ಚುನಾವಣಾ ಆಯೋಗ ನಡೆಸಿದ ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಗೊಂದಲಗಳು, ತಕರಾರುಗಳು ಇತ್ಯರ್ಥವಾಗಿಲ್ಲ. ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಆದರೆ ಆಯುಕ್ತರು ಯಶಸ್ವಿಯಾಗಿದೆ ಎಂದಿದ್ದಾರೆ.
ಅಕ್ಟೋಬರ್ 27ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ‘ಚುನಾವಣಾ ಆಯೋಗವು ದೇಶದ ಎಲ್ಲ ರಾಜ್ಯಗಳ ಚುನಾವಣಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣಾ(SIR) ಪ್ರಕ್ರಿಯೆಯನ್ನು ವಿವರವಾಗಿ ಚರ್ಚಿಸಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತದಲ್ಲಿ ಈ ಪ್ರಕ್ರಿಯೆ ನಡೆಯಲಿದೆ’ ಎಂದಿದ್ದಾರೆ.
ಅದರಲ್ಲೂ ಬಿಜೆಪಿಯೇತರ ಸರ್ಕಾರವಿರುವ ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇವುಗಳ ಜೊತೆಗೆ ಅಸ್ಸಾಂ ರಾಜ್ಯದ ಚುನಾವಣೆಯೂ ನಡೆಯಲಿದ್ದು, ಅದರ ಎಸ್ಐಆರ್ ಪ್ರಕ್ರಿಯೆಯ ದಿನಾಂಕ ತಿಳಿಸದೆ, ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳತ್ತ ಆಯೋಗ ಗಮನ ಹರಿಸಿರುವುದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
1952ರಿಂದ 2003ರವರೆಗೆ, ಕಾಲ ಕಾಲಕ್ಕೆ ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಉದ್ದೇಶಕ್ಕಾಗಿ ದೇಶದ ಎಲ್ಲಾ ಪ್ರದೇಶಗಳಲ್ಲಿ ಇದೇ ರೀತಿಯ ಪರಿಷ್ಕರಣೆಯನ್ನು ನಡೆಸಲಾಗಿತ್ತು, ಇದೇನು ಹೊಸ ಪ್ರಕ್ರಿಯೆಯಲ್ಲ ಎನ್ನುವುದು ಚುನಾವಣಾ ಆಯೋಗದ ಸಮಜಾಯಿಷಿ. ಇದು ಆಯೋಗ, ವಿಧಾನಸಭೆ ಚುನಾವಣೆಗಳಿಗೆ ಮುಂಚೆ ಮಾಡಿಕೊಳ್ಳಬೇಕಾದ ತಯಾರಿಯಾಗಿದ್ದು, ಹೊಸ ಮತದಾರರನ್ನು ಸೇರಿಸುವುದು, ದೋಷಗಳನ್ನು ತಿದ್ದುವುದು ಹಾಗೂ ಮೃತ ಅಥವಾ ಸ್ಥಳಾಂತರವಾದ ಮತದಾರರ ಹೆಸರುಗಳನ್ನು ತೆಗೆಯುವುದನ್ನು ಒಳಗೊಂಡಿದೆ ಎಂದಿದ್ದಾರೆ.
ಇದನ್ನು ಓದಿದ್ದೀರಾ?: ಕಾಂಗ್ರೆಸ್‌ಗಷ್ಟೇ ಅಲ್ಲ, ಸಮಾಜಕ್ಕೆ ಅರ್ಥವಾಗಿದೆಯೇ ಆರ್‌ಎಸ್‌ಎಸ್ ಅಜೆಂಡಾ?
ಆಯೋಗದ ಈ ಪ್ರಕ್ರಿಯೆಯಂತೆಯೇ, ಕಳೆದ ಜೂನ್‌ನಲ್ಲಿ ಬಿಹಾರ ರಾಜ್ಯದಲ್ಲಿ, ವಿಧಾನಸಭಾ ಚುನಾವಣೆಗೆ ಮುಂಚಿನ ತಯಾರಿಯಾಗಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣಾ(SIR) ಪ್ರಕ್ರಿಯೆಗೆ ಆಯೋಗ ಕೈಹಾಕಿತ್ತು. ಕೇವಲ ಕೆಲವೇ ತಿಂಗಳ ಅವಧಿಯಲ್ಲಿ ಪರಿಷ್ಕರಣೆ ಪ್ರಕ್ರಿಯೆಯನ್ನು ಮುಗಿಸಿತ್ತು. ಸುಮಾರು 65 ಲಕ್ಷಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿತ್ತು.
ವಿಪರ್ಯಾಸಕರ ಸಂಗತಿ ಎಂದರೆ, ಅವರಲ್ಲಿ ಹೆಚ್ಚಿನವರು ಬಡವರು, ಕಾರ್ಮಿಕರು, ವಲಸಿಗರು ಮತ್ತು ಸೂಕ್ತ ದಾಖಲೆಗಳನ್ನು ನೀಡಲಾಗದ ಅನಕ್ಷರಸ್ಥರು. ಈ 65 ಲಕ್ಷ ಮತದಾರರಿಗೆ ಮತದಾನದ ಹಕ್ಕನ್ನು ನಿರಾಕರಿಸುವುದು ಸಂವಿಧಾನದ ವಿಧಿ 14, 19, 21ರ ಅಡಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರಂತೂ ದಾಖಲೆಗಳ ಸಮೇತ ಆಯೋಗದ ಅಧ್ವಾನಗಳನ್ನು ದೇಶದ ಮುಂದಿಟ್ಟು ಪ್ರಶ್ನೆಗಳನ್ನೆತ್ತಿದರು. ಕೆಲವರು ಸುಪ್ರೀಂ ಕೋರ್ಟ್ ಮೊರೆ ಹೋದರು. ಸುಪ್ರೀಂ ಕೋರ್ಟ್ ಆಧಾರ್, ರೇಷನ್ ಕಾರ್ಡ್‌ಗಳನ್ನು ದಾಖಲೆಯಾಗಿ ಪರಿಗಣಿಸುವಂತೆ ಆಯೋಗಕ್ಕೆ ಸೂಚಿಸಿದ ನಂತರ, ಮತ್ತೆ ಪರಿಷ್ಕರಣೆಗೊಳಪಡಿಸಿ 65ರಿಂದ 47 ಲಕ್ಷಕ್ಕೆ ಇಳಿಸಿತು. ಅಂತಿಮವಾಗಿ 47 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿತು. ಈಗ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಾಗುವುದು ಎಂದಿದೆ.
ಅಂದರೆ, ಚುನಾವಣಾ ಆಯೋಗ ದೇಶದ ಪ್ರಜೆಗಳ ಪರವಾಗಿ ಅಥವಾ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿಲ್ಲ. ಅವರ ಮತದಾನದ ಹಕ್ಕನ್ನು ಕಾಪಾಡುತ್ತಿಲ್ಲ. ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಪರಿಷ್ಕರಣೆ ಕುರಿತ ಗೊಂದಲಗಳು, ತಕರಾರುಗಳು ಇತ್ಯರ್ಥವಾಗಿಲ್ಲ. ಆ 47 ಲಕ್ಷ ಮತದಾರರು ದೇಶದ ಪ್ರಜೆಗಳಾಗಿದ್ದರೂ, ಅವರು ಮತದಾನ ಮಾಡುವ ಹಕ್ಕನ್ನು ಹೊಂದಿಲ್ಲ. ಪರಿಸ್ಥಿತಿ ಹೀಗಿರುವಾಗ, ಅ. 27ರ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು, ‘ಮೊದಲ ಹಂತದಲ್ಲಿ ಎಸ್ಐಆರ್ ನಡೆದ ಬಿಹಾರದಲ್ಲಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಪಟ್ಟಿಗೆ ಸಂಬಂಧಿಸಿದಂತೆ ಅಲ್ಲಿ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲ. ಬಿಹಾರದ ಮತದಾರರ ಭಾಗವಹಿಸುವಿಕೆಯು ದೇಶದ ಉಳಿದ ಭಾಗಗಳಿಗೆ ಉತ್ತಮ ಮಾದರಿಯಾಗಿದೆ. ಯಶಸ್ವಿಯಾಗಿ ನಡೆಸಲಾಗಿದೆ’ ಎಂದು ಸುಳ್ಳು ಹೇಳಿದ್ದಾರೆ.
ಇವರು ಹೀಗೆ ಹೇಳಲು ಧೈರ್ಯ ಬಂದಿದ್ದು ಎಲ್ಲಿಂದ? ಇವರ ಬೆನ್ನ ಹಿಂದೆ ನಿಂತು ಇವರ ಅಸಂವಿಧಾನಿಕ ಕೆಲಸಗಳನ್ನು ಬೆಂಬಲಿಸುತ್ತಿರುವವರು ಯಾರು? ಈ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಿಂದ ಯಾರಿಗೆ ಲಾಭ?
2023ರ ಚುನಾವಣಾ ಆಯುಕ್ತರ ನೇಮಕಾತಿಗೆ ಇದ್ದ ಕಾಯ್ದೆಗೆ ತಿದ್ದುಪಡಿ ತಂದ ಪ್ರಧಾನಿ ಮೋದಿಯವರು, ಆಯ್ಕೆ ಸಮಿತಿಯಲ್ಲಿದ್ದ ನ್ಯಾಯಮೂರ್ತಿಗಳನ್ನು ಪಕ್ಕಕ್ಕೆ ಸರಿಸಿ, ವಿರೋಧ ಪಕ್ಷಗಳನ್ನು ನಿರ್ಲಕ್ಷಿಸಿ, ತಮ್ಮ ಅನುಕೂಲಕ್ಕೆ ಬೇಕಾದ ಬೊಂಬೆಯನ್ನು ಆಯುಕ್ತರನ್ನಾಗಿ ನೇಮಿಸಿಕೊಂಡರು. ಆಳುವ ಪಕ್ಷದಿಂದ ನೇಮಕಗೊಂಡ ಚುನಾವಣಾ ಆಯುಕ್ತರು, ಋಣ ತೀರಿಸುವ ಸಲುವಾಗಿ, ಬಿಜೆಪಿ ಹೇಳಿದಂತೆ ಬಿಹಾರದಲ್ಲಿ 47 ಲಕ್ಷ ಮತದಾರರನ್ನು ಕೈಬಿಟ್ಟರು.
ಇದನ್ನು ಓದಿದ್ದೀರಾ?: ಎಲ್ಐಸಿಯ 30 ಸಾವಿರ ಕೋಟಿ ಹಣ ಅದಾನಿ ಕಂಪನಿಗಳಿಗೆ ಹೋಗಿದ್ದು ಹೇಗೆ?
ಬಿಹಾರ ವಿಧಾನಸಭಾ ಚುನಾವಣೆ ಇದೇ ನವೆಂಬರ್ 6 ಮತ್ತು 11ರಂದು ನಡೆಯಲಿದೆ. ಈ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಂಡವರು ಹೆಚ್ಚಿನ ಪಾಲು ಬಡವರು. ಈ ವರ್ಗ ಅಥವಾ ಕೆಲ ಜಾತಿ, ಸಮುದಾಯದ ಜನ ಯಾವ ಪಕ್ಷದ ಪರವಾಗಿ ಒಲವು ಹೊಂದಿದ್ದಾರೆ ಎಂಬುದು ಪಕ್ಷದ ಕಾರ್ಯಕರ್ತರಿಗೆ ತಿಳಿದ ವಿಷಯವೇ ಆಗಿರುತ್ತದೆ. ಅಂತಹ ಮತದಾರರನ್ನು ಗುರುತಿಸಿ, ಯಾವುದೋ ಕಾರಣಗಳನ್ನು ಮುಂದಿಟ್ಟು, ಪಟ್ಟಿಯಿಂದ ಕೈಬಿಡಲಾಗಿದೆ.
ಇದು ಚುನಾವಣಾ ಆಯೋಗವನ್ನು ಆಳುವ ಪಕ್ಷ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ. ಆಯೋಗದ ನೈತಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಜನ ಇಟ್ಟ ನಂಬಿಕೆಯನ್ನು ಹಾಳುಮಾಡುತ್ತದೆ. ಅಷ್ಟಕ್ಕೂ ದೇಶದ ಪ್ರತಿಯೊಬ್ಬ ಪ್ರಜೆಯ ಮತದಾನದ ಹಕ್ಕನ್ನು ಮತ್ತು ಪಾವಿತ್ರ್ಯವನ್ನು ರಕ್ಷಿಸುವುದು ಚುನಾವಣಾ ಆಯೋಗದ ಕರ್ತವ್ಯವೇ ಹೊರತು, ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದಲ್ಲ, ಅಲ್ಲವೇ?
ಆದರೆ, ಮೋದಿ ಭಾರತದಲ್ಲಿ ಇದೂ ಸಾಧ್ಯ.





