ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವ ಪೊರೆದ ಅಮೆರಿಕ; ಪುಡಿಗಟ್ಟುತ್ತಿರುವ ಭಾರತ

Date:

ಅಮೆರಿಕದಲ್ಲಿ 'ಎಪ್‌ಸ್ಟೀನ್‌ಗೂ-ಟ್ರಂಪ್‌ಗೂ ಏನು ಸಂಬಂಧ' ಎಂದು ಕೇಳಿದಂತೆಯೇ; ಭಾರತದಲ್ಲಿ 'ಪ್ರಧಾನಿಗೂ-ಅದಾನಿಗೂ ಇರುವ ಸಂಬಂಧ'ವೇನು ಎಂದು ಪ್ರಶ್ನಿಸಿದರು. ಅಲ್ಲಿ ಫೈಲ್ಸ್ ಬಹಿರಂಗವಾಯಿತು, ಇಲ್ಲಿ ವಿರೋಧ ಪಕ್ಷದ ನಾಯಕನನ್ನು ಲೋಕಸಭೆಯಿಂದಲೇ ಹೊರಹಾಕಲಾಯಿತು.

ಸದ್ಯ ಅಮೆರಿಕದಲ್ಲಿ ಎಪ್‌ಸ್ಟೀನ್ ಫೈಲ್‌ಗಳದೇ ಸುದ್ದಿ. ಈ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದ ಒಂಭತ್ತು ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಸಾರ್ವಜನಿಕರ ಅವಗಾಹನೆಗೆ ಬಿಡಲಾಗಿದೆ. ಸುದ್ದಿಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳು ಫೈಲ್ ಮೇಲೆ ಮುಗಿಬಿದ್ದಿವೆ. ಅಮೆರಿಕವಷ್ಟೇ ಅಲ್ಲ, ಇಡೀ ಪ್ರಪಂಚವೇ ಎಪ್‌ಸ್ಟೀನ್ ಫೈಲ್ಸ್ ಬಗ್ಗೆ ಕುತೂಹಲ ತಾಳಿ ಚರ್ಚಿಸುತ್ತಿದೆ.

ಅಸಲಿಗೆ, ಸಮಾಧಿ ಸೇರಿದ್ದ ಎಪ್‌ಸ್ಟೀನ್ ಫೈಲ್ಸ್ ವಿಚಾರವನ್ನು ಎಳೆದು ತಂದವರು ಡೊನಾಲ್ಡ್ ಟ್ರಂಪ್ ಅವರೇ. ಅಮೆರಿಕ ಚುನಾವಣೆಗೂ ಮುಂಚೆ, ‘ನಾವು ಅಧಿಕಾರಕ್ಕೆ ಬಂದರೆ, ಎಪ್‌ಸ್ಟೀನ್ ಫೈಲ್ಸ್ ಬಿಡುಗಡೆ ಮಾಡುತ್ತೇವೆ. ಇದರಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕರಿದ್ದಾರೆ’ ಎಂದು ಆಕ್ರೋಶಭರಿತರಾಗಿ ಹೇಳಿದ್ದರು. ಚುನಾವಣೆ ನಡೆಯಿತು, ಟ್ರಂಪ್ ಗೆದ್ದರು, ಅಧ್ಯಕ್ಷರಾದರು. ಅಧಿಕಾರಕ್ಕೇರಿ ಆರು ತಿಂಗಳಾದರೂ ಎಪ್‌ಸ್ಟೀನ್ ಫೈಲ್ಸ್ ಹೊರಬರಲಿಲ್ಲ.

ಇದಕ್ಕೆ ಪೂರಕವಾಗಿ, ಎಪ್‌ಸ್ಟೀನ್ ಎಂಬ ಪಾತಕಿಯ ಜೊತೆಗೆ ಸಂಪರ್ಕವಿಟ್ಟುಕೊಂಡಿದ್ದವರು ಉನ್ನತ ಮಟ್ಟದ ವ್ಯಕ್ತಿಗಳಾದ ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರು, ರಾಜ ಮನೆತನದ ಗಣ್ಯವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು. ಇವರು ತಮಗಿರುವ ಹಣ, ಅಧಿಕಾರ ಮತ್ತು ಪ್ರಭಾವ ಬಳಸಿ ಆ ಫೈಲ್ಸ್ ಹೊರಬರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಭದ್ರಾ ಮೇಲ್ದಂಡೆಗೆ ನೆರವು ನಿರಾಕರಣೆ; ಹಸಿದು ಬಾಯಾರಿದ ಸೀಮೆಗಳಿಗೆ ಮೋಶಾ ಬಗೆದ ದ್ರೋಹ!

ಇದರಿಂದ ಬೇಸತ್ತ ಅಮೆರಿಕದ ಜನ ಬೀದಿಗಿಳಿದು ಪ್ರತಿಭಟಿಸಿದರು. ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡು ಎಪ್‌ಸ್ಟೀನ್ ಮತ್ತು ಟ್ರಂಪ್ ಜೊತೆಗಿರುವ ಹಲವಾರು ಚಿತ್ರಗಳನ್ನು, ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿ, ಉತ್ತರಿಸಲು ಒತ್ತಡ ಹೇರಿದರು. ಹಣಕಾಸು ಮತ್ತು ಲೈಂಗಿಕ ಹಗರಣದಲ್ಲಿ ಸಿಲುಕಿರುವ, ಬಹುಕಾಲದ ಗೆಳೆಯ ಜೆಫ್ರಿ ಎಪ್‌ಸ್ಟೀನ್‌ ಜತೆಗಿನ ತಮ್ಮ ಸಂಬಂಧದ ಕುರಿತು ಟ್ರಂಪ್ ನಿರ್ಲಕ್ಷಿಸಿದರು. ಒರಟು-ಉಡಾಫೆ ಶೈಲಿಯಲ್ಲಿ ಉತ್ತರಿಸಿ ಉದ್ಧಟತನ ಮೆರೆದರು.

ಆದರೆ ಟ್ರಂಪ್, ಪ್ರಜಾಪ್ರಭುತ್ವದ ಸಂಸ್ಥೆಗಳಿಗೆ ತಲೆಬಾಗಿದರು. ಟ್ರಂಪ್ ಒಬ್ಬರೇ ಅಲ್ಲ, ಚುನಾಯಿತ ಸಂಸದರೆಲ್ಲರೂ ಪ್ರಜಾಪ್ರಭುತ್ವಕ್ಕೆ ಘನತೆ ತರುವಂತೆ ನಡೆದುಕೊಂಡರು. ಪ್ರಜೆಗಳ ಮಾತಿಗೆ ಮಣಿದು ಪ್ರಜಾಸತ್ತಾತ್ಮಕ ರೀತಿ-ನೀತಿಗೆ ಬೆಲೆ ತಂದರು.

ವಿಶ್ವದ ಪ್ರಖ್ಯಾತ ವ್ಯಕ್ತಿಗಳಾದ ಮೈಕಲ್ ಜಾಕ್‌ಸನ್, ಡಿಕಾಪ್ರಿಯೋ, ಬಿಲ್ ಗೇಟ್ಸ್, ಕ್ಲಿಂಟನ್, ಟ್ರಂಪ್‌ರಂತಹ ಘಟಾನುಘಟಿಗಳನ್ನು ದೋಷಾರೋಪಣೆಯಲ್ಲಿ ಸಿಲುಕಿಸಬಹುದು ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೂ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿ ಇಬ್ಬರು ಕಾಂಗ್ರೆಸ್ ಸದಸ್ಯರು ಯುಎಸ್ ಕಾಂಗ್ರೆಸ್‌ನಲ್ಲಿ ಮಸೂದೆ ಮಂಡಿಸಿದರು. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಸೂದೆಯನ್ನು ಮತಕ್ಕೆ ಹಾಕಿದಾಗ 470ರಿಂದ 1 ಮತಗಳ ಫಲಿತಾಂಶ ಹೊರಬಿದ್ದಿತು. ಸೆನೆಟ್ ಅದನ್ನು ಸರ್ವಾನುಮತದಿಂದ ಅಂಗೀಕರಿಸಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದಿಯಾಗಿ, ರಿಪಬ್ಲಿಕನ್ ಮತ್ತು ಡೆಮಾಕ್ರಾಟ್ ಪಕ್ಷದ ಎಲ್ಲಾ ಸಂಸದರು ಸಹ ಇದನ್ನು ಬೆಂಬಲಿಸಿದರು. ಮಸೂದೆಗೆ ಸಹಿ ಹಾಕಿದರು.

ಅಮೆರಿಕದಲ್ಲಿ ಸೆಕ್ಸ್ ಎಂಬುದು ಮಡಿವಂತಿಕೆಯ ಪ್ರಶ್ನೆಯಲ್ಲ. ಅದನ್ನು ಮಹಿಳೆಯರ ಗೌರವ ಅಥವಾ ಪರಿಶುದ್ಧತೆಗೆ ಸಂಬಂಧಿಸಿ ಮಾತನಾಡುವುದಿಲ್ಲ. ಆದರೆ, ಎಪ್‌ಸ್ಟೀನ್ ಫೈಲ್ಸ್ ವಿಚಾರದಲ್ಲಿ, ಯಾರು ಎಷ್ಟೇ ಪ್ರತಿಷ್ಠಿತರಿದ್ದರೂ ಬಹಿರಂಗವಾಗಲಿ, ಸತ್ಯ ಹೊರಬರಲಿ ಎಂಬ ಒಮ್ಮತಾಭಿಪ್ರಾಯಕ್ಕೆ ಬರಲಾಗಿದೆ. ಕಾನೂನು ಸಂಸ್ಥೆಗಳ ನೀತಿ-ನಿಯಮಗಳಡಿಯಲ್ಲಿಯೇ ಫೈಲ್ಸ್ ಬಿಡುಗಡೆ ಮಾಡಲಾಗಿದೆ.

ಆದರೆ, ಪ್ರಧಾನಿ ಮೋದಿಯವರ ಹೊಸ ಭಾರತದಲ್ಲಿ, ಲೈಂಗಿಕ ಅಪರಾಧಗಳನ್ನು ನ್ಯೂ ನಾರ್ಮಲ್ ಎಂದು ಸ್ವೀಕರಿಸಿರುವ ದೇಶದಲ್ಲಿ, ಪ್ರಭಾವಿ ಅತ್ಯಾಚಾರ ಆರೋಪಿಗಳಿಗೆ ನ್ಯಾಯಾಲಯಗಳು ತಕ್ಷಣ ಜಾಮೀನು ನೀಡುತ್ತವೆ. ಶಿಕ್ಷೆಗೊಳಗಾದ ಸಾಮೂಹಿಕ ಅತ್ಯಾಚಾರ ಅಪರಾಧಿಗಳು, ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ಜೈಲಿನಿಂದ ಬಿಡುಗಡೆಯಾಗುತ್ತಾರೆ. ಸನಾತನ ಧರ್ಮ ಪಾಲಿಸುವ ಸಮಾಜದಲ್ಲಿ, ಬಿಡುಗಡೆಯಾದ ಅತ್ಯಾಚಾರಿಗಳಿಗೆ ಮಹಿಳೆಯರೇ ಮುಂದಾಗಿ ಆರತಿ ಎತ್ತಿ ಸನ್ಮಾನಿಸುತ್ತಾರೆ. ಇನ್ನು ಕೆಲ ಅಪರಾಧಿಗಳು ಆಡಳಿತ ಪಕ್ಷ ಸೇರಿ, ಚುನಾವಣೆಗೆ ಸ್ಪರ್ಧಿಸಿ ಗೆದ್ದು ಕಳಂಕರಹಿತರೆಂದು ಬೀಗುತ್ತಾರೆ. ಆಸಾರಾಂ ಬಾಪು, ಗುರ್ಮಿತ್ ರಾಮ್ ರಹೀಂರಂತಹ ಅತ್ಯಾಚಾರಿಗಳು ಪೆರೋಲ್ ಮೇಲೆ ಆಗಾಗ ಜೈಲಿನಿಂದ ಹೊರಬರುತ್ತಾರೆ. ಉನ್ನಾಂವ್ ಅತ್ಯಾಚಾರಿ ಕುಲದೀಪ್ ಸೆಂಗಾಯ್‌ರಂತಹ ಬಿಜೆಪಿ ನಾಯಕರಿಗೆ ಜೀವಾವಧಿ ಶಿಕ್ಷೆಯಿಂದ ಅಮಾನತುಗೊಳಿಸಲಾಗುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ಸೋನಮ್ ವಾಂಗ್ಚುಕ್ ಎಂಬ ಪರಿಸರ ಹೋರಾಟಗಾರ ಮತ್ತು ಶಿಕ್ಷಣ ಸುಧಾರಕರಿಗೆ ಹಾಗೂ ಸಿಎಎ-ಎನ್ಆರ್‍‌ಸಿ ಎಂಬ ಜನವಿರೋಧಿ ಕಾಯ್ದೆಗಳ ಬಗ್ಗೆ ಪ್ರತಿಭಟಿಸಿದ ಉಮರ್ ಖಾಲಿದ್ ಸ್ನೇಹಿತರಿಗೆ ಜಾಮೀನು ನೀಡದೆ, ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗುತ್ತದೆ.

ಸೋಜಿಗದ ಸಂಗತಿ ಎಂದರೆ, ಅಮೆರಿಕದಲ್ಲಿ ‘ಎಪ್‌ಸ್ಟೀನ್‌ಗೂ-ಟ್ರಂಪ್‌ಗೂ ಏನು ಸಂಬಂಧ’ ಎಂದು ಕೇಳಿದಂತೆಯೇ; ಭಾರತದಲ್ಲಿಯೂ ‘ಪ್ರಧಾನಿಗೂ-ಅದಾನಿಗೂ ಇರುವ ಸಂಬಂಧ’ವೇನು ಎಂದು ಪ್ರಶ್ನಿಸಿದರು. ಪ್ರಜೆಗಳಿಂದ ಆಯ್ಕೆಯಾಗಿ ಅಧಿಕಾರಕ್ಕೇರಿದ ಮೋದಿಯವರ ನೇತೃತ್ವದ ಸರ್ಕಾರ, ವಿರೋಧ ಪಕ್ಷದ ನಾಯಕನನ್ನು ಲೋಕಸಭೆಯಿಂದಲೇ ಹೊರಹಾಕಿತು. ಸಂಸದನ ಸ್ಥಾನಕ್ಕೇ ಸಂಚಕಾರ ತಂದಿತು. ಅವರ ಮೇಲೆ ವಿನಾಕಾರಣ ಕೇಸುಗಳನ್ನು ದಾಖಲಿಸಿ, ವಿರೋಧಿ ದನಿಯನ್ನು ದಮನ ಮಾಡಲು ಯತ್ನಿಸಲಾಗುತ್ತಿದೆ.   

ಮುಂದುವರೆದ ಮೋದಿಯವರ ಸರ್ಕಾರ ಪ್ರಜಾಪ್ರಭುತ್ವದ ಅಂಗ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿಯಂತಹ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು ಬಳಸುತ್ತಿದೆ. ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ವಿಶ್ವವಿದ್ಯಾಲಯಗಳು ಅಧಿಕಾರಸ್ಥರ ಪ್ರಭಾವಕ್ಕೆ ಒಳಗಾಗಿವೆ. ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಮಾಡಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಅವುಗಳ ಒಡೆತನವನ್ನು ವ್ಯವಸ್ಥಿತವಾಗಿ ಕಾರ್ಪೊರೇಟ್ ಕುಳಗಳ ಕೈಗೆ ಹೋಗುವಂತೆ ನೋಡಿಕೊಳ್ಳಲಾಗುತ್ತಿದೆ.

ಇದನ್ನು ಓದಿದ್ದೀರಾ?: ‘ಅತ್ಯಾಚಾರ ಸಂತ್ರಸ್ತೆ ಮೇಲೆ‌ ಪೊಲೀಸ್ ದೌರ್ಜನ್ಯ; ಭಾರತ ಸತ್ತ ಸಮಾಜವೂ ಆಗುತ್ತಿದೆ’

ಮಹತ್ವದ ಮಸೂದೆಗಳನ್ನು ಚರ್ಚೆಗೆ ತರದೆ, ಆತುರಾತುರವಾಗಿ ಅಂಗೀಕರಿಸಿ, ಸಂಸದೀಯ ನಡಾವಳಿಗಳನ್ನೇ ಬುಡಮೇಲು ಮಾಡಲಾಗುತ್ತಿದೆ. ಜಿಎಸ್‌ಟಿ, ಅನುದಾನ ಹಂಚಿಕೆ, ಪರಿಹಾರ ಬಿಡುಗಡೆಗಳ ಮೂಲಕ ರಾಜ್ಯಗಳ ಹಕ್ಕುಗಳನ್ನು ಕಸಿದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಾಗುತ್ತಿದೆ. ಯುಎಪಿಎ, ದ್ರೋಹ ಕಾನೂನುಗಳ ಬಳಸಿ ನಾಗರಿಕ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಧಾರ್ಮಿಕ ಧ್ರುವೀಕರಣದಿಂದ ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಚುನಾವಣಾ ಬಾಂಡ್ ಮೂಲಕ ಅಕ್ರಮವಾಗಿ ಹಣ ಸಂಗ್ರಹಿಸಲಾಗುತ್ತಿದೆ. ಪ್ರಶ್ನಿಸುವ ಹಕ್ಕಾದ ಆರ್‍‌ಟಿಐ ಕಾಯ್ದೆಯನ್ನು ಕಣ್ಮರೆ ಮಾಡಲಾಗಿದೆ. ಬಡ ಕಾರ್ಮಿಕರ ಅನ್ನಕ್ಕೆ ದಾರಿಯಾಗಿದ್ದ ಮನರೇಗಾದಿಂದ ಬಡವರ ಕೆಲಸವನ್ನು ಕಿತ್ತುಕೊಳ್ಳಲಾಗಿದೆ. ಗಾಂಧಿಯನ್ನು ಹಿಂದಕ್ಕೆ ಸರಿಸಿ ರಾಮನನ್ನು ಪ್ರತಿಷ್ಠಾಪಿಸಲಾಗಿದೆ.

ಅಮೆರಿಕ ಮತ್ತು ಭಾರತ ಪ್ರಜಾಪ್ರಭುತ್ವ ಪಾಲಿಸುವ ರಾಷ್ಟ್ರಗಳು. ಟ್ರಂಪ್ ಮತ್ತು ಮೋದಿ ಆಪ್ತ ಸ್ನೇಹಿತರು. ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನು ಪೊರೆಯುತ್ತಿದ್ದರೆ, ಭಾರತದಲ್ಲಿ ಪ್ರಜಾಪ್ರಭುತ್ವದ ಪಕ್ಕೆಲುಬುಗಳನ್ನು ಮುರಿದು ಪುಡಿಗಟ್ಟಲಾಗುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಂಡು, ಅವುಗಳ ಘನತೆಗೆ ಮಸಿ ಬಳಿಯಲಾಗುತ್ತಿದೆ. ಭಾರತದ ಪ್ರಜೆಗಳಾದ ನಮಗೆ, ಇದು ಅರ್ಥವಾಗುತ್ತಿದೆಯೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....