ಸರ್ಕಾರಿ ಟೆಂಡರ್‌ಗಳಲ್ಲಿ 'ಅತಿ ಕಡಿಮೆ ದರ'ಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗುಣಮಟ್ಟಕ್ಕಿಂತ ದರ ಮುಖ್ಯವಾದಾಗ, ಉದ್ಯಮಿಗಳು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದು ಮಾಮೂಲು ಸಂಗತಿ. ಈ ಸತ್ಯವನ್ನು ಮೋದಿಜೀ ಒಪ್ಪಿಕೊಳ್ಳಲು ತಯಾರಿದ್ದಾರೆಯೇ? 'ಅತಿ ಕಡಿಮೆ ದರ'ದ ಟೆಂಡರ್‌ಗಳಲ್ಲಿ ಭ್ರಷ್ಟಾಚಾರ ಪಾಲು ಮಾತ್ರ ದೊಡ್ಡದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮೋದಿಯವರ ಮಾತು ಮತ್ತು ಕೃತಿಯ ನಡುವೆ ಇರುವ ಭಾರೀ ವೈರುಧ್ಯವಿದು.
77ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ 2026ರ ಹೊಸ ವರ್ಷದ ಮೊದಲ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ಭಾರತದ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜೈವಿಕ ತಂತ್ರಜ್ಞಾನದಲ್ಲಿ ಸಾಕಷ್ಟು ಸ್ಟಾರ್ಟ್ ಅಪ್‌ಗಳು ಆರಂಭವಾಗಿವೆ. ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಹಬ್ ಆಗಿ ಹೊರಹೊಮ್ಮುತ್ತಿದೆ. ಹೀಗಾಗಿ, ನಾವು ತಯಾರಿಸುವ ಪ್ರತಿಯೊಂದು ಉತ್ಪನ್ನದ ಗುಣಮಟ್ಟವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದ್ದಾರೆ.
“ಮೇಕ್ ಇನ್ ಇಂಡಿಯಾ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ್ದಾಗಿರಬೇಕು” ಎಂದು ಮೋದಿ ಹೇಳಿರುವುದು ಆಕರ್ಷಕ ಘೋಷಣೆಯಂತೆ ಕೇಳಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನಗಳಿಗೆ ಗೌರವ ಸಿಗಬೇಕೆಂಬ ಆಶಯದಲ್ಲಿ ತಪ್ಪಿಲ್ಲ. ಆದರೆ ಪ್ರಶ್ನೆ ಏನೆಂದರೆ, ಈ ಗುಣಮಟ್ಟದ ಜವಾಬ್ದಾರಿ ಯಾರದ್ದು ಮತ್ತು ಅದಕ್ಕೆ ಅಗತ್ಯವಾದ ವ್ಯವಸ್ಥೆ ನಿಜಕ್ಕೂ ನಮ್ಮ ಆಡಳಿತದಲ್ಲಿ ನಿರ್ಮಾಣವಾಗಿದೆಯೇ?
ಹೌದು ನಿಜ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತಕ್ಕೆ ತನ್ನದೇ ಆದ ಗುರುತು ಮೂಡಿಸಬೇಕಾದರೆ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಬೇಕಾದ ಅಗತ್ಯವಿದೆ. ಆದರೆ, ಗುಣಮಟ್ಟದ ಕಟುವಾಸ್ತವಗಳ ಬಗ್ಗೆ ಮೋದಿಯವರು ಮಾತನಾಡುವುದೇ ಇಲ್ಲ ಎಂಬುದು ಕೂಡ ಅಷ್ಟೇ ಬಹಿರಂಗ ಸತ್ಯ.
ಯಾಕೆಂದರೆ, ಪ್ರಧಾನಿಯವರು ತಮ್ಮ ಈ ಮಾತನ್ನು ತಮ್ಮದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಲೋಕೋಪಯೋಗಿ ಇಲಾಖೆಗಳಿಗೆ ಅನ್ವಯಿಸಬೇಕು. ಹನ್ನೆರಡು ವರ್ಷವೇ ಕಳೆದರೂ ಗುಣಮಟ್ಟದ ಕಾಮಗಾರಿಗಳ ಕುರಿತು ಅವರು ಬಾಯಿ ಬಿಟ್ಟಿಲ್ಲ. ಪ್ರಧಾನಿ ನಿವಾಸದಲ್ಲೇ ಕುಳಿತು ಡ್ರೋನ್ ಕಳಿಸಿ ಕಾಮಗಾರಿಗಳ ಗುಣಮಟ್ಟ ತನಿಖೆ ಮಾಡಿಸುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ಅದ್ಯಾವುದೂ ಕಾರ್ಯರೂಪಕ್ಕೆ ಇಳಿಯಲೇ ಇಲ್ಲ.
ದೇಶದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಕಳಪೆ ಕಾಮಗಾರಿಗಳೇ ಒಂದು ಪಟ್ಟಿ ಮಾಡುವುದಾರೆ ಮೋದೀಜಿ ತವರು ರಾಜ್ಯ ಗುಜರಾತಿನಲ್ಲಿ ಕಳಪೆ ಕಾಮಗಾರಿಯಿಂದಾಗಿ ಅದೆಷ್ಟು ಸೇತುವೆಗಳು ಕುಸಿದು ಬಿದ್ದಿಲ್ಲ! 2022 ಅಕ್ಟೋಬರ್ 30ರಂದು ಗುಜರಾತ್‌ನ ಮೋರ್ಬಿ ನಗರದಲ್ಲಿ ತೂಗು ಸೇತುವೆ ಕುಸಿದ ಪರಿಣಾಮ 135 ಮಂದಿ ಮೃತಪಟ್ಟ ಘೋರ ದುರಂತವೇ ನಡೆದು ಹೋಯಿತು. ಈ ಸೇತುವೆಯು ಕಳಪೆ ಕಾಮಗಾರಿಯ ಕಾರಣವೇ ಕುಸಿಯಿತೆಂದು ತಜ್ಞರು ವರದಿ ನೀಡಿದರು.
ವಾರದ ಹಿಂದಿನ ಘಟನೆಯನ್ನೇ ನೋಡೋಣ. ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ 21 ಕೋಟಿ ರೂ. ವೆಚ್ಚದಲ್ಲಿ 33 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ನೀರಿನ ಟ್ಯಾಂಕ್‌ವೊಂದನ್ನು ನಿರ್ಮಿಸಲಾಗಿತ್ತು. ಕಳೆದ ಜನವರಿ 19ರಂದು 11 ಲಕ್ಷ ಲೀಟರ್ ಸಾಮರ್ಥ್ಯದ 15 ಮೀಟರ್ ಎತ್ತರದ ಈ ನೀರಿನ ಟ್ಯಾಂಕ್ ಉದ್ಘಾಟನೆಗೂ ಮುನ್ನವೇ ಕುಸಿದುಬಿದ್ದಿದೆ. ನೀರಿನ ಟ್ಯಾಂಕ್ ನಿರ್ಮಿಸಲು ಬಳಸಿದ ನಿರ್ಮಾಣ ಸಾಮಗ್ರಿಗಳ ‘ಗುಣಮಟ್ಟ’ದ ಬಗ್ಗೆ ಗಂಭೀರ ಪ್ರಶ್ನೆಗಳಿವೆ.
ಇನ್ನು ತಮ್ಮದೇ ಬಿಜೆಪಿ ಅಧಿಕಾರ ಹಂಚಿಕೊಂಡಿರುವ ಬಿಹಾರದಲ್ಲಿ ಒಂದರ ಮೇಲೊಂದರಂತೆ ಸೇತುವೆಗಳು ಕುಸಿದಿದ್ದ ಸಾಲು ಸಾಲು ಪ್ರಕರಣಗಳಿವೆ. ಈ ಸರಣಿ ಕುಸಿತಗಳು ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದಿದೆ.
2014ರ ಲೋಕಸಭಾ ಚುನಾವಣೆಗೆ ಮುನ್ನ ಮೋದಿ, ತಮ್ಮ ನೂರಾರು ಭಾಷಣಗಳಲ್ಲಿ ಭ್ರಷ್ಟಾಚಾರ ನಿಗ್ರಹ ತಮ್ಮ ಸರ್ಕಾರದ ಮುಖ್ಯ ಕಾರ್ಯಸೂಚಿ ಎಂದು ಸಾರಿ ಸಾರಿ ಹೇಳಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಸುದ್ದಿ ಮಾಡಿದ್ದ 2ಜಿ ಹಗರಣ, ಕಾಮನ್ವೆಲ್ತ್ ಹಗರಣಗಳ ಹಿನ್ನೆಲೆಯಲ್ಲಿ ‘ನ ಖಾವೂಂಗಾ, ನ ಖಾನೇ ದೂಂಗಾ’ ಎಂಬ ಘೋಷಣೆಯ ಮೂಲಕ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ಎಂಬ ಸಂದೇಶ ನೀಡಿದ್ದರು. ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ನಿಗ್ರಹದ ಮೋದಿ ಮಾತುಗಳು ಪೊಳ್ಳಾಗಿ ಸುಳ್ಳಾಗಿ ಹೋಗಿವೆ. ‘ನ ಖಾವೂಂಗಾ, ನ ಖಾನೇ ದೂಂಗಾ’ ಎಂದು ಎದೆಯುಬ್ಬಿಸಿ ಸಾರಿ ಹೇಳಿದ್ದ ಅದೇ ಮೋದಿಯವರಾ ಇವರು ಎನ್ನುವಷ್ಟರ ಮಟ್ಟಿಗೆ ಭ್ರಷ್ಟಾಚಾರವನ್ನು ಒಪ್ಪಿಕೊಂಡು ಮೌನಕ್ಕೆ ಶರಣಾಗಿದ್ದಾರೆ.
ಭ್ರಷ್ಟಾಚಾರದ ವಿಚಾರ ಬಂದಾಗ ಪ್ರತಿ ಭಾಷಣದಲ್ಲೂ ‘ನೆಹರೂ’ ಅವರನ್ನು ಪದೇ ಪದೇ ನೆನಪಿಸಿಕೊಳ್ಳುವ ಪ್ರಧಾನಿ ಮೋದಿಯವರು, ನೆಹರೂ ಕಾಲದಲ್ಲಿ ನಿರ್ಮಿಸಿದ್ದ ಕಟ್ಟಡಗಳು, ಸೇತುವೆಗಳು, ರಸ್ತೆಗಳು ಇನ್ನೂ ಕೂಡ ಗುಣಮಟ್ಟ ಕಾಯ್ದುಕೊಂಡಿವೆ ಎಂಬುದರ ಬಗ್ಗೆ ಎಲ್ಲೂ ಮಾತೇ ಆಡುವುದಿಲ್ಲ. ಕೇಂದ್ರ ಸರ್ಕಾರದ ಪ್ರತಿಯೊಂದು ಬೃಹತ್ ಕಾಮಗಾರಿಗಳ ಟೆಂಡರ್‌ಗಳನ್ನು ಗುಜರಾತ್‌ನ ಅದಾನಿಯವರಿಗೇ ಸಿಗುವಂತೆ ನೋಡಿಕೊಳ್ಳುವ ಮೋಶಾ ಜೋಡಿ, ಅವುಗಳ ಗುಣಮಟ್ಟದ ಬಗ್ಗೆ ಯಾಕೆ ಬಾಯಿ ಬಿಡುವುದಿಲ್ಲ?
ಕಳೆದ ಒಂದು ದಶಕದಿಂದ ‘ಮೇಕ್ ಇನ್ ಇಂಡಿಯಾ’, ‘ಆತ್ಮನಿರ್ಭರ ಭಾರತ’, ‘ವೋಕಲ್ ಫಾರ್ ಲೋಕಲ್’ ಎಂಬ ಘೋಷಣೆಗಳ ಮೂಲಕ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಿರುವುದಾಗಿ ಮೋದಿ ಸರ್ಕಾರ ಹೇಳಿಕೊಂಡಿದೆ. ಈ ಘೋಷಣೆಗಳು ಕೇವಲ ಪ್ರಾಸಬದ್ಧ ಪೊಳ್ಳುಗಳಾಗಿ ಪರಿಣಮಿಸಿವೆ.
2021 ಮತ್ತು 2025 ರ ನಡುವೆ ಬಿಹಾರದಲ್ಲಿ 26, ಉತ್ತರಾಖಂಡದಲ್ಲಿ 25, ಹಿಮಾಚಲ ಪ್ರದೇಶದಲ್ಲಿ 17 ಹಾಗೂ ಗುಜರಾತಿನಲ್ಲಿ 16 ಸೇತುವೆ ಕುಸಿತ ಘಟನೆಗಳು ಸಂಭವಿಸಿವೆ. ಮಾಧ್ಯಮ ವರದಿಗಳ ಪ್ರಕಾರ, 2024 ರ ವರ್ಷವೊಂದರಲ್ಲೇ ಬಿಹಾರದಲ್ಲಿ 15 ಸೇತುವೆ ಕುಸಿತ ಘಟನೆಗಳು ವರದಿಯಾಗಿತ್ತು. 2021 ಮತ್ತು 2025 ರ ನಡುವೆ ಒಟ್ಟು 170 ಸೇತುವೆ ಕುಸಿತ ಘಟನೆಗಳು ಸಂಭವಿಸಿದೆ. ಈ ಎಲ್ಲ ಘಟನೆಗಳಲ್ಲಿ 202 ಜನರು ಸಾವನ್ನಪ್ಪಿದ್ದಾರೆ ಮತ್ತು 441 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ.
ಕಳೆದ ಐದು ವರ್ಷಗಳಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರ್ಯಗತಗೊಳಿಸಿದ ರಸ್ತೆಗಳು, ಸೇತುವೆಗಳು ಮತ್ತು ಸುರಂಗ ಯೋಜನೆಗಳಲ್ಲಿ ಒಟ್ಟು 55 ಕುಸಿತ ಅಥವಾ ಹಾನಿ ಪ್ರಕರಣಗಳು ವರದಿಯಾಗಿವೆ ಎಂಬುದನ್ನು ಸ್ವತಃ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಕಳೆದ ವರ್ಷ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಾಹಿತಿ ನೀಡಿದ್ದರು.
ಹಾಗಾದರೆ ಕಳೆದ ಹತ್ತು ವರ್ಷಗಳಲ್ಲಿ ನೆಲಕಚ್ಚಿರುವುದಕ್ಕೆ ಯಾರು ಹೊಣೆಗಾರರು? ಕುಸಿತದ ಹೊಣೆ ಯಾರದ್ದು? ತಾನು ನೇರವಾಗಿ ಇಲ್ಲವೇ ಮಿತ್ರಪಕ್ಷಗಳ ಜೊತೆ ಕೈಗೂಡಿಸಿ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕೇಂದ್ರ ಸರ್ಕಾರ ಇದ್ದೇ ಇದೆ. ಈ ರಾಜ್ಯಗಳ ಲೋಕೋಪಯೋಗಿ ಇಲಾಖೆಗಳು, ಕೇಂದ್ರ ಸರ್ಕಾರದ ಸಿಪಿಡಬ್ಲ್ಯೂಡಿ ಕಳಪೆ ಕಾಮಗಾರಿಯ ಜವಾಬ್ದಾರಿ ಹೊರಬೇಕಲ್ಲವೇ? ಹಾಗಿದ್ದರೆ ಗುಣಮಟ್ಟದ ಪಾಠವನ್ನು ಮೋದಿ ಯಾರಿಗೆ ಹೇಳಬೇಕು. ನೀತಿಪಾಠವನ್ನು, ಭ್ರಷ್ಟಾಚಾರ ನಿಗ್ರಹವನ್ನು ತಮ್ಮ ಮನೆಯಿಂದಲೇ ಶುರು ಮಾಡಬೇಕು. ತಮ್ಮ ಮೂಗಿನ ಕೆಳಗೇ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದತ್ತ ಕುರುಡುಗಣ್ಣು ಹರಿಸಿ ಗುಣಮಟ್ಟದ ಕುರಿತು ಭಾಷಣ ಬಿಗಿಯುವುದು ಕೇವಲ ಅವಕಾಶವಾದ ಮತ್ತು ಅಪ್ಪಟ ಡಂಭಾಚಾರ.
2014ರಿಂದ ದೇಶವನ್ನು ಆಳುತ್ತಿರುವ ಮೋದಿ ಸರ್ಕಾರವು ‘ಗುಣಮಟ್ಟ’ ಎಂಬ ಪದವನ್ನು ಈಗ ಸಂಶೋಧನೆ ನಡೆಸಿ ಕಂಡು ಹಿಡಿದಂತೆ ಮಾತನಾಡುತ್ತಿರುವುದು ತಮಾಷೆಯಾಗಿಯೂ, ವಿಡಂಬನೆ- ದುರಂತಗಳಂತೆಯೂ ಧ್ವನಿಸುತ್ತದೆ.
ಗುಣಮಟ್ಟ ಎಂಬುದು ಪೊಳ್ಳು ಭಾಷಣಗಳಿಂದ ಹುಟ್ಟುವುದಿಲ್ಲ; ಅದು ಕಠಿಣ ಗುಣಮಟ್ಟ ನಿಯಂತ್ರಣ, ಪಾರದರ್ಶಕ ಮೇಲ್ವಿಚಾರಣೆ ಮತ್ತು ತಪ್ಪುಗಳಿಗೆ ನಿರ್ದಾಕ್ಷಿಣ್ಯ ಶಿಕ್ಷೆಯಿಂದ ಮಾತ್ರ ಸಾಧ್ಯ. ಆದರೆ ವಾಸ್ತವದಲ್ಲಿ ಗುಣಮಟ್ಟ ನಿಯಂತ್ರಣ ಸಂಸ್ಥೆಗಳು ಮೂಲೆಗುಂಪಾಗಿವೆ. ರಾಜಕೀಯ ಹಸ್ತಕ್ಷೇಪ ಸರ್ವೇಸಾಮಾನ್ಯವಾಗಿವೆ. ಭ್ರಷ್ಟಾಚಾರ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿಯವರು ಜಾಗತಿಕ ಮಟ್ಟದ ಗುಣಮಟ್ಟದ ಭಾಷಣಕ್ಕೆ ಯಾವ ಅರ್ಥವೂ ಇಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಬೋರ್ಡ್ ಆಫ್ ಪೀಸ್’ಗೆ ಸೇರದ ಭಾರತದ ನಿಲುವು ಸ್ವಾಗತಾರ್ಹ
ಸರ್ಕಾರಿ ಟೆಂಡರ್‌ಗಳಲ್ಲಿ ‘ಅತಿ ಕಡಿಮೆ ದರ’ಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗುಣಮಟ್ಟಕ್ಕಿಂತ ದರ ಮುಖ್ಯವಾದಾಗ, ಉದ್ಯಮಿಗಳು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದು ಮಾಮೂಲು ಸಂಗತಿ. ಈ ಸತ್ಯವನ್ನು ಮೋದಿಜೀ ಒಪ್ಪಿಕೊಳ್ಳಲು ತಯಾರಿದ್ದಾರೆಯೇ? ‘ಅತಿ ಕಡಿಮೆ ದರ’ದ ಟೆಂಡರ್‌ಗಳಲ್ಲಿ ಭ್ರಷ್ಟಾಚಾರ ಪಾಲು ಮಾತ್ರ ದೊಡ್ಡದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮೋದಿಯವರ ಮಾತು ಮತ್ತು ಕೃತಿಯ ನಡುವೆ ಇರುವ ಭಾರೀ ವೈರುಧ್ಯವಿದು.
ಆದ್ದರಿಂದ ಪ್ರಧಾನಿ ಮೋದಿಯವರು ಮನ್ ಕಿ ಬಾತ್‌ನಲ್ಲಿ ಹೇಳಿದ ಹಾಗೆ, ‘ಮೇಕ್ ಇನ್ ಇಂಡಿಯಾ’ ಗುಣಮಟ್ಟಕ್ಕೆ ಮಾದರಿ ಆಗಬೇಕಿದ್ದರೆ, ಮೋದಿ ಸರ್ಕಾರ ನುಡಿದಂತೆ ನಡೆಯಬೇಕು. ಟೊಳ್ಳು ಘೋಷಣೆಗಳ ನಾಟಕವನ್ನು ಕೈಬಿಡಬೇಕು. ಕಠಿಣ ಗುಣಮಟ್ಟ ಪರಿಶೀಲನೆ, ಜವಾಬ್ದಾರಿಯುತ ಆಡಳಿತ ಮತ್ತು ವಿಫಲತೆಗಳಿಗೆ ನೈತಿಕ ಹೊಣೆಗಾರಿಕೆ ಹೊರಬೇಕು. ಸರ್ಕಾರ ಮೊಟ್ಟಮೊದಲು ತನ್ನ ಆಡಳಿತದ ಗುಣಮಟ್ಟವನ್ನು ಪರೀಕ್ಷೆಗೆ ಒಡ್ಡಬೇಕು. ಇಲ್ಲದಿದ್ದರೆ ‘ಅತ್ಯುತ್ತಮ ಗುಣಮಟ್ಟ’ ಎಂಬ ಮಾತು ಮತ್ತೊಂದು ರಾಜಕೀಯ ಭಾಷಣವಾಗಿ ಇತಿಹಾಸದ ಕಡತಗಳಲ್ಲಿ ಹೂತು ಹೋಗುತ್ತದೆ ಅಷ್ಟೇ.





