ವಿನೇಶ್ ಫೋಗಟ್ ಥರದವರ ನಡೆಗಳನ್ನು 'ರಾಜಕೀಯ'ವೆಂದು ಕರೆದು ನಗಣ್ಯಗೊಳಿಸುವುದು ಸುಲಭ. ಆದರೆ ರಾಜಕೀಯವೂ ತಪ್ಪಲ್ಲ; ದುಷ್ಟರ ರಾಜಕೀಯವನ್ನು ಒಳ್ಳೆಯ ರಾಜಕೀಯದಿಂದ ಸೋಲಿಸಲೆತ್ನಿಸುವುದೂ ತಪ್ಪಲ್ಲ. ಕೆಟ್ಟ ರಾಜಕೀಯವನ್ನು ಯಾವುದೇ ಪಕ್ಷ ಮಾಡಿದರೆ ಅದನ್ನು ನೋಡಿ ಸುಮ್ಮನಿರುವುದು ಮಾತ್ರ ತಪ್ಪು. ವಿನೇಶ್ ಫೋಗಟ್ ಅಂತಹ ತಪ್ಪನ್ನು ಮಾಡದೇ, ಒಳ್ಳೆಯ ರಾಜಕಾರಣದ ತೂಕವನ್ನು ನೂರು ಗ್ರಾಂ ಹೆಚ್ಚಿಸಲಿ ಎಂದು ಬಯಸೋಣ.
ದೇಶದ ಸಾರ್ವಜನಿಕ ಚರ್ಚೆಯಲ್ಲಿ ಒಂದು ವಿಚಿತ್ರ ವಾದ ಆಗಾಗ ಕೇಳಿ ಬರುತ್ತದೆ. ಅದು ‘ರಾಜಕಾರಣ’ದ ಕುರಿತು. ‘ಇವರು ರಾಜಕೀಯ ಮಾಡುತ್ತಾರೆ’, ‘ಅವರು ಮಾಡೋದೆಲ್ಲಾ ಕೇವಲ ರಾಜಕೀಯ’, ‘ಈ ಆರೋಪಗಳು ರಾಜಕೀಯ ಪ್ರೇರಿತ’. ಇದರಲ್ಲೆಲ್ಲಾ ರಾಜಕೀಯ ಎಂಬುದು ಒಂದು ನಕಾರಾತ್ಮಕ ಸಂಗತಿ ಎಂಬ ಒಳಾರ್ಥ ಅಡಕವಾಗಿರುತ್ತದೆ. ಪಕ್ಷ ರಾಜಕಾರಣವೇ ದೇಶವನ್ನು ಆಳುತ್ತಿರುವ ರಾಜಕೀಯ ಸಾಧನವಾಗಿದೆ; ಆದರೆ, ಪಕ್ಷವೊಂದರ ಒಳಹೊಕ್ಕವರ ಮಾತುಗಳ ವಿಶ್ವಾಸಾರ್ಹತೆ ಕಡಿಮೆ ಎಂಬಂತೆ ಸಾರ್ವಜನಿಕ ಚರ್ಚೆಯಲ್ಲಿ ಪದೆ ಪದೇ ಮುನ್ನೆಲೆಗೆ ತರಲಾಗುತ್ತದೆ. ಪಕ್ಷಗಳ ಹೊರಗಿರುವವರು ಇದನ್ನು ಹೇಳಿದಾಗ ಅರ್ಥ ಮಾಡಿಕೊಳ್ಳಬಹುದು. ಸರಿಯೋ ತಪ್ಪೋ ಅದು ನಮ್ಮ ಇಡೀ ಸಂಸದೀಯ ರಾಜಕಾರಣದ ವಿಶ್ವಾಸಾರ್ಹತೆಯ ಕುರಿತು ಇರುವ ಸಾರ್ವಜನಿಕ ಅಭಿಪ್ರಾಯ ಎಂದು ಭಾವಿಸಬಹುದು. ಆದರೆ, ಸ್ವತಃ ತಾವೇ ಪಕ್ಷಗಳ ಸದಸ್ಯರೂ, ನಾಯಕರೂ ಆಗಿರುವವರು ಈ ರೀತಿ ಮಾತಾಡುವುದೇ ವಿಚಿತ್ರ. ‘ಒಂದು ನಿರ್ದಿಷ್ಟ ಪಕ್ಷದಲ್ಲಿ ಇರುವವರು ಯಾರೇ ಆದರೂ ಸುಳ್ಳು ಹೇಳುತ್ತಾರೆ, ಆ ಪಕ್ಷದ ಗುಣದಲ್ಲೇ ಸುಳ್ಳನ್ನು ಹೇಳುವುದು ಇದೆ’ ಎಂದಾದರೂ ಹೇಳಲಿ, ಅದನ್ನೂ ಅರ್ಥ ಮಾಡಿಕೊಳ್ಳಬಹುದು. ಅದನ್ನು ದಾಟಿ ಇವರು ರಾಜಕೀಯ ಪಕ್ಷವೊಂದನ್ನು ಸೇರಿದ್ದರಿಂದ ಅವರು ಇನ್ನು ಮುಂದೆ ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲವಷ್ಟೇ ಅಲ್ಲ, ಈ ಹಿಂದೆ ಅವರು ಎತ್ತಿದ್ದ ಪ್ರಶ್ನೆಗಳೂ, ರಾಜಕೀಯ ಪ್ರೇರಿತ ಅರ್ಥಾತ್ ಅಪ್ರಸ್ತುತ, ದುರುದ್ದೇಶದಿಂದ ಕೂಡಿತ್ತು ಎಂದು ಹೇಳುವ ಅಸಂಗತ ವಿದ್ಯಮಾನ ನಮ್ಮ ದೇಶದಲ್ಲಿ ಚಾಲ್ತಿಯಲ್ಲಿದೆ.
ಈ ಸದ್ಯ ಈ ಚರ್ಚೆಗೆ ಒಂದು ಹಿನ್ನೆಲೆಯಿದೆ. ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದ ಮಹಿಳಾ ಕ್ರೀಡಾಪಟುಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಕ್ರೀಡಾ ಸಂಸ್ಥೆಯಾಗಲೀ, ಕ್ರೀಡಾ ಇಲಾಖೆಯಾಗಲೀ, ಸರ್ಕಾರವಾಗಲೀ ಈ ಕುರಿತು ಯಾವ ಕ್ರಮವನ್ನೂ ತೆಗೆದುಕೊಳ್ಳದೇ ಇದ್ದಾಗ ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಹೂಡಿದ್ದರು. ಬ್ರಿಜ್ ಭೂಷಣ್ ಸಿಂಗ್ ಬಿಜೆಪಿಗೆ ಸೇರಿದ ಸಂಸದ. ಅವರ ಮೇಲೆ ಕೊಲೆಯೂ ಸೇರಿದಂತೆ ಹಲವು ಆರೋಪಗಳಿದ್ದವು. ಮೊದಮೊದಲು ಈ ಕ್ರೀಡಾಪಟುಗಳ ಪ್ರತಿಭಟನೆಗೆ ಯಾರೂ ಅಷ್ಟು ಗಮನ ಕೊಟ್ಟಿರಲಿಲ್ಲ. ನಂತರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರು ಬೆಂಬಲ ಸೂಚಿಸಿ ಭೇಟಿ ಕೊಟ್ಟಿದ್ದರು. ಈವರೆಗೂ ಬ್ರಿಜ್ ಭೂಷಣ್ ಮೇಲೆ ಕಠಿಣವಾದ ಯಾವ ಕ್ರಮವೂ ಆಗಿಲ್ಲ; ತನಿಖೆ ಸಮರ್ಪಕವಾಗಿ ನಡೆಯುವ ವಿಶ್ವಾಸವೂ ಕ್ರೀಡಾಳುಗಳಿಗೆ ಬಂದಿಲ್ಲ.
ಈ ಮಧ್ಯೆ, ಆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹರಿಯಾಣದ ವಿನೇಶ್ ಫೋಗಟ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಲ್ಲದೇ, ಫೈನಲ್‌ವರೆಗೂ ತಲುಪಿದರು. ಆದರೆ ಅಂತಿಮ ಪಂದ್ಯದ ವೇಳೆಗೆ 100 ಗ್ರಾಂ ತೂಕ ಹೆಚ್ಚಿದ್ದರು ಎಂಬ ಕಾರಣಕ್ಕೆ ಅನರ್ಹಗೊಂಡರು. ಚಿನ್ನ ಗೆದ್ದ ಕ್ರೀಡಾಪಟುವಿಗೆ ಯಾವ ರೀತಿಯ ಶ್ಲಾಘನೆ ದಕ್ಕುತ್ತವೋ ಅದೇ ಮಟ್ಟದಲ್ಲಿ ಫೋಗಟ್ ಸಹ ಭಾರತದ ಜನರ ಅಭಿಮಾನಕ್ಕೆ ಪಾತ್ರರಾಗಿದ್ದರು. ಹರಿಯಾಣ ಮೂಲದ ಈ ಕ್ರೀಡಾಪಟು ಈಗ ಅಲ್ಲಿ ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ ಮತ್ತು ವಿಧಾನಸಭಾ ಕ್ಷೇತ್ರವೊಂದರಿಂದ ಸ್ಪರ್ಧೆಯನ್ನೂ ಮಾಡಲಿದ್ದಾರೆ.
ವಿನೇಶ್ ಫೋಗಟ್ ‘ರಾಜಕೀಯ ಸೇರಿದ್ದರಿಂದ’ ಬ್ರಿಜ್ ಭೂಷಣ್ ಸಿಂಗ್ ಸೇರಿದಂತೆ ಕೆಲವು ಬಿಜೆಪಿ ನಾಯಕರು ಪ್ರಶ್ನೆಗಳನ್ನೆತ್ತಿದ್ದಾರೆ. ‘ತಾನು ಅಂದೇ ಹೇಳಿದ್ದೆ, ಆಕೆಯ ಆರೋಪಗಳು ರಾಜಕೀಯ ಪ್ರೇರಿತ ಎಂದು’ ಎಂಬುದು ಬ್ರಿಜ್ ಭೂಷಣ್ ಸಿಂಗ್ ಅವರ ಆರೋಪ. ಹಲವು ಅತ್ಯಂತ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದ ಬ್ರಿಜ್ ಭೂಷಣ್ ಸಿಂಗ್ ಸಂಸದರಾಗಿದ್ದು, ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಲು ಸಾಧ್ಯವಾಗಿದ್ದು ರಾಜಕೀಯ ಸೇರಿದ್ದರಿಂದಲೇ. ಸಮಾಜವಾದಿ ಪಕ್ಷದಿಂದ ಒಂದು ಸಾರಿ, ಬಿಜೆಪಿಯಿಂದ ಐದು ಸಾರಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಸಿಂಗ್ ಆಡುವ ಎಲ್ಲಾ ಮಾತುಗಳು ರಾಜಕೀಯ ಪ್ರೇರಿತವಲ್ಲವೇ? ಅವರ ವಿರೋಧಿಗಳು ಆಡುವ ಮಾತುಗಳು ಮಾತ್ರ ರಾಜಕೀಯ ಪ್ರೇರಿತವೇ? ಅಸಲಿಗೆ ಈ ರಾಜಕೀಯ ಪ್ರೇರಿತ ಹೇಳಿಕೆ ಎಂದರೇನು? ಎಂಬ ಹಲವು ಪ್ರಶ್ನೆಗಳು ಏಳುತ್ತವೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲೂ ಲೈಂಗಿಕ ದೌರ್ಜನ್ಯ ತಡೆಗೆ ಆಂತರಿಕ ದೂರು ಸಮಿತಿಗಳು ಇರಲಿ
ಬ್ರಿಜ್ ಭೂಷಣ್ ಸಿಂಗ್ ಮೇಲೆ ಏನೆಲ್ಲಾ ಆರೋಪಗಳಿವೆಯೋ ಅವನ್ನೆಲ್ಲಾ ಮಾಡಲು ಸಾಧ್ಯವಾಗಿದ್ದು ಮತ್ತು ಮಾಡಿಯೂ ಜೈಲಿಗೆ ಹೋಗದೇ ಉಳಿದುಕೊಂಡಿದ್ದು ರಾಜಕೀಯ ಬಲದಿಂದ. ಹಾಗಿದ್ದ ಮೇಲೆ ಅದನ್ನು ರಾಜಕೀಯ ಬಲದಿಂದಲೇ ಎದುರಿಸಬೇಕು ಎಂದು ಬಾಧಿತರು ಭಾವಿಸುವುದಾದರೆ ಅದರಲ್ಲೇನು ತಪ್ಪು? ರಾಜಕೀಯ ಬಲವನ್ನು ಹೊಂದಿರುವ ಸಮುದಾಯಗಳು ಅದರ ಮೂಲಕ ತಮ್ಮ ಯಜಮಾನಿಕೆಯನ್ನು ಮುಂದುವರೆಸುವುದು, ಅದರಿಂದಲೇ ದಬ್ಬಾಳಿಕೆ ಮಾಡುವುದು ಸಾಧ್ಯವಾಗುವುದಾದರೆ, ಉಳಿದ ಸಮುದಾಯಗಳೂ ತಮ್ಮ ಹಕ್ಕನ್ನು, ನ್ಯಾಯವನ್ನು ಪಡೆದುಕೊಳ್ಳಲು ರಾಜಕೀಯ ಬಲವನ್ನು ಹೊಂದಲೇಬೇಕಲ್ಲವೇ? ಇದು ಸಮುದಾಯಗಳಿಗೆ ಎಷ್ಟು ನಿಜವೋ, ವ್ಯಕ್ತಿಗಳಿಗೂ ಅಷ್ಟೇ ನಿಜ. ಹಾಗಾಗಿ ವಿನೇಶ್ ಫೋಗಟ್ ಒಬ್ಬ ಕ್ರೀಡಾಪಟುವಾಗಿ, ಮಹಿಳೆಯಾಗಿ ಲೈಂಗಿಕ ಹಿಂಸೆಯ ವಿರುದ್ಧ ದನಿ ಎತ್ತಿದ್ದಕ್ಕೆ ಆಕೆಯ ಸಾರ್ವಜನಿಕ ಬದುಕಿನ ಇನ್ನೊಂದು ಆಯಾಮವಾದ ರಾಜಕಾರಣ ಪ್ರವೇಶವು ಹೆಚ್ಚಿನ ಬಲ ತಂದುಕೊಟ್ಟರೆ ಅದು ಒಳ್ಳೆಯದೇ.
ಯಾರಿಗಾದರೂ ತಕರಾರು ಇರಬಹುದಾದ ವಿಚಾರ ಏನೆಂದರೆ, ಈ ರೀತಿಯ ರಾಜಕೀಯ ಬಲವನ್ನು ಪಡೆದುಕೊಂಡು ತನ್ನ ಹೋರಾಟ ಮುಂದುವರೆಸಲು ಕಾಂಗ್ರೆಸ್ ಸೂಕ್ತವಲ್ಲ ಎಂಬ ತಕರಾರು; ಕಾಂಗ್ರೆಸ್ಸಿನೊಳಗಿನ ಬಲಾಢ್ಯರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಬಂದಾಗ, ಆ ಪಕ್ಷವು ಸಂವೇದನಾಶೀಲವಾಗಿ, ನ್ಯಾಯಯುತವಾಗಿ ನಡೆದುಕೊಂಡಿಲ್ಲ ಎಂಬ ತಕರಾರನ್ನು ಯಾರಾದರೂ ಮುಂದಿಟ್ಟರೆ, ಅದಕ್ಕೆ ಪುರಾವೆಗಳಿದ್ದರೆ– ಅದು ಚರ್ಚಾರ್ಹ ವಿಷಯ. ಅದನ್ನು ಹೊರತುಪಡಿಸಿ, ಅಧಿಕಾರಸ್ಥರಿಂದ ಆದ ಲೈಂಗಿಕ ಕಿರುಕುಳದ ವಿರುದ್ಧ ಹೋರಾಡಲು ರಾಜಕಾರಣ ಒಂದು ಅತ್ಯುತ್ತಮ ವೇದಿಕೆ ಮತ್ತು ಸಾಧನವೇ ಆಗಿರುತ್ತದೆ. ರಾಜಕೀಯ ಪಕ್ಷದ ಪ್ರತಿನಿಧಿಯಾಗಿ, ಜನಪ್ರತಿನಿಧಿಯಾಗಿ, ಶಾಸಕಿಯಾಗಿ ವಿನೇಶ್ ಫೋಗಟ್ ತನ್ನ ಕರ್ತವ್ಯ ನಿಭಾಯಿಸಲು ವಿಫಲರಾದರೆ ಉಳಿದೆಲ್ಲಾ ವಿಫಲ ಪ್ರತಿನಿಧಿಗಳಿಗೆ ಯಾವ ಮಾನದಂಡಗಳು ಅನ್ವಯಿಸುತ್ತವೋ, ಅವು ಫೋಗಟ್ ಅವರಿಗೂ ಅನ್ವಯಿಸುತ್ತವೆ.
ಪರಸ್ಪರ ದೋಷಾರೋಪಣೆ ಹೊರಿಸುವಾಗ ಅಥವಾ ಅವನ್ನು ಅಲ್ಲಗಳೆಯುವಾಗ ರಾಜಕೀಯ ಪಕ್ಷಗಳ ಸದಸ್ಯರು ಹೇಳುವ ‘ರಾಜಕೀಯ ಪ್ರೇರಿತ’ ನೆಪದ ಆಚೆಗಿನ ಇನ್ನೊಂದು ತಿಳಿವಳಿಕೆಯೂ ಅಪಾಯಕಾರಿಯಾದುದು. ಅದು apolitical – ಅರಾಜಕೀಯವಾದ. ಇದು ಅರಾಜಕತಾವಾದ ಅಲ್ಲ, ರಾಜಕೀಯವಾದ ಎಲ್ಲವೂ ತಿರಸ್ಕಾರಕ್ಕೆ ಯೋಗ್ಯ ಎಂಬ ವಾದ. ಒಂದು ರೀತಿಯಲ್ಲಿ ಇದನ್ನು ಮಧ್ಯಮ ವರ್ಗದ ದೃಷ್ಟಿಕೋನ ಎಂದೂ ಹೇಳಬಹುದು. ಇದಕ್ಕೆ ಉಳ್ಳವರ ಹಿತಾಸಕ್ತಿಯನ್ನು ಕಾಯುತ್ತಾ ತನ್ನ ಹಿತಾಸಕ್ತಿಯನ್ನೂ ಕಾಪಾಡಿಕೊಳ್ಳುತ್ತಾ ಬಂದ ವಿವಿಧ ರಾಜಕೀಯ ಪಕ್ಷಗಳ ದುರಾಡಳಿತವೇ ಪ್ರಧಾನವಾದ ಕಾರಣ ಇರಬಹುದು. ಆದರೆ, ಅದರ ಆಚೆಗೆ ಪ್ರಜಾತಂತ್ರವನ್ನೂ ನಿರಾಕರಿಸುವ ಧೋರಣೆಯೂ ಅದಕ್ಕೆ ಕಾರಣ. ಇಂದಿನ ಇಡೀ ರಾಜಕೀಯ ವ್ಯವಸ್ಥೆಯನ್ನೇ ಪೂರ್ಣ ರೂಪದಲ್ಲಿ ಬದಲಿಸಿ ಇನ್ನೊಂದು ರಾಜಕೀಯ ವ್ಯವಸ್ಥೆ ತರಬೇಕು ಎಂದಾದರೂ ಸರಿ, ರಾಜಕಾರಣ ಪ್ರಜಾತಂತ್ರವನ್ನು ಗಟ್ಟಿಗೊಳಿಸುವ, ವಿಸ್ತರಿಸುವ ಪ್ರಧಾನ ಸಾಧನ. ಬಹಳ ಕಟ್ಟುನಿಟ್ಟಾದ ಅಧಿಕಾರಿಗಿಂತ, ಉದಾರಿಯಾದ ದೊಡ್ಡ ಬಂಡವಾಳಶಾಹಿಗಿಂತ ಜನರನ್ನು ಪ್ರತಿನಿಧಿಸುವ ಜನತಾ ಪ್ರತಿನಿಧಿ ಯಾವಾಗಲೂ ಪ್ರಜಾಪ್ರಭುತ್ವವನ್ನು ವಿಸ್ತರಿಸುತ್ತಾರೆ; ಬಲಗೊಳಿಸುತ್ತಾರೆ ಎಂಬುದನ್ನು ಮರೆಯಲಾಗದು. ಅಲ್ಲಿ ಕೇಡಿನ ಪ್ರವೇಶವಾಗಿದ್ದರೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತಿವಾದ, ಕೋಮುವಾದ ಇದ್ದರೆ ಅದನ್ನು ಬದಲಿಸುವ ಹೊಸ ರಾಜಕಾರಣ ಬೇಕೇ ಹೊರತು ಸರ್ವಾಧಿಕಾರ ಅಲ್ಲ.
ಮಾಧ್ಯಮದ ಒಂದು ವಿಭಾಗವೂ ಸರ್ವಾಧಿಕಾರವನ್ನು ಉತ್ತೇಜಿಸುತ್ತಾ, ರಾಜಪ್ರಭುತ್ವವನ್ನೂ ವೈಭವೀಕರಿಸುತ್ತಾ ಪ್ರಜಾತಂತ್ರವನ್ನು ಹಿಂದಕ್ಕೆಳೆಯಲು ಶ್ರಮಿಸುತ್ತಾ ಇದೆ. ಅಂಥವರು ವಿನೇಶ್ ಫೋಗಟ್ ಥರದವರ ನಡೆಗಳನ್ನೂ ‘ರಾಜಕೀಯ’ವೆಂದು ಕರೆದು ನಗಣ್ಯಗೊಳಿಸಲು ಯತ್ನಿಸಿದ್ದನ್ನು ನಾವು ನೋಡಿದ್ದೇವೆ. ರಾಜಕೀಯವೂ ತಪ್ಪಲ್ಲ; ದುಷ್ಟರ ರಾಜಕೀಯವನ್ನು ಒಳ್ಳೆಯ ರಾಜಕೀಯದಿಂದ ಸೋಲಿಸಲೆತ್ನಿಸುವುದೂ ತಪ್ಪಲ್ಲ. ಕೆಟ್ಟ ರಾಜಕೀಯವನ್ನು ಯಾವುದೇ ಪಕ್ಷ ಮಾಡಿದರೆ ಅದನ್ನು ನೋಡಿ ಸುಮ್ಮನಿರುವುದು ಮಾತ್ರ ತಪ್ಪು. ವಿನೇಶ್ ಫೋಗಟ್ ಅಂತಹ ತಪ್ಪನ್ನು ಮಾಡದೇ, ಒಳ್ಳೆಯ ರಾಜಕಾರಣದ ತೂಕವನ್ನು ನೂರು ಗ್ರಾಂ ಹೆಚ್ಚಿಸಲಿ ಎಂದು ಬಯಸೋಣ.





