ಕಾಂಗ್ರೆಸ್ಸಿಗರ ಸಮುದಾಯವಾರು ಡಿಸಿಎಂ ಬೇಡಿಕೆ, ಅವರ ರಾಜಕಾರಣದ ಒಂದು ಭಾಗವಾಗಿರಬಹುದು. ಅವಕಾಶವಂಚಿತ ಶೋಷಿತ ಸಮುದಾಯಗಳು ಅಧಿಕಾರದ ಸ್ಥಾನಕ್ಕೇರುವುದು ತಪ್ಪಲ್ಲದಿರಬಹುದು. ಚುನಾವಣೆಗಳನ್ನು ಗೆಲ್ಲುವುದಕ್ಕೆ ಬೇಕಾಗಿರಬಹುದು. ಅದು ಅವರಿಗೆ ಅಸ್ತಿತ್ವದ ಪ್ರಶ್ನೆಯಾಗಿರಬಹುದು. ಆದರೆ, ಮತ ನೀಡಿ ಗೆಲ್ಲಿಸಿ ಅಧಿಕಾರದ ಕುರ್ಚಿಯಲ್ಲಿ ಕೂರಿಸಿದ ಮತದಾರರಿಗೆ ಇದು ಬೇಡದ ವಿಷಯ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ’ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ಅವರು ಕರೆ ಕೊಡುತ್ತಿದ್ದಂತೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಉಪ ಮುಖ್ಯಮಂತ್ರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮಕ್ಕಳನ್ನು ಅಭ್ಯರ್ಥಿಗಳನ್ನಾಗಿಸುವುದು ಎಷ್ಟು ಸರಿ ಎಂಬ ಸಣ್ಣ ಅಳುಕು ಕೂಡ ಇಲ್ಲದ ಲಜ್ಜೆಗೇಡಿ ಸಚಿವರು, ಲೋಕಸಭೆ ಚುನಾವಣೆಯ ಸೋಲಿನಿಂದ ಪಾಠ ಕಲಿಯಬೇಕಾಗಿತ್ತು. ಆದರೆ ಅದನ್ನು ಹಿನ್ನೆಲೆಗೆ ಸರಿಸಿ ಸಮುದಾಯವಾರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು, ಅದರ ಬಲದಿಂದ ಚುನಾವಣೆಗಳನ್ನು ಗೆಲ್ಲಲು ಡಿಸಿಎಂ ಬೇಡಿಕೆಯನ್ನು ಚರ್ಚೆಯ ವಸ್ತುವನ್ನಾಗಿಸಿದ್ದಾರೆ.
ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್‌ಖಾನ್, ಕೆ.ಎನ್. ರಾಜಣ್ಣ- ಬಹಿರಂಗವಾಗಿಯೇ ಹಕ್ಕು ಚಲಾಯಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಜಿ. ಪರಮೇಶ್ವರ್ (ಎಸ್‌ಸಿ), ಸತೀಶ್ ಜಾರಕಿಹೊಳಿ (ಎಸ್‌ಟಿ), ಎಂ.ಬಿ. ಪಾಟೀಲ್ (ಲಿಂಗಾಯತ), ಜಮೀರ್ ಅಹಮ್ಮದ್ ಖಾನ್ (ಮುಸ್ಲಿಂ), ಕೆ.ಎನ್. ರಾಜಣ್ಣ (ಎಸ್‌ಟಿ), ರಾಮಲಿಂಗಾರೆಡ್ಡಿ(ರೆಡ್ಡಿ-ಒಕ್ಕಲಿಗ)ಗಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತರಲು ಕೆಲ ಸಚಿವರು ದೆಹಲಿ ಯಾತ್ರೆಯನ್ನೂ ಕೈಗೊಳ್ಳುತ್ತಿದ್ದಾರೆ.
ಕಾಂಗ್ರೆಸ್ಸಿಗರ ಈ ಬೇಡಿಕೆ, ಯಾತ್ರೆ ಎಲ್ಲವೂ ಅವರ ರಾಜಕಾರಣದ ಒಂದು ಭಾಗವಾಗಿರಬಹುದು. ಅವಕಾಶವಂಚಿತ ಶೋಷಿತ ಸಮುದಾಯಗಳು ಅಧಿಕಾರದ ಸ್ಥಾನಕ್ಕೇರುವುದು ತಪ್ಪಲ್ಲದಿರಬಹುದು. ಚುನಾವಣೆಗಳನ್ನು ಗೆಲ್ಲುವುದಕ್ಕೆ ಬೇಕಾಗಿರಬಹುದು. ಅದು ಅವರಿಗೆ ಅಸ್ತಿತ್ವದ ಪ್ರಶ್ನೆಯಾಗಿರಬಹುದು. ಆದರೆ, ಮತ ನೀಡಿ ಗೆಲ್ಲಿಸಿ ಅಧಿಕಾರದ ಕುರ್ಚಿಯಲ್ಲಿ ಕೂರಿಸಿದ ಮತದಾರರಿಗೆ ಇದು ಬೇಡದ ವಿಷಯ.
ಅಷ್ಟಕ್ಕೂ ಸಂವಿಧಾನವು ಉಪ ಮುಖ್ಯಮಂತ್ರಿಗೆ ಯಾವುದೇ ಹುದ್ದೆ ಸೂಚಿಸಿಲ್ಲ. ಉಪಮುಖ್ಯಮಂತ್ರಿ ಮತ್ತು ಕ್ಯಾಬಿನೆಟ್ ಸಚಿವ ಈ ಇಬ್ಬರಿಗೂ ಶ್ರೇಣಿ, ಸಂಬಳದಲ್ಲಿ ವ್ಯತ್ಯಾಸವಿಲ್ಲ. ಸೌಲಭ್ಯ ಮತ್ತು ಹಣಕಾಸಿನ ಅಧಿಕಾರದ ವಿಷಯಗಳಲ್ಲಿ ಯಾವ ಅಂತರವೂ ಇಲ್ಲ. ಜೊತೆಗೆ ಅವರು ಪ್ರಮಾಣವಚನ ಸ್ವೀಕರಿಸುವುದು ಕೂಡ ಸಚಿವ ಎಂದೇ ಹೊರತು, ಉಪ ಮುಖ್ಯಮಂತ್ರಿ ಅಂತಲ್ಲ.
ಈ ಬಗೆಗಿನ ಪಿಐಎಲ್‌ಗೆ ಉತ್ತರಿಸಿದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ‘ಅನೇಕ ರಾಜ್ಯಗಳಲ್ಲಿ ಪಕ್ಷದಲ್ಲಿನ ಹಿರಿಯ ನಾಯಕರಿಗೆ ಸ್ವಲ್ಪ ಹೆಚ್ಚಿನ ಪ್ರಾಮುಖ್ಯತೆ ನೀಡಲು ಅಥವಾ ಸಮ್ಮಿಶ್ರ ಸರ್ಕಾರಗಳು ಅಧಿಕಾರದಲ್ಲಿ ಇರುವ ಕಡೆಗಳಲ್ಲಿ ಉಪ ಮುಖ್ಯಮಂತ್ರಿಯನ್ನು ನೇಮಿಸುವ ಪರಿಪಾಠವನ್ನು ಅಳವಡಿಸಿಕೊಂಡಿವೆ’ ಎಂದಿದ್ದಾರೆ.
ಅದೇ ರೀತಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿದ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದರು. ರಾಜಕೀಯ ಬಿಕ್ಕಟ್ಟು ಏರ್ಪಟ್ಟಿದ್ದರಿಂದ ಮಲ್ಲಿಕಾರ್ಜುನ ಖರ್ಗೆಯವರು, ತಮ್ಮೆಲ್ಲ ಅನುಭವ ಮತ್ತು ಚಾಣಾಕ್ಷತೆಯನ್ನು ಪಣಕ್ಕಿಟ್ಟು ಸಮಸ್ಯೆಯನ್ನು ಪರಿಹರಿಸಿದ್ದರು. ದೆಹಲಿ ನಾಯಕರ ಸಲಹೆಗೆ ಮಣಿದ ಶಿವಕುಮಾರ್ ಹಿಂದಕ್ಕೆ ಸರಿದಾಗ, ಅವರ ತ್ಯಾಗವನ್ನು ಗುರುತಿಸಿ ಪಕ್ಷದ ಅಧ್ಯಕ್ಷ ಸ್ಥಾನದ ಘನತೆಯನ್ನು ಎತ್ತಿ ಹಿಡಿಯಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಸಾಂಜ್ ದುಃಸ್ವಪ್ನದ ಅಂತ್ಯ- ಪತ್ರಿಕಾ ಸ್ವಾತಂತ್ರ್ಯ ಹನನದ ಆರಂಭ
ಉಪ ಮುಖ್ಯಮಂತ್ರಿ ಸ್ಥಾನವೆನ್ನುವುದು ಮುಖ್ಯಮಂತ್ರಿಗಿರುವ ಮತ್ತೊಂದೇ ಮೆಟ್ಟಿಲು ಎಂದು ಭಾವಿಸಿ ಕಾಲೆಳೆಯುವ ಕ್ರಿಯೆಯಲ್ಲಿ ಮುಳುಗುವುದು; ಮುಖ್ಯಮಂತ್ರಿಯಾದವರು ಉಪ ಮುಖ್ಯಮಂತ್ರಿಯನ್ನು ಸದಾ ಅನುಮಾನದ ದೃಷ್ಟಿಯಿಂದ ನೋಡುವುದು- ಎರಡೂ ತಪ್ಪು. ಈ ತಪ್ಪು ಇಬ್ಬರಿಂದಲೂ ನಡೆದಿದೆ. ನಡೆಯುತ್ತಲೇ ಇದೆ. ಹಾಗೆಯೇ ರಾಜಕೀಯ ಸ್ವಹಿತಾಸಕ್ತಿಗಾಗಿ ಒತ್ತಡ ಹಾಕಲು ಸಚಿವರು ಹೆಚ್ಚುವರಿ ಡಿಸಿಎಂಗಳು- ಸಮುದಾಯವಾರು ಡಿಸಿಎಂಗಳನ್ನು ರಚಿಸುವ ಬೇಡಿಕೆ ಮುಂದಿಡುವುದು ಮುತ್ಸದ್ದಿಗಳು ಮಾಡುವ ರಾಜಕಾರಣವಲ್ಲ. ಅದು ಈಗಾಗಲೇ ಇರುವ ಉಪ ಮುಖ್ಯಮಂತ್ರಿ ಹುದ್ದೆಯನ್ನು ದುರ್ಬಲಗೊಳಿಸುವ ಸ್ಪಷ್ಟ ಸೂಚನೆ. ಹಾಗೆಯೇ ಅವರ ಅಧಿಕಾರ ಮತ್ತು ಘನತೆಯನ್ನು ಅವಮಾನಿಸುವ ಕೆಲಸ.
ಪಕ್ಷದೊಳಗಿನ ಇಂತಹ ರಾಜಕೀಯ ಬೆಳವಣಿಗೆಗಳನ್ನು ಕಂಡ ಮುಖ್ಯಮಂತ್ರಿಗಳು ಹಲವು ಸಲ ಮೌನಕ್ಕೆ ಜಾರುವುದು, ಕೆಲವು ಸಲ ಬಹಿರಂಗ ಹೇಳಿಕೆಗಳನ್ನು ನೀಡಬಾರದು ಎಂದು ಸಿಟ್ಟಾಗುವುದು, ಹೈಕಮಾಂಡ್ ಕ್ರಮ ಕೈಗೊಳ್ಳದೆ ಸುಮ್ಮನಾಗುವುದು- ಬೇಡಿಕೆಯಿಟ್ಟ ಸಚಿವರ ಮಾತಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಅದು ಹಲವು ಅನುಮಾನಗಳಿಗೆ ಕಾರಣವಾಗಿ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ವಿಪಕ್ಷಗಳಿಗೆ, ಮಾಧ್ಯಮಗಳಿಗೆ ಸರಕು ಸಿಗುತ್ತದೆ. ರಾಜ್ಯದ ಜನತೆಗೆ ಬೇರೆಯದೇ ಸಂದೇಶವನ್ನು ರವಾನಿಸುತ್ತದೆ. ಜನರ ನಿರೀಕ್ಷೆಗಳನ್ನು ಹುಸಿಗೊಳಿಸುತ್ತದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತದೆ.
ಇದೇ ಸಂದರ್ಭದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗುತ್ತಿದೆ. ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ. ಬರದ ಕರಿನೆರಳಿನಿಂದ ಹೊರಬಂದ ರೈತರು ಭೂಮಿ ಹಸನು ಮಾಡುವತ್ತ, ಬಿತ್ತನೆ ಬೀಜ ಮತ್ತು ರಸಗೊಬ್ಬರದತ್ತ ಮುಖ ಮಾಡಿದ್ದಾರೆ. ಕರಾವಳಿ ಪ್ರದೇಶಗಳಲ್ಲಿ ಮಳೆ-ಗಾಳಿ ಜೋರಾಗಿ ಕಡಲ್ಕೊರೆತ ಹೆಚ್ಚಾಗಿ, ಮೀನುಗಾರರ ಬದುಕು ಮೂರಾಬಟ್ಟೆಯಾಗಿದೆ. ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ. ಡೆಂಗ್ಯೂ ರೋಗ ಹರಡುತ್ತಿದೆ. ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಮಂಡ್ಯದಲ್ಲಿ ಭ್ರೂಣಹತ್ಯೆ ಮುಂದುವರೆದಿದೆ. ಕಾನೂನುಬದ್ಧವಾಗಿ ಆಯ್ಕೆಯಾದ ಉಪನ್ಯಾಸಕರಿಗೆ ಹುದ್ದೆ ಕೊಡದೆ ಸತಾಯಿಸಲಾಗುತ್ತಿದೆ….
ಇಂತಹ ಹಲವು ಜ್ವಲಂತ ಸಮಸ್ಯೆಗಳು ಕಣ್ಣಮುಂದಿರುವಾಗ, ಸಚಿವರು ಚಿಲ್ಲರೆ ರಾಜಕಾರಣದತ್ತ ಶ್ರಮ ಮತ್ತು ಸಮಯ ಸುರಿಯುವುದು ಎಷ್ಟರಮಟ್ಟಿಗೆ ಸರಿ?





