ಕಳೆದ ಹತ್ತುವರ್ಷಗಳಲ್ಲಿ ರಾಜ್ಯದ ಬಂದೀಖಾನೆಗಳ ಸುಧಾರಣೆಗೆ ಉನ್ನತ ಮಟ್ಟದ ಸಮಿತಿಗಳಿಂದ ಸಲ್ಲಿಕೆಯಾದ ನಾಲ್ಕು ವರದಿಗಳು ಸರ್ಕಾರದ ಮುಂದಿರುವುದು ಹಾಗೂ ಕ್ರಮ ಕೈಗೊಳ್ಳಲು ಮನಸ್ಸು ಮಾಡದಿರುವುದು ಏನನ್ನು ಸೂಚಿಸುತ್ತದೆ?
ರಾಜ್ಯದ ಬಹುದೊಡ್ಡ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸುದ್ದಿಗೆ, ಚರ್ಚೆಗೆ ಗ್ರಾಸವಾಗಿದೆ. ಆಳುವ-ಕೇಳುವ ಪಕ್ಷಗಳ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ. ಮುಂದುವರೆದು ಬಿಜೆಪಿ ನಾಯಕರು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸೋಮವಾರ ಸಿಎಂ ಮನೆ ಮುತ್ತಿಗೆ ಯತ್ನವೂ ನಡೆದಿದೆ. ಯಥಾಪ್ರಕಾರ ಪೊಲೀಸರು ಅವರನ್ನು ವಶಕ್ಕೆ ಪಡೆದದ್ದು, ಕೆಲವೇ ನಿಮಿಷಗಳ ನಂತರ ಬಿಡುಗಡೆಗೊಳಿಸಿದ್ದೂ ಆಗಿಹೋಗಿದೆ.
ಸಾಲದು ಎಂದು, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಆರೋಪದ ಪ್ರಕರಣವನ್ನು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿ, ತನಿಖೆಗೆ ಆದೇಶಿಸಿದ್ದಾರೆ. ಒಂದು ತಿಂಗಳಲ್ಲಿ ಸಮಗ್ರ ವರದಿ ನೀಡುವಂತೆ ಸಮಿತಿಗೆ ಸೂಚಿಸಿದ್ದಾರೆ. ಸಾಲದು ಎಂದು ಬೆಂಗಳೂರು ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಕೆ. ಸುರೇಶ್ ರನ್ನು ವರ್ಗಾವಣೆ ಮಾಡಿದ್ದಾರೆ. ಸೂಪರಿಂಟೆಂಡೆಂಟ್ ಇಮಾಂಸಾಬ್ ಮ್ಯಾಗೇರಿ ಮತ್ತು ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಿದ್ದಾರೆ.
ಅಲ್ಲಿಗೆ ಆಳುವ ಪಕ್ಷದ ಜವಾಬ್ದಾರಿಯೂ ಮುಗಿದಿದೆ. ವಿರೋಧ ಪಕ್ಷದ ನಾಯಕರ ಹೋರಾಟವೂ ತಣ್ಣಗಾಗಿದೆ.
ಇದನ್ನು ಓದಿದ್ದೀರಾ?: ಆರ್‌ಎಸ್‌ಎಸ್‌ನ ಇತಿಹಾಸವನ್ನೇ ತಿರುಚುತ್ತಿರುವ ಭಾಗವತ್!
ಹಾಗೆ ನೋಡಿದರೆ, ಕಾರಾಗೃಹಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ದೊರೆಯುವುದು ಹೊಸ ವಿಷಯವೇನೂ ಅಲ್ಲ. ಇದು ಕೈದಿಗಳನ್ನು ಕಾಯುವ ಕಾರಾಗೃಹದ ಸಿಬ್ಬಂದಿಗೂ ತಿಳಿದಿದೆ. ಅಷ್ಟೇ ಅಲ್ಲ, ಆಳುವ-ಕೇಳುವ ಪಕ್ಷಗಳ ನಾಯಕರಿಗೂ ಗೊತ್ತಿದೆ. ಗೊತ್ತಿದ್ದೂ ವಿರೋಧಪಕ್ಷದ ನಾಯಕರು ಬೀದಿಗಿಳಿದು ಕೂಗುತ್ತಾರೆ, ಆಳುವ ಪಕ್ಷದ ನಾಯಕರು ಪೊಲೀಸರನ್ನು ಬಿಟ್ಟು ಬಾಯಿ ಮುಚ್ಚಿಸುತ್ತಾರೆ. ಈ ಪ್ರಕ್ರಿಯೆಯಿಂದ ಸುದ್ದಿ ಮಾಧ್ಯಮಗಳಿಗೆ ಲಾಭವಾಗುವುದೇ ಹೊರತು, ಜೈಲು ಸುಧಾರಣೆಯಾಗಿದ್ದಂತೂ ಇಲ್ಲ.
ಕರ್ನಾಟಕದ ಮಾನವನ್ನು ಹರಾಜು ಹಾಕುವ ಇಂತಹ ಪ್ರಕರಣಗಳಿಂದ ಆಳುವ ಸರ್ಕಾರಗಳು ಎಚ್ಚೆತ್ತುಕೊಳ್ಳುವುದಾಗಲೀ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಲೀ, ದಕ್ಷ-ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸುವುದಾಗಲೀ, ಜೈಲಿನ ಸುಧಾರಣೆಯತ್ತ ಗಮನ ಹರಿಸುವುದಾಗಲೀ ಇಲ್ಲ. ಇದನ್ನು ಕಳೆದ ಹತ್ತುವರ್ಷಗಳಲ್ಲಿ ರಾಜ್ಯದ ಬಂದೀಖಾನೆಗಳ ಸುಧಾರಣೆಗೆ ಉನ್ನತ ಮಟ್ಟದ ಸಮಿತಿಗಳಿಂದ ಸಲ್ಲಿಕೆಯಾದ ನಾಲ್ಕು ವರದಿಗಳು ಸರ್ಕಾರದ ಮುಂದಿರುವುದು ಹಾಗೂ ಕ್ರಮ ಕೈಗೊಳ್ಳಲು ಮನಸ್ಸು ಮಾಡದಿರುವುದು- ಇದನ್ನು ಸಾಬೀತುಪಡಿಸುತ್ತಿದೆ.
ಜೈಲುಗಳಲ್ಲಿ ಕೈದಿಗಳು ಹೇಗಿರಬೇಕು ಎಂಬುದನ್ನು ಕಾನೂನುಬದ್ಧವಾಗಿ ನಿಯಂತ್ರಿಸುವ ನಿಯಮಗಳಿವೆ. ರಾಜಾತಿಥ್ಯ ಅಥವಾ ವಿಐಪಿ ಸೌಲಭ್ಯಗಳು ಕಾನೂನುಬಾಹಿರ ಮತ್ತು ನಿಷಿದ್ಧ ಎನ್ನುವುದನ್ನು ಕರ್ನಾಟಕ ಪ್ರಿಸನ್ಸ್ ಮ್ಯಾನುಯಲ್ 1978 (2023ರಲ್ಲಿ ಸುಧಾರಿತ) ಜೈಲುಗಳ ನಿರ್ವಹಣೆ ಕುರಿತ ನಿಯಮಾವಳಿ ಹೇಳುತ್ತದೆ. ಪ್ರತಿ ಕೈದಿಗೆ 6 ಚ.ಮೀ. ಜಾಗ, ದಿನಕ್ಕೆ ಮೂರು ಬಾರಿ ಆಹಾರ, ಎಂಟು ಗಂಟೆ ಕೆಲಸ, ವಾರಕ್ಕೊಮ್ಮೆ ವೈದ್ಯಕೀಯ ತಪಾಸಣೆ, ವಾರಕ್ಕೆರಡು ಬಾರಿ ಕುಟುಂಬದೊಂದಿಗೆ 30 ನಿಮಿಷಗಳ ಭೇಟಿ ಎನ್ನುವುದನ್ನು ಪಾಲಿಸಬೇಕೆಂದು ನಿಯಮಾವಳಿ ತಿಳಿಸುತ್ತದೆ.
ಇದಿಷ್ಟು ಗಂಭೀರ ಅಪರಾಧಗಳನ್ನು ಎಸಗಿ ಶಿಕ್ಷೆಗೊಳಗಾದ ಬಡ ಮತ್ತು ನಿರ್ಗತಿಕ ಕೈದಿಗಳಿಗೆ ಕಡ್ಡಾಯವಾಗಿರುತ್ತದೆ. ಆದರೆ ಬಲಿಷ್ಠರಿಗೆ, ಹಣವಂತರಿಗೆ ಕಾರಾಗೃಹವೂ ಸಕಲ ಸೌಕರ್ಯಗಳುಳ್ಳ ಸ್ವಂತ ಮನೆಯೇ ಆಗಿರುತ್ತದೆ. ಕೈದಿಗಳು ಮೊಬೈಲ್ ಫೋನ್, ಟಿವಿ, ಮದ್ಯ, ಮಾದಕವಸ್ತು ಮುಂತಾದ ಐಷಾರಾಮಿ ಸೌಲಭ್ಯಗಳನ್ನು ಪಡೆಯುತ್ತಿರುವ ಸಂಗತಿಯನ್ನು ಹಿಂದೊಮ್ಮೆ 2017ರಲ್ಲಿ, ಅಂದಿನ ಬಂದೀಖಾನೆ ಡಿಐಜಿ ಡಿ. ರೂಪಾ ಅವರು ವರದಿ ಸಲ್ಲಿಸುವ ಮೂಲಕ ಸರ್ಕಾರದ ಗಮನಕ್ಕೆ ತಂದಿದ್ದರು.
ಅದಾದ ನಂತರವೂ, 2021ರಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಗೆಳತಿ ಶಶಿಕಲಾಗೆ ರಾಜಾತಿಥ್ಯ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇತ್ತೀಚೆಗೆ ಚಿತ್ರನಟ ದರ್ಶನ್ ಹಾಗೂ ಕೆಲವು ಕೈದಿಗಳು ಕಾರಾಗೃಹದೊಳಗೆ ಬಿಡುಬೀಸಾಗಿ ಕೂತು ಸಿಗರೇಟ್-ಕಾಫಿ ಕುಡಿಯುತ್ತಿದ್ದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಕಳೆದ ಜುಲೈನಲ್ಲಿ ಜೈಲಿನಲ್ಲಿರುವ ಕೈದಿಗಳಿಗೆ ಮೊಬೈಲ್ ಪೂರೈಸುವ ಕಾಳದಂಧೆಯಲ್ಲಿ ಜೈಲಿನಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯನೇ ಸಿಲುಕಿಕೊಂಡಿದ್ದು ಸುದ್ದಿಯಾಗಿತ್ತು.
ಅಂದರೆ, ಹಣ, ಅಧಿಕಾರ, ಪ್ರಭಾವ ಹೊಂದಿರುವ ಕೈದಿಗಳಿಗೆ ರಾಜಾತಿಥ್ಯ ದೊರಕುತ್ತದೆ. ಮೊಬೈಲ್ ಜಾಮರ್‌ಗಳು, ಸಿಸಿ ಟಿವಿಗಳು, ಪೊಲೀಸ್ ಬಿಗಿ ಭದ್ರತೆಯ ನಡುವೆಯೂ ನಿಷೇಧಿತ ವಸ್ತುಗಳು ಕೈದಿಗಳ ಕೈ ಸೇರುತ್ತದೆ ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ. ಇದು ಕಾರಾಗೃಹ ನಿಯಮಗಳ ಉಲ್ಲಂಘನೆಯಷ್ಟೇ ಅಲ್ಲ, ಕಾಯುವ ಹೊಣೆ ಹೊತ್ತ ಖಾಕಿ ಪಡೆಯನ್ನು ಅನುಮಾನದಿಂದ ನೋಡುವಂತೆ ಮಾಡುತ್ತದೆ. ಜೈಲಿನ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುತ್ತದೆ. ಜೈಲು ಸಿಬ್ಬಂದಿಯೇ ಕಾಳದಂಧೆಯಲ್ಲಿ ಪಾಲ್ಗೊಂಡು ಪಾಲುದಾರರಾಗುವ ಕತೆ ಹೇಳುತ್ತದೆ.
ಮೊದಲಿಗೆ ಸರ್ಕಾರ ರಾಜ್ಯದಲ್ಲಿರುವ 105 ಜೈಲುಗಳ ಸುಧಾರಣೆಯತ್ತ ಗಮನ ಹರಿಸಬೇಕಾಗಿದೆ. ಜೈಲುಗಳ ಭದ್ರತೆಗೆ ಮೊದಲ ಆದ್ಯತೆ ನೀಡಿ, ಮೂಲಭೂತ ಸೌಲಭ್ಯಗಳು ಹಾಗೂ ಸಿಬ್ಬಂದಿ ಕೊರತೆಯತ್ತ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಒಟ್ಟಾರೆ ಕಾರಾಗೃಹ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾಗಿದೆ. ಉದಾಹರಣೆಗೆ, ಬೆಂಗಳೂರಿನ ಕೇಂದ್ರ ಕಾರಾಗೃಹದ ಸಾಮರ್ಥ್ಯವಿರುವುದು 2,200 ಕೈದಿಗಳಿಗೆ. ಆದರೆ ಅಲ್ಲಿರುವ ಕೈದಿಗಳ ಸಂಖ್ಯೆ 5 ಸಾವಿರಕ್ಕೂ ಹೆಚ್ಚು. ಇದರಲ್ಲಿ ಸುಮಾರು 3,926 ವಿಚಾರಣಾಧೀನ ಕೈದಿಗಳು, 1,068 ಸಜಾಬಂಧಿಗಳು ಮತ್ತು 250ಕ್ಕೂ ಹೆಚ್ಚು ಮಹಿಳಾ ಕೈದಿಗಳು ಸೇರಿದ್ದಾರೆ. ಇದಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಸಂಖ್ಯೆ ಕೇವಲ 400 ಮಾತ್ರ.
ಇದನ್ನು ಓದಿದ್ದೀರಾ?: ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ
ಸಹಜವಾಗಿಯೇ ಜೈಲು ಸಿಬ್ಬಂದಿ ಹೆಚ್ಚುವರಿ ಕೆಲಸ ಮತ್ತು ಕೆಲಸದ ಒತ್ತಡಕ್ಕೊಳಗಾಗುವುದುಂಟು. ಇದರ ನೆಪದಲ್ಲಿ ಕೆಲ ಜೈಲು ಸಿಬ್ಬಂದಿ ಉಳ್ಳವರಿಗೆ ರಾಜಾತಿಥ್ಯ ನೀಡಿ ಇಂತಹ ಅವಘಡಗಳಿಗೆ ಕಾರಣವಾಗುವುದುಂಟು. ಇದರಿಂದ ಬಡ ಕೈದಿಗಳು ಇನ್ನಷ್ಟು ನರಳುವ, ಕೊರಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೈದಿಗಳನ್ನು ಮನುಷ್ಯರಂತೆ ನೋಡುವ, ಶಿಕ್ಷಣದ ಮೂಲಕ ಮನಪರಿವರ್ತಿಸುವ, ಸಮಾಜದ ಭಾಗವಾಗಿಸುವ ಜೈಲಿನ ಉದ್ದೇಶವೇ ಉಲ್ಟಾ ಹೊಡೆಯುತ್ತದೆ.
ಇನ್ನು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ, ಸಿದ್ದರಾಮಯ್ಯನವರ ಸಂಪುಟದಲ್ಲಿ ಗೃಹ ಖಾತೆಯ ಮಂತ್ರಿಯಾಗಿರುವ ಡಾ. ಜಿ. ಪರಮೇಶ್ವರ್, ಆ ಸ್ಥಾನಕ್ಕೆ ಬೇಕಾದ ಗತ್ತುಗಾರಿಕೆಯನ್ನು ಮೊದಲಿಗೆ ಮೈಗೂಡಿಸಿಕೊಳ್ಳಬೇಕಾಗಿದೆ. ಹಾಗೆಯೇ ಜೈಲು ಸುಧಾರಣೆ ಕುರಿತು ಸರ್ಕಾರದ ಮುಂದಿರುವ ನಾಲ್ಕು ಉನ್ನತ ಸಮಿತಿಗಳ ವರದಿ ಅನುಷ್ಠಾನಕ್ಕೆ ಮುಂದಾಗಬೇಕಿದೆ. ಹಾಗೆಯೇ ಈ ಪ್ರಕರಣವೂ ಹತ್ತರ ಜೊತೆಗೆ ಸೇರಿ ಹನ್ನೊಂದಾಗದಂತೆ, ಸರ್ಕಾರಕ್ಕೆ ಕೆಟ್ಟ ಹೆಸರು ತರದಂತೆ ನೋಡಿಕೊಳ್ಳಬೇಕಿದೆ.





