ಈ ದಿನ ಸಂಪಾದಕೀಯ | ಪಟಾಕಿ ಎಂಬ ‘ಸಾವಿನ ಫ್ಯಾಕ್ಟರಿ’ಗಳಲ್ಲಿ ಬಡವರ ನಿತ್ಯ ದಹನ

Date:

ಪ್ರತಿ ಸರ್ಕಾರವೂ ಹಸಿರು ಪಟಾಕಿಗೆ ಮಾತ್ರವೇ ಅವಕಾಶ ಎನ್ನುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಎಲ್ಲ ಮಾದರಿಯ ಸಿಡಿಮದ್ದು ಮುಚ್ಚುಮರೆಯಿಲ್ಲದೇ ಮಾರಾಟವಾಗುತ್ತಿರುತ್ತದೆ. ಈ ಕುರಿತ ನಿಯಮ ಪಾಲನೆ ಮಾಡದಿದ್ದರೆ, ಕೇವಲ ಕಾನೂನಿನಿಂದ ಯಾವ ಪ್ರಯೋಜನವೂ ಇಲ್ಲ. ಪಟಾಕಿ ಎನ್ನುವುದು ಸುಡುವವರ ಪಾಲಿಗಷ್ಟೇ ಅಲ್ಲ ಮಾಡುವವರ ಪಾಲಿಗೂ ದೀಪಾವಳಿಯ ಬೆಳಕಾಗಲಿ; ಸುಡುವ ಬೆಂಕಿಯಾಗದಿರಲಿ

ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ದುರಂತ ಸುಲಭಕ್ಕೆ ಮರೆಯುವಂಥದ್ದಲ್ಲ. ಗೋದಾಮಿನ ಬಳಿ ಬೃಹತ್ ಪ್ರಮಾಣದಲ್ಲಿ ಪಟಾಕಿಗಳು ಸ್ಫೋಟಗೊಂಡು 14 ಮಂದಿ ಸುಟ್ಟು ಕರಕಲಾದ ಘಟನೆಯ ಹಿಂದೆ ಕೋಟ್ಯಂತರ ರೂಪಾಯಿಯ ಅಕ್ರಮ ವ್ಯವಹಾರವಿದೆ. ಲಕ್ಷಾಂತರ ರೂಪಾಯಿಯ ಲಂಚಾವತಾರವಿದೆ. ದುರಂತದಲ್ಲಿ ಸ್ಥಳೀಯ ರಾಜಕಾರಣಿಗಳು, ಅಧಿಕಾರಿಗಳು, ಭೂಮಾಲೀಕರ ಪಾಲೂ ಇದೆ. ಪಟಾಕಿ ಉದ್ಯಮದಿಂದ ಲಾಭ ಪಡೆಯುವವರು ಈ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಭೂಮಾಲೀಕರು. ಇಂಥ ದುರಂತಗಳಲ್ಲಿ ಸಾವನ್ನಪ್ಪುವವರು ಬಡ ಕೂಲಿ ಕಾರ್ಮಿಕರು. ಅದರಲ್ಲೂ ಅತ್ತಿಬೆಲೆಯ ಪ್ರಕರಣದಲ್ಲಿ ಸತ್ತವರೆಲ್ಲ ತಮಿಳುನಾಡಿನ ಹಳ್ಳಿಯೊಂದರ ಪದವೀಧರರು; ಬಿಡುವಿನ ವೇಳೆಯಲ್ಲಿ ಒಂದಿಷ್ಟು ಕೂಲಿ ಗಳಿಸಿ ಮನೆಗೆ ನೆರವಾಗಲೆಂದು ಬಂದವರು ಎನ್ನುವ ಅಂಶ ಮನಸ್ಸನ್ನು ನೀರಾಗಿಸುತ್ತದೆ.

ಅತ್ತಿಬೆಲೆಯ ಘಟನೆ ಮಾಸುವ ಮುನ್ನವೇ ತಮಿಳುನಾಡಿನ ಅರಿಯಲೂರು ಜಿಲ್ಲೆಯ ವಿರಗಲೂರಿನ ಗೋದಾಮಿನಲ್ಲಿ ನಡೆದ ಸ್ಫೋಟದಲ್ಲಿ 11 ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ, ಗೋದಾಮುಗಳಲ್ಲಿ ನಡೆಯುವ ಅವಘಡಗಳಲ್ಲಿ ಪ್ರತಿವರ್ಷ ಕನಿಷ್ಠ 25 ಮಂದಿ ಸಾಯುತ್ತಿದ್ದಾರೆ. ಅವರ ಪೈಕಿ ಹೆಚ್ಚಿನವರು ತಮಿಳುನಾಡಿನ ಶಿವಕಾಶಿಯವರಾಗಿರುತ್ತಾರೆ. ಭಾರತದ ಶೇ.90ರಷ್ಟು ಪಟಾಕಿಗಳು ತಯಾರಾಗುವುದು ಶಿವಕಾಶಿಯಲ್ಲಿ. ಅಲ್ಲಿ ಸಾವಿರಕ್ಕೂ ಹೆಚ್ಚು ನೋಂದಾಯಿತ ಕಾರ್ಖಾನೆಗಳಿವೆ. ಸುಮಾರು ಎಂಟು ಲಕ್ಷ ಮಂದಿ ಸಿಬ್ಬಂದಿ ಇಂಥ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ದೆಹಲಿ ಹೈಕೋರ್ಟ್ 2015ರಲ್ಲಿ ಪಟಾಕಿಗಳು ಬಂದೂಕುಗಳಷ್ಟೇ ಅಪಾಯಕಾರಿ ಎಂದಿತ್ತು. ಅದು ಉತ್ಪ್ರೇಕ್ಷೆಯೇನಲ್ಲ. ವಿಷಾದವೇನೆಂದರೆ, ಪಟಾಕಿಗಳನ್ನು ಸುಡುವವರಿಗಿಂತ ಮಾಡುವವರೇ ಅವಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಪಟಾಕಿ ತಯಾರಿಕಾ ಕಾರ್ಖಾನೆಗಳು ಅಲ್ಲಿನ ಸಿಬ್ಬಂದಿಯ ಪಾಲಿಗೆ ಸಾವಿನ ಫ್ಯಾಕ್ಟರಿಗಳಾಗಿವೆ. ಸಿಡಿಮದ್ದು ಕಾರ್ಖಾನೆಗಳಲ್ಲಿ ಪ್ರತಿವರ್ಷ ಸ್ಫೋಟಗಳು ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಕಚ್ಚಾ ವಸ್ತುಗಳ ಬಳಕೆಯಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸದೇ ಇರುವುದೇ ಹೆಚ್ಚಿನ ಸ್ಫೋಟಗಳಿಗೆ ಕಾರಣ ಎಂದು ಅಧ್ಯಯನಗಳು ತಿಳಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪಟಾಕಿ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರ ಪೈಕಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು. ಈ ಅಪಾಯಕಾರಿ ಉದ್ಯಮದಲ್ಲಿ ಬಾಲಕಾರ್ಮಿಕ ಸಮಸ್ಯೆ ವ್ಯಾಪಕವಾಗಿದೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಯಾವುದೇ ತರಬೇತಿ ನೀಡಲಾಗಿರುವುದಿಲ್ಲ; ಸುರಕ್ಷತಾ ಸಾಧನಗಳಾಗಲಿ, ವೈದ್ಯಕೀಯ ಸೌಲಭ್ಯಗಳಾಗಲಿ, ಯಂತ್ರೋಪಕರಣಗಳಾಗಲಿ ಇರುವುದಿಲ್ಲ. ಕೈಗಳ ಮೂಲಕವೇ ಪಟಾಕಿಗಳಿಗೆ ಗನ್ ಪೌಡರ್ ತುಂಬಲಾಗುತ್ತದೆ. ಪಟಾಕಿ ಜೋರಾಗಿ ಸಿಡಿದಷ್ಟೂ ಅದಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ಪಟಾಕಿಗಳನ್ನು ಮಾಡುವವರು ಒಂದು ಅಂದಾಜಿನ ಮೇಲೆ ಗನ್ ಪೌಡರ್ ಇತ್ಯಾದಿಗಳನ್ನು ತುಂಬುತ್ತಾರೆಯೇ ವಿನಃ ಅದಕ್ಕೆ ನಿರ್ದಿಷ್ಟ ಮಾನದಂಡ, ಮಾರ್ಗಸೂಚಿ ಇರುವುದೇ ಇಲ್ಲ. ಪಟಾಕಿಗಳನ್ನು ಸಂಗ್ರಹಿಸುವ, ಸಾಗಿಸುವ ಚಟುವಟಿಕೆಗಳು ಬಹುತೇಕ ಅಕ್ರಮವಾಗಿಯೇ ನಡೆಯುತ್ತಿವೆ.

ಸ್ಫೋಟಕ ಕಾಯ್ದೆ 2008ರಲ್ಲಿ ಪಟಾಕಿಗಳ ತಯಾರಿಕೆಗೆ ಸಂಬಂಧಿಸಿದಂತೆ ನೀತಿ ನಿಯಮಗಳನ್ನು ರೂಪಿಸಲಾಗಿದೆ. ಆದರೆ, ಅವು ಕಾಗದಕ್ಕೆ ಸೀಮಿತವಾಗಿವೆ. ಪಟಾಕಿಗಳ ರಾಸಾಯನಿಕ ಸಂಯೋಜನೆ ಅನುಮತಿಸಿದ ಮಿತಿಯೊಳಗೇ ಇರಬೇಕು ಎನ್ನುವ ಕಾನೂನಿದೆ. ಆದರೆ, ಜಾರಿ ಮಾಡಬೇಕಾದ ಸರ್ಕಾರಿ ಅಧಿಕಾರಿಗಳ ಲಂಚಾವತಾರದಿಂದ ದುರಂತಗಳು ನಡೆಯುತ್ತಲೇ ಇವೆ.

ವಾರ್ಷಿಕ 6,000 ಕೋಟಿ ವಹಿವಾಟಿನ ಬೃಹತ್ ಉದ್ಯಮವಾಗಿ ಬೆಳೆದಿದ್ದರೂ ಪಟಾಕಿ ತಯಾರಿಕಾ ಉದ್ಯಮ ಅಸಂಘಟಿತ ವಲಯವಾಗಿಯೇ ಉಳಿದಿದೆ. ಸಿಡಿಮದ್ದು ತಯಾರಿಸುವವರ ಪ್ರತಿದಿನದ ಕೆಲಸವೂ ಸಾವಿನೊಂದಿಗಿನ ಸೆಣಸಾಟವಾಗಿರುತ್ತದೆ. ದೀಪಾವಳಿಯ ಒಂದು ದಿನದ ಸಂಭ್ರಮಕ್ಕಾಗಿ ವರ್ಷವಿಡೀ ಲಕ್ಷಾಂತರ ಮಕ್ಕಳು, ಮಹಿಳೆಯರು ಅತ್ಯಂತ ಕನಿಷ್ಠ ಸೌಕರ್ಯಗಳೊಂದಿಗೆ ಕೆಲಸ ಮಾಡುತ್ತಾ, ನಿಕೃಷ್ಟ ಕೆಲಸದ ವಾತಾವರಣದಲ್ಲಿ ಜೀವನ ಕಳೆಯುತ್ತಿದ್ದಾರೆ.

ಪಟಾಕಿ ತಯಾರಿಕೆಯನ್ನು ಯಾಂತ್ರೀಕರಣಗೊಳಿಸುವುದು, ಸಿಡಿಮದ್ದು ಮಾಡುವುದನ್ನು ಗುಡಿ ಕೈಗಾರಿಕೆಯಂತೆ ಮನೆಗಳಲ್ಲಿ ಮಾಡುವುದನ್ನು ಬಿಡುವುದು, ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಅವರಿಗೆ ಸೂಕ್ತ ತರಬೇತಿ ನೀಡುವುದು, ಫ್ಯಾಕ್ಟರಿಗಳಲ್ಲಿ ಸ್ಥಳಾವಕಾಶ ಸೇರಿದಂತೆ ಸೂಕ್ತ ಸೌಲಭ್ಯಗಳನ್ನು ಒದಗಿಸುವುದು ಮಾಡಿದರೆ, ಒಂದಿಷ್ಟಾದರೂ ಅವಘಡಗಳನ್ನು ತಡೆಯಬಹುದು.

ಪ್ರತಿ ಬಾರಿ ದುರಂತ ನಡೆದಾಗ ಪಟಾಕಿ ನಿಷೇಧಿಸುವ ಮಾತು ಕೇಳಿಬರುತ್ತದೆ. ನಂತರ ಎಲ್ಲ ವ್ಯವಹಾರ, ಅವ್ಯವಹಾರಗಳೂ ಯಥಾಪ್ರಕಾರ ನಡೆಯುತ್ತವೆ. ಕರ್ನಾಟಕದಲ್ಲಿ ಜಾತ್ರೆ, ಉತ್ಸವ, ಮದುವೆ, ಸಂಭ್ರಮಾಚರಣೆ ಮೊದಲಾದ ಜನ ಸೇರುವ ಸಂದರ್ಭಗಳಲ್ಲಿ ಪಟಾಕಿ ನಿಷೇಧಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ, ಹಸಿರು ಪಟಾಕಿಗೆ ಮಾತ್ರ ಅವಕಾಶ ಎಂದು ಸರ್ಕಾರ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಪ್ರತಿ ಸರ್ಕಾರವೂ ಹಸಿರು ಪಟಾಕಿಗೆ ಮಾತ್ರವೇ ಅವಕಾಶ ಎನ್ನುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಎಲ್ಲ ಮಾದರಿಯ ಸಿಡಿಮದ್ದು ಮುಚ್ಚುಮರೆಯಿಲ್ಲದೇ ಮಾರಾಟವಾಗುತ್ತಿರುತ್ತದೆ. ಈ ಕುರಿತ ನಿಯಮ ಪಾಲನೆ ಮಾಡದಿದ್ದರೆ, ಕೇವಲ ಕಾನೂನಿನಿಂದ ಯಾವ ಪ್ರಯೋಜನವೂ ಇಲ್ಲ. ಇವೆಲ್ಲದರ ನಡುವೆ ವರ್ಷದಿಂದ ವರ್ಷಕ್ಕೆ ಪಟಾಕಿಗಳ ವ್ಯಾಪಾರ ಕುಸಿಯುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ. ಪಟಾಕಿ ಎನ್ನುವುದು ಸುಡುವವರ ಪಾಲಿಗಷ್ಟೇ ಅಲ್ಲ ಮಾಡುವವರ ಪಾಲಿಗೂ ದೀಪಾವಳಿಯ ಬೆಳಕಾಗಲಿ; ಸುಡುವ ಬೆಂಕಿಯಾಗದಿರಲಿ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....