ಬಿಹಾರದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಈ ಸೋಲು ಕಾಂಗ್ರೆಸ್ಸಿಗೆ ಪಾಠ ಕಲಿಸಲಿ. ಉಳಿದ ಎರಡೂವರೆ ವರ್ಷವಾದರೂ, ಕಾಂಗ್ರೆಸ್ ಪಕ್ಷ ತನ್ನ ಜಡತ್ವವನ್ನು ಕೊಡವಿಕೊಂಡು, ಜನರಿಗೆ ಸ್ಪಂದಿಸಲಿ. ಕರ್ನಾಟಕವನ್ನು ಉತ್ತರದ ರಾಜ್ಯಗಳ ಸಾಲಿಗೆ ತಂದು ನಿಲ್ಲಿಸದಿರಲಿ.
ಬಿಹಾರ ಚುನಾವಣಾ ಫಲಿತಾಂಶ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯನವರ ಗುಂಪಿನಲ್ಲಿ ಗುರುತಿಸಿಕೊಂಡ ಕೆಲವರು, ಸಿದ್ದರಾಮಯ್ಯನವರ ಮುಖ್ಯಮಂತ್ರಿ ಕುರ್ಚಿ ಭದ್ರ ಎನ್ನುವ ಖುಷಿಯಲ್ಲಿದ್ದಾರೆ. ಬದಲಾವಣೆ ಬಯಸುತ್ತಿದ್ದವರು, ಕೊಂಚ ಕಸಿವಿಸಿಗೊಳಗಾಗಿದ್ದಾರೆ.
ಈ ನಡುವೆ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಎಷ್ಟರಮಟ್ಟಿಗೆ ನಿಜ ಎನ್ನುವುದನ್ನು ಹೈಕಮಾಂಡಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ ಬಾಯಿಬಿಟ್ಟು ಹೇಳಿಲ್ಲ. ಆದರೆ, ಶಾಸಕರು ಸಚಿವರಾಗಲು ಜಾತಿ, ಪ್ರಾದೇಶಿಕತೆ, ಅನುಭವ ಮತ್ತು ಪಕ್ಷನಿಷ್ಠೆಯನ್ನು ಮುಂದು ಮಾಡುತ್ತ ಲಾಬಿಗಿಳಿದಿದ್ದಾರೆ. ಈಗಾಗಲೇ ಸಚಿವರಾಗಿರುವವರು ತಮ್ಮ ಸ್ಥಾನಗಳನ್ನು ಭದ್ರ ಮಾಡಿಕೊಳ್ಳುವ ಕಸರತ್ತಿಗೆ ಕೈಹಾಕಿದ್ದಾರೆ. ದಿಲ್ಲಿಯ ಹಿರಿ-ಮರಿ ನಾಯಕರ ಕೃಪಾಶೀರ್ವಾದಕ್ಕೆ ಎಡತಾಕುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಮುಸ್ಲಿಂ ಸಮುದಾಯದ ಮೇಲಿನ ಪೂರ್ವಗ್ರಹಕ್ಕೆ ಮದ್ದಿಲ್ಲವೇ?
ಅಧಿಕಾರಕ್ಕಾಗಿ ಆಸೆಪಡುವುದು ಅಪರಾಧವಲ್ಲ. ರಾಜಕೀಯ ನಾಯಕರಾರೂ ಸನ್ಯಾಸಿಗಳಲ್ಲ. ಆದರೆ, ಆ ಆಸೆಯನ್ನು ವ್ಯಕ್ತಪಡಿಸಲು ಪಕ್ಷದ ವೇದಿಕೆಯಿದೆ, ಹೈಕಮಾಂಡಿದೆ, ಹಿರಿಯ ನಾಯಕರಿದ್ದಾರೆ ಎಂಬುದನ್ನು ಮರೆತ ಕಾಂಗ್ರೆಸ್ ನಾಯಕರು, ಕಳೆದ ಎರಡೂವರೆ ವರ್ಷಗಳಿಂದ ಬಾಯಿಗೆ ಬಂದದ್ದನ್ನು ಬಹಿರಂಗವಾಗಿ ಮಾತನಾಡಿ ರಾಡಿ ಎಬ್ಬಿಸಿದ್ದಾರೆ.
ಇದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಅಧಿಕಾರ ಹಂಚಿಕೆಯ ಬಗ್ಗೆ, ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಕೆಳಗಿಳಿಸುವ ಬಗ್ಗೆ, ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದೆ, ಕಾಂಗ್ರೆಸ್ ಸರ್ಕಾರ ಸರಿ ಇಲ್ಲ ಎಂಬ ಕಲ್ಪಿತ ಸುದ್ದಿಗಳಲ್ಲಿ-ಚರ್ಚೆಗಳಲ್ಲಿ ಮುಳುಗೇಳುತ್ತಿರುವ ಸುದ್ದಿ ಮಾಧ್ಯಮಗಳಿಗೆ ಭರಪೂರ ಸರಕು ಒದಗಿಸಿದೆ. ಸರ್ಕಾರಕ್ಕೆ ಕೆಟ್ಟ ಹೆಸರು ತಂದಿದೆ.
ಇದರಿಂದ ಬೇಸತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಜತೆ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದೂ ಇದೆ. ಒಂದೆರಡು ದಿನ ಬಾಯಿ ಮುಚ್ಚಿಕೊಂಡಂತೆ ನಟಿಸುವ ನಾಯಕರು ಮತ್ತೆ ಅದೇ ರಾಗ, ಅದೇ ಹಾಡಿನಲ್ಲಿ ನಿರತರಾಗಿದ್ದೂ ಇದೆ. ಇದು ಮನುಷ್ಯವಿರೋಧಿ ಬಿಜೆಪಿಯನ್ನು ಕೆಳಗಿಳಿಸಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದ ನಾಡಿನ ಜನರಲ್ಲಿ ಭ್ರಮನಿರಸನ ಉಂಟುಮಾಡಿದ್ದೂ ಇದೆ.
ಅಸಲಿಗೆ, ಈ ಕಾಂಗ್ರೆಸ್ಸಿಗರು 2014ರಿಂದ ಕೇಂದ್ರದಲ್ಲಿ ಪ್ರಧಾನಿಯಾಗಿರುವ ಮೋದಿಯವರು, ಕಳೆದ ಹನ್ನೊಂದು ವರ್ಷಗಳಿಂದ ಒಂದೇ ಒಂದು ಪ್ರೆಸ್ ಮೀಟ್ ಮಾಡದೆ, ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸದೆ ಮೌನಕ್ಕೆ ಶರಣಾಗಿರುವುದರ ಮರ್ಮವನ್ನೇ ಅರಿಯದವರು. ಅಥವಾ ಮಾಧ್ಯಮಗಳನ್ನು ಹೇಗೆ ಮ್ಯಾನೇಜ್ ಮಾಡಬೇಕೆಂದು ತಿಳಿಯದವರು. ಅಥವಾ ಗೊತ್ತಿದ್ದೂ ಮತ್ತೆ ಮತ್ತೆ ಗುಂಡಿಗೆ ಬೀಳುವ ಗಾಂಪರು.
ಇನ್ನು ಅಧಿಕಾರ ಹಂಚಿಕೆ ಮತ್ತು ಬದಲಾವಣೆ ಬಯಸುವ ನಾಯಕರಲ್ಲಿ ಮುಂಚೂಣಿಯಲ್ಲಿರುವ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್, ಪಕ್ಷ ಸಂಘಟನೆ ಹಾಗೂ ಚುನಾವಣಾ ನಿರ್ವಹಣೆಯಲ್ಲಿ ಸೈ ಎನಿಸಿಕೊಂಡವರು. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ತನು-ಮನ-ಧನ ಸಮರ್ಪಿಸಿ, ಯಶಸ್ವಿ ನಾಯಕನಾಗಿಯೂ ಹೊರಹೊಮ್ಮಿದವರು. ಜೊತೆಗೆ ಬಲಿಷ್ಠ ಜಾತಿಯನ್ನು ಬೆನ್ನಿಗಿಟ್ಟಿಕೊಂಡವರು. ಇದೆಲ್ಲದರ ಪರಿಣಾಮವಾಗಿ, ಪಕ್ಷ ಅಧಿಕಾರಕ್ಕೇರುತ್ತಿದ್ದಂತೆ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದರು. ಒಟ್ಟೊಟ್ಟಿಗೆ ನಾಲ್ಕು ಸ್ಥಾನಗಳನ್ನು ನಿರ್ವಹಿಸಬಲ್ಲ ನಿಷ್ಣಾತರು.
ಇಷ್ಟಾದರೂ, ಕೇಂದ್ರ ಸರ್ಕಾರದೊಂದಿಗೆ ಸ್ನೇಹ-ಸಂಪರ್ಕದಲ್ಲಿದ್ದರೂ, ಮೇಕೆದಾಟು ಮತ್ತು ಮಹದಾಯಿ ಯೋಜನೆಗಳು ಈಗಲೂ ಕುಂಟುತ್ತಲೇ ಸಾಗಿವೆ. ಸಾವಿರಾರು ಕೋಟಿ ಕಬಳಿಸಿದ ಎತ್ತಿನಹೊಳೆ ನೀರು ಎತ್ತಲಾಗದೆ ಏದುಸಿರುಬಿಡುತ್ತಿದೆ. ಇನ್ನು ಬೆಂಗಳೂರು ನಗರ ಅಭಿವೃದ್ಧಿ, ನಗರವನ್ನು ನರಕ ಮಾಡಿದೆ; ಅಭಿವೃದ್ಧಿ ಅಸಹನೆ ಹುಟ್ಟಿಸುತ್ತಿದೆ. ಮಂತ್ರಿಯಾದ ತಕ್ಷಣ ಸ್ವರ್ಗವನ್ನು ಧರೆಗಿಳಿಸಲಾಗುವುದಿಲ್ಲ, ನಿಜ. ಆದರೆ, ಜನರ ಕಷ್ಟಗಳಿಗೆ ಕಿವಿಯಾಗಬೇಕು, ವಿನಯವಂತಿಕೆ ರೂಢಿಸಿಕೊಳ್ಳಬೇಕು, ಜನಪ್ರೀತಿ ಗಳಿಸಬೇಕು ಎಂದು ಅವರಿಗೆ ಅನಿಸಿಯೇ ಇಲ್ಲ. ಬದಲಿಗೆ ಸಂಸ್ಕೃತ ಶ್ಲೋಕ ಹೇಳುವುದು, ಸದನದಲ್ಲಿ ಆರ್‍ಎಸ್ಎಸ್ ಧ್ಯೇಯಗೀತೆ ಹಾಡುವುದು, ಗುಡಿ-ಗುಂಡಾರಗಳನ್ನು ಸುತ್ತುವುದು, ಸ್ವಾಮೀಜಿಗಳ ಮೊರೆಹೋಗುವುದು ಬಿಟ್ಟಿಲ್ಲ. ಅದು ನಾಯಕತ್ವಕ್ಕೆ ಘನತೆ ತರುತ್ತದೆ ಎಂದುಕೊಂಡಿದ್ದರೆ ಆಶ್ಚರ್ಯವಿಲ್ಲ.
ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದವರು, ಸಚಿವರಾಗಿ ಸೋಲುವುದು, ಅವರ ಭವಿಷ್ಯದ ಸಿಎಂ ಕನಸನ್ನು ಮಸುಕುಗೊಳಿಸುತ್ತದೆ ಎಂಬ ಸತ್ಯ ಸಂಗತಿ ಕೂಡ ಅರಿವಾಗುತ್ತಿಲ್ಲ. ಬದಲಿಗೆ ಬಹಿರಂಗವಾಗಿ ಸಡ್ಡು ಹೊಡೆದು ನಿಲ್ಲುವ ಛಾತಿಯನ್ನೂ ತೋರುತ್ತಿಲ್ಲ. ತನ್ನ ಹಕ್ಕು ಮಂಡಿಸಲು ಬೇಕಾದ ಜನಾಕರ್ಷಕ ನಾಯಕನಾಗಿಯೂ ರೂಪುಗೊಳ್ಳುತ್ತಿಲ್ಲ.
ಇನ್ನು ಡಿ.ಕೆ. ಶಿವಕುಮಾರ್ ವ್ಯಕ್ತಿತ್ವಕ್ಕೆ ಹೊರತಾದ ವ್ಯಕ್ತಿತ್ವವುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮುತ್ಸದ್ದಿಯಂತೆ ಕಾಣುತ್ತಾರೆ. ಆದರೆ ರಾಮಕೃಷ್ಣ ಹೆಗಡೆ, ದೇವೇಗೌಡ ಮತ್ತು ಜೆ.ಎಚ್. ಪಟೇಲ್ ಅವರಂತಹ ನಾಯಕರಿಂದ ಕಲಿತದ್ದೇನು, ಈಗ ಮುಖ್ಯಮಂತ್ರಿಯಾಗಿ ಮಾಡುತ್ತಿರುವುದೇನು ಎಂಬುದನ್ನು ನೋಡಿದರೆ, ನಿರಾಸೆ ಮೂಡಿಸುತ್ತದೆ. ದೇವರಾಜ ಅರಸು ಅವರಂತಾಗಬೇಕೆಂಬ ಆಸೆ ಇದೆ. ಆದರೆ ಅದು ಅವಧಿ ಪೂರೈಸುವುದಷ್ಟಕ್ಕೇ ಸೀಮಿತವಾಗಿದೆ. ಅಪಾರ ಅನುಭವ ಮತ್ತು ಜನಾಕರ್ಷಕ ವ್ಯಕ್ತಿತ್ವದ ಬಲದಿಂದ ಎರಡನೇ ಅವಧಿಗೆ ಮುಖ್ಯಮಂತ್ರಿಯಾದರೂ, ತಮಗೆ ಬೇಕಾದ ಮಂತ್ರಿಮಂಡಲವನ್ನು ರಚಿಸಿಕೊಂಡರೂ, ಆಡಳಿತದಲ್ಲಿ ದಕ್ಷತೆ ಕಾಣುತ್ತಿಲ್ಲ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಚಲನೆಗೆ ಕಾರಣವಾಗಿದ್ದರೂ, ಪ್ರಶಂಸೆಗೆ ಪಾತ್ರವಾಗಿದ್ದರೂ, ಸರ್ಕಾರ ಅದರ ಕ್ರೆಡಿಟ್ ತೆಗೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ.
ಇದನ್ನು ಓದಿದ್ದೀರಾ?: ಮನರೇಗಾ | ಲಕ್ಷಾಂತರ ಉದ್ಯೋಗ ಕಾರ್ಡ್ ರದ್ದು; ಗ್ರಾಮೀಣ ಭಾರತದ ಕತ್ತು ಹಿಸುಕುತ್ತಿರುವ ಕೇಂದ್ರ ಸರ್ಕಾರ
ಇಷ್ಟಾದರೂ, ಈಗಲೂ ಕಾಂಗ್ರೆಸ್ ಸರ್ಕಾರದ ಬಗ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದ ಬಗ್ಗೆ ನಾಡಿನ ಜನ ಭರವಸೆ ಇಟ್ಟುಕೊಂಡಿದ್ದಾರೆ. ಉತ್ತರದ ರಾಜ್ಯಗಳಂತೆ ಕರ್ನಾಟಕವಾಗಿಲ್ಲ ಎಂದು ಸರ್ಕಾರದ ಹಲ್ಲಂಡೆಗಳನ್ನು ಸಹಿಸಿಕೊಂಡಿದ್ದಾರೆ.
ಏತನ್ಮಧ್ಯೆ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಒಂದೊಂದೇ ರಾಜ್ಯವನ್ನು ಕಳೆದುಕೊಳ್ಳುತ್ತಿದೆ. ಈಗ ಬಿಹಾರದಲ್ಲಿ ಹೀನಾಯವಾಗಿ ಸೋತಿದೆ. ಈ ಸೋಲು ಕಾಂಗ್ರೆಸ್ಸಿಗೆ ಪಾಠ ಕಲಿಸಲಿ. ಉಳಿದ ಎರಡೂವರೆ ವರ್ಷವಾದರೂ, ಕಾಂಗ್ರೆಸ್ ಪಕ್ಷ ತನ್ನ ಜಡತ್ವವನ್ನು ಕೊಡವಿಕೊಂಡು, ಜನರಿಗೆ ಸ್ಪಂದಿಸಲಿ. ಕರ್ನಾಟಕವನ್ನು ಉತ್ತರದ ರಾಜ್ಯಗಳ ಸಾಲಿಗೆ ತಂದು ನಿಲ್ಲಿಸದಿರಲಿ.





