ಬಿಜೆಪಿಯ ಇತ್ತೀಚಿನ ರಾಜಕೀಯ ನಡೆಗಳನ್ನು ಗಮನಿಸಿದರೆ, ಅವರೇ ಹುಟ್ಟುಹಾಕಿದ, ಮೋದಿ ಹೈ ತೋ ಮುಮ್ಕಿನ್ ಹೈ- ಮೋದಿ ಇದ್ದರೆ ಎಲ್ಲವೂ ಸಾಧ್ಯ- ಎನ್ನುವ ಘೋಷಣೆ, ಅವರ ಕೊಳಕು ಕೃತ್ಯಗಳಿಗೆ ಕನ್ನಡಿ ಹಿಡಿಯುತ್ತದೆ. ಅದಕ್ಕಾಗಿಯೇ ಮೋದಿ ಬೇಕಾಗಿದೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ–ಅಜಿತ್ ಬಣ)ದ ನಾಯಕ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟ ನಾಲ್ಕೇ ದಿನಕ್ಕೆ, ಅವರ ಪತ್ನಿ ಸುನೇತ್ರಾ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನಾಲ್ಕು ದಿನಗಳ ಅಂತರದಲ್ಲಿ ಒಬ್ಬರು ಸಮಾಧಿಗೆ ಸರಿದರೆ, ಮತ್ತೊಬ್ಬರು ಅಡುಗೆ ಮನೆಯಿಂದ ರಾಜಕೀಯ ಅಂಗಳಕ್ಕೆ ಜಿಗಿದಿದ್ದಾರೆ. ಒಂದು ಸಂಕಟ, ಮತ್ತೊಂದು ಸಂಭ್ರಮ. ಆದರೆ ಯಾವುದು ಸಂಕಟ, ಯಾರಿಗೆ ಸಂಭ್ರಮ ಎನ್ನುವುದು ಈಗ ಎಲ್ಲರ ಪ್ರಶ್ನೆಯಾಗಿದೆ. ರಾಜಕೀಯ ನಾಯಕರು, ಕಾರ್ಯಕರ್ತರಲ್ಲಿ ಕುತೂಹಲ ಕೆರಳಿಸಿದೆ. ಈ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿರುವ ಸುದ್ದಿ ಮಾಧ್ಯಮಗಳು ಮತ್ತು ಪತ್ರಕರ್ತರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಸಾಮಾನ್ಯ ಜನರನ್ನು ಕತ್ತಲಲ್ಲಿಟ್ಟಿದ್ದಾರೆ.
ಅಜಿತ್ ಪವಾರ್ ಅವರ ಅಕಾಲಿಕ ಸಾವು, ಅವರ ಕುಟುಂಬದವರಿಗೆ ಸಹಿಸಲಾಗದ ಸಂಕಟದ ಸಮಾಚಾರ. ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್, ಉಪಮುಖ್ಯಮಂತ್ರಿಯಾಗಿದ್ದು ಸಂಭ್ರಮದ ಸಮಾಚಾರ. ಇದೇ ವಿಷಯ ಶರದ್ ಪವಾರ್ ಕುಟುಂಬಕ್ಕೆ ಮತ್ತೊಂದು ಬಗೆಯಲ್ಲಿ ಬಾಧಿಸುತ್ತದೆ. ಅಜಿತ್ ಪವಾರ್ ಸಾವಿನಿಂದ ಎರಡೂ ಬಣಗಳು ಒಂದಾಗಬಹುದೆಂಬ ಸಂಭ್ರಮ, ನಾಲ್ಕೇ ದಿನಗಳ ಅಂತರದಲ್ಲಿ ಸಮಸ್ಯೆ ಸೃಷ್ಟಿಸಿದೆ. ಅಥವಾ ಶರದ್ ಪವಾರ್ ಅವರ ರಾಜಕೀಯ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರು, ಎಲ್ಲವೂ ಅವರು ಅಂದುಕೊಂಡಂತೆಯೇ ಜರುಗುತ್ತಿದೆ- ಬ್ಯುಸಿನೆಸ್ ಹ್ಯಾಸ್ ಯೂಸುವಲ್ ಎನ್ನುತ್ತಾರೆ. ಸುದ್ದಿ ಮಾಧ್ಯಮಗಳಿಗೆ ಬೇಕಾದ ಹೇಳಿಕೆಗಳನ್ನು ಬಿಡುಗಡೆಗೊಳಿಸುತ್ತಿರುವುದು, ಅವರ ಒಳಹುಳುಕುಗಳನ್ನು ಮುಚ್ಚುತ್ತಿದೆ. ಅದು ಜನರಲ್ಲಿ ಗೊಂದಲ ಮೂಡಿಸುತ್ತಿದೆ.
ಇದನ್ನು ಓದಿದ್ದೀರಾ?: ₹100 ತೆರಿಗೆಯಲ್ಲಿ ₹5 ಕೂಡ ವಾಪಸು ಸಿಗ್ತಿಲ್ಲ; ರಾಜ್ಯಕ್ಕೆ ಮೋದಿ ಮುಂದುವರೆಸಿದ ಅಗಾಧ ಅನ್ಯಾಯ!
‘ಸುನೇತ್ರಾ ಯಾರ ಬಯಕೆಯಂತೆ ಮಹಾರಾಷ್ಟ್ರದ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ? ಇದರ ಹಿಂದೆ ಬಿಜೆಪಿ ನಾಯಕತ್ವದ ಕೈವಾಡವಿದೆ’ ಎಂದು ಪ್ರತಿಪಕ್ಷ ಶಿವಸೇನೆ(ಯುಬಿಟಿ) ಆರೋಪಿಸಿದೆ. ಅಜಿತ್ ಪವಾರ್ ಅವರ ಚಿಕ್ಕಪ್ಪ ಹಾಗೂ ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ‘ಪ್ರಮಾಣ ವಚನ ಸ್ವೀಕಾರ ನನ್ನ ಗಮನಕ್ಕೆ ಬಂದಿಲ್ಲ’ ಎಂದಿದ್ದಾರೆ. ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆಗೂ ಪ್ರಮಾಣ ವಚನ ಸ್ವೀಕಾರದ ಸುಳಿವು ಸಿಕ್ಕಿರಲಿಲ್ಲ ಎಂದು ಹೇಳಲಾಗುತ್ತಿದೆ.
‘ಅಜಿತ್ ಪವಾರ್ ರಾಜಕೀಯವನ್ನು ಗಮನಿಸಿದರೆ ಪ್ರಶ್ನೆಗಳು ಮೂಡುವುದು ಸಹಜ. ಮಹಾರಾಷ್ಟ್ರದ ಉನ್ನತ ನಾಯಕರಾದ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟ ರೀತಿಯನ್ನು ತನಿಖೆಗೊಳಪಡಿಸಬೇಕು. ಇದರಲ್ಲೇನೋ ಸಂಶಯಾಸ್ಪದ ಸಂಗತಿ ಇದೆ’ ಎಂದಿದ್ದಾರೆ ಶಿವಸೇನೆ (ಉದ್ಧವ್ ಬಣ) ಸಂಸದ ಸಂಜಯ್ ರಾವತ್. ಇದೇ ಪ್ರಶ್ನೆಗಳನ್ನು ಅಜಿತ್ ಪವಾರ್ ಅವರ ಪಕ್ಷದ ನಾಯಕರು, ‘ಅವರ ನಿಧನವು ಸಂಶಯಾಸ್ಪದವಾಗಿದೆ. ತೆರೆಯ ಹಿಂದೆ ಏನೋ ಆಗಿದೆ’ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಭಾರತೀಯ ಜನತಾ ಪಕ್ಷದ ನಾಯಕ, ಮುಖ್ಯಮಂತ್ರಿ ಫಡ್ನವೀಸ್, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಎನ್‌ಸಿಪಿಯ ಎರಡೂ ಬಣಗಳು ಆದಷ್ಟು ಬೇಗ ಒಂದಾಗಲಿವೆ ಎಂಬುದು ನಮ್ಮ ಗಮನಕ್ಕೆ ಬಾರದ ವಿಷಯವಲ್ಲ. ಬಿಜೆಪಿ ಬಿಟ್ಟು ಅವರೇನು ಮಾಡಲಾಗುವುದಿಲ್ಲ’ ಎಂದಿದ್ದಾರೆ. ಎನ್‌ಸಿಪಿ ಅಧ್ಯಕ್ಷ ಸುನಿಲ್ ತಟಕರೆ, ‘ಅಜಿತ್ ಅವರ ನಿಧನದ ನಂತರವೂ ಆಡಳಿತಾರೂಢ ಪಕ್ಷಗಳ ಕೂಟದೊಂದಿಗೇ ಎನ್‌ಸಿಪಿ ಮುಂದುವರೆಯಲಿದೆ’ ಎಂದಿದ್ದಾರೆ.
ಅಂದರೆ, ಒಬ್ಬೊಬ್ಬರದು ಒಂದೊಂದು ರೀತಿಯ ಹೇಳಿಕೆ, ನಿಲುವು, ನಡೆ. ಇದೆಲ್ಲವೂ ಇವತ್ತಿನ ಅತಿದೊಡ್ಡ ಉದ್ಯಮವಾಗಿರುವ ರಾಜಕಾರಣದಲ್ಲಿ ಸಹಜವಾಗಿರಬಹುದು. ಈ ಬೆಳವಣಿಗೆಗಳೆಲ್ಲವೂ ಬಿಜೆಪಿಯ ಹೈಕಮಾಂಡ್ ನಾಯಕರ ಆಣತಿಯಂತೆಯೇ ಜರುಗುತ್ತಿರಬಹುದು. ಆದರೆ ರಾಜಕಾರಣಿಗಳನ್ನು ಕಣ್ಮುಚ್ಚಿ ನಂಬುವ, ನಾಯಕರ ಪರ ವಹಿಸಿ ಮಾತನಾಡುವ ಜನರಿಗಷ್ಟೇ ಕಸಿವಿಸಿ, ಗೊಂದಲ, ಮುಜುಗರ.
ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದದ್ದೇ ಯುಪಿಎ ಸರ್ಕಾರದ ಭ್ರಷ್ಟಾಚಾರವನ್ನು ದೇಶದ ಜನರ ಮುಂದಿಟ್ಟು ಕೋಲಾಹಲ ಎಬ್ಬಿಸಿದ್ದರಿಂದ. ಒಂದು ಸಮುದಾಯದ ತುಷ್ಟೀಕರಣ ಮತ್ತು ವಂಶ ಪಾರಂಪರ್ಯ ರಾಜಕಾರಣವನ್ನು ಕಟುವಾಗಿ ಟೀಕಿಸಿ, ನಾವು ಅದರಿಂದ ಹೊರತಾದವರು ಎಂದು ನಂಬಿಸುವುದರಿಂದ.
ಆದರೆ ಅದೇ ಬಿಜೆಪಿ, ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಸೆಳೆಯಲು, ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು, ಅವರ ಹಲವು ಹಗರಣಗಳನ್ನು ಮುಚ್ಚಿಹಾಕಿತು. ಅಜಿತ್ ಪವಾರ್ ವಿರುದ್ಧದ 70,000 ಕೋಟಿ ರೂ. ನೀರಾವರಿ ಹಗರಣ; ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ಗೆ ಸಂಬಂಧಿಸಿದ 25,000 ಕೋಟಿ ರೂ. ಹಗರಣ; ಅಕ್ರಮ ಮರಳು ಗಣಿಗಾರಿಕೆ; ಪಿಂಪ್ರಿ-ಚಿಂಚವಾಡ್ ನಗರಸಭೆಯ ಭ್ರಷ್ಟಾಚಾರ ಆರೋಪಗಳನ್ನು ಪ್ರಧಾನಿ ಮೋದಿಯವರ ಲಾಂಡ್ರಿಯಲ್ಲಿ ತೊಳೆಯಲಾಯಿತು. ಸರ್ಕಾರಿ ತನಿಖಾ ಸಂಸ್ಥೆಗಳಿಂದ ಕ್ಲೀನ್ ಚಿಟ್ ಪಡೆಯಲಾಯಿತು. ಲೋಕಸಭಾ ಚುನಾವಣೆಯಲ್ಲಿ ಸೋತ ಬಿಜೆಪಿ, ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವಂತಾಯಿತು.
ಈತನ್ಮಧ್ಯೆ, ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ, ಅಜಿತ್ ಅವರ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ಅವರ ಎನ್‌ಸಿಪಿ ಬಣಗಳು ಕೆಲ ಪಾಲಿಕೆಗಳಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಇದೇ ವೇಳೆ, ಎರಡೂ ಬಣಗಳು ಮತ್ತೆ ಒಗ್ಗೂಡುವ ಚರ್ಚೆಗಳೂ ಆರಂಭವಾಗಿದ್ದವು. ಉಭಯ ಬಣಗಳನ್ನು ಬೆಸೆದು, ಅಜಿತ್ ಅವರನ್ನು ಮುಖ್ಯಸ್ಥನನ್ನಾಗಿ ಪ್ರತಿಷ್ಠಾಪಿಸಿ, ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯಲು ಶರದ್ ಪವಾರ್ ನಿರ್ಧರಿಸಿದ್ದಾರೆಂಬ ಮಾತುಗಳೂ ಕೇಳಿಬಂದಿದ್ದವು. ಬಣಗಳ ಒಗ್ಗೂಡುವಿಕೆಯ ಚರ್ಚೆಯೂ ಚಾಲ್ತಿಯಲ್ಲಿತ್ತು. ಅದಷ್ಟೇ ಅಲ್ಲದೆ, ಅಜಿತ್-ಶರದ್ ಪವಾರ್ ಒಂದಾಗಿ ಬಿಜೆಪಿ ವಿರುದ್ಧ ಸೆಣಸುವ ತೀರ್ಮಾನ ಮಾಡಿದ್ದಾರೆ. ಬಿಜೆಪಿಯ 11 ಸಾವಿರ ಕೋಟಿ ಹಗರಣದ ಫೈಲ್ ಹೊರ ತೆಗೆಯಲಿದ್ದಾರೆ ಎಂದು ಮಾಧ್ಯಮದವರ ಮುಂದೆ ಪವಾರ್ ಹೇಳಿದ್ದೂ ಇತ್ತು. ಫೆಬ್ರವರಿ 12ರಂದು ಎನ್‌ಸಿಪಿಯ ಎರಡೂ ಬಣಗಳು ಒಂದುಗೂಡಲಿವೆ ಎಂಬ ಅಜಿತ್ ಪವಾರ್ ಅವರ ಹೇಳಿಕೆ ಸಂಚಲನ ಸೃಷ್ಟಿಸಿತ್ತು.
ಆದರೆ, ಹೇಳಿಕೆ ಕೊಟ್ಟ ಅಜಿತ್ ಪವಾರ್, ಜನವರಿ 28ರಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಅವರು ತೀರಿಹೋದ ನಾಲ್ಕೇ ದಿನಕ್ಕೆ ಪತ್ನಿ ಸುನೇತ್ರಾ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದನ್ನು ಓದಿದ್ದೀರಾ?: ಸೆಸ್-ಸಚಾರ್ಜ್ ಮೂಲಕ 6 ಲಕ್ಷ ಕೋಟಿ ರೂ.ಸಂಗ್ರಹ; ರಾಜ್ಯಗಳಿಗೆ ಒಂದು ಪೈಸೆಯೂ ಇಲ್ಲ: ಸಿಎಂ ಸಿದ್ದರಾಮಯ್ಯ
ಕಳೆದ ಹನ್ನೆರಡು ವರ್ಷಗಳಲ್ಲಿ ಭ್ರಷ್ಟರನ್ನು ಬರಸೆಳೆದುಕೊಂಡು ಪಕ್ಷವನ್ನು ಬಲಿಷ್ಠಗೊಳಿಸಿದ, ಅಧಿಕಾರ ಹಿಡಿದ ಮೋದಿ ಮತ್ತು ಅಮಿತ್ ಶಾ ಅವರಿಗೆ ವಂಶ ಪಾರಂಪರ್ಯ ರಾಜಕಾರಣ ಹೊಸದಲ್ಲ, ವಿರೋಧವೂ ಇಲ್ಲ. ತತ್ವ, ಸಿದ್ಧಾಂತ, ನೈತಿಕತೆಗೆ ಅವರು ಬದ್ಧರೂ ಅಲ್ಲ. ಭಾರತದ ಸಾಂಪ್ರದಾಯಿಕ ಸಮಾಜವನ್ನು ಅದಕ್ಕೆ ಒಗ್ಗಿಸುವುದು ಅವರಿಗೆ ಕಷ್ಟದ ಕೆಲಸವೇ ಅಲ್ಲ. ಬಿಜೆಪಿಯ ಇತ್ತೀಚಿನ ರಾಜಕೀಯ ನಡೆಗಳನ್ನು ಗಮನಿಸಿದರೆ, ಅವರೇ ಹುಟ್ಟುಹಾಕಿದ, ಮೋದಿ ಹೈ ತೋ ಮುಮ್ಕಿನ್ ಹೈ- ಮೋದಿ ಇದ್ದರೆ ಎಲ್ಲವೂ ಸಾಧ್ಯ- ಎನ್ನುವ ಘೋಷಣೆ, ಅವರ ಕೊಳಕು ಕೃತ್ಯಗಳಿಗೆ ಕನ್ನಡಿ ಹಿಡಿಯುತ್ತದೆ. ಅದಕ್ಕಾಗಿಯೇ ಮೋದಿ ಬೇಕಾಗಿದೆ. ಅದು ಬಿಜೆಪಿ ಮಂತ್ರವಾಗಿದೆ.
ರಾಷ್ಟ್ರಕವಿ ಕುವೆಂಪು ಹೇಳಿದಂತೆ, ಮೊದಲ ಗುಂಡು ತಗಲಬೇಕಾಗಿರುವುದು ಹುಲಿಯ ತಲೆಗಲ್ಲ… ನಮ್ಮ ತಲೆಗೆ. ಮೊದಲು ನಮ್ಮ ಮೆದುಳನ್ನು ಕ್ಲೀನ್ ಮಾಡಿಕೊಳ್ಳಬೇಕು, ಅಲ್ಲವೇ?





