ಭ್ರಷ್ಟ ಅಧಿಕಾರಿಯನ್ನು ಅತ್ಯಂತ ನಿಕೃಷ್ಟವಾಗಿ ನೋಡಿ ತುಚ್ಛೀಕರಿಸಬೇಕಾದ ಜನ, ಭ್ರಷ್ಟರೊಂದಿಗೆ ರಾಜಿಯಾಗಿದ್ದಾರೆ, ಭ್ರಷ್ಟಾಚಾರವನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಇದು ನೈತಿಕತೆಯ ಅಧಃಪತನದ ಸಂಕೇತವಲ್ಲವೇ? ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಬಹುದಲ್ಲವೇ?
ಇತ್ತೀಚೆಗೆ ‘ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ’ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹನ್ನೆರಡು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಕೇವಲ ಹನ್ನೆರಡು ಅಧಿಕಾರಿಗಳ ಬಳಿ ಇದ್ದ 38 ಕೋಟಿಗೂ ಮೀರಿದ ಸ್ವತ್ತುಗಳನ್ನು ಪತ್ತೆ ಮಾಡಿದ್ದಾರೆ.
ಅಂದರೆ, ಸರ್ಕಾರಿ ಸೇವೆಗಾಗಿ- ಸಾರ್ವಜನಿಕ ಸೇವೆಗಾಗಿ ಸೇರಿದವರು ಸೇವೆಯನ್ನು ಪಕ್ಕಕ್ಕೆ ಸರಿಸಿ, ಸುಲಿಗೆಕೋರರಾದಾಗ, ಸಾರ್ವಜನಿಕರಿಂದ ದೂರುಗಳು ಬಂದಾಗ, ಲೋಕಾಯುಕ್ತ ಪೊಲೀಸರು ದಾಳಿ ಮಾಡುತ್ತಾರೆ. ಕೋಟಿಗಟ್ಟಲೆ ನಗದು, ಚಿನ್ನಾಭರಣ, ಆಸ್ತಿಪತ್ರಗಳನ್ನು ವಶಕ್ಕೆ ಪಡೆದು, ಬಹಿರಂಗಪಡಿಸುತ್ತಾರೆ. ಅದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ನಮ್ಮ ನಡುವೆಯೇ ಇರುವ ಸಾರ್ವಜನಿಕ ಸೇವಕರು ಲೂಟಿಕೋರರಾಗಿರುವುದನ್ನು ಕಂಡು ಜನ ಹೌಹಾರುತ್ತಾರೆ. ಕುತೂಹಲಕರ ಸಂಗತಿ ಎಂದರೆ, ಆನಂತರ ಏನಾಗುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ.
ನಿಯಮದ ಪ್ರಕಾರ, ಲೋಕಾಯುಕ್ತ ಪೊಲೀಸರು ನಗದು, ಚಿನ್ನಾಭರಣ, ಆಸ್ತಿಪತ್ರಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ. ಪ್ರಕರಣ ವಿಚಾರಣೆಯ ನೆಪದಲ್ಲಿ ವರ್ಷಗಟ್ಟಲೆ ಕೊಳೆಯುತ್ತದೆ. ಅಲ್ಲಿಗೆ ಲಂಚ ಪಡೆದವನು-ಕೊಟ್ಟವನು ಮರೆತಿರುತ್ತಾನೆ. ಜನ ಎಂದಿನಂತೆ ಅವರ ಜಂಜಾಟದಲ್ಲಿ ಮುಳುಗಿರುತ್ತಾರೆ. ಕೆಲವರಿಗೆ ಶಿಕ್ಷೆ, ಹಲವರಿಗೆ ಖುಲಾಸೆ ಆಗುತ್ತದೆ. ಪ್ರಭಾವಿಗಳಾಗಿದ್ದರೆ, ಮತ್ತೆ ಸೇವೆಗೆ ಹಾಜರಾಗುವ, ಭಡ್ತಿ ಪಡೆಯುವ ‘ಜಾದೂ’ ಕೂಡ ನಡೆಯುತ್ತದೆ. ಅಂತಹ ಹಲವು ಉದಾಹರಣೆಗಳೂ ಇವೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನೊಳಗೊಂದು ಆರೆಸ್ಸೆಸ್ ಆನೆ ಅವಿತಿರುವ ದುರಂತ!
ಈ ‘ಸೇವಾದುರಂಧರ’ ಸುಲಿಗೆಕೋರರು ಹಣ, ಜಾತಿ ಮತ್ತು ರಾಜಕೀಯ ಪ್ರಭಾವವನ್ನು ಅಸ್ತ್ರ ಮತ್ತು ಗುರಾಣಿಯಂತೆ ಬಳಸುತ್ತಾರೆ. ಅಕ್ರಮವಾಗಿ ಗಳಿಸಿದ್ದನ್ನೇ ಅಡವಿಟ್ಟು ಮತ್ತೊಂದು ಆಯಕಟ್ಟಿನ ಜಾಗವನ್ನು ಗಿಟ್ಟಿಸುತ್ತಾರೆ. ಆ ಆಯಕಟ್ಟಿನ ಜಾಗಕ್ಕಾಗಿ ಬಹಿರಂಗ ಹರಾಜು ಪ್ರಕ್ರಿಯೆ ಕೂಡ ಅಧಿಕಾರಿಗಳ ವಲಯದಲ್ಲಿ ಚಾಲ್ತಿಯಲ್ಲಿದೆ. ಯಾವ ಸರ್ಕಾರ ಬಂದರೂ ವರ್ಗಾವಣೆ ನಿಲ್ಲುವುದಿಲ್ಲ. ವರ್ಗಾವಣೆಯ ನೆಪದಲ್ಲಿ ಶಿಫಾರಸ್ಸು ಮತ್ತು ದಂಧೆ ಕೂಡ ನಿಂತಿಲ್ಲ.
ಭ್ರಷ್ಟಾಚಾರದಿಂದ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು, ಆಡಳಿತದ ಫಲಗಳು ಜನಸಾಮಾನ್ಯರಿಗೆ ತಲುಪದೆ ಪ್ರಜಾಪ್ರಭುತ್ವದ ಆಶಯಗಳೇ ಮಣ್ಣುಪಾಲಾಗುತ್ತವೆ. ಇದು ಸರ್ಕಾರದ ಚುಕ್ಕಾಣಿ ಹಿಡಿದವರಿಗೂ ಗೊತ್ತು. ಗೊತ್ತಿದ್ದೂ ಮುಂದುವರೆಸುತ್ತಾರೆ. ಅಕಸ್ಮಾತ್ ಪ್ರಶ್ನಿಸಿದರೆ, ‘ವ್ಯವಸ್ಥೆಯೇ ಹದಗೆಟ್ಟಿದೆ, ಎಲ್ಲಿಂದ ರಿಪೇರಿ ಮಾಡುವುದು’ ಎಂಬ ಹತಾಶೆಯ ಮಾತುಗಳನ್ನಾಡುತ್ತಾರೆ. ಸರ್ಕಾರಿ ಸೇವೆಯಲ್ಲಿರುವವರಲ್ಲಿ ಪ್ರಾಮಾಣಿಕತೆ ಎಂಬುದು ಸಹಜ ಪ್ರವೃತ್ತಿಯಾಗದೇ ಇದ್ದಾಗ ಅದನ್ನು ಭಯ, ಒತ್ತಡ ಮತ್ತು ಶಿಕ್ಷೆಯಿಂದಲಾದರೂ ಒತ್ತಾಯಪೂರ್ವಕವಾಗಿ ಮೂಡಿಸಬೇಕಾಗುತ್ತದೆ.
ಇದಕ್ಕೆ ಲೋಕಾಯುಕ್ತ ಒಂದು ಪ್ರಬಲ ಅಸ್ತ್ರವಾಗಿದೆ. ನ್ಯಾಯಮೂರ್ತಿ ಎನ್. ವೆಂಕಟಾಚಲ ಲೋಕಾಯುಕ್ತರಾಗಿದ್ದಾಗ, ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಆ ಸಂಸ್ಥೆಗೆ ಘನತೆ, ಗೌರವ ತಂದುಕೊಟ್ಟಿದ್ದರು. ಜನರ ವಿಶ್ವಾಸ ಗಳಿಸಿದ್ದರು. ಆದರೆ ಇಂತಹ ವರ್ಚಸ್ಸುಳ್ಳ ಲೋಕಾಯುಕ್ತ ಸಂಸ್ಥೆ ಈಗ ನಾಮ್ ಕೆ ವಾಸ್ತೆ ಸಂಸ್ಥೆಯಾಗಿದೆ. ಅದರಲ್ಲೂ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್‌ರಾವ್ ನೇಮಕದ ನಂತರ, ಅವರ ಪುತ್ರ ಅಶ್ವಿನ್ ರಾವ್, ಲೋಕಾಯುಕ್ತ ಕಚೇರಿಯನ್ನು ಬಳಸಿಕೊಂಡು ಜೈಲು ಪಾಲಾಗಿದ್ದು, ಆ ಆರೋಪದ ಮೇಲೆ ಭಾಸ್ಕರ್ ರಾವ್ ರಾಜೀನಾಮೆ ನೀಡಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಜನರಿಟ್ಟ ವಿಶ್ವಾಸ ಮಣ್ಣು ಪಾಲಾಗಿದೆ.
ಇದು ನಿಜಕ್ಕೂ ನಾಡಿನ ಜನತೆಯನ್ನು ಆಘಾತಗೊಳಿಸಬೇಕಾಗಿತ್ತು. ಲಂಚ ಕೊಡುವುದು ಮತ್ತು ತೆಗೆದುಕೊಳ್ಳುವುದು ಅಪರಾಧ ಎನಿಸಬೇಕಾಗಿತ್ತು. ಸರ್ಕಾರಿ ವ್ಯವಸ್ಥೆ ಇಷ್ಟು ಕೆಟ್ಟಿದೆಯೇ, ಇಲ್ಲಿ ಸರ್ಕಾರ ಜೀವಂತವಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಬೇಕಾಗಿತ್ತು.
ಆದರೆ, ಕಾಲ ಬದಲಾಗಿದೆ. ಸಾಮಾನ್ಯ ಸರ್ಕಾರಿ ನೌಕರರ ಬಳಿ ಕೋಟಿಗಟ್ಟಲೆ ಹಣ, ಆಸ್ತಿ, ಮನೆ, ತೋಟ, ಚಿನ್ನ-ಬೆಳ್ಳಿ ಎಲ್ಲಿಂದ ಬಂತು ಎಂದು ಯಾರೂ ಕೇಳುತ್ತಿಲ್ಲ. ದುರದೃಷ್ಟಕರ ಸಂಗತಿ ಎಂದರೆ, ಭ್ರಷ್ಟಾಚಾರವನ್ನು ಜನ ಬದುಕಿನ ಭಾಗವನ್ನಾಗಿಸಿಕೊಂಡಿದ್ದಾರೆ. ಅಕ್ರಮ ಹಾದಿಯಲ್ಲಿ ಹಣ ಮಾಡುವವರನ್ನು ಜಾಣ ಎನ್ನುತ್ತಿದ್ದಾರೆ. ಗೌರವಿಸುತ್ತಿದ್ದಾರೆ. ಹಣ ಮುಟ್ಟದ ಪ್ರಾಮಾಣಿಕ ಅಧಿಕಾರಿಯನ್ನು ದಡ್ಡ ಎಂದು ಸಂಬೋಧಿಸುತ್ತಿದ್ದಾರೆ. ನಿರ್ಲಕ್ಷಿಸುತ್ತಿದ್ದಾರೆ.
ಲಂಚ ಎನ್ನುವುದು ಅಮೇಧ್ಯ ಎಂದು ಕರೆಯುವ ಕಾಲವೂ ಇತ್ತು. ತಮ್ಮ ಇಡೀ ಸೇವೆಯುದ್ದಕ್ಕೂ ಹತ್ತು ರೂಪಾಯಿ ಲಂಚ ಮುಟ್ಟದವರೂ ಇದ್ದರು. ಆದರೆ ಈಗ, ಬದಲಾದ ಕಾಲಮಾನದಲ್ಲಿ, ಲಂಚ ಪಡೆಯುವುದು ಸ್ವೀಕಾರಾರ್ಹವಾಗಿದೆ. ಲಂಚ ಸ್ವೀಕರಿಸುವಾಗ ಅಕಸ್ಮಾತ್ ಸಿಕ್ಕಿಬಿದ್ದವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆದದ್ದು ಬೆರಳೆಣಿಕೆಯಷ್ಟಿದೆ. ಇದು ಭ್ರಷ್ಟರಲ್ಲಿ ವ್ಯವಸ್ಥೆಯ ಬಗ್ಗೆ ಅಸಡ್ಡೆ ಮತ್ತು ಅಹಂಕಾರವನ್ನು ಬೆಳೆಸುತ್ತಿದೆ. ನೈತಿಕತೆ ಮತ್ತು ಅನೈತಿಕತೆಯ ನಡುವಿನ ಗೆರೆಯನ್ನು ಅಳಿಸಿ ಹಾಕಿದೆ.
ಇನ್ನು ಭ್ರಷ್ಟಾಚಾರವನ್ನು ನಿಗ್ರಹಿಸುವ ಲೋಕಾಯುಕ್ತ ಸಂಸ್ಥೆ ಕೂಡ ಭ್ರಷ್ಟಗೊಂಡಿದೆ. ಹಸ್ತಕ್ಷೇಪ ಮತ್ತು ಸ್ವಾತಂತ್ರ್ಯದ ಕೊರತೆಯಿಂದ ನರಳುತ್ತಿದೆ. ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು, ನ್ಯಾಯಾಂಗ ಸೇರಿದಂತೆ ಎಲ್ಲಾ ಸಾರ್ವಜನಿಕ ಸೇವಕರ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ಮಾಡುವ ಮತ್ತು ವಿಚಾರಣೆ ನಡೆಸುವ ಅಧಿಕಾರ ನೀಡಬೇಕು. ಅದರ ಕಾರ್ಯಚಟುವಟಿಕೆಯಲ್ಲಿ ಹೆಚ್ಚು ಜವಾಬ್ದಾರಿಯುತ ಮತ್ತು ಪಾರದರ್ಶಕವಾಗಿಸಬೇಕು. ಅದು ಸಾಮಾನ್ಯವಾಗಿ ಅದರ ಚಟುವಟಿಕೆಗಳು, ತನಿಖೆಗಳು ಮತ್ತು ಫಲಿತಾಂಶಗಳ ಕುರಿತು ವರದಿಗಳನ್ನು ಪ್ರಕಟಿಸಬೇಕು. ಆದರೆ ಆಳುವವರಿಗೆ ಅದು ಬೇಕಾಗಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪಟೇಲರನ್ನು ಹೈಜಾಕ್ ಮಾಡುವುದು ಆರ್‌ಎಸ್‌ಎಸ್‌ಗೆ ಸುಲಭವಲ್ಲ!
ಅದೆಲ್ಲಕ್ಕಿಂತ ಮುಖ್ಯವಾಗಿ ಭ್ರಷ್ಟ ಅಧಿಕಾರಿಯನ್ನು ಅತ್ಯಂತ ನಿಕೃಷ್ಟವಾಗಿ ನೋಡಿ ತುಚ್ಛೀಕರಿಸಬೇಕಾದ ಜನ, ಭ್ರಷ್ಟರೊಂದಿಗೆ ರಾಜಿಯಾಗಿದ್ದಾರೆ, ಭ್ರಷ್ಟಾಚಾರವನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಇದು ನೈತಿಕತೆಯ ಅಧಃಪತನದ ಸಂಕೇತವಲ್ಲವೇ? ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಬಹುದಲ್ಲವೇ?





