ಈ ದಿನ ಸಂಪಾದಕೀಯ | ಕಾಶ್ಮೀರ ಕಣಿವೆಯಲ್ಲಿ ಕ್ರಿಕೆಟ್ ಕಲರವ; ಭರವಸೆಯ ಬೆಳಕಾಗಬಹುದೇ?

Date:

ಕಣಿವೆ ಜನರ ಜೀವನಪ್ರೀತಿ ಮತ್ತು ಕ್ರೀಡೆಯ ಹುಚ್ಚು ಅವರನ್ನು ಮತ್ತೊಂದು ಸ್ತರಕ್ಕೆ ಕರೆದೊಯ್ದರೆ, ಆ ಯಾತನಾ ಬದುಕಿನಿಂದ ಬಿಡುಗಡೆ ಹೊಂದುವಂತಾದರೆ, ಹೊಸ ಬದುಕಿಗೆ ತೆರೆದುಕೊಳ್ಳುವಂತಾದರೆ, ಕಾಶ್ಮೀರಕ್ಕೆ ದೀರ್ಘಕಾಲಿಕ ಶಾಂತಿಯ ದಾರಿ ತೆರೆದುಕೊಳ್ಳಬಹುದು.

ಈ ಬಾರಿಯ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಹಲವು ಅದ್ಭುತಗಳಿಗೆ ವೇದಿಕೆಯಾಗುತ್ತಿದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ದಿಕ್ಕೆಟ್ಟ ಸ್ಥಿತಿಯಲ್ಲಿರುವ ದೇಶಗಳಿಂದ ಬಂದ ಆಟಗಾರರ ಆಟಕ್ಕೆ, ಪ್ರತಿಭೆಗೆ ಅಪೂರ್ವ ಅವಕಾಶ ಕಲ್ಪಿಸಿಕೊಟ್ಟಿದೆ. ಜಾಗತಿಕ ಮನ್ನಣೆ ದೊರಕಿಸಿಕೊಟ್ಟಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಕೊಂಚ ಮನ್ನಣೆ ಗಳಿಸಿ ಮದದಲ್ಲಿ ಮೆರೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ಆಟಗಾರರು ಕೈ ಕುಲುಕುವ ಕನಿಷ್ಠ ಸೌಜನ್ಯವನ್ನೂ ತೋರದೆ, ಮೈದಾನದಲ್ಲಿಯೂ ದ್ವೇಷ-ಸೇಡು ಗೆಲ್ಲುವಂತೆ ನೋಡಿಕೊಂಡಿದ್ದು ಕೂಡ ನಡೆದಿದೆ. ಕ್ರೀಡಾಸ್ಫೂರ್ತಿ ಮರೆಯಾಗಿ, ಅಸಹ್ಯ ರಾಜಕಾರಣ ಕೇಕೆ ಹಾಕಿದೆ. ಇದರ ನಡುವೆಯೇ 1992ರ ವಿಶ್ವಕಪ್ ಕ್ರಿಕೆಟ್‌ನ 14 ಮಾಜಿ ನಾಯಕರು ಒಂದಾಗಿ ಪಾಕಿಸ್ತಾನದ ಜೈಲಿನಲ್ಲಿರುವ ಗೆಳೆಯ ಇಮ್ರಾನ್ ಖಾನ್ ಘನತೆಗೆ, ಚಿಕಿತ್ಸೆಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡ ಅಪರೂಪದ ಮಾನವೀಯ ನಡೆ, ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ವಿಶ್ವ ಚಾಂಪಿಯನ್ಸ್ ಎನಿಸಿಕೊಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಶ್ರೀಲಂಕಾ ತಂಡ ಲೀಗ್ ಹಂತದಲ್ಲಿಯೇ ಮನೆಗಟ್ಟಿ, ಸಿಂಹಳೀಯರಲ್ಲಿ ಸಂಭ್ರಮ ಮೂಡಿಸಿದೆ. ಅದರಲ್ಲೂ ಶ್ರೀಲಂಕಾ ತಂಡದ ಆಟಗಾರ ಪತುಮ್ ನಿಸ್ಸಾಂಕ ಅವರ ಅದ್ಭುತ ಕ್ಯಾಚ್ ಹಾಗೂ ಸೊಗಸಾದ ಸೆಂಚುರಿ, ಆಸ್ಟ್ರೇಲಿಯಾ ದಾಂಡಿಗರಿಗೆ ದುಃಸ್ವಪ್ನದಂತೆ ಕಾಡುತ್ತಿದೆ. ಶ್ರೀಲಂಕಾ ಸ್ಥಿತಿಯನ್ನೇ ಹೋಲುವ ದೇಶಗಳಾದ ಜಿಂಬಾಬ್ವೆಯ ಬ್ರಿಯನ್ ಬೆನೆಟ್, ನೇಪಾಳದ ದಿಪೇಂದ್ರಸಿಂಗ್ ಐರೆ, ಕುಶಾಲ್ ಭುರಟೆ, ಕೆನಡಾದ ಯುವರಾಜ್ ಸಮ್ರಾರಂತಹ ಆಟಗಾರರು ಪ್ರತಿಭೆ ಪಣಕ್ಕಿಟ್ಟು ಆಡಿ ಆ ದಿಕ್ಕೆಟ್ಟ ದೇಶಗಳ ಜನರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಭ್ರಷ್ಟಾಚಾರವೆಂಬ ಸ್ನಾನದ ಕೋಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಬೆತ್ತಲೆಯೇ…

ಅಂಥದ್ದೇ ಮತ್ತೊಂದು ಸಂತೋಷದ ಸುದ್ದಿಯೊಂದು ದೇಶದ ಭಾಗವೇ ಆಗಿರುವ, ಬೆಂಕಿಯಲ್ಲಿ ಬೆಂದು ಬೂದಿಯಾಗಿರುವ ಜಮ್ಮು-ಕಾಶ್ಮೀರದ ಕಣಿವೆಯಿಂದ ಬಂದಿದೆ. ಅದು ಕೂಡ ಆಟದ ಮೈದಾನದಿಂದಲೇ ಎದ್ದು ಬಂದಿದೆ.

67 ವರ್ಷಗಳ ರಣಜಿ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡ ಫೈನಲ್ ಪ್ರವೇಶಿಸಿದೆ. ಬಲಿಷ್ಠ ಪಶ್ಚಿಮ ಬಂಗಾಳ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರ 8 ವಿಕೆಟ್‌ಗಳ ಅಸಾಧಾರಣ ಸಾಧನೆಯ ನಡುವೆಯೂ, ಜಮ್ಮು-ಕಾಶ್ಮೀರ ತಂಡದ ಆಟಗಾರರು ತೋರಿದ ಸಂಯಮದ ಆಟ, ಐತಿಹಾಸಿಕ ಗೆಲುವು ತಂದುಕೊಟ್ಟಿದೆ.

1959-60ರ ಆವೃತ್ತಿಯಲ್ಲಿ ರಣಜಿ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಜಮ್ಮು- ಕಾಶ್ಮೀರ ತಂಡವನ್ನು ಇದುವರೆಗೆ ಪ್ರಬಲ ಪ್ರಶಸ್ತಿ ಆಕಾಂಕ್ಷಿ ಎಂದು ಪರಿಗಣಿಸಿರಲಿಲ್ಲ. ಆಟಗಾರರು ಕೂಡ ಅಂತಹ ಆಟವನ್ನು ಪ್ರದರ್ಶಿಸಲು, ಆ ಮೂಲಕ ನಾವೂ ಇದ್ದೇವೆ ಎಂದು ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ. ಆದರೆ, 1982–83ರ ಸೀಸನ್‌ನಲ್ಲಿ ತಂಡ ಮೊದಲ ಬಾರಿಗೆ ಗೆಲುವಿನ ರುಚಿ ಕಂಡಿತ್ತು. 2013-14ರ ಆವೃತ್ತಿಯಲ್ಲಿ ನಾಕೌಟ್ ಹಂತ ಪ್ರವೇಶಿಸಿದ್ದೇ ಅವರ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. 2015-16ರಲ್ಲಿ ಮುಂಬೈ ವಿರುದ್ಧ ಜಯ ಕೂಡ ಸಾಧಿಸಿ, ಕ್ರಿಕೆಟ್ ಪ್ರೇಮಿಗಳು ಕಣ್ಣರಳಿಸಿ ನೋಡುವಂತೆ ಮಾಡಿತ್ತು. 2025ರಲ್ಲಿ, ತಂಡವು 86 ವರ್ಷಗಳ ನಂತರ ದೆಹಲಿ ತಂಡದ ವಿರುದ್ಧ ಐತಿಹಾಸಿಕ ಜಯ ದಾಖಲಿಸಿ, ಕ್ರಿಕೆಟ್ ಜಗತ್ತಿನ ದಿಗ್ಗಜರನ್ನು ದಿಗ್ಮೂಢರನ್ನಾಗಿಸಿತ್ತು.

ಇದೀಗ ಆರು ದಶಕಗಳ ಸುದೀರ್ಘ ಕಾಯುವಿಕೆಯ ನಂತರ, ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡ ಮೊದಲ ಬಾರಿಗೆ ರಣಜಿ ಫೈನಲ್ ಪ್ರವೇಶಿಸಿದೆ. ಹೊಸ ಹುಮ್ಮಸ್ಸಿನಿಂದ ಪುಟಿದೆದ್ದಿದೆ. ಫೆ. 24ರಂದು ನಡೆಯುವ ಫೈನಲ್ ಸೆಣಸಾಟಕ್ಕೆ ಸಜ್ಜಾಗಿದೆ. ತಂಡ ಗೆಲ್ಲಬಹುದು ಅಥವಾ ಸೋಲಬಹುದು. ಅದು ಅಷ್ಟು ಮುಖ್ಯವಲ್ಲ. ನಾವು ಗಮನಿಸಬೇಕಾದ್ದು- ಭರವಸೆಯನ್ನೇ ಕಳೆದುಕೊಂಡಿದ್ದ ಕಣಿವೆಯ ಜನರ ಬದುಕನ್ನು. ಅವರ ಸಾಮಾಜಿಕ-ರಾಜಕೀಯ ಸ್ಥಿತಿಯನ್ನು. ಆ ಸ್ಥಿತಿಯಿಂದ ಎದ್ದುಬಂದ ಆಟಗಾರರು ತೋರಿದ ಛಲ, ಹಲ್ಲುಕಚ್ಚಿ ಆಡುವ ಪರಿ, ಸಾಧಿಸಿದ ಸಾಧನೆಯನ್ನು.

ರಣಜಿ ಟ್ರೋಫಿ ಎನ್ನುವುದು ಭಾರತದ ಅತ್ಯಂತ ಕಠಿಣ ದೇಶೀಯ ಕ್ರಿಕೆಟ್ ಟೂರ್ನಮೆಂಟ್. ಮುಂಬೈ, ದೆಹಲಿ, ಕರ್ನಾಟಕದಂತಹ ಶಕ್ತಿಶಾಲಿ ತಂಡಗಳನ್ನು ಮಣಿಸಿ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಹಂತಕ್ಕೆ ಕಾಶ್ಮೀರಿ ಕಣಿವೆ ತಂಡ ತಲುಪಿರುವುದು ಸಾಮಾನ್ಯ ಸಂಗತಿಯಲ್ಲ. ಅದನ್ನು ಬರಿ ಕ್ರೀಡಾಸಾಮರ್ಥ್ಯವೆಂದು ವ್ಯಾಖ್ಯಾನಿಸಲಾಗುವುದಿಲ್ಲ. ಮಾನಸಿಕ ದೃಢತೆಗೆ ಸೀಮಿತಗೊಳಿಸುವಂಥದ್ದೂ ಅಲ್ಲ.

ಯಾಕೆಂದರೆ, ಬಾಲ್ಯದಿಂದಲೇ ಬೂಟಿನ ಸದ್ದು, ಗನ್-ಬುಲೆಟ್‌ಗಳ ಭಯದಲ್ಲಿ ಬೆಳೆದ ಮಕ್ಕಳು, ಕಣ್ಣೆದುರೇ ಸಾವು-ನೋವುಗಳನ್ನು ಕಂಡುಂಡವರು. ತಮ್ಮ ನೆಲದಲ್ಲಿ ತಾವೇ ಅನ್ಯರಂತೆ ಬದುಕಿದವರು. ಬ್ಯಾಟ್-ಬಾಲ್‌ಗಳೆಂಬ ಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತರಾದವರು. ಮೈ ಚಳಿ ಬಿಟ್ಟು ಮೈದಾನಕ್ಕಿಳಿದು ಆಟವಾಡುವ ವಾತಾವರಣವನ್ನೇ ಕಾಣದವರು. ಅಂತಹ ಪರಿಸ್ಥಿತಿಯಲ್ಲಿ ತಂಡ ಕಟ್ಟಿ ಆಡುವುದು, ಹೊರರಾಜ್ಯಗಳಿಗೆ ತೆರಳುವಾಗ ಹೆಚ್ಚುವರಿ ಪರಿಶೀಲನೆಗೊಳಗಾಗುವುದು, ‘ಕಾಶ್ಮೀರಿ ತಂಡ’ ಎಂಬ ಅನುಮಾನ-ಅವಮಾನಕ್ಕೀಡಾಗುವುದು ಎಂತಹ ಮಾನಸಿಕ ಒತ್ತಡ ತರುತ್ತದೆ ಎಂಬುದರ ಅರಿವು ನಮಗಿಲ್ಲ. ಆ ಪ್ರತಿಕೂಲ ಪರಿಸ್ಥಿತಿಯನ್ನು ಮೀರಿ, ಆಕಿಬ್ ನಬಿ, ಪರಸ್ ಡೋಗ್ರಾ, ಖಮ್ರನ್ ಇಕ್ಬಾಲ್, ಅಬ್ದುಲ್ ಸಮದ್‌ರಂತಹ ಆಟಗಾರರು ಬೆವರು ಬಸಿದು ಆಡಿರುವ ರೀತಿ, ಗೆದ್ದಿರುವ ಬಗೆ ಬೆರಗುಟ್ಟಿಸುವಂಥದ್ದು. ಭರವಸೆಯ ಬದುಕಿನತ್ತ ಜಿಗಿಯುವಂಥದ್ದು. ಕ್ರೀಡೆಯ ಮೂಲಕ ಪ್ರತಿರೋಧ ತೋರುವ ಬಗೆಯದು.

ಇದನ್ನು ಓದಿದ್ದೀರಾ?: ಆರ್‌ಎಸ್‌ಎಸ್‌ ಬಲ, ಮಾಧ್ಯಮಗಳ ಬೆಂಬಲದಿಂದ ಬಿಜೆಪಿ ಬದುಕಿದೆಯೇ?

ಕಾಶ್ಮೀರವೆಂದರೆ ಭಯೋತ್ಪಾದಕರ ಬೀಡಲ್ಲ, ಕೇವಲ ಸಂಘರ್ಷವಲ್ಲ. ಅಲ್ಲಿಯೂ ಆಟಗಾರರಿದ್ದಾರೆ, ಕನಸು ಕಾಣುವ ಕಣ್ಣುಗಳಿವೆ, ನೆಮ್ಮದಿಯ ಬದುಕಿಗಾಗಿ ಕಾತರಿಸುವ ಜೀವಗಳಿವೆ, ದೇಶದ ಮುಖ್ಯವಾಹಿನಿಗೆ ಸೇರಲು ಬಯಸುವವರಿದ್ದಾರೆ ಎಂಬುದನ್ನು ನಾವು ಮನಗಾಣಬೇಕಾಗಿದೆ. ಹಾಗೆಯೇ ರಣಜಿ ಫೈನಲ್ ತಲುಪಿರುವ ಜಮ್ಮು-ಕಾಶ್ಮೀರ ತಂಡದ ಆಟಗಾರರು, ಭಾರತ-ಪಾಕಿಸ್ತಾನದ ಆಟಗಾರರ ಅಹಂಕಾರವನ್ನು ಪಕ್ಕಕ್ಕೆ ಸರಿಸಿ, ಸಹನೆ-ಸಾಂಗತ್ಯಗಳನ್ನು ಗಟ್ಟಿಗೊಳಿಸಿಕೊಳ್ಳುವತ್ತ ಗಮನ ಹರಿಸಬೇಕಾಗಿದೆ. ಆಟದ ಮೂಲಕವೇ ತಮ್ಮೆಲ್ಲ ನೋವು ಸಂಕಟಗಳನ್ನು ಮೀರುವ ಶಕ್ತಿಯನ್ನು ಸಂಚಯಿಸಿಕೊಳ್ಳಬೇಕಾಗಿದೆ.

ಕಣಿವೆ ಜನರ ಜೀವನಪ್ರೀತಿ ಮತ್ತು ಕ್ರೀಡೆಯ ಹುಚ್ಚು ಅವರನ್ನು ಮತ್ತೊಂದು ಸ್ತರಕ್ಕೆ ಕರೆದೊಯ್ದರೆ, ಆ ಯಾತನಾ ಬದುಕಿನಿಂದ ಬಿಡುಗಡೆ ಹೊಂದುವಂತಾದರೆ, ಹೊಸ ಬದುಕಿಗೆ ತೆರೆದುಕೊಳ್ಳುವಂತಾದರೆ, ಕಾಶ್ಮೀರಕ್ಕೆ ದೀರ್ಘಕಾಲಿಕ ಶಾಂತಿಯ ದಾರಿ ತೆರೆದುಕೊಳ್ಳಬಹುದು. ಅದು ಹಿಂಸೆ ಹಾಗೂ ನಿರಾಶೆಯಿಂದ ಹೊರಬರುವ ಸಾಧನವೂ ಆಗಬಹುದು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....