ಸಿದ್ದರಾಮಯ್ಯನವರ ಸರ್ಕಾರ ಕಾವೇರಿ ಆರತಿಯಂತಹ ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ತಡೆಯೊಡ್ಡಿ, ನಾಡಿನ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕಾಗಿದೆ. ಮೂಲಭೂತವಾದಿಗಳ ವಿರುದ್ಧ ದಸರಾದಲ್ಲಿ ತೋರಿದ ಧೈರ್ಯವನ್ನು ಕಾವೇರಿ ಆರತಿಯಲ್ಲೂ ತೋರಬೇಕಾಗಿದೆ.
ಸೆಪ್ಟೆಂಬರ್ 26ರಂದು ಮೈಸೂರಿನ ಕೆಆರ್‌ಎಸ್ ಅಣೆಕಟ್ಟೆಯ ಬಳಿ ಕಾವೇರಿ ಆರತಿಯನ್ನು ಮಾಡಿಯೇ ತೀರುತ್ತೇವೆ ಎಂದು ಹಠಕ್ಕೆ ಬಿದ್ದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಮಂಡ್ಯ ಶಾಸಕ ರವಿಕುಮಾರ್- ಮೂವರೂ ಕೃಷಿ ಕುಟುಂಬದಿಂದ ಬಂದವರು. ಕೃಷಿಕರ ಕಷ್ಟಗಳನ್ನು ಕಣ್ಣಾರೆ ಕಂಡವರು, ಉಂಡವರು. ಕೃಷಿಕರಿಂದಲೇ ಆಯ್ಕೆಯಾಗಿ ಅಧಿಕಾರದ ಸ್ಥಾನಕ್ಕೇರಿದವರು. ಈಗ ಆ ಕೃಷಿಕರ ಕರುಳಿಗೆ ಕಾರ ಅರೆಯಲು ಸಿದ್ಧವಾಗಿದ್ದಾರೆ. ಅವರ ಆಶಯಕ್ಕೆ ವಿರುದ್ಧ ಸೆಟೆದು ನಿಂತಿದ್ದಾರೆ. ಅವರ ಮನವಿಯನ್ನು ತಿರಸ್ಕರಿಸಿ ಕಾವೇರಿಗೆ ಮೊಂಡಾರತಿ ಮಾಡಲು ಮುಂದಾಗಿದ್ದಾರೆ.
ಅಣೆಕಟ್ಟು ಸುರಕ್ಷತಾ ಕಾಯ್ದೆಯ 2021ರ ಪ್ರಕಾರ ಅಣೆಕಟ್ಟೆಯ 20 ಕಿಮೀ ಸುತ್ತ ಯಾವುದೇ ಅಭಿವೃದ್ಧಿ ಚಟುವಟಿಕೆ ಹಮ್ಮಿಕೊಳ್ಳುವಂತಿಲ್ಲ ಎನ್ನುವ ಕಾನೂನಿದೆ. ಇದನ್ನು ಮುಂದಿಟ್ಟು ಎಂ. ಶಿವಪ್ರಕಾಶ್ ಎಂಬುವವರು ಸರ್ಕಾರದ ಕಾಮಗಾರಿ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್ ಹೂಡಿದ್ದಾರೆ. ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದರೆ, ಕಾನೂನನ್ನು ಗೌರವಿಸಬೇಕಾದ ಸರಕಾರವೇ ಅದನ್ನು ಉಲ್ಲಂಘಿಸುತ್ತಿದೆ.
ಇದನ್ನು ಓದಿದ್ದೀರಾ?: ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ
ಆದಕಾರಣ, ಅಣೆಕಟ್ಟೆಯ ಭದ್ರತೆಯ ಕುರಿತು ಕಿಂಚಿತ್ತೂ ಕಾಳಜಿಯಿಲ್ಲದ ರಾಜ್ಯ ಸರ್ಕಾರದ ನಡೆಯ ವಿರುದ್ದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರತಿಭಟನಾ ಸಭೆ ನಡೆಸಲು ನಿರ್ಧರಿಸಿದೆ. ‘ಅವರು ಕಾವೇರಿಗೆ ಆರತಿ ಮಾಡಲಿ, ನಾವು ಅವರಿಗೆ ಮಂಗಳಾರತಿ ಮಾಡೋಣ’ ಎಂದು ಸಜ್ಜಾಗಿದೆ. ಹಾಗೆಯೇ, ಸರಕಾರದ ಆಹ್ವಾನದ ಮೇರೆಗೆ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ನಾಡಿನ ಮಠಾಧೀಶರಿಗೆ, ಗಣ್ಯರಿಗೆ ಸರಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದೆಂದು ಮನವಿ ಮಾಡಿಕೊಂಡಿದೆ.
ಕಾವೇರಿ ಆರತಿ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್- ಈ ಎರಡೂ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಆಯ್ಕೆ ಮಾಡಿಕೊಂಡಿರುವ ಸ್ಥಳ, ಕೆಆರ್‌ಎಸ್ ಜಲಾಶಯದ ಕೆಳಭಾಗದ ಪ್ರದೇಶ. 1931ರಲ್ಲಿ ನಿರ್ಮಾಣಗೊಂಡ ಅಣೆಕಟ್ಟೆಗೆ ಈಗ 94 ವರ್ಷವಾಗಿದ್ದು, ಶತಮಾನದ ಹೊಸ್ತಿಲಲ್ಲಿದೆ. ರೈತರ ಜೀವನಾಡಿಯಾದ ಕನ್ನಂಬಾಡಿ ಕಟ್ಟೆಯ ಅಸ್ತಿತ್ವಕ್ಕೆ ಧಕ್ಕೆ ತರುವ, ಅನಾಹುತ ಸೃಷ್ಟಿಸುವ ಇಂಥ ಅವೈಜ್ಞಾನಿಕ ಯೋಜನೆಗಳಿಗೆ ಅವಕಾಶ ಕೊಡುವುದಿಲ್ಲ ಎಂದು ರೈತ ಹಿತರಕ್ಷಣಾ ಸಮಿತಿ ಬಿಗಿಪಟ್ಟು ಹಿಡಿದಿದೆ.
ಆದರೆ, ಕಾವೇರಿ ಆರತಿ ಮಾಡಿಯೇ ತೀರುತ್ತೇನೆಂಬ ಹಠಕ್ಕೆ ಬಿದ್ದಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಕಾವೇರಿ ಆರತಿ ಎನ್ನುವುದು ಧಾರ್ಮಿಕ ಕಾರ್ಯಕ್ರಮ; ಅಮ್ಯೂಸ್‌ಮೆಂಟ್ ಪಾರ್ಕ್ ಎನ್ನುವುದು ಅಭಿವೃದ್ಧಿ. ಅದನ್ನು ಬೇಡ ಎನ್ನುವವರಿಗೆ ಬುದ್ಧಿ ಇಲ್ಲ, ತಿಳಿವಳಿಕೆ ಇಲ್ಲ ಎನ್ನುವ ಉದ್ದಟತನದ ಮಾತನಾಡಿದ್ದಾರೆ.
ಇನ್ನು ಸರ್ಕಾರದ ಭಾಗವಾಗಿರುವ ಉಪಮುಖ್ಯಮಂತ್ರಿಯೇ ಮುಂದೆ ನಿಂತು ಹೀಗೆ ಹೇಳುತ್ತಿರುವುದರಿಂದ, ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯು ಆರತಿ ನಡೆಯುವ ಸ್ಥಳದ ಸಮತಟ್ಟು ಮಾಡಿ ಮುಗಿಸಿದೆ. ನದಿ ತೀರದ ಹಳ್ಳ–ಕೊಳ್ಳಗಳಿಗೆ ಮಣ್ಣು ತುಂಬಿಸಿದೆ. ಆರತಿ ಎತ್ತಲು 45/45 ಮೀಟರ್ ಅಳತೆಯ ಸೋಪಾನ ಮತ್ತು ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಲು 75/75 ಮೀಟರ್ ಅಳತೆಯ ಅಂಕಣ ಸಿದ್ಧ ಮಾಡಿದೆ.
ಸಿದ್ಧತೆ ಕಂಡು ಕ್ರೋಧಗೊಂಡಿರುವ ಮಂಡ್ಯದ ರೈತನಾಯಕರಾದ ಬೋರಯ್ಯ ಮತ್ತು ಸುನಂದಾ ಜಯರಾಂ ಅವರು, ಉತ್ತರ ಪ್ರದೇಶದ ‘ಗಂಗಾ ಆರತಿ’ಯಿಂದ ಪ್ರೇರಿತವಾದ ‘ಕಾವೇರಿ ಆರತಿ’ಯು ಮೌಢ್ಯ ಬಿತ್ತುವ ಕಾರ್ಯಕ್ರಮ. ಕರ್ಪೂರದ ಆರತಿಗೇಕೆ ಕೋಟ್ಯಂತರ ರೂಪಾಯಿ? ಡ್ಯಾಂ ಬಳಿ 10 ಸಾವಿರ ಜನ ಒಂದೆಡೆ ಸೇರಿದರೆ ಜಲ ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತದೆ. ಕಾವೇರಿ ನದಿ ಕಲುಷಿತಗೊಂಡರೆ ಕುಡಿಯುವ ನೀರು ತಿನ್ನುವ ಅನ್ನ ವಿಷವಾಗುತ್ತದೆ ಎಂದು ವಿವೇಕದ ಮಾತುಗಳನ್ನಾಡಿ ಎಚ್ಚರಿಸಿದ್ದಾರೆ. ವೈಜ್ಞಾನಿಕ ನಡೆಯನ್ನು ನೆನಪಿಸಿದ್ದಾರೆ.
ಅಷ್ಟಕ್ಕೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ಯೋಜನೆ ಜಾರಿಗೊಳಿಸುವುದರಿಂದ ಜಿಲ್ಲೆಯ ರೈತರಿಗೆ ಆಗುವ ಪ್ರಯೋಜನವೇನು? ಇದೇ ಹಣದಲ್ಲಿ ಉಪನಾಲೆಗಳನ್ನು ದುರಸ್ತಿಗೊಳಿಸಿ ಕೆರೆ–ಕಟ್ಟೆಗಳ ಹೂಳು ತೆಗೆಸಿ ನೀರು ಹರಿಸಿದರೆ ರೈತರ ಬದುಕು ಬಂಗಾರವಾಗುವುದಿಲ್ಲವೇ ಎಂಬ ಮಾತುಗಳೂ ಕೇಳಿಬರುತ್ತಿವೆ.
ಒಟ್ಟಿನಲ್ಲಿ ಮೈಸೂರು ಮತ್ತು ಮಂಡ್ಯದ ಕೃಷಿ ಚಟುವಟಿಕೆಗಳಿಗೆಂದೇ ನಿರ್ಮಾಣವಾಗಿ, ಈಗ ಬೆಂಗಳೂರು-ಮೈಸೂರಿಗೂ ಕುಡಿಯುವ ನೀರು ಪೂರೈಸುತ್ತಿರುವ ಕೆಆರ್‌ಎಸ್ ಜಲಾಶಯದ ಸುತ್ತ ನಡೆಯುತ್ತಿರುವ ಕಾಮಗಾರಿಗಳ ವಿರುದ್ಧ, ಕಾವೇರಿ ಆರತಿ ವಿರುದ್ಧ ಈಗ ಪ್ರತಿಭಟನೆ ಕಾವೇರತೊಡಗಿದೆ.
2016–17ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಲಾಶಯದ ಸಮೀಪ 300 ಎಕರೆ ಪ್ರದೇಶದಲ್ಲಿ 1,500 ಕೋಟಿ ವೆಚ್ಚದಲ್ಲಿ ಡಿಸ್ನಿಲ್ಯಾಂಡ್ ಹಾಗೂ 125 ಅಡಿಯ ಕಾವೇರಿ ಪ್ರತಿಮೆಯನ್ನು ನಿರ್ಮಿಸಲು ನೀಲನಕ್ಷೆ ತಯಾರಿಸಿತ್ತು. ಡ್ಯಾಂ ಸಮೀಪದ ನಿಷೇಧಿತ ಪ್ರದೇಶದಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಪರಿಸರ, ರೈತ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ರಸ್ತೆ ಚಳವಳಿ ಮತ್ತು ಕಾನೂನು ಹೋರಾಟದ ಮೂಲಕ ಯೋಜನೆಯನ್ನು ತಟಸ್ಥಗೊಳಿಸುವಲ್ಲಿ ಯಶಸ್ವಿಯಾಗಿದ್ದವು.
ಈಗ ಅದು ಬೇರೊಂದು ಬಗೆಯಲ್ಲಿ, ಕಾವೇರಿ ಆರತಿ ನೆಪದಲ್ಲಿ ಧಾರ್ಮಿಕ ಸೆರಗೊದ್ದು ಸಿದ್ಧವಾಗಿದೆ. ಅಭಿವೃದ್ಧಿಯ ನೆಪದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳ ಓಡಾಟ ಜೋರಾಗಿದೆ. ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ, ಜನರ ಬಾಯ್ಮುಚ್ಚಿಸಲು ದೇವರು-ಧರ್ಮವನ್ನು ಎಳೆದು ತಂದಿದೆ. ಪುರೋಹಿತಶಾಹಿಗೆ ಮಣೆಹಾಕಿ, ಕಂದಾಚಾರದ ಆರತಿಗೆ ಮುಂದಾಗಿದೆ.
ಇದನ್ನು ಓದಿದ್ದೀರಾ?: ನ್ಯಾಯಾಲಯದ ವಿವೇಕದ ಮುಂದೆ ಬಯಲಾದ ಬಿಜೆಪಿ ನಾಯಕರ ಅವಿವೇಕ
ಐತಿಹಾಸಿಕ ಅಣೆಕಟ್ಟೆಯ ಸುರಕ್ಷತೆಗೆ, ಜೀವವೈವಿಧ್ಯ ಪರಿಸರಕ್ಕೆ ಕಾವೇರಿ ಆರತಿಯಿಂದ ಧಕ್ಕೆಯಾಗುತ್ತದೆ. ಜನಜಂಗುಳಿ, ಕಾಮಗಾರಿಯಿಂದ ಕಾವೇರಿಯ ಒಡಲು ಕಲುಷಿತಗೊಳ್ಳುತ್ತದೆ. ಕಾವೇರಿಯನ್ನು ನಂಬಿ ಬದುಕುತ್ತಿರುವ ರೈತರನ್ನು ಘಾಸಿಗೊಳಿಸುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಕಾವೇರಿ ಆರತಿಯಂತಹ ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ತಡೆಯೊಡ್ಡಿ, ನಾಡಿನ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕಾಗಿದೆ. ಮೂಲಭೂತವಾದಿಗಳ ವಿರುದ್ಧ ದಸರಾದಲ್ಲಿ ತೋರಿದ ಧೈರ್ಯವನ್ನು ಕಾವೇರಿ ಆರತಿಯಲ್ಲೂ ತೋರಬೇಕಾಗಿದೆ. ಇಲ್ಲದಿದ್ದರೆ ಕಾವೇರಿಯ ರಭಸಕ್ಕೆ, ರೈತರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ಕೊಚ್ಚಿ ಹೋಗಲಿದೆ.





