ಈ ದಿನ ಸಂಪಾದಕೀಯ | ಶಕ್ತಿ ರಾಜಕಾರಣದಲ್ಲಿ ಮುಸ್ಲಿಮರು ಎಲ್ಲಿದ್ದಾರೆ?

Date:

ಪ್ರಜಾಪ್ರಭುತ್ವದಲ್ಲಿ ನೈಜ ನಾಯಕತ್ವವು ಪ್ರತ್ಯಕ್ಷ ಚುನಾವಣೆಯ ಮೂಲಕವೇ ಬರಬೇಕಿದೆ. ಮತದಾನದ ಮೂಲಕವೇ ಕಾಂಗ್ರೆಸ್‌ ಪಕ್ಷ ಮತ್ತು ಶಾಮನೂರು ಕುಟುಂಬ ರಾಜಕಾರಣಕ್ಕೆ ಉತ್ತರ ಕೊಡಬೇಕಿದೆ. ದಾವಣಗೆರೆಯ ಹಿಂದೂ-ಮುಸ್ಲಿಮರೆಲ್ಲರೂ ಒಂದಾಗಿ, ಸೈದ್ಧಾಂತಿಕವಾಗಿ ಬದ್ಧತೆಯುಳ್ಳ ಸಮರ್ಥ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಹೊಸ ಚರಿತ್ರೆ ಬರೆಯಬೇಕಾಗಿದೆ.

ನಿರೀಕ್ಷೆಯಂತೆಯೇ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸಾಹುಕಾರ್ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ನೀಡಿದೆ. ಟಿಕೆಟ್ ಕೊಟ್ಟಿದ್ದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಂಡತನದಿಂದ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಟಿಕೆಟ್‌ಗಾಗಿ ಮುಸ್ಲಿಂ ಮತ್ತು ಹಿಂದುಳಿದ ಸಮುದಾಯಗಳ ದಶಕಗಳ ದುಂಬಾಲನ್ನು ದಮನ ಮಾಡಿದ್ದಾರೆ. ಆ ಮೂಲಕ ಶೋಷಿತ ಸಮುದಾಯಗಳ ರಾಜಕೀಯ ಅವಕಾಶವನ್ನು ಹೊಸಕಿಹಾಕಿದ್ದಾರೆ.

ಕಾಂಗ್ರೆಸ್‌ ಪಕ್ಷ ಮತ್ತು ಸಾಹುಕಾರ್‌ ಶಾಮನೂರು ಶಿವಶಂಕರಪ್ಪನವರು ಅಲ್ಪಸಂಖ್ಯಾತರಾದ ಮುಸಲ್ಮಾನರನ್ನು ರಾಜಕಾರಣದಿಂದ ದೂರವಿಡುತ್ತಿರುವುದು ಮತ್ತು ಬಳಸಿ ಬಿಸಾಡುತ್ತಿರುವುದು ಹೊಸದೇನೂ ಅಲ್ಲ. 2008ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಕ್ಷೇತ್ರದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ಸೈಯದ್‌ ಸೈಫುಲ್ಲಾ ಎಂಬುವವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ಆದರೆ, ಸಾಹುಕಾರ್‌ ಶಿವಶಂಕರಪ್ಪನವರು ಆತನಿಂದ ಬಿ ಫಾರಂ ಕಿತ್ತುಕೊಂಡು ಹರಿದುಹಾಕಿದ್ದರು. ಆದರೆ ಅದು ಸುದ್ದಿಯಾಗಲಿಲ್ಲ. ಬದಲಿಗೆ ‘ನಾನು ಚುನಾವಣೆಗೆ ನಿಲ್ಲುವುದಿಲ್ಲ. ಸಾಹುಕಾರ್ ಶಿವಶಂಕರಪ್ಪನವರೇ ಅಭ್ಯರ್ಥಿ, ಅವರ ಪರವಾಗಿ ಮತಯಾಚಿಸುತ್ತೇನೆ’ ಎಂಬ ಸೈಫುಲ್ಲಾರ ಹೇಳಿಕೆ ಸುದ್ದಿಯಾಗಿತ್ತು. ಧಣಿಗಳ ದುಡ್ಡು ಮತ್ತು ದರ್ಪ ಮಾತನಾಡಿತ್ತು; ಅಲ್ಪಸಂಖ್ಯಾತರಿಗಾದ ಅವಮಾನವನ್ನು ಸಹಿಸಿಕೊಂಡು ಸುಮ್ಮನಾಗಬೇಕಾಯಿತು. 

ಇದನ್ನು ಓದಿದ್ದೀರಾ?: ಯುದ್ಧವೆಂಬ ವಿನಾಶವನ್ನು ಕೈ ಮಾಡಿ ಕರೆದಿರುವ ಇಬ್ಬರು ಮಹಾಮೂರ್ಖರು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶಾಮನೂರರು ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ನಿಷ್ಠರಾಗಿದ್ದರು ಎಂದರೆ, ಆರು ದಶಕಗಳ ರಾಜಕಾರಣದಲ್ಲಿ ಅವರು ಬೇರೆ ಪಕ್ಷಗಳತ್ತ ನೋಡಿದ್ದಿಲ್ಲ. ಆದರೆ, ಆ ನಿಷ್ಠೆಯ ಮರೆಯಲ್ಲಿ ಮಾಡಿದ ಅಧ್ವಾನಗಳು, ಅನಾಹುತಗಳು, ಅವಘಡಗಳು ಒಂದೆರಡಲ್ಲ. ಅಷ್ಟೆಲ್ಲ ಮಾಡಿಯೂ ದಕ್ಕಿಸಿಕೊಂಡಿದ್ದರು, ಧಣಿ ಎನಿಸಿಕೊಂಡಿದ್ದರು. ಈಗ ಅವರ ಮೊಮ್ಮಗ ಸಮರ್ಥ, ಆ ಪರಂಪರೆಯನ್ನು ಮುಂದುವರೆಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಅಭ್ಯರ್ಥಿ ಎಂದು ಘೋಷಿಸದೇ ಇದ್ದರೂ, ಬಿ ಫಾರಂ ಕೊಡದೇ ಇದ್ದರೂ, ನಾನೇ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದಾರೆ. ಆತನ ಕೃತ್ಯಕ್ಕೆ ಕುಮ್ಮಕ್ಕು ನೀಡುವಂತೆ, ಕಾಂಗ್ರೆಸ್‌ ಪಕ್ಷ ಆತನಿಗೇ ಅಧಿಕೃತ ಬಿ ಫಾರಂ ಕೊಟ್ಟಿದೆ. ದಾವಣಗೆರೆ ಧಣಿಗಳ ಶ್ರೀಮಂತಿಕೆಗೆ, ದರ್ಪಕ್ಕೆ, ದುರಹಂಕಾರಕ್ಕೆ ಕಾಂಗ್ರೆಸ್‌ ಪಕ್ಷ ಅಂದೂ ಮಣಿದಿತ್ತು. ಇಂದೂ ಕೂಡ ಮಣಿದಿದೆ. ಕುಟುಂಬ ರಾಜಕಾರಣಕ್ಕೆ ಜೈ ಎಂದಿದೆ, ಪ್ರಜಾಪ್ರಭುತ್ವಕ್ಕೆ ಮಸಿ ಬಳಿದಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಒಟ್ಟು ಜನಸಂಖ್ಯೆ 2.5 ಲಕ್ಷ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಬಹುಸಂಖ್ಯಾತರು ಮುಸ್ಲಿಮರು. ಅಂದರೆ, ಒಟ್ಟು ಜನಸಂಖ್ಯೆಯಲ್ಲಿ ಶೇ. 35ರಿಂದ 40ರಷ್ಟು ಮುಸ್ಲಿಂ ಮತದಾರರಿದ್ದಾರೆ. ಶೇ. 30ರಷ್ಟು ಹಿಂದುಳಿದವರಿದ್ದಾರೆ. ಕೇವಲ ಶೇ. 25ರಷ್ಟು ಲಿಂಗಾಯತರು ಇರುವ ಈ ಕ್ಷೇತ್ರದಲ್ಲಿ ಸಾಹುಕಾರ್‌ ಶಿವಶಂಕರಪ್ಪನವರು, ಮುಸ್ಲಿಮರು ಮತ್ತು ಹಿಂದುಳಿದವರ ಬೆಂಬಲದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಚಿವರಾಗಿ ಮೆರೆದಿದ್ದಾರೆ. ಸಮೃದ್ಧವಾಗಿ ಬೆಳೆದಿದ್ದಾರೆ. ಕಳೆದ ಚುನಾವಣೆಯಲ್ಲಿ, ಇದು ನನ್ನ ಕೊನೆಯ ಚುನಾವಣೆ, ಮುಂದಿನಬಾರಿ ನಿಮಗೇ ಟಿಕೆಟ್ ಎಂಬ ಆಶ್ವಾಸನೆಯನ್ನೂ ಕೊಟ್ಟಿದ್ದರು. ಮುಸ್ಲಿಮರೂ ಸಿದ್ಧರಾಗಿದ್ದರು. ಈಗ ಅದು ಮೊಮ್ಮಗನಿಂದ ಮಣ್ಣು ಪಾಲಾಗಿದೆ. 

ಮುಸಲ್ಮಾನರು ಗೆಲ್ಲುವ ಕ್ಷೇತ್ರಗಳಿಗೂ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದಿದ್ದರೆ; ಮುಸ್ಲಿಮರೆಂದರೆ ಭಯೋತ್ಪಾದಕರು, ಪಾಕಿಸ್ತಾನದವರು ಎಂದು ಬಹಿರಂಗವಾಗಿಯೇ ಹೀಯಾಳಿಸುವ ಬಿಜೆಪಿ-ಜೆಡಿಎಸ್ ಪಕ್ಷಗಳು ನೀಡುವುದುಂಟೇ? ಕಾಂಗ್ರೆಸ್ ಪಕ್ಷದ ಜಾತ್ಯತೀತತೆ, ಸಮಾನತೆ, ಸಾಮಾಜಿಕ ನ್ಯಾಯ ಬರಿ ಭಾಷಣಕ್ಕಷ್ಟೇ ಸೀಮಿತವಾಯಿತೇ?  

ರಾಜ್ಯದಲ್ಲಿ ಸುಮಾರು ಒಂದು ಕೋಟಿಯಷ್ಟಿರುವ ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಪಕ್ಷ, ತನ್ನ ಮತಬ್ಯಾಂಕ್‌ನಂತೆ ಬಳಸಿಕೊಂಡು ಬಿಸಾಡುತ್ತಲೇ ಬಂದಿದೆ. ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಪ್ರಾತಿನಿಧ್ಯ ನೀಡದೆ ವಂಚಿಸುತ್ತಲೂ ಇದೆ. 2013ರ ವಿಧಾನಸಭಾ ಚುನಾವಣೆಯಲ್ಲಿ 19 ಮುಸ್ಲಿಮರಿಗೆ ಅವಕಾಶ ನೀಡಿತ್ತು; 2018ರಲ್ಲಿ 17ಕ್ಕೆ ಇಳಿಯಿತು; 2023ರಲ್ಲಿ 15ಕ್ಕೆ ಕುಸಿಯಿತು. ವಿಧಾನ ಸಭೆಯ ಸದಸ್ಯರ ಸಂಖ್ಯೆ ಕಳೆದ ಎರಡು ದಶಕಗಳಲ್ಲಿ 22 ಸದಸ್ಯರಿಂದ 7ಕ್ಕೆ ಬಂದು ನಿಂತಿದೆ. ಅಂದರೆ, ಚುನಾವಣೆಯಿಂದ ಚುನಾವಣೆಗೆ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ನೀಡುವ ರಾಜಕೀಯ ಪ್ರಾತಿನಿಧ್ಯ ಸಂಕುಚಿತಗೊಳ್ಳುತ್ತ ಸಾಗಿದೆ. ಇದು ಮುಸ್ಲಿಮರು ರಾಜಕೀಯದಿಂದ ದೂರವಾಗುತ್ತಿದ್ದಾರೆ ಎನ್ನುವ ಮುನ್ಸೂಚನೆಯೇ ಅಥವಾ ಮುಸ್ಲಿಮರನ್ನು ರಾಜಕೀಯದಿಂದ ದೂರ ಸರಿಸಲಾಗುತ್ತಿದೆಯೇ?

ಇಂದು ಬಹುತೇಕ ಕಡೆ ಮುಸ್ಲಿಮರು ಗೆಲ್ಲುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಟಿಕೆಟ್ ನೀಡುತ್ತಿಲ್ಲ, ಬೇರೆ ಪಕ್ಷದವರು ಟಿಕೆಟ್‌ ನೀಡಿದರೆ ಸಹಿಸಿಕೊಳ್ಳುತ್ತಿಲ್ಲ. ಅಕಸ್ಮಾತ್ ಕಾಂಗ್ರೆಸ್‌ ಪಕ್ಷದಿಂದ ಮುಸ್ಲಿಂ ಸಮುದಾಯದ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಿದರೆ, ಆತ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದಿಲ್ಲ, ಮುಸ್ಲಿಂ ಅಭ್ಯರ್ಥಿಯಾಗಿರುತ್ತಾರೆ. ತಮ್ಮ ಜವಾಬ್ದಾರಿಯನ್ನು ತಾವೆ ಹೊತ್ತುಕೊಂಡಿರುತ್ತಾರೆ. ಆದರೆ, ಅದೇ ಕಾಂಗ್ರೆಸ್ ಪಕ್ಷದಿಂದ ಬೇರೆ ಸಮುದಾಯದ ಅಭ್ಯರ್ಥಿ ಚುನಾವಣೆಗೆ ಸ್ಪರ್ಧೆ ಮಾಡಿದಲ್ಲಿ ಅವನು ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾನೆ. ಬಹುತೇಕ ಕಡೆ ಕಾಂಗ್ರೆಸ್ ಪಕ್ಷದ ಮುಸ್ಲಿಂ ಅಭ್ಯರ್ಥಿ ಚುನಾವಣೆಯಲ್ಲಿ ಸೋಲುತ್ತಿರುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಇದನ್ನೂ ಮೀರಿ ಗೆದ್ದವರು, ನಾಲಾಯಕ್‌ ನಾಯಕರಾಗಿರುತ್ತಾರೆ. ಸಮುದಾಯವನ್ನೇ ಸುಲಿದು ಸಮೃದ್ಧರಾಗಿರುತ್ತಾರೆ.

ಈಗ ದಾವಣಗೆರೆಯಲ್ಲಿ ಆಗಿರುವುದೂ ಇದೇ. ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಇಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದ ಸಚಿವರಿದ್ದಾರೆ. ಹಲವರು ಮುಂಚೂಣಿ ಮುಖಂಡರಿದ್ದಾರೆ. ಆದರೆ, ಅವರಾರಿಗೂ ಅಜೀಜ್‌ ಸೇಠ್‌, ಜಾಫರ್‌ ಶರೀಫ್‌, ನಜೀರ್‌ ಸಾಬ್‌ಗಳಿಗಿದ್ದ ನಾಯಕತ್ವದ ಗುಣವಾಗಲಿ, ದಕ್ಷತೆ-ಪ್ರಾಮಾಣಿಕತೆಯಾಗಲಿ, ಪ್ರಶ್ನಿಸುವ ಛಾತಿಯಾಗಲಿ ಇಲ್ಲ. ಈ ಕೊರತೆಯೇ ಮುಸ್ಲಿಂ ಸಮುದಾಯದ ಹಿನ್ನಡೆಗೆ ಮುಖ್ಯ ಕಾರಣವಾಗಿದೆ.

ಇದನ್ನು ಓದಿದ್ದೀರಾ?: ವಂಶಾಡಳಿತ ಕೊನೆಗಾಣಬೇಕು; ಅವಕಾಶವಂಚಿತರು ಅಧಿಕಾರಕ್ಕೇರಬೇಕು  

ಈಗಲೂ ಕಾಲ ಮಿಂಚಿಲ್ಲ. ಶ್ಯಾಮನೂರು ಧಣಿಯ ಮೊಮ್ಮಗ ಎನ್ನುವುದು ಬಿಟ್ಟರೆ ಈ ಬಾಲಕನಲ್ಲಿ ಶಾಸಕನಾಗುವ ಯಾವ ಅರ್ಹತೆಯೂ ಇಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರ ಸೋತರೆ ಕಾಂಗ್ರೆಸ್ ಸರ್ಕಾರವೇನೂ ಬಿದ್ದುಹೋಗುವುದಿಲ್ಲ. ಆದ್ದರಿಂದ ನಾಡಿನ ಅಲ್ಪಸಂಖ್ಯಾತ ಸಮುದಾಯ ಈಗ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಬಳಸಿ ಬಿಸಾಡುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಬುದ್ಧಿ ಕಲಿಸಬೇಕಿದೆ. ಅದಕ್ಕಾಗಿ ಮುಸ್ಲಿಮರು ಬಿಜೆಪಿಗೆ ಸೇರುವುದಲ್ಲ ಅಥವಾ ಬಿಜೆಪಿಗೆ ಮತ ಹಾಕುವುದೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ನೈಜ ನಾಯಕತ್ವವು ಪ್ರತ್ಯಕ್ಷ ಚುನಾವಣೆಯ ಮೂಲಕವೇ ಬರಬೇಕಿದೆ. ಮತದಾನದ ಮೂಲಕವೇ ಕಾಂಗ್ರೆಸ್‌ ಪಕ್ಷ ಮತ್ತು ಶಾಮನೂರು ಕುಟುಂಬ ರಾಜಕಾರಣಕ್ಕೆ ಉತ್ತರ ಕೊಡಬೇಕಿದೆ. ದಾವಣಗೆರೆಯ ಹಿಂದೂ-ಮುಸ್ಲಿಮರೆಲ್ಲರೂ ಒಂದಾಗಿ, ಸೈದ್ಧಾಂತಿಕವಾಗಿ ಬದ್ಧತೆಯುಳ್ಳ ಸಮರ್ಥ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಹೊಸ ಚರಿತ್ರೆ ಬರೆಯಬೇಕಾಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ಈ ದಿನ ಸಂಪಾದಕೀಯ | ಯುದ್ಧವೆಂಬ ವಿನಾಶವನ್ನು ಕೈ ಮಾಡಿ ಕರೆದಿರುವ ಇಬ್ಬರು ಮಹಾಮೂರ್ಖರು!

ಯುದ್ಧ ಆಗು ಮಾಡುವ ಈ ವಿನಾಶದ ಎಲ್ಲ ಭಾರವನ್ನು ಹೊರುವವರು ಜನಸಾಮಾನ್ಯರು....