ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ತಮ್ಮ ವೃತ್ತಿಜೀವನದ ಮುಖ್ಯ ಘಟ್ಟದಲ್ಲಿದ್ದಾರೆ. ಅವರು ಪ್ರತಿ ಬಾರಿ ಮೈದಾನಕ್ಕೆ ಇಳಿದಾಗಲೂ ದಾಖಲೆಗಳು ನಿರ್ಮಾಣವಾಗುತ್ತವೆ ಮತ್ತು ಮುರಿಯುತ್ತವೆ.
ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ, ತವರು ನೆಲದಲ್ಲಿ ಸರಣಿ ಸೋತು ಸುಣ್ಣಾಗಿದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೆಟ್ಟ ನಿರ್ಧಾರಗಳೇ ಕಾರಣ ಎನ್ನಲಾಗಿತ್ತು. ಅದಕ್ಕೆ ಪರಿಹಾರವೆಂಬಂತೆ, ಏಕದಿನ ಸರಣಿಗೆ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯವರ ಆಗಮನವಾಗಿತ್ತು. ಅದು ತಂಡದಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಹಾಗೆಯೇ ಹಲವು ದಿನಗಳ ನಂತರ ತಂಡಕ್ಕೆ ಮರಳಿದ ಹಿರಿಯ ಆಟಗಾರರಲ್ಲಿ ಆಡಲೇಬೇಕಾದ ಒತ್ತಡವನ್ನೂ ಅದು ಸೃಷ್ಟಿಸಿತ್ತು.
ಆ ಒತ್ತಡ ಮತ್ತು ಉತ್ಸಾಹಕ್ಕೆ ಉತ್ತರವೆಂಬಂತೆ ನಿನ್ನೆ ರಾಯಪುರ ಕ್ರಿಕೆಟ್ ಮೈದಾನದಲ್ಲಿ ಸೌತ್ ಆಫ್ರಿಕಾ ವಿರುದ್ಧದ ಎರಡನೆ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಸಿಡಿಲಬ್ಬರದ ಶತಕವಿತ್ತು. ಅದರಲ್ಲೂ 93 ಬಾಲ್‌ಗಳಲ್ಲಿ 102 ರನ್ ಗಳಿಸಿದ ಕೊಹ್ಲಿಯ ಕಲಾತ್ಮಕ ಆಟ ನೋಡುಗರ ಮೆಚ್ಚುಗೆ ಗಳಿಸಿತ್ತು. ಋತುರಾಜ್ ಗಾಯಕ್ವಾಡ್‌ರೊಂದಿಗಿನ 197 ರನ್‌ಗಳ ಜೊತೆಯಾಟವಂತೂ- ಹಳೆ ಬೇರು ಹೊಸ ಚಿಗುರಿನ ಮಿಲನದಂತಿತ್ತು. ಕಳೆದ ಭಾನುವಾರವಷ್ಟೇ ರಾಂಚಿ ಮೈದಾನದಲ್ಲಿ ಸೆಂಚುರಿ ಸಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ, ತಂಡದ ಗೆಲುವಿಗೆ ಕಾರಣರಾಗಿದ್ದ ಕೊಹ್ಲಿ, ಇಂದು ಮತ್ತೊಂದು ಸೆಂಚುರಿ ಬಾರಿಸಿ, ಸಹಆಟಗಾರರಲ್ಲಿ ಹುರುಪು-ಹುಮ್ಮಸ್ಸು ತುಂಬಿದ್ದರು. ಭಾರತೀಯ ಕ್ರಿಕೆಟ್‌ಗೆ ಕಳೆ ತಂದಿದ್ದರು.
ಇದನ್ನು ಓದಿದ್ದೀರಾ?: ‘ಸಂಚಾರ್ ಸಾಥಿ’ ಕಣ್ಗಾವಲು ಸನ್ನಾಹ, ವೇಷ ಬದಲಿಸಿ ಬಂದೀತು ಹುಷಾರ್!
ಭಾರತ ಕ್ರಿಕೆಟ್ ತಂಡ ಭಾರೀ ಮೊತ್ತ ಪೇರಿಸಿದರೂ, ಬೌಲರ್‍ಗಳು ಉತ್ತಮವಾಗಿ ಬೌಲ್ ಮಾಡಿದರೂ, ಫೀಲ್ಡಿಂಗ್ ಕೈ ಕೊಟ್ಟಿತ್ತು. ಅದರ ಲಾಭ ಪಡೆದ ಸೌತ್ ಆಫ್ರಿಕಾದ ನಾಯಕ ಮರ್ಕರಂ, ಬ್ರೀಟ್ಜ್‌ಸ್ಕಿ ಮತ್ತು ಬ್ರೆವಿಸ್ ಗೆಲುವನ್ನು ನಾಜೂಕಾಗಿ ಕಸಿದುಕೊಂಡಿದ್ದರು. ಭಾರತ ಸೋತರೂ ಆಟಗಾರರು ಕ್ರೀಡಾಸ್ಫೂರ್ತಿ ಮೆರೆದಿದ್ದರು. ಆಟ ಗೆಲ್ಲುವಂತೆ ನೋಡಿಕೊಂಡಿದ್ದರು.
ಇದರ ನಡುವೆಯೇ ‘ರನ್ ಮಷಿನ್’ ಖ್ಯಾತಿಯ, ಮೂವತ್ತೇಳರ ಹರೆಯದ ವಿರಾಟ್ ಕೊಹ್ಲಿ, ಅಭಿಮಾನಿಗಳು ಸದಾ ನೆನಪಿಸಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ನೀಡಿ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಕುತೂಹಲಕರ ಸಂಗತಿ ಎಂದರೆ, ವಯಸ್ಸನ್ನು ಮುಂದೆ ಮಾಡಿ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಒಬ್ಬ ಆಟಗಾರ ತನ್ನೆಲ್ಲ ಪ್ರತಿಭೆಯನ್ನು ಬಸಿದಿಟ್ಟು ಆಡುವ ಕಾಲ ಮುಗಿದಿದೆ ಎಂದು ಆತನಿಗೇ ಅನ್ನಿಸಿದಾಗ, ವಿದಾಯ ಉತ್ತಮ ನಿರ್ಧಾರವಾಗಿತ್ತು. ಅದು ಆತನ ದೇಹ ಮತ್ತು ಮನಸ್ಸಿಗೆ ಕೊಡುವ ಮರ್ಯಾದೆ ಎನಿಸಿತ್ತು.
ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ದೇಹ ಮತ್ತು ಮನಸ್ಸು ಮಾಗುತ್ತದೆ. ಹೊಸಗಾಲದ ಹುರುಪಿನ ಹುಡುಗರೊಂದಿಗೆ ಬೆರೆಯುವುದು ಬೇಡವಾಗುತ್ತದೆ. ವೇಗದ ಬೌಲಿಂಗ್‌ಗೆ ಕಣ್ಣು ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ. ಆಗ ಆಟ ಸಹಜವಾಗಿಯೇ ಕೈ ಕೊಡುತ್ತದೆ. ಅದು ಒಬ್ಬ ಜನಪ್ರಿಯ ಆಟಗಾರನಿಗೆ ಅತ್ಯಂತ ಮುಜುಗರ ತರುವ ಕ್ಷಣವಾಗುತ್ತದೆ.
1970, 80, 90ರ ದಶಕದಲ್ಲಿ ಕ್ರಿಕೆಟ್ ಆಟ ಎನ್ನುವುದು ನಿಜಕ್ಕೂ ಜಂಟಲ್ ಮನ್ಸ್ ಪ್ಲೇ ಆಗಿತ್ತು. ಕಲಾತ್ಮಕ ಆಟಕ್ಕೆ, ಪ್ರತಿಭಾನ್ವಿತ ಆಟಗಾರರಿಗೆ ಬೆಲೆ ಇತ್ತು. ಏಕದಿನ ಮತ್ತು ಟಿ20 ಪಂದ್ಯಗಳ ಆಟ ಜನಪ್ರಿಯತೆ ಗಳಿಸುತ್ತಿದ್ದ ದಿನಗಳಲ್ಲಿ, ಟೆಸ್ಟ್ ಕ್ರಿಕೆಟ್ ಆಡುವುದು ಬಹಳ ಮುಖ್ಯವಾಗಿತ್ತು. ಅದು ಆಟಗಾರರ ಸಹನೆ, ತಾಳ್ಮೆ ಬೇಡುತ್ತಿತ್ತು. ಇನ್ನಿಂಗ್ಸ್ ಕಟ್ಟುವ ಕಲೆ ಕಲಿಸುತ್ತಿತ್ತು. ಆಟಗಾರರನ್ನು ಪಳಗಿಸುವ ಆಟದ ಮಾದರಿಯಾಗಿತ್ತು. ಪರಿಪೂರ್ಣ ಆಟಗಾರನಾಗಿ ಹೊರಹೊಮ್ಮುವ ವೇದಿಕೆಯಾಗಿತ್ತು.
ಪ್ರೇಕ್ಷಕರು ಕೂಡ ಆಟವನ್ನು ಆಟವನ್ನಾಗಿಯೇ ನೋಡಿ, ದೇಶ-ಭಾಷೆಗಳ ಗಡಿ ಮೀರಿ ಮೆಚ್ಚಿ ಮಾತನಾಡುತ್ತಿದ್ದರು. ಪತ್ರಿಕೆಗಳು ಎಷ್ಟು ಬೇಕೋ ಅಷ್ಟು ಮಾಹಿತಿ ಮಾತ್ರ ಉಣಬಡಿಸುತ್ತಿದ್ದವು. ಆದರೆ ಭಾರತ ತಂಡಕ್ಕೆ ಸಚಿನ್ ತೆಂಡೂಲ್ಕರ್ ಎಂಬ ಆಟಗಾರನ ಆಗಮನವಾಯಿತು. ಆಟದ ವೈಭವದ ದಿನಗಳು ಗತ ಸೇರಿ, ದಾಖಲೆಗಾಗಿ ಆಡುವ, ಜನಪ್ರಿಯತೆ ಗಳಿಸುವ, ಆ ಜನಪ್ರಿಯತೆಯನ್ನು ಅಡವಿಟ್ಟು ಜಾಹೀರಾತು ಜಗತ್ತಿನಲ್ಲಿ ಹಣ ಗಳಿಸುವ ಹೊಸ ಮಾದರಿ ಚಾಲ್ತಿಗೆ ಬಂದಿತು.
ಈ ಮಾದರಿಯ ಮಾಡಿಫೈಡ್ ತಳಿಯೇ ವಿರಾಟ್ ಕೊಹ್ಲಿ. ಸಚಿನ್ ಮಾದರಿ ಕೊಹ್ಲಿಗೆ ಅನುಕೂಲಕರ ಮಾರ್ಗವನ್ನು ತೆರೆದಿಟ್ಟಿತು. ಆಟದ ಶೈಲಿಯಿಂದ ಹಿಡಿದು, ಮೈದಾನದಲ್ಲಿ ಆಟಗಾರರೊಂದಿಗೆ ಬೆರೆಯುವವರೆಗೆ; ಆಡಳಿತ ಮಂಡಳಿಯೊಂದಿಗೆ ವ್ಯವಹರಿಸುವುದರಿಂದ ಹಿಡಿದು ಜಾಹೀರಾತು ಜಗತ್ತಿನ ಸಾವಿರಾರು ಕೋಟಿಗಟ್ಟಲೆ ವ್ಯವಹಾರದವರೆಗೆ- ವಿರಾಟ್ ಹೊಸ ವಿಧಾನ ಹುಟ್ಟುಹಾಕಿದರು. ಅಲ್ಲಿ ಆತನ ಅಪ್ರತಿಮ ಆಟವಿದೆ, ಸಹಆಟಗಾರರನ್ನು ಅಪ್ಪಿಕೊಳ್ಳುವ ಪ್ರೀತಿಯಿದೆ, ಯಾರೊಂದಿಗೂ ಶತ್ರುತ್ವ ಕಟ್ಟಿಕೊಳ್ಳದ ವ್ಯವಹಾರ ಗುಣವಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಮೀಡಿಯಾ ಮ್ಯಾನೇಜ್ ಮಾಡುವ ಕಲೆ ಕರಗತವಾಗಿದೆ. ಇದಕ್ಕೆ ಕಳಶವಿಟ್ಟಂತೆ, ಸಿನೆಮಾ ಜಗತ್ತಿನ ಅನುಷ್ಕಾ ಶರ್ಮಾ ಎಂಬ ಮಡದಿಯ ಜನಪ್ರಿಯತೆ ಜೊತೆಯಾಗಿದೆ.
ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ತಮ್ಮ ವೃತ್ತಿಜೀವನದ ಮುಖ್ಯ ಘಟ್ಟದಲ್ಲಿದ್ದಾರೆ. ಅವರು ಪ್ರತಿ ಬಾರಿ ಮೈದಾನಕ್ಕೆ ಇಳಿದಾಗಲೂ ದಾಖಲೆಗಳು ನಿರ್ಮಾಣವಾಗುತ್ತವೆ ಮತ್ತು ಮುರಿಯುತ್ತವೆ. 37ರ ಹರೆಯದಲ್ಲಿಯೂ ಮೈದಾನದಲ್ಲಿರುವ ಸಹ ಆಟಗಾರರಿಗಿಂತ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೊಹ್ಲಿ ಹೆಚ್ಚು ಫಿಟ್ ಆಗಿದ್ದಾರೆ. ‘ನನ್ನ ಪ್ರಕಾರ ತಯಾರಿ ಎಂದರೆ ದೈಹಿಕಕ್ಕಿಂತ ಹೆಚ್ಚು ಮಾನಸಿಕ’ ಎನ್ನುವ ಕೊಹ್ಲಿ, ಅದನ್ನು ರಾಂಚಿ ಮತ್ತು ರಾಯಪುರದಲ್ಲಿ ತೋರಿದ್ದಾರೆ. ಒತ್ತಡವನ್ನು ನಿಭಾಯಿಸುವ ನೈಪುಣ್ಯತೆಯನ್ನು ಸಹ ಆಟಗಾರರೊಂದಿಗೆ ಹಂಚಿಕೊಂಡಿದ್ದಾರೆ.
ರಾಂಚಿಯಲ್ಲಿ ಮೂರು ಗಂಟೆಗಳ ಕಾಲ ನಿಂತು, ರೋಹಿತ್ ಜೊತೆ 136 ರನ್‌ಗಳ ಜೊತೆಯಾಟವಾಗಿರಬಹುದು; ರಾಯಪುರದಲ್ಲಿ ಋತುರಾಜ್ ಗಾಯಕ್ವಾಡ್ ಅವರೊಂದಿಗೆ 4ನೇ ವಿಕೆಟ್ ಪಾಲುದಾರಿಕೆಯಲ್ಲಿ 195 ರನ್ ಕಲೆಹಾಕಿದ್ದಾಗಿರಬಹುದು- ಆ ಜೊತೆಯಾಟವೂ ಒಂದು ದಾಖಲೆಯಾಗಿದೆ. ಇಲ್ಲಿಯವರೆಗೆ 32 ಬಾರಿಯ ಜೊತೆಯಾಟದಲ್ಲಿ 150ಕ್ಕೂ ಹೆಚ್ಚು ರನ್ ಪೇರಿಸಿದ ದಾಖಲೆ ಕ್ರಿಕೆಟ್ ‘ದೇವರ’ ಹೆಸರಿನಲ್ಲಿತ್ತು. ಕೊಹ್ಲಿ 33ನೇ ಬಾರಿ 150ಕ್ಕಿಂತ ಅಧಿಕ ರನ್ ಸೇರಿಸಿದ ಜೊತೆಯಾಟವಾಡಿ, ‘ದೇವರ’ ದಾಖಲೆಯನ್ನು ಮುರಿದಿದ್ದಾರೆ.
ಇದನ್ನು ಓದಿದ್ದೀರಾ?: ವರ್ತಮಾನದ ತಲ್ಲಣಗಳಿಗೆ ನಾರಾಯಣ ಗುರು – ಗಾಂಧಿಯೇ ಉತ್ತರ
ಹಾಗೆಯೇ ಏಕದಿನ ಪಂದ್ಯಗಳಲ್ಲಿ ಪ್ರಚಂಡ ಬ್ಯಾಟಿಂಗ್ನೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ 49 ಶತಕಗಳ ವಿಶ್ವ ದಾಖಲೆಯನ್ನು, ಕೊಹ್ಲಿ ಈ ಹಿಂದೆಯೇ ಅಳಿಸಿ ಹಾಕಿದ್ದರು. ರಾಂಚಿಯಲ್ಲಿ ಗಳಿಸಿದ ಶತಕ ಮತ್ತು ರಾಯಪುರದಲ್ಲಿ ಸಿಡಿಸಿದ ಸೆಂಚುರಿಯೂ ಸೇರಿ ಈಗ ಕೊಹ್ಲಿ 53 ಶತಕಗಳ ಸರದಾರ. ವಿಶೇಷವೆಂದರೆ, ರಾಂಚಿಯಲ್ಲಿ ಕೊಹ್ಲಿ ಬಾರಿಸಿದ ಶತಕವು ಅಂತಾರಾಷ್ಟ್ರೀಯ ಕ್ರಿಕೆಟ್ನ ಏಳು ಸಾವಿರದ ಸೆಂಚುರಿ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೆ ಒಟ್ಟು 7 ಸಾವಿರ ಶತಕಗಳು ಸಿಡಿಸಲ್ಪಟ್ಟಿವೆ. ಇದರಲ್ಲಿ 7000ನೇ ಶತಕ ಬಾರಿಸಿದ್ದು ವಿರಾಟ್ ಕೊಹ್ಲಿ. ಹೀಗಾಗಿ ಈ ವಿಶೇಷ ದಾಖಲೆಯೂ ಕೊಹ್ಲಿಯದೇ ಆಗಿದೆ. ಜೊತೆಗೆ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಶುಭಮನ್ ಗಿಲ್ ಹಿಂದಿಕ್ಕಿ 4ನೇ ಸ್ಥಾನಕ್ಕೇರಿದ್ದಾರೆ. ವೈಯಕ್ತಿಕ ರ್‍ಯಾಂಕಿಂಗ್ ಪಾಯಿಂಟ್(751) ಪಟ್ಟಿಯಲ್ಲಿ ರೋಹಿತ್ ಶರ್ಮಾ(783)ರ ಹತ್ತಿರ ಸಾಗುತ್ತಿದ್ದಾರೆ.
ವಿರಾಟ್ ಕೊಹ್ಲಿಯ ಆಟ ಮತ್ತು ವ್ಯಕ್ತಿತ್ವವೇ ವಿಭಿನ್ನ, ಆತನ ಕಲಾತ್ಮಕ ಆಟ ನೋಡುವುದೇ ಚೆಂದ. ಮೈದಾನದಲ್ಲಿದ್ದಷ್ಟು ಹೊತ್ತು ಪಾದರಸದಂತೆ ಪುಟಿದೇಳುವ ಕೊಹ್ಲಿ(ಟೆಸ್ಟ್-30, ಏಕದಿನ-53) ಪಂದ್ಯದಿಂದ ಪಂದ್ಯಕ್ಕೆ ಸಚಿನ್ ಅವರ ನೂರು(ಟೆಸ್ಟ್-51, ಏಕದಿನ-49) ಶತಕಗಳ ದಾಖಲೆಗೆ ಹತ್ತಿರವಾಗುತ್ತಿದ್ದಾರೆ. ಹಾಗೆಯೇ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡಲು ಸಿದ್ಧ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.





