ಈ ದಿನ ಸಂಪಾದಕೀಯ | ಈ ʼಗಣ್ಯರುʼ ಸರ್ಕಾರದ ತುತ್ತೂರಿಯಾದರೆ ಸಾಕೇ? ಸತ್ಯವಂತ ಸಮಾಜಮುಖಿ ಆಗಲೂ ಬೇಕೇ? 

Date:

ಉತ್ತರಪ್ರದೇಶದಲ್ಲಿ ದಿನವೂ ಮಹಿಳೆಯರ ಅತ್ಯಾಚಾರ, ಕೊಲೆಗಳಾಗುತ್ತಿವೆ. ದೇಶಾದ್ಯಂತ ದಲಿತರ ಮೇಲೆ ದೌರ್ಜನ್ಯಗಳಾಗುತ್ತಿದೆ. ಮುಸ್ಲಿಮರ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಅಮಾಯಕರನ್ನು ಜೈಲಿಗೆ ತಳ್ಳಿ ಜಾಮೀನು ಕೊಡದೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ದೇಶವಾಸಿಗಳ ಮೂಲಭೂತ ಹಕ್ಕಿನ ಮೇಲೆ ಆಗುತ್ತಿರುವ ಮೋದಿ ಸರ್ಕಾರದ ದಬ್ಬಾಳಿಕೆ ನಿವೃತ್ತ ನ್ಯಾಯಮೂರ್ತಿಗಳಿಗೆ ಖಂಡಿಸುವ ವಿಚಾರ ಎನ್ನಿಸದಿರುವುದು ದುರಂತ

ದೇಶದ ಚುನಾವಣಾ ಆಯೋಗ ಬಿಜೆಪಿಯ ವಿಭಾಗದಂತೆ ಕೆಲಸ ಮಾಡುತ್ತಿದೆ ಎಂಬುದಾಗಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪವನ್ನು ‘ಗಣ್ಯರು’ ಎನ್ನಲಾಗಿರುವ 272 ಮಂದಿ ಬಹಿರಂಗ ಪತ್ರ ಬರೆದು ಟೀಕಿಸಿದ್ದಾರೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ ತರುವಂತೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಹೀಗೆ ಪತ್ರ ಬರೆದಿರುವವರಲ್ಲಿ ಹದಿನಾರು ಮಂದಿ ನಿವೃತ್ತ ನ್ಯಾಯಮೂರ್ತಿಗಳು, ನೂರಾ ಇಪ್ಪತ್ತಮೂರು ಮಂದಿ ನಿವೃತ್ತ ಅಧಿಕಾರಿಗಳು, ಅವರಲ್ಲಿ ಹದಿನಾಲ್ಕು ರಾಯಭಾರಿಗಳು, ನೂರಾ ಮುವ್ವತ್ತಮೂರು ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳು.  “Assault on National Constitutional Authorities” ಎಂಬ ಶೀರ್ಷಿಕೆಯ ಈ ಪತ್ರದಲ್ಲಿದಲ್ಲಿ ವಿರೋಧ ಪಕ್ಷದ ನಾಯಕರು ಪ್ರಮುಖ ಸಂಸ್ಥೆಗಳ ವಿರುದ್ಧ ವಿಷಕಾರಿ ಹೇಳಿಕೆ ನೀಡಿ ಆಧಾರರಹಿತ ಆರೋಪಗಳನ್ನು ಬಳಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಈ ನಿವೃತ್ತ ಅಧಿಕಾರಿಗಳು, ನ್ಯಾಯಾಧೀಶರು ಕಣ್ಣು ಕಿವಿ ಮಿದುಳನ್ನು ತೆರೆದು ಇಟ್ಟುಕೊಂಡಿದ್ದಾರೆಯೇ ಅಥವಾ ಅವು ಮುಚ್ಚಿ ಹೋಗಿವೆಯೇ ಎಂದು ಅನುಮಾನ ಮೂಡಿಸುವಂತೆ ಕುರುಡು ಹೇಳಿಕೆ ನೀಡಿದ್ದಾರೆ. ಚುನಾವಣಾ ಆಯೋಗವೇ ಪೂರೈಸಿದ ಮತದಾರರ ದಾಖಲೆಗಳನ್ನು ತಡಕಾಡಿ, ಆಗಿರುವ ದೊಡ್ಡ ಮಟ್ಟದ ಲೋಪ ಅಥವಾ ಮತಗಳ್ಳತನವನ್ನು ರಾಹುಲ್ ಗಾಂಧಿ ದೇಶದ ಮುಂದೆ ಮಂಡಿಸಿದ್ದಾರೆ. ಮೊದಲ ಬಾರಿಗೆ ಕರ್ನಾಟಕದ ಮಹಾದೇವಪುರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿದ್ದ ನಕಲಿ ಮತದಾರರ ಬಗ್ಗೆ ಪುರಾವೆ ಒದಗಿಸಿದ್ದಾರೆ. ವ್ಯಕ್ತಿಗಳು ಏಕಕಾಲಕ್ಕೆ ಎರಡೆರಡು ಮತಗಟ್ಟೆಗಳಲ್ಲಿ ಮತದಾರರಾಗಿರುವುದು, ಬೇರೆ ರಾಜ್ಯದಲ್ಲೂ ಮತದಾರರಾಗಿರುವುದು, ಒಂದೇ ಮನೆಯ ವಿಳಾಸದಲ್ಲಿ 80- 100-200 ಮತದಾರರ ವಿಳಾಸ ಇರುವುದು ಹೀಗೆ ಹತ್ತಾರು ಗಂಭೀರ ಲೋಪಗಳನ್ನು ಪತ್ತೆ ಮಾಡಿದ್ದಾರೆ. ಕರ್ನಾಟಕದ ಆಳಂದದಲ್ಲಿ ಎರಡು ವರ್ಷಗಳ ಹಿಂದೆ ದಾಖಲಾದ ವೋಟ್‌ ಚೋರಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಚುನಾವಣಾ ಆಯೋಗ ಯಾಕೆ ಸಹಕರಿಸಿಲ್ಲ ಎಂಬುದು ದೊಡ್ಡ ಪ್ರಶ್ನೆಯಲ್ಲವೇ? ಮುಚ್ಚಿಡುವುದೇನೂ ಇಲ್ಲವಾದಲ್ಲಿ ಸಹಕರಿಸಬಹುದಿತ್ತಲ್ಲ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಅಸಹಕಾರದ ಬಗ್ಗೆ, ಹರಿಯಾಣದ ಮತಗಳ್ಳತನ ಕುರಿತು ರಾಹುಲ್ ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ಎಲ್ಲ ದಸ್ತಾವೇಜುಗಳು ಸಾರ್ವಜನಿಕವಾಗಿ ಲಭ್ಯ ಇವೆ. ಅರ್ಥಾತ್ ಇದೀಗ ಪತ್ರ ಬರೆದಿರುವ 272 ಗಣ್ಯರೂ ಕಣ್ಣು ತೆರೆದು ನೋಡಬಹುದಾಗಿದೆ. ಪತ್ರ ಬರೆಯುವ ಉದ್ದೇಶ ಕಾಳಜಿಯಿಂದ ಕೂಡಿದ್ದಿದ್ದರೆ, ದಾಖಲೆಗಳನ್ನು ಪಕ್ಷಪಾತವಿಲ್ಲದೆ ಪರಾಮರ್ಶೆ ಮಾಡಿದ್ದರೆ ಪತ್ರ ಬರೆಯುವ ಪ್ರಸಕ್ತಿಯೇ ಇರಲಿಲ್ಲ. ಈ ಬಿಜೆಪಿ ಪಕ್ಷಪಾತಿ ಪತ್ರ ಬರೆಯುವ ಮೂಲಕ, ಬದುಕೆಲ್ಲ ನ್ಯಾಯದಾನ ಮಾಡಿ ನಿವೃತ್ತರಾದವರೂ ಅಕ್ರಮದ ಪರ ನಿಂತರಲ್ಲ ಎಂಬ ಪ್ರಶ್ನೆ ಎದ್ದಿದೆ.

ಇನ್ನು ಈ ದೇಶದಲ್ಲಿ ಕಳೆದ ಹನ್ನೆರಡು ವರ್ಷಗಳಲ್ಲಿ ನೂರಾರು ಸರ್ಕಾರಿ ನಿರ್ಮಿತ ದುರಂತಗಳಾಗಿವೆ. ಕೊರೋನಾ ಮಹಾಸಾಂಕ್ರಾಮಿಕ ದೇಶಕ್ಕೆ ಕಾಲಿಡುವ ಕುರಿತು ರಾಹುಲ್‌ ಗಾಂಧಿ ಮುಂದಾಗಿಯೇ ಸರ್ಕಾರವನ್ನು ಎಚ್ಚರಿಸಿದ್ದರು. ಆಗ ಮೋದಿ ಸರ್ಕಾರದ ಸಚಿವರು ರಾಹುಲ್ ಎಚ್ಚರಿಕೆಯನ್ನು ಗೇಲಿ ಮಾಡಿದ್ದರು. 2020ರಲ್ಲಿ ಕೊರೋನಾದಿಂದ ದೇಶಕ್ಕೆ ದೇಶವೇ ತತ್ತರಿಸಿತು. ರಾತ್ರಿ ಎಂಟಕ್ಕೆ ಟಿವಿ ಮುಂದೆ ಬಂದ ಪ್ರಧಾನಿ ಮೋದಿ, ತಕ್ಷಣದಿಂದಲೇ ದೇಶಕ್ಕೆ ಬೀಗ ಹಾಕುವ ಲಾಕ್‌ಡೌನ್‌ ಘೋಷಿಸಿದ್ದರು. ರೈಲು, ವಿಮಾನ, ಬಸ್‌ ಹೀಗೆ ದೇಶದ ಉದ್ದಗಲಕ್ಕೆ ಸಾರಿಗೆ ವ್ಯವಸ್ಥೆ ಸಾರಾಸಗಟಾಗಿ ಸ್ತಬ್ಧಗೊಂಡಿತ್ತು. ಆಗ ದೇಶದಲ್ಲಿ ಲಕ್ಷಾಂತರ ಮಂದಿ ಬಡ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ನೂರಾರು ಕಿಲೋಮೀಟರ್‌ ಕ್ರಮಿಸಬೇಕಾಯಿತು. ಈ ಮಹಾವಲಸೆಯಲ್ಲಿ ಸಂಭವಿಸಿದ ಸಾವು ನೋವುಗಳು, ದುರಂತಗಳು ನೂರಾರು. ಆಸ್ಪತ್ರೆಗಳಲ್ಲಿ  ಆಕ್ಸಿಜನ್‌ ಕೊರತೆ, ಬೆಡ್‌- ಔಷಧಿ ಕೊರತೆ ಉಂಟಾಗಿತ್ತು. ಕೋವಿಡ್ ಗೆ ಬಲಿಯಾದ ಜನ ತರಗೆಲೆಯಂತೆ ನಿಂತ ನಿಂತಲ್ಲೇ ನೆಲಕ್ಕುರುಳುತ್ತಿದ್ದರು. ಶವ ಸಂಸ್ಕಾರಕ್ಕೆ ಸ್ಮಶಾನಗಳು ಸಾಲದೇ ಊರಾಚೆ ಕೃತಕ ಸಾಮೂಹಿಕ ಸ್ಮಶಾನಗಳನ್ನು ನಿರ್ಮಾಣ ಮಾಡುವ ಸ್ಥಿತಿ ಬೆಂಗಳೂರಿನಲ್ಲಿಯೇ ಬಂದಿತ್ತು. ಇಂದಿಗೂ ಕೊರೋನಾದಿಂದ ಸತ್ತವರ ಆಡಿಟ್‌ ಮಾಡಿತೇ ಮೋದಿ ಸರ್ಕಾರ ಎಂಬುದು ಗೊತ್ತಿಲ್ಲ. ಆದರೆ ವಿಶ್ವಸಂಸ್ಥೆಯು ಭಾರತದಲ್ಲಿನ ಸಾವುಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಿತು. ಎಂದಿನಂತೆ ಮೋದಿ ಸರ್ಕಾರ ಅವುಗಳನ್ನು ಅಲ್ಲಗಳೆಯಿತು. ಕೋವಿಡ್ ಸಮಯದಲ್ಲಿ ಪಿಎಂ ಕೇರ್ಸ್‌ ಎಂಬ ನಿಧಿ ಸ್ಥಾಪಿಸಿದ್ದರು ಮೋದಿ. ಅದರ ಲೆಕ್ಕಪತ್ರಗಳನ್ನು ಈವರೆಗೆ ದೇಶದ ಮುಂದೆ ಇಟ್ಟಿಲ್ಲ. ಈ 272 ಗಣ್ಯರು ದೇಶದ ಬಗ್ಗೆ, ಜನರ ಬಗ್ಗೆ ಚಿಂತಿಸಿ ಸರ್ಕಾರವನ್ನು ಎಚ್ಚರಿಸುವ ಗೋಜಿಗೆ ಹೋಗಿಲ್ಲ. ಸಂಸತ್ತಿನಲ್ಲಿ ಮೋದಿ ಸರ್ಕಾರ ಆಕ್ಸಿಜನ್‌ ಕೊರತೆಯಿಂದ ಯಾರೂ ಸತ್ತಿಲ್ಲ ಎಂಬ ಸುಳ್ಳು ಮಾಹಿತಿ ನೀಡಿತ್ತು.  ಕೊರೋನಾ ಸಮಯದಲ್ಲೂ ಅಂದಿನ ಕರ್ನಾಟಕದ ಬಿಜೆಪಿ ಸರ್ಕಾರ ಗ್ಲೌಸ್‌, ಮಾಸ್ಕ್‌, ಬೆಡ್‌ ಗಳನ್ನು ದುಬಾರಿ ಬೆಲೆಗೆ ಬಿಕರಿಗಿಟ್ಟು ಅಮಾನವೀಯತೆ ಮೆರೆದಿತ್ತು. ಉತ್ತರಪ್ರದೇಶದ ಗಂಗಾ ತಟದಲ್ಲಿ ಸಾವಿರಾರು ಅರೆಸುಟ್ಟ ಶವಗಳಿಗೆ ನಾಯಿ ನರಿಗಳು ಬಾಯಿ ಹಾಕಿ ಹೊರಗೆಳೆದಿದ್ದವು. ದುರಂತ- ದುರಾಡಳಿತಕ್ಕೆ ಪುರಾವೆ ಒದಗಿಸಿದ್ದವು. ಆಗೆಲ್ಲ ಈ ಪ್ರಜ್ಞಾವಂತ ಗಣ್ಯರು ಬಾಯಿ ಹೊಲಿದುಕೊಂಡಿದ್ದು ಯಾಕೆ?

ಬಿಜೆಪಿ ಆಡಳಿತದ ಉತ್ತರಪ್ರದೇಶದಲ್ಲಿ ದಿನನಿತ್ಯವೂ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆಗಳಾಗುತ್ತಿವೆ. ದಲಿತರ ಮೇಲೆ ದೌರ್ಜನ್ಯಗಳು- ಅತ್ಯಾಚಾರಗಳು ನಡೆಯುತ್ತಿವೆ. ಮುಸ್ಲಿಮರನ್ನು ಮೂರನೆಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಮಾನವೀಯ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಅಮಾಯಕರನ್ನು ಜೈಲಿಗೆ ತಳ್ಳಿ ಜಾಮೀನು ಕೊಡದೇ ಮಾನವ ಹಕ್ಕುಗಳನ್ನು ಗಾಳಿಗೆ ತೂರಲಾಗಿದೆ. ದೇಶವಾಸಿಗಳ ಮೂಲಭೂತ ಹಕ್ಕಿನ ಮೇಲೆ ಆಗುತ್ತಿರುವ ದುರಾಕ್ರಮಣ ಮತ್ತು ಮೋದಿ ಸರ್ಕಾರದ ದಬ್ಬಾಳಿಕೆ ಖಂಡಿಸುವ ಸಂಗತಿ ಎಂದು ನಿವೃತ್ತ ನ್ಯಾಯಮೂರ್ತಿಗಳಿಗೆ ಒಮ್ಮೆಯೂ ಅನ್ನಿಸದಿರುವುದು ಸೋಜಿಗ ಅಲ್ಲವೇ? ಈಗ ಬಿಜೆಪಿ ಮೇಲೆ ಮತಗಳ್ಳತನದ ಆರೋಪ ಬಂದಿರುವಾಗ, ಚುನಾವಣಾ ಆಯೋಗವೇ ಮತಗಳ್ಳತನಕ್ಕೆ ಕೈ ಜೋಡಿಸಿರುವಾಗ, ಅದರ ವಿಶ್ವಾಸಾರ್ಹತೆ ಬಗ್ಗೆ ಗಣ್ಯಮಾನ್ಯರಿಗೆ ಎಲ್ಲಿಲ್ಲದ ಕಾಳಜಿ ಕರುಳಿನಿಂದಲೇ ಪುಟಿದೆದ್ದಿದೆ. ಆದರೆ, ಸಿಬಿಐ, ಇಡಿ ಮುಂತಾದ ಸಂಸ್ಥೆಗಳನ್ನು ವಿಪಕ್ಷಗಳ ನಾಯಕರನ್ನು, ಅಲ್ಪಸಂಖ್ಯಾತರನ್ನು, ಸೈದ್ಧಾಂತಿಕ ವಿರೋಧಿಗಳನ್ನು ಹಣಿಯಲು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅವುಗಳ ವಿಶ್ವಾಸಾರ್ಹತೆಗೆ ಧಕ್ಕೆ ತಂದಿಲ್ಲವೇ? ಸದರಿ ಗಣ್ಯಮಾನ್ಯರ ಜಾತಕವನ್ನು ಒಂದೊಂದಾಗಿ ಬಿಚ್ಚಿಟ್ಟರೆ ಅಲ್ಲಿ ಕಾಣುವುದು ಬಿಜೆಪಿ ಸರ್ಕಾರದಿಂದ ತಿಂದಿರುವ ಉಪ್ಪಿನ ಋಣ ಎಂಬುದು ಬರಿಯ ಸುಳ್ಳೇ?

ಪಹಲ್ಗಾಮ್‌ನಲ್ಲಿ 26 ಮಂದಿ ಪ್ರವಾಸಿಗರ ಹಣೆಗೆ ಉಗ್ರರು ಗುಂಡಿಟ್ಟು ಕೊಂದಾಗ, ಅಲ್ಲಿ ಪ್ರವಾಸಿಗರಿಗೆ ಯಾವುದೇ ಭದ್ರತೆ ಒದಗಿಸದ ಗೃಹ ಇಲಾಖೆಯ ಮಹಾಲೋಪ, ಮೊನ್ನೆ ಮೊನ್ನೆ ದೆಹಲಿಯಲ್ಲಿ ನಡೆದ ಕಾರು ಬಾಂಬ್‌ ಸ್ಪೋಟ ಇವೆಲ್ಲ ಮೋದಿ ಸರ್ಕಾರದ ಭದ್ರತಾ ವೈಫಲ್ಯ ಎಂಬುದು ಈ ಗಣ್ಯರಿಗೆ ಅನ್ನಿಸಲಿಲ್ಲವೇ? ದೇಶದ ಹಿತದ ಬಗ್ಗೆ ನೈಜ ಕಾಳಜಿ ಇರುವ ಜನ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ಅವರಿಗೆಲ್ಲ ದೇಶದ್ರೋಹಿಗಳ ಪಟ್ಟ ಕಟ್ಟುತ್ತಿದ್ದಾರೆ. ಇಂತಹ ನೂರಾರು ಜ್ವಲಂತ ವಿಷಯಗಳು ದೇಶವನ್ನು ಮುತ್ತಿ ಕಾಡುತ್ತಿವೆ. ಅವುಗಳ ಬಗ್ಗೆ ಬಹಿರಂಗ ಪತ್ರ ಬರೆದು ಎಚ್ಚರಿಸುವ ಅಗತ್ಯವಿದೆ ಅಲ್ಲವೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....