ಮೋದಿಯವರು ಶ್ರೀಮಂತ ಕುಟುಂಬದಿಂದ ಬಂದವರಲ್ಲ, ಬಡ ಕಾರ್ಮಿಕರ ಕಷ್ಟಗಳನ್ನು ಅರಿಯದವರಲ್ಲ. ಆದರೆ, ಈಗ ಅಧಿಕಾರದಾಸೆಗಾಗಿ ಕಾರ್ಪೊರೇಟ್ ಕುಳಗಳ ರಕ್ಷಣೆಗೆ ನಿಂತಿದ್ದಾರೆ. ಮಾಲೀಕರ ಲಾಭಕ್ಕಾಗಿ ಕಾರ್ಮಿಕರನ್ನು ಬಲಿಕೊಡುತ್ತಿದ್ದಾರೆ.
ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ದೇಶದ ಹತ್ತು ಪ್ರಮುಖ ಕಾರ್ಮಿಕ ಸಂಘಟನೆಗಳು ನವೆಂಬರ್ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಈ ಸಂಹಿತೆಗಳು ಕಾರ್ಮಿಕರ ಹಕ್ಕು ಮತ್ತು ಭದ್ರತೆಯನ್ನು ಮೊಟಕುಗೊಳಿಸುತ್ತವೆ; ಶ್ರೀಮಂತ ಬಂಡವಾಳಶಾಹಿಗಳ ಪರವಾಗಿವೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ಅಂದರೆ ಉದ್ಯೋಗದಾತರ ಪರ ಕಾರ್ಮಿಕ ಸಂಹಿತೆಗಳನ್ನು ಏಕಪಕ್ಷೀಯವಾಗಿ ಅನುಷ್ಠಾನ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಸಂಘಟನೆಗಳು ಬಂಡೆದ್ದಿವೆ, ಬೀದಿಗಿಳಿಯಲಿವೆ.
ನವೆಂಬರ್ 21ರಂದು ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ಕ್ರೋಡೀಕರಿಸಿ ನಾಲ್ಕು ಹೊಸ ಕಾರ್ಮಿಕ- ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳ ಸಂಹಿತೆಗಳು ಎಂದು ಅಧಿಸೂಚನೆ ಹೊರಡಿಸಿದೆ. ದೇಶದ ಕಾರ್ಮಿಕ ಕಾನೂನುಗಳ ಚೌಕಟ್ಟನ್ನು ಸರಳಗೊಳಿಸಿ, ಆಧುನೀಕರಿಸುವ ಗುರಿಯನ್ನು ಈ ಕಾರ್ಮಿಕ ಕಾನೂನುಗಳು ಹೊಂದಿವೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.
ಇದನ್ನು ಓದಿದ್ದೀರಾ?: ಮಾಧ್ಯಮಗಳ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಟ್ಟಿಗೆದ್ದದ್ದು ಏಕೆ?
ಹೊಸ ಕಾರ್ಮಿಕ ಸಂಹಿತೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ವಾಗತಿಸಿದ್ದಾರೆ. ಸ್ವಾತಂತ್ರ್ಯಾನಂತರದ ಕಾರ್ಮಿಕ ಸುಧಾರಣೆಗಳಲ್ಲಿ ಇದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಈ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಬಲಪಡಿಸುತ್ತವೆ ಮತ್ತು ವ್ಯವಹಾರಗಳನ್ನು ಸರಳಗೊಳಿಸುತ್ತವೆ. ಎಲ್ಲರಿಗೂ ಸಾಮಾಜಿಕ ಭದ್ರತೆ, ಸೂಕ್ತ ವೇತನ, ಸುರಕ್ಷಿತ ಕಾರ್ಯಸ್ಥಳಗಳನ್ನು ಒದಗಿಸುತ್ತವೆ. ವಿಶೇಷವಾಗಿ ನಾರಿ ಶಕ್ತಿ ಮತ್ತು ಯುವ ಶಕ್ತಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತವೆ. ಬಲವಾದ ಅಡಿಪಾಯವನ್ನು ನಿರ್ಮಿಸುತ್ತವೆ ಎಂದು ಹಾಡಿ ಹೊಗಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ಮೋದಿಯವರಿಗೆ ಹೊಸ ಕಾನೂನು ರೂಪಿಸುವಾಗ, ಸಂಬಂಧಿಸಿದವರನ್ನು ಕರೆದು, ಅವರ ಅಹವಾಲು ಆಲಿಸಬೇಕೆಂಬ ಕನಿಷ್ಠ ಸೌಜನ್ಯವೂ ಇಲ್ಲ. ಆ ಕಾಯ್ದೆಯ ಸಾಧಕ-ಬಾಧಕಗಳನ್ನು ಕುರಿತು ಚರ್ಚಿಸಬೇಕೆಂಬ ಸಾಮಾನ್ಯಜ್ಞಾನವೂ ಇಲ್ಲ. ಕಾರ್ಮಿಕ ಸಂಹಿತೆಗಳ ಅಧಿಸೂಚನೆ ಹೊರಡಿಸುವಾಗ ಅಲ್ಲಿ ಇರಲೇಬೇಕಿದ್ದ ಕಾರ್ಮಿಕರು ಇರಲಿಲ್ಲ, ಸಂಘಟನೆಗಳನ್ನು ಸಂಪರ್ಕಿಸಲಿಲ್ಲ. ಬದಲಿಗೆ ಬಲಿಷ್ಠರ, ಕಾರ್ಪೊರೇಟ್ ಕುಳಗಳ ಹಿತಾಸಕ್ತಿ ಕಾಪಾಡಲಾಗಿದೆ ಎನ್ನುವುದು ನಿಚ್ಚಳವಾಗಿದೆ.
ಅಂದರೆ, ದುಡಿಯುವ ವರ್ಗವೆಂದರೆ, ಶ್ರಮಜೀವಿಗಳೆಂದರೆ, ಬಡವರೆಂದರೆ ಇವರಿಗೆ ಇಷ್ಟೊಂದು ಅಸಡ್ಡೆಯೇ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ.
ಇವರ ಈ ಅಸಡ್ಡೆಗೆ ಸಬೂಬು ಸಿಗಬೇಕೆಂದರೆ ನೀವು 2020ರ ಮಾರ್ಚ್ 24ರ ರಾತ್ರಿ ಪ್ರಧಾನಿ ಮೋದಿಯವರು ಘೋಷಿಸಿದ ಲಾಕ್‌ಡೌನ್‌ನತ್ತ ನೋಡಬೇಕು. ದೇಶ ಕೊರೋನಾ ಮಹಾಮಾರಿಗೆ ಬಲಿಯಾದಾಗ, ಅವತ್ತಿನ ಅನ್ನವನ್ನು ಅವತ್ತೇ ದುಡಿದು ತಿನ್ನುವ ದಿನಗೂಲಿ ಕಾರ್ಮಿಕರ ಬಗ್ಗೆ ಪ್ರಧಾನಿ ಮೋದಿಯವರು ಹೇಗೆ ವರ್ತಿಸಿದರು ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು. ಇದ್ದಕ್ಕಿದ್ದಂತೆ ಘೋಷಿಸಿದ ಲಾಕ್‌ಡೌನ್‌ನಿಂದ ಲಕ್ಷಾಂತರ ವಲಸೆ ಕಾರ್ಮಿಕರು ಒಂದೇ ರಾತ್ರಿಯಲ್ಲಿ ಕೆಲಸ, ಆಹಾರ, ವಾಸಸ್ಥಳ ಎಲ್ಲವನ್ನೂ ಕಳೆದುಕೊಂಡರು. ರೈಲು, ಬಸ್ಸು, ಆಟೋಗಳೆಲ್ಲ ಸ್ಥಗಿತಗೊಂಡವು. ಆ ದಿಕ್ಕೆಟ್ಟ ದಿನಗೂಲಿ ಕಾರ್ಮಿಕರ ಮುಂದಿದ್ದ ಏಕೈಕ ದಾರಿ- ಸಾವಿರಾರು ಕಿಲೋಮೀಟರ್ ನಡೆದೇ ದೂರದ ಊರು-ಮನೆ ಸೇರುವುದು.
ಈ ದೀರ್ಘ ನಡಿಗೆಯಲ್ಲಿ ಕಟ್ಟಡ ಕಾರ್ಮಿಕರು, ಕಾರ್ಖಾನೆ ಕೂಲಿಯಾಳುಗಳು, ಹೋಟೆಲ್ ಸಿಬ್ಬಂದಿ, ಮನೆಗೆಲಸದವರು, ಭಿಕ್ಷುಕರು, ಗರ್ಭಿಣಿಯರು, ಮಕ್ಕಳು, ವೃದ್ಧರು- ಎಲ್ಲ ಇದ್ದರು. ವಾರಗಟ್ಟಲೆ ಆಹಾರ-ನೀರು ಇಲ್ಲದೆ ರಸ್ತೆ ಬದಿಯಲ್ಲಿ ನಡೆಯುತ್ತಲೇ ಇದ್ದರು. ಗಡಿಗಳಲ್ಲಿ ನಿಂತ ಪ್ರಧಾನಿಯವರ ಪೊಲೀಸರು ಕೊಡಬಾರದ ಕಾಟ ಕೊಟ್ಟರು. ಅವರಿಂದ ತಪ್ಪಿಸಿಕೊಳ್ಳಲು ರೈಲು ಹಳಿಗಳ ಮೇಲೆ ನಡೆಯತೊಡಗಿದರು. ಇನ್ನು ಕೆಲವರು ಕತ್ತಲಿನಲ್ಲಿ ಕಾಡು ಪಾಲಾದರು. ಬೆಟ್ಟ-ಗುಡ್ಡಗಳನ್ನು ಹತ್ತಿ ಇಳಿದರು. ಚಪ್ಪಲಿ ಹರಿದು ಕಾಲುಗಳು ಗಾಯಗೊಂಡು ರಕ್ತಸಿಕ್ತವಾದವು. ಅಂತಹ ಸ್ಥಿತಿಯಲ್ಲೂ ಮಕ್ಕಳನ್ನು ತೋಳು-ಹೆಗಲು-ತಲೆ-ಸೈಕಲ್ ಮೇಲೆ ಹೊತ್ತು ಸಾಗಿದರು.
12 ವರ್ಷದ ಬಾಲಕಿಯೊಬ್ಬಳು 150 ಕಿ.ಮೀ. ನಡೆದು ಊರಿಗೆ ಬಂದು, ಮೂರು ದಿನಗಳ ನಂತರ ಆಯಾಸದಿಂದ ಬಳಲಿ ಉಸಿರು ಚೆಲ್ಲಿದಳು. ವೃದ್ಧ ತಂದೆಯನ್ನು ಗುಜರಾತಿನಿಂದ ಹೊತ್ತುಕೊಂಡು ಒಂದು ಸಾವಿರ ಕಿ.ಮೀ. ಕ್ರಮಿಸಿದ್ದ ಮಗ, ಮನೆ ತಲುಪುವ ಮುನ್ನ ನೆಲಕ್ಕೊರಗಿದ್ದ. ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ನಡೆದು ಹೋಗುತ್ತಿದ್ದ 16 ಮಂದಿ ಕಾರ್ಮಿಕರು ರೈಲ್ವೆ ಟ್ರ್ಯಾಕ್ ಮೇಲೆ ಮಲಗಿ ದಣಿವಾರಿಸಿಕೊಳ್ಳುತ್ತಿದ್ದರು. ಬೆಳಗಾಗುವುದರಲ್ಲಿ ಸರಕು ರೈಲು ಅವರ ಮೇಲೆ ಹರಿದು ಹೆಣವಾಗಿದ್ದರು.
ಈ ದೃಶ್ಯಗಳು ಭಾರತದ ಆರ್ಥಿಕ ಅಸಮಾನತೆ, ವಲಸೆ ಕಾರ್ಮಿಕರ ದುಃಸ್ಥಿತಿ, ಸಾಮಾಜಿಕ ಸುರಕ್ಷತೆಯ ಕೊರತೆಯನ್ನು ಜಗತ್ತಿಗೇ ತೆರೆದು ತೋರಿಸಿದವು. ಇಂದಿಗೂ ಆ ರಕ್ತಸಿಕ್ತ ಕಾಲುಗಳ ಗುರುತುಗಳು ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಮಾಯವಾಗಿಲ್ಲ. ಹೀಗಿರುವಾಗಲೇ, ಅದೇ ಕಾರ್ಮಿಕರಿಗಾಗಿ ರೂಪಿಸಿದ 4 ನೀತಿ ಸಂಹಿತೆಗಳನ್ನು ಪ್ರಧಾನಿ ಮೋದಿಯವರು, ‘ಸ್ವಾತಂತ್ರ್ಯಾನಂತರದ ಕಾರ್ಮಿಕ ಸುಧಾರಣೆಗಳಲ್ಲಿ ಇದು ಮಹತ್ವದ ಹೆಜ್ಜೆ’ ಎಂದು ಬಣ್ಣಿಸುತ್ತಿದ್ದಾರೆ.
ಪ್ರಧಾನಿ ಮೋದಿಯವರ ಕಾರ್ಮಿಕರ ಕುರಿತ ‘ಕಕ್ಕುಲಾತಿ’ ಏನೆಂದು ತಿಳಿದಿರುವ ಕಾರ್ಮಿಕ ಸಂಘಟನೆಗಳು ದೇಶದಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟು, ‘ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಮತ್ತು ಹಣದುಬ್ಬರ ಏರುತ್ತಿರುವ ಸಮಯದಲ್ಲಿ ಸಂಹಿತೆಗಳನ್ನು ಜಾರಿಗೆ ತರುವುದು ಕಾರ್ಮಿಕ ವರ್ಗದ ಮೇಲೆ ಸಾರಿದ ಯುದ್ಧ. ಬಂಡವಾಳಶಾಹಿ ಸ್ನೇಹಿತರೊಂದಿಗೆ ಸೇರಿ ಕಾರ್ಮಿಕರಿಗೆ ಎಸಗುತ್ತಿರುವ ಮಹಾ ದ್ರೋಹ. ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವವರೆಗೂ ಭಾರತದ ಕಾರ್ಮಿಕರ ಹೋರಾಟ ನಿಲ್ಲುವುದಿಲ್ಲ’ ಎಂದು ಎಚ್ಚರಿಕೆ ನೀಡಿವೆ.
ಇದನ್ನು ಓದಿದ್ದೀರಾ?: ನಾಲ್ಕು ಕಾರ್ಮಿಕ ಸಂಹಿತೆಗಳು ಜಾರಿಗೊಳಿಸಿದ ಕೇಂದ್ರ ಸರ್ಕಾರ: ಸಂಘಟನೆಗಳ ವಿರೋಧವೇಕೆ?
ಅಷ್ಟೇ ಅಲ್ಲ, ಕಾರ್ಮಿಕ ಸಂಹಿತೆಗಳು ಎಂಬ ಅನಿಯಂತ್ರಿತ ಮತ್ತು ಪ್ರಜಾಪ್ರಭುತ್ವ ವಿರೋಧಿ ಸಂಹಿತೆಯು ಪ್ರಜಾಸತ್ತಾತ್ಮಕ ನೀತಿಗಳನ್ನು ಧಿಕ್ಕರಿಸುತ್ತದೆ ಮತ್ತು ಭಾರತದ ಕಲ್ಯಾಣ ರಾಜ್ಯದ ಸ್ವರೂಪವನ್ನು ನಾಶಮಾಡಲಿದೆ ಎಂದಿರುವ ರಾಜ್ಯದ ಕಾರ್ಮಿಕ ಸಂಘಟನೆಗಳು ಸಂಹಿತೆಗಳನ್ನು ಸುಟ್ಟು ಹಾಕುವ ಮೂಲಕ ಈಗಾಗಲೇ ಪ್ರತಿಭಟನೆಗಳನ್ನು ಆರಂಭಿಸಿವೆ.
ಮೋದಿಯವರು ಶ್ರೀಮಂತ ಕುಟುಂಬದಿಂದ ಬಂದವರಲ್ಲ, ಬಡ ಕಾರ್ಮಿಕರ ಕಷ್ಟಗಳನ್ನು ಅರಿಯದವರಲ್ಲ. ಆದರೆ, ಈಗ ಅಧಿಕಾರದಾಸೆಗಾಗಿ ಕಾರ್ಪೊರೇಟ್ ಕುಳಗಳ ರಕ್ಷಣೆಗೆ ನಿಂತಿದ್ದಾರೆ. ಮಾಲೀಕರ ಲಾಭಕ್ಕಾಗಿ ಕಾರ್ಮಿಕರನ್ನು ಬಲಿಕೊಡುತ್ತಿದ್ದಾರೆ. ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಮೋದಿಯವರ ಈ ಮೋಸ, ಅನ್ಯಾಯದ ವಿರುದ್ಧ ದೇಶದ ಜನತೆ ಎದ್ದು ನಿಲ್ಲಬೇಕಿದೆ. ದೇಶ ಕಟ್ಟಿದ ಶ್ರಮಜೀವಿಗಳನ್ನು ಬೆಂಬಲಿಸಬೇಕಿದೆ.





