ಒಂದು ಸ್ವತಂತ್ರ ರಾಷ್ಟ್ರವು ತನ್ನ ಆರ್ಥಿಕ ಮತ್ತು ಇಂಧನ ಅಗತ್ಯಗಳನ್ನು ಪೂರೈಸಲು ಮತ್ತೊಂದು ರಾಷ್ಟ್ರದ 'ಅನುಮತಿ' ಪಡೆಯುವುದು ಎಂದರೇನು? ಇದು, ಭಾರತದ ಸ್ವಾಭಿಮಾನ, ಸಾರ್ವಭೌಮತೆ ಮತ್ತು ಸ್ವಾತಂತ್ರ್ಯವನ್ನು ಮತ್ತೊಂದು ರಾಷ್ಟ್ರದ ಅಧೀನಕ್ಕಿಟ್ಟಂತಲ್ಲವೇ?
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಆರಂಭಿಸಿ ಒಂದು ವಾರ ಕಳೆದಿದೆ. ಮಧ್ಯಪ್ರಾಚ್ಯವು ಉದ್ವಿಗ್ನತೆಗೆ ತುತ್ತಾಗಿದೆ. ಇರಾನ್ ತನ್ನ ‘ಹಾರ್ಮುಜ್ ಜಲಸಂಧಿ’ಯನ್ನು ಮುಚ್ಚಿದೆ. ಪರಿಣಾಮ, ತೈಲ ಹೊತ್ತ ಸುಮಾರು 706 ಟ್ಯಾಂಕರ್‌ಗಳು ಜಲಸಂಧಿಯ ಇಕ್ಕೆಲಗಳಲ್ಲಿ ನಿಂತಿವೆ. ಜಾಗತಿಕ ತೈಲ ಬಿಕ್ಕಟ್ಟು ಎದುರಾಗುತ್ತಿದೆ. ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಇಂಧನ ಕೊರತೆಯನ್ನು ನಿಭಾಯಿಸಲು ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತ ಮುಂದಾಗಿದೆ. ಆದರೆ, ರಷ್ಯಾದ ತೈಲ ಖರೀದಿಗೆ ಭಾರತ, ಅಮೆರಿಕದ ಅಪ್ಪಣೆಗಾಗಿ ಕಾದಿದೆ. ಇದು, ಭಾರತದ ಸಾರ್ವಭೌಮತೆಯನ್ನು ಅಣಕಿಸುವ ರೀತಿಯಲ್ಲಿದೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆಯೇ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿತು. ಪರಿಣಾಮವಾಗಿ, 2026ರ ದೈನಂದಿನ ವಹಿವಾಟಿನ ಸರಾಸರಿ 1.98 ಕೋಟಿ ಬ್ಯಾರೆಲ್‌ಗಳ ಪೈಕಿ 86%ರಷ್ಟು ವಹಿವಾಟು ನಿಂತುಹೋಗಿದೆ. ಏಷ್ಯಾ ಮತ್ತು ಯುರೋಪಿನ ಸಂಸ್ಕರಣಾಗಾರಗಳು ಅಮೆರಿಕ, ಪಶ್ಚಿಮ ಆಫ್ರಿಕಾ, ಬ್ರೆಜಿಲ್ ಹಾಗೂ ರಷ್ಯಾದಿಂದ ಪರ್ಯಾಯ ತೈಲಕ್ಕಾಗಿ ಹುಡುಕಾಟ ನಡೆಸುತ್ತಿವೆ. ಕೊಲ್ಲಿಯ ಕಚ್ಚಾ ತೈಲವನ್ನೇ ಹೆಚ್ಚಾಗಿ ಅವಲಂಬಿಸಿರುವ ಚೀನಾ ಮತ್ತು ಭಾರತವು ನೇರ ಹೊಡೆತ ಎದುರಿಸಿವೆ. ಆದಾಗ್ಯೂ, ಚೀನಾದ ಹಡಗುಗಳ ಸಂಚಾರಕ್ಕೆ ಇರಾನ್ ಅವಕಾಶ ನೀಡಿದೆ. ಆದರೆ, ಭಾರತವು ಸಂಕಷ್ಟಕ್ಕೆ ಸಿಲುಕಿದೆ.
ಕೆಲವು ತೈಲ ಉದ್ಯಮಗಳು ಮಾರ್ಚ್ 3ರಂದು ಅಂದಾಜಿಸಿದ್ದ ಪ್ರಕಾರ, ಭಾರತದ ಸಂಗ್ರಹಾಗಾರಗಳು, ಸಂಸ್ಕರಣಾಗಾರಗಳು ಹಾಗೂ ಬಂದರುಗಳಲ್ಲಿರುವ ಒಟ್ಟು ಕಚ್ಚಾ ತೈಲ ಮತ್ತು ಉತ್ಪನ್ನಗಳ ದಾಸ್ತಾನು ಸುಮಾರು 74 ದಿನಗಳ ಬೇಡಿಕೆಯನ್ನು ಪೂರೈಸಬಲ್ಲದು ಎಂದು ಪುರಿ ಹೇಳಿದ್ದರು. ಇದರಲ್ಲಿ ಕಚ್ಚಾ ತೈಲವು ಸುಮಾರು 17-18 ದಿನಗಳಿಗೆ, ಸಂಸ್ಕರಿಸಿದ ಇಂಧನಗಳು ಸುಮಾರು 20-21 ದಿನಗಳಿಗೆ ಹಾಗೂ ಎಲ್‌ಎನ್‌ಜಿ ಸಂಗ್ರಹವು ಸುಮಾರು 10-12 ದಿನಗಳಿಗೆ ಸಾಕಾಗಬಹುದು ಎಂದು ಹೇಳಲಾಗಿತ್ತು.
ಸಂಭವನೀಯ ಇಂಧನ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ್ದ ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ, ”ನಾವು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ದೇಶದಲ್ಲಿ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆ ಮತ್ತು ಕೈಗೆಟುಕುವ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದಿದ್ದರು.
ಇದೀಗ, ಭಾರತವು ರಷ್ಯಾದಿಂದ ತೈಲ ಖರೀದಿಗೆ ಮುಂದಾಗಿದೆ. ಅದೂ, ಅಮೆರಿಕ ಅಧ್ಯಕ್ಷ ಟ್ರಂಪ್ ಎಂಬ ದೊಣ್ಣೆ ನಾಯಕ ಅಪ್ಪಣೆಯೊಂದಿಗೆ. ಈಗ ಟ್ರಂಪ್ ಆಡಳಿತವು, ರಷ್ಯಾದಿಂದ ಭಾರತವು ತೈಲ ಖರೀದಿ ಮಾಡಲು 30 ದಿನಗಳ ತಾತ್ಕಾಲಿಕ ಅನುಮತಿ ನೀಡಿದೆ. ಅಂದರೆ, ಏಪ್ರಿಲ್ 4ರವರೆಗೆ ಮಾತ್ರವೇ ಭಾರತವು ರಷ್ಯಾದಿಂದ ಇಂಧನ ಖರೀದಿ ಮಾಡಬಹುದು.
”ಭಾರತವು ರಷ್ಯಾದ ತೈಲ ಖರೀದಿ ಮಾಡಲು ಅಮೆರಿಕವು 30 ದಿನಗಳ ವಿನಾಯತಿ ನೀಡಿದೆ. ಇದು, ಅಲ್ಪಾವಧಿಯ ಕ್ರಮ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಎದುರಾಗುತ್ತಿರುವ ಸಂಭಾವ್ಯ ಪೂರೈಕೆ ಬಿಕ್ಕಟ್ಟನ್ನು ನಿರ್ವಹಿಸಲು ಭಾರತಕ್ಕೆ ಅವಕಾಶ ನೀಡಿದ್ದೇವೆ” ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
ಭಾರತ ವಿಶ್ವಗುರು ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿ ನೇತೃತ್ವದ ಭಾರತವು ತನ್ನ ತೈಲ ವಹಿವಾಟಿಗೆ ಟ್ರಂಪ್ ಅವರಿಂದ ಅನುಮತಿ ಪಡೆದಿದೆ.
ಅಮೆರಿಕ ಕೇವಲ ಅನುಮತಿ ನೀಡಿರುವುದು ಮಾತ್ರವಲ್ಲದೆ, ಭಾರತದ ಕುರಿತು ಅಪಹಾಸ್ಯವನ್ನೂ ಮಾಡಿದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ಕಾಟ್ ಬೆಸೆಂಟ್, ”ಭಾರತೀಯರು ಒಳ್ಳೆಯ ನಟರು. ಈ ಶರತ್ಕಾಲದಲ್ಲಿ ನಿರ್ಬಂಧಿತ ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ನಾವು ಅವರಿಗೆ ಕೇಳಿದ್ದೆವು. ಅವರು ಹಾಗೆಯೇ ಮಾಡಿದರು. ಈಗ ರಷ್ಯಾದ ತೈಲ ಖರೀದಿಸಲು ನಾವು ಅನುಮತಿ ನೀಡಿದ್ದೇವೆ. ಅವರು ಖರೀದಿಸುತ್ತಿದ್ದಾರೆ” ಎಂದು ಅಪಹಾಸ್ಯದ ಧಾಟಿಯಲ್ಲಿ ಮಾತನಾಡಿದ್ದಾರೆ.
ಇದು ಸ್ವಾಭಿಮಾನಿ ಭಾರತೀಯರನ್ನು ಸಿಟ್ಟಿಗೆಬ್ಬಿಸಿದೆ. ಒಂದು ಸ್ವತಂತ್ರ ರಾಷ್ಟ್ರವು ತನ್ನ ಆರ್ಥಿಕ ಮತ್ತು ಇಂಧನ ಅಗತ್ಯಗಳನ್ನು ಪೂರೈಸಲು ಮತ್ತೊಂದು ರಾಷ್ಟ್ರದ ‘ಅನುಮತಿ’ ಪಡೆಯುವುದು ಎಂದರೇನು? ಇದು, ಭಾರತದ ಸ್ವಾಭಿಮಾನ, ಸಾರ್ವಭೌಮತೆ ಮತ್ತು ಸ್ವಾತಂತ್ರ್ಯವನ್ನು ಮತ್ತೊಂದು ರಾಷ್ಟ್ರದ ಅಧೀನಕ್ಕಿಟ್ಟಂತೆ ಎಂದು ಭಾರತೀಯರು ಆಕ್ರೋಶಗೊಂಡಿದ್ದಾರೆ.
ಆದರೆ, ಮೋದಿ ಸರ್ಕಾರ ಮತ್ತು ಬಿಜೆಪಿಗರು ಇದನ್ನು ‘ರಾಜತಾಂತ್ರಿಕ ಫಲ’ವೆಂದು ಹೇಳಿಕೊಳ್ಳುತ್ತಿದ್ದಾರೆ. ಮಣ್ಣಿಗೆ ಬಿದ್ದ ಜಟ್ಟಿಯಂತೆ ವರ್ತಿಸುತ್ತಿದ್ದಾರೆ. ಮೋದಿ ಸರ್ಕಾರವು ಅಮೆರಿಕ ಆದೇಶವನ್ನು ಶಿರಸಾ ಪಾಲಿಸುತ್ತಿರುವುದು ಅಥವಾ ಅಮೆರಿಕ ದೊಡ್ಡಣ್ಣನ ಧೋರಣೆಯಲ್ಲಿ ವರ್ತಿಸುತ್ತಿರುವುದು, ಇದೇ ಮೊದಲೇನೂ ಅಲ್ಲ. ಇದೇ ಕೊನೆಯೂ ಅಲ್ಲ.
ಪಹಲ್ಗಾಮ್ ದಾಳಿಯಿಂದಾಗಿ ಉಂಟಾದ ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಕದನ ವಿರಾಮ ಘೋಷಿಸಿದ್ದು ನಾನೇ ಎಂದು ಟ್ರಂಪ್ ಈವರೆಗೆ ಸುಮಾರು 100 ಬಾರಿ ಹೇಳಿಕೊಂಡಿದ್ದಾರೆ. ಆದರೆ, ಮೋದಿ ಅವರು ಅದನ್ನು ಅಲ್ಲಗಳೆಯುವ ಅಥವಾ ಆ ಬಗ್ಗೆ ಪ್ರತಿಕ್ರಿಯಿಸುವ ಧೈರ್ಯ ಮಾಡಲಿಲ್ಲ. ತಮ್ಮ ಬದಿಯಲ್ಲೇ ನಿಂತು ಟ್ರಂಪ್, ಭಾರತದ ಮೇಲೆ ಪ್ರತಿಸುಂಕ ಹೇರುತ್ತೇವೆ ಎಂದಾಗಲೂ ಮೋದಿ ತುಟಿಬಿಚ್ಚಲಿಲ್ಲ. ತಾನು ಅಮೆರಿಕದಲ್ಲಿ ಇದ್ದಾಗಲೇ, ಭಾರತೀಯರ ಕೈಗೆ ಕೊಳ ಹಾಕಿ, ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ಗಡಿಪಾರು ಮಾಡಿದರೂ ಮೋದಿ ಉಸಿರೆತ್ತಲಿಲ್ಲ. ಭಾರತದ ಮೇಲೆ 25%, ನಂತರ 50% ಸುಂಕ ಹೇರಿದಾಗಲೂ ಮೋದಿ ಮಾತನಾಡಲಿಲ್ಲ.
ಮುಖ್ಯವಾಗಿ, ಭಾರತಕ್ಕೆ ರಷ್ಯಾ ಅಗ್ಗದ ಬೆಲೆಯಲ್ಲಿ ತೈಲ ರಫ್ತು ಮಾಡುತ್ತಿತ್ತು. ಇರಾನ್ ಕೂಡ ರೂಪಾಯಿಯಲ್ಲಿಯೇ ಭಾರತದೊಂದಿಗೆ ತೈಲ ವ್ಯವಹಾರ ಮಾಡುತ್ತಿತ್ತು. ಆದರೆ, ಈ ಎರಡೂ ರಾಷ್ಟ್ರಗಳ ಮಿತ್ರತ್ವಕ್ಕೆ ಮೋದಿ ಬೆಲೆ ಕೊಟ್ಟಿಲ್ಲ. ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಒತ್ತಾಯಿಸಿ ಅಮೆರಿಕ 50% ಸುಂಕ ಹೇರಿದಾಗ, ಮೋದಿ ಪ್ರತಿಕ್ರಿಯೆ ನೀಡಲಿಲ್ಲ. ಟ್ರಂಪ್ ಅವರೇ ಹೇಳುವಂತೆ, ಸುಂಕ ಹೇರಿಕೆ ವಿಚಾರವಾಗಿ ಮೋದಿಗೆ ಟ್ರಂಪ್ ನಾಲ್ಕು ಬಾರಿ ಕರೆ ಮಾಡಿದರೂ, ಮೋದಿ ಪ್ರತಿಕ್ರಿಯಿಸಿಲ್ಲ.
ಈ ಲೇಖನ ಓದಿದ್ದೀರಾ?: ಅಮೆರಿಕ ಕೈಯಿಟ್ಟ ಕಡೆಯೆಲ್ಲ ವಿನಾಶವೇ ಎಂಬುದು ಚಾರಿತ್ರಿಕ ಸತ್ಯ!
ಆದಾಗ್ಯೂ, ಇತ್ತೀಚೆಗೆ ಹೊರಬಂದ ‘ಎಪ್‌ಸ್ಟೀನ್ ಫೈಲ್ಸ್’ ನಮ್ಮ ಪ್ರಧಾನಿ ಮೋದಿ ಅವರನ್ನು ಮತ್ತಷ್ಟು ಜರ್ಜರಿತಗೊಳಿಸಿದೆ ಎಂದೇ ಹೇಳಲಾಗುತ್ತಿದೆ. ‘ಎಪ್‌ಸ್ಟೀನ್ ಫೈಲ್ಸ್’ನಲ್ಲಿ ಮೋದಿ ಅವರ 2017ರಲ್ಲಿ ಇಸ್ರೇಲ್ ಭೇಟಿ ಮತ್ತು ಅಲ್ಲಿ ಅವರು ಹಾಡು ಹಾಡಿ, ನೃತ್ಯ ಮಾಡಿದ್ದು ಸೇರಿದಂತೆ ಹಲವು ರಹಸ್ಯ ವಿಚಾರಗಳಿವೆ ಎಂದು ಹೇಳಲಾಗುತ್ತಿದೆ. ಅಮೆರಿಕ ಉರುಳಿಸಿರುವ ‘ಎಪ್‌ಸ್ಟೀನ್ ಫೈಲ್ಸ್’ ದಾಳಕ್ಕೆ ಮೋದಿ ಭಯಪಟ್ಟಿದ್ದಾರೆ ಎಂಬ ಆರೋಪಗಳಿವೆ. ಯಾಕೆಂದರೆ, ‘ಎಪ್‌ಸ್ಟೀನ್ ಫೈಲ್ಸ್’ ಹೊರಬಂದ ಕೆಲವೇ ದಿನಗಳಲ್ಲಿ ಮೋದಿ ಅವರು ಅಮೆರಿಕ ಜೊತೆಗಿನ ‘ಮುಕ್ತ ವ್ಯಾಪಾರ ಒಪ್ಪಂದ’ವನ್ನು ಒಪ್ಪಿಕೊಂಡರು. ಅದೂ, ಫೋನ್ ಕರೆಯಲ್ಲಿ. ಜೊತೆಗೆ, ಅಮೆರಿಕಗೆ ಸಂಪೂರ್ಣ ವಿನಾಯತಿ ಮತ್ತು ಭಾರತದ ಮೇಲೆ 18% ಸುಂಕದೊಂದಿದೆ.
ಈ ಎಲ್ಲ ಬೆಳವಣಿಗೆಗಳಿಂದ, ಟ್ರಂಪ್ ಆಡಳಿತವು ಮೋದಿ ಅವರನ್ನು ತನ್ನ ಕೈಗೊಂಬೆಯಂತೆ ಆಡಿಸುತ್ತಿದೆ ಎಂಬಂತೆ ಜಾಗತಿಕವಾಗಿ ಬಿಂಬಿತವಾಗುತ್ತಿದೆ. ಈಗ, ರಷ್ಯಾ ತೈಲ ಖರೀದಿಗೆ ಭಾರತಕ್ಕೆ ಅಮೆರಿಕ ಅನುಮತಿ ನೀಡಿರುವುದು ಜಾಗತಿಕವಾಗಿ ಮೋದಿ ಅವರು ಭಾರತವನ್ನು ಅಮೆರಿಕದ ಪದತಲಕ್ಕಿಟ್ಟಿದ್ದಾರೆ ಎಂಬಂತೆ ಬಾಸವಾಗುತ್ತಿದೆ. ಮೋದಿ ಅವರು ಭಾರತದ ಸಾರ್ವಭೌಮತ್ವ ಮತ್ತು ಘನತೆಗೆ ಧಕ್ಕೆ ತಂದಿದ್ದಾರೆ.
ಭಾರತದಂತಹ ಸ್ವತಂತ್ರ ರಾಷ್ಟ್ರವು ತನ್ನ ಆಂತರಿಕ ಮತ್ತು ಬಾಹ್ಯ ನೀತಿಗಳನ್ನು ಸ್ವತಂತ್ರವಾಗಿ ನಿರ್ಧರಿಸುವ ಹಕ್ಕು ಹೊಂದಿರುತ್ತದೆ. ಭಾರತವು ಬೆಳೆಯುತ್ತಿರುವ ಮಹಾಶಕ್ತಿಯಾಗಿ ಹೊರಹೊಮ್ಮುತ್ತಿರುವಾಗ, ತನ್ನ ವ್ಯಾಪಾರವನ್ನು ಸ್ವತಂತ್ರವಾಗಿ ನಿರ್ವಹಿಸಬೇಕು. ಆದರೆ, ಅಮೆರಿಕದ ಅಂಕೆಗೆ ಭಾರತ ಸಿಲುಕಿಕೊಂಡಿದೆ.
1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಇಂದಿರಾ ಗಾಂಧಿಯವರು ಅಮೆರಿಕದ ನೆಲದಲ್ಲಿ ನಿಂತು, “ಯಾವುದೇ ಒಂದು ದೇಶ ಮತ್ತೊಂದು ದೇಶಕ್ಕೆ ಏನು ಮಾಡಬೇಕು ಎಂದು ಹೇಳುವ ಹಕ್ಕಿಲ್ಲ. ಅಮೆರಿಕ ನಮ್ಮ ಸ್ನೇಹಿತನೇ ಹೊರತು, ಬಾಸ್ ಅಲ್ಲ. ಭಾರತ ತನ್ನ ಭವಿಷ್ಯವನ್ನು ತಾನೇ ಬರೆದುಕೊಳ್ಳುತ್ತದೆ” ಎಂದು ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್‌ಗೆ ಖಡಕ್ಕಾಗಿ ಹೇಳಿ ಬಂದಿದ್ದರು. ಇಂತಹ ಇತಿಹಾಸದಿಂದ ಮೋದಿ ಪಾಠ ಕಲಿಯಬೇಕಿದೆ. ಭಾರತವನ್ನು ಸ್ವಾಭಿಮಾನಿ ರಾಷ್ಟ್ರವನ್ನಾಗಿ ಮುನ್ನಡೆಸಬೇಕಿದೆ.




