ಈ ದಿನ ಸಂಪಾದಕೀಯ | ಬೆತ್ತಲಾಗಿದ್ದ ಬಿಜೆಪಿಯನ್ನು ಕಾಪಾಡಿದರೇ ಕಾಂಗ್ರೆಸ್ ಕಾರ್ಯಕರ್ತರು?

Date:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೇ ಬಿಜೆಪಿ ಬೆವರಿಳಿಸುತ್ತಿದ್ದಾಗ, ನಮ್ಮ ಹಾರಾಟ ಅಗತ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ಅರಿಯಬೇಕಾಗಿತ್ತು. ಅಷ್ಟಾಗಿದ್ದರೆ, ಬಿಜೆಪಿ ಮತ್ತು ಪ್ರಧಾನಿ ಮೋದಿಯವರು, ಅವರಾಗಿಯೇ ಜಾಗತಿಕ ಮಟ್ಟದಲ್ಲಿ ಬೆತ್ತಲಾಗುತ್ತಿದ್ದರು. 

ದೆಹಲಿಯ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ನಡೆದ ಈ ಪ್ರತಿಭಟನೆ ಈಗ ಪರ-ವಿರೋಧದ ಚರ್ಚೆ ಹುಟ್ಟು ಹಾಕಿದೆ.

ಮೊದಲಿಗೆ, ಇಂಡಿಯಾ ಒಕ್ಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಯುವ ಕಾಂಗ್ರೆಸ್ ನಾಯಕರ ಅರೆನಗ್ನ ಪ್ರತಿಭಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಾದ ನಂತರ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್ ಆಳ್ವ ಅವರು, ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಘನತೆ, ಶಿಸ್ತು ಮತ್ತು ಜವಾಬ್ದಾರಿ ಇರಬೇಕು ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪಾಠ ಮಾಡಿದರು.

ಸಾಮಾನ್ಯವಾಗಿ ಎಲ್ಲದಕ್ಕೂ ಮೌನವನ್ನೇ ಉತ್ತರವನ್ನಾಗಿಸಿಕೊಂಡಿರುವ; ಅದನ್ನೇ ಎಚ್ಚರದ ಆಡಳಿತ ಎಂದು ಭಾವಿಸಿರುವ ಪ್ರಧಾನಿ ಮೋದಿಯವರು, ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಕುರಿತು ಮೌನ ವಹಿಸಲಿಲ್ಲ. ಬದಲಿಗೆ, ಅತ್ಯುತ್ತಮ ಅವಕಾಶ ಎಂದು ಭಾವಿಸಿದರು, ಬಳಸಿಕೊಂಡರು. ಕಾಂಗ್ರೆಸ್ ಮೇಲೆ ಮುಗಿಬಿದ್ದರು. ‘ಕಾಂಗ್ರೆಸ್ ನಾಯಕರು ನನ್ನನ್ನು ದ್ವೇಷಿಸುತ್ತಾರೆ. ನನಗೆ ಸಮಾಧಿ ಕಟ್ಟಲು ಬಯಸುತ್ತಾರೆ. ನನ್ನ ತಾಯಿಯನ್ನೂ ಅವಮಾನಿಸಲು ಹಿಂದೆ ಮುಂದೆ ನೋಡುವುದಿಲ್ಲ. ಆದರೆ, ಅದು ಎಐ ಜಾಗತಿಕ ಶೃಂಗಸಭೆಯಾಗಿತ್ತೇ ವಿನಃ ಬಿಜೆಪಿ ಕಾರ್ಯಕ್ರಮವಾಗಿರಲಿಲ್ಲ. ನೀವು ಈಗಾಗಲೇ ಬೆತ್ತಲಾಗಿದ್ದೀರಿ. ಆದರೂ ಕೂಡ ಬಟ್ಟೆ ಕಳಚುವ ಅಗತ್ಯ ಏನಿತ್ತು? ಕಾಂಗ್ರೆಸ್ಸಿನ ಈ ಭ್ರಷ್ಟ ನೀತಿಯನ್ನು ಇಡೀ ದೇಶವೇ ಖಂಡಿಸುತ್ತಿದೆ’ ಎಂದ ಪ್ರಧಾನಿ ಮೋದಿಯವರು, ತಮ್ಮೊಂದಿಗೆ ದೇಶವನ್ನೂ ಎಳೆದುಕೊಂಡರು. ದೇಶದ ಜನ ಕಾಂಗ್ರೆಸ್ಸನ್ನು ದೂರುವಂತೆಯೂ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಬಾಳಸಂಗಾತಿಯ ಆಯ್ಕೆ ಮೂಲಭೂತ ಹಕ್ಕು- ಪಕ್ಷ ಪರಿವಾರಗಳ ಪಿತ್ರಾರ್ಜಿತ ಆಸ್ತಿಯಲ್ಲ!

ಪ್ರಧಾನಿಯವರ ಪದಪುಂಜಗಳಿಗಾಗಿ ಹಸಿದು ಕುಳಿತಿದ್ದ ಗೋದಿ ಮೀಡಿಯಾ, ಆ ತಕ್ಷಣವೇ ಅದನ್ನು ದೇಶದ ಜ್ವಲಂತ ಸಮಸ್ಯೆ ಎಂಬಂತೆ ಮುಖ್ಯ ಸುದ್ದಿಯನ್ನಾಗಿಸಿತು. ಈಗ ಬಿಜೆಪಿ ಕಾರ್ಯಕರ್ತರು ಅದನ್ನು ದೇಶದಾದ್ಯಂತ ಪ್ರತಿಭಟನೆಯ ಮೂಲಕ ವಿಸ್ತರಿಸುತ್ತಿದ್ದಾರೆ. ಈ ಪ್ರಕರಣವನ್ನು ಖಂಡಿಸುತ್ತಲೇ, ಕಾಂಗ್ರೆಸ್ಸಿಗರದು ದೇಶ ವಿರೋಧಿ ಕೃತ್ಯ ಎಂದು ನರೇಟಿವ್ ಕಟ್ಟುತ್ತಿದ್ದಾರೆ. ಬಿಜೆಪಿಯ ದುರಾಡಳಿತ, ಸುಳ್ಳುಗಳು, ನಿರುದ್ಯೋಗ ಸಮಸ್ಯೆಗಳನ್ನು ಹಿಂದಕ್ಕೆ ಸರಿಸುತ್ತಿದ್ದಾರೆ.

ಅಸಲಿಗೆ, ಕಳೆದ ಇಪ್ಪತ್ತು ದಿನಗಳಿಂದ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರು, ಮಾಜಿ ಜನರಲ್ ನರವಣೆಯವರ ಪುಸ್ತಕ ಆಧಾರದ ಮೇಲೆ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ; ಅನೈತಿಕ-ಅಕ್ರಮ ವ್ಯವಹಾರಗಳ ಎಪ್‌ಸ್ಟೀನ್ ಫೈಲ್ಸ್ ವಿಚಾರದಲ್ಲಿ; ಅಮೆರಿಕಾ-ಭಾರತ ವಾಣಿಜ್ಯ ಒಪ್ಪಂದದ ಮಾತುಕತೆಯಲ್ಲಿ- ಸಂಸತ್ತಿನ ಒಳಗೆ ಹಾಗೂ ಹೊರಗೆ ದಾಖಲೆಗಳ ಸಮೇತ, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.  

ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಎದುರಿಸಲಾಗದೆ, ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪ್ರಧಾನಿ ಮೋದಿಯವರು ಸಂಸತ್ತಿಗೆ ಬರದೆ ತಪ್ಪಿಸಿಕೊಂಡು ತಿರುಗುತ್ತಿದ್ದರು. ಪ್ರಧಾನಿ ಮೋದಿಯವರನ್ನು ರಕ್ಷಿಸಲು ಲೋಕಸಭೆ ಸ್ಪೀಕರ್ ಹಾಗೂ ಬಿಜೆಪಿಯ ಅಗ್ರಗಣ್ಯ ನಾಯಕರು ಹರಸಾಹಸಕ್ಕಿಳಿದಿದ್ದರು. ಕೊನೆಗೆ ರಾಹುಲ್ ಗಾಂಧಿಯವರನ್ನು ಸಂಸತ್ತಿನಿಂದ ಅನರ್ಹಗೊಳಿಸಬೇಕೆಂದು ಬಿಜೆಪಿಯ ಕೆಲವರು ತಂದ ನಿಲುವಳಿಯನ್ನು ಬಿಜೆಪಿ ನಾಯಕರೇ ಅರ್ಧದಲ್ಲಿ ತಡೆದಿದ್ದರು.

ಆನಂತರ ದೆಹಲಿಯಲ್ಲಿ ಜರುಗಿದ ಎಐ ಇಂಪ್ಯಾಕ್ಟ್ ಶೃಂಗಸಭೆಗೆ ತಂತ್ರಜ್ಞಾನ ಜಗತ್ತಿನ ಜಾಗತಿಕ ದಿಗ್ಗಜರೆಲ್ಲ ಆಗಮಿಸಿದ್ದರು. ಅವರ ಮುಂದೆಯೇ, ಮೇಲ್ಜಾತಿ ಮತ್ತು ಮೇಲ್ವರ್ಗದವರಿಂದಲೇ ತುಂಬಿಹೋಗಿರುವ ಗಲ್ಗೋಟಿಯಾ ವಿಶ್ವವಿದ್ಯಾಲಯದ ರೋಬೋಡಾಗ್ ಹುಳುಕು, ಕಳ್ಳತನ, ಅವ್ಯವಸ್ಥೆ ಬಯಲಾಗಿತ್ತು. ವಿಶ್ವವಿದ್ಯಾಲಯವನ್ನು ಪೊರೆಯುತ್ತಿರುವ ಮೋದಿಯವರ ಕೇಂದ್ರ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ವಿರೋಧಪಕ್ಷದ ನಾಯಕರ ಟೀಕೆ, ಪ್ರಶ್ನೆ, ಸವಾಲುಗಳಿಗೆ ಉತ್ತರಿಸಲಾಗದೆ ಬಿಜೆಪಿ ಹೈರಾಣಾಗಿತ್ತು.

ಇಂತಹ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸ್ವಲ್ಪ ಸಂಯಮದಿಂದ ವರ್ತಿಸಬೇಕಾಗಿತ್ತು. ತಮ್ಮ ನಾಯಕ ರಾಹುಲ್ ಗಾಂಧಿಯವರೇ ಬಿಜೆಪಿ ಬೆವರಿಳಿಸುತ್ತಿದ್ದಾಗ, ನಮ್ಮ ಹಾರಾಟ ಅಗತ್ಯವಿಲ್ಲ ಎಂಬುದನ್ನು ಅರಿಯಬೇಕಾಗಿತ್ತು. ಅಷ್ಟಾಗಿದ್ದರೆ, ಬಿಜೆಪಿ ಮತ್ತು ಪ್ರಧಾನಿ ಮೋದಿಯವರು, ಅವರಾಗಿಯೇ ಜಾಗತಿಕ ಮಟ್ಟದಲ್ಲಿ ಬೆತ್ತಲಾಗುತ್ತಿದ್ದರು. ಆದರೆ ಹತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ಅರೆಬೆತ್ತಲೆ ಘೋಷಣೆ- ಬಿಜೆಪಿಗರ ಹಳವಂಡಗಳನ್ನು, ಅವಾಂತರಗಳನ್ನು, ಹಸಿ ಸುಳ್ಳುಗಳನ್ನು ಮುಚ್ಚಿಕೊಳ್ಳಲು ಬೇಕಾದ ಅಪೂರ್ವ ಅವಕಾಶವಾಗಿ, ಕಾಂಗ್ರೆಸ್ಸನ್ನು ದೇಶದ್ರೋಹಿ ಸ್ಥಾನದಲ್ಲಿರಿಸಿ ದೂರಲು ಅಸ್ತ್ರವಾಗಿ ಒದಗಿ ಬಂದುಬಿಟ್ಟಿತು.

ಇದನ್ನು ಓದಿದ್ದೀರಾ?: ನ್ಯಾಯಾಧೀಶರು ಲಿಂಗ ಸಂವೇದನೆ ಕಲಿಯಬೇಕಾದ ತುರ್ತು!

ಒಂದು ದೃಷ್ಟಿಯಿಂದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಆ ಸಂದರ್ಭದಲ್ಲಿ ಬೇಕಿರಲಿಲ್ಲ ಹಾಗೂ ವಿವೇಚನಾರಹಿತವಾಗಿತ್ತು ಎಂದುಕೊಂಡರೂ, ಪ್ರಜಾಪ್ರಭುತ್ವದ ಸೊಗಸೇ ಪ್ರತಿಭಟನೆ. ಪ್ರತಿಭಟಿಸುವ ಹಕ್ಕನ್ನು ಸಂವಿಧಾನವೇ ಕಲ್ಪಿಸಿಕೊಟ್ಟಿದೆ. ಇತ್ತೀಚೆಗೆ ನಡೆದ ದಾವೋಸ್‌ನ ಎಕಾನಮಿಕ್ಸ್ ಸಮಿತ್‌ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಬಂದಿಳಿದಾಗ, ಕಪ್ಪು ಬಾವುಟ ಬೀಸಿ ಪ್ರತಿಭಟಿಸಿದ್ದನ್ನೂ ಇಲ್ಲಿ ನೆನಪು ಮಾಡಿಕೊಳ್ಳಬಹುದು. ಇದಲ್ಲದೆ ದೇಶದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ‘ಅರೆನಗ್ನ’ ಅಥವಾ ‘ಮೇಲ್ವಸ್ತ್ರ ರಹಿತ’ ಪ್ರತಿಭಟನೆ ಎಂಬುದು ಕೇವಲ ಆವೇಶವಲ್ಲ; ಅದು ಅಧಿಕಾರಸ್ಥರ ವಿರುದ್ಧ ಸಾಮಾನ್ಯರು ಬಳಸುವ ಅತ್ಯಂತ ಪ್ರಬಲವಾದ ಅಸ್ತ್ರ ಎಂಬುದು ಅರಿವಿಗೆ ಬರದೇ ಇರುವುದಿಲ್ಲ.

2004ರಲ್ಲಿ ಅಸ್ಸಾಂ ರೈಫಲ್ಸ್ ಪಡೆಯ ದೌರ್ಜನ್ಯದ ವಿರುದ್ಧ ಮಣಿಪುರದ ವಯಸ್ಸಾದ ತಾಯಂದಿರು ವಿವಸ್ತ್ರವಾಗಿ ಬಂದು ‘ನಮ್ಮನ್ನು ಅತ್ಯಾಚಾರ ಮಾಡಿ, ಕೊಲ್ಲಿ’ ಎಂದು ಕೂಗಿದ್ದು ಜಗತ್ತಿನಾದ್ಯಂತ ಮಿಲಿಟರಿ ದೌರ್ಜನ್ಯದ ವಿರುದ್ಧ ದೊಡ್ಡ ಚರ್ಚೆ ಹುಟ್ಟುಹಾಕಿತ್ತು. ಅದು ಅಶ್ಲೀಲತೆಯಲ್ಲ, ಅದು ಆಳುವವರ ಕ್ರೌರ್ಯಕ್ಕೆ ಹಿಡಿದ ಕನ್ನಡಿ. ಭಾರತದ ಇತಿಹಾಸದಲ್ಲೇ ಅತ್ಯಂತ ಕರುಣಾಜನಕ ಮತ್ತು ಶಕ್ತಿಶಾಲಿ ಪ್ರತಿಭಟನೆ.

ಅಷ್ಟೇ ಏಕೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರು ಬ್ರಿಟಿಷರ ವಿರುದ್ಧದ ಪ್ರತಿಭಟನೆಯಾಗಿ ಮತ್ತು ಈ ದೇಶದ ಬಡತನದ ಸಂಕೇತವಾಗಿ ಮೇಲ್ವಸ್ತ್ರ ತೊಡುವುದನ್ನೇ ಬಿಟ್ಟಿದ್ದರು. ಅವರನ್ನು ಬೆತ್ತಲೆ ಫಕೀರ ಎಂದು ಕರೆಯುತ್ತಿದ್ದರು. ಅವರು ತಂದುಕೊಟ್ಟ ಸ್ವಾತಂತ್ರ್ಯದ ಫಲವಾಗಿಯೇ ಇಂದು ಮೋದಿಯವರು ಪ್ರಧಾನಿ ಕುರ್ಚಿಯಲ್ಲಿ ಕೂತಿರುವುದು. ಪ್ರಧಾನಿಯಾಗಿ ದೇಶವಾಸಿಗಳ ಸಮಸ್ಯೆಗಳಿಗೆ ಕಿವುಡಾದಾಗ ಜನ, ತಮ್ಮ ದೇಹವನ್ನೇ ಪ್ರತಿಭಟನೆಯ ಸಾಧನವನ್ನಾಗಿ ಬಳಸುತ್ತಾರೆ. ಅದನ್ನು ಯಾರೂ ದೇಶದ್ರೋಹ ಎಂದು ಕರೆಯುವುದಿಲ್ಲ, ಕರೆಯಲಾಗುವುದಿಲ್ಲ.

ಅಸಲಿಗೆ ಸಾರ್ವಜನಿಕ ಸಭ್ಯತೆಯ ಎಲ್ಲೆ ಮೀರಿದವರು, ಸುಳ್ಳುಗಳಿಂದ ಜಾಗತಿಕ ಮಟ್ಟದಲ್ಲಿ ಬೆತ್ತಲಾಗಿರುವವರು ಮತ್ತು ಬೌದ್ಧಿಕವಾಗಿ ದಿವಾಳಿ ಎದ್ದವರು ಪ್ರಧಾನಿ ಮೋದಿ ಮತ್ತು ಬಿಜೆಪಿಯೇ ಹೊರತು, ಪ್ರತಿಭಟನಾಕಾರರಲ್ಲ.  

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....