ಈ ದಿನ ಸಂಪಾದಕೀಯ | ಇನ್ನಾದರೂ ಪ್ರೀತಿ ಬಿತ್ತೋಣ, ಮಾನವೀಯತೆ ಮೆರೆಯೋಣ…

Date:

ಸಂಘಪರಿವಾರ, ಬಿಜೆಪಿ ನಾಯಕರು ಬಿತ್ತಿದ ದ್ವೇಷ ಮತ್ತು ಅಸಹನೆಯ ಫಲವಾಗಿ ದೇಶದ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರಿಶ್ಚಿಯನ್ನರು ನಿತ್ಯ ನರಳುತ್ತಿದ್ದಾರೆ. ಬಹುಸಂಖ್ಯಾತ ಹಿಂದೂಗಳು ಬಿತ್ತಿದ ದ್ವೇಷದ ಬೀಜ, ಈಗ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಬೆಳೆಯುತ್ತಿದೆ.

ಡಿಸೆಂಬರ್ 22, 2025ರಂದು ಥಾಯ್ಲೆಂಡ್ ಸೈನ್ಯ ಜೆಸಿಬಿ ಬಳಸಿ, ಕಾಂಬೋಡಿಯಾದ ವಿಷ್ಣುವಿನ ಪ್ರತಿಮೆಯನ್ನು ಕೆಡವಿ ನೆಲಸಮಗೊಳಿಸಿತು. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು. ಅದನ್ನು ಅನಾಮತ್ ಎತ್ತಿಕೊಂಡ ಭಾರತದ ಮಾಧ್ಯಮಗಳು, ‘ಹಿಂದೂಗಳ ಆರಾಧ್ಯದೈವ ವಿಷ್ಣು ಮೂರ್ತಿಯನ್ನು ಹೊಡೆದುರುಳಿಸಲಾಗಿದೆ. ದೇವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ. ಅಲ್ಪಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಲಾಗಿದೆ’ ಎಂದು ಬೊಬ್ಬೆ ಹೊಡೆದವು.

ಇದು ಸಹಜವಾಗಿಯೇ ಭಾರತದ ಬಹುಸಂಖ್ಯಾತ ಹಿಂದೂಗಳನ್ನು ಕೆರಳಿಸುವ ಸುದ್ದಿಯಾಗಿತ್ತು. ಪ್ರಪಂಚದ ಇತರ ಭಾಗಗಳಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿಗಳಾಗುತ್ತಿವೆ ಎಂಬ ಸುದ್ದಿಗೆ ಹೊಸ ಸೇರ್ಪಡೆಯಾಗಿತ್ತು. ಕಾಕತಾಳೀಯವೆಂಬಂತೆ ಆ ಘಟನೆ ಕುರಿತು ಸಂಘಪರಿವಾರ ಮತ್ತು ಬಿಜೆಪಿ ನಾಯಕರು ಪ್ರತಿಕ್ರಿಯಿಸಿ, ಹಿಂದೂಗಳ ವಕ್ತಾರರಂತೆ ವರ್ತಿಸತೊಡಗಿದರು. ಉರಿಯುವ ಸುದ್ದಿ ಎಂಬ ಬೆಂಕಿಗೆ ತುಪ್ಪ ಸುರಿದು ದೇಶವನ್ನು ವ್ಯಾಪಿಸುವಂತೆ ನೋಡಿಕೊಂಡರು. ಅಲ್ಲಿಗೆ ಆಡಳಿತಾರೂಢ ಬಿಜೆಪಿ ನಾಯಕರು ಹಾಗೂ ಅವರ ತುತ್ತೂರಿಯಾಗಿರುವ ಮಾಧ್ಯಮಗಳು ಬಹುಸಂಖ್ಯಾತ ಹಿಂದೂಗಳ ಅನುಕಂಪ ಗಿಟ್ಟಿಸಿದ್ದರು. ಆ ಮೂಲಕ ಸ್ವಾರ್ಥ ಸಾಧಿಸಿಕೊಂಡಿದ್ದರು.

ಇದನ್ನು ಓದಿದ್ದೀರಾ?: ಕ್ರಿಸ್ಮಸ್‌ ಆಚರಣೆಗೆ ಅಡ್ಡಿ; ಭಾರತದ ಬಹುತ್ವದ ಮೇಲಿನ ಈ ದಾಳಿ ಅಕ್ಷಮ್ಯ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಸಲಿಗೆ ಅದು ಕಾಂಬೋಡಿಯಾ ಮತ್ತು ಥಾಯ್ಲೆಂಡ್ ನಡುವಿನ ಗಡಿವಿವಾದ. ಹಲವಾರು ವರ್ಷಗಳಿಂದ ನಡೆಯುತ್ತಿರುವ ಆಂತರಿಕ ಕಚ್ಚಾಟ. ಕಾಂಬೋಡಿಯಾದ ವಿಷ್ಣು ಪ್ರತಿಮೆ ವಿವಾದಿತ ಪ್ರದೇಶದಲ್ಲಿತ್ತು ಎಂದು ಥಾಯ್ಲೆಂಡ್ ಹೊಡೆದುರುಳಿಸಿತ್ತು. ಆದರೆ, ಇಲ್ಲಿ, ಭಾರತದಲ್ಲಿ ಹಿಂದೂಗಳ ಮೇಲಿನ ದಾಳಿಯಾಗಿ ಪರಿವರ್ತನೆಯಾಗಿತ್ತು.

2024ರ ಆಗಸ್ಟ್‌ನಲ್ಲಿ ನಡೆದ ರಾಜಕೀಯ ಕ್ಷಿಪ್ರಕ್ರಾಂತಿಯ ನಂತರ ನೆರೆಯ ಬಾಂಗ್ಲಾದೇಶದಲ್ಲಿ ಆಂತರಿಕ ಕಲಹವುಂಟಾಗಿ ರಾಜಕೀಯ ಅಸ್ಥಿರತೆ ನೆಲೆಯೂರಿತ್ತು. ಆ ನೆಪದಲ್ಲಿ ನಡೆದ ಗಲಭೆಯಲ್ಲಿ ಕೆಲವು ಮೂಲಭೂತವಾದಿಗಳು ಅಮಾಯಕರನ್ನು ಹತ್ಯೆ ಮಾಡಿದ್ದರು. ಇತ್ತೀಚೆಗೆ ದೀಪುಚಂದ್ರ ದಾಸ್, ಅಮೃತ್ ಮಂಡಲ್ ಅವರನ್ನು ಹಿಂದೂಗಳು ಎಂಬ ಕಾರಣಕ್ಕಾಗಿ ಸಾಮೂಹಿಕವಾಗಿ ಹೊಡೆದು ಸಾಯಿಸಿದ ಹೀನ ಕೃತ್ಯವೂ ಘಟಿಸಿತು. ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮನೆಗಳಿಗೆ ಬೆಂಕಿ, ಹಲ್ಲೆ, ಹತ್ಯೆ ಸುದ್ದಿಗಳು ನಿತ್ಯ ನಿರಂತರವಾದವು.

ಬಾಂಗ್ಲಾದೇಶದ ಅಲ್ಪಸಂಖ್ಯಾತರಾದ ಹಿಂದೂಗಳ ಹತ್ಯೆ ಖಂಡನೀಯ. ಆದರೆ, ಆ ವಿಷಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಆಸಕ್ತಿ ತಳೆದಿರುವ ಭಾರತೀಯ ಮಾಧ್ಯಮಗಳು ಆದ್ಯತೆ ನೀಡಿ ಸುದ್ದಿ ಮಾಡುತ್ತಿವೆ. ಇದು ಸಹಜವಾಗಿಯೇ ಬಹುಸಂಖ್ಯಾತ ಹಿಂದೂಗಳನ್ನು ಕೆರಳಿಸುತ್ತಿದೆ. ಅವರ ವಕ್ತಾರರಾಗಿರುವ ಬಿಜೆಪಿ ನಾಯಕರನ್ನು ಪ್ರತಿಕ್ರಿಯಿಸುವಂತೆ ಪ್ರೇರೇಪಿಸುತ್ತಿದೆ. ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ, ಬಿಜೆಪಿಯ ಸುವೇಂದು ಅಧಿಕಾರಿ, ‘ಇಸ್ರೇಲ್ ಗಾಝಾಗೆ ಪಾಠ ಕಲಿಸಿದಂತೆ ಬಾಂಗ್ಲಾದೇಶಕ್ಕೂ ಕಲಿಸಬೇಕು’ ಎಂದು ಆಕ್ರೋಶಭರಿತರಾಗಿ ಮಾಧ್ಯಮಗಳ ಬೆಂಕಿಗೆ ಗಾಳಿ ಹಾಕಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಾಂಗ್ಲಾದೇಶ, ನುಸುಳುಕೋರರು ಮತ್ತು ಅವರ ಪರವಾಗಿರೆಂದು ಭಾವಿಸುವ ಮಮತಾ ಬ್ಯಾನರ್ಜಿಯನ್ನು ಪರೋಕ್ಷವಾಗಿ ತಿವಿದಿದ್ದಾರೆ. ಬಹುಸಂಖ್ಯಾತ ಹಿಂದೂಗಳ ಕಣ್ಮಣಿಯಾಗಲು ಹವಣಿಸಿದ್ದಾರೆ.

ಇದನ್ನೆಲ್ಲ ಗಮನಿಸಿದರೆ, ಭಾರತೀಯ ಜನತಾ ಪಕ್ಷದ ನಾಯಕರ ಮತ್ತು ಭಾರತೀಯ ಮಾಧ್ಯಮಗಳ ಈ ಆತಂಕ ಪ್ರಾಮಾಣಿಕತೆಯಿಂದ ಕೂಡಿದೆಯೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಏಕೆಂದರೆ ಕೆಲವೇ ವರ್ಷಗಳ ಹಿಂದೆ, ಸಿಎಎ-ಎನ್ಆರ್‍‌ಸಿ ಕಾಯ್ದೆಗಳನ್ನು ತಂದ ಪ್ರಧಾನಿ ಮೋದಿಯವರ ಕೇಂದ್ರ ಸರ್ಕಾರ, ನೆರೆಯ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ದೇಶಕ್ಕೆ ಕರೆತರುವುದಾಗಿ; ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಅಲ್ಪಸಂಖ್ಯಾತರನ್ನು ದೇಶದಿಂದ ಹೊರಹಾಕುವುದಾಗಿ ಹೇಳಿಕೊಂಡಿತ್ತು.

ವಿಪರ್ಯಾಸಕರ ಸಂಗತಿ ಎಂದರೆ, ನೆರೆಯ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ದೇಶಕ್ಕೆ ಬಂದದ್ದು ತಿಳಿಯಲಿಲ್ಲ. ಬದಲಿಗೆ ಇಲ್ಲಿರುವ ಅಲ್ಪಸಂಖ್ಯಾತರನ್ನು ಸಂಶಯದಿಂದ ಕಂಡು, ಅನ್ಯರೆಂಬಂತೆ ಹೊರಗಟ್ಟಿದ್ದು ಸುದ್ದಿಯಾಯಿತು. ಅದರಲ್ಲೂ ಬಡ ಗರ್ಭಿಣಿ ಮತ್ತು ಆಕೆಯ ಎಂಟು ವರ್ಷದ ಮಗನನ್ನು ಭಾರತ ಸರಕಾರ ಅಕ್ರಮವಾಗಿ ಬಾಂಗ್ಲಾಕ್ಕೆ ಗಡಿಪಾರು ಮಾಡಿತ್ತು. ಅಸಲಿಗೆ ಅವರು ಭಾರತದ ಪ್ರಜೆಯಾಗಿದ್ದರು. ಬಡವರಾಗಿದ್ದರು, ಅಲ್ಪಸಂಖ್ಯಾತರಾಗಿದ್ದರು. ಬಾಂಗ್ಲಾ ನುಸುಳುಕೋರರು ಎಂದು ಆರೋಪಿಸಿ ತನ್ನದೇ ದೇಶದ ಪ್ರಜೆಗಳ ಮೇಲೆ ದೌರ್ಜನ್ಯ ಎಸಗಿತ್ತು. ಕೊನೆಗೆ ಸುಪ್ರೀಂಕೋರ್ಟ್‌ನ ಮಧ್ಯ ಪ್ರವೇಶದ ಬಳಿಕ ಸರಕಾರ ಆಕೆಯನ್ನು ಮತ್ತೆ ಭಾರತಕ್ಕೆ ಕರೆಸಿಕೊಳ್ಳಲು ಒಪ್ಪಿಕೊಂಡಿತು.

ಇದಷ್ಟೇ ಅಲ್ಲ, ಡಿಸೆಂಬರ್ 17ರಂದು ಕೇರಳದಲ್ಲಿ, ಛತ್ತೀಸಗಢದ ರಾಮನಾರಾಯಣ ಬಘೇಲ್ ಎಂಬ ಕಡುಬಡ ದಲಿತ ಯುವಕನನ್ನು ಬಾಂಗ್ಲಾ ನುಸುಳುಕೋರ ಎಂದು ಥಳಿಸಿ ಕೊಂದು ಹಾಕಿದರು. ಮನೆಯ ಫ್ರಿಜ್‌ನಲ್ಲಿ ಬೀಫ್ ಇದೆ ಎಂಬ ಕಾರಣಕ್ಕಾಗಿ ದಾದ್ರಿಯ ಮೊಹಮ್ಮದ್ ಅಖ್ಲಾಕ್ ಅವರನ್ನು ಗುಂಪೊಂದು ಥಳಿಸಿ ಕೊಂದಿತ್ತು. ಹರಿಯಾಣದಲ್ಲಿ ಗೋಮಾಂಸ ತಿಂದ ಎಂಬ ಕಾರಣಕ್ಕೆ ವಲಸೆ ಕಾರ್ಮಿಕ ಸಬೀರ್ ಮಲಿಕ್‌ರನ್ನು ಏಳು ಜನರ ಗುಂಪು ಹತ್ಯೆಗೈದಿತ್ತು. ಬಿಹಾರದ ನವಾಡದಲ್ಲಿ ಮೊಹಮ್ಮದ್ ಅಥಾರ್ ಹುಸೇನ್ ಎಂಬ ಬೀದಿ ವ್ಯಾಪಾರಿಯನ್ನು ಕಳ್ಳನೆಂದು ಆರೋಪ ಹೊರಿಸಿ ಕ್ರೂರವಾಗಿ ಥಳಿಸಿ ಕೊಲ್ಲಲಾಗಿತ್ತು. ಇತ್ತೀಚೆಗೆ ಡಿ.25ರಂದು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲೂ ಬಿಡದಂತೆ ಕ್ರಿಶ್ಚಿಯನ್ನರನ್ನು ಕಾಡಲಾಗಿತ್ತು. ಇನ್ನು ಮಣಿಪುರದಲ್ಲಿ ನಡೆದ ನರಮೇಧ, ಹಿಂಸಾಚಾರ, ಮಹಿಳೆ ಬೆತ್ತಲೆ ಓಟ… ಭಾರತ ಸರಕಾರ ತನ್ನ ದೇಶದೊಳಗಿರುವ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿತ್ತು.

ಮೇಲಿನ ಈ ಘಟನೆಗಳಲ್ಲಿ ಬಲಿಯಾದವರು ದೇಶದ ಅಲ್ಪಸಂಖ್ಯಾತರು. ಇವರ ಮೇಲೆ ವಿನಾಕಾರಣ ಸಿಟ್ಟು, ದ್ವೇಷ, ಅಸಹನೆ ಹುಟ್ಟಲು ಕಾರಣರಾರು? ಅದನ್ನು ಪೋಷಿಸಿದವರು ಯಾರು? ದೇಶದಲ್ಲಿ ಇದನ್ನು ಪೊರೆಯುತ್ತಿರುವ ಬಿಜೆಪಿ ನಾಯಕರು ಮತ್ತು ಸುದ್ದಿ ಮಾಧ್ಯಮಗಳು, ಈಗ ನೆರೆಯ ದೇಶಗಳ ಹಿಂದೂ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಮ್ಮ ದೇಶದ ಪ್ರಜೆಗಳೇ ಆಗಿರುವ ಅಲ್ಪಸಂಖ್ಯಾತರು ಭಯ, ಆತಂಕ ಮತ್ತು ಅಭದ್ರತೆಯಲ್ಲಿ ನರಳುತ್ತಿರುವ ಬಗ್ಗೆ ಕಣ್ಮುಚ್ಚಿ ಕುಳಿತಿದ್ದಾರೆ.

ಡಿಸೆಂಬರ್ 6, 1992ರಂದು ವಿವಿಧ ರಾಜ್ಯಗಳಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಆಗಮಿಸಿದ್ದ ಸಾವಿರಾರು ಕರಸೇವಕರು ರಾಮ ಮಂದಿರವಿದ್ದ ಜಾಗದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಮಸೀದಿಯನ್ನು ಧ್ವಂಸಗೊಳಿಸಿದರು. ಎಲ್ಲರೂ ನೋಡುತ್ತಿದ್ದಂತೆಯೇ ಕರಸೇವಕರು ಮಸೀದಿಯ ಗುಮ್ಮಟಗಳನ್ನು ಉರುಳಿಸಿ ಕೇಕೆ ಹಾಕಿದರು. ಅದನ್ನು ವಿಜಯೋತ್ಸವದಂತೆ ಆಚರಿಸಿದರು. ಕರಸೇವಕರಿಗೆ ಪ್ರಚೋದಿಸಿದ ಪಿತೂರಿಯ ಹಿಂದೆ ಸಂಘಪರಿವಾರ ಮತ್ತು ಬಿಜೆಪಿ ನಾಯಕರಿದ್ದರು. ಅದರ ಬಲದಿಂದ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಿದರು. ಕಳೆದ ಹನ್ನೊಂದು ವರ್ಷಗಳಲ್ಲಿ ಅದನ್ನೇ ಪಾಲಿಸಿಕೊಂಡು ಬರುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಪ್ರಜಾಪ್ರಭುತ್ವ ಪೊರೆದ ಅಮೆರಿಕ; ಪುಡಿಗಟ್ಟುತ್ತಿರುವ ಭಾರತ

ಅಂದರೆ, ಸಂಘಪರಿವಾರ, ಬಿಜೆಪಿ ನಾಯಕರು ಬಿತ್ತಿದ ದ್ವೇಷ ಮತ್ತು ಅಸಹನೆಯ ಫಲವಾಗಿ ದೇಶದ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರಿಶ್ಚಿಯನ್ನರು ನಿತ್ಯ ನರಳುತ್ತಿದ್ದಾರೆ. ಬಹುಸಂಖ್ಯಾತ ಹಿಂದೂಗಳು ಇಲ್ಲಿ ಬಿತ್ತಿದ ದ್ವೇಷದ ಬೀಜ, ಈಗ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿಯೂ ಬೆಳೆಯುತ್ತಿದೆ, ಹಬ್ಬುತ್ತಿದೆ. ಭಾರತೀಯರೆಂದರೆ ದ್ವೇಷ ಕಾರುವಂತಾಗಿದೆ.

ಹಿಂದೂಗಳು ಮನೆಯಲ್ಲಿಟ್ಟುಕೊಳ್ಳುವ, ಓದುವ, ಪಾಲಿಸುವ ಗೀತೆಯ ಸಾರವೇ ಹೇಳುವಂತೆ- ನಾವು ಏನು ಬಿತ್ತುತ್ತೇವೆಯೋ ಅದನ್ನೇ ಬೆಳೆಯುತ್ತೇವೆ ಎಂಬುದನ್ನು ಮತ್ತೊಮ್ಮೆ ಮನನ ಮಾಡಿಕೊಳ್ಳೋಣ. ಇನ್ನಾದರೂ, ಪ್ರೀತಿ ಬಿತ್ತೋಣ… ಮಾನವೀಯತೆ ಮೆರೆಯೋಣ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....