ಸುಪ್ರೀಂ ಕೋರ್ಟ್‌ನಲ್ಲಾದ ಘಟನೆಯನ್ನು ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು, ಸಂವಿಧಾನಕ್ಕಾದ ಅಪಚಾರ, ದಲಿತ ಸಮುದಾಯಕ್ಕಾದ ಅವಮಾನ, ನಮ್ಮ ಆತ್ಮಕ್ಕಾದ ಘಾಸಿ ಎಂದು ಪರಿಗಣಿಸಬೇಕಾಗಿದೆ, ತಕ್ಕ ಉತ್ತರ ನೀಡಬೇಕಿದೆ.
ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವವರಲ್ಲಿ ಕಳವಳಕ್ಕೆ ಕಾರಣವಾಗಿದೆ. ಅಪಾಯಕಾರಿ ಘಟನೆ ಎನಿಸಿದೆ. ವ್ಯಾಪಕ ಖಂಡನೆಗೆ ಒಳಗಾಗಿದೆ.
ಆದರೆ, ಸುಮಾರು 71ರ ಪ್ರಾಯದ ರಾಕೇಶ್ ಕಿಶೋರ್ ಎಂಬ ವಕೀಲ, ‘ಸನಾತನ ಧರ್ಮಕ್ಕೆ ಆದ ಅಪಮಾನವನ್ನು ಸಹಿಸಲ್ಲ’ ಎಂದು ಶೂ ಎಸೆಯಲು ಯತ್ನಿಸಿದ್ದಕ್ಕೆ ಸಮಜಾಯಿಷಿ ನೀಡಿದ್ದಾರೆ. ಅಷ್ಟೇ ಅಲ್ಲ, ಘಟನೆ ಆದ ಬಳಿಕ ಕಲಾಪದಲ್ಲಿದ್ದ ಮತ್ತೋರ್ವ ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರ ಬಳಿ ಕ್ಷಮೆಯಾಚಿಸಿ, ‘ನನ್ನ ಗುರಿ ಕೇವಲ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅಷ್ಟೆ, ನೀವಲ್ಲ’ ಎಂದಿದ್ದಾರೆ.
ಇತ್ತೀಚೆಗೆ ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಖಜರಾಹೋದ ವಿಷ್ಣು ಮೂರ್ತಿಯ ತಲೆಯ ಭಾಗ ನಾಶವಾಗಿದ್ದ ಅರ್ಜಿಗೆ ಸಂಬಂಧಿಸಿದ ವಿಚಾರಣೆ ವೇಳೆ, ‘ಇದು ಪುರಾತತ್ವ ಇಲಾಖೆಗೆ ಸೇರಿದ ಜಾಗ, ಇಲಾಖೆ ಅನುಮತಿ ನೀಡಬೇಕು. ಇದು ಪ್ರಚಾರ ಹಿತಾಸಕ್ತಿ ಮೊಕದ್ದಮೆ’ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದ್ದರು. ಜೊತೆಗೆ ‘ನೀವು ವಿಷ್ಣುವಿನ ಪರಮಭಕ್ತ ಎಂದು ಹೇಳಿಕೊಂಡಿದ್ದೀರಿ, ದೇವರಲ್ಲಿ ಪ್ರಾರ್ಥಿಸಿ’ ಎಂದಿದ್ದರು.
ಇದನ್ನು ಓದಿದ್ದೀರಾ?: ‘ಸಿಜೆಐ ದಲಿತ ಎಂಬ ಕಾರಣಕ್ಕೆ ಶೂ ಎಸೆಯಲು ಯತ್ನ’: ಜಸ್ಟಿಸ್ ದಾಸ್, ಎಸ್.ಬಾಲನ್ ಅಭಿಪ್ರಾಯ
ಜೊತೆಗೆ ಗವಾಯಿ ಅವರ ತಾಯಿ ಕಮಲಾತೈ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿತ್ತು. ಅವರು, ‘ನಾವು ಅಂಬೇಡ್ಕರ್ ಅವರ ಸಿದ್ಧಾಂತದ ಪ್ರಕಾರ ಜೀವನ ನಡೆಸುತ್ತಿದ್ದೇವೆ, ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ’ ಎಂದು ಪತ್ರ ಬರೆಯುವ ಮೂಲಕ ಆಹ್ವಾನವನ್ನು ನಿರಾಕರಿಸಿದ್ದರು.
ಅಂದರೆ, ಸನಾತನಿಗಳ ಅಸಹನೆಗೆ ಕಾರಣವಿದೆ. ಅವರ ದಲಿತವಿರೋಧಿ ಮನಸ್ಥಿತಿ ನಿಚ್ಚಳವಾಗಿದೆ. ಸನಾತನಿಗಳು ಶ್ರೇಷ್ಠ, ದಲಿತರು ನಿಕೃಷ್ಟ ಎನ್ನುವ ರೋಗ ಇನ್ನೂ ಜೀವಂತವಿದೆ. ಇದೇನು ಹೊಸದಲ್ಲ. ಸನಾತನಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪ್ಪಿಕೊಳ್ಳಲಿಲ್ಲ. ಅವರು ರಚಿಸಿದ ಸಂವಿಧಾನವನ್ನು ಒಪ್ಪಿಕೊಳ್ಳಲಿಲ್ಲ. ಇನ್ನು ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ದೇಶದ ಅತ್ಯುನ್ನತ ಸ್ಥಾನದಲ್ಲಿ, ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಸ್ಥಾನದಲ್ಲಿ ಕೂರುವುದನ್ನು ಸಹಿಸುತ್ತಾರೆಯೇ, ಸಾಧ್ಯವೇ ಇಲ್ಲ.
ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ, ಯೋಗ್ಯತೆ ಮತ್ತು ಸಾಧನೆಗಳ ಮೂಲಕ ಉನ್ನತ ಸ್ಥಾನಕ್ಕೇರಿದ ಗವಾಯಿ ಅವರನ್ನು ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ, ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಭದ್ರವಾಗಿ ಬೇರೂರಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇರೊಂದಿಲ್ಲ.
ಇನ್ನು ವಕೀಲ ರಾಕೇಶ್ ಕಿಶೋರ್, ಸುಪ್ರೀಂ ಕೋರ್ಟ್‌ನ ವಕೀಲ. ಆತ ಸಂವಿಧಾನವನ್ನು ಓದಿದ, ಕಾನೂನು ಶಾಸ್ತ್ರವನ್ನು ತಿಳಿದ ಮತ್ತು ವಕೀಲಿಕೆ ವೃತ್ತಿಯಲ್ಲಿ ಅನುಭವವಿರುವ ವ್ಯಕ್ತಿಯಾಗಿರುವುದರಿಂದಲೇ, ಅಲ್ಲಿವರೆಗೆ ಹೋಗಲು ಸಾಧ್ಯವಾಗಿರುವುದು. ಇಂತಹ ತಿಳಿವಳಿಕೆ ಇರುವ ವ್ಯಕ್ತಿಯೇ ಧರ್ಮದ ಹೆಸರಲ್ಲಿ ಮುಖ್ಯ ನ್ಯಾಯಾಧೀಶರಿಗೆ ಶೂ ಎಸೆಯಲು ಮುಂದಾಗುವುದೆಂದರೆ, ಇನ್ನು ಜನಸಾಮಾನ್ಯರ ಮನಸ್ಥಿತಿ ಹೇಗಿರಬಹುದು?
ಮಹಾತ್ಮಾ ಗಾಂಧಿಯನ್ನು ಹತ್ಯೆಗೈದ ಗೋಡ್ಸೆಗೂ, ಬಾಬರಿ ಮಸೀದಿ ಧ್ವಂಸ ಮಾಡಿದ ಸನಾತನಿಗಳಿಗೂ, ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳಿಗೆ ಶೂ ಎಸೆಯಲು ಯತ್ನಿಸಿದ ಸನಾತನಿ ವಕೀಲನಿಗೂ ಸಾಮ್ಯತೆಗಳಿವೆ. ಯಾವ ಸನಾತನ ಸಿದ್ಧಾಂತ ದೇಶದಲ್ಲಿ ದ್ವೇಷವನ್ನು ಹರಡುತ್ತಿದೆಯೋ, ಸೌಹಾರ್ದತೆಗೆ ಧಕ್ಕೆ ತರುತ್ತಿದೆಯೋ, ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆಯೋ, ಭಯೋತ್ಪಾದನೆಯನ್ನು ಹುಟ್ಟು ಹಾಕುತ್ತಿದೆಯೋ- ಆ ಸಿದ್ಧಾಂತವೇ ಇಂದು ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯುವಂತೆ ಪ್ರೇರೇಪಿಸಿದೆ.
ಇನ್ನು ವಕೀಲ ರಾಕೇಶ್ ಕಿಶೋರ್ ಪ್ರತಿಪಾದಿಸುತ್ತಿರುವ ಸನಾತನ ಧರ್ಮವನ್ನು ಪಾಲಿಸುವವರು, ಆತನ ಕೃತ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ. ಆತ ಮಾಡಿದ್ದು ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲೈಕ್, ಕಮೆಂಟ್ ಮತ್ತು ಶೇರ್‍ಗಳ ಮೂಲಕ ಇಡೀ ಪ್ರಪಂಚಕ್ಕೇ ಹಂಚಿದ್ದಾರೆ. ಮಹಾತ್ಮಾ ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ಒಬ್ಬ ದೇಶಪ್ರೇಮಿ ಎಂದು ಮೆರೆಸಲು ಮುಂದಾಗಿರುವ ರೀತಿಯಲ್ಲಿಯೇ ಕೆಲವು ಪುಂಡರು ವಕೀಲನ ಕುಕೃತ್ಯವನ್ನು ಸಂಭ್ರಮಿಸುತ್ತಿರುವುದನ್ನು ಕಾಣುತ್ತಿದ್ದೇವೆ.
ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದು, ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟುಹಾಕಿರುವ ಕಾರಣಕ್ಕಾಗಿಯೇ ರಾಕೇಶ್ ಕಿಶೋರ್‍ನಂತಹ ಮನುವಾದಿ ಮನಸ್ಸುಗಳು ನ್ಯಾಯಪೀಠಕ್ಕೆ ಶೂ ಎಸೆಯುವ ಧೈರ್ಯ ಮಾಡಿರುವುದು. ಈ ಬಹುಸಂಖ್ಯಾತ ಸನಾತನವಾದಿಗಳು ಮತ್ತು ಅವರನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಭಾರತೀಯ ಜನತಾ ಪಕ್ಷದ ನಾಯಕರು, ನೆಪಮಾತ್ರದ ಖಂಡನಾ ಹೇಳಿಕೆ ನೀಡಿ ಸುಮ್ಮನಾಗಿರುವುದು.
ಆದರೆ, ಉನ್ನತ ಹುದ್ದೆಯ ಘನತೆ, ಗೌರವಕ್ಕೆ ತಕ್ಕಂತೆಯೇ ‘ಇಂತಹ ಘಟನೆಗಳಿಂದ ನೀವು ವಿಚಲಿತರಾಗಬೇಡಿ. ನಾನೂ ವಿಚಲಿತಗೊಳ್ಳುವುದಿಲ್ಲ. ಇದ್ಯಾವುದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ…’ ಎಂದಿರುವುದು ನ್ಯಾಯಮೂರ್ತಿ ಗವಾಯಿ ಅವರ ವ್ಯಕ್ತಿತ್ವವನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಸೋಮಣ್ಣ, ಡಿಕೆಶಿ ಉದ್ಧಟತನ ಅಕ್ಷಮ್ಯ
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಯಾವುದೇ ಪಕ್ಷ ಇಲ್ಲವೇ ಧರ್ಮಕ್ಕೆ ಸೇರಿದವರಲ್ಲ. ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಜಾತ್ಯತೀತ ಮನಸ್ಸುಗಳು ಅವರ ಬೆಂಬಲಕ್ಕೆ ನಿಲ್ಲುವುದು ಅಪರಾಧವಲ್ಲ. ಏಕೆಂದರೆ, ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದೆ. ಸುಪ್ರಿಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಮೇಲೆ ಶೂ ಎಸೆಯುವ ಪ್ರಯತ್ನವಾಗಿದೆ. ಅಂದರೆ ಸನಾತನಿಗಳ ಸಂದೇಶ ಸ್ಪಷ್ಟವಾಗಿದೆ. ಅಂದಮೇಲೆ, ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಸುಪ್ರೀಂ ಕೋರ್ಟ್‌ನಲ್ಲಾದ ಘಟನೆಯನ್ನು, ಸಂವಿಧಾನಕ್ಕಾದ ಅಪಚಾರ, ದಲಿತ ಸಮುದಾಯಕ್ಕಾದ ಅವಮಾನ, ನಮ್ಮ ಆತ್ಮಕ್ಕಾದ ಘಾಸಿ ಎಂದು ಪರಿಗಣಿಸಿ, ತಕ್ಕ ಉತ್ತರ ನೀಡಲೇಬೇಕಿದೆ.





