಿತ ವಿಚಾರಣೆಯು ಆರೋಪಿಯ ಮೂಲಭೂತ  ಹಕ್ಕಾಗಿರುತ್ತದೆ’ ಎಂದು ನ್ಯಾಯಮೂರ್ತಿಗಳಾದ ಸಂಜಯ ಕುಮಾರ್ ಮತ್ತು ಆಲೋಕ್ ಆರಾಧೆಯವರ ನ್ಯಾಯಪೀಠ ವಿಧಿಸಿದೆ. ತ್ವರಿತಗತಿಯ ವಿಚಾರಣೆಯು ಆರೋಪಿಯ ಮೂಲಭೂತ ಹಕ್ಕು. ಅಪರಾಧದ ಸ್ವರೂಪವು ಏನೇ ಇರಲಿ, ಈ ಮೂಲಭೂತ ಹಕ್ಕಿಗೆ ಗ್ರಹಣ ಹಿಡಿಸುವಂತಿಲ್ಲ. ವಿಚಾರಣೆಯಲ್ಲಿ ವಿಳಂಬ ಉಂಟಾದರೆ, ಜಾಮೀನು ನೀಡಲೇಬೇಕು ಎಂದಿದೆ. ಇದೇ ಆಧಾರದಲ್ಲಿ ಆ್ಯಮ್ಟೆಕ್ ಗ್ರೂಪ್ ನ ಮಾಜಿ ಅಧ್ಯಕ್ಷ ಅರವಿಂದ್ ಧಾಮ್ ಎಂಬುವರಿಗೆ ಜಾಮೀನು ಮಂಜೂರು ಮಾಡಿದೆ. ಅಕ್ರಮ ಹಣ ವರ್ಗಾವಣೆ (ಪಿಎಂಎಲ್ಎ) ಆರೋಪದಡಿ ಕಳೆದ 16 ತಿಂಗಳುಗಳಿಂದ ಧಾಮ್ ಜೈಲಿನಲ್ಲಿದ್ದಾರೆ. ತ್ವರಿತಗತಿಯ ವಿಚಾರಣೆಯ ಹಕ್ಕನ್ನು ಸಂವಿಧಾನದ 21ನೆಯ ಕಲಮಿನಲ್ಲಿ ಸ್ಥಿರಗೊಳಿಸಲಾಗಿದೆ ಎಂದೂ ನ್ಯಾಯಪೀಠ ಉಲ್ಲೇಖಿಸಿದೆ. “ಮೂರರಿಂದ ಹದಿನೇಳು ತಿಂಗಳುಗಳ (ಒಂದು ವರ್ಷ ಐದು ತಿಂಗಳುಗಳು) ಜೈಲುವಾಸಕ್ಕೆ ಸಂಬಂಧಿಸಿದ ಅನೇಕ ಕೇಸುಗಳಲ್ಲಿ, ದೀರ್ಘಾವಧಿಯ ಜೈಲುವಾಸದ ಕಾರಣವನ್ನು ಉಲ್ಲೇಖಿಸಿ ಜಾಮೀನು ಮಂಜೂರು ಮಾಡಿದೆ. ವಿಚಾರಣೆಯನ್ನೇ ಆರಂಭಿಸದೆ, ಇಲ್ಲವೇ ವಿಚಾರಣೆಯ ನ್ಯಾಯಯುತ ಪ್ರಗತಿ ಕಾಣದೆ, ವಿಚಾರಣಾಧೀನ ಕೈದಿಯನ್ನು ದೀರ್ಘಾವಧಿ ಕಾಲ ಜೈಲಿನಲ್ಲಿ ಇಡುವಂತಿಲ್ಲ. ಹೀಗೆ ವಿಚಾರಣೆಗೆ ಮುನ್ನವೇ ದೀರ್ಘಾವಧಿ ಜೈಲಿನಲ್ಲಿಡುವುದು ವಿಚಾರಣಾಪೂರ್ವದಲ್ಲೇ ಶಿಕ್ಷೆಗೆ ಗುರಿ ಮಾಡಿದಂತೆ ಆಗುತ್ತದೆ” ಎಂದು ಮಂಗಳವಾರದ ತೀರ್ಪಿನಲ್ಲಿ ಸ್ಪಷ್ಟವಾಗಿ ಮತ್ತು ಖಚಿತವಾಗಿ ವಿಧಿಸಲಾಗಿದೆ.

2021ರಲ್ಲಿ ಯುಎಪಿಎ ಅಡಿ ಬಂಧಿಸಲಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕೆ.ಎ.ನಜೀಬ್ ಎಂಬ ಆರೋಪಿಗೆ ಸುಪ್ರೀಮ್ ಕೋರ್ಟು ಜಾಮೀನು ಮಂಜೂರು ಮಾಡಿತ್ತು. ಇಂದು ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿರುವ ಸೂರ್ಯಕಾಂತ್ ಅವರೇ ಅಂದು ನ್ಯಾಯಮೂರ್ತಿಯಾಗಿ ಈ ತೀರ್ಪು ನೀಡಿದ್ದರು. ಮಲೆಯಾಳಂ ಪ್ರೊಫೆಸರೊಬ್ಬರ ಕೈಯನ್ನು ಕಡಿದು ಹಾಕಿ, ಸುತ್ತಮುತ್ತ ನೆರೆದವರ ಮೇಲೆ ಬಾಂಬ್ ಎಸೆದ ಆರೋಪಿಗಳಲ್ಲೊಬ್ಬರಾಗಿದ್ದರು ನಜೀಬ್. ಮೂವರು ನ್ಯಾಯಮುರ್ತಿಗಳ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿ ಸೂರ್ಯಕಾಂತ್ ಅವರೇ ಈ ತೀರ್ಪು ಬರೆದಿದ್ದರು. ‘ಆರೋಪಿಯ ಮೂಲಭೂತ ಹಕ್ಕಿನ ಉಲ್ಲಂಘನೆಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡುವ ಸಾಂವಿಧಾನಿಕ ಕೋರ್ಟ್‌ಗಳ ಅಧಿಕಾರವನ್ನು ಯುಎಪಿಎ ಕಾಯಿದೆಯೇನೂ ಕಿತ್ತುಕೊಂಡಿಲ್ಲ ಎಂಬುದಾಗಿ ತೀರ್ಪಿನಲ್ಲಿ ವಿಧಿಸಲಾಗಿತ್ತು. ಯುಎಪಿಎ ಅಡಿ ವಿಧಿಸಬಹುದಾದ ಜೈಲು ಶಿಕ್ಷೆಯ ಸಾಕಷ್ಟು ಅವಧಿಯನ್ನು ಆರೋಪಿಯು ವಿಚಾರಣಾಪೂರ್ವದಲ್ಲೇ ಕಳೆದಿದ್ದ ಪಕ್ಷದಲ್ಲಿ ಮತ್ತು ವಿಚಾರಣೆಯು ನ್ಯಾಯಬದ್ಧ ಅವಧಿಯ ಒಳಗಾಗಿ ಪೂರ್ಣಗೊಳ್ಳುವ ಸಾಧ್ಯತೆಯೇ ಕಾಣದಿದ್ದರೆ ಜಾಮೀನು ನೀಡಲೇಬೇಕಾಗುತ್ತದೆ’ ಎಂದು ನ್ಯಾಯಪೀಠದ ಪರವಾಗಿ ಅವರು ಬರೆದಿದ್ದ ತೀರ್ಪು ವಿಧಿಸಿತ್ತು.

ಆದರೆ ಸೋಮವಾರ (5.01.2026) ಹೊರಬಿದ್ದ ಸುಪ್ರೀಮ್ ಕೋರ್ಟ್ ತೀರ್ಪು, ತನ್ನದೇ ಆದ ಈ ಎಲ್ಲ ತೀರ್ಪುಗಳಿಗೆ ವ್ಯತಿರಿಕ್ತವಾಗಿದೆ. ಉಮರ್ ಖಾಲೀದ್ ಮತ್ತು ಶರ್ಜೀಲ್ ಇಮಾಂ ಅವರು ಐದು ವರ್ಷಗಳಿಗೂ (ಸುಮಾರು 60 ತಿಂಗಳುಗಳು) ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ. ಅವರ ಮೇಲೆ ಹೂಡಲಾಗಿರುವ ಮೊಕದ್ದಮೆಗಳ ವಿಚಾರಣೆ ಇನ್ನೂ ಆರಂಭ ಆಗಿಲ್ಲ, ಸದ್ಯಭವಿಷ್ಯದಲ್ಲಿ ಶುರುವಾಗುವ ಸೂಚನೆಗಳು ಕೂಡ ಇಲ್ಲ. ಹೀಗಿದ್ದರೂ, ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಮತ್ತು ಅಂಜಾರಿಯಾ ಅವರ ನ್ಯಾಯಪೀಠವು ಉಮರ್ ಮತ್ತು ಶರ್ಜೀಲ್ ಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿತು. ಅಷ್ಟೇ ಅಲ್ಲ, ಜಾಮೀನಿಗೆ ಮತ್ತೆ ಮನವಿ ಸಲ್ಲಿಸಲು ಒಂದು ವರ್ಷ ಕಾಯುವಂತೆ ಗಡುವು ವಿಧಿಸಿತು!

ವಿಚಾರಣೆ ನಡೆದು ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸುವ ಅಥವಾ ದೋಷಮುಕ್ತಗೊಳಿಸುವ ಮುನ್ನವೇ ಆತನಿಗೆ ಶಿಕ್ಷೆ ವಿಧಿಸುವುದು ನ್ಯಾಯತತ್ವಕ್ಕೆ ವಿರುದ್ಧವಾದ ಕ್ರಿಯೆ. ಕಾರ್ಯಾಂಗದ ಇಂತಹ ಅಸಾಂವಿಧಾನಿಕ ವರ್ತನೆ ಅಕ್ಷಮ್ಯ. ಪೂರ್ವಗ್ರಹಪೀಡಿತವಾದ ಕಾರ್ಯಾಂಗವು ‘ನ್ಯಾಯ ನಿರ್ಣಯ’ದ ಕೆಲಸವನ್ನು ತಂತಾನೇ ವಹಿಸಿಕೊಂಡು ಅನಧಿಕೃತವಾಗಿ ‘ಶಿಕ್ಷೆ’ ನೀಡುವುದೇ ಆದಲ್ಲಿ ನ್ಯಾಯಾಂಗದ ಅಗತ್ಯವಾದರೂ ಏನು? ಕೋರ್ಟುಗಳು, ನ್ಯಾಯಾಧೀಶರು, ವಕೀಲರು ಯಾಕಿರಬೇಕು?  ಪ್ರಕ್ರಿಯೆಯೇ ಒಂದು ಶಿಕ್ಷೆ (Process itself is Punishment) ಎಂಬ ಮಾತಿದೆ. ಅತಿವಿಳಂಬಿತ ಕಾನೂನು ಕಲಾಪಗಳು, ಮತ್ತೆ ಮತ್ತೆ ಜಾಮೀನು ನಿರಾಕರಣೆ, ಅತಿದೀರ್ಘ ವಿಚಾರಣಾಪೂರ್ವ ಜೈಲುವಾಸಗಳೇ ಈ ಮಾತಿನ ಅರ್ಥ. ನ್ಯಾಯಲಯ ತಪ್ಪು ಸರಿಗಳನ್ನು ನಿರ್ಧರಿಸಿ ಸಜೆ ವಿಧಿಸುವ ಮುನ್ನ, ಕಾರ್ಯಾಂಗವೇ ವಿಧಿಸಿಬಿಡುವ ಶಿಕ್ಷೆಯಿದು. ಜೆ.ಎನ್.ಯು.ನಲ್ಲಿ ಓದಿದ ಹೋರಾಟಗಾರ ಡಾ.ಉಮರ್ ಖಾಲೀದ್ ಅವರನ್ನು 2020ರ ಸೆಪ್ಟಂಬರ್ ನಿಂದ ವಿಚಾರಣೆಯೇ ಇಲ್ಲದೆ ಜೈಲಿನಲ್ಲಿ ಇಡಲಾಗಿದೆ. 53 ಮಂದಿ ಬಲಿಯಾದ 2020ರ ಫೆಬ್ರವರಿಯ ಈಶಾನ್ಯ ದೆಹಲಿಯ ಕೋಮುಗಲಭೆಗಳಲ್ಲಿ ವಿಶಾಲ ಒಳಸಂಚು ಹೂಡಿದ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ. ಗಲಭೆಗಳಿಗೆ ಬಲಿಯಾದ 53 ಮಂದಿಯಲ್ಲಿ ಬಹುತೇಕರು ಮುಸಲ್ಮಾನರು. ಪೌರತ್ವ ತಿದ್ದುಪಡಿ ಕಾಯಿದೆಯನ್ನು (ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಉಮರ್ ಅವರನ್ನು ಇರುಕಿಸಲಾಗಿದೆ.

ವಿಚಾರಣೆ ಶುರುವಾಗಲು ಉಂಟಾಗುವ ವಿಳಂಬವನ್ನು ಗುರಾಣಿಯಾಗಿ ಬಳಸಿಕೊಂಡು ಜಾಮೀನು ಕೇಳುವಂತಿಲ್ಲ ಎಂದು ತನ್ನ ಸೋಮವಾರದ ತೀರ್ಪಿನಲ್ಲಿ ಸುಪ್ರೀಮ್ ಕೋರ್ಟು ಹೇಳಿದೆ. ಹಾಗಿದ್ದರೆ ಮರುದಿನ ಸುಪ್ರೀಮ್ ಕೋರ್ಟೇ ನೀಡಿರುವ ತೀರ್ಪಿನಲ್ಲಿ ವಿಚಾರಣಾ ಪೂರ್ವ ಜೈಲುವಾಸ 3ರಿಂದ 17 ತಿಂಗಳಷ್ಟು ವಿಸ್ತರಿಸಿದರೆ ಜಾಮೀನು ಪಡೆಯುವುದು ಆರೋಪಿಯ ಮೂಲಭೂತ ಹಕ್ಕು ಎಂದು ಸಾರಿದ್ದೇಕೆ?

ಸೋಮವಾರ ಜಾಮೀನು ನಿರಾಕರಿಸಿದ ತೀರ್ಪು ಸರಿಯೇ ಅಥವಾ ಮಂಗಳವಾರ ಜಾಮೀನು ಪುರಸ್ಕರಿಸಿದ ತೀರ್ಪು ಸರಿಯೇ?

ಇಲ್ಲಿ ಉಲ್ಲೇಖಿಸಲಾಗಿರುವ ಸುಪ್ರೀಮ್ ಕೋರ್ಟಿನ ಮೊದಲ ಎರಡು ತೀರ್ಪುಗಳು ಮತ್ತು ಉಮರ್-ಶರ್ಜೀಲ್ ಗೆ ಜಾಮೀನು ನಿರಾಕರಿಸಿ ಮೊನ್ನೆ ಸೋಮವಾರದಂದು ನೀಡಿದ ತೀರ್ಪು ಪರಸ್ಪರ ವ್ಯತಿರೇಕಿಸುತ್ತಿವೆ. ದೇಶದ ಅತ್ಯುಚ್ಚ ನ್ಯಾಯಾಲಯದ ಭಿನ್ನ ಪೀಠಗಳು ಇಬ್ಬಗೆಯ ಮಾನದಂಡಗಳನ್ನು ಅನುಸರಿಸಿ ನೀಡುವ, ಇಬ್ಬಗೆಯ ತೀರ್ಪುಗಳು ನ್ಯಾಯತೀರ್ಮಾನದ ಮೂಲತತ್ವಗಳನ್ನು ಅಣಕಿಸುವುದಿಲ್ಲವೇ ಎಂಬ ಸಂದೇಹವನ್ನು ಸುಪ್ರೀಮ್ ಕೋರ್ಟೇ ನಿವಾರಿಸಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....