2022ರ ಸೆಪ್ಟೆಂಬರ್‌ನಲ್ಲಿ ಬೆಳಕಿಗೆ ಬಂದ 19 ವರ್ಷದ ಯುವತಿ ಅಂಕಿತಾ ಭಂಡಾರಿ ಅವರ ಕೊಲೆ ಪ್ರಕರಣವು ಉತ್ತರಾಖಂಡದ ಬಿಜೆಪಿ ಸರ್ಕಾರವನ್ನು ಇಂದಿಗೂ ಕಾಡುತ್ತಿದೆ. ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧದ ಆಕ್ರೋಶವು ಮಹಿಳೆಯರ ಒಡಲ ಕಿಚ್ಚಿನಲ್ಲಿ ಹೊರಹೊಮ್ಮಿದೆ. ಕುಡುಗೋಲು ಹಿಡಿದು ಮಹಿಳಾ ಪ್ರತಿಭಟನಾಕಾರರು ಬಿಜೆಪಿ ನಾಯಕರಿಗೆ ಪಂಥಾಹ್ವಾನ ಕೊಟ್ಟಿದ್ದಾರೆ. ‘ವಿಶೇಷ ಸೇವೆ ಬೇಕಾ? ಕಾಮದ ತೀಟೆ ಹತ್ತಿರುವ ಬಿಜೆಪಿ ನಾಯಕರು ಎಷ್ಟು ಮಂದಿ ಇದ್ದೀರಿ? ಎಲ್ಲರೂ ಬನ್ನಿ!’ ಎಂದು ಸವಾಲು ಹಾಕಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಬಹುದೊಡ್ಡ ಎಚ್ಚರಿಕೆ ನೀಡಿದ್ದಾರೆ.
ಉತ್ತರಾಖಂಡದ ಋಷಿಕೇಶದಲ್ಲಿರುವ ಉಚ್ಛಾಟಿತ ಬಿಜೆಪಿ ನಾಯಕ ವಿನೋದ್ ಆರ್ಯ ಮತ್ತು ಅವರ ಪುತ್ರ ಪುಲ್ಕಿತ್ ಆರ್ಯ ನಡೆಯುತ್ತಿರುವ ‘ವನಂತರಾ ರಿಸಾರ್ಟ್’ನಲ್ಲಿ ರಿಸೆಪ್ಶನಿಸ್ಟ್ ಆಗಿ ಅಂಕಿತಾ ಭಂಡಾರಿ ಕೆಲಸ ಮಾಡುತ್ತಿದ್ದರು. ಆಕೆ 2022ರ ಆರಂಭದಲ್ಲಿ ಕಾಣೆಯಾಗಿದ್ದರು. ಕಾಣೆಯಾದ 6 ತಿಂಗಳ ಬಳಿಕ, ಆಕೆಯ ಮೃತದೇಹ ನಾಲೆಯೊಂದರಲ್ಲಿ ಪತ್ತೆಯಾಗಿತ್ತು. ಆಕೆಯನ್ನು ಪುಲ್ಕಿತ್ ಆರ್ಯ ಕೊಲೆ ಮಾಡಿದ್ದಾನೆಂಬುದು ಸಾಬೀತಾಗಿದೆ. 2025ರ ಮಾರ್ಚ್‌ನಲ್ಲಿ ಪುಲ್ಕತ್ ಆರ್ಯ ಮತ್ತು ಆತನ ತಂದೆ ವಿನೋದ್ ಆರ್ಯಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಆದರೂ, ಅಂಕಿತಾ ಕುಟುಂಬಕ್ಕೆ ಪರಿಪೂರ್ಣ ನ್ಯಾಯ ಸಿಕ್ಕಿಲ್ಲವೆಂಬ ಭಾವನೆ ರಾಜ್ಯದ ಜನರ ಮನದಲ್ಲಿ ಆಳವಾಗಿ ಬೇರೂರಿತ್ತು. ಕಾರಣ, ಪ್ರಕರಣದಲ್ಲಿ ಬಿಜೆಪಿ ಉನ್ನತ ನಾಯಕರೊಬ್ಬರ ಕೈವಾಡವಿದೆ ಎಂಬ ಗಂಭೀರ ಆರೋಪ. ಬಿಜೆಪಿ ಹೈಕಮಾಂಡ್ ಅನ್ನೇ ಬೊಟ್ಟು ಮಾಡುವ ಆರೋಪವು ಸಾರ್ವಜನಿಕವಾಗಿ ಕೇಳಿಬರುತ್ತಿದ್ದರೂ, ಈ ಆರೋಪವನ್ನು ತನಿಖೆಯಲ್ಲಿ ಬದಿಗಿಡಲಾಗಿತ್ತು. ಆದರೂ, ಚರ್ಚೆಗಳು ಮಾತ್ರ ನಿರಂತರವಾಗಿ ನಡೆದೇ ಇದ್ದವು. ಇದೀಗ, 2025ರ ಡಿಸೆಂಬರ್‌ನಲ್ಲಿ ನಟಿ ಉರ್ಮಿಳಾ ಸನಾವರ್ ಅವರು ಬಿಡುಗಡೆ ಮಾಡಿರುವ ಆಡಿಯೋವೊಂದು ಪ್ರಕರಣದಲ್ಲಿ ಬಹುದೊಡ್ಡ ತಿರುವು ತಂದಿದೆ. ಆಕ್ರೋಶವು ಸ್ಫೋಟಗೊಳ್ಳುವಂತೆ ಮಾಡಿದೆ.
ಆಡಿಯೋದಲ್ಲಿ ‘ಗಟ್ಟು’ ಮತ್ತು ಇನೊಬ್ಬ ಬಿಜೆಪಿ ಹಿರಿಯ ನಾಯಕ ಸಂಭಾಷಣೆ ಕೇಳಿಬಂದಿದೆ. ಅದರಲ್ಲಿ, ಗಟ್ಟು ಎಂಬ ವ್ಯಕ್ತಿ ಬಿಜೆಪಿಯ ಹಿರಿಯ ನಾಯಕ, ಉತ್ತರಾಖಂಡದ ಬಿಜೆಪಿ ಉಸ್ತುವಾರಿ ದುಷ್ಯಂತ್ ಕುಮಾರ್ ಗೌತಮ್ ಅವರೇ ಆಗಿದ್ದಾರೆ. ಕೊಲೆ ಅಪರಾಧಿ ಪುಲ್ಕಿತ್ ಆರ್ಯ ಮತ್ತು ಅವರ ಸಹಚಕರರು ವಿಐಪಿ ಓರ್ವರಿಗೆ ‘ವಿಶೇಷ ಸೇವೆ’ (ಲೈಂಗಿಕ ಸೇವೆ) ನೀಡುವಂತೆ ಒತ್ತಾಯಿಸಿದ್ದರು ಎಂಬುದು ಪ್ರಕರಣದ ಗಮನಾರ್ಹ ಸಂಗತಿಯಾಗಿತ್ತು. ಇದೀಗ, ಆ ವಿಐಪಿಯೇ ‘ಗಟ್ಟು’. ಆತ ಬೇರಾರೂ ಅಲ್ಲ, ಬಿಜೆಪಿ ಉಸ್ತುವಾರಿ ದುಷ್ಯಂತ್ ಗೌತಮ್ ಎಂದು ಉರ್ಮಿಳಾ ಆರೋಪಿಸಿದ್ದಾರೆ.
ಚಿಕ್ಕ ಹುಡುಗಿ ಅಂಕಿತಾ ಭಂಡಾರಿ ತಮ್ಮ ಉದ್ಯೋಗದಲ್ಲಿ ತೀವ್ರ ಒತ್ತಡವನ್ನು ಎದುರಿಸಿದ್ದರು. ತಮ್ಮ ದೃಢತೆ ಮತ್ತು ದೌರ್ಜನ್ಯಕ್ಕೆ ಬಗ್ಗಲು ನಿರಾಕರಿಸಿ ತಮ್ಮ ಪ್ರಾಣವನ್ನೇ ಕಳೆದುಕೊಂಡರು ಎಂದು ಆಕೆಯ ಸಹೋದ್ಯೋಗಿಗಳೂ ಹೇಳಿಕೊಂಡಿದ್ದಾರೆ. ಆ ಆಡಿಯೋ, ಸಹೋದ್ಯೋಗಿಗಳು ಬಿಚ್ಚಿಟ್ಟ ಸತ್ಯ ಹಾಗೂ ಪ್ರಕರಣವು ಉತ್ತರಾಖಂಡದಲ್ಲಿ ಮಹಿಳಾ ಸುರಕ್ಷತೆ ಕುರಿತ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮುಖ್ಯವೆಂದರೆ, ಉತ್ತರಾಖಂಡ ರಾಜ್ಯವು ಮಹಿಳೆಯರಿಗೆ ಸುರಕ್ಷಿತ ಎಂದು ಖ್ಯಾತಿ ಹೊಂದಿರುವ ರಾಜ್ಯ. ಆದರೆ, ಇತ್ತೀಚಿನ ಘಟನಾವಳಿಗಳು ಆ ಖ್ಯಾತಿಯನ್ನು ಪ್ರಶ್ನಿಸುವಂತೆ ಮಾಡಿವೆ. ಅಲ್ಲಿನ ರಿಸಾರ್ಟ್‌ಗಳು, ಪ್ರವಾಸೋದ್ಯಮದಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ಒತ್ತಡಗಳು ಹೆಚ್ಚುತ್ತಿವೆ. ಉತ್ತರಾಖಂಡದ ರೆಸಾರ್ಟ್‌ಗಳಲ್ಲಿ ವಿಐಪಿ ಸಂಸ್ಕೃತಿ ಬೇರೂರುತ್ತಿದೆ. ಪ್ರಭಾವಿಗಳ ಒಡೆತನದ ರೆಸಾರ್ಟ್‌ಗಳಲ್ಲಿ ತಮ್ಮ ವಿಐಪಿ ಅತಿಥಿಗಳಿಗೆ ‘ಹೆಚ್ಚುವರಿ/ವಿಶೇಷ ಸೇವೆ’ ಹೆಸರಿನಲ್ಲಿ ಲೈಂಗಿಕವಾಗಿ ಸಹರಿಸುವಂತೆ ಮಹಿಳಾ ಉದ್ಯೋಗಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಕರಾಳಮುಖವು ತೆರೆದಿಟ್ಟಿದೆ. ಅನೌಪಚಾರಿಕ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಗೆ ಲೈಂಗಿಕ ಬೆದರಿಕೆ, ಕಿರುಕುಳ, ದೌರ್ಜನ್ಯದ ಆರೋಪಗಳು ಅಭದ್ರತೆಯನ್ನು ಸೃಷ್ಟಿಸಿವೆ.
ಆರೋಪ, ಅಭದ್ರತೆ ಹಾಗೂ ಆತಂಕವು ಪ್ರತಿಭಟನೆಗಳನ್ನು ತೀವ್ರಗೊಳಿಸಿದೆ. ಮಹಿಳಾ ಹೋರಾಟಗಾರರು ಕುಡುಗೋಲು, ಮೇಣದ ಬತ್ತಿ ಹಿಡಿದು ಬೀದಿಗಳಿದಿದ್ದಾರೆ. ಅಂಕಿತಾ ಬಂಡಾರಿ ಕುಟುಂಬಕ್ಕೆ ಸಂಪೂರ್ಣ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸುವುದಂತೆ ಒತ್ತಾಯಿಸಿದ್ದಾರೆ. ಮಹಿಳೆಯರ ಈ ಪ್ರತಿಭಟನೆಗಳು ಕೇವಲ ಒಂದು ಪ್ರಕರಣಕ್ಕೆ ಸೀಮಿತವಲ್ಲ. ಇದು ಅಧಿಕಾರದ ದುರ್ಬಳಕೆ, ಮಹಿಳಾ ಸುರಕ್ಷತೆ ಹಾಗೂ ರಾಜಕೀಯ ಒಳಒಪ್ಪಂದ ಮತ್ತು ರಕ್ಷಣೆಯ ವಿರುದ್ಧದ ಕಿಡಿಯಾಗಿದೆ.
ಈ ಲೇಖನ ಓದಿದ್ದೀರಾ?: SIR – ಬಿಜೆಪಿಗಾಗಿ ಚುನಾವಣಾ ಆಯೋಗ ನಡೆಸುತ್ತಿರುವ ರಕ್ತರಹಿತ ನರಮೇಧ
ಮಹಿಳಾ ಶಕ್ತಿಯ ಪ್ರತಿಭಟನೆಗೆ ಕಾಂಗ್ರೆಸ್, ಎಡಪಕ್ಷಗಳು ಜೊತೆಗೂಡಿವೆ. ಬೃಹತ್ ಪ್ರತಿಭಟನೆಗಳನ್ನು ರೂಪಿಸುತ್ತಿವೆ. ಜನವರಿ 4ರಂದು ಮುಖ್ಯಮಂತ್ರಿ ಕಚೇರಿಗೆ ಘೇರಾವ್ ಹಾಕಲು ನಿರ್ಧಿಸಿದ್ದಾರೆ. ಮಾತ್ರವಲ್ಲ, ಬಿಜೆಪಿ ಮಾಜಿ ಸಚಿವ ವಿಜಯ್ ಬರ್ತ್ವಾಲ್, ಮಾಜಿ ಮುಖ್ಯಮಂತ್ರಿ – ಹಾಲಿ ಸಂಸದ ತ್ರಿವೇಂದ್ರ ಸಿಂಗ್ ರಾವತ್, ಬಿಜೆಪಿ ನಾಯಕ ಅಜೇಂದ್ರ ಅಜಯ್ ಸೇರಿದಂತೆ ಕೆಲವು ಬಿಜೆಪಿ ನಾಯಕರೂ ಸಿಬಿಐ ತನಿಖೆಗಾಗಿನ ಒತ್ತಾಯವನ್ನು ಬೆಂಬಲಿಸಿದ್ದಾರೆ. ಆರೋಪ ಹೊತ್ತಿರುವ ದುಷ್ಯಂತ್ ಗೌತಮ್ ನೈತಿಕ ಜವಾಬ್ದಾರಿಯಿಂದ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದೇ ಆಗ್ರಹರೊಂದಿಗೆ ಹಲವರು ಪಕ್ಷಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ. ಸಿಬಿಐ ತನಿಖೆಗಾಗಿ ಇಡೀ ರಾಜ್ಯವೇ ಒತ್ತಾಯಿಸುತ್ತಿದೆ. ಆದರೆ, ಸರ್ಕಾರವು ಆರೋಪಗಳಿಗೆ ‘ಸಾಕ್ಷ್ಯ ಕೊಡಿ’ ಎಂದು ಪ್ರತಿಭಟನಾಕಾರರನ್ನೇ ಕೇಳುತ್ತಿದೆ. ಇದು, ಬಿಜೆಪಿಯ ʼವಿಐಪಿ ಬಚಾವೋ’ ಎಂಬ ಹಿಡನ್ ನೀತಿಯನ್ನು ಎತ್ತಿ ತೋರುತ್ತಿದೆ.
ಈಗಾಗಲೇ, ಅತ್ಯಾಚಾರ ಆರೋಪಿ ಕುಲದೀಪ್ ಸಿಂಗ್ ಸೆಂಗರ್, ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಸಿಂಗ್, ಬಿ.ಎಸ್ ಯಡಿಯೂರಪ್ಪ, ಸ್ವಾಮಿ ಚಿನ್ಮಯಾನಂದ ಸೇರಿದಂತೆ ಹಲವು ಆರೋಪಿಗಳ ಪರವಾಗಿ ಬಿಜೆಪಿ ಮತ್ತು ಸರ್ಕಾರಗಳು ನಿಲುವು ತೆಗೆದುಕೊಂಡು ಜನರ ಕೆಂಗಣ್ಣಿಗೆ ಗುರಿಯಾಗಿವೆ. ಈಗ, ಅಂಕಿತಾ ಭಂಡಾರಿ ಪ್ರಕರಣದಲ್ಲಿ ಬಿಜೆಪಿ ಸರ್ಕಾರವು ಆರೋಪಿಯೆಂದು ಹೇಳಲಾಗುತ್ತಿರುವ ದುಷ್ಯಂತ್ ಗೌರಮ್ ರಕ್ಷಣೆಗೆ ನಿಂತಿದೆ. ಇದು, ಜನಾಕ್ರೋಶ ಸಿಡಿದೇಳುವಂತೆ ಮಾಡುತ್ತಿದೆ.
ಉತ್ತರಾಖಂಡದ ಬಿಜೆಪಿ ಸರ್ಕಾರವು ತಮ್ಮ ರಾಜ್ಯದ ಪ್ರವಾಸೋದ್ಯಮದಲ್ಲಿರುವ ‘ವಿಐಪಿ ಸಂಸ್ಕೃತಿ’ ಮತ್ತು ‘ಹೆಚ್ಚುವರಿ ಸೇವೆ’ ಎಂಬ ಲೈಂಗಿಕ ದೌರ್ಜನ್ಯದ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ, ಅಂಕಿತಾ ಭಂಡಾರಿ ಪ್ರಕರಣದ ಹಿಂದಿರುವ ವಿಐಪಿ ನಾಯಕನ ವಿರುದ್ಧ ತನಿಖೆಗೆ ಮುಂದಾಗದಿದ್ದರೆ, ಬಿಜೆಪಿ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂಬುದನ್ನು ಮಹಿಳೆಯರ ಕಿಚ್ಚು ಒತ್ತಿ ಹೇಳುತ್ತಿದೆ.




