ಪೊಲೀಸ್ ಅಧಿಕಾರಿಗಳೇ ಅಪರಾಧಿಗಳಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ ಮುಖ್ಯಮಂತ್ರಿಗಳು. ಅಧಿಕಾರಿಗಳನ್ನು ಕುರಿತು ಅಧಿಕಾರಸ್ಥರು ಈ ರೀತಿ ನಿಷ್ಠುರವಾಗಿ ಮಾತನಾಡಿದ್ದನ್ನು ಇತ್ತೀಚಿನ ದಿನಗಳಲ್ಲಿ ಕಂಡಿದ್ದಿಲ್ಲ. ಇಂತಹ ಖಡಕ್ ಮಾತುಗಳು ಬರುವುದರಲ್ಲಿ ತಪ್ಪಿಲ್ಲ. ಆದರೆ, ತಪ್ಪು ಎಲ್ಲಿಂದ ಎನ್ನುವುದನ್ನೂ ನೋಡಬೇಕಾಗುತ್ತದೆ.
ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡುವುದು ಪೊಲೀಸರ ಮುಖ್ಯ ಕರ್ತವ್ಯ. ಕಾನೂನನ್ನು ಜಾರಿಗೊಳಿಸುವ, ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ, ಪತ್ತೆಹಚ್ಚುವ ಮತ್ತು ತನಿಖೆ ಮಾಡುವ ಮಹತ್ವದ ಜವಾಬ್ದಾರಿಯನ್ನು ಪೊಲೀಸರು ಹೊಂದಿರುತ್ತಾರೆ. ಇವರು ಸರ್ಕಾರದ ನಾಗರಿಕ ಅಧಿಕಾರವನ್ನು ಪ್ರತಿನಿಧಿಸುವ ಅಧಿಕಾರಿಗಳಾಗಿರುತ್ತಾರೆ. ಸರ್ಕಾರದ- ಆಡಳಿತದ ಪ್ರತಿಫಲನವಾಗಿರುತ್ತಾರೆ.
ಆದರೆ ಇಂದಿನ ಪೊಲೀಸರು ಸಾರ್ವಜನಿಕರ ಸುವ್ಯವಸ್ಥೆ ಕಾಪಾಡುವುದಿರಲಿ, ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವುದಿರಲಿ, ಅವರೇ ಅಪರಾಧಿಗಳಾಗಿ ಮಾರ್ಪಾಡಾಗಿದ್ದಾರೆ.
ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕಳೆದ ವರ್ಷ 88 ಪೊಲೀಸ್ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರುವುದು ನಾಚಿಕೆಗೇಡು ಎಂದರು. ಈ ಮಾತುಗಳನ್ನು ಮುಖ್ಯಮಂತ್ರಿಗಳು ಬಹಳ ಬೇಸರದಿಂದಲೇ ನುಡಿದಿದ್ದರು. ಅಷ್ಟೇ ಅಲ್ಲ, ಸ್ಥಳೀಯ ಪೊಲೀಸರ ಕಣ್ಣು ತಪ್ಪಿಸಿ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಮಾದಕ ವಸ್ತುಗಳ ದಂಧೆಯನ್ನು ಮಹಾರಾಷ್ಟ್ರ ಪೊಲೀಸರು ಪತ್ತೆಹಚ್ಚಿರುವುದರ ಬಗ್ಗೆ ಮುಜುಗರ ವ್ಯಕ್ತಪಡಿಸಿದ್ದರು.
ಇದನ್ನು ಓದಿದ್ದೀರಾ?: ಗುಣಮಟ್ಟ ಕುರಿತು ಮಾತಾಡಲು ಮೋದೀಜಿಗೆ ನೈತಿಕ ಹಕ್ಕು ಇಲ್ಲವೇ ಇಲ್ಲ!
ಸಾಮಾನ್ಯವಾಗಿ ಅಧಿಕಾರಿಗಳನ್ನು ಕುರಿತು ಅಧಿಕಾರಸ್ಥರು ಈ ರೀತಿ ನಿಷ್ಠುರವಾಗಿ ಮಾತನಾಡಿದ್ದನ್ನು ಇತ್ತೀಚಿನ ದಿನಗಳಲ್ಲಿ ಕಂಡಿದ್ದಿಲ್ಲ, ಕೇಳಿದ್ದೂ ಇಲ್ಲ. ಹಾಗೆ ಮಾತನಾಡಿದ್ದಾರೆಂದರೆ, ಅದು ಸಾಮಾನ್ಯ ಸಂಗತಿಯಲ್ಲ. ಪೊಲೀಸ್ ಇಲಾಖೆ ಹೀಗಾಗಿದೆ ಎಂದರೆ, ಅದು ಸರ್ಕಾರ ಮತ್ತು ಆಡಳಿತದ ಮೇಲೆ ಪರಿಣಾಮ ಬೀರದೇ ಇರುವುದಿಲ್ಲ. ಪರಿಣಾಮ ಬೀರುವಂತಿದ್ದರೆ, ಅದು ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಿದ್ದರೆ, ಮುಖ್ಯಮಂತ್ರಿಗಳಿಂದ ಇಂತಹ ಖಡಕ್ ಮಾತುಗಳು ಬರುವುದರಲ್ಲಿ ತಪ್ಪಿಲ್ಲ.
ಆದರೆ, ತಪ್ಪು ಎಲ್ಲಿಂದ ಎನ್ನುವುದನ್ನೂ ನೋಡಬೇಕಾಗುತ್ತದೆ. ಅದಕ್ಕೆ ತಕ್ಕ ಮುಲಾಮನ್ನೂ ಹಚ್ಚಬೇಕಾಗುತ್ತದೆ. ಆಗ ಮುಖ್ಯಮಂತ್ರಿಗಳ ಮಾತಿಗೆ ತೂಕ ಬರುತ್ತದೆ.
ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ’40 ಪರ್ಸೆಂಟ್ ಸರ್ಕಾರ, ಪೇಟಿಎಂ ಸರ್ಕಾರ, ಭ್ರಷ್ಟ ಸರ್ಕಾರ’ ಎಂದು ದೊಡ್ಡದನಿಯಲ್ಲಿ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು. ಅದನ್ನೇ ಜನರ ಮುಂದಿಟ್ಟು ಜನಾಭಿಪ್ರಾಯ ರೂಪಿಸಿದ್ದರು. ಜನ ಬಿಜೆಪಿಯನ್ನು ತಿರಸ್ಕರಿಸುವಂತೆ, ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವಂತೆ ನೋಡಿಕೊಂಡಿದ್ದರು.
ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೂಡ ಈಗ ಅದೇ ಹಾದಿಯಲ್ಲಿದೆ ಎಂಬ ಆರೋಪ ಕೇಳಿಬರುತ್ತಿದೆ. ಸದ್ಯದ ಕೆಲ ಘಟನೆಗಳು ಮತ್ತು ಮುಖ್ಯಮಂತ್ರಿಗಳ ಮಾತುಗಳು ಅದನ್ನು ಸಾಬೀತುಪಡಿಸುತ್ತಿವೆ. ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದಿದ್ದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೇ, 40 ಪರ್ಸೆಂಟ್ ಮೀರಿದ ಕಾಂಗ್ರೆಸ್ ಸರ್ಕಾರವನ್ನೂ ಭ್ರಷ್ಟ ಸರ್ಕಾರ ಎಂದು ಕರೆದಿದ್ದಾರೆ. ಹೀಗೆ ಕರೆಯಲು ಕಾರಣಗಳು ಏನು ಎನ್ನುವುದನ್ನು ಕೆದಕಿದರೆ, ಅಲ್ಲಿ ಅಧಿಕಾರಿಗಳು ಕಾಣುತ್ತಾರೆ. ಆಯಕಟ್ಟಿನ ಜಾಗಕ್ಕಾಗಿ ಕಾತರಿಸುವ ಅಧಿಕಾರಿಗಳನ್ನು ತಡವಿದರೆ, ಅಲ್ಲಿ ಅಧಿಕಾರಸ್ಥರು ಕಾಣುತ್ತಾರೆ. ವರ್ಗಾವಣೆ ಎನ್ನುವುದು ಕಾಂಗ್ರೆಸ್ ಆಡಳಿತದಲ್ಲಿ ದಂಧೆಯ ರೂಪ ಪಡೆದಿರುವುದನ್ನು ಅಧಿಕಾರಿಗಳೇ ಹೇಳುತ್ತಾರೆ.
ಅದರಲ್ಲೂ ಪೊಲೀಸ್ ಇಲಾಖೆ, ಅಪರಾಧಗಳ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತ ಹೋಗುತ್ತಿದೆ. ಪೆಟ್ಟಿ ಅಂಗಡಿ ಮುಂದೆ ನಿಂತು ಸಿಗರೇಟ್ ಸೇದುವವರಿಂದ ಹಿಡಿದು ಡಿಜಿಟಲ್ ಅರೆಸ್ಟ್‌ವರೆಗಿನ ಪಾತಕ ಕೃತ್ಯಗಳವರೆಗೆ, ಪ್ರತಿದಿನ ಅಪರಾಧಗಳ ಪಟ್ಟಿ ಬೆಳೆದು ಬೆಟ್ಟವಾಗುತ್ತಿದೆ. ಜನಸಾಮಾನ್ಯರು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದಕ್ಕೆ ಹೆದರುತ್ತಿದ್ದಾರೆ. ಜನರ ಸಮಸ್ಯೆಗಳೇ ಪೊಲೀಸರಿಗೆ ಸಂಪಾದನೆಯ ಸುಲಲಿತ ಮಾರ್ಗ ಎಂಬಂತಾಗಿದೆ. ಹಣದ ಹರಿದಾಟ ಹೆಚ್ಚಾದಂತೆಲ್ಲ ಆಯಕಟ್ಟಿನ ಜಾಗ ಹಿಡಿಯಲು ಪೊಲೀಸ್ ಅಧಿಕಾರಿಗಳ ನಡುವೆ ಪೈಪೋಟಿ, ಹರಾಜು ಪ್ರಕ್ರಿಯೆ ಚಾಲ್ತಿಗೆ ಬಂದಿದೆ. ವರ್ಗಾವಣೆ ಎಂದಾಕ್ಷಣ ಅದು ಮತ್ತೆ ಅಧಿಕಾರಸ್ಥರಿಗೆ ಅನುಕೂಲವಾಗುತ್ತದೆ. ಈ ಅನುಕೂಲ ಪಡೆದ ಅಧಿಕಾರಸ್ಥರು ಅಧಿಕಾರಿಗಳ ಕುರಿತು ನಿಷ್ಠುರವಾಗಿರಲು ಸಾಧ್ಯವೇ? ಕಪ್ಪ ಕೊಟ್ಟು ಕುರ್ಚಿ ಹಿಡಿದ ಅಧಿಕಾರಿ ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಲು ಸಾಧ್ಯವೇ?
ಇದಕ್ಕೆ ಕಡಿವಾಣ ಹಾಕುವುದು ಕಷ್ಟದ ಕೆಲಸವೇನಲ್ಲ. ಗೃಹ ಖಾತೆಯನ್ನು ನಿರ್ವಹಿಸುವವರು ದಕ್ಷತೆ ರೂಢಿಸಿಕೊಂಡರೆ ಕಷ್ಟವೇನಲ್ಲ. ಸಿದ್ದರಾಮಯ್ಯನವರ ಸಂಪುಟದಲ್ಲಿ ಗೃಹ ಖಾತೆ ಸಚಿವರಾದ ಡಾ. ಜಿ. ಪರಮೇಶ್ವರ್, ಆ ಸ್ಥಾನಕ್ಕೆ ಬೇಕಾದ ಗತ್ತುಗಾರಿಕೆಯನ್ನು ಮೈಗೂಡಿಸಿಕೊಂಡವರಲ್ಲ. ಯಾರನ್ನೂ ನೇರವಾಗಿ ಎದುರಿಸಿದವರಲ್ಲ, ಯಾರಿಗೂ ನೋವುಂಟು ಮಾಡುವವರಲ್ಲ. ಆ ಕಾರಣಕ್ಕಾಗಿಯೇ ಇದ್ದೂ ಇಲ್ಲದಂತಿರುವ, ಹಾಗಿರುವುದೇ ಸರಿ ಎಂದುಕೊಂಡಿರುವ ಪರಮೇಶ್ವರ್, ನಿಷ್ಠುರ ನಿಲುವು ತಾಳುವುದರಲ್ಲಿ ಸೋತಿದ್ದಾರೆ. ಗೃಹ ಖಾತೆ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೆ, ತಮ್ಮ ಹೇಳಿಕೆಗಳನ್ನು ತಾವೇ ನುಂಗಿಕೊಂಡು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಸರ್ಕಾರಕ್ಕೂ ಕೆಟ್ಟ ಹೆಸರು ತರುತ್ತಿದ್ದಾರೆ.
ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ದಲಿತರು ಅಥವಾ ಮುಸ್ಲಿಮರು ಗೃಹಸಚಿವರಾಗುವುದು, ಇತರರಿಗೆ ಮಾದರಿಯಾಗುವಂತೆ ನಿರ್ವಹಿಸುವುದು, ದುರಿತ ಕಾಲದಲ್ಲಿ ಬಹಳ ಮುಖ್ಯವಾಗುತ್ತದೆ. ಅಂತಹ ಅಪೂರ್ವ ಅವಕಾಶ ಪರಮೇಶ್ವರ್ ಅವರಿಗೆ ಸಿಕ್ಕಿತ್ತು. ಸಿಕ್ಕ ಅವಕಾಶವನ್ನು ಬಾಚಿ ತಬ್ಬಿಕೊಂಡಿದ್ದರೆ, ತಮ್ಮ ಜೀವಿತದುದ್ದಕ್ಕೂ ಪೊರೆದ ಪಕ್ಷ ಮತ್ತು ನಾಡಿಗೆ 75ರ ಅಂಚಿನಲ್ಲಿ ಕೊಂಚ ಪ್ರಾಮಾಣಿಕವಾಗಿ, ನಿಷ್ಠುರವಾಗಿ ಅಧಿಕಾರ ನಿರ್ವಹಿಸಿದ್ದರೆ, ಮಾದರಿಯಾಗುತ್ತಿದ್ದರು.
ಇದನ್ನು ಓದಿದ್ದೀರಾ?: ‘ಬೋರ್ಡ್ ಆಫ್ ಪೀಸ್’ಗೆ ಸೇರದ ಭಾರತದ ನಿಲುವು ಸ್ವಾಗತಾರ್ಹ
ಆದರೆ, ಅವರ ಅಂದರಿಕು ಮಂಚಿವಾಳ್ಳು ವ್ಯಕ್ತಿತ್ವವೇ ಅವರಿಗೆ ತೊಡಕಾಗಿದೆ. ಪ್ರತಿಯೊಂದು ಘಟನೆಗೂ ‘ನನಗೆ ಮಾಹಿತಿ ಇಲ್ಲ’ ಎನ್ನುವುದು ಗೃಹ ಸಚಿವ ಸ್ಥಾನಕ್ಕೆ ಶೋಭೆ ತರದಾಗಿದೆ. ಈ ಮಟ್ಟಿಗಿನ ನಿಷ್ಕ್ರಿಯತೆಯೇ ಪೊಲೀಸ್ ಇಲಾಖೆ ಇಷ್ಟೊಂದು ಅಧ್ವಾನವೇಳಲು ಕಾರಣ ಎನ್ನುವುದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತುಗಳೇ ಹೇಳುತ್ತಿವೆ.
ಕಾಂಗ್ರೆಸ್ ಸರ್ಕಾರಕ್ಕೆ ಈ ಕಳಂಕದಿಂದ ಕಳಚಿಕೊಳ್ಳುವ ಇಚ್ಛೆ ಇದ್ದರೆ, ಈಗಲಾದರೂ ಪೊಲೀಸ್ ಇಲಾಖೆಯನ್ನು ಭ್ರಷ್ಟಾಚಾರಮುಕ್ತ ಇಲಾಖೆಯನ್ನಾಗಿಸಬೇಕು. ಅದಕ್ಕಿಂತ ಮೊದಲು ಜನಸ್ನೇಹಿ ಇಲಾಖೆಯನ್ನಾಗಿ ಮಾಡಬೇಕು. ಸಾಮಾನ್ಯರು ಕೂಡ ಸಲೀಸಾಗಿ ಠಾಣೆಗಳಿಗೆ ಹೋಗಿ ಬರುವಂತಹ ವಾತಾವರಣ ಸೃಷ್ಟಿಸಬೇಕು. ಇದು ಬೆಳೆದ, ಬೆಳೆಸಿದ ನಾಡಿಗೆ ಋಣ ತೀರಿಸುವ ಕೆಲಸ ಎನಿಸಬೇಕು.





