ಪ್ರಜ್ವಲ್ ಲೈಂಗಿಕ ಪ್ರಕರಣ, ಜೆಡಿಎಸ್ -ಬಿಜೆಪಿ ಜಂಟಿ ಕೃತ್ಯ. ಇದು ಕೇವಲ ಕೃತ್ಯ ಅಲ್ಲ, ಘನಘೋರ ಲೈಂಗಿಕ ಹತ್ಯಾಕಾಂಡ. ಇದನ್ನು ಖಂಡಿಸಬೇಕಾದ್ದು ಎಲ್ಲ ಮಾನವಂತರ ಕೆಲಸ. ಆದರೆ, ಕೆಲ ನೀಚರು ಜಾತಿಗೆ ಕಟ್ಟುಬಿದ್ದು ಪ್ರಜ್ವಲ್ ಪ್ರಕರಣವನ್ನು ಬಿಟ್ಟು, ದೊಡ್ಡಗೌಡರಿಗೂ ಇದಕ್ಕೂ ಸಂಬಂಧವಿಲ್ಲವೆಂದು ಸಮರ್ಥಿಸಿಕೊಳ್ಳುತ್ತಿರುವುದು- ಅವರ ಜಾತಿಗೆ, ಮಾನವೀಯತೆಗೆ ಮಾಡಿಕೊಂಡ ಅವಮಾನ…
‘ರೇವಣ್ಣ ನಮ್ಮ ಪಕ್ಷದ ಶಾಸಕ, ನನ್ನ ಸಹೋದರ. ಹಾಗಾಗಿ, ಅವರ ಪರವಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮಾಡುತ್ತೇನೆ’ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ.
ಇದೇ ಸ್ವಾಮಿಯವರು ಪ್ರಜ್ವಲ್ ಪ್ರಕರಣ ಹೊರಬಂದಾಗ, ಗೌಡರ ಕುಟುಂಬದಿಂದ ಮೊದಲ ಪ್ರತಿಕ್ರಿಯೆಯಾಗಿ, ‘ನಮ್ಮ ಕುಟುಂಬವೇ ಬೇರೆ, ರೇವಣ್ಣರ ಕುಟುಂಬವೇ ಬೇರೆ’ ಎಂದು ಆ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಹೋಗದೆ, ದೂರ ಉಳಿದಿದ್ದರು.
ಅಷ್ಟೇ ಅಲ್ಲ, ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಪ್ರಜ್ವಲ್ ರೇವಣ್ಣನವರನ್ನು ಜಾತ್ಯತೀತ ಜನತಾದಳದಿಂದ ಅಮಾನತು ಮಾಡಿದ್ದರು. ಪಕ್ಷಕ್ಕೆ ಆಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ತಕ್ಷಣ ಕ್ರಮ ಕೈಗೊಂಡಿದ್ದರು.
ಪ್ರಕರಣ ಬಯಲಾಗಿ ಇಲ್ಲಿಗೆ ಹದಿನೈದು ದಿನಗಳಾದರೂ, ಪ್ರಜ್ವಲ್-ರೇವಣ್ಣ ಲೈಂಗಿಕ ಹಗರಣ ಕುರಿತು ಗೌಡರ ಕುಟುಂಬ ಮಾತನಾಡದೆ, ಮೌನಕ್ಕೆ ಜಾರಿದೆ. ಬೇರೆ ಯಾರು ಮಾತನಾಡದಿದ್ದರೂ ಪರವಾಗಿಲ್ಲ, ಹಿರಿಯ ರಾಜಕಾರಣಿ ಎನಿಸಿಕೊಂಡಿರುವ ದೊಡ್ಡಗೌಡರು ಈ ಬಗ್ಗೆ ಪ್ರತಿಕ್ರಿಯಿಸಬೇಕಿತ್ತು. ಅದು ಅವರ ಜವಾಬ್ದಾರಿಯಾಗಿತ್ತು. ಆದರೆ ಈ ಕ್ಷಣದವರೆಗೂ ಅವರು ಬಾಯಿ ಬಿಟ್ಟಿಲ್ಲ ಎನ್ನುವುದು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿರುವ ಆರೋಪವಾಗಿದೆ.
ಗೌಡರ ಕುಟುಂಬ ರಾಜಕಾರಣವನ್ನು ಸರಿಸುಮಾರು ನಲವತ್ತು ವರ್ಷಗಳಿಂದ, ಬಹಳ ಹತ್ತಿರದಿಂದ ಕಂಡವರು, ‘ಇದರಲ್ಲೇನು ವಿಶೇಷವಿಲ್ಲ. ಅವರ ಕುಟುಂಬ ಇರುವುದೇ ಹಾಗೆ. ಗೌಡರು ಅಧಿಕಾರದ ಸ್ಥಾನಗಳಿಗೆ ಏರಿದಾಗಲೆಲ್ಲ, ಕುಟುಂಬ ಸದಸ್ಯರು ತಾವೇ ಅಧಿಕಾರದ ಕುರ್ಚಿಯಲ್ಲಿ ಕೂತವರಂತೆಯೇ ವರ್ತಿಸುತ್ತಿದ್ದರು. ಮಕ್ಕಳು-ಮೊಮ್ಮಕ್ಕಳು ಎಲ್ಲದರಲ್ಲೂ ಕೈ ಹಾಕುತ್ತಿದ್ದರು. ಗೌಡರಿಗೆ ಅದು ಅಸಂವಿಧಾನಿಕ ಎನಿಸಲಿಲ್ಲ. ಇದು ತಪ್ಪು ಎಂದು ಯಾರಿಗೂ ಬುದ್ಧಿ ಹೇಳಲಿಲ್ಲ. ಇದು 2006ರ ನಂತರ, ಇನ್ನೊಂದು ಹಂತಕ್ಕೆ ಹೋಯಿತು. ವ್ಯಾಪಾರ-ವಹಿವಾಟು ವಿಸ್ತರಿಸಿತು. ಅಧಿಕಾರ ಚಲಾಯಿಸುವಾಗ, ಆಸ್ತಿ ಮಾಡುವಾಗ, ಹಣ ಹಂಚಿಕೊಳ್ಳುವಾಗ ಮಾತ್ರ ಮೈಕ್ರೋ ಕುಟುಂಬವಾಗತೊಡಗಿತು. ಯಾರು ಹೆಚ್ಚು ಸಂಪತ್ತು ಸಂಗ್ರಹಿಸಿದ್ದಾರೆ ಎನ್ನುವುದರ ಕುರಿತು ಪೈಪೋಟಿಗಿಳಿಯುವಂತೆ ಮಾಡಿತು. ಈಗ ಪ್ರಜ್ವಲ್ ಮೇಲೆ ಬಂದಿರುವ ಆರೋಪಕ್ಕೆ, ಪರವಹಿಸಿ ಮಾತನಾಡುವುದಿರಲಿ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನೇ ನಿಲ್ಲಿಸಿದ್ದಾರೆ. ನಮಗೂ ಅದಕ್ಕೂ ಸಂಬಂಧವಿಲ್ಲವೆಂದು ಮೌನಕ್ಕೆ ಶರಣಾಗಿದ್ದಾರೆ’ ಎಂದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ಗೌಡರ ಕುಟುಂಬ ಮೌನಕ್ಕೆ ಶರಣಾಗಿರುವುದು, ಸ್ವಾಮಿಯವರು ಮಾತ್ರ ಎಲ್ಲಕ್ಕೂ ತಲೆ ಕೊಡುವಂತಾಗಿರುವುದು, ಸ್ವತಃ ಸ್ವಾಮಿಯವರಿಗೇ ಸಹಿಸಲಸಾಧ್ಯವಾದ ಸಂಕಟಕ್ಕೆ, ಸಿಟ್ಟಿಗೆ ಕಾರಣವಾಗಿದೆ. ಆದರೆ ಆ ಸಿಟ್ಟನ್ನು ಅವರು, ರಾಜಕೀಯ ಕಡುವೈರಿಗಳಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಮೇಲೆ ಕಿಡಿಕಾರುವ ಮೂಲಕ ಶಮನ ಮಾಡಿಕೊಳ್ಳುತ್ತಿದ್ದಾರೆ. ರೇವಣ್ಣನವರನ್ನು ಬಂಧಿಸಿ, ಜೈಲಿಗೆ ಹಾಕಿದ ಬಗ್ಗೆ ಕೆಂಡಾಮಂಡಲರಾಗಿದ್ದಾರೆ. ಎಸ್ಐಟಿ ಕ್ರಮವನ್ನು, ಪೆನ್ ಡ್ರೈವ್ ಹಂಚಿಕೆಯನ್ನು, ದೇವರಾಜೇಗೌಡ ಮತ್ತು ಶಿವರಾಮೇಗೌಡರೆಂಬ ಚಿಲ್ಲರೆ ವ್ಯಕ್ತಿಗಳ ಗಳಿಗೆಗೊಂದು ಹೇಳಿಕೆಯನ್ನು ಎಳೆದು ತಂದು ರಾಡಿ ಎಬ್ಬಿಸುತ್ತಿದ್ದಾರೆ. ಜೆಡಿಎಸ್ ಎಂದರೆ ಒಕ್ಕಲಿಗರ ಪಕ್ಷವೆಂದು ಭ್ರಮಿಸಿ, ಜಾತಿ ಜನರನ್ನು ರಾಜ್ಯ ಸರ್ಕಾರದ ವಿರುದ್ಧ ಮೇಲೆ ಎತ್ತಿಕಟ್ಟಲು, ಪ್ರತಿಭಟಿಸಲು ಪ್ರೇರೇಪಿಸುತ್ತಿದ್ದಾರೆ. ತನಿಖೆಯ ದಾರಿ ತಪ್ಪಿಸಲು ಹವಣಿಸುತ್ತಿದ್ದಾರೆ.
ಅಷ್ಟೇ ಅಲ್ಲ, ‘ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ವಹಿಸಿ’ ಎಂದು ಕುಮಾರಸ್ವಾಮಿಯವರು ಒತ್ತಾಯಿಸುತ್ತಿದ್ದಾರೆ. ದೆಹಲಿಯಲ್ಲಿ ಮಹಿಳಾ ಕುಸ್ತಿಪಟುಗಳು ಕಣ್ಣೀರು ಹಾಕಿದ್ದು, ಮಣಿಪುರದಲ್ಲಿ ಹೆಣ್ಣುಮಕ್ಕಳು ಬೆತ್ತಲೆಗೊಳಿಸಿ ಅವಮಾನಿಸಿದ್ದು, ಹತ್ರಾಸ್‌ನಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಪೋಷಕರಿಗೆ ಕೊಡದೆ ಸುಟ್ಟುಹಾಕಿದ್ದು ಮತ್ತು ಬಿಲ್ಕಿಸ್ ಬಾನು ಅತ್ಯಾಚಾರ-ಕೊಲೆ ಪ್ರಕರಣದ ಅಪರಾಧಿಗಳನ್ನು ಬಿಟ್ಟು ಕಳುಹಿಸಿದ್ದಲ್ಲದೆ ಮೆರವಣಿಗೆ ಮಾಡಿ ಮೆರೆದಾಡಿದ್ದು- ಎಲ್ಲವೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೇ ನಡೆದ ಹೀನ ಕೃತ್ಯಗಳು. ಸಿಬಿಐ ಎಂಬ ಸರ್ಕಾರಿ ತನಿಖಾ ಸಂಸ್ಥೆಯನ್ನು ನಗೆಪಾಟಲಿಗೀಡು ಮಾಡಿದ್ದು- ಮೋದಿಯವರ ಮಹಾನ್ ಸಾಧನೆಗಳು!
ಈಗ ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ಕೊಡಿ ಎನ್ನುವುದರ ಹಿಂದೆ ಅಡಗಿರುವುದು ಕೂಡ ಇದೇ, ಎಂದು ಯಾರು ಬೇಕಾದರೂ ಊಹಿಸಬಹುದು.
ಲೈಂಗಿಕ ದೌರ್ಜನ್ಯ ಎಸಗಿರುವವರು ಜೆಡಿಎಸ್, ಹೀನ ಕೃತ್ಯವನ್ನು ವಿಡಿಯೋ ಮಾಡಿಕೊಂಡಿರುವವರು ಜೆಡಿಎಸ್, ಆ ವಿಡಿಯೋಗಳು ನನ್ನ ಬಳಿ ಇದೆ ಎಂದು ಹೇಳಿಕೊಂಡವರು ಮತ್ತು ಸಂದರ್ಭ ಬಂದಾಗ ಬಹಿರಂಗಪಡಿಸುತ್ತೇನೆಂದು ಹೇಳಿರುವವರು ಬಿಜೆಪಿ. ಅಂದರೆ ಇದು ಜೆಡಿಎಸ್ ಮತ್ತು ಬಿಜೆಪಿಯ ಜಂಟಿ ಕೃತ್ಯ. ಇದು ಕೇವಲ ಕೃತ್ಯ ಅಲ್ಲ, ಘನಘೋರ ಲೈಂಗಿಕ ಹತ್ಯಾಕಾಂಡ.
ಇಂತಹ ಲೈಂಗಿಕ ಹತ್ಯಾಕಾಂಡವನ್ನು ಖಂಡಿಸಬೇಕಾದ್ದು ಎಲ್ಲ ಮಾನವಂತರ ಕೆಲಸ. ಆದರೆ, ಕೆಲ ನೀಚರು ಜಾತಿಗೆ ಕಟ್ಟುಬಿದ್ದು ಪ್ರಜ್ವಲ್ ಪ್ರಕರಣವನ್ನು ಬಿಟ್ಟು, ದೊಡ್ಡಗೌಡರಿಗೂ ಇದಕ್ಕೂ ಸಂಬಂಧವಿಲ್ಲವೆಂದು ಸಮರ್ಥಿಸಿಕೊಳ್ಳುತ್ತಿರುವುದು- ಒಕ್ಕಲಿಗ ಜಾತಿಗೆ ಹಾಗೂ ಮಾನವೀಯತೆಗೆ ಮಾಡಿದ ಅಪಮಾನ. ಹಾಗೆಯೇ ಸತ್ಯ ಹೇಳಬೇಕಾದ, ಸಂತ್ರಸ್ತೆಯರ ಪರ ನಿಲ್ಲಬೇಕಾದ ಸುದ್ದಿ ಮಾಧ್ಯಮಗಳು ಕೂಡ, ಜನರನ್ನು ದಾರಿ ತಪ್ಪಿಸುತ್ತಿರುವುದು ದುರಂತ.
ಇದನ್ನು ಓದಿದ್ದೀರಾ?: ಗುಜರಾತಿನ ವ್ಯಾಪಾರಿಗಳ ಕೈಗೆ ಕೋಲು: ಇದಲ್ಲವೇ ದೇವೇಗೌಡರ ದುರಂತ?
ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೂಡ ಕೊಳಕು ರಾಜಕಾರಣವನ್ನು ಬದಿಗಿಟ್ಟು, ನೊಂದ ನೂರಾರು ಸಂತ್ರಸ್ತೆಯರನ್ನು ತಮ್ಮ ಮನೆಯವರೆಂದು ಭಾವಿಸಿ, ಅವರ ಪರ ನಿಂತು ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ, ಹೆಣ್ಣು ಕುಲಕ್ಕೆ ಎಸಗಿದ ಅಕ್ಷಮ್ಯ ಅಪರಾಧವೆಂದು ಇತಿಹಾಸದಲ್ಲಿ ದಾಖಲಾಗಲಿದೆ.





