ಮನುವಾದಿಗಳ ಪ್ರಯೋಗಶಾಲೆಯಾಗಿರುವ ಕರಾವಳಿಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಹಾಗೂ ವರ್ತಮಾನದ ತಲ್ಲಣಗಳಿಗೆ ಉತ್ತರ ಕಂಡುಕೊಳ್ಳಲು ಗುರು-ಗಾಂಧಿ ಶತಮಾನೋತ್ಸವ ಕಾರ್ಯಕ್ರಮವು ನಾಂದಿ ಹಾಡಲಿ.
ಮಹಾತ್ಮಾ ಗಾಂಧಿ ಮತ್ತು ನಾರಾಯಣ ಗುರುಗಳ ನಡುವಿನ ಐತಿಹಾಸಿಕ ಭೇಟಿ ಮತ್ತು ಸಂವಾದಕ್ಕೆ ನೂರು ವರ್ಷಗಳು ತುಂಬಿವೆ. ಆ ನೆನಪಿಗಾಗಿ ಡಿಸೆಂಬರ್ 3ರಂದು ಮಂಗಳೂರಿನಲ್ಲೊಂದು ಮಹತ್ವದ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮಕ್ಕೆ ಕರಾವಳಿಯನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ಸೂಕ್ತವಾಗಿದೆ.
ಗಾಂಧಿ-ಗುರುವಿನ ಆಶಯಕ್ಕೆ ತದ್ವಿರುದ್ಧವಾಗಿರುವ ಸಂಘಪರಿವಾರದ ಹುನ್ನಾರಗಳನ್ನು; ಶೂದ್ರ ಸಮುದಾಯವನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೇರುತ್ತಲೇ ಇರುವ ಬಿಜೆಪಿಯ ಷಡ್ಯಂತ್ರವನ್ನು ಬಯಲುಗೊಳಿಸುವ ಅಗತ್ಯವಿದೆ. ಜನರನ್ನು ಜಾಗೃತರನ್ನಾಗಿಸುವ ಇಂತಹ ಕಾರ್ಯಕ್ರಮಗಳು ಈ ಭಾಗದಲ್ಲಿ ಜರುಗುವ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.
ನಾರಾಯಣ ಗುರು ಎಂದಾಕ್ಷಣ ನೆನಪಾಗುವುದು ಕೇರಳ. ಆ ರಾಜ್ಯದಲ್ಲಿ ಅವರು ತಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸುಧಾರಣೆಗಳು. ಅವರು ಬೋಧಿಸಿದ ಜಗತ್ತಿನಲ್ಲಿರುವುದು ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬ ತತ್ವ.
ಇದನ್ನು ಓದಿದ್ದೀರಾ?: ಸ್ವಾತಂತ್ರ್ಯ ಹೋರಾಟದ ವೇಳೆ ಆರ್‌ಎಸ್‌ಎಸ್ ನಾಯಕರು ಮಾಡಿದ್ದೇನು ಗೊತ್ತೆ?
ಮೇಲ್ಜಾತಿಗಳ ದಬ್ಬಾಳಿಕೆ, ಮೌಢ್ಯ ಮತ್ತು ಅಂಧಶ್ರದ್ಧೆಗಳಿಂದ ನಲುಗಿ ಹೋಗಿದ್ದ ಕೇರಳವನ್ನು ನಾರಾಯಣ ಗುರುಗಳು, ತಮ್ಮ ಸಾಮಾಜಿಕ ಪರಿವರ್ತನೆಯ ಮೂಲಕ ಸುಧಾರಣೆ ತಂದ ಸಾಧಕರು. ಜಾತಿಯ ಕಾರಣಕ್ಕೆ ಧ್ವನಿ ಕಳೆದುಕೊಂಡವರಿಗೆ ದೇವಾಲಯಗಳ ಪ್ರವೇಶವನ್ನು ನಿರಾಕರಿಸಿದಾಗ- ‘ಮಡಿದೇವರನ್ನು ಪೂಜಿಸುವುದು ನಮಗೆ ಅಸಾಧ್ಯವಾದರೆ, ಮೈಲಿಗೆ ದೇವರನ್ನು ಪೂಜಿಸೋಣ’ ಎಂದರು. ಎಲ್ಲಾ ಜಾತಿಯವರಿಗೆ ಮುಕ್ತ ಪ್ರವೇಶ ನೀಡುವ ನೂರಾರು ದೇಗುಲಗಳನ್ನು ನಿರ್ಮಿಸಿದರು. ‘ಜಾತಿ ಯಾವುದಾದರೇನು, ಮನುಷ್ಯ ಒಳ್ಳೆಯನಾದರೆ ಸಾಕು’ ಎಂದ ಗುರುಗಳು, ‘ಮನುಷ್ಯಧರ್ಮ ಶ್ರೇಷ್ಠ’ ಎಂದರು. ಕೆಳ ಜಾತಿಯವರಿಗೆ ಸಂಸ್ಕೃತ ಅಧ್ಯಯನ ನಿಷಿದ್ಧವಾಗಿದ್ದ ಕಾಲದಲ್ಲಿ ಆ ಭಾಷೆಯನ್ನು ಕಲಿತು, ಕರಗತ ಮಾಡಿಕೊಂಡು ಹತ್ತಾರು ಗ್ರಂಥಗಳನ್ನು ರಚನೆ ಮಾಡಿದರು. ಗುರುಗಳು ಹುಟ್ಟು ಹಾಕಿದ ಶಾಲೆಗಳು, ಗುರುಕುಲಗಳು, ಸಂಜೆ ಕಾಲೇಜುಗಳು ಇಂದು ಸಾವಿರಾರು ಜನರಿಗೆ ವಿದ್ಯೆಯ ಬೆಳಕನ್ನು ನೀಡಿವೆ. ಅವರ ಬದುಕನ್ನು ಹಸನು ಮಾಡಿವೆ.
1925ರಲ್ಲಿ ಕೇರಳದ ವೈಕಂನಲ್ಲಿ ಸತ್ಯಾಗ್ರಹವೊಂದು ನಡೆಯಿತು. ಅದು ಅಸ್ಪೃಶ್ಯರು ಮತ್ತು ಹಿಂದುಳಿದವರಿಗೆ ದೇವಾಲಯ ಪ್ರವೇಶ ನಿಷೇಧಕ್ಕಲ್ಲ; ದೇವಾಲಯದ ಎದುರಿನ ರಸ್ತೆಯಲ್ಲಿ ಅಸ್ಪೃಶ್ಯರು ಮತ್ತು ಹಿಂದುಳಿದವರಿಗೆ ನಡೆದುಕೊಂಡು ಹೋಗಲು ಅವಕಾಶ ನೀಡಬೇಕು ಎಂಬುದಕ್ಕಾಗಿ ನಡೆದ ಸತ್ಯಾಗ್ರಹವಾಗಿತ್ತು. ಆ ಸತ್ಯಾಗ್ರಹ ಸುಮಾರು 609 ದಿನಗಳ ಕಾಲ ರಕ್ತರಹಿತವಾಗಿ, ಅತ್ಯಂತ ಶಾಂತಿಯುತವಾಗಿ ನಡೆಯಿತು. ಅದರ ಹಿಂದೆ ಅನೇಕ ದಾರ್ಶನಿಕರು, ಸ್ವತಂತ್ರ ಹೋರಾಟಗಾರರ ಶ್ರಮವಿತ್ತು. ಹಾಗೆಯೇ ನಾರಾಯಣ ಗುರುಗಳ ಮಾರ್ಗದರ್ಶನವಿತ್ತು.
ಆ ಐತಿಹಾಸಿಕ ಸತ್ಯಾಗ್ರಹವನ್ನು ಬೆಂಬಲಿಸಲು ಬಂದಿದ್ದ ಗಾಂಧೀಜಿಯವರು ಶಿವಗಿರಿಯಲ್ಲಿ ನಾರಾಯಣ ಗುರುಗಳನ್ನು ಭೇಟಿಯಾಗಿ, ಸ್ವಾತಂತ್ರ್ಯಪೂರ್ವ ದೇಶದ ಜ್ವಲಂತ ಸಮಸ್ಯೆಗಳನ್ನು ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು. ಈ ಭೇಟಿಗೆ ಈಗ ನೂರು ವರ್ಷಗಳು ತುಂಬಿವೆ. ಗಾಂಧಿ-ಗುರು ಭೇಟಿಯ ನಂತರ ದೇಶದ ಚಿತ್ರಣ ಬದಲಾಗುತ್ತದೆ. ಅದು ಮುಖ್ಯವಾಗಿ ಸಾಮಾಜಿಕ ಕ್ಷೇತ್ರದಲ್ಲಿ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಮಾರ್ಪಾಡುಗಳನ್ನು ತರುತ್ತದೆ. ಅದರಲ್ಲೂ ನಾರಾಯಣ ಗುರುಗಳನ್ನು ಭೇಟಿಯಾದ ನಂತರ, ಸ್ವತಃ ಗಾಂಧಿಯವರ ನಡೆಯಲ್ಲೂ ಕೆಲ ಬದಲಾವಣೆಗೆ ಕಾರಣವಾಗುತ್ತದೆ. ಬಹಳ ಮುಖ್ಯವಾಗಿ, ನಾರಾಯಣ ಗುರುಗಳ ಪ್ರಭಾವದಿಂದಾಗಿ ಅಸ್ಪೃಶ್ಯತೆ ನಿವಾರಣಾ ಆಂದೋಲನ ಆರಂಭಿಸುತ್ತಾರೆ. ಅಲ್ಲಿಯವರೆಗೆ ‘ಯಂಗ್ ಇಂಡಿಯಾ’ ಪತ್ರಿಕೆ ನಡೆಸುತ್ತಿದ್ದ ಗಾಂಧೀಜಿ ಆನಂತರ ‘ಹರಿಜನ’ ಪತ್ರಿಕೆ ಶುರು ಮಾಡುತ್ತಾರೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇಂತಹ ಗಾಂಧೀಜಿಯವರನ್ನು ಕೇಂದ್ರದಲ್ಲಿರುವ ಎನ್‌ಡಿಎ ನೇತೃತ್ವದ ಸರ್ಕಾರ ಬಹಿರಂಗವಾಗಿ ಗೌರವಿಸುತ್ತದೆ; ಅಂತರಂಗದಲ್ಲಿ ಹತ್ಯೆಗೈದವರ ಬೆನ್ನಿಗೆ ನಿಂತು ಬೆಂಬಲಿಸುತ್ತದೆ. ಅದು ಆರ್‌ಎಸ್‌ಎಸ್ ಎಂಬ ಸನಾತನಿಗಳ ಸಂಘದ ನೂರು ವರ್ಷಗಳ ಸಂಭ್ರಮಾಚರಣೆಗಳಲ್ಲಿ ಕಾಣುತ್ತಿದೆ. ಗಾಂಧಿ ಎಂದರೆ ಕಪಟಿ, ಅವರದು ನಾಟಕ, ಅವರೊಬ್ಬ ಬ್ರಿಟಿಷ್ ಏಜೆಂಟ್, ಶಸ್ತ್ರ ಮತ್ತು ಶಾಸ್ತ್ರದ ಬಲದಿಂದಲೇ ಸ್ವಾತಂತ್ರ್ಯ ಗಳಿಸಿದ್ದು ಎಂಬ ನರೇಟಿವ್‌ಗಳು ಈಗ ಸಾಮಾಜಿಕ ಜಾಲತಾಣಗಳನ್ನು ತುಂಬುತ್ತಿವೆ. ಗಾಂಧಿಯನ್ನು ಜನಮಾನಸದಿಂದ ಮರೆಸುವ ಕೆಲಸ ಬಹಳ ಬಿರುಸಾಗಿ ನಡೆಯುತ್ತಿದೆ. ಇದೇ ರೀತಿ ಕೇರಳದಲ್ಲಿ ನಾರಾಯಣ ಗುರುಗಳು ಮಾಡಿದ ಸಾಮಾಜಿಕ ಕ್ರಾಂತಿಯನ್ನು ಹಿನ್ನೆಲೆಗೆ ಸರಿಸಿ, ಸನಾತನ ಧರ್ಮದ ಶ್ರೇಷ್ಠತೆಯನ್ನು ಸಾರುವ ಕೆಲಸವೂ ಚಾಲ್ತಿಯಲ್ಲಿದೆ.
ಇಂತಹ ಸಂದರ್ಭದಲ್ಲಿ ನಾರಾಯಣ ಗುರು ರೂಪಿಸಿದ ಸಾಮಾಜಿಕ ಎಚ್ಚರವನ್ನು; ಗಾಂಧಿ ಕಲಿಸಿದ ಸೌಹಾರ್ದ, ಸಹಬಾಳ್ವೆ, ಸಹೋದರತ್ವದ ಮೌಲ್ಯಗಳನ್ನು ಈ ಸಮಾಜಕ್ಕೆ ಮತ್ತೆ ಮತ್ತೆ ಹೇಳಬೇಕಾದ ಅನಿವಾರ್ಯತೆ ಇದೆ. ಅವರ ತತ್ವ, ಆದರ್ಶ ಮತ್ತು ಬೋಧನೆಗಳು ಸಾರ್ವಕಾಲಿಕ ಸತ್ಯ ಎನ್ನುವುದನ್ನು ಸಾರಬೇಕಿದೆ. ಈ ದೇಶವನ್ನು ಇಲ್ಲಿಯವರೆಗೂ ಪೊರೆದದ್ದು ಈ ವಿಚಾರಗಳು ಎಂದು ಹೇಳುತ್ತಲೇ ಹೋಗಬೇಕಿದೆ.
ಇದನ್ನು ಓದಿದ್ದೀರಾ?: ಹಿಂದುತ್ವವಾದಿ ದಿನೇಶ್ ಅಮೀನ್-ಪ್ರೇಮನಾಥ್ ಕೋಟ್ಯಾನ್ ಕೊಲೆಗಾರರು ಯಾರು?
ಹಾಗೆಯೇ ಗುರು-ಗಾಂಧಿ ಸಂವಾದಕ್ಕೆ ಶತಮಾನೋತ್ಸವ ಎಂಬ ಕಾರ್ಯಕ್ರಮಗಳನ್ನು ಸರಣಿಯೋಪಾದಿಯಲ್ಲಿ ಮಾಡುವ ಮೂಲಕ ಮನುವಾದಿಗಳ ಹುನ್ನಾರವನ್ನು ಬಯಲುಗೊಳಿಸಬೇಕಿದೆ. ಅವರ ಒಡೆದಾಳುವ ನೀತಿಯನ್ನು ಮನದಟ್ಟು ಮಾಡಿಸಬೇಕಿದೆ. ಜನರಲ್ಲಿ ಜಾಗೃತಿ ಉಂಟು ಮಾಡಬೇಕಿದೆ. ಗುರು ಮತ್ತು ಗಾಂಧಿ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ; ಮನುಕುಲವನ್ನು ಸರಿದಾರಿಯಲ್ಲಿ ನಡೆಸುವ ಬೆಳಕು ಎನ್ನುವುದನ್ನು ಒತ್ತಿ ಒತ್ತಿ ಹೇಳಬೇಕಿದೆ.
ಗಾಂಧೀಜಿಯವರ ಧರ್ಮವು ಕೇವಲ ಹಿಂದೂಗಳಿಗೆ, ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಸಲ್ಲುವಂಥದ್ದು. ಹಾಗೆಯೇ ನಾರಾಯಣ ಗುರುಗಳು ತಂದ ಸಾಮಾಜಿಕ ಸುಧಾರಣೆಗಳು ಎಲ್ಲ ಕಾಲಕ್ಕೂ ಸಲ್ಲುವ ದಾರಿದೀಪಗಳು. ಇವುಗಳನ್ನು ಮುಂದು ಮಾಡಿ, ಮನುವಾದಿಗಳ ಪ್ರಯೋಗಶಾಲೆಯಾಗಿರುವ ಕರಾವಳಿಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಹಾಗೂ ವರ್ತಮಾನದ ತಲ್ಲಣಗಳಿಗೆ ಉತ್ತರ ಕಂಡುಕೊಳ್ಳಲು ಈ ಕಾರ್ಯಕ್ರಮವು ನಾಂದಿ ಹಾಡಲಿ.





