ಅರಣ್ಯ ಸಂಪತ್ತನ್ನು ನಂಬಿ ಬದುಕುತ್ತಿದ್ದ ಬುಡಕಟ್ಟು ಜನಾಂಗ; ಪ್ರಕೃತಿಯನ್ನು ಪೊರೆಯುತ್ತಿದ್ದ ಆದಿವಾಸಿಗಳು ಮತ್ತು ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಡುತ್ತಿದ್ದ ನಕ್ಸಲರನ್ನು ಸರ್ಕಾರ ಸದ್ದಡಗಿಸಿದೆ. ಈಗ ಸರ್ಕಾರವೇ ಕಾರ್ಪೊರೇಟ್ ಕುಳಗಳಿಗೆ ಪರವಾನಗಿ ನೀಡಿ, ಪ್ರಕೃತಿ ಸಂಪತ್ತನ್ನು ಲೂಟಿ ಹೊಡೆಯಲು ರಹದಾರಿ ನಿರ್ಮಿಸಿಕೊಟ್ಟಿದೆ.
‘ದೇಶದಿಂದ ನಕ್ಸಲ್ ಭೀತಿಯನ್ನು ಸಂಪೂರ್ಣವಾಗಿ ಅಳಿಸಿಹಾಕಲು ಡಬಲ್ ಎಂಜಿನ್ ಸರ್ಕಾರ ಪ್ರಯತ್ನಿಸುತ್ತಿದೆ. ಈ ವರ್ಷದ ಮಾರ್ಚ್ 31ರೊಳಗೆ ನಕ್ಸಲ್ ನಿರ್ಮೂಲನೆ ಮಾಡಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗಡುವು ನೀಡಿದ್ದಾರೆ.
ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷಸತೆ ವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾವೋವಾದಿಗಳ ಹಣಕಾಸು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದೇವೆ. ನಕ್ಸಲರನ್ನು ದೇಶದಿಂದ ನಿರ್ಮೂಲನೆ ಮಾಡುತ್ತೇವೆ ಎಂಬ ದೃಢವಿಶ್ವಾಸದಲ್ಲಿದ್ದಾರೆ.
ಅದಕ್ಕೆ ಪೂರಕವಾಗಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದ ನಂತರ, ನಕ್ಸಲರ ನಿರ್ವಹಣೆ ವಿಧಾನ ಕೂಡ ಬದಲಾಗಿದೆ. ಈ ಅವಧಿಯಲ್ಲಿ ನಕ್ಸಲರ ದಾಳಿಯಲ್ಲಿ ನಾಗರಿಕರು ಮೃತಪಟ್ಟ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ಸರ್ಕಾರದ ಮುಂದೆ ಶಸ್ತ್ರತ್ಯಾಗ ಮಾಡಿ ಶರಣಾಗುವ ನಕ್ಸಲರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ ಮಧ್ಯ ಮತ್ತು ಪೂರ್ವ ಭಾರತದ ಅರಣ್ಯ–ಆದಿವಾಸಿ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಈಗಲೂ ಜೀವಂತವಿದೆ. ಇದನ್ನು ‘ರೆಡ್ ಕಾರಿಡಾರ್’ ಎಂದು ಕರೆಯಲಾಗುತ್ತದೆ. ದೇಶದಲ್ಲೇ ಅತ್ಯಧಿಕ ನಕ್ಸಲ್ ಚಟುವಟಿಕೆಗಳು ಇರುವ ರಾಜ್ಯಗಳೆಂದರೆ, ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ, ಬಿಹಾರ ಮತ್ತು ಮಹಾರಾಷ್ಟ್ರ. ಈಗ ಛತ್ತೀಸ್‌ಗಢದ ರಾಯ್‌ಪುರದಿಂದಲೇ ಗೃಹ ಸಚಿವ ಅಮಿತ್ ಶಾ, ನಕ್ಸಲ್ ನಿಗ್ರಹ ಕುರಿತು ಮಾತನಾಡಿರುವುದು.
ಇದನ್ನು ಓದಿದ್ದೀರಾ?: ಸ್ಪೀಕರ್ ನಡೆನುಡಿ ತಟಸ್ಥವಾಗಿರಬೇಕೆಂಬ ಸಂವಿಧಾನದ ಆಶಯದ ಸಾರಾಸಗಟು ಉಲ್ಲಂಘನೆಯಿದು!
ಗೃಹ ಸಚಿವ ಅಮಿತ್ ಶಾ ಹೀಗೆ ಮಾತನಾಡಲು ಕಾರಣವೂ ಇದೆ. ಅವರು ಪ್ರತಿನಿಧಿಸುವ ಸಂಘಪರಿವಾರ ಮತ್ತು ಬಿಜೆಪಿ ಕಟ್ಟಾ ಬಲಪಂಥೀಯರು. ಎಡಪಂಥೀಯ ನಕ್ಸಲರನ್ನು ಅವರು ಸಹಿಸುವುದಿಲ್ಲ. ಸರ್ಕಾರಿ ದಾಖಲೆಗಳಲ್ಲೂ ನಕ್ಸಲರನ್ನು ಎಡಪಂಥೀಯ ತೀವ್ರಗಾಮಿಗಳು ಎಂದೇ ಹೆಸರಿಸಲಾಗುತ್ತದೆ. ನಕ್ಸಲ್‌ವಾದವನ್ನು ದೇಶದ ಕಾನೂನು ಉಗ್ರವಾದ ಎಂದೇ ಪರಿಗಣಿಸುತ್ತದೆ. ಇದರ ಬಲದಿಂದಲೇ ನಕ್ಸಲರನ್ನು ಬಗ್ಗುಬಡಿದು, ಅಭಿವೃದ್ಧಿಯ ನೆಪದಲ್ಲಿ ಪ್ರಕೃತಿ ಸಂಪತ್ತು ಲೂಟಿ ಮಾಡುವುದು ಸರ್ಕಾರಕ್ಕೆ ಸುಲಭವಾಗಿದೆ.
ಈ ಹಿಂದಿನ ಯುಪಿಎ ಸರ್ಕಾರ ಕೂಡ ನಕ್ಸಲರ ಶರಣಾಗತಿ ಮತ್ತು ಪುನರ್ವಸತಿಗೆ ಆದ್ಯತೆ ನೀಡಿತ್ತು. ಪರಿಸ್ಥಿತಿ ಕೈ ಮೀರಿದಾಗ ಬಲಪ್ರಯೋಗವನ್ನೂ ನಡೆಸಿತ್ತು. 2014ರ ನಂತರ, ಬಿಜೆಪಿ ಸರ್ಕಾರ ಬಂದಮೇಲೆ, ಈ ಸರ್ಕಾರವೂ ಇದೇ ನೀತಿಯನ್ನು ಇನ್ನಷ್ಟು ತೀವ್ರವಾಗಿ ಜಾರಿಗೆ ತಂದಿತು. ಇದರ ಪರಿಣಾಮವಾಗಿ 10 ವರ್ಷಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಕ್ಸಲರು ಶರಣಾದರು. ಇದೇ ಸಂದರ್ಭದಲ್ಲಿ, ಅಳಿದುಳಿದ ನಕ್ಸಲರ ಕುರಿತು ಗೃಹ ಸಚಿವ ಅಮಿತ್ ಶಾ ಅವರ ನಕ್ಸಲ್ ಮುಕ್ತ ಹೇಳಿಕೆ ಮಹತ್ವ ಪಡೆಯುತ್ತದೆ. ಜೊತೆಗೆ ನಕ್ಸಲರು ಶಸ್ತ್ರತ್ಯಾಗ ಮಾಡಿ ಶರಣಾದರೆ ಪುನರ್ವಸತಿ ಕಲ್ಪಿಸುವುದಾಗಿ ಘೋಷಿಸಿರುವುದು, ಪ್ರಜಾಪ್ರಭುತ್ವದ ಆಶಯಕ್ಕೆ ಹತ್ತಿರವಾಗಿಯೇ ಇದೆ.
2019ರಲ್ಲಿ ಅಮಿತ್ ಶಾ ಗೃಹ ಸಚಿವರಾದ ನಂತರ ನಕ್ಸಲ್ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ. ಗೃಹ ಮಂತ್ರಾಲಯದ ಅಧಿಕೃತ ಮಾಹಿತಿ ಮತ್ತು ವರದಿಗಳ ಪ್ರಕಾರ, 2019ರಲ್ಲಿ ನಕ್ಸಲ್ ಪ್ರಭಾವಿತ ಜಿಲ್ಲೆಗಳ ಸಂಖ್ಯೆ 90 ಇದ್ದದ್ದು, 2025ರ ಹೊತ್ತಿಗೆ ಕೇವಲ 12ಕ್ಕೆ ಇಳಿದಿದೆ. ಛತ್ತೀಸ್‌ಗಢವೊಂದರಲ್ಲಿಯೇ 237 ನಕ್ಸಲರನ್ನು ಹತ್ಯೆ ಮಾಡಲಾಗಿದೆ, 812 ಮಂದಿಯನ್ನು ಬಂಧಿಸಲಾಗಿದೆ ಮತ್ತು 723 ಮಂದಿ ಶರಣಾಗಿದ್ದಾರೆ.
ಬಲಪಂಥೀಯ ಒಲವುಳ್ಳ ಸುದ್ದಿಮಾಧ್ಯಮಗಳು ಮತ್ತು ಪತ್ರಕರ್ತರಿಗೆ ಇದು ಗೃಹ ಸಚಿವ ಅಮಿತ್ ಶಾ ಅವರ ಸಾಧನೆಯಂತೆ ಕಾಣಿಸುತ್ತದೆ. ಆದ್ಯತೆ ನೀಡಿ ಪ್ರಕಟಿಸುತ್ತವೆ, ಪ್ರಚಾರ ಒದಗಿಸುತ್ತವೆ. ಅದನ್ನು ಓದುವ, ಕೇಳುವ, ನೋಡುವ ದೇಶದ ಪ್ರಜೆಗಳಿಗೂ, ಬಿಜೆಪಿ ಸರ್ಕಾರ ಒಳ್ಳೆಯ ಕೆಲಸವನ್ನೇ ಮಾಡುತ್ತಿದೆ ಎನಿಸುತ್ತದೆ. ಈ ನಂಬಿಸುವ ನಾಟಕದಲ್ಲಿ ಗೋದಿ ಮೀಡಿಯಾ ಬಿಜೆಪಿಗರ ನೆರವಿಗೆ ನಿಂತಿದೆ. ಹೀಗಾಗಿ ಬಿಜೆಪಿಗೆ ಎಲ್ಲವೂ ಸಲೀಸು ಎನಿಸಿದೆ. ದೇಶವನ್ನು ನಕ್ಸಲ್ ಮುಕ್ತ ಮಾಡಿದ ಕೀರ್ತಿಗೆ ಬಿಜೆಪಿ ಭಾಜನವಾಗುತ್ತಿದೆ.
ಇದನ್ನು ತಮ್ಮ ಗೆಲುವೆಂದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೊಳ್ಳುತ್ತಿದ್ದಾರೆ. ಹೌದು, ಸದ್ಯಕ್ಕೆ ಸೋತವರು ನಕ್ಸಲರಾಗಿರಬಹುದು. ಆದರೆ ಗೆದ್ದವರು ಯಾರು? ಸರ್ಕಾರವೇ, ಕಾರ್ಪೊರೇಟ್ ಕುಳಗಳೇ?
ಅರಣ್ಯ ಸಂಪತ್ತನ್ನು ನಂಬಿ ಬದುಕುತ್ತಿದ್ದ ಬುಡಕಟ್ಟು ಜನಾಂಗ; ಪ್ರಕೃತಿಯನ್ನು ಪೊರೆಯುತ್ತಿದ್ದ ಆದಿವಾಸಿಗಳು ಮತ್ತು ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಡುತ್ತಿದ್ದ ನಕ್ಸಲರನ್ನು ಸರ್ಕಾರ ಸದ್ದಡಗಿಸಿದೆ. ಈಗ ಸರ್ಕಾರವೇ ಕಾರ್ಪೊರೇಟ್ ಕುಳಗಳ ಮುಂದೆ ನಡುಬಗ್ಗಿ ನಿಂತಿದೆ. ಅಭಿವೃದ್ಧಿಯ ನೆಪದಲ್ಲಿ ಪರವಾನಗಿ ನೀಡಿ, ಪ್ರಕೃತಿ ಸಂಪತ್ತನ್ನು ಲೂಟಿ ಹೊಡೆಯಲು ರಹದಾರಿ ನಿರ್ಮಿಸಿಕೊಟ್ಟಿದೆ. ಮತ್ತು ಆ ಕಾರ್ಪೊರೇಟ್ ಕಂಪನಿಗಳಿಂದ ಕೋಟ್ಯಂತರ ರೂಪಾಯಿ ದೇಣಿಗೆ ಪಡೆಯುತ್ತಿದೆ.
ಇತ್ತ, ಅಮಿತ್ ಶಾ ಅವರು ಛತ್ತೀಸ್‌ಗಢದ ರಾಯ್‌ಪುರದಲ್ಲಿ ಕುಳಿತು ನಕ್ಸಲ್ ನಿಗ್ರಹದ ಬಗ್ಗೆ ಮಾತನಾಡುತ್ತಿರುವಾಗಲೇ, ಅತ್ತ ಅರಣ್ಯ ಸಂಪತ್ತನ್ನು, ಸಮೃದ್ಧ ಖನಿಜ ನಿಕ್ಷೇಪಗಳನ್ನು ಲೂಟಿ ಮಾಡಲು ಹಿಂಜರಿಯುತ್ತಿದ್ದ ಕಾರ್ಪೊರೇಟ್ ಕಂಪನಿಗಳು ಕೇಕೆ ಹಾಕುತ್ತಿವೆ. ಈ ಕಾರ್ಪೊರೇಟ್ ಕಂಪನಿಗಳು ಎಂದರೆ ಬೇರಾರೂ ಅಲ್ಲ, ಅದು ಪ್ರಧಾನಿ ಮೋದಿಯವರ ಅತ್ಯಾಪ್ತ ಗೌತಮ್ ಅದಾನಿ. ಈಗ ಇವರು ಪ್ರಭುತ್ವವನ್ನೇ ರಕ್ಷಣೆಗೆ ನಿಲ್ಲಿಸಿಕೊಂಡಿದ್ದಾರೆ. ಪ್ರಜಾತಾಂತ್ರಿಕ ಮಾರ್ಗದಲ್ಲಿ ದನಿ ಎತ್ತುತ್ತಿದ್ದ ಆದಿವಾಸಿಗಳು, ಬುಡಕಟ್ಟು ಜನಾಂಗ ಮತ್ತು ನಕ್ಸಲರ ವಿರುದ್ಧ ಪೊಲೀಸರನ್ನು ಬಳಸಿಕೊಂಡು ಉಸಿರೆತ್ತದಂತೆ ಮಾಡಿದ್ದಾರೆ.
ಗೌತಮ್ ಅದಾನಿಯವರ ನೇತೃತ್ವದ ಅದಾನಿ ಗ್ರೂಪ್ ಭಾರತದಲ್ಲಿ ಮುಖ್ಯವಾಗಿ ಕಲ್ಲಿದ್ದಲು, ಕಬ್ಬಿಣದ ಅದಿರು ಮತ್ತು ಬಾಕ್ಸೈಟ್ ಗಣಿಗಾರಿಕೆಯಲ್ಲಿ ತೊಡಗಿದ್ದು, ಪ್ರಸ್ತುತ ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಛತ್ತೀಸ್‌ಗಢದಲ್ಲಿಯೇ ಅದಾನಿ ಗ್ರೂಪ್ ಅತಿ ದೊಡ್ಡ ಗಣಿಗಾರಿಕೆ ಕೇಂದ್ರ ಹೊಂದಿದೆ.
ಇದನ್ನು ಓದಿದ್ದೀರಾ?: ಮೊಬೈಲ್ ಮೃತ್ಯು ಮೋಡಿಯಿಂದ ಮಕ್ಕಳನ್ನು ರಕ್ಷಿಸುವವರಾರು?
ಇತ್ತೀಚಿಗೆ ಅರಾವಳಿ ಬೆಟ್ಟಗಳನ್ನು ಬಗೆಯಲು ಸರ್ಕಾರವೇ ಮುಂದೆ ನಿಂತು ಅದಾನಿ ಕಂಪನಿಗೆ ಪರವಾನಗಿ ಕೊಟ್ಟಿದ್ದನ್ನು ಜನ ಉಗ್ರವಾಗಿ ವಿರೋಧಿಸಿದರು. ಅದು ದೇಶದಾದ್ಯಂತ ಸದ್ದು ಮಾಡಿತು. ಜನವಿರೋಧಕ್ಕೆ ಬೆದರಿದ ಸರ್ಕಾರ ಮತ್ತು ಅದಾನಿ, ಸದ್ಯಕ್ಕೆ ಸುಮ್ಮನಾಗಿದ್ದಾರೆ. ಕಾಲ ಸರಿದಂತೆ, ಅವರು ಅಂದುಕೊಂಡದ್ದನ್ನು ಮಾಡುತ್ತಾರೆ.
ಈಗ ಹೇಳಿ, ನಕ್ಸಲರ ನಿಗ್ರಹ ಯಾರಿಗಾಗಿ? ದೇಶದ ಪ್ರಕೃತಿ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಅದಾನಿ ಗ್ರೂಪ್ ಬೆನ್ನಿಗೆ ನಿಂತಿರುವ ಪ್ರಧಾನಿ ಮತ್ತು ಗೃಹ ಸಚಿವರು, ದೇಶಭಕ್ತರೇ? ಇವರು ದೇಶ ಉದ್ಧಾರ ಮಾಡುವವರೇ?





