ಮಾಹಿತಿ ತಂತ್ರಜ್ಞಾನದ ಕಬಂಧ ಬಾಹು ಯಾರನ್ನೂ ಬಿಟ್ಟಿಲ್ಲ ವಯಸ್ಸಿನ ಮಿತಿ ಇಲ್ಲದೇ ಮಹಿಳೆಯರು, ಪುರುಷರೆನ್ನದೇ ಎಲ್ಲರೂ ಮೊಬೈಲ್ ವ್ಯಸನಕ್ಕೆ ಬಲಿಯಾಗಿದ್ದಾರೆ. ಮನೆಗಳಲ್ಲಿ ಪುಟ್ಟ ಮಕ್ಕಳಿಗೂ ಸಮಾಧಾನ ಮಾಡಲು ಅಮ್ಮಂದಿರು ಮೊಬೈಲನ್ನೇ ಆಟಿಕೆಯ ರೀತಿ ನೀಡುತ್ತಿದ್ದಾರೆ. ಹಾಡು, ಕಾರ್ಟೂನ್ ಗಳನ್ನು ಹಾಕಿ ಪುಟ್ಟ ಕೈಗಳಿಗೆ ಮೊಬೈಲ್ ನೀಡಲಾಗುತ್ತಿದೆ. ಇದನ್ನು ಸರ್ಕಾರ ನಿಯಂತ್ರಿಸಲು ಸಾಧ್ಯವಿಲ್ಲ.
ಇಂದು 2026-27 ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 16ನೇ ವಯಸ್ಸಿನೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನು ಮನಶಾಸ್ತ್ರಜ್ಞರು, ಶಾಲಾ ಮಕ್ಕಳ ಪೋಷಕರ ಸಂಘಟನೆ ಸ್ವಾಗತಿಸಿದೆ. ಕೈಗೆ ಮೊಬೈಲ್ ಸಿಕ್ಕಿ ಮಕ್ಕಳು ಹಾಳಾದವು ಎಂಬುದು ಪೋಷಕರಿಂದ ಹಿಡಿದು ಎಲ್ಲರ ಗೊಣಗಾಟ. ಆದರೆ ಅದನ್ನು ಮಕ್ಕಳ ಕೈಗೆ ಸಿಗದಂತೆ ಮಾಡುವುದರಲ್ಲಿ ಪೋಷಕರೇ ಯಶಸ್ವಿಯಾಗಿಲ್ಲ. ವರ್ಷ ತುಂಬುವ ಮೊದಲೇ ಹಸುಗೂಸಿನ ಕೈಗೆ ಮೊಬೈಲ್ ಕೊಡುವ ತಪ್ಪನ್ನು ಹೆತ್ತವರೇ ಮಾಡುತ್ತಿದ್ದಾರೆ. ಮಗುವನ್ನು ರಮಿಸಲು ಮೊಬೈಲ್ ಬಳಕೆ ಪೋಷಕರ ಪಾಲಿಗೆ ಸುಲಭದ ಸಾಧನವಾಗಿ ಹೋಗಿರುವುದು ವಾಸ್ತವ.
ಈಗಾಗಲೇ ಪ್ರೈಮರಿ ಮತ್ತು ಹೈಸ್ಕೂಲ್‌ಗಳಲ್ಲಿ ಶಾಲಾ ಆವರಣದಲ್ಲಿ ಮೊಬೈಲ್ ಬಳಕೆಗೆ ನಿಷೇಧ ಇದೆ. ಹಾಗೆ ನೋಡಿದರೆ ಪಿಯುಸಿ ಮಕ್ಕಳ ಭವಿಷ್ಯ ಕೂಡ ಮೊಬೈಲ್‌ನಲ್ಲಿ ಕಳೆದು ಹೋಗುತ್ತಿದೆ. ದುಶ್ಚಟ, ಕೊಲೆ, ಅತ್ಯಾಚಾರದಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ವಯೋಸಹಜ ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದು ಒದ್ದಾಡಲು ಮೊಬೈಲ್ ಇನ್ನಷ್ಟು ಪ್ರೇರಣೆಯಾಗಿದೆ. ಶಾಲೆಗಳಲ್ಲಿ ನಿಷೇಧವಿದ್ದರೂ ಅಲ್ಲಿಂದ ಹೊರಬಂದ ನಂತರ ಉಳಿದ ಸಮಯದಲ್ಲಿ ನಿರಂತರವಾಗಿ ಮೊಬೈಲ್ ಮೇಲೆಯೇ ಕಳೆಯುತ್ತಿರುವುದು ಕಳವಳಕಾರಿ. ಯುಟ್ಯೂಬ್, ಫೇಸ್‌ಬುಕ್, ಇನ್‌ಸ್ಟಗ್ರಾಮ್ ಹೀಗೆ ಬಹುಮಾಧ್ಯಮ ಖಾತೆಗಳನ್ನು ಸುಲಭವಾಗಿ ಶಾಲಾ ಮಕ್ಕಳೂ ತೆರೆದು ಅಲ್ಲಿ ತಲ್ಲೀನರಾಗುತ್ತಿದ್ದಾರೆ. ಹೆತ್ತವರು ಮಕ್ಕಳಿಂದ ವಿಡಿಯೋ ಮಾಡಿಸೋದು ಮಾಮೂಲಿಯಾಗಿದೆ. ಬಹುತೇಕ ಪೋಷಕರು ಹೈಸ್ಕೂಲ್ ಮಕ್ಕಳಿಗೂ ಮೊಬೈಲ್ ಕೊಡಿಸುತ್ತಿದ್ದಾರೆ. ತಮ್ಮ ಮೊಬೈಲನ್ನೇ ಬಳಸಲು ಕೊಡುವ ಪೋಷಕರೂ ಇದ್ದಾರೆ. 2020ರಲ್ಲಿ ಕೊರೋನಾ ಮಹಾಸಾಂಕ್ರಾಮಿಕ ಬಂದಾಗ ಶಾಲೆಗಳನ್ನು ಲಾಕ್‌ಡೌನ್ ಮಾಡಿ ಆನ್‌ಲೈನ್ ತರಗತಿ ನಡೆಸುವ ಅಗತ್ಯ ಬಂದೊದಗಿತ್ತು. ಆಗ ಪುಟ್ಟ ಮಕ್ಕಳ ಕೈಗೆ ಮೊಬೈಲ್ ತಲುಪುವುದು ಸುಲಭವಾಯ್ತು. ಅಲ್ಲಿಂದಾಚೆಗೆ ಬಹುತೇಕ ಶಾಲೆಗಳು ಮೊಬೈಲ್‌ನಲ್ಲಿ ನೋಟ್ಸ್ ಕಳಿಸೋದು, ಅಲ್ಲೇ ತರಗತಿ ನಡೆಸೋದನ್ನು ಮುಂದುವರಿಸಿದ್ದಾರೆ. ಅನಿಯಮಿತ ಮೊಬೈಲ್ ಬಳಕೆಯ ವ್ಯಸನಕ್ಕೆ ಮಕ್ಕಳ ಮುಗ್ಧತೆ, ಬಾಲ್ಯದ ಸಹಜ ನಡವಳಿಕೆ, ಆಟೋಟ ಎಲ್ಲವೂ ಬಲಿಯಾಗುತ್ತಿದೆ.
ಮಾಹಿತಿ ತಂತ್ರಜ್ಞಾನದ ಕಬಂಧ ಬಾಹು ಯಾರನ್ನೂ ಬಿಟ್ಟಿಲ್ಲ ವಯಸ್ಸಿನ ಮಿತಿ ಇಲ್ಲದೇ ಮಹಿಳೆಯರು, ಪುರುಷರೆನ್ನದೇ ಎಲ್ಲರೂ ಮೊಬೈಲ್ ವ್ಯಸನಕ್ಕೆ ಬಲಿಯಾಗಿದ್ದಾರೆ. ಮನೆಗಳಲ್ಲಿ ಪುಟ್ಟ ಮಕ್ಕಳಿಗೂ ಸಮಾಧಾನ ಮಾಡಲು ಅಮ್ಮಂದಿರು ಮೊಬೈಲನ್ನೇ ಆಟಿಕೆಯ ರೀತಿ ನೀಡುತ್ತಿದ್ದಾರೆ. ಹಾಡು, ಕಾರ್ಟೂನ್ ಗಳನ್ನು ಹಾಕಿ ಪುಟ್ಟ ಕೈಗಳಿಗೆ ಮೊಬೈಲ್ ನೀಡಲಾಗುತ್ತಿದೆ. ಇದನ್ನು ಸರ್ಕಾರ ನಿಯಂತ್ರಿಸಲು ಸಾಧ್ಯವಿಲ್ಲ.
ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ, ಮಾನಸಿಕ ಆರೋಗ್ಯ, ಏಳಿಗೆಯ ದೃಷ್ಟಿಯಿಂದ ಒಳ್ಳೆಯ ತೀರ್ಮಾನವಾಗಿದ್ದು, ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷಾ ವರದಿಯಲ್ಲೂ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಇದೀಗ ಸಿದ್ದರಾಮಯ್ಯನವರು ಹದಿನಾರು ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ ಕಾನೂನು ಜಾರಿ ಮಾಡುವ ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಒಂದು ಸರ್ಕಾರವಾಗಿ ಮುಂದಿನ ಆರೋಗ್ಯಕರ ಯುವಜನಾಂಗದ ಕಾಳಜಿಯಿಂದ ಕೈಗೊಂಡ ತೀರ್ಮಾನ. ಆದರೆ, ಇದನ್ನು ಸಾಧ್ಯವಾಗಿಸಲು ಯಾವ ರೀತಿಯ ಕಾರ್ಯಯೋಜನೆ ಸರ್ಕಾರದ ಮುಂದೆ ಇದೆ ಎಂಬುದು ಬಹಳ ಮುಖ್ಯವಾಗುತ್ತದೆ. ಮನೆಗಳಲ್ಲಿ ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ತಡೆಯುವುದು ಸರ್ಕಾರದಿಂದ ಸಾಧ್ಯವೇ?
ಮೊಬೈಲ್ ನಿಷೇಧ ಅಲ್ಲ, ನಿಯಂತ್ರಣ ಆಗಬೇಕಿರೋದು ದೊಡ್ಡವರಿಗೆ. ಸ್ವಯಂ ನಿಯಂತ್ರಣ ಒಂದೇ ಪರಿಹಾರ. ಮಕ್ಕಳಿಗೆ ಮಾತ್ರ ನಿಷೇಧ ಮಾಡುತ್ತೇವೆ ಎನ್ನುವುದು ಅಸಾಧ್ಯ. ಇಂಟರ್‌ನೆಟ್ ಬಳಕೆ ಅನಿರ್ಬಂಧಿತ. ಅದನ್ನು ಬಳಸುವವರ ವಯಸ್ಸು ಅರಿಯುವುದು ಹೇಗೆ? ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್ ಐಡಿ ಕ್ರಿಯೇಟ್ ಮಾಡುವುದಕ್ಕೇ ಕಡಿವಾಣ ಇಲ್ಲ. ಯಾರು ಬೇಕಿದ್ರೂ ನಕಲಿ ಹೆಸರಿನಲ್ಲಿ ಖಾತೆ ತೆರೆಯುತ್ತಿದಾರೆ. ಬಹಳ ಕಟ್ಟುಪಾಡುಗಳಿರುವ ಅರಬ್ ರಾಷ್ಟ್ರಗಳಲ್ಲೂ ನಿಷೇಧ ಮಾಡಲು ಆಗಿಲ್ಲ, ಆಸ್ಟ್ರೇಲಿಯಾದಲ್ಲಿ ಎಲ್ಲ ಶಾಲೆಗಳಲ್ಲಿ ಮೊದಲ ಬೆಲ್ ನಿಂದ ಕಡೆಯ ಬೆಲ್ ತನಕ ಮೊಬೈಲುಗಳನ್ನು ಮಕ್ಕಳು ಸ್ವಿಚ್ ಆಫ್ ಮಾಡಿ ಇಡಬೇಕಿದೆ, ಇಲ್ಲವೇ ಶಾಲೆಯ ಸುಪರ್ದಿಗೆ ಒಪ್ಪಿಸಬೇಕಿದೆ. ಏಕಾಗ್ರತೆಯ ಕಲಿಕೆಯ ವಾತಾವರಣವನ್ನು ಸೃಷ್ಟಿಸುವುದು ಈ ಆಂಶಿಕ ನಿಷೇಧದ ಉದ್ದೇಶ. ಈ ಕ್ರಮದ ಯಶಸ್ಸು ವೈಫಲ್ಯಗಳ ಸವಿವರ ಅಧ್ಯಯನ ಇನ್ನೂ ನಡೆಯಬೇಕಿದೆ. ಆದರೆ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದೆ. ಮಕ್ಕಳ ಮಾನಸಿಕ ಆರೋಗ್ಯ ಸುಧಾರಿಸಿದೆ. ಕರ್ನಾಟಕದಲ್ಲಿ ಮೊಬೈಲ್ ನಿಷೇಧದ ಸ್ವರೂಪ ಏನೆಂಬ ವಿವರಗಳು ಇನ್ನೂ ಹೊರಬೀಳಬೇಕಿದೆ. ಉತ್ತಮ ಫಲಿತಾಂಶಗಳು ದೊರೆತಲ್ಲಿ ಕರ್ನಾಟಕ ದೇಶಕ್ಕೇ ಮಾದರಿ ಎನಿಸಲಿದೆ.





