ಕೇಂದ್ರದ ತಾರತಮ್ಯ ನೀತಿಯನ್ನು ವಿರೋಧಿಸುವುದು ಪ್ರಜಾಸತ್ತಾತ್ಮಕ ಮಾದರಿಯ ಪ್ರತಿಭಟನೆಯ ಪ್ರತೀಕವಾಗಿದೆ. ಈ ನಿಟ್ಟಿನಲ್ಲಿ ಸಭೆ-ಸಮಾವೇಶಗಳನ್ನು ಹಮ್ಮಿಕೊಳ್ಳುವ, ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಜರೂರು ಇದೆ. ಇವು ಜನರಿಗೆ ತಿಳಿವಳಿಕೆ ತುಂಬುವ, ಜಾಗೃತರನ್ನಾಗಿಸುವ, ಪ್ರತಿಭಟಿಸುವ, ಪ್ರಶ್ನಿಸುವ ಕೆಚ್ಚನ್ನು ಕಲಿಸಲಿವೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆರೆ, ರಸ್ತೆ, ಶಾಲೆ, ನಾಲೆ, ಚರಂಡಿ ಸೇರಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ, ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕರಿಗೆ ಕೆಲಸ ಕೊಡುವ, ಆ ಮೂಲಕ ಅವರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಯೋಜನೆ ‘ಮನರೇಗಾ’ವಾಗಿತ್ತು. ಈ ಉದಾತ್ತ ಆಶಯದ ಯೋಜನೆಯನ್ನು ಕೇಂದ್ರದ ಎನ್‌ಡಿಎ ಸರ್ಕಾರ ಇತ್ತೀಚಿಗೆ ಬದಲಾಯಿಸಿತು.
ಕಾಯ್ದೆಗಳಿಗೆ ತಿದ್ದುಪಡಿ ತರುವುದು ತಪ್ಪಲ್ಲ; ತಿದ್ದುಪಡಿಯ ನೆಪದಲ್ಲಿ ಯೋಜನೆಯ ಮೂಲಸ್ವರೂಪವನ್ನು ಬದಲಾಯಿಸುವುದು, ತಿರುಚುವುದು ತಪ್ಪು. ರಾಷ್ಟ್ರಪಿತ ಗಾಂಧಿ ತೆಗೆದು ರಾಮನನ್ನು ತುರುಕುವುದು ತಪ್ಪು. ಕೇಂದ್ರ-ರಾಜ್ಯ ಅನುದಾನದ ಪಾಲನ್ನು 90:10ರಿಂದ 60:40ಕ್ಕೆ ಏರಿಸುವುದು ತಪ್ಪು. ಸ್ಥಳೀಯ ಕೆಲಸಗಳನ್ನು ದೂರದ ದಿಲ್ಲಿ ಸರ್ಕಾರವೇ ನಿರ್ಧರಿಸುವುದು ತಪ್ಪು. ಇದು ನೇರವಾಗಿ ಸಹಕಾರಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಪ್ರಜಾಪ್ರಭುತ್ವದ ಆಶಯವನ್ನು ಮಣ್ಣುಗೂಡಿಸುತ್ತದೆ.
ಇದನ್ನು ಓದಿದ್ದೀರಾ?: ಕನ್ನಡಿಗರ ಹಕ್ಕುಗಳನ್ನು ಕೊಲ್ಲದಿರಲಿ ಕೇರಳ, ಒಡನೆಯೇ ತಿದ್ದುಪಡಿ ತರಲಿ
ಇದು ಇತ್ತೀಚಿಗೆ ದೇಶದಾದ್ಯಂತ ಚರ್ಚೆಯಾಗುತ್ತಿರುವ ಮನರೇಗಾ ಕುರಿತ ಒಂದು ಉದಾಹರಣೆಯಷ್ಟೆ. ಇನ್ನು ದಕ್ಷಿಣ ರಾಜ್ಯಗಳಿಗೆ ಹಣಕಾಸು ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯ ನೀತಿ ನಿತ್ಯ ನಿರಂತರ. ಇದಂತೂ ಪ್ರತಿವರ್ಷ ಬಜೆಟ್ ಎದುರಾಗುವಾಗ ಪ್ರತಿ ರಾಜ್ಯಗಳನ್ನು ಚಿಂತೆಗೀಡುಮಾಡುತ್ತದೆ. ಕೊಡುವ ಸ್ಥಾನದಲ್ಲಿ ಕುಳಿತ ಕೇಂದ್ರ ಸರ್ಕಾರ ಅನುದಾನ ಕೊಡದೆ ಸತಾಯಿಸುತ್ತದೆ. ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದೆ ಬೀಳುವಂತೆ ಮಾಡುತ್ತದೆ. ಕೇಂದ್ರದ ಈ ಕಿಡಿಗೇಡಿ ಕೃತ್ಯದ ವಿರುದ್ಧ ಕಾಲಕಾಲಕ್ಕೆ ರಾಜ್ಯಗಳು ತಮ್ಮ ಪ್ರತಿಭಟನೆಯನ್ನು ದಾಖಲು ಮಾಡುತ್ತಲೇ ಬಂದಿವೆ.
ಕೇಂದ್ರದ ಪ್ರಾಯೋಜಿತ ಯೋಜನೆಗಳಲ್ಲಿ, ಅನುದಾನ ಹಂಚಿಕೆಯಲ್ಲಿ ಕೇಂದ್ರ ಹಾಗೂ ರಾಜ್ಯದ ಪಾಲು ಈ ಮೊದಲು 90:10, 75:25ರ ಅನುಪಾತದಲ್ಲಿತ್ತು. ಈಗ ಅದು 50:50, 60:40, 70:30ರಷ್ಟಾಗಿದೆ. 2024-25ರ ಸಾಲಿನಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ರಾಜ್ಯಕ್ಕೆ ಬರಬೇಕಾದ 4,195 ಕೋಟಿ ರೂಪಾಯಿಗಳ ಬಾಕಿ ಇನ್ನೂ ಬಂದಿಲ್ಲ. ಇದೇ ರೀತಿ, ಸಮಗ್ರ ಶಿಕ್ಷಾ ಅಭಿಯಾನದ ಅಡಿಯಲ್ಲಿ ತಮಿಳುನಾಡಿಗೆ ಸುಮಾರು 4 ಸಾವಿರ ಕೋಟಿ; NHM, UGC, ಅಕ್ಕಿ ಖರೀದಿಯಲ್ಲಿ ಕೇರಳಕ್ಕೆ ಸಾವಿರಾರು ಕೋಟಿ ಬಾಕಿಯನ್ನು ಕೇಂದ್ರ ಕೊಟ್ಟಿಲ್ಲ.
ಇಡೀ ದೇಶದಲ್ಲಿ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಸರ್ಕಾರವನ್ನು ಬಿಟ್ಟರೆ, ಎರಡನೇ ಸ್ಥಾನದಲ್ಲಿರುವುದು ಕರ್ನಾಟಕ. ರಾಜ್ಯವೊಂದೇ ವರ್ಷಕ್ಕೆ ನಾಲ್ಕು ಲಕ್ಷ ಕೋಟಿಗೂ ಅಧಿಕ ಹಣವನ್ನು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಕೊಡುತ್ತದೆ. ಆದರೆ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ ಹತ್ತನೇ ಸ್ಥಾನದಲ್ಲಿದ್ದು, ಕೇವಲ ಐವತ್ತು ಸಾವಿರ ಕೋಟಿ ಮಾತ್ರ ಪಡೆಯುತ್ತದೆ. ಕೇಂದ್ರ ಸರ್ಕಾರಕ್ಕೆ ನೀಡಿದ್ದನ್ನೆಲ್ಲ ಕರ್ನಾಟಕಕ್ಕೇ ಮರುಪಾವತಿಸಬೇಕು ಎಂಬುದು ಇದರ ಅರ್ಥವಲ್ಲ. ದೇಶದ ಎಲ್ಲ ರಾಜ್ಯಗಳೂ ಸಮಾನವಾಗಿ ಅಭಿವೃದ್ಧಿ ಹೊಂದಬೇಕು. ಆದರೆ ಹಿಂದಿ ರಾಜ್ಯಗಳು ಮತ್ತು ದಕ್ಷಿಣದ ಇತರ ಭಾಷಿಕ ರಾಜ್ಯಗಳ ವಿಷಯದಲ್ಲಿ ಕೇಂದ್ರದ ತಾರತಮ್ಯ ಈ ಕ್ಷಣಕ್ಕೂ ನಿಂತಿಲ್ಲ.
ಒಕ್ಕೂಟ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಸೇರಿ ಹಂಚುವ ತೆರಿಗೆ ಹಣ 12.19 ಲಕ್ಷ ಕೋಟಿ. ಆದರೆ ಅದರಲ್ಲಿ ಕರ್ನಾಟಕ ಪಡೆಯುತ್ತಿರುವ ಪಾಲು ಕೇವಲ ಶೇ. 3.6. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶಕ್ಕೆ ಶೇ. 18, ಬಿಹಾರಕ್ಕೆ ಶೇ. 10 ಹಂಚಿಕೆಯಾಗುತ್ತದೆ. ಇದನ್ನು ಕೇಂದ್ರ ಸರ್ಕಾರದ ಆರ್ಥಿಕ ದೌರ್ಜನ್ಯ ಅಥವಾ ರಾಜಕೀಯ ಪಕ್ಷಪಾತ ಎನ್ನದೆ ವಿಧಿಯಿಲ್ಲ.
ಕಾಕತಾಳೀಯವೋ ಏನೋ, ಈ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರವಿದೆ. ಎನ್‌ಡಿಎ ಮಿತ್ರಪಕ್ಷಗಳಿರುವ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ 2024-25ರ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ಗಳನ್ನು ನೀಡಿದೆ. ಈ ರಾಜ್ಯಗಳ ಅಭಿವೃದ್ಧಿ ಯೋಜನೆಗಳಿಗೆ ತಲಾ 1 ಲಕ್ಷ ಕೋಟಿಗೂ ಅಧಿಕ ಹಣ ಕೊಟ್ಟಿದೆ. ವಿರೋಧಪಕ್ಷಗಳಿರುವ ರಾಜ್ಯಗಳಿಗೆ ಅಲ್ಪ ಹಣ ಹಂಚಿ ಕಡೆಗಣಿಸಲಾಗಿದೆ.
ದಕ್ಷಿಣ ಭಾರತದ ರಾಜ್ಯಗಳು ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳತ್ತ ಹಣವನ್ನು ವ್ಯಯಿಸುತ್ತಿದ್ದರೆ; ಉತ್ತರ ಭಾರತದ ರಾಜ್ಯಗಳು ಕೋಟ್ಯಂತರ ರೂಪಾಯಿಗಳನ್ನು ಮಂದಿರ, ಪ್ರತಿಮೆ ನಿರ್ಮಾಣಕ್ಕೆ, ಮೇಳಕ್ಕೆ ಸುರಿಯುತ್ತಿವೆ. ಸಹಜವಾಗಿಯೇ ಉತ್ತರ ಭಾರತದ ರಾಜ್ಯಗಳು ಹಿಂದುಳಿಯುತ್ತಿವೆ. ಅವರ ಪ್ರಮಾದಗಳಿಗೆ ದಕ್ಷಿಣದ ರಾಜ್ಯಗಳು ದಂಡ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಉತ್ತರ ಭಾರತವನ್ನು ಬಲವಂತವಾಗಿ ಹೇರುವ ಪ್ರಯತ್ನದಂತೆ ಕಾಣಿಸುತ್ತದೆ. ಇದು ಅಸಮಾಧಾನಕ್ಕೆ, ವಿಭಜನೆಗೆ ಕಾರಣವಾಗುತ್ತದೆ.
ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ ಎಂಬ ಏಕೈಕ ಕಾರಣದಿಂದ, ಕೇಂದ್ರ ಸರ್ಕಾರ ಈಗ ಮತ್ತೊಂದು ಮಹಾದ್ರೋಹಕ್ಕೆ- ಕ್ಷೇತ್ರ ಪುನರ್ ವಿಂಗಡಣೆಗೆ ಮುಂದಾಗಿದೆ. ಭಾರತದ ಸಂವಿಧಾನದ ಪ್ರಕಾರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಜನಸಂಖ್ಯೆಯ ಆಧಾರದ ಮೇಲೆ ಮಾಡಬೇಕೆಂಬ ನಿಯಮವಿದೆ. ದಕ್ಷಿಣದ ರಾಜ್ಯಗಳ ಫಲವಂತಿಕೆಯ ದರ(ಟಿಎಫ್ಆರ್) ಕೇರಳ 1.6, ತಮಿಳುನಾಡು 1.7, ಕರ್ನಾಟಕ 1.8 ಇದ್ದು; ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಆರ್ಥಿಕ ಬೆಳವಣಿಗೆಯಿಂದ ಜನಸಂಖ್ಯಾ ನಿಯಂತ್ರಣ ಯಶಸ್ವಿಯಾಗಿದೆ.
ಆದರೆ, ಉತ್ತರದ ರಾಜ್ಯಗಳಲ್ಲಿ ಜನಸಂಖ್ಯಾ ನಿಯಂತ್ರಣ ಕುರಿತು ತಿಳಿವಳಿಕೆ, ಜಾಗೃತಿ ಮೂಡಿಸುವವರಿಲ್ಲ. ಜನಸಂಖ್ಯೆ ಮಿತಿ ಮೀರಿದರೂ ಕೇಳುವವರಿಲ್ಲ. ಸಂವಿಧಾನದ ಪ್ರಕಾರ ನೋಡುವುದಾದರೆ, ಉತ್ತರದ ರಾಜ್ಯಗಳಿಗೆ ಲೋಕಸಭಾ ಸ್ಥಾನಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಲಿದೆ. ಸಂವಿಧಾನದ ಪ್ರಕಾರವೇ ಕೇಂದ್ರ ಸರ್ಕಾರ, ದಕ್ಷಿಣದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಕುಗ್ಗಿಸುವ ಕೆಲಸಕ್ಕೆ ಮುಂದಾದರೆ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಸುಮಾರು 20ರಿಂದ 25 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವ ಅಪಾಯವಿದೆ. ವಿಪರ್ಯಾಸವೆಂದರೆ, ಜನಸಂಖ್ಯೆ ನಿಯಂತ್ರಿಸುವಲ್ಲಿ ಯಶಸ್ವಿಯಾದ ರಾಜ್ಯಗಳಿಗೆ ಇದು ಶಿಕ್ಷೆ ವಿಧಿಸಿದಂತಾಗುತ್ತದೆ. ಹಾಗೆಯೇ ಉತ್ತರದ ರಾಜ್ಯಗಳಿಗೆ ಸುಮಾರು 40 ಸ್ಥಾನಗಳು ಹೆಚ್ಚಾಗುತ್ತವೆ.
ಇದರ ಪರಿಣಾಮವಾಗಿ, ರಾಜಕೀಯ ಶಕ್ತಿ ಸ್ಥಳಾಂತರಗೊಳ್ಳುತ್ತದೆ. ಉತ್ತರದವರ ಪ್ರಭಾವ ಹೆಚ್ಚುತ್ತದೆ. ದಕ್ಷಿಣ ರಾಜ್ಯಗಳು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದು ಉತ್ತರ-ದಕ್ಷಿಣ ವಿಭಜನೆಯ ಸೊಲ್ಲಿಗೆ ದಾರಿ ಮಾಡಿಕೊಡುತ್ತದೆ. ರಾಜಕೀಯ ಅಸ್ಥಿರತೆಗೆ ಕಾರಣವಾಗುತ್ತದೆ. ಒಕ್ಕೂಟ ವ್ಯವಸ್ಥೆ ಧಕ್ಕೆ ತರುತ್ತದೆ.
ಇದನ್ನು ಓದಿದ್ದೀರಾ?: ಬಿಗ್ ಬಾಸ್ | ರಿಯಾಲಿಟಿ ಶೋಗಳೂ, ಜನಪ್ರಿಯತೆಯ ಭ್ರಮೆಯೂ…
ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಬೇಕಾದ್ದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ ಕೇಂದ್ರದ ತೆರಿಗೆ ಹಂಚಿಕೆ, ಅನುದಾನ, ಪರಿಹಾರದ ಮೊತ್ತವನ್ನು ಕಡಿತಗೊಳಿಸುತ್ತಲೇ ಸಾಗಿರುವುದು ಪ್ರಧಾನಿ ಮೋದಿಯವರಿಗೆ ಮಹಾಪರಾಧ ಎನಿಸುತ್ತಿಲ್ಲ.
ಈ ನಿಟ್ಟಿನಲ್ಲಿ ದಕ್ಷಿಣ ರಾಜ್ಯಗಳು ಒಗ್ಗಟ್ಟು ಪ್ರದರ್ಶಿಸಿ, ತಮ್ಮ ಹಿತಾಸಕ್ತಿ ಬಲಪಡಿಸಿಕೊಳ್ಳುವ ಅಗತ್ಯವಿದೆ. ಇದು ಕೇಂದ್ರದ ತಾರತಮ್ಯ ನೀತಿಯನ್ನು ವಿರೋಧಿಸುವ ಪ್ರಜಾಸತ್ತಾತ್ಮಕ ಮಾದರಿಯ ಪ್ರತಿಭಟನೆಯ ಪ್ರತೀಕವಾಗಿದೆ. ಈ ನಿಟ್ಟಿನಲ್ಲಿ ಸಭೆ-ಸಮಾವೇಶಗಳನ್ನು ಹಮ್ಮಿಕೊಳ್ಳುವ, ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಜರೂರು ಇದೆ. ಇವು ಜನರಿಗೆ ತಿಳಿವಳಿಕೆ ತುಂಬುವ, ಜಾಗೃತರನ್ನಾಗಿಸುವ, ಪ್ರತಿಭಟಿಸುವ, ಪ್ರಶ್ನಿಸುವ ಕೆಚ್ಚನ್ನು ಕಲಿಸಲಿವೆ. ಇಂತಹ ಸಮಾವೇಶಗಳು ಇನ್ನಷು ಹೆಚ್ಚಾಗಬೇಕಾದ ಅನಿವಾರ್ಯತೆ ಇದೆ.





