ಇಲ್ಲಿಯವರೆಗೆ ನಡೆದ ಬೆಳಗಾವಿ ಅಧಿವೇಶನಗಳನ್ನು ಗಮನಿಸಿದರೆ, ಹಣ ನೀರಿನಂತೆ ಹರಿದಿದೆ; ಅಭಿವೃದ್ಧಿ ಅಂತರ್ಧಾನವಾಗಿದೆ. ಉ.ಕ. ಭಾಗದ ಜನರ ಸಹನೆಯ ಕಟ್ಟೆಯೊಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸುವ, ಚಳಿಗಾಲದ ಅಧಿವೇಶನ ಹಮ್ಮಿಕೊಳ್ಳುವ ಉದ್ದೇಶವೇ ಹಿಂದುಳಿದ ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಗಮನ ಹರಿಸಲು. ಉತ್ತರ ಕರ್ನಾಟಕದ ಬಗೆಗಿನ ಕಡೆಗಣನೆ ಅಥವಾ ನಿರ್ಲಕ್ಷ್ಯ ಎಂಬ ಆರೋಪದಿಂದ ಮುಕ್ತವಾಗಲು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕವೆಂಬ ಭೇದ ತೊಡೆದುಹಾಕಿ, ಅಖಂಡ ಕರ್ನಾಟಕವೆಂಬ ಭಾವ ಮೂಡಿಸಲು.
ಪ್ರತಿವರ್ಷದಂತೆ ಈ ವರ್ಷವೂ ವಿರೋಧ ಪಕ್ಷಗಳ ನಾಯಕರು ಅತಿ ಉತ್ಸಾಹದಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು, ಅಕಾಲಿಕ ಮಳೆಯಿಂದಾದ ಅನಾಹುತ, ಕೈ ಸೇರದ ಸರ್ಕಾರದ ಪರಿಹಾರ, ರೈತರ ಸಂಕಷ್ಟ ಮತ್ತು ಬೆಲೆ ಏರಿಕೆ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಕಟ್ಟಿ ಹಾಕಲಿದ್ದೇವೆ ಎಂದು ಸುದ್ದಿಮಾಧ್ಯಮಗಳ ಸುದ್ದಿಗಾರರ ಮುಂದೆ ನಿಂತು ವೀರಾವೇಷದ ಹೇಳಿಕೆಗಳನ್ನು ಕೊಟ್ಟಿದ್ದಾರೆ.
ಇದನ್ನು ಓದಿದ್ದೀರಾ?: ‘ಭಾರತದ ಹೃದಯ’ವೇ ಸೆಕ್ಯುಲರಿಸಂ, ಸೋಷಿಯಲಿಸಂ; ಬುದ್ಧನೇ ಇವುಗಳ ಪ್ರವರ್ತಕ
ಅದಕ್ಕೆ ಪ್ರತಿಕ್ರಿಯೆಯಾಗಿ ಆಳುವ ಪಕ್ಷದ ನಾಯಕರು ತಮ್ಮೊಳಗಿನ ಅಧಿಕಾರ ಹಂಚಿಕೆಯ ಭಿನ್ನಾಭಿಪ್ರಾಯವನ್ನು ಬದಿಗೆ ಸರಿಸಿ ಸಿದ್ಧವಾಗಿದ್ದಾರೆ. ವಿರೋಧ ಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಸನ್ನದ್ಧರಾಗಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಕುರಿತಾದ ಸಮಸ್ಯೆಗಳಿಗೆ ಒತ್ತುಕೊಡಲು ಆದ್ಯತೆ ನೀಡಲಾಗುವುದು, ಅಧಿವೇಶನದಲ್ಲಿ ಅದಕ್ಕಾಗಿಯೇ ಸಮಯ ಮೀಸಲಿಡಲಾಗುವುದು ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಅಧಿಕಾರದಲ್ಲಿರುವ ಪಕ್ಷ ಅಥವಾ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ವಿರೋಧ ಪಕ್ಷದ್ದೇ ಪ್ರಮುಖ ಪಾತ್ರ. ಪ್ರಜಾಪ್ರಭುತ್ವದ ಯಶಸ್ಸು ವಿರೋಧ ಪಕ್ಷಗಳ ರಚನಾತ್ಮಕ ಪಾತ್ರವನ್ನು ಅವಲಂಬಿಸಿದೆ. ಕಾವಲುಗಾರನಾಗಿ ಕಾರ್ಯನಿರ್ವಹಿಸುವುದು, ಸರ್ಕಾರದ ಕೆಲಸ-ಕಾರ್ಯಗಳನ್ನು ವಿಮರ್ಶಿಸುವುದು ಮತ್ತು ಉದ್ಭವಿಸಬಹುದಾದ ಸಮಸ್ಯೆಗಳನ್ನು ಎತ್ತಿ ತೋರಿಸುವುದು ವಿರೋಧ ಪಕ್ಷದ ಪ್ರಮುಖ ಕರ್ತವ್ಯವಾಗಿದೆ.
ಅಂತಹ ಕರ್ತವ್ಯ ನಿರ್ವಹಿಸಲು ವಿರೋಧ ಪಕ್ಷಗಳ ನಾಯಕರು ಸಿದ್ಧರಾಗಿದ್ದಾರೆ; ಅವರಿಗೆ ಉತ್ತರಿಸಲು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಸನ್ನದ್ಧರಾಗಿದ್ದಾರೆ. ಅಂದರೆ, ಆರೋಗ್ಯಕರ ಚರ್ಚೆ ಮತ್ತು ವಾಗ್ವಾದಗಳಿಗೆ ಚಳಿಗಾಲದ ಅಧಿವೇಶನ ವೇದಿಕೆಯಾಗಲಿದೆ ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕೆ ಪೂರಕವಾಗಿ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ವಿಚಾರಗಳ ಕುರಿತು ಮಂಗಳವಾರದಿಂದಲೇ ಚರ್ಚೆ ನಡೆಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಭಾಪತಿ ಬಸವರಾಜ ಹೊರಟ್ಟಿಯವರು, ‘ಬುಧವಾರದಂದು ಇಡೀ ದಿನದ ಕಲಾಪವನ್ನು ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು’ ಎಂದಿದ್ದಾರೆ.
ಅಂದರೆ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಾಯಕರ ಕಾಳಜಿ-ಕಳಕಳಿಯ ಮಾತುಗಳನ್ನು ಕೇಳಿದರೆ- ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿವೇಶನ ಅತ್ಯುತ್ತಮ ವೇದಿಕೆಯಾಗಲಿದೆ ಎಂಬ ಆಶಾಭಾವನೆ ಮೂಡುತ್ತದೆ.
ಅದಕ್ಕೆ ತಕ್ಕಂತೆ, ಸಭಾಧ್ಯಕ್ಷರು, ಸಭಾಪತಿಗಳು, ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಉಪಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಅಧಿಕಾರಿಗಳು, ಪೊಲೀಸರು, ಮಾರ್ಷಲ್‌ಗಳು, ಪತ್ರಕರ್ತರು- ಎಲ್ಲರೂ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಸರ್ವಸನ್ನದ್ಧರಾಗಿ ಹೋಗುತ್ತಾರೆ.
ಅಧಿಕಾರಸ್ಥರ, ಅಧಿಕಾರಿಗಳ ತಯ್ಯಾರಿಯನ್ನು ಕಂಡ ಉತ್ತರ ಕರ್ನಾಟಕ ಭಾಗದ ರೈತರು, ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಒಳಮೀಸಲಾತಿ ಹೋರಾಟಗಾರರು, ಜಾತಿ ಸಂಘಟನೆಗಳ ನಾಯಕರು- ಎಲ್ಲರೂ ಬೆಳಗಾವಿಯ ಕೊರೆಯುವ ಚಳಿಯಲ್ಲಿ ಸುವರ್ಣಸೌಧದೆದುರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಕೂರುತ್ತಾರೆ. ದಿಕ್ಕೆಟ್ಟ ಬದುಕನ್ನು ಬಿಡಿಸಿಡಲು, ಜನಪ್ರತಿನಿಧಿಗಳ ಗಮನಕ್ಕೆ ತರಲು, ಪರಿಹರಿಸಿಕೊಳ್ಳಲು ಪರದಾಡುತ್ತಾರೆ.
ಪ್ರತಿ ವರ್ಷ ಚಳಿಗಾಲದ ಅಧಿವೇಶನ ಎಂಬುದು, ಆಡಳಿತ-ವಿರೋಧ ಪಕ್ಷಗಳ ಪ್ರತಿಷ್ಠೆಯ ಅಖಾಡವಾಗಿ ಮಾರ್ಪಾಡಾಗುತ್ತದೆ. ಕೊನೆಗೆ ಬಹುಪಾಲು ಕಲಾಪಗಳು ವ್ಯರ್ಥ ಕಲಹ-ವಾಗ್ವಾದಗಳಲ್ಲಿ ಕೊನೆಗೊಂಡಿರುತ್ತದೆ. ಹೊಂದಾಣಿಕೆ ರಾಜಕಾರಣ ಮೇಲುಗೈ ಪಡೆದಿರುತ್ತದೆ. ಅದು ಆರಿಸಿ ಕಳಿಸಿದ ಜನತೆಯನ್ನು ಅವಮಾನಿಸುತ್ತದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಕಳಂಕ ತರುತ್ತದೆ.
ಹತ್ತು ದಿನಗಳ ಅಧಿವೇಶನಕ್ಕಾಗಿ ಜಿಲ್ಲಾಡಳಿತ ಬರೋಬ್ಬರಿ 21 ಕೋಟಿ ಖರ್ಚು ಮಾಡುತ್ತದೆ. 2006ರಿಂದ ಇಲ್ಲಿಯವರೆಗೆ, ಅಧಿವೇಶನಕ್ಕಾಗಿಯೇ ಸುಮಾರು 170 ಕೋಟಿ ಖರ್ಚು ಮಾಡಲಾಗಿದೆ. ಇನ್ನು ಡಿ.ಎಂ. ನಂಜುಂಡಪ್ಪ ವರದಿಯ ಅನ್ವಯ 2008ರಿಂದ ಇಲ್ಲಿಯವರೆಗೆ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ನೆಪದಲ್ಲಿ 31,198 ಕೋಟಿ ಖರ್ಚು ಮಾಡಲಾಗಿದೆ. ಈ ಭಾಗದ ಅಭಿವೃದ್ಧಿಗಾಗಿಯೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿದೆ, ಅದಕ್ಕೆ ಸರ್ಕಾರ ಪ್ರತಿವರ್ಷ 5 ಸಾವಿರ ಕೋಟಿ ಕೊಡುತ್ತದೆ. ಆದರೆ, ಸರ್ಕಾರಗಳು ಬದಲಾದರೂ ಉತ್ತರ ಕರ್ನಾಟಕದ ಜನರ ಬದುಕು ಮಾತ್ರ ಬದಲಾಗಿಲ್ಲ. ಇವತ್ತಿಗೂ ಇಲ್ಲಿನ ಜನ ಗುಳೆ ಹೋಗುವುದು ನಿಂತಿಲ್ಲ.
ಇದನ್ನು ಓದಿದ್ದೀರಾ?: ಅಭಿವೃದ್ಧಿಯಾಯಿತೇ ಕಲ್ಯಾಣ ಕರ್ನಾಟಕ? ತಜ್ಞರ ಅಭಿಪ್ರಾಯಗಳೇನು?
ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸುವ ಪ್ರಮುಖ ಉದ್ದೇಶವೇ ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸುವುದು ಹಾಗೂ ಆಡಳಿತ ವಿಕೇಂದ್ರೀಕರಣಗೊಳಿಸುವುದು. ಆದರೆ, ಇಲ್ಲಿಯವರೆಗಿನ ಅಧಿವೇಶನಗಳು ಮತ್ತು ಅವುಗಳಿಂದಾದ ಪ್ರಯೋಜನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹಣ ನೀರಿನಂತೆ ಹರಿದಿದೆ; ಅಭಿವೃದ್ಧಿ ಅಂತರ್ಧಾನವಾಗಿದೆ. ಜನಪ್ರತಿನಿಧಿಗಳ ಭಾಷಣಕ್ಕಷ್ಟೇ ಅಧಿವೇಶನ ಬಳಕೆಯಾಗಿದೆ. ಅದು ಸುದ್ದಿ ಮಾಧ್ಯಮಗಳಿಗೆ ಸಮೃದ್ಧ ಸರಕು ಒದಗಿಸಿದೆ.
ವಿಪರ್ಯಾಸವೆಂದರೆ, ಈ ಭಾಗದಿಂದ ಗೆದ್ದುಹೋದ ಶಾಸಕರ, ಸಂಸದರ ಬದುಕು ಹಸನಾಗಿದೆ. ಅವರ ಮಕ್ಕಳ, ಮೊಮ್ಮಕ್ಕಳ ಭವಿಷ್ಯ ಭದ್ರವಾಗಿದೆ. ಆದರೆ, ಸಾಮಾನ್ಯ ಜನರು ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ನಿರಂತರವಾಗಿ ಅನ್ಯಾಯಕ್ಕೊಳಗಾಗುತ್ತಲೇ ಇದ್ದಾರೆ. ಭ್ರಮನಿರಸಕ್ಕೊಳಗಾಗಿ ದಿನದಿಂದ ದಿನಕ್ಕೆ ಸಿನಿಕರಾಗುತ್ತಿದ್ದಾರೆ. ಸಹನೆಯ ಕಟ್ಟೆಯೊಡೆದು ಸ್ಫೋಟಗೊಳ್ಳುವ ಮುನ್ನ, ಪ್ರತ್ಯೇಕ ರಾಜ್ಯದ ಕೂಗು ಜೋರಾಗುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.





