ಈ ದಿನ ಸಂಪಾದಕೀಯ | ಇದು ಉದ್ಯೋಗದ ಪ್ರಶ್ನೆಯಲ್ಲ; ಭಾಷಾ ಗೌರವ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ

Date:

ವಿದ್ಯಾವಂತ ಯುವಜನತೆ ಉದ್ಯೋಗಕ್ಕಾಗಿ ಕೇವಲ ಒಂದು ತಿಂಗಳ ಹಿಂದೆ ಬೀದಿಗಿಳಿದಿದ್ದರು. ಮಡುಗಟ್ಟಿದ ಆಕ್ರೋಶವನ್ನು ಸ್ಫೋಟಿಸಿದ್ದರು. ಈಗ ಕೇಂದ್ರ ಸರ್ಕಾರ ಉದ್ಯೋಗ ಕೊಡುವುದಿರಲಿ, ಕನ್ನಡದಲ್ಲಿ ಪರೀಕ್ಷೆ ಬರೆಯಲು ಕೂಡ ಅವಕಾಶ ಕೊಡದೆ ವಂಚಿಸುತ್ತಿದೆ. ಇದು ಕೇಂದ್ರ ಸರ್ಕಾರದ ತಾರತಮ್ಯ ನೀತಿಯಲ್ಲವೇ, ಕನ್ನಡಕ್ಕೆ ಮಾಡುತ್ತಿರುವ ದ್ರೋಹವಲ್ಲವೇ?

ರಾಜ್ಯದ 2.84 ಲಕ್ಷ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿ ಇನ್ನೂ ತಿಂಗಳು ತುಂಬಿಲ್ಲ, ಆ ಕಾವು ಇನ್ನೂ ಆರಿಲ್ಲ. ಅಲ್ಲಿಂದಲೇ ಆಳುವ ಸರ್ಕಾರದ ವಿರುದ್ಧ ಮತ್ತೊಂದು ಪ್ರತಿಭಟನೆಯ ಕೂಗು ಕೇಳಿಬಂದಿದೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ 2025ರ ಸೆ.25ರಂದು ಗೂಡ್ಸ್ ಟ್ರೇನ್ ಮ್ಯಾನೇಜರ್ 194 ಹುದ್ದೆ ಹಾಗೂ 2025ರ ನ.5ರಂದು ಹುಬ್ಬಳ್ಳಿ ವಿಭಾಗದಲ್ಲಿ 101 ಮುಂಬಡ್ತಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಈ ಪರೀಕ್ಷೆ ಮಾ.17ರಂದು ನಿಗದಿಯಾಗಿತ್ತು. ಪರೀಕ್ಷೆ ಕೇವಲ 4 ದಿನ ಇರುವಾಗ, ಈ ಸಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

ಈ ಮೊದಲು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದ ಕೇಂದ್ರ ಸರ್ಕಾರದ ಕ್ರಮದಿಂದ ಸಂತಸಗೊಂಡಿದ್ದ ಉದ್ಯೋಗಾಕಾಂಕ್ಷಿಗಳು ಕನ್ನಡ ಭಾಷೆಯಲ್ಲಿಯೇ ಓದಿ ಪರೀಕ್ಷೆಗೆ ಸಿದ್ಧರಾಗಿದ್ದರು. ಆದರೆ, ರೈಲ್ವೆ ಮಂಡಳಿಯು ಕನ್ನಡಿಗರ ಆಸೆ ಅರಳುವುದಕ್ಕೂ ಮೊದಲೇ ಚಿವುಟಿ ಹಾಕಿದೆ. ಇದರಿಂದ ಆಕ್ರೋಶಗೊಂಡಿರುವ ಉದ್ಯೋಗಾಕಾಂಕ್ಷಿಗಳು ಸೋಮವಾರ ಹುಬ್ಬಳ್ಳಿಯಲ್ಲಿ ಸಭೆ ಸೇರಿ, ಪರೀಕ್ಷೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾಗಿದೆ. ಕೇಂದ್ರದ ಕನ್ನಡ ವಿರೋಧಿ ನೀತಿಯನ್ನು ಉಗ್ರವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ, ಇಂದು ರೈಲ್ವೆ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಲು ಕರೆ ನೀಡಿದೆ. ಕನ್ನಡಿಗರ ಪ್ರತಿಭಟನೆಗೆ, ಆಕ್ರೋಶಕ್ಕೆ ಮಣಿದ ರೈಲ್ವೆ ಇಲಾಖೆ, ಗೂಡ್ಸ್ ಮ್ಯಾನೇಜರ್ ಎಲ್‌ಡಿಸಿ ಹುದ್ದೆಗಳಿಗಾಗಿ ನಡೆಸಲಿದ್ದ ಮುಂಬಡ್ತಿ ಪರೀಕ್ಷೆಯನ್ನು ರದ್ದುಪಡಿಸಿದೆ. ತಾತ್ಕಾಲಿಕವಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದೆ. ಮುಂದಿನ ಕ್ರಮಗಳ ಬಗ್ಗೆ ರೈಲ್ವೆ ಇಲಾಖೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ. ಇದು ಮುಂದಿನ ದಿನಗಳಲ್ಲಿ ಮತ್ತೊಂದು ಆಸ್ಫೋಟಕ್ಕೆ ಅವಕಾಶ ಮಾಡಿಕೊಟ್ಟರೂ ಆಶ್ಚರ್ಯವಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಅಮಾನುಷವಾಗಿ ಥಳಿಸಲಾಗಿದ್ದ ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ವಿಪರ್ಯಾಸದ ಸಂಗತಿ ಎಂದರೆ, ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣನವರು ಕನ್ನಡಿಗರು, ಕರ್ನಾಟಕದಿಂದಲೇ ಗೆದ್ದು ಸಚಿವರಾದವರು. ಕಳೆದ ಡಿಸೆಂಬರ್‍‌ನಲ್ಲಿ ‘ರೈಲ್ವೆ ಇಲಾಖೆಯ ಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡಲು ಸೂಚನೆ ನೀಡಿದ್ದೇನೆ’ ಎಂದು ಹುಬ್ಬಳ್ಳಿಯಲ್ಲಿ ಎದೆಯುಬ್ಬಿಸಿ ಹೇಳಿದ್ದರು. ಅದನ್ನು ಮತ್ತೊಬ್ಬ ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ಇದು ನಮ್ಮ ಸರ್ಕಾರದ ಸಾಧನೆ ಎಂದು ಮೋದಿಯವರನ್ನು ಹೊಗಳಿದ್ದರು. ಕೇಂದ್ರ ಸಚಿವರಿಂದ ಬಂದ ಭರವಸೆಯಿಂದ ಉದ್ಯೋಗಾಕಾಂಕ್ಷಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದರು. ಆದರೆ ರೈಲ್ವೆ ಮಂಡಳಿ ಪರೀಕ್ಷೆ ಬರೆಯಲು ನಾಲ್ಕು ದಿನವಿರುವಾಗ, ಈ ಬಾರಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ನೋಟಿಫಿಕೇಷನ್ ಹೊರಡಿಸಿದೆ.

ಕುತೂಹಲಕರ ಸಂಗತಿ ಎಂದರೆ, ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣನವರು ಮಾ. 7ರಂದು ಹುಬ್ಬಳ್ಳಿಯಲ್ಲಿದ್ದರು. ಅವರಿಗೆ ಈ ಬಾರಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎನ್ನುವುದು ಗೊತ್ತಿತ್ತು. ಗೊತ್ತಿದ್ದೂ, ‘ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯ ನನ್ನ ಗಮನಕ್ಕೆ ಬಂದಿದೆ. ಕನ್ನಡಿಗರಿಗೆ ನ್ಯಾಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದಿದ್ದರು. ಸಚಿವರ ಹೇಳಿಕೆಯನ್ನು ಯಥಾವತ್ತಾಗಿ ಪ್ರಕಟಿಸಿದ ಮಾಧ್ಯಮದವರು, ‘ಯಾವ ಬದ್ಧತೆ’ ಎಂದು ಪ್ರಶ್ನಿಸಲಿಲ್ಲ.

ಕನ್ನಡ ಭಾಷೆಯನ್ನು ಕಡೆಗಣಿಸುವ, ರೈಲ್ವೆ ರಾಜ್ಯ ಸಚಿವರ ಸೂಚನೆಯನ್ನು ನಿರ್ಲಕ್ಷಿಸುವ ರೈಲ್ವೆ ಮಂಡಳಿಯ ಈ ವರ್ತನೆ ಹೊಸದೇನೂ ಅಲ್ಲ. ಆದರೂ, ರೈಲ್ವೆ ನೇಮಕಾತಿಯಲ್ಲಿ ಎಲ್ಲಾ ಭಾಷೆಗಳಿಗೆ ಮಾನ್ಯತೆ ಸಿಗಬೇಕು ಎಂಬ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರವಾಗಿ ಚಿಂತನೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವರಾದ ಸೋಮಣ್ಣ ಮತ್ತು ಪ್ರಲ್ಹಾದ ಜೋಷಿಯವರು ಪಲುಕುವುದು ನಿಂತಿಲ್ಲ.

ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ರೈಲ್ವೆ ನೇಮಕಾತಿ ಮಂಡಲಿ ಮೊದಲಿನಿಂದಲೂ ಹಲವು ಹುದ್ದೆಗಳ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಲೇ ಬಂದಿದೆ. ಕೆಲವು ಸಂದರ್ಭಗಳಲ್ಲಿ ಪ್ರಾದೇಶಿಕ ಭಾಷೆಗಳ ಆಯ್ಕೆಯನ್ನು ನೀಡಿದರೂ, ಅದು ಎಲ್ಲ ಹುದ್ದೆಗಳಿಗೂ ಅನ್ವಯಿಸುವುದಿಲ್ಲ. ಕರ್ನಾಟಕದಲ್ಲಿ ಸಾವಿರಾರು ಯುವಕರು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ಸಂದರ್ಭದಲ್ಲಿ, ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಸಮರ್ಪಕ ಅವಕಾಶ ಇಲ್ಲದಿರುವುದು ಸ್ಪರ್ಧಾತ್ಮಕ ಸಮಾನತೆಯನ್ನು ಹಾಳುಮಾಡುತ್ತದೆ.

ಈ ಸಮಾನತೆಯನ್ನು ಸಮಾಧಿ ಮಾಡುವ ಮುಂದುವರೆದ ಭಾಗದಂತೆ, ಕರ್ನಾಟಕದ ರೈಲ್ವೆ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೂಡ ಕನ್ನಡಿಗರಲ್ಲ. ರೈಲ್ವೆಯಲ್ಲಿ ಸ್ಥಳೀಯ ಭಾಷೆ ಕಡ್ಡಾಯವಲ್ಲವಾದ್ದರಿಂದ, ಸಾರ್ವಜನಿಕ ಸೇವೆಯಲ್ಲಿ ಭಾಷೆಯ ತೊಡಕು ಉಂಟಾಗುತ್ತದೆ. ರೈಲು ನಿಲ್ದಾಣಗಳಲ್ಲಿ ಮತ್ತು ಪ್ರಯಾಣಿಕರ ಸೇವೆಯಲ್ಲಿ ನಿರತರಾದವರಿಗೆ ಸ್ಥಳೀಯ ಭಾಷೆಯ ಅರಿವು ಇಲ್ಲದಿರುವುದು ನಾಗರಿಕರಿಗೂ ತೊಂದರೆಯಾಗುತ್ತದೆ.

ಇದು ಕೇವಲ ಆಡಳಿತಾತ್ಮಕ ಸಮಸ್ಯೆಯಲ್ಲ; ಇದು ಭಾಷಾ ನ್ಯಾಯದ ಪ್ರಶ್ನೆಯಾಗಿದೆ. ಒಂದು ರಾಜ್ಯದಲ್ಲಿ ಸೇವೆ ನೀಡುವ ಕೇಂದ್ರ ಸಂಸ್ಥೆಗಳು ಆ ರಾಜ್ಯದ ಭಾಷೆಗೆ ಗೌರವ ನೀಡುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲ ಮಂತ್ರವಾಗಿದೆ. ಕನ್ನಡದ ಯುವ ಜನತೆಗೆ ಸಮಾನ ಅವಕಾಶ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಕೇಂದ್ರ ಸರ್ಕಾರ ಈ ವಿಷಯವನ್ನು ಕೇವಲ ಭಾಷಾ ರಾಜಕೀಯದ ದೃಷ್ಟಿಯಿಂದ ನೋಡುವುದಕ್ಕಿಂತ, ಸಮಾನ ಅವಕಾಶದ ಪ್ರಶ್ನೆಯಾಗಿ ಪರಿಗಣಿಸಬೇಕಾಗಿದೆ. ಕರ್ನಾಟಕದಲ್ಲಿ ನಡೆಯುವ ರೈಲ್ವೆ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯವಾದರೆ, ಸ್ಥಳೀಯರಿಗೆ ನ್ಯಾಯ ಸಿಗುತ್ತದೆ. ಜೊತೆಗೆ, ಸಾರ್ವಜನಿಕ ಸೇವೆಯ ಗುಣಮಟ್ಟವೂ ಉತ್ತಮವಾಗುತ್ತದೆ.

ಕನ್ನಡವು ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಸಮೃದ್ಧ ಭಾಷೆ. ಭಾಷೆ ಎಂದರೆ ಕೇವಲ ಸಂವಹನದ ಸಾಧನವಲ್ಲ; ಸಂಸ್ಕೃತಿ, ಇತಿಹಾಸ ಮತ್ತು ಗುರುತಿನ ಸಂಕೇತ. ಭಾರತವು ಬಹುಭಾಷಾ ಮತ್ತು ಬಹುಸಂಸ್ಕೃತಿಗಳ ದೇಶ. ಭಾರತೀಯ ಸಂವಿಧಾನವು ಎಲ್ಲಾ ಭಾಷೆಗಳಿಗೂ ಸಮಾನ ಗೌರವ ನೀಡುವುದನ್ನು ಒತ್ತಿಹೇಳುತ್ತದೆ. ಆ ಸಂವಿಧಾನಕ್ಕೆ ಹಣೆಹಚ್ಚಿ ನಮಸ್ಕರಿಸುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ, ರೈಲ್ವೆ ನೇಮಕಾತಿಯಲ್ಲಿ ಕನ್ನಡವನ್ನು ಕಡೆಗಣಿಸುತ್ತಿದೆ. ಸಾಂವಿಧಾನಿಕ ತತ್ವಗಳಿಗೆ ತಿಲಾಂಜಲಿ ಇಟ್ಟಿದೆ.

ಇದನ್ನು ಓದಿದ್ದೀರಾ?: ನಿರುದ್ಯೋಗ ಸಮಸ್ಯೆ ಸರಳವಲ್ಲ, ಸ್ಪಂದಿಸದಿದ್ದರೆ ಸರ್ಕಾರಕ್ಕೆ ತೊಂದರೆ ತಪ್ಪಿದ್ದಲ್ಲ

ವಿದ್ಯಾವಂತ ಯುವಜನತೆ ಉದ್ಯೋಗಕ್ಕಾಗಿ ಕೇವಲ ಒಂದು ತಿಂಗಳ ಹಿಂದೆ ಬೀದಿಗಿಳಿದಿದ್ದರು. ಮಡುಗಟ್ಟಿದ ಆಕ್ರೋಶವನ್ನು ಸ್ಫೋಟಿಸಿದ್ದರು. ಈಗ ಕೇಂದ್ರ ಸರ್ಕಾರ ಉದ್ಯೋಗ ಕೊಡುವುದಿರಲಿ, ಕನ್ನಡದಲ್ಲಿ ಪರೀಕ್ಷೆ ಬರೆಯಲು ಕೂಡ ಅವಕಾಶ ಕೊಡದೆ ವಂಚಿಸುತ್ತಿದೆ. ಇದು ಕೇಂದ್ರ ಸರ್ಕಾರದ ತಾರತಮ್ಯ ನೀತಿಯಲ್ಲವೇ, ಕನ್ನಡಕ್ಕೆ ಮಾಡುತ್ತಿರುವ ದ್ರೋಹವಲ್ಲವೇ?

ಕೇಂದ್ರದಲ್ಲಿ ಸಚಿವರಾಗಿರುವ ಪ್ರಲ್ಹಾದ ಜೋಷಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣನವರು ಯಾರಿಂದ ಗೆದ್ದು ಹೋಗಿ ಸಚಿವರಾಗಿದ್ದಾರೆ, ಯಾವ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ? ರಾಜ್ಯವನ್ನು ಪ್ರತಿನಿಧಿಸುವ ಸಂಸದರು, ಕರ್ನಾಟಕದವರಲ್ಲವೇ? ಇದು ಕೇವಲ ಪರೀಕ್ಷೆ ಬರೆಯುವ, ಉದ್ಯೋಗ ಗಿಟ್ಟಿಸುವ ಪ್ರಶ್ನೆಯಲ್ಲ; ಭಾಷಾ ಗೌರವ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ. ಸಂವಿಧಾನದ ಮೂಲ ತತ್ವಗಳನ್ನು, ಪ್ರಜಾಪ್ರಭುತ್ವವನ್ನು ಹಾಗೂ ವಿಶೇಷವಾಗಿ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿ ಬೆಳೆಸುವ ಪ್ರಶ್ನೆ. 

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....