ನಾಡಿನ ಜನ ಬರವನ್ನೂ ಸಹಿಸಿಕೊಂಡಿದ್ದಾರೆ. ಈಗ ಮಳೆ ಮತ್ತು ಡೆಂಘೀಯಿಂದಾದ ಅನಾಹುತವನ್ನೂ ಸಹಿಸಿಕೊಳ್ಳುತ್ತಿದ್ದಾರೆ. ಆದರೆ ನಾಡಿನ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು, ಸಚಿವರು ಏನು ಮಾಡುತ್ತಿದ್ದಾರೆ? ತುರ್ತು ಕಾರ್ಯಗಳಿಗಾಗಿಯೇ ಎತ್ತಿಟ್ಟ ಹಣ, ಅದರ ಸದುಪಯೋಗಪಡಿಸಿಕೊಳ್ಳಬೇಕಾದ ಜಿಲ್ಲಾಡಳಿತ ಏನು ಮಾಡುತ್ತಿದೆ?
ಕರ್ನಾಟಕದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಡ್ಯಾಂಗೆ ಒಳಹರಿವು ಹೆಚ್ಚಿದೆ. ಕೃಷ್ಣಾ ನದಿಯ ಉಗಮ ಸ್ಥಾನ ಮಹಾಬಲೇಶ್ವರದ ಸುತ್ತಮುತ್ತ ಪ್ರದೇಶಗಳಲ್ಲಿ ಉತ್ತಮ ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಬೆಳಗಾವಿ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಕರಾವಳಿ ಭಾಗದ ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳ ಅಂತರದಲ್ಲಿ 200 ಮಿ.ಮೀ. ಮಳೆಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹತ್ತಾರು ಹಳ್ಳಿಗಳು ಜಲಾವೃತವಾಗಿವೆ. ನೂರಾರು ಎಕರೆ ಕೃಷಿ ಭೂಮಿ, ಹತ್ತಕ್ಕೂ ಅಧಿಕ ಮನೆಗಳು ಕೊಚ್ಚಿ ಹೋಗಿವೆ. ಮಂಗಳೂರಿನಲ್ಲಿ ಕಡಲ್ಕೊರೆತದಿಂದಾಗಿ ಮೀನುಗಾರರ ಬದುಕು ಅತಂತ್ರವಾಗಿದೆ. ಶಿರಾಡಿ, ಚಾರ್ಮಾಡಿ, ಆಗುಂಬೆ ಘಾಟಿ, ಕೊಡಗಿನಲ್ಲಿ ಭೂ ಕುಸಿತ ಸಂಭವಿಸಿದೆ. ರಸ್ತೆಗಳು ಕಾಣೆಯಾಗುತ್ತಿವೆ, ಸೇತುವೆಗಳು ಮುರಿದುಬೀಳುತ್ತಿವೆ. ಹಳ್ಳಗಳು, ಕರೆ-ಕಟ್ಟೆಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಜನಜೀವನ ಅಸ್ತವ್ಯಸ್ತವಾಗಿ ಕೆಲವು ಕಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆಯೊಂದಿಗೇ ಡೆಂಘೀ ಎಂಬ ಮಾರಕ ರೋಗವೂ ಜನರನ್ನು ಕಾಡುತ್ತಿದೆ. ಸಾವು-ನೋವುಗಳ ಸುದ್ದಿಯೂ ಸುಳಿದಾಡುತ್ತಿದೆ.
ಮಳೆ ಮತ್ತು ಡೆಂಘೀಯಿಂದಾದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕಾದ ಜಿಲ್ಲಾಡಳಿತ ನಿದ್ರಾವಸ್ಥೆಯಲ್ಲಿದೆ ಎಂಬ ದೂರು ಎಲ್ಲೆಡೆಯಿಂದ ಕೇಳಿಬರುತ್ತಿದೆ.
ಜೂನ್ 3ನೇ ತಾರೀಖು ಕಂದಾಯ ಸಚಿವ ಕೃಷ್ಣಬೈರೇಗೌಡ, ‘ಅತಿವೃಷ್ಟಿಯಾಗುವ 1,763 ಸಂಭವನೀಯ ಗ್ರಾಮಗಳನ್ನು ಗುರುತಿಸಲಾಗಿದ್ದು, ಆಯಾ ಜಿಲ್ಲಾಡಳಿತಕ್ಕೆ ಪಟ್ಟಿ ನೀಡಲಾಗಿದೆ. ವಿಪತ್ತು ನಿರ್ವಹಣೆಗಾಗಿ 777 ಕೋಟಿ ಹಣವನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಖಾತೆಗಳಿಗೆ ವಿತರಿಸಲಾಗಿದೆ. ಪಂಚಾಯಿತಿ, ಕಂದಾಯ ಇಲಾಖೆ ಅಧಿಕಾರಿಗಳು, ಎಂಜಿನಿಯರುಗಳು, ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಸಣ್ಣ ನೀರಾವರಿ ಇಲಾಖೆ ಸಿಬ್ಬಂದಿ ಟಾಸ್ಕ್‌ಫೋರ್ಸ್‌ನಲ್ಲಿ ಇರಲಿದ್ದಾರೆ’ ಎಂದಿದ್ದಾರೆ.
ಮಳೆ ಮತ್ತು ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 777 ಕೋಟಿ ಹಣವಿದೆ, ಪರಿಹಾರ ಕಾರ್ಯಕ್ಕೆ ತೊಂದರೆಯಾಗುವುದಿಲ್ಲ ಎಂದು ಕಂದಾಯ ಮಂತ್ರಿಗಳು ಹೇಳಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದ್ದ ಮಾತ್ರಕ್ಕೆ ಬೀದಿಗೆ ಬಿದ್ದಿರುವ ಜನರ ಸಮಸ್ಯೆಗಳು ಬಗೆಹರಿಯುತ್ತವೆಂದಲ್ಲ. ಜನರಿಗೆ ತಕ್ಷಣಕ್ಕೆ ಅವಶ್ಯವಿರುವ ಪರಿಹಾರ, ಆಶ್ರಯ, ಆಹಾರ, ಬಟ್ಟೆ, ಮಕ್ಕಳ ಓದಿಗೆ ಅಗತ್ಯವಿರುವ ಸೌಕರ್ಯ ಇವುಗಳನ್ನು ಸಕಾಲದಲ್ಲಿ ಒದಗಿಸಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಯಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸ್ವತಃ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಿ ಪರಿಹಾರ ಕಾರ್ಯದ ಉಸ್ತುವಾರಿ ವಹಿಸಿಕೊಂಡರೆ ಮಾತ್ರ ಪ್ರಯೋಜನವಾಗುತ್ತದೆ. ಕೇವಲ ಅಧಿಕಾರಿಗಳ ಮೇಲೆ ಬಿಟ್ಟರೆ ಕಾಟಾಚಾರದ ಕೆಲಸಗಳಾಗುತ್ತವೆ.
ಇದಕ್ಕೆ ಅಪವಾದವೆಂಬಂತೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಎನ್‌ಡಿಆರ್‍ಎಫ್ ತಂಡ ಚುರುಕಾಗಿರುವುದು ಮತ್ತು ಸಂತ್ರಸ್ತರ ಸ್ಥಳಾಂತರ ಕಾರ್ಯ ಕಾಣುತ್ತಿದೆ. ಆದರೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅಗತ್ಯ ಕ್ರಮಗಳ ಕುರಿತು ಸರಣಿ ಸಭೆಗಳನ್ನು ನಡೆಸಿದರೂ, ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದು ಕಾಣುತ್ತಿಲ್ಲ. ಅಧಿಕಾರಿಗಳು ತಾವಾಗಿಯೇ ಸಂತ್ರಸ್ತರ ನೆರವಿಗೆ ಧಾವಿಸಿದ್ದೂ ವರದಿಯಾಗಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಕ್ಷಣ, ಮುಂಗಾರು-ಹಿಂಗಾರು ಕೈ ಕೊಟ್ಟು ನಾಡು ಬರಕ್ಕೆ ತುತ್ತಾಯಿತು. ಕೃಷಿ ಚಟುವಟಿಕೆಗಳು ಸ್ಥಗಿತಗೊಂಡವು. ಕೃಷಿಯನ್ನೇ ಅವಲಂಬಿಸಿದ ಕೃಷಿಕರು ಕಂಗಾಲಾದರು. ಕೆಲವು ಜಿಲ್ಲೆಗಳ ಜನ ಗುಳೆ ಹೋದರು. ಆಗ ನಿಜಕ್ಕೂ ಅವರ ಬದುಕಿಗೆ ಆಧಾರವಾದದ್ದು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು. ಒಂದು ಕುಟುಂಬಕ್ಕೆ ಕನಿಷ್ಠವೆಂದರೂ ತಿಂಗಳಿಗೆ 3ರಿಂದ 5 ಸಾವಿರ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸಂದಾಯವಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?
ಆದರೆ ಬೆಳೆ ಹಾನಿಗೆ ಬರಬೇಕಾದ ಪರಿಹಾರ ಮಾತ್ರ ಈಗಲೂ ಕನ್ನಡಿಯೊಳಗಿನ ಗಂಟೇ. ಆರಂಭದಲ್ಲಿ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುತ್ತಿಲ್ಲ ಎಂದು ರಾಜ್ಯ ಸರ್ಕಾರದಿಂದ ದೂರು ಕೇಳಿಬಂತು. ಆನಂತರ ಲೋಕಸಭಾ ಚುನಾವಣೆ ಎದುರಾಗಿ ಅದಕ್ಕೆ ಎರಡು-ಮೂರು ತಿಂಗಳು ಕಾಲ ವ್ಯಯವಾಯಿತು. ಮೊದಲ ಹಂತದ ಚುನಾವಣೆ ಮುಗಿದು, ಎರಡನೇ ಹಂತದ ಚುನಾವಣೆಗೆ ಅಣಿಯಾಗುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಘೋಷಿಸಿತು. ಇದು ಜನರಿಗೆ ತಲುಪಿದ ಬಗ್ಗೆ ಖಾತ್ರಿ ಇಲ್ಲ. ಜನ ಅದನ್ನೂ ಸಹಿಸಿಕೊಂಡಿದ್ದಾರೆ.
ಇದನ್ನೆಲ್ಲ ಮರೆಸುವಂತೆ, ನಾಡಿನ ರೈತರ ಮೊಗದಲ್ಲಿ ಸಂತಸ ಮೂಡುವಂತೆ ಈ ಬಾರಿ ಮುಂಗಾರು ಚುರುಕುಗೊಂಡಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ ಅತಿಯಾದ ಮಳೆ, ಮಳೆಯಿಂದಾದ ಡೆಂಘೀ ರೋಗ ಹರಡುವಿಕೆ ಜನರನ್ನು ಸಂಕಷ್ಟಕ್ಕೆ ದೂಡಿದೆ. ಜನ ಇದನ್ನೂ ಸಹಿಸಿಕೊಳ್ಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಸೋಮವಾರ ಸರಣಿಯೋಪಾದಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಊರುಗಳಿಗೆ ತೆರಳಿ ಜನರ ಭೇಟಿಯಾಗಿ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅಸಲಿಗೆ ಯಾವ ಅಧಿಕಾರಿಯನ್ನು ಎಲ್ಲಿಗೆ ವರ್ಗಾಯಿಸಬೇಕು, ಯಾವ ಹುದ್ದೆಯಲ್ಲಿ ಕೂರಿಸಬೇಕು ಎಂದು ನಿರ್ಧರಿಸುವ ಅಧಿಕಾರ ಸರ್ಕಾರ ನಡೆಸುವವರ ಕೈಯಲ್ಲಿಯೇ ಇರುತ್ತದೆಯಲ್ಲವೇ? ಶಾಸಕಾಂಗ ಮತ್ತು ಕಾರ್ಯಾಂಗ- ಎರಡೂ ಒಂದಾದರೆ, ಒಂದು ಮನಸ್ಸಿನಂತೆ ಕೆಲಸ ಮಾಡಿದರೆ ಕರ್ನಾಟಕದ ಕಲ್ಯಾಣವಾಗುತ್ತದಲ್ಲವೇ? ಅದನ್ನು ಕಳೆದ ನಲವತ್ತು ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿರುವ, ಈಗ ರಾಜ್ಯದ ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯನವರಿಗೆ ಹೇಳಿಕೊಡುವ ಅಗತ್ಯವಿದೆಯೇ?





