ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ

Date:

ಹತ್ತು ವರ್ಷಗಳ ಕಾಲ ದೇಶವನ್ನಾಳಿದ ಬಿಜೆಪಿ, ತನ್ನ ಆಡಳಿತವನ್ನು, ಅಭಿವೃದ್ಧಿಯನ್ನು ದೇಶದ ಜನತೆಯ ಮುಂದಿಟ್ಟು ಮತ ಕೇಳಬೇಕಾಗಿತ್ತು. ಅದು ಬಿಜೆಪಿ ನಾಯಕರ ವಿವೇಕಯುತ ನಡೆಯಾಗಿತ್ತು. ಅದು ಬಿಟ್ಟು, ಮೀನು ತಿಂದ, ಮೊಘಲ, ಸೆಂಗೋಲು, ಸನಾತನಿ, ಕುಟುಂಬ ಕಂಪನಿ, ಮಣಿಪುರದಲ್ಲಿ ಶಾಂತಿ, ಚೀನಾ ಅತಿಕ್ರಮಿಸಿಲ್ಲ, ನಿರುದ್ಯೋಗವಿಲ್ಲ, ಕೋವಿಡ್‌ನಿಂದ ದೇಶ ಬಚಾವು, ಕಚ್ಚತ್ತೀವು ಎಂದರೆ; ನಾರಾಯಣ ಗುರುವಿನಂತೆ ವೇಷ ಹಾಕಿದರೆ ಜನ ನಂಬುತ್ತಾರೆಯೇ? ನಂಬಿ ಕೆಟ್ಟಿದ್ದಾರೆ. ಸಹಜವಾಗಿಯೇ ಸಿಟ್ಟಾಗಿದ್ದಾರೆ.

ಪಕ್ಕದ ತಮಿಳುನಾಡಿನ ಚುನಾವಣಾ ಪ್ರಚಾರಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ”ಭ್ರಷ್ಟಾಚಾರದ ಮೊದಲ ಹಕ್ಕುಸ್ವಾಮ್ಯವನ್ನು ಡಿಎಂಕೆ ಹೊಂದಿದೆ. ಡಿಎಂಕೆ ವರಿಷ್ಠರ ಇಡೀ ಕುಟುಂಬವು ತಮಿಳುನಾಡನ್ನು ಲೂಟಿ ಹೊಡೆಯುತ್ತಿದೆ. ಈ ದ್ರಾವಿಡ ಪಕ್ಷವು ‘ದೊಡ್ಡ ಕುಟುಂಬ ಕಂಪನಿ’ಯಾಗಿ ಮಾರ್ಪಟ್ಟಿದೆ,” ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿಯವರು ತಮಿಳುನಾಡಿಗೆ ತೆರಳುವ ಎರಡು ದಿನಗಳ ಮುಂಚೆ, ಸಿಎಂ ಸ್ಟಾಲಿನ್, ‘ಜೂನ್ 4ರ ನಂತರ ದೇಶಕ್ಕೆ ಸಮರ್ಥ ಪ್ರಧಾನ ಮಂತ್ರಿ ಸಿಗುತ್ತಾರೆ’ ಎಂದು ಹೇಳಿದ್ದರು. ಅಷ್ಟೇ ಅಲ್ಲ, ‘ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದಲ್ಲಿ ಚುನಾವಣೆಗಳಿರುವುದಿಲ್ಲ, ಚುನಾವಣಾ ಪ್ರಜಾಪ್ರಭುತ್ವವನ್ನು ಚುನಾಯಿತ ನಿರಂಕುಶಾಧಿಕಾರವಾಗಿ ಪರಿವರ್ತಿಸುತ್ತಾರೆ’ ಎಂದಿದ್ದರು.

ದಕ್ಷಿಣ ಭಾರತದ ಮುಖ್ಯಮಂತ್ರಿಯೊಬ್ಬರು ತಮ್ಮನ್ನು ನಿರಂಕುಶಾಧಿಕಾರಿ ಎಂದಿದ್ದು ಸಿಟ್ಟಿಗೇಳಿಸಿತ್ತು. ಸಿಟ್ಟಿನ ಭರಾಟೆಯಲ್ಲಿ ‘ಡಿಎಂಕೆ ತಮಿಳುನಾಡನ್ನು ಲೂಟಿ ಹೊಡೆಯುತ್ತಿದೆ’ ಎಂದರು. ಹೇಳಿದ ಎರಡು ತಾಸಿನಲ್ಲಿ ‘ಜಿ ಪೇ’ ಪೋಸ್ಟರ್‍‌ಗಳು ತಮಿಳುನಾಡಿನಾದ್ಯಂತ ರಾರಾಜಿಸುತ್ತಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕರ್ನಾಟಕದ ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಕುರಿತು ಕಾಂಗ್ರೆಸ್ ‘ಪೇ ಸಿಎಂ’ ಪೋಸ್ಟರ್ ಮಾಡಿ, ದೇಶದಾದ್ಯಂತ ಸಂಚಲನ ಉಂಟು ಮಾಡಿತ್ತು. ಬಿಜೆಪಿಯ ಭ್ರಷ್ಟಾಚಾರವನ್ನು ಬಯಲು ಮಾಡಿತ್ತು.

ಇದೇ ತಂತ್ರವನ್ನು ಚಾಲ್ತಿಗೆ ತಂದ ತಮಿಳುನಾಡಿನ ಡಿಎಂಕೆ, ಪ್ರಧಾನಿ ಮೋದಿಯವರ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ‘ಜೀ ಪೇ’ ಅಂದರೆ, ಮೋದಿ’ಜೀ ಪೇ’ ಎಂದು ಕ್ಯೂಆರ್ ಕೋಡ್ ಇರುವ ಪೋಸ್ಟರ್‍‌ಗಳನ್ನು ಮಾಡಿ ತಮಿಳುನಾಡಿನ ಗೋಡೆಗಳನ್ನು ಅಲಂಕರಿಸಿತ್ತು. ಪೋಸ್ಟರ್‍‌ನಲ್ಲಿರುವ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡುತ್ತಿದ್ದಂತೆ, ಮೋದಿಯವರ ಬಿಜೆಪಿ ಸರ್ಕಾರದ ಹತ್ತು ವರ್ಷಗಳ ಬ್ರಹ್ಮಾಂಡ ಭ್ರಷ್ಟಾಚಾರದ ವಿಡಿಯೋ ಅನಾವರಣಗೊಳ್ಳುತ್ತದೆ.

ಪ್ರಧಾನಿ ಮೋದಿಯವರು, ಕಳೆದ ವರ್ಷ ಜೆಡಿಎಸ್ ಹಾಗೂ ಎಚ್.ಡಿ. ದೇವೇಗೌಡರನ್ನು ಕುರಿತು, ‘ಅದೊಂದು ಕುಟುಂಬ ಕಂಪನಿ’ ಎಂದು ಲೇವಡಿ ಮಾಡಿದ್ದರು. ಇಂದು ಅದೇ ಕುಟುಂಬದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ತಮ್ಮ ಪಕ್ಷದ ಅನೇಕ ನಾಯಕರ ಮಕ್ಕಳಿಗೆ ಟಿಕೆಟ್ ಕೊಡುವ ಮೂಲಕ ಕುಟುಂಬ ರಾಜಕಾರಣವನ್ನು ಪೋಷಿಸುತ್ತಿದ್ದಾರೆ. ಆದರೆ, ಡಿಎಂಕೆಯನ್ನು ‘ಕುಟುಂಬ ಕಂಪನಿ’ ಎಂದು ದೂರುತ್ತಾರೆ.

ಚೀನಾ ಒಂದೇ ಒಂದು ಇಂಚು ಜಾಗವನ್ನು ಅತಿಕ್ರಮಿಸಿಲ್ಲ ಎಂದು ಬಹಿರಂಗ ಸಭೆಯಲ್ಲಿ ಹೇಳುತ್ತಾರೆ. ಆದರೆ ಅಲ್ಲಿಯೇ ಕೂತು ಧರಣಿ ಮಾಡುತ್ತಿರುವ ಸೋನಂ ವಾಂಗ್ಚುಕ್ 4 ಸಾವಿರ ಚದರ ಕಿ.ಮೀ ಜಾಗವನ್ನು ಚೀನಾ ಅತಿಕ್ರಿಮಿಸಿದೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ.

ಆರು ತಿಂಗಳು ಹತ್ತಿ ಉರಿದ ಮಣಿಪುರದತ್ತ ನೋಡದ ಮೋದಿಯವರು, ಅಮಿತ್ ಶಾ ಹೋದ ನಂತರ ಮಣಿಪುರದಲ್ಲಿ ಶಾಂತಿ ನೆಲೆಸಿದೆ ಎನ್ನುತ್ತಾರೆ. ಇಂದು ಕೂಡ ಮಣಿಪುರದಲ್ಲಿ ಗಲಭೆಗಳು ನಡೆಯುತ್ತಲೇ ಇವೆ. ಕೋವಿಡ್ ಕಾಲದಲ್ಲಿ ಕಾರ್ಮಿಕರು ನಡೆದರು, ಹೆಣಗಳು ತೇಲಿಹೋದವು, ಬಡವರು ನರಳಾಡಿದರು. ಆದರೆ ದೇಶವನ್ನು ಕಾಪಾಡಲಾಗಿದೆ ಎನ್ನುತ್ತಾರೆ.

ವಿಶ್ವದ ಅತಿ ದೊಡ್ಡ ಭ್ರಷ್ಟಾಚಾರವೆಂದು ಪರಿಗಣಿಸಲಾದ ಚುನಾವಣಾ ಬಾಂಡ್ ಬಗ್ಗೆ ಮೋದಿ, ಕೃಷ್ಣ-ಕುಚೇಲನ ಕತೆ ಹೇಳಿ, ದೇಣಿಗೆಯ ನೆಪದ ಸುಲಿಗೆಯನ್ನು ಅವಲಕ್ಕಿಗೆ ಸಮೀಕರಿಸುತ್ತಾರೆ.

ಇನ್ನು ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ, ಬೆಲೆ ಏರಿಕೆ ಮತ್ತು ಹಣದುಬ್ಬರಕ್ಕೆ ಅರ್ಥಶಾಸ್ತ್ರಜ್ಞರು ಅಂಕಿ-ಅಂಶಗಳ ಸಮೇತ ದೇಶದ ಮುಂದಿಟ್ಟರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂಬ ಹೆಣ್ಣುಮಗಳು ‘ಎಲ್ಲಿದೆ ನಿರುದ್ಯೋಗ’ ಎಂದು ವ್ಯಂಗ್ಯವಾಗಿ ಪ್ರಶ್ನಿಸುತ್ತಾರೆ.

ಕರ್ನಾಟಕ ಸರ್ಕಾರ ಕಳೆದ ವರ್ಷ ಅಕ್ಟೋಬರ್‍‌ನಲ್ಲಿಯೇ ಬರ ಪರಿಹಾರಕ್ಕೆ ಮನವಿ ಮಾಡಿಕೊಂಡರೆ, ಜೆಎನ್‌ಯು ಬುದ್ಧಿವಂತಿಕೆ ಬಳಸಿ ಜಿಎಸ್ಟಿ, ಸಿಎಜಿಆರ್, ಸೆಸ್ ಅಂತೆಲ್ಲ ಲೆಕ್ಕ ಹೇಳಿ, ‘ಕರ್ನಾಟಕಕ್ಕೆ ಪಾವತಿಸಬೇಕಾದ ಪರಿಹಾರದ ಬಾಕಿ ಇಲ್ಲ, ಜುಲೈ 2017 ರಿಂದ ಜೂನ್ 2022 ರ ನಡುವೆ ರಾಜ್ಯಕ್ಕೆ 1.06 ಲಕ್ಷ ರೂ. ಪಾವತಿಸಲಾಗಿದೆ’ ಎನ್ನುತ್ತಾರೆ.

ರಾಜ್ಯ ಸರ್ಕಾರ ಕೇಳುತ್ತಿರುವುದು 2023ರ ಬರ ಪರಿಹಾರ ಮತ್ತು ತೆರಿಗೆ ಬಾಕಿ. ಅವರು ಹೇಳುತ್ತಿರುವುದು 2022ರ ಕತೆ! ಮುಂದುವರೆದು, ‘ಚುನಾವಣಾ ಆಯೋಗ ಸೂಚಿಸಿದರೆ, ಸಭೆ ನಡೆಸಲಾಗುವುದು, ಸುಪ್ರೀಂ ಕೋರ್ಟ್ ಸೂಚಿಸಿದೆ’ ಎಂದು ಧಿಮಾಕಿನಿಂದ ಉತ್ತರಿಸುತ್ತಾರೆ. ಸುಪ್ರೀಂ ಕೋರ್ಟಿನಲ್ಲಿ ಕೇಂದ್ರ ಸರ್ಕಾರದ ಪರ ವಕೀಲರು, ‘ಕೇಂದ್ರಕ್ಕೆ ನೋಟಿಸ್ ಕೊಡಬೇಡಿ, ಮುಜುಗರವಾಗುತ್ತದೆ’ ಎಂದು ಕೇಂದ್ರದ ಮಾನ ಮುಚ್ಚಲು ಹೆಣಗಾಡುತ್ತಾರೆ.

ಕಳೆದ ವಾರವಷ್ಟೇ ಚನ್ನಪಟ್ಟಣಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ರಾಜ್ಯ ಸರ್ಕಾರ ಬರ ಪರಿಹಾರ ಕೇಳಿದ್ದು ತಡವಾಯಿತು, ಅಷ್ಟರಲ್ಲಿ ಚುನಾವಣೆ ಘೋಷಣೆಯಾಯಿತು’ ಎನ್ನುತ್ತಾರೆ.

ಇದು ಡಿಜಿಟಲ್ ಯುಗ ಎನ್ನುವುದು ಬಿಜೆಪಿ ನಾಯಕರಿಗೆ ಗೊತ್ತಿಲ್ಲವೇ? ರಾಜ್ಯದ ನಾಯಕರು ದೆಹಲಿಗೆ ತೆರಳಿದ್ದು, ಭೇಟಿ ಮಾಡಿದ್ದು, ಮನವಿ ಮಾಡಿಕೊಂಡದ್ದು ಎಲ್ಲವೂ ನಿಮ್ಮ ಬೆರಳತುದಿಯಲ್ಲಿ ಇದೆಯಲ್ಲವೇ? ದೇಶದ ಜನಕ್ಕೆ ಸುಲಭದಲ್ಲಿ ಸಿಗುತ್ತದೆಯಲ್ಲವೇ? ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ?

ಹತ್ತು ವರ್ಷಗಳ ಕಾಲ ದೇಶವನ್ನಾಳಿದ ಬಿಜೆಪಿ, ತನ್ನ ಆಡಳಿತವನ್ನು, ಅಭಿವೃದ್ಧಿಯನ್ನು ದೇಶದ ಜನತೆಯ ಮುಂದಿಟ್ಟು ಮತ ಕೇಳಬೇಕಾಗಿತ್ತು. ಅದು ಬಿಜೆಪಿ ನಾಯಕರ ವಿವೇಕಯುತ ನಡೆಯಾಗಿತ್ತು. ಅದು ಬಿಟ್ಟು, ಮೀನು ತಿಂದ, ಮೊಘಲ, ಸೆಂಗೋಲು, ಸನಾತನಿ, ಕುಟುಂಬ ಕಂಪನಿ, ಮಣಿಪುರದಲ್ಲಿ ಶಾಂತಿ, ಚೀನಾ ಅತಿಕ್ರಮಿಸಿಲ್ಲ, ನಿರುದ್ಯೋಗವಿಲ್ಲ, ಕೋವಿಡ್‌ನಿಂದ ದೇಶ ಬಚಾವು, ಕಚ್ಚತ್ತೀವು ಎಂದರೆ; ನಾರಾಯಣ ಗುರುವಿನಂತೆ ವೇಷ ಹಾಕಿದರೆ ಜನ ನಂಬುತ್ತಾರೆಯೇ?

ದೇಶದ ಜನ ಹತ್ತು ವರ್ಷಗಳ ಕಾಲ ಮೋದಿಯ ನೂರಾರು ವೇಷಗಳನ್ನು, ಸುಳ್ಳುಗಳನ್ನು ನಂಬಿ ಕೆಟ್ಟಿದ್ದಾರೆ. ಸಹಜವಾಗಿಯೇ ಸಿಟ್ಟಾಗಿದ್ದಾರೆ. ಅವರ ಸಿಟ್ಟು ಮತಗಳಾಗಿ ಮಾರ್ಪಟ್ಟರೆ, ದೇಶಕ್ಕೊಂದು ದೃಢ ಸರ್ಕಾರ ನಿಶ್ಚಿತ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....