ಬೆಂಗಳೂರು ನಗರ ಸಂಚಾರ ದಟ್ಟಣೆಯನ್ನು ನಿವಾರಿಸಲು ಸರ್ಕಾರ ಕಠಿಣ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಹಾಗೆಯೇ ಜನ ಕೂಡ ಶಿಸ್ತು, ಸಂಚಾರ ನಿಯಮ, ನಾಗರಿಕ ಪ್ರಜ್ಞೆ, ಕಾನೂನು ಪಾಲನೆ ಬಗ್ಗೆ ಅರಿತು ಪಾಲಿಸಬೇಕಾಗಿದೆ.
ಕಳೆದ ಮಂಗಳವಾರ ರಾಜ್ಯ ಕಾಂಗ್ರೆಸ್ ಸರ್ಕಾರ, ತಾನೇ ಕರೆದಿದ್ದ ವಿಶೇಷ ಅಧಿವೇಶನಕ್ಕೆ ಗೈರು ಹಾಜರಾಗಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ ರಾಮ್ ಜಿ ಕಾಯ್ದೆ ವಿರುದ್ಧ ಪ್ರತಿಭಟಿಸಲು ಬೀದಿಗೆ ಇಳಿದಿತ್ತು. ಬೃಹತ್ ಸಮಾವೇಶಕ್ಕಾಗಿ ನಗರದ ಹೃದಯ ಭಾಗದಲ್ಲಿರುವ ಸ್ವಾತಂತ್ರ್ಯ ಉದ್ಯಾನವನ್ನು ಆಯ್ಕೆ ಮಾಡಿಕೊಂಡಿತ್ತು. ಆಡಳಿತದಲ್ಲಿರುವ ಪಕ್ಷವಾದ್ದರಿಂದ ಮುಖ್ಯಮಂತ್ರಿಗಳಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೆ, ವಿವಿಧ ಜಿಲ್ಲೆಗಳಿಂದ ಜನಸಾಗರವೇ ನಗರಕ್ಕೆ ಹರಿದು ಬಂದಿತ್ತು.
ಭಾರಿ ಜನಸ್ತೋಮದ ಕಾರಣ ಮೆಜೆಸ್ಟಿಕ್ ಹಾಗೂ ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ವಾಹನ ಸವಾರರು ಹೈರಾಣರಾದರು. ಕಚೇರಿ, ವ್ಯಾಪಾರ ಹಾಗೂ ವೈಯಕ್ತಿಕ ಕೆಲಸಕ್ಕೆ ಹೊರಟಿದ್ದ ನಗರವಾಸಿಗಳಿಗೆ ದಟ್ಟಣೆ ಬಿಸಿ ತಟ್ಟಿತು. ತುರ್ತು ಚಿಕಿತ್ಸೆಗೊಳಗಾಗಬೇಕಾದ ರೋಗಿಗಳು, ಆಂಬುಲೆನ್ಸ್‌ಗಳ ಸ್ಥಿತಿಯಂತೂ ಹೇಳತೀರದಾಗಿತ್ತು. ಸಂಚಾರ ಸುಗಮಗೊಳಿಸಲು ಪೊಲೀಸರ ಪರದಾಟ, ಅವರ ಸಹನೆಗೆ ಸವಾಲಾಗಿತ್ತು.
ನಗರ ಸಂಚಾರವನ್ನು ಸುಗಮಗೊಳಿಸಬೇಕಾದ, ನಗರ ಜೀವನವನ್ನು ಸಹ್ಯಗೊಳಿಸಬೇಕಾದ ಸರ್ಕಾರವೇ ಪ್ರತಿಭಟನೆ, ಸಮಾವೇಶಗಳನ್ನು ಹಮ್ಮಿಕೊಂಡು ಅಧ್ವಾನವೆಬ್ಬಿಸಿದರೆ ಯಾರನ್ನು ದೂರುವುದು? ನಗರದ ಸಾಮಾನ್ಯ ಪ್ರಜೆ ಮನೆ ಬಿಟ್ಟು ರಸ್ತೆಗಿಳಿದರೆ, ಅವನಿಗೆ ಎದುರಾಗುವ ಕಷ್ಟಗಳೇನು, ಸಮಸ್ಯೆಗಳೇನು ಎನ್ನುವುದು ನಾವೇ ಆಯ್ಕೆ ಮಾಡಿಕೊಂಡ ಜನಪ್ರತಿನಿಧಿಗಳಿಗೆ- ಸರ್ಕಾರಕ್ಕೆ- ಅರ್ಥವಾಗದಿದ್ದರೆ, ಹರ ಕೊಲ್ಲಲ್ ಪರ ಕಾಯ್ವನೇ?
ಇದನ್ನು ಓದಿದ್ದೀರಾ?: ಮನೆ ಮುರುಕ ಮಹಾ‘ನಾಯಕ’ ಮೊದಲಿಗನಲ್ಲ, ಕಡೆಯವನೂ ಆಗಿರುವುದಿಲ್ಲ!
ಇದೇ ಸಂದರ್ಭದಲ್ಲಿ ನೆದರ್ಲೆಂಡ್ಸ್ ಮೂಲದ ಟಾಮ್ ಟಾಮ್ ಸಂಸ್ಥೆ 2025ರ ಸಂಚಾರ ಸೂಚ್ಯಂಕ(ಟ್ರಾಫಿಕ್ ಇಂಡೆಕ್ಸ್) ವರದಿ ಬಿಡುಗಡೆ ಮಾಡಿದೆ. ಆ ವರದಿಯ ಪ್ರಕಾರ ಸಂಚಾರ ದಟ್ಟಣೆ ಪಟ್ಟಿಯಲ್ಲಿ ಮೆಕ್ಸಿಕೊ ನಗರ ಮೊದಲ ಸ್ಥಾನದಲ್ಲಿದ್ದರೆ, ಸಿಲಿಕಾನ್ ಸಿಟಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ನಗರದಲ್ಲಿ ವಾಹನಗಳ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗುತ್ತಿರುವುದು. ವಾಹನಗಳಿಗೆ ತಕ್ಕಂತೆ ರಸ್ತೆಗಳ ವಿಸ್ತರಣೆಯಾಗದಿರುವುದು ಮತ್ತು ಸಾರ್ವಜನಿಕ ಸಾರಿಗೆಯ ಬಳಕೆ ಕಡಿಮೆಯಾಗಿರುವುದು.
ಬೆಂಗಳೂರು ನಗರದಲ್ಲಿ 10 ಕಿಲೋಮೀಟರ್ ದೂರ ಕ್ರಮಿಸಲು ಸರಾಸರಿ 40 ನಿಮಿಷ ಬೇಕಾಗುತ್ತದೆ; ಕೆಲವು ಸಲ ಒಂದು ಗಂಟೆಯನ್ನೂ ಮೀರುತ್ತದೆ ಎಂದು ವರದಿ ತಿಳಿಸಿದೆ. ಬೆಂಗಳೂರು ವಿಶ್ವದ ಪ್ರಮುಖ ಐಟಿ ನಗರವಾಗಿರುವುದರ ಜೊತೆಗೆ, ಸಂಚಾರ ದಟ್ಟಣೆಯಲ್ಲೂ ಮುಂಚೂಣಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ಗಳಿಸುತ್ತಿದೆ. ಅದು ಬೆಂಗಳೂರು ನಗರ ಅಭಿವೃದ್ಧಿ ಖಾತೆಯ ಕಾರ್ಯವೈಖರಿ ಕುರಿತು ಅಸಮಾಧಾನ, ಆಕ್ರೋಶಕ್ಕೂ ಕಾರಣವಾಗುತ್ತದೆ.
ನಗರ ಸಂಚಾರ ದಟ್ಟಣೆಗೆ ಕಾರಣಗಳನ್ನು ಹುಡುಕಿದರೆ, ಅದು ಸರ್ಕಾರ ಮತ್ತು ಜನ- ಇಬ್ಬರನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಅಭಿವೃದ್ಧಿ, ಕಾಮಗಾರಿ, ತೆರಿಗೆಯ ಆಸೆಗೆ ಬಿದ್ದ ಸರ್ಕಾರ, ಹೊಸ ವಾಹನಗಳ ನೋಂದಣಿಗೆ ಕಡಿವಾಣ ಹಾಕುವುದಿಲ್ಲ. ಜನ ಸ್ವಂತ ವಾಹನಗಳ ಮೇಲಿನ ಅತಿಯಾದ ಅವಲಂಬನೆ ಕಡಿಮೆಯಾಗುತ್ತಿಲ್ಲ. ಪರ್ಯಾಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯತ್ತ ಸರ್ಕಾರ ಗಮನ ಹರಿಸುತ್ತಿಲ್ಲ. ವಾಹನ ಸವಾರರಿಗೆ ನಾಗರಿಕ ಪ್ರಜ್ಞೆ(ಸಿವಿಕ್ ಸೆನ್ಸ್)ಯ ಪರಿವೇ ಇಲ್ಲ. ಇವೆಲ್ಲವೂ ಸೇರಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ನಗರ ಬದುಕು ದಿನದಿಂದ ದಿನಕ್ಕೆ ನರಕವಾಗುತ್ತಿದೆ.
ಒಂದು ಅಂದಾಜಿನ ಪ್ರಕಾರ ಪ್ರತಿನಿತ್ಯ ಸುಮಾರು 3ರಿಂದ 4 ಸಾವಿರ- ದ್ವಿಚಕ್ರ, ಕಾರು, ಬಾಡಿಗೆ ವಾಹನಗಳು ನೋಂದಣಿಯಾಗಿ ನಗರದ ರಸ್ತೆಗಳಿಗೆ ಇಳಿಯುತ್ತಿವೆ. ಆದರೆ ಆ ವಾಹನಗಳಿಗೆ ತಕ್ಕಂತೆ ರಸ್ತೆ ಮೂಲಸೌಕರ್ಯವಿಲ್ಲ. ಅಕಸ್ಮಾತ್ ಇದ್ದರೂ ಗುಂಡಿಗಳಿಂದ ಮುಕ್ತವಾಗಿಲ್ಲ. ಅಭಿವೃದ್ಧಿಯ ನೆಪದಲ್ಲಿ ರಸ್ತೆ ಅಗೆಯುವುದು ನಿಂತಿಲ್ಲ. ಜೊತೆಗೆ ವೇಗವಾಗಿ ವಿಸ್ತರಿಸುತ್ತಿರುವ ಮಹಾನಗರಕ್ಕೆ ಸರ್ಕಾರದಿಂದ ಸಮರ್ಪಕ ಯೋಜನೆ ರೂಪಿಸಲು ಸಾಧ್ಯವಾಗುತ್ತಿಲ್ಲ. ಮೂಲಸೌಕರ್ಯ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತಿಲ್ಲ. ಈ ಎಲ್ಲ ಕಾರಣಗಳು ಸಂಚಾರ ದಟ್ಟಣೆಯೊಂದಿಗೆ ತಳುಕು ಹಾಕಿಕೊಂಡಿವೆ.
ಉತ್ತಮ ಹವಾಮಾನ, ಕಾಸ್ಮೋ ಕಲ್ಚರ್, ಸಿಲಿಕಾನ್ ಸಿಟಿ ಎಂಬ ಹೆಸರು ಗಳಿಸಿದ್ದರೂ, ರೇಜಿಗೆ ಹಿಡಿಸುವಷ್ಟು ಸಂಚಾರ ದಟ್ಟಣೆ ಬೆಂಗಳೂರಿಗೆ ಕೆಟ್ಟ ಹೆಸರು ತರುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಮಗ್ನರಾಗಬೇಕಾದ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಅದಕ್ಕೆ ವ್ಯತಿರಿಕ್ತವಾದ ಮುಂದಿನ 25 ವರ್ಷಕ್ಕೆ ಅಗತ್ಯವಿರುವ ಸಂಚಾರಿ ಮಾರ್ಗದ ಯೋಜನೆ ಕುರಿತು ಕನಸು ಬಿಚ್ಚಿಟ್ಟಿದ್ದಾರೆ. ‘ಸಂಚಾರ ದಟ್ಟಣೆ ನಿಯಂತ್ರಿಸಬೇಕು ಎಂಬ ಕಾರಣಕ್ಕೆ ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 2.50 ಲಕ್ಷ ಕೋಟಿ ಹಣವನ್ನು ಐದು ವರ್ಷಗಳಲ್ಲಿ ವೆಚ್ಚ ಮಾಡಲಾಗುವುದು. ಅದಕ್ಕಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಿಸಲಾಗುವುದು. ಇದರ ಜೊತೆಗೆ ಟನಲ್ ರಸ್ತೆಗಳು, 123 ಕಿ.ಮೀ ಎಲಿವೇಟೆಡ್ ಕಾರಿಡಾರ್‍ಗಳು, 300 ಕಿ.ಮೀ ಉದ್ದದ ಬಫರ್ ರೋಡ್‌ಗಳನ್ನು ನಿರ್ಮಿಸಲಾಗುವುದು’ ಎಂದಿದ್ದಾರೆ.
ಇದನ್ನು ಓದಿದ್ದೀರಾ?: ರಾಜ್ಯ ಪೊಲೀಸ್ ವ್ಯವಸ್ಥೆ ಕೆಡಲು ಕಾರಣರಾರು?
ಈ ಹೂಡಿಕೆ ಗಮನಾರ್ಹವಾದರೂ, ಮೂಲಸೌಕರ್ಯ ವಿಸ್ತರಣೆ ಮಾತ್ರದಿಂದಲೇ ನಗರ ಸಂಚಾರ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂಬುದನ್ನೂ ಸಚಿವರು ಅರಿಯಬೇಕಿದೆ. ಏಕೆಂದರೆ, ಅತ್ಯಾಧುನಿಕ ಯಂತ್ರೋಪಕರಣಗಳು ಲಭ್ಯವಿರುವಾಗ ವೈಟ್ ಟಾಪಿಂಗ್‌ನಂತಹ ರಸ್ತೆಗಳ ಕಾಮಗಾರಿಗಳೇ ವರ್ಷಗಟ್ಟಲೆ ಸಮಯ ತಿನ್ನುತ್ತಿವೆ. ಇನ್ನು ಟನಲ್ ರಸ್ತೆ, ಮೆಟ್ರೋ ವಿಸ್ತರಣೆ ಮತ್ತು ಉಪನಗರ ರೈಲು ಮೊದಲಾದ ದೊಡ್ಡ ದೊಡ್ಡ ಯೋಜನೆಗಳು ಜನಬಳಕೆಗೆ ಸಿಗಬೇಕಾದರೆ ಎಷ್ಟು ಸಮಯವಾಗಬಹುದು?
ಹಾಗಾಗಿ ಬೆಂಗಳೂರಿಗೆ ಬೇಕಿರುವುದು ತುರ್ತು ಕ್ರಮ, ಕಟ್ಟುನಿಟ್ಟಾದ ಅನುಷ್ಠಾನ ಮತ್ತು ಕ್ರಿಯಾಶೀಲ ದೂರದೃಷ್ಟಿ. ನಗರ ಸಂಚಾರ ದಟ್ಟಣೆಯನ್ನು ನಿವಾರಿಸಲು ಸರ್ಕಾರ ನಿರ್ಣಾಯಕ ಕ್ರಮ ಕೈಗೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಕಠಿಣ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಹಾಗೆಯೇ ಜನ ಕೂಡ ಶಿಸ್ತು, ಸಂಚಾರ ನಿಯಮ, ನಾಗರಿಕ ಪ್ರಜ್ಞೆ, ಕಾನೂನು ಪಾಲನೆ ಬಗ್ಗೆ ಅರಿತು ಪಾಲಿಸಬೇಕಾಗಿದೆ. ಬೆಂಗಳೂರನ್ನು ಎಲ್ಲರೂ ಬದುಕುವ ನಗರವನ್ನಾಗಿ ರೂಪಿಸಬೇಕಿದೆ.





