ಅರಸು ಹಾಕಿಕೊಟ್ಟ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿನ ಭದ್ರ ಬುನಾದಿಯ ಮೇಲೆ ಸಿದ್ದರಾಮಯ್ಯನವರು ಭವ್ಯ ಸೌಧವನ್ನು ನಿರ್ಮಿಸುವ ಅಪೂರ್ವ ಅವಕಾಶವಿತ್ತು. ಆದರೆ, ಹಿಂದುಳಿದ ನಾಯಕ ಎನ್ನುವುದು ಘೋಷಣೆಗಳಿಗಷ್ಟೇ ಸೀಮಿತವಾಯಿತು. ಹಾಗಾಗಿ, ದೇವರಾಜ ಅರಸರ ದಿನಗಳ ದಾಖಲೆ ದಾಟಿದ್ದಾರೆ, ದಾಟಬೇಕಾದ್ದು ಇನ್ನೂ ಇದೆ.
ದೇವರಾಜ ಅರಸು ಅವರು 1972ರಿಂದ 1977ರವರೆಗೆ ಹಾಗೂ 1978ರಿಂದ 1980ರವರೆಗೆ, ಅಂದರೆ 7 ವರ್ಷ 239 ದಿನಗಳ ಕಾಲ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಕಂಡ ಮುಖ್ಯಮಂತ್ರಿಗಳಲ್ಲಿ, ಅರಸು ಅವರು ಅತ್ಯಂತ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದು, ದಾಖಲೆಯ ಪುಟ ಸೇರಿತ್ತು. ಆ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ದಾಟಿದ್ದಾರೆ. ಮೊದಲ ಅವಧಿ, 2013ರಿಂದ 2018ರವರೆಗೆ ಹಾಗೂ ಎರಡನೆ ಅವಧಿ, 2023ರಿಂದ ಇವತ್ತಿನವರೆಗೆ, 7 ವರ್ಷ 239 ದಿನಗಳ ಕಾಲ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುವ ಮೂಲಕ ಅರಸರ ದಿನಗಳ ಆ ದಾಖಲೆಯನ್ನು ಮುರಿದಿದ್ದಾರೆ.
ಇಲ್ಲಿ ಗಮನಿಸಬೇಕಾದ ಬಹಳ ಮುಖ್ಯವಾದ ಅಂಶವೆಂದರೆ, ದೇವರಾಜ ಅರಸು ಮತ್ತು ಸಿದ್ದರಾಮಯ್ಯನವರು- ಇಬ್ಬರೂ ಹಿಂದುಳಿದ ವರ್ಗದಿಂದ ಬಂದವರು. ಇಬ್ಬರೂ ಮೈಸೂರು ಜಿಲ್ಲೆಯವರು. ಇಬ್ಬರೂ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಗಳಾದವರು. ಇಬ್ಬರೂ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ನಿಲುವಿಗೆ ಬದ್ಧರಾದವರು. ದೇವರಾಜ ಅರಸು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದದ್ದು ಜನವರಿ 7, 1980ರಂದು. ಕಾಕತಾಳೀಯವೋ ಏನೋ, ಸಿದ್ದರಾಮಯ್ಯನವರು ದೇವರಾಜ ಅರಸರ ದಾಖಲೆ ಸರಿಗಟ್ಟುತ್ತಿರುವುದು ಕೂಡ ಇದೇ ಜನವರಿ 7.
ಇದನ್ನು ಓದಿದ್ದೀರಾ?: ವೆನೆಜುವೆಲಾ ಮೇಲೆ ‘ಅಮೆರಿಕ’ ಹಿಡಿತ: ಮೂರನೇ ವಿಶ್ವಯುದ್ಧದ ಕಾರ್ಮೋಡ
ಸಿದ್ದರಾಮಯ್ಯನವರು ಜನಿಸಿದ್ದು 1947ರಲ್ಲಿ. ಅದೇ 1947ರಲ್ಲಿ, ಮೈಸೂರಿನ ಮಹಾರಾಜರ ಆಳ್ವಿಕೆ ಕೊನೆಗಾಣಿಸಲು, ಜನತಂತ್ರ ಸರ್ಕಾರ ರಚನೆಯಾಗಲು ದೇವರಾಜ ಅರಸು ಮೈಸೂರು ಚಲೋ ಚಳವಳಿಯಲ್ಲಿ ಭಾಗವಹಿಸಿದ್ದರು. ದೇವರಾಜ ಅರಸು ಅವರು ರಾಜಕಾರಣದಿಂದ ನಿರ್ಗಮಿಸಿದ್ದು 1982ರಲ್ಲಿ. ಅದೇ 1982ರಲ್ಲಿ ಸಿದ್ದರಾಮಯ್ಯನವರು ರಾಜಕಾರಣಕ್ಕೆ ಅಡಿಯಿಟ್ಟಿದ್ದರು. ಮೊದಲಿಗೆ ತಾಲೂಕು ಬೋರ್ಡ್ ಸದಸ್ಯರಾದರು. ನಂತರ 1983ರಲ್ಲಿ, ಭಾರತೀಯ ಲೋಕದಳ ಪಕ್ಷದಿಂದ, ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ಶಾಸಕರಾದರು. ಆಗ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗಿತ್ತು. ಅದು ದೇವರಾಜ ಅರಸು ಅವರ ಕೊಡುಗೆಯಾಗಿತ್ತು.
ಅರಸು ಅವರ ಕೊಡುಗೆ ಅಷ್ಟಕ್ಕೇ ನಿಲ್ಲುವುದಿಲ್ಲ. ಅವರ ಸಾಮಾಜಿಕ ನ್ಯಾಯ ಪರಿಪಾಲನೆಗೆ, ಹಿಂದುಳಿದವರನ್ನು ಮೇಲೆತ್ತುವ ಮಹದಾಸೆಗೆ ಮಿತಿಯೇ ಇಲ್ಲ. 1972ರಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎಲ್.ಜಿ. ಹಾವನೂರು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ಆಯೋಗ ರಚಿಸಿ, ಅವಧಿಯೊಳಗೆ ವರದಿ ಸ್ವೀಕರಿಸಿ, ಜಾರಿಗೆ ತಂದು ಹಿಂದುಳಿದವರಿಗೆ ಮೀಸಲಾತಿ ನೀಡಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ವರ್ಗವನ್ನು ಮುನ್ನಲೆಗೆ ತಂದಿದ್ದರು. ಹಿಂದುಳಿದ ವರ್ಗಗಳ ಚಾಂಪಿಯನ್ ಎನಿಸಿಕೊಂಡಿದ್ದರು. ಮೈಸೂರಿನ ಅರಸು ಮನೆತನಕ್ಕೆ ಸೇರಿದವರಾಗಿದ್ದರೂ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ, ಕನ್ನಡ ಆಡಳಿತ ಭಾಷೆಯನ್ನಾಗಿ ಮಾಡಿದ್ದರು. ಮಲ ಹೊರುವ ಪದ್ಧತಿ ನಿಷೇಧ, ಋಣ ಪರಿಹಾರ ಕಾಯ್ದೆ, ಜೀತ ವಿಮುಕ್ತಿ ಶಾಸನ ಜಾರಿ ಮಾಡಿದ್ದರು. 332 ಎಕರೆ ಭೂಮಿ ಒದಗಿಸಿ, ಎಲೆಕ್ಟ್ರಾನಿಕ್ ಸಿಟಿಗೆ ಅಡಿಗಲ್ಲು ಹಾಕಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು, ಭೂರಹಿತರ ಬದುಕಿಗೆ ಭದ್ರ ಬುನಾದಿ ಹಾಕಿದ್ದರು.
ಅರಸು ಅವರು ಅಂದು ತೋರಿದ ಅಂಚಿನ ಜನರ ಬಗೆಗಿನ ಅಂತಃಕರಣದ ಫಲವಾಗಿಯೇ ಇಂದು ಹಲವಾರು ಜನ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಶಾಸಕರಾಗಿ ವಿಧಾನಸೌಧದ ಮೆಟ್ಟಿಲು ಹತ್ತಿದ್ದಾರೆ. ಸಚಿವರಾಗಿ ಕಾಯ್ದೆ-ಕಾನೂನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅದರಲ್ಲೂ ಹಿಂದುಳಿದ ವರ್ಗದಿಂದ ಬಂದ ಎಸ್.ಬಂಗಾರಪ್ಪ, ಎಂ. ವೀರಪ್ಪ ಮೊಯ್ಲಿ, ಧರಂ ಸಿಂಗ್ ಮತ್ತು ಸಿದ್ದರಾಮಯ್ಯನವರು- ರಾಜ್ಯದ ಅತ್ಯುನ್ನತ ಸ್ಥಾನವಾದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಇದು ಅಂತಿಂಥ ಕೊಡುಗೆಯಲ್ಲ. ಇಂತಹ ದೂರದೃಷ್ಟಿಯುಳ್ಳ ಧೀಮಂತ ವ್ಯಕ್ತಿ ದೇವರಾಜ ಅರಸು ಅವರಂತಹ ನಾಯಕರೊಂದಿಗೆ ಸಿದ್ದರಾಮಯ್ಯನವರನ್ನು ಹೋಲಿಕೆ ಮಾಡುವುದು, ಅಷ್ಟು ಸರಿಯಲ್ಲ.
ಅರಸು ಅವರ ಕಾಳಜಿಗಳು ಮತ್ತು ಕಾಲವೇ ಬೇರೆ; ಸಿದ್ದರಾಮಯ್ಯನವರ ಕಾಳಜಿಗಳು ಮತ್ತು ಕಾಲವೇ ಬೇರೆ. ಆಯಾಯ ಕಾಲ ಕೇಳುವ ಕಾರ್ಯಕ್ರಮಗಳನ್ನು ಇಬ್ಬರೂ ನೀಡಿದ್ದಾರೆ, ಜನಮನ ಗೆದ್ದಿದ್ದಾರೆ, ಸಾಧಕರೆನಿಸಿಕೊಂಡಿದ್ದಾರೆ.
ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದಾಗ- 2013ರಿಂದ 2018ರವರೆಗಿನ ಅವಧಿಯಲ್ಲಿ- ಡಿನೋಟಿಫಿಕೇಷನ್, ಲೋಕಾಯುಕ್ತ ರದ್ದು ಮಾಡಿದ್ದನ್ನು ಬಿಟ್ಟರೆ, ಜನ ಮೆಚ್ಚುವ ಆಡಳಿತವನ್ನೇ ಕೊಟ್ಟಿದ್ದರು. ಅಧಿಕಾರಕ್ಕೆ ಬರುತ್ತಿದ್ದಂತೆ ಅರಸು ಅವರಂತೆಯೇ 2014ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಿಸಿದರು. ಪರಿಶಿಷ್ಟ ಜಾತಿ-ಪಂಗಡಗಳ ಅಭಿವೃದ್ಧಿಗಾಗಿ ಎಸ್ಸಿಎಸ್ಪಿ/ಟಿಎಸ್ಪಿ ಕಾಯಿದೆ ಜಾರಿಗೆ ತಂದರು. ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸಿದರು. ಬಡ್ತಿ ಮೀಸಲಾತಿಗಳನ್ನು ತಂದರು. ಬಡವರಿಗೆ ಅಕ್ಕಿ ಕೊಟ್ಟು, ಅನ್ನರಾಮಯ್ಯ ಎನಿಸಿಕೊಂಡರು. ನುಡಿದಂತೆ ನಡೆದ ಸರ್ಕಾರ ಎನ್ನುವುದನ್ನು ಕೆಲಸಗಳ ಮೂಲಕ ಮಾಡಿ ತೋರಿಸಿದರು.
ಹಾಗಾಗಿ ಎರಡನೇ ಬಾರಿಗೆ, 2023ರಲ್ಲಿ ಮುಖ್ಯಮಂತ್ರಿಯಾದಾಗ- ನಾಡಿನ ಜನರ ನಿರೀಕ್ಷೆ ಬೆಟ್ಟದಷ್ಟಿತ್ತು. ಆ ನಿರೀಕ್ಷೆಗೆ ತಕ್ಕಂತೆ ಅಧಿಕಾರಕ್ಕೇರುತ್ತಿದ್ದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು. ಆದರೆ, ಅವುಗಳಿಂದ ಆದ ಆರ್ಥಿಕ ಚಲನಶೀಲತೆಯನ್ನು, ಸಾಮಾಜಿಕ ಬದಲಾವಣೆಯನ್ನು ಮತ್ತು ಮಹಿಳಾ ಸಬಲೀಕರಣವನ್ನು- ನಮ್ಮ ಸಾಧನೆ ಎಂದು ಹೇಳಿಕೊಳ್ಳುವಲ್ಲಿ ಎಡವಿದರು. ಇಂದು ಬಿಜೆಪಿಯ ಮೋದಿಯವರೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಪ್ರೇರಣೆ ಪಡೆದು, ಇತರ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿದರೂ, ಇಲ್ಲಿ ಪಕ್ಷದ ಶಾಸಕರೇ ವ್ಯಂಗ್ಯವಾಡತೊಡಗಿದರು. ಇನ್ನು ಸಚಿವರಲ್ಲಿ ದಕ್ಷತೆ, ಭ್ರಷ್ಟಾಚಾರ ಮುಕ್ತ ಆಡಳಿತ ಎನ್ನುವುದು, ಹಿಂದಿನಂತಿರದಿದ್ದರೂ ತೊಂದರೆಯಿಲ್ಲ; ಬಿಜೆಪಿ ಸರ್ಕಾರಕ್ಕಿಂತ ಕಡಿಮೆಯಾಗಲಿಲ್ಲ.
ಜೊತೆಗೆ ಮುಡಾ ಹಗರಣ, ವಾಲ್ಮೀಕಿ ನಿಗಮದ ಅಕ್ರಮ, ಸಚಿವರ ರಾಜೀನಾಮೆ, ಕ್ರಿಕೆಟ್ ಕಾಲ್ತುಳಿತ- ಈ ವೈಫಲ್ಯಗಳ ಜೊತೆಗೆ, ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು, ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳುವುದರಲ್ಲಿಯೇ ಕಾಲ ಕಳೆದರು. ಅವರಷ್ಟೇ ಅಲ್ಲ, ಅವರ ಸಚಿವ ಸಂಪುಟ ಸದಸ್ಯರು ಕೂಡ ಅದಕ್ಕೆ ಸ್ವರ ಸೇರಿಸಿ, ಸಮಯ ವ್ಯರ್ಥ ಮಾಡಿದರು. ಸಚಿವ ರಾಜಣ್ಣರನ್ನು ಬಲಿ ಕೊಟ್ಟರು. ಜನರ ಆಶೋತ್ತರಗಳನ್ನು ಮರೆತರು.
ಎಸ್ಸಿಪಿ, ಟಿಎಸ್ಪಿ ಕಾಯ್ದೆಯ ಮೂಲಕ ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಬೇರೆಡೆಗೆ ವರ್ಗಾಯಿಸಿ, ಈ ಸರ್ಕಾರವನ್ನು ಅಸ್ತಿತ್ವಕ್ಕೆ ತಂದ ಸಮುದಾಯಗಳಿಗೆ ಸ್ಪಷ್ಟಪಡಿಸದೆ ಸುಮ್ಮನಾದರು. ಹಾಗೆಯೇ ಒಳಮೀಸಲಾತಿ ಹಂಚಿಕೆ ವಿಚಾರದಲ್ಲಿ, ದೃಢ ನಿರ್ಧಾರ ತಳೆಯದ ಸಿದ್ದರಾಮಯ್ಯನವರು, ಅಂಚಿನ ಜನರ ಬೆನ್ನಿಗೆ ನಿಲ್ಲದೆ ವಂಚಿಸಿದರು. 2014ರಲ್ಲಿ ಸಮೀಕ್ಷೆ ಮಾಡಿಸಿದ್ದರೂ, ಬಲಾಢ್ಯರಿಗೆ ಮಣಿದು ಅದನ್ನು ಈ ಅವಧಿಯಲ್ಲಿ ಅಲಕ್ಷಿಸಿದರು. ದಮನಿತ ಜಾತಿಗಳ ಅವಕಾಶಗಳನ್ನು ಕಳೆದರು.
ಇದನ್ನು ಓದಿದ್ದೀರಾ?: ಜೈಲಿಗೆ ಹೋಗಿ ಬಂದವರಿಗೆ ಸಂಭ್ರಮದ ಸ್ವಾಗತ; ಕರ್ನಾಟಕ ಹೀಗೇಕಾಯಿತು?
ಬಿಜೆಪಿ ಹಾಗೂ ಆರ್‍ಎಸ್ಎಸ್‌ನ ಕೋಮುವಾದಿ ಅಜೆಂಡಾವನ್ನು ಎದುರಿಸಲೆಂದೇ ಈ ರಾಜ್ಯದ ಅಲ್ಪಸಂಖ್ಯಾತರು, ದಲಿತರು, ಕೋಮುವಾದ ವಿರೋಧಿ ಮನೋಭಾವದ ಜನರು ಕಾಂಗ್ರೆಸ್ ಪಕ್ಷದ ಬೆನ್ನಿಗಿದ್ದು ಬೆಂಬಲಿಸಿದ್ದರು. ಆದರೆ, ಆ ವಿಚಾರದಲ್ಲಿ ಅಗತ್ಯವಿರುವ ತಾತ್ವಿಕ, ರಾಜಕೀಯ ಕಾರ್ಯಕ್ರಮ ರೂಪಿಸುವಲ್ಲಿ ಸಿದ್ದರಾಮಯ್ಯನವರು ಸೋತರು.
ಒಟ್ಟಿನಲ್ಲಿ ದೇವರಾಜ ಅರಸು ಹಾಕಿಕೊಟ್ಟ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿನ ಭದ್ರ ಬುನಾದಿಯ ಮೇಲೆ ಸಿದ್ದರಾಮಯ್ಯನವರು ಭವ್ಯ ಸೌಧವನ್ನೇ ನಿರ್ಮಿಸುವ ಅಪೂರ್ವ ಅವಕಾಶವಿತ್ತು. ಆದರೆ, ಕಳೆದ ಎರಡೂವರೆ ವರ್ಷಗಳಲ್ಲಿ ಅದು ಕಾಣದಾಯಿತು. ಹಿಂದುಳಿದ ನಾಯಕ ಎನ್ನುವುದು ಸಮಾರಂಭ-ಸಮ್ಮೇಳನಗಳ ಘೋಷಣೆಗಳಿಗಷ್ಟೇ ಸೀಮಿತವಾಯಿತು. ಹಾಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ದೇವರಾಜ ಅರಸರ ದಿನಗಳ ದಾಖಲೆ ದಾಟಿದ್ದಾರೆ, ದಾಟಬೇಕಾದ್ದು ಇನ್ನೂ ಇದೆ.





