ಆಳುವ ದೊರೆಯ ಮರ್ಜಿ ಕಾಯಲು ಹೋಗಿ ಸರ್ಕಾರಿ ಸಂಸ್ಥೆಗಳಾದ ಸಿಬಿಐ, ಇಡಿ, ಐಟಿ, ಎನ್ಐಎ, ಚುನಾವಣಾ ಆಯೋಗ- ಸಾಂವಿಧಾನಿಕ ಜವಾಬ್ದಾರಿ ನಿರ್ವಹಿಸಲು ವಿಫಲವಾಗಿವೆ ಎಂಬ ಗುರುತರ ಆರೋಪ ಹೊತ್ತು ಕೂತಿವೆ. ಈಗ ಸೆನ್ಸಾರ್ ಮಂಡಳಿಯೂ ಆ ಪಟ್ಟಿಗೆ ಸೇರ್ಪಡೆಯಾಗಿದೆ. ಅಭಿವ್ಯಕ್ತಿ ಮಾಧ್ಯಮವಾದ ಕಲಾ ಕ್ಷೇತ್ರದ ಮೇಲೆ ದಾಳಿಗಿಳಿದಿದೆ.
ಕೇಂದ್ರ ಚಿತ್ರ ಪ್ರಮಾಣೀಕರಣ ಮಂಡಳಿ(Central Board of Film Certification – CBFC) ಮತ್ತು ಚಲನಚಿತ್ರ ನಿರ್ಮಾಪಕರ ನಡುವಿನ ಜಟಾಪಟಿಗಳು, ವಿವಾದಗಳು ಹೊಸದೇನು ಅಲ್ಲ. ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಸಾಮಾನ್ಯ ಸಂಗತಿ. ಈ ವಿವಾದಗಳು ಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ, ರಾಜಕೀಯ ಸೂಕ್ಷ್ಮತೆ, ಧಾರ್ಮಿಕ-ಸಾಮಾಜಿಕ ಸಂವೇದನೆ, ಜಾತಿ, ಹಿಂಸೆ ಮತ್ತು ಐತಿಹಾಸಿಕ ನಿರೂಪಣೆಗಳ ಮೇಲೆ ಕೇಂದ್ರೀಕರಿಸಿವೆ. ಕಾಲ ಕಾಲಕ್ಕೆ ಬಿಗಡಾಯಿಸಿ, ಬಗೆಹರಿದಿವೆ.
ಕೇಂದ್ರ ಚಿತ್ರ ಪ್ರಮಾಣೀಕರಣ ಮಂಡಳಿ ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಾನೂನುಬದ್ಧ ಸಂಸ್ಥೆಯಾಗಿದೆ. ಇದು ಸಿನಿಮ್ಯಾಟೋಗ್ರಾಫ್ ಕಾಯ್ದೆ, 1952 (Cinematograph Act, 1952)ರ ಪ್ರಕಾರ ಚಲನಚಿತ್ರಗಳನ್ನು ಪರಿಶೀಲಿಸಿ, ಸಾರ್ವಜನಿಕ ಪ್ರದರ್ಶನಕ್ಕೆ ಪ್ರಮಾಣೀಕರಣ ಪತ್ರ ನೀಡುವ ಜವಾಬ್ದಾರಿಯನ್ನು ಹೊಂದಿದೆ. ಈ ಪ್ರಕ್ರಿಯೆ ಕೆಲವೊಮ್ಮೆ ಪ್ರಮಾಣೀಕರಣದ ನೆಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಯಂತ್ರಣವೂ ಆಗಿದೆ. ತನ್ನ ವ್ಯಾಪ್ತಿ ಮೀರಿ ವರ್ತಿಸಿರುವುದನ್ನೂ ನೋಡಿದ್ದೇವೆ. ಭಾರತೀಯ ಚಿತ್ರರಂಗ ಅದನ್ನು ಕೂಡ ಸಾಮಾನ್ಯವೆಂಬಂತೆ ಸ್ವೀಕರಿಸಿ ಮುನ್ನಡೆದಿದೆ.
ಇದನ್ನು ಓದಿದ್ದೀರಾ?: ರಾಜ್ಯಪಾಲರು ದುರಹಂಕಾರ ತೊರೆಯಲಿ- ಆಯಾ ರಾಜ್ಯದ ಜನಾದೇಶವನ್ನು ಗೌರವಿಸಲಿ
ಆದರೆ, 2014ರ ನಂತರ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಮೇಲೆ ಸೆನ್ಸಾರ್ ಮಂಡಳಿ ಕೂಡ ಅಧಿಕಾರಸ್ಥರ ಅಸ್ತ್ರವಾಗಿ ಬಳಕೆಯಾಗತೊಡಗಿದೆ. ಕಲೆ, ಸಂಸ್ಕೃತಿ ಕ್ಷೇತ್ರದಲ್ಲೂ ಫ್ಯಾಸಿಸ್ಟ್ ಅಜೆಂಡಾ ತುರುಕುವ, ರಾಜಕಾರಣ ಬೆರೆಸುವ, ದುರುಪಯೋಗಪಡಿಸಿಕೊಳ್ಳುವ ಹೊಸ ಮಾರ್ಗವೊಂದು ಬಳಕೆಗೆ ಬಂದಿದೆ. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ತಮಿಳುನಾಡಿನ ಎರಡು ಚಿತ್ರಗಳ ಬಿಡುಗಡೆಯ ಸಂದರ್ಭದಲ್ಲಿ ಸೆನ್ಸಾರ್ ಮಂಡಳಿ ನಡೆದುಕೊಂಡ ರೀತಿಯನ್ನು ಅವಲೋಕಿಸುವುದು ಉಚಿತವೆನಿಸುತ್ತದೆ.
ತಮಿಳುನಾಡಿನ ಜನ ಭಾಷೆ, ಕಾವೇರಿ ನೀರು, ದ್ರಾವಿಡ ಅಸ್ಮಿತೆಯ ಬಗ್ಗೆ ಭಾವನಾತ್ಮಕವಾಗಿ ಸ್ಪಂದಿಸುತ್ತಾರೆ. ಸಿನೆಮಾ ಮತ್ತು ನಟ-ನಟಿಯರ ಕುರಿತ ಅಭಿಮಾನವನ್ನು ಅತಿರೇಕಕ್ಕೊಯ್ಯುತ್ತಾರೆ. ಆ ಅತಿರೇಕದ ಫಲವಾಗಿಯೇ ಕರುಣಾನಿಧಿ, ಎಂಜಿಆರ್, ಜಯಲಲಿತಾ ರಾಜಕಾರಣಕ್ಕೆ ಧುಮುಕಿ, ತಮಿಳುನಾಡನ್ನು ದಶಕಗಟ್ಟಲೆ ಆಳಿದ್ದಾರೆ. ತಮಿಳುನಾಡಿನ ರಾಜಕೀಯ ಚರಿತ್ರೆಯನ್ನು ಬಲ್ಲ ಚಿತ್ರನಟ ವಿಜಯ್, ಆ ಹಿರಿಯರ ಹಾದಿಯಲ್ಲಿಯೇ ಹೆಜ್ಜೆ ಹಾಕುತ್ತಿದ್ದಾರೆ. ಬಹುಬೇಡಿಕೆಯ ನಟನಾಗಿರುವಾಗಲೇ, ಚಿತ್ರರಂಗಕ್ಕೆ ವಿದಾಯ ಹೇಳಿ, ರಾಜಕಾರಣಕ್ಕೆ ಧುಮುಕಿ ಸಂಚಲನ ಸೃಷ್ಟಿಸಿದ್ದಾರೆ.
ಸಿನೆಮಾ ಮತ್ತು ರಾಜಕಾರಣವನ್ನು ಬೆಸೆದ ವಿಜಯ್, ತಮ್ಮ ಕೊನೆಯ ನಟನೆಯ ‘ಜನ ನಾಯಗನ್’ ಚಿತ್ರವನ್ನು ರಾಜಕಾರಣಕ್ಕೆ ಬೇಕಾದ ಕಥಾವಸ್ತುವನ್ನು ಹೆಣೆದು, ಅದನ್ನೇ ಮೆಟ್ಟಿಲನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದರು. ವಿಜಯ್ ಚುನಾವಣಾ ರಾಜಕಾರಣಕ್ಕೆ ಧುಮುಕುತ್ತಿರುವುದರಿಂದ ವಿಚಲಿತರಾದ ಆಡಳಿತಾರೂಢ ಡಿಎಂಕೆಯ ಉಪ ಮುಖ್ಯಮಂತ್ರಿ ಉದಯನಿಧಿ, ಪ್ರಾದೇಶಿಕ ಅಸ್ಮಿತೆ ಮತ್ತು ಹಿಂದಿ ಹೇರಿಕೆ ಕಥಾವಸ್ತುವುಳ್ಳ ‘ಪರಾಶಕ್ತಿ’ ಚಿತ್ರ ನಿರ್ಮಿಸಿದರು. ವಿಜಯ್ ಅವರ ‘ಜನ ನಾಯಗನ್’ ಮತ್ತು ಉದಯನಿಧಿಯವರ ‘ಪರಾಶಕ್ತಿ’ ಎರಡೂ ಚಿತ್ರಗಳನ್ನು ತಮಿಳುನಾಡಿನ ಬಹು ದೊಡ್ಡ ಹಬ್ಬವಾದ ಪೊಂಗಲ್ ಆಚೀಚೆ ಬಿಡುಗಡೆ ಮಾಡಿ, ಯಶಸ್ಸು ಪಡೆಯಲು ಹವಣಿಸಿದ್ದರು.
ಆದರೆ, ಡಿಎಂಕೆ ಮತ್ತು ಟಿವಿಕೆ- ಎರಡೂ ಪಕ್ಷಗಳು ಕೇಂದ್ರದ ಬಿಜೆಪಿ ವಿರುದ್ಧವಿರುವ ಪಕ್ಷಗಳು. ಫ್ಯಾಸಿಸ್ಟ್ ಮತ್ತು ಹಿಂದಿ ಹೇರಿಕೆಯನ್ನು ವಿರೋಧಿಸುವ, ದ್ರಾವಿಡ ಅಸ್ಮಿತೆಯ ಪರವಿರುವ ಪ್ರಾದೇಶಿಕ ಪಕ್ಷಗಳು. ಇದು ತಮಿಳುನಾಡಿನಲ್ಲಿ ಬಿಜೆಪಿ ನೆಲೆಯೂರಲು ತೊಡಕಾಗಿದೆ. ಕೆಲ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಆ ಪಕ್ಷಗಳನ್ನು ಹಣಿಯಲು ಕೇಂದ್ರದ ಬಿಜೆಪಿ ಸರ್ಕಾರ ಸೆನ್ಸಾರ್ ಮಂಡಳಿಯನ್ನು ಅಸ್ತ್ರದಂತೆ ಬಳಸಿಕೊಂಡಿದೆ. ಎರಡೂ ಚಿತ್ರಗಳಿಗೆ ಸೆನ್ಸಾರ್ ಸರ್ಟಿಫಿಕೇಟ್ ನೀಡುವಲ್ಲಿ ಸತಾಯಿಸಿದೆ. ಎರಡೂ ಚಿತ್ರಗಳ ನಿರ್ಮಾಪಕರು ಕೋರ್ಟ್ ಮೆಟ್ಟಿಲು ಹತ್ತಿದರು. ಹಲವು ಕಟ್‌ಗಳ ನಂತರ ಡಿಎಂಕೆಯ ‘ಪರಾಶಕ್ತಿ’ ಬಿಡುಗಡೆಯಾದರೆ, ಟಿವಿಕೆಯ ‘ಜನ ನಾಯಗನ್’ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದರೂ, ಇವತ್ತಿಗೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಈ ನಡುವೆ, ತಮಿಳುನಾಡು ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾದರೆ, ಸಿನಿಮಾಗೆ ಹಿನ್ನಡೆ ಆಗಲಿದೆ. ಚಿತ್ರ ಪ್ರದರ್ಶನ ಅಸಾಧ್ಯವಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಲಿದೆ.
ಈ ಹಿಂದೆ, ಉಡ್ತಾ ಪಂಜಾಬ್, ಪಂಜಾಬ್ 95, ಎಂಪುರಾನ್, ಧಡಕ್-2, ಫುಲೆ, ಸಂತೋಷ್‌ನಂತಹ ಕೆಲ ಚಿತ್ರಗಳು ದೆಹಲಿ ಗಲಭೆ, ಗುಜರಾತ್ ಹತ್ಯಾಕಾಂಡ ಮತ್ತು ಬಲಪಂಥದ ಮನುವಾದಿ ನಿಲುವನ್ನು ವಿರೋಧಿಸುವ ಕಥಾವಸ್ತುವನ್ನು ಹೊಂದಿದ್ದವು. ಆ ಕಾರಣಕ್ಕಾಗಿಯೇ ಸೆನ್ಸಾರ್ ಮಂಡಲಿ, ಹಿಂಸೆ, ಧಾರ್ಮಿಕ ಅವಹೇಳನ, ನ್ಯಾಯಾಂಗ ನಿಂದನೆಯ ನೆಪ ಹೇಳಿ ಕೊಡಬಾರದ ಕಾಟ ಕೊಟ್ಟಿತ್ತು. ಸೋಜಿಗವೆಂದರೆ, ಅತಿಯಾದ ಹಿಂಸೆ-ಕ್ರೌರ್ಯವಿರುವ, ಪ್ರತಿಪಕ್ಷಗಳನ್ನು ಖಳನಾಯಕರನ್ನಾಗಿ ಚಿತ್ರಿಸಿರುವ, ಸರ್ಕಾರವನ್ನು ಅವಹೇಳನ ಮಾಡಿರುವ ‘ಧುರಂಧರ್’ ಚಿತ್ರಕ್ಕೆ ಇದೇ ಸೆನ್ಸಾರ್ ಮಂಡಳಿ ಯಾವುದೇ ಕಟ್‌ಗಳಿಲ್ಲದೆ ಸರ್ಟಿಫಿಕೇಟ್ ನೀಡಿತ್ತು. ಬಲಪಂಥೀಯ ಅಜೆಂಡಾ ಹರಡುವ ಪ್ರೊಪಗ್ಯಾಂಡ ಚಿತ್ರವಾಗಿದ್ದರಿಂದ, ಮಾಧ್ಯಮಗಳು ಕೂಡ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡಿ ಮೆರೆಸಿದ್ದವು.
ಸಿನೆಮಾ ಎಂಬುದು ಇತರ ಕಲಾ ಪ್ರಕಾರಗಳಿಗಿಂತಲೂ ಹೆಚ್ಚಿನ ವ್ಯಾಪ್ತಿಯುಳ್ಳ ಪ್ರಭಾವಿ ಮಾಧ್ಯಮ. ಅದು ವಾಣಿಜ್ಯ-ವ್ಯವಹಾರ, ಕಾನೂನು-ಸುವ್ಯವಸ್ಥೆ, ರಾಜಕೀಯ-ಸಾಮಾಜಿಕ ಕ್ಷೇತ್ರಗಳ ಮೇಲೂ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ. ಅದರಲ್ಲೂ ಸಿನೆಮಾ ಕ್ಷೇತ್ರದಿಂದ ರಾಜಕಾರಣಕ್ಕೆ ಬಂದು ದಶಕಗಳ ಕಾಲ ಆಡಳಿತ ನಡೆಸಿರುವ ತಮಿಳುನಾಡಿನಲ್ಲಿ ಈ ಬೆಳವಣಿಗೆಗಳು ಇನ್ನಷ್ಟು ಮಹತ್ವ ಪಡೆದುಕೊಂಡಿವೆ. ಚಿತ್ರಗಳು ರಾಜಕೀಯವನ್ನು ಪ್ರಭಾವಿಸಬಹುದು, ಕೆಲವೊಮ್ಮೆ ರಾಜಕೀಯ ಸ್ವರೂಪದ್ದಾಗಿಯೂ ಇರಬಹುದು. ಆದರೆ ಸೆನ್ಸಾರ್ ಮಂಡಳಿ ಎನ್ನುವ ಕಾನೂನುಬದ್ಧ ಸಂಸ್ಥೆ ರಾಜಕೀಯ ಪ್ರಭಾವಕ್ಕೆ ಒಳಗಾಗಬಾರದು. ಸಂವಿಧಾನಾತ್ಮಕ ಮಿತಿಗಳೊಳಗೆ ಸೃಜನಶೀಲ ಅಭಿವ್ಯಕ್ತಿ ಅರಳಲು ಅವಕಾಶ ಕಲ್ಪಿಸಬೇಕೇ ಹೊರತು, ಏಕಾಏಕಿ ನಿರ್ಬಂಧ ಹೇರಬಾರದು.
ಇದನ್ನು ಓದಿದ್ದೀರಾ?: ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪಲ್ಲ
ಈಗಾಗಲೇ ಆಳುವ ದೊರೆಯ ಮರ್ಜಿ ಕಾಯಲು ಹೋಗಿ ಸರ್ಕಾರಿ ಸಂಸ್ಥೆಗಳಾದ ಸಿಬಿಐ, ಇಡಿ, ಐಟಿ, ಎನ್ಐಎ, ಚುನಾವಣಾ ಆಯೋಗ- ಸಾಂವಿಧಾನಿಕ ಜವಾಬ್ದಾರಿ ನಿರ್ವಹಿಸಲು ವಿಫಲವಾಗಿವೆ ಎಂಬ ಗುರುತರ ಆರೋಪ ಹೊತ್ತು ಕೂತಿವೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಬದಲು ರಾಜಕೀಯ ಉದ್ದೇಶಕ್ಕಾಗಿ ಬಳಕೆಯಾಗಿ, ದೇಶದ ಜನರ ನಂಬಿಕೆಗೆ ದ್ರೋಹ ಬಗೆದಿವೆ. ಈಗ ಸೆನ್ಸಾರ್ ಮಂಡಳಿಯೂ ಆ ಪಟ್ಟಿಗೆ ಸೇರ್ಪಡೆಯಾಗಿದೆ. ಅಭಿವ್ಯಕ್ತಿ ಮಾಧ್ಯಮವಾದ ಕಲಾ ಕ್ಷೇತ್ರದ ಮೇಲೆ ದಾಳಿಗಿಳಿದಿದೆ.
ಇದು ಸರ್ಕಾರಿ ಏಜೆನ್ಸಿಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ. ರಾಜ್ಯ-ಕೇಂದ್ರಗಳ ನಡುವಿನ ಘರ್ಷಣೆಯನ್ನು ಹೆಚ್ಚು ಮಾಡುತ್ತದೆ. ಪ್ರಜಾಪ್ರಭುತ್ವದ ಮೂಲ ಆಶಯವನ್ನು ಮಣ್ಣುಗೂಡಿಸುತ್ತದೆ. ಬಹುತ್ವ ಭಾರತಕ್ಕೆ ಭಂಗ ತರುತ್ತದೆ. ಕಳೆದ ಹನ್ನೆರಡು ವರ್ಷಗಳಿಂದ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಇದನ್ನೇ ‘ಆಡಳಿತ’ ಎನ್ನುತ್ತಿದೆ; ಭಕ್ತರು ಈಗಲೂ ಮೋದಿ ಭಜನೆಯಲ್ಲಿ ನಿರತರಾಗಿದ್ದಾರೆ. ಈ ದೇಶಕ್ಕೆ ಭವಿಷ್ಯವಿದೆಯೇ?





