ಟನ್‌ಗಟ್ಟಲೆ ಸುಟ್ಟ ಪಟಾಕಿಯಿಂದ ಹೊರ ಬಂದ ವಿಷಕಾರಕ ಹೊಗೆ ನಾವು ಉಸಿರಾಡುವ ಗಾಳಿಯ ಗುಣಮಟ್ಟ ಕುಸಿಯಲು ಕಾರಣವಾಗಿದೆ. ಪ್ರಕೃತಿಯೊಂದಿಗೆ ನೆಲಮೂಲ ಸಂಸ್ಕೃತಿಯ ಜನರು ಬೆರೆತು ಆಚರಿಸುವ ದೀಪಾವಳಿ ಎಂಬ ಹಬ್ಬವೊಂದು, ಅದೇ ಪ್ರಕೃತಿಯನ್ನು ಹಾಳುಗೆಡವಿ ವಿಷವಿಕ್ಕುವ ಹಬ್ಬವಾಗಿರುವುದು ವಿಪರ್ಯಾಸವೇ ಸರಿ.
ಮತ್ತೊಂದು ದೀಪಾವಳಿ ಮುಗಿದಿದೆ. ದೇಶದಾದ್ಯಂತ ದೀಪದ ಹಬ್ಬದ ಹೆಸರಿನಲ್ಲಿ ಕೇಕೆ ಹಾಕಿ ಸುಟ್ಟ ಪಟಾಕಿಯ ನಂಜಿನ ಕಾರ್ಮೋಡಗಳು ಇನ್ನೂ ಚೆದುರಿಲ್ಲ.
ಕೋಟಿ ಕೋಟಿ ಶ್ವಾಸಕೋಶಗಳು ಘಾತಗೊಂಡಿವೆ. ನೂರಾರು ಮಕ್ಕಳು ಕಣ್ಣು ಕಳೆದುಕೊಂಡಿವೆ. ಸಾವಿರಾರು ಕಣ್ಣುಗಳು ಗಾಯಗೊಂಡಿವೆ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಈ ಸಲ ವಿದೇಶಗಳಲ್ಲಿಯೂ ಮೆರೆದಿದೆ ನಮ್ಮ ವಾಯು ಮಾಲಿನ್ಯದ ಕುಖ್ಯಾತಿ. ನಮ್ಮ ಪ್ರಾಣವಾಯುವಿಗೆ ನಾವೇ ಬೆಂಕಿ ಇಡುತ್ತಿರುವ ಪರಮ ಮೂರ್ಖತನವಿದು. ಯಾವ ಮರದ ಟೊಂಗೆಯ ಮೇಲೆ ನಿಂತಿದ್ದೇವೋ, ಅದಕ್ಕೆ ಕೊಡಲಿ ಇಡುವ ಆತ್ಮಹತ್ಯೆ. ಈ ಮೂರ್ಖತನವನ್ನೇ, ಇದೇ ಆತ್ಮಹತ್ಯೆಯನ್ನೇ ಸಂಭ್ರಮಿಸುವಷ್ಟು ನಮ್ಮ ಒಳಗಣ್ಣುಗಳು ಮತ್ತು ಹೊರಗಣ್ಣುಗಳು ಕುರುಡಾಗಿ ಹೋಗಿವೆ. ಈ ಕುರುಡು ಹಠಾತ್ತಾಗಿ ನೆನ್ನೆ ಮೊನ್ನೆ ಕಾಲಿಟ್ಟದ್ದಲ್ಲ. ದಶಕದಿಂದ ಮಂದ ಉರಿಯಲ್ಲಿ ಕುದಿಸಿದ ಹುಸಿ ಹೆಮ್ಮೆ ಮತ್ತು ಕಡು ದ್ವೇಷ. ಬಹುಸಂಖ್ಯಾತ ಪ್ರಾಬಲ್ಯ ಸ್ಥಾಪಿಸಲು, ವರ್ಣಾಶ್ರಮ ಧರ್ಮ- ಮನುಸ್ಮೃತಿಯ ಮೌಲ್ಯಗಳನ್ನು ಮತ್ತೆ ಮೆರೆಯಿಸಿ, ಅಧಿಕಾರದ ಮೇಲೆ ಕಪಿಮುಷ್ಠಿಯನ್ನು ಮತ್ತಷ್ಟು ಇನ್ನಷ್ಟು ಬಿಗಿಗೊಳಿಸಲು ಜನಮನದಲ್ಲಿ ಬಿತ್ತಿ ಬೆಳೆಸಲಾಗಿರುವ ನಂಜು. ಸುಡುವುದೊಂದೇ ಬೆಂಕಿಯ ಧರ್ಮ. ಅದಕ್ಕೆ ‘ಸ್ವಕೀಯ’ ‘ಪರಕೀಯ’ ಎಂಬ ತರತಮವಾಗಲೀ, ಈ ಧರ್ಮ, ಆ ಧರ್ಮ ಎಂಬ ಆಯ್ಕೆಯಾಗಲೀ ಗೊತ್ತಿಲ್ಲ. ಮನೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದೊಡೆ ನಿಲಬಹುದೇ ಎಂಬ ಶರಣರ ವಚನ ಸಾರ್ವಕಾಲಿಕ ಸತ್ಯ.
ಆದರೆ, ಈ ಹುನ್ನಾರದ ಅರಿವೇ ಇಲ್ಲದವರು ಬೆಳಕಿನ ಹಬ್ಬ ಎಂಬುದನ್ನು ಮರೆತು ಸುಟ್ಟು ಸುಟ್ಟು ಸಂಭ್ರಮಿಸುತ್ತಿದ್ದಾರೆ. ಯಾರದೋ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದೇವೆಂದು ಹಲ್ಲು ಮಸೆದು ಸುಡುತ್ತಿದ್ದಾರೆ. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಅವನ ಎರಡೂ ಕಣ್ಣು ಹೋಗಬೇಕು ಎಂಬ ಆತ್ಮಘಾತಕ ಮನಸ್ಥಿತಿಯಿದು.
ಟನ್‌ಗಟ್ಟಲೆ ಸುಟ್ಟ ಪಟಾಕಿಯಿಂದ ಹೊರ ಬಂದ ವಿಷಕಾರಕ ಹೊಗೆ ನಾವು ಉಸಿರಾಡುವ ಗಾಳಿಯ ಗುಣಮಟ್ಟ ಕುಸಿಯಲು ಕಾರಣವಾಗಿದೆ. ಪ್ರಕೃತಿಯೊಂದಿಗೆ ನೆಲಮೂಲ ಸಂಸ್ಕೃತಿಯ ಜನರು ಬೆರೆತು ಆಚರಿಸುವ ದೀಪಾವಳಿ ಎಂಬ ಹಬ್ಬವೊಂದು, ಅದೇ ಪ್ರಕೃತಿಯನ್ನು ಹಾಳುಗೆಡವಿ ವಿಷವಿಕ್ಕುವ ಹಬ್ಬವಾಗಿರುವುದು ವಿಪರ್ಯಾಸವೇ ಸರಿ.
ನಮ್ಮ ಮನೆಗಳಲ್ಲಿ, ಬೀದಿಯಲ್ಲಿ ಮೂಕ ಪ್ರಾಣಿಗಳಿವೆ. ಅವುಗಳ ಮೇಲಾಗುವ ಕೆಡುಕಿನ ಬಗ್ಗೆಯಾಗಲಿ, ನಮ್ಮದೇ ನೆರೆಮನೆಯಲ್ಲಿರುವ ಬಸುರಿ, ಬಾಣಂತಿ, ಹಸುಗೂಸು, ವೃದ್ಧರು, ಹೃದ್ರೋಗಿಗಳು, ಅಸ್ತಮಾ ರೋಗಿಗಳನ್ನು ನಿರ್ಲಕ್ಷಿಸಿ, ಎದೆ ನಡುಗಿಸುವ, ಕಿವಿ ಗಡಚಿಕ್ಕುವ ಸದ್ದುಗಳ ಪಟಾಕಿ ಸುಟ್ಟು ಮುಗಿಸಿದ್ದೇವೆ. ಪಟಾಕಿ ಸುಡುವುದು ಬಿಡಿ, ಎರಡು ಹೊತ್ತು ಸರಿಯಾಗಿ ಊಟ ಮಾಡಲಾಗದ ಕಡುಬಡವರ ಬಗ್ಗೆ, ಅವರ ಸುಡು ಸಂಕಟಗಳ ಬಗ್ಗೆ ನಮಗೆ ಅರಿವಿದ್ದಿದ್ದರೆ ನಾವು ಹೀಗೆ ನೂರಾರು, ಸಾವಿರಾರು, ಲಕ್ಷಾಂತರ ರೂಪಾಯಿಗಳನ್ನು ವ್ಯಯ ಮಾಡಿ ಪರಿಸರಕ್ಕೂ, ಮಾನವನ ಆರೋಗ್ಯಕ್ಕೂ ಮುಳುವಾಗುವ ವಿಷ ತುಂಬಿದ ಪಟಾಕಿಯನ್ನು ಸುಟ್ಟು ಸಂಭ್ರಮಿಸುತ್ತಿರಲಿಲ್ಲ. ಹಣ, ಪ್ರತಿಷ್ಠೆ, ಆಡಂಬರವೇ ಮುಖ್ಯವಾಗಿರುವ ಈ ದಿನಮಾನದಲ್ಲಿ ಹಬ್ಬ ಮಾತ್ರವಲ್ಲ, ಎಲ್ಲ ಚಟುವಟಿಕೆಗಳನ್ನೂ ಯಾರನ್ನೋ ಕೆರಳಿಸಲು, ಮತ್ಯಾರನ್ನೋ ನೋಯಿಸಲು ಬಳಸುತ್ತಿದ್ದೇವೆ. ಆ ಮೂಲಕ ನಾವು ನಮ್ಮ ಪ್ರಕೃತಿಗೂ ಆಘಾತ ನೀಡುತ್ತಿದ್ದೇವೆ. ಪ್ರತಿ ವರ್ಷ ದೀಪಾವಳಿಗೆ ಕಣ್ಣು- ಕೈಗಳನ್ನು ಕಳೆದುಕೊಂಡು ಪುಟ್ಟ ಪುಟ್ಟ ಮಕ್ಕಳು ಅಂಗವಿಕಲರಾಗುತ್ತಿದ್ದಾರೆ. ಆದರೂ ಮಕ್ಕಳ ಕೈಗೆ ಪಟಾಕಿ ಕೊಡುವುದನ್ನು ಪೋಷಕರು ಬಿಟ್ಟಿಲ್ಲ.
ದೇಶದ ರಾಜಧಾನಿ ದೆಹಲಿಯಲ್ಲಿ ಪಟಾಕಿ ಸುಡಲು ಸುಪ್ರೀಂ ಕೋರ್ಟ್ ಎರಡು ಗಂಟೆಗಳ ಅವಕಾಶ ನೀಡಿತ್ತು. ಆದರೆ ಜನ ಈ ನಿರ್ಬಂಧವನ್ನು ಗಾಳಿಗೆ ತೂರಿದ್ದಾರೆ. ರಾಜಕಾರಣಿಗಳು- ಧಾರ್ಮಿಕ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ನೀಡಿರುವ ಪ್ರಚೋದನೆ ಈ ಉಲ್ಲಂಘನೆಯ ಹಿಂದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಾಹಿತಿಯ ಪ್ರಕಾರ ಮಂಗಳವಾರ ದೆಹಲಿ ವಾಯು ಗುಣಮಟ್ಟ ಸೂಚ್ಯಂಕ 500ಕ್ಕೆ ಇಳಿಕೆಯಾಗಿತ್ತು. ಇದು ಅತಿ ಅಪಾಯಕರ ಮಟ್ಟವಾಗಿದೆ. 0-50ರವರೆಗಿನ ಎಕ್ಯೂಐ ಉತ್ತಮ. ಅಂದ್ರೆ ಪಟಾಕಿಯಿಂದ ದೆಹಲಿಯ ವಾಯು ಗುಣಮಟ್ಟ ಕಳಪೆ, ಅತಿಕಳಪೆಗಿಂತಲೂ ಕೆಳಗಿಳಿದು ಗಂಭೀರ ಮಟ್ಟ ತಲುಪಿದೆ. ಗುರುವಾರ ಅದು ಇನ್ನಷ್ಟು ಕುಸಿದಿದೆ. ವಾಯು ಶುದ್ದೀಕರಣ ಯಂತ್ರಗಳು ಮತ್ತು ಮಾಸ್ಕ್‌ಗಳ ಬೇಡಿಕೆ 60-70% ಹೆಚ್ಚಳವಾಗಿದೆ. ವಾಯು ಗುಣಮಟ್ಟ ಮಾಪಕ ಯಂತ್ರಗಳ ಮಾಪನ ಸಾಮರ್ಥ್ಯವನ್ನು ಎಷ್ಟೋ ಪಟ್ಟು ಮೀರಿದ ಮಾಲಿನ್ಯವಿದು. ಮಾಪನ ಯಂತ್ರಗಳು ಒಂದು ಹಂತದ ಆಚೆಗೆ ನಿಷ್ಕ್ರಿಯವಾಗಿ ಹೋಗಿವೆ. ವಿನಾಶಕಾರಿ ಪಟಾಕಿಗೆ ʼಹಸಿರು ಪಟಾಕಿʼಯೆಂಬ ಹೆಸರು ಬೇರೆ ಕೊಡಲಾಗಿದೆ.
ದೆಹಲಿಯಲ್ಲಿ ಪಟಾಕಿ ತಯಾರಿ ಮತ್ತು ಮಾರಾಟಕ್ಕೆ ಆರು ವರ್ಷಗಳಿಂದ ಇದ್ದ ಸಂಪೂರ್ಣ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೆರವುಗೊಳಿಸಿ ಷರತ್ತುಬದ್ಧ ಅವಕಾಶ ನೀಡಿತ್ತು. ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರ ಹೇರಿದ್ದ ನಿಷೇಧವನ್ನು ಹಿಂದುತ್ವದ ಪ್ರತಿಪಾದಕ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಮುರಿಯಲಾಯಿತು. ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡುವಂತೆ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ನಿರ್ಬಂಧ ಸಡಿಲಿಸುವ ಸಂದರ್ಭದಲ್ಲಿ ಪರಿಸರ ಕಾಳಜಿಗೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳದೇ ಪಟಾಕಿಗಳ ಬಳಕೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಎರಡು ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿತ್ತು. ಆದರೆ, ಜನ ಆ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನಿಯಮ ಉಲ್ಲಂಘನೆಯಲ್ಲಿ ನಮ್ಮ ನಾಗರಿಕ ಸಮಾಜದ್ದು ಎತ್ತಿದ ಕೈ. ಅದು ಸಂಚಾರ ನಿಯಮ ಇರಲಿ, ಸೇವಾ ನಿಯಮ ಇರಲಿ, ಎಲ್ಲವನ್ನೂ ಮುಖಮುಲಾಜಿಲ್ಲದೇ ಮೀರುವುದು ನಮ್ಮ ಜಾಯಮಾನ. ಪಟಾಕಿಯಿಂದ ವಾಯುಮಾಲಿನ್ಯ ಆಗುತ್ತದೆ, ಆರೋಗ್ಯಕ್ಕೂ ಮಾರಕ ಎಂದು ಗೊತ್ತಿದ್ದರೂ, ಶಿಕ್ಷಿತ ವರ್ಗ ಕೂಡ ಲೆಕ್ಕಿಸಿಲ್ಲ. ಅತಿಯಾದ ಪಟಾಕಿ ಸುಡುವುದು ವಾಯು ಮಾಲಿನ್ಯಕ್ಕೆ ದಾರಿ ಮಾಡುತ್ತದೆ ಎಂದು ಹೇಳಿದವರಿಗೆ ಹಿಂದೂ ಧರ್ಮದ ವಿರೋಧಿಗಳು, ನಗರ ನಕ್ಸಲರು ಎಂಬ ಹಣೆಪಟ್ಟಿ ಕೊಡುತ್ತಿದ್ದಾರೆ. ಸರ್ಕಾರಗಳೇನಾದರೂ ನಿಯಮ ಮಾಡಲು ಹೊರಟರೆ ಮುಸ್ಲಿಮರ ಓಲೈಕೆ, ಹಿಂದೂಗಳ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸುತ್ತಾರೆ ಎಂಬ ದ್ವೇಷದ ಬಣ್ಣ ಬಳಿಯಲಾಗುತ್ತಿದೆ.
ಪರಿಸರಕ್ಕೆ ಹಾನಿಕಾರಕವಾದ ಪಟಾಕಿ ಉತ್ಪಾದನೆ ನಮ್ಮಲ್ಲಿ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ಪಟಾಕಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯದ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಅಪಾಯಕಾರಿ ಕೆಲಸದಲ್ಲಿ ತೊಡಗಿದ ಕುಟುಂಬಗಳ ಬದುಕು ಆಕಸ್ಮಿಕ ಸ್ಫೋಟಗಳಲ್ಲಿ ನಾಶವಾದ ನಿದರ್ಶನಗಳು ಸಾಕಷ್ಟಿವೆ. ಆದರೂ ಸರ್ಕಾರಗಳು ಕುರುಡಾಗಿ ಕುಳಿತಿವೆ. ಹಿಂದುತ್ವದ ಕೋಮುವಾದಿ ರಾಜಕಾರಣವನ್ನೇ ದಾಳ ಮಾಡಿಕೊಂಡಿರುವ ಬಿಜೆಪಿ ಸರ್ಕಾರಗಳು, ಹಬ್ಬ ಹರಿದಿನಗಳ ಧಾರ್ಮಿಕ ಭಾವನೆಯನ್ನು ಇನ್ನಿಲ್ಲದಂತೆ ದುರುಪಯೋಗ ಮಾಡಿಕೊಳ್ಳುತ್ತಿವೆ. ಪರಿಸರ ಹಾಳಾದರೂ ಪರವಾಗಿಲ್ಲವೆಂದು ಪ್ರೋತ್ಸಾಹಿಸುತ್ತಿವೆ. ಉತ್ತರ ಭಾರತದ ʼಪವಿತ್ರʼಗಂಗಾ, ಯಮುನಾ ನದಿಗಳ ನೀರು ಕುಡಿಯಲು ಬಿಡಿ, ಸ್ನಾನ ಮಾಡಲು ಕೂಡ ಬಾರದಷ್ಟು ಮಲಿನವಾಗಿದೆ ಎಂಬುದಾಗಿ ವರದಿಗಳು ಸಾರಿವೆ. ಕುರುಡು ಧಾರ್ಮಿಕ ಆಚರಣೆಗಳಿಂದ ನಮ್ಮ ನದಿಗಳನ್ನು ನಾವೇ ಅಪವಿತ್ರಗೊಳಿಸುತ್ತಿದ್ದೇವೆ. ಪಟಾಕಿ ನಿಷೇಧಿಸುವುದು ಧರ್ಮದ್ರೋಹ ಎಂಬ ಭಾವನೆಯನ್ನು ಬಿತ್ತಲಾಗಿದೆ. ವಾಸ್ತವದಲ್ಲಿ ಧರ್ಮಕ್ಕೂ, ಪಟಾಕಿ ಸಿಡಿಸುವುದೇ ಅಲ್ಲದೆ ಹಲವು ಅಂಧಶ್ರದ್ಧೆಗಳು, ಆಚರಣೆಗಳು, ಸಂಬಂಧವೇ ಇಲ್ಲ.
ಬೆಂಗಳೂರಿನಲ್ಲಿ ರಾತ್ರಿ ಎಂಟರಿಂದ ಹತ್ತರವರೆಗೆ ಮಾತ್ರ ಪಟಾಕಿ ಸುಡಲು ಅವಕಾಶ ಎಂಬ ನಿಯಮ ಸರ್ಕಾರ ಮಾಡಿತ್ತು. ಆದರೆ, ಜನ ಹಗಲು ರಾತ್ರಿ ಎನ್ನದೇ ಪಟಾಕಿ ಸುಟ್ಟಿದ್ದಾರೆ. ರಾತ್ರಿಯಿಡೀ ಶಬ್ಧ ಮಾಲಿನ್ಯದಿಂದ ನಗರ ತತ್ತರಿಸಿದೆ. ಆದರೆ ಎಲ್ಲದಕ್ಕೂ ಧರ್ಮ, ಆಚರಣೆಯ ಬಣ್ಣಕಟ್ಟಿ ಬಾಯಿ ಮುಚ್ಚಿಸಲಾಗುತ್ತಿದೆ.
ಭಾರತೀಯರು ವಿದೇಶದಲ್ಲೂ ದೀಪಾವಳಿಗೆ ಪಟಾಕಿ ಸುಡುವ ಮೂಲಕ ಸ್ಥಳೀಯರ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ವಲಸಿಗರ ಬಗ್ಗೆ ಅಸಹನೆ ಬೆಳೆಯತೊಡಗಿದೆ. ಇದು ಮುಗಿಲು ಮುಟ್ಟುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.
ಇದನ್ನೂ ಓದಿ ಆಳಂದ ಮತಗಳವು | ಒಂದೇ ತಿಂಗಳಲ್ಲಿ SITಗೆ ಸಿಕ್ಕಿತು ಅತಿಮುಖ್ಯ ಪುರಾವೆ; ಚು.ಆಯೋಗ ಹಿಂದೆಯೇ ಸ್ಪಂದಿಸಿದ್ದರೆ?
ಭಾರತದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಮಾತ್ರವೇ ಪಟಾಕಿ ಸುಡುತ್ತಿಲ್ಲ. ರಾಜಕಾರಣಿಗಳ ಸಭೆ, ಗಣೇಶೋತ್ಸವ, ಶವದ ಮೆರವಣಿಗೆ, ಕ್ರಿಕೆಟ್ ಮ್ಯಾಚ್, ಜಾತ್ರೆ, ಹೊಸ ವರ್ಷ, ಮದುವೆ… ಹೀಗೆ ನೂರಾರು ಸಂದರ್ಭಗಳಲ್ಲಿ ವರ್ಷವಿಡೀ ಪಟಾಕಿ ಸುಡಲಾಗುತ್ತಿದೆ. ಪಟಾಕಿ ಮಾರಾಟ ಮತ್ತು ಬಳಕೆಗೆ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆಗಳು ಕಠಿಣ ನಿಯಮವನ್ನೇ ಮಾಡಿಲ್ಲ, ಇರುವ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ಹುಸಿ ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ಭಾರೀ ಅರಣ್ಯ ನಾಶ ಮಾಡಿದ್ದೇವೆ. ನದಿಗಳನ್ನು ಮಾಲಿನ್ಯಗೊಳಿಸಿದ್ದೇವೆ, ಗಾಳಿಗೆ ವಿಷ ತುಂಬಿದ್ದೇವೆ.
ಎಚ್ಚರಗೊಳ್ಳದಿದ್ದರೆ ವಿನಾಶ ವಿಪತ್ತುಗಳು ಗೋಡೆಯ ಮೇಲಿನ ಬರೆಹಗಳು. ಅಕ್ಷರ ಬಂದರೂ ನಿರಕ್ಷರಕುಕ್ಷಿಗಳಂತೆ ಈ ಬರೆಹಗಳನ್ನು ನಿರ್ಲಕ್ಷಿಸುವುದು ಆತ್ಮವಂಚನೆ. ‘…ಸುಜಲಾಂ, ಸುಫಲಾಂ, ಮಲಯಜ ಶೀತಲಾಂ, ಸಸ್ಯಶಾಮಲಾಂ ಮಾತರಂ, ವಂದೇ ಮಾತರಂ… ʼ ಪ್ರಾರ್ಥನೆಗೆ ಅರ್ಥವೇ ಉಳಿದಿಲ್ಲ.





