ಈ ದಿನ ಸಂಪಾದಕೀಯ | ಭಾರತೀಯ ಕ್ರಿಕೆಟ್ ತಂಡದ ಸಮಸ್ಯೆಯೇ ‘ಗಂಭೀರ’!

Date:

ಜನರನ್ನು ಬೆಸೆಯುವ, ಮೈಮನಗಳನ್ನು ಪುಲಕಗೊಳಿಸುವ ಕ್ರೀಡೆಗೆ ಧರ್ಮ ಮತ್ತು ರಾಜಕಾರಣ ಸೋಕಿದರೆ; ಅದು ದ್ವೇಷ ಮತ್ತು ಅಸಹನೆ ಬಿತ್ತಿದರೆ ಏನಾಗಲಿದೆ ಎನ್ನುವುದಕ್ಕೆ ಇವತ್ತಿನ ಭಾರತ ಕ್ರಿಕೆಟ್ ತಂಡ ಸಾಕ್ಷಿಯಾಗಿ ನಿಂತಿದೆ. ಅದು ಸದ್ಯದ 'ಗಂಭೀರ' ಸಮಸ್ಯೆಯಾಗಿದೆ.

ಮೂರು ದಿನಗಳ ಹಿಂದೆ, ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಹಠಾತ್ತಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ವದಂತಿ ಹಬ್ಬಿತ್ತು. ಅದಕ್ಕೆ ಕಾರಣ, ಗಂಭೀರ್ ಅವರ ಒಂದು ಟ್ವೀಟ್. ಕೆಲ ಹೊತ್ತಿನಲ್ಲೇ ಅದು ಗಂಭೀರ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಮಾಡಿದ ಟ್ವೀಟ್ ಆಗಿತ್ತೆಂಬ ನಿಜ ಹೊರಬಿತ್ತು. ಅಷ್ಟರೊಳಗೆ ಅದು ಗಂಭೀರ್ ಅವರನ್ನು ಶೂಲಕ್ಕೇರಿಸಿತ್ತು, ಟೀಂ ಇಂಡಿಯಾದ ಪರ-ವಿರೋಧದ ಚರ್ಚೆ ಹುಟ್ಟುಹಾಕಿತ್ತು. ವೈರಲ್ ಆಗಿತ್ತು. ಅದಕ್ಕೆ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋಲು, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದು, ಎಲ್ಲವೂ ತಳಕು ಹಾಕಿಕೊಂಡಿತ್ತು.

ಇದನ್ನು ಗೌತಮ್ ಗಂಭೀರ್ ಸಂಭಾಳಿಸಿ ಸುಧಾರಿಸಿಕೊಳ್ಳುವಷ್ಟರಲ್ಲಿ, ನಿನ್ನೆ ಸೌತ್ ಆಫ್ರಿಕಾ ವಿರುದ್ಧ ಭಾರತ ಹೀನಾಯವಾಗಿ ಸೋತ ಸುದ್ದಿ ಹೊರಬಿದ್ದಿದೆ. ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಸ್ಥಿತಿಯಲ್ಲಿಲ್ಲದ ದೇಶದ ಕ್ರಿಕೆಟ್ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡವನ್ನು ಮೀಮ್ಸ್‌ಗಳ ಮೂಲಕ ಚಿಂದಿ ಉಡಾಯಿಸಿಬಿಟ್ಟರು. ಅವರೆಲ್ಲರ ಟಾರ್ಗೆಟ್ ಒಂದೇ- ಅದು ಗೌತಮ್ ಗಂಭೀರ್.

ನಿನ್ನೆ ಬೆಳಗ್ಗೆ ಆಟ ಶುರುವಾಗುವ ಮುಂಚೆ 27ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ, ಹಲ್ಲು ಕಚ್ಚಿ ನಿಂತಿದ್ದರೆ ಕೊನೆಪಕ್ಷ ಡ್ರಾ ಮಾಡಿಕೊಳ್ಳಬಹುದಿತ್ತು. ಕೊಂಚ ಮಟ್ಟಿಗಾದರೂ ಮಾನ ಕಾಪಾಡಿಕೊಳ್ಳಬಹುದಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋತು, ಸೌತ್ ಆಫ್ರಿಕಾದ ಬೌಲರ್‍‌ಗಳಿಗೆ ಶರಣಾಗಿತ್ತು. ಭಾರತ ತಂಡವನ್ನು 2-0 ಅಂತರದಲ್ಲಿ ‘ಮನೆಗೇ ನುಗ್ಗಿ ಹೊಡೆಯುವ’ ಮೂಲಕ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್‌ ಸರಣಿಯನ್ನ ಸಂಪೂರ್ಣ ಕೈವಶ ಮಾಡಿಕೊಂಡಿತ್ತು. ಇದರೊಂದಿಗೆ 27 ವರ್ಷಗಳ ಬಳಿಕ ಟೆಸ್ಟ್‌ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡ ಸೌತ್ ಆಫ್ರಿಕಾ ತಂಡ, 25 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದ ಸಾಧನೆ ಮಾಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಸಂವಿಧಾನ ಸಮರ್ಪಣೆ- ಬಿಜೆಪಿ ಆಡುವುದೊಂದು, ಮಾಡುವುದು ಮತ್ತೊಂದು!

ಬೆಳಗ್ಗೆಯಿಂದಲೇ ಆಟದ ಗತಿಯನ್ನು ಗಮನಿಸುತ್ತಿದ್ದ ಕೋಚ್ ಗೌತಮ್ ಗಂಭೀರ್, ಸೌತ್ ಆಫ್ರಿಕಾ ಗೆಲ್ಲುತ್ತಿದ್ದಂತೆ, ‘ನಾವು ಉತ್ತಮವಾಗಿ ಆಡಬೇಕಾಗಿತ್ತು. ಆಡಲಿಲ್ಲ. ನಾನು ಯಾವುದೇ ಆಟಗಾರನನ್ನು ದೂಷಿಸುವುದಿಲ್ಲ. ಆದರೆ, ಸೋಲಿನ ಹೊಣೆ ನನ್ನನ್ನೂ ಸೇರಿದಂತೆ ಎಲ್ಲರ ಮೇಲೂ ಇದೆ. ನನ್ನ ಭವಿಷ್ಯ ನಿರ್ಧರಿಸುವುದು ಬಿಸಿಸಿಐಗೆ ಬಿಟ್ಟ ವಿಚಾರ’ ಎಂದರು. ಆ ಮೂಲಕ, ತಲೆದಂಡಕ್ಕೆ ತಯಾರಾಗಿರುವುದನ್ನು ಸೂಚಿಸಿದರು.  

ಜೂನ್ 2024ರಿಂದ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡ ನಂತರ, ಅವರ ಮೇಲೆ ಭಾರೀ ನಿರೀಕ್ಷೆಗಳಿದ್ದವು. ಅದಕ್ಕೆ ಕಾರಣ, ಗಂಭೀರ್‍‌ಗೂ ಮುಂಚೆ ಪ್ರಧಾನ ಕೋಚ್ ಆಗಿದ್ದವರು ರಾಹುಲ್ ದ್ರಾವಿಡ್. ಅವರ ಶಿಸ್ತು, ವಿನಯ, ಸಹನೆ, ಸಮಚಿತ್ತತೆ ಆಟಗಾರರನ್ನು ಪೊರೆದಿತ್ತು; ಪ್ರೋತ್ಸಾಹಿಸಿ ಪುಟಿದೇಳುವಂತೆ ಮಾಡಿತ್ತು. ಅದಕ್ಕೆ ಸರಿಯಾಗಿ ಭಾರತೀಯ ಕ್ರಿಕೆಟ್ ತಂಡ ಹುರುಪುಗೊಂಡು, ಹಲವು ಪಂದ್ಯಗಳನ್ನು ಗೆದ್ದು ಪ್ರಶಂಸೆಗೆ ಪಾತ್ರವಾಗಿತ್ತು. ತಂಡ ಮತ್ತು ಕೋಚ್- ಒಂದು ಮನಸ್ಸಿನಂತೆ ಕಾರ್ಯನಿರ್ವಹಿಸಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ದ್ರಾವಿಡ್, ಬಹಳ ದೊಡ್ಡ ಮಾದರಿ ಬಿಟ್ಟು ಹೋಗಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ, ಬಿಸಿಸಿಐನ ಪ್ರಧಾನ ಕಾರ್ಯದರ್ಶಿಯಾಗಿದ್ದ ಜಯ್ ಶಾ, ಗೌತಮ್ ಗಂಭೀರ್ ಅವರನ್ನು ನೇಮಕ ಮಾಡಿದರು.

ದೆಹಲಿ ಮೂಲದ ಗೌತಮ್ ಗಂಭೀರ್ 2003ರಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ್ದು, 58 ಟೆಸ್ಟ್‌, 147 ಏಕದಿನ ಹಾಗೂ 37 ಟಿ20 ಪಂದ್ಯಗಳನ್ನಾಡಿದ್ದಾರೆ. 2007ರ ಟಿ20 ವಿಶ್ವಕಪ್‌, 2011ರ ಏಕದಿನ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದು, ಇಂಡಿಯಾ ಪರ ಗರಿಷ್ಠ ರನ್ ಸಿಡಿಸುವ ಮೂಲಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗೆ ನೋಡಿದರೆ, ಗೌತಮ್ ಗಂಭೀರ್ ಪ್ರತಿಭಾವಂತ ಆಟಗಾರ. ಭಾರತ ತಂಡದ ಪರ ಉತ್ತಮ ಆರಂಭಿಕ ಆಟಗಾರನಾಗಿ ಆಡಿದ ದಿನಗಳಿಂದ ಹಿಡಿದು ಎರಡು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ವಿಜೇತ ನಾಯಕನಾಗುವವರೆಗೆ, ಅವರ ಪ್ರಯಾಣವೂ ಅದ್ಭುತವಾಗಿದೆ.  

ಇಂತಹ ಹಿರಿಯ ಆಟಗಾರ ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಾಗ, ಅವರ ಮಾತು ಕೇಳುವ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಕೋಚ್‌ಗಳನ್ನು ಮತ್ತು ಫಿಸಿಯೋ ಥೆರಪಿಸ್ಟ್‌ರನ್ನು ನೇಮಿಸಿಕೊಂಡರು. ಅಷ್ಟೇ ಅಲ್ಲ ಅವರು ಹೇಳಿದವರೇ ಕ್ಯಾಪ್ಟನ್ ಆದರು. ಆ ನಂತರ ತಂಡದ ಆಟಗಾರರನ್ನು ಆಯ್ಕೆ ಮಾಡುವಾಗ ಹಿರಿಯರನ್ನು ಕಡೆಗಣಿಸಿ, ಅವಮಾನಿಸಿದರು. ಪ್ರತಿ ಪಂದ್ಯವನ್ನು ಪ್ರಯೋಗಕ್ಕೊಡ್ಡಿದರು. ಅಲ್ಲಿಗೆ ಆಟ ಗೌಣವಾಗಿ ಅಹಂ ಮೆರೆಯತೊಡಗಿತು.

ಕಳೆದ 10ರಿಂದ 12 ಟೆಸ್ಟ್ ಪಂದ್ಯಗಳನ್ನು ಗಮನಿಸಿದರೆ, ಟಾಪ್ ಆರ್ಡರ್ ಬ್ಯಾಟಿಂಗ್‌ನಲ್ಲಿ- ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಹಾನೆ, ಪೂಜಾರ, ಗಿಲ್, ಜೈಸ್ವಾಲ್, ಜುರೆಲ್ ಸೇರಿ ಹಲವರನ್ನು ಬದಲಾಯಿಸಿದರು. ಬೌಲಿಂಗ್‌ನಲ್ಲಿ ಅಶ್ವಿನ್, ಶಮಿ ಅವರನ್ನು ಕೈಬಿಟ್ಟರು. ಇದರಿಂದ ತಂಡ ಸಮತೋಲನ ಕಳೆದುಕೊಂಡಿತು. ಆಟಗಾರರ ಸ್ಥಿರತೆಗೆ ಪೆಟ್ಟುಬಿದ್ದಿತು. ಇದರ ಪರಿಣಾಮವಾಗಿ, ಇದೇ ಮೊದಲ ಬಾರಿಗೆ ಟೀಂ ಇಂಡಿಯಾ 66 ವರ್ಷಗಳಲ್ಲಿ 7 ಟೆಸ್ಟ್ ಪಂದ್ಯಗಳಲ್ಲಿ 5ರಲ್ಲಿ ಸೋತು ದಾಖಲೆ ಬರೆಯಿತು.  

ಇದಕ್ಕೆ ಮುಖ್ಯ ಕಾರಣ ಗೌತಮ್ ಗಂಭೀರ್ ಅವರ ವ್ಯಕ್ತಿತ್ವ. ಬ್ಯಾಟ್ಸ್‌ಮನ್ ಆಗಿ ಗಂಭೀರ್ ಅವರ ಆಟ ಮತ್ತು ಬದ್ಧತೆ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ, ಅವರ ಮೈದಾನದ ಹಿಂದಿನ ಅನುಭವವು ಹೆಚ್ಚಿನ ವಿವಾದಗಳಿಗೆ ಕಾರಣವಾಗಿದೆ. ಅಲ್ಲಿ ಅವರ ಎಡಬಿಡಂಗಿತನ ಎದ್ದು ಕಾಣತೊಡಗಿದೆ. ಪ್ರತಿಯೊಂದಕ್ಕೂ ಪಟ್ ಅಂತ ಟ್ವೀಟ್ ಮೂಲಕ ಪ್ರತಿಕ್ರಿಯಿಸುವ ಗಂಭೀರ್‍‌ಗೆ, ಮುಸ್ಲಿಮರ ಬಗ್ಗೆ ಪೂರ್ವಗ್ರಹವಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಬಗ್ಗೆ ಅಸಹನೆ ಇದೆ. ಕಳೆದ ಸೆಪ್ಟೆಂಬರ್‍‌ನಲ್ಲಿ ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಅದು ಎದ್ದುಕಂಡಿದೆ. ಭಾರತ ತಂಡ ಟಿ20 ಫೈನಲ್ ಪಂದ್ಯ ಗೆದ್ದಾಗ, ಪಾಕಿಸ್ತಾನದ ಆಟಗಾರರಿಗೆ ಹಸ್ತಲಾಘವ ನಿರಾಕರಿಸಿದ ವಿವಾದದ ಹಿಂದೆ ಗೌತಮ್ ಗಂಭೀರ್ ಅವರ ಹುಕುಂ ಇತ್ತೆಂಬುದು ಬಹಿರಂಗವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯ ಘನತೆಗೆ ಧಕ್ಕೆ ತಂದ ‘ಕೀರ್ತಿ’ಗೆ ಭಾರತ ಭಾಜನವಾಗಿದೆ.

ಗಂಭೀರ್ ಅವರ ಗಲೀಜಿಗೆ ಪುಷ್ಟಿ ನೀಡುವಂತೆ, 2019ರಲ್ಲಿ ಗಂಭೀರ್ ಭಾರತೀಯ ಜನತಾ ಪಕ್ಷ ಸೇರಿದ್ದು; ಪೂರ್ವ ದೆಹಲಿಗೆ ಬಿಜೆಪಿಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದದ್ದು; ಆನಂತರ ಅವರ ಮುಸ್ಲಿಂ ದ್ವೇಷಾಸೂಯೆಗೆ ಮತ್ತಷ್ಟು ಬಿರುಸು ಸಿಕ್ಕಿದ್ದು; ಅದು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿಯಾಗಿ ಭುಗಿಲೆದ್ದದ್ದನ್ನು ಕಾಣಬಹುದಾಗಿದೆ.

ಇದನ್ನು ಓದಿದ್ದೀರಾ?: ಕಾರ್ಪೊರೇಟ್ ಹಿತಕ್ಕಾಗಿ ಕಾರ್ಮಿಕರ ಹಕ್ಕುಗಳ ಹತ್ತಿಕ್ಕುತ್ತಿರುವ ಮೋದಿ

ಅದರಲ್ಲೂ 2014ರ ನಂತರ, ಭಾರತದಲ್ಲಿ ಕ್ರಿಕೆಟ್, ಕೇವಲ ಆಟವಾಗಿ ಉಳಿದಿಲ್ಲ. ಕ್ರಿಕೆಟ್ ಎನ್ನುವುದು ಇವತ್ತಿನ ದಿನಗಳಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಅದಕ್ಕೆ ರಾಜಕಾರಣ ಪ್ರವೇಶ ಪಡೆದಿದೆ. ಹಣ ಮತ್ತು ಪ್ರಚಾರದ ಹುಚ್ಚು ಹೊಳೆಯಲ್ಲಿ ಕೊಚ್ಚಿಹೋಗುತ್ತಿರುವ ಆಟಗಾರರಿಗೆ ಆಟಕ್ಕಿಂತ, ದೇಶಕ್ಕಿಂತ ದ್ವೇಷ ಮುಖ್ಯವಾಗಿದೆ.

ಜನರನ್ನು ಬೆಸೆಯುವ, ಮೈಮನಗಳನ್ನು ಪುಲಕಗೊಳಿಸುವ ಕ್ರೀಡೆಗೆ ಧರ್ಮ ಮತ್ತು ರಾಜಕಾರಣ ಸೋಕಿದರೆ; ಅದು ದ್ವೇಷ ಮತ್ತು ಅಸಹನೆ ಬಿತ್ತಿದರೆ ಏನಾಗಲಿದೆ ಎನ್ನುವುದಕ್ಕೆ ಇವತ್ತಿನ ಭಾರತ ಕ್ರಿಕೆಟ್ ತಂಡ ಸಾಕ್ಷಿಯಾಗಿ ನಿಂತಿದೆ. ಅದು ಚಿಂತನೆಗೂ ಯೋಗ್ಯವಾಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....