ಈ ದಿನ ಸಂಪಾದಕೀಯ | ಟನಲ್ ರೋಡ್ ದೈತ್ಯ ಯೋಜನೆಯನ್ನು ಸಾರ್ವಜನಿಕ ಚರ್ಚೆಗಿಡಲಿ ಸರ್ಕಾರ

Date:

ನೈಸ್ ರಸ್ತೆಯ ಮೂಲ ಒಪ್ಪಂದದಲ್ಲಿ ಖಾಸಗಿಯವರ ಮೇಲುಗೈಗೆ ಅವಕಾಶ ಕೊಟ್ಟು ಸಾವಿರಾರು ಎಕರೆಗಳಷ್ಟು ಸರ್ಕಾರಿ ಜಮೀನಿನ ‘ಚಿನ್ನದ ಗಣಿ’ಯನ್ನು ಖಾಸಗಿ ಕುಳಕ್ಕೆ ಒಪ್ಪಿಸಿ ಕುಳಿತಾಗಿದೆ. ಎಷ್ಟು ಹಳಹಳಿಸಿದರೂ ಈ ಜಮೀನು ಮತ್ತೆ ಸಾರ್ವಜನಿಕ ಒಡೆತನಕ್ಕೆ ಮರಳಿ ದಕ್ಕೀತೇ?

ಆಹ್ಲಾದಕರ ಹವೆಗಾಗಿ, ಜನರ ಸಜ್ಜನಿಕೆ, ಮೆದು ನಡೆ-ನುಡಿಯಿಂದಾಗಿ ದೇಶದ ಎಲ್ಲೆಡೆಯ ಧನಿಕರನ್ನು ಬೆಂಗಳೂರು ತನ್ನತ್ತ ಸೂಜಿಗಲ್ಲಿನಂತೆ ಸೆಳೆದಿದೆ. ಐಟಿ-ಬಿಟಿ ಬೆಳವಣಿಗೆ ಈ ಆಕರ್ಷಣೆಯನ್ನು ಲಕ್ಷ ಪಟ್ಟು ಹಿಗ್ಗಿಸಿದೆ. ಕೆಂಪೇಗೌಡರು ನಿಗದಿ ಮಾಡಿದ ಗಡಿ ಗೋಪುರಗಳನ್ನು ದಶಕಗಳಷ್ಟು ಹಿಂದೆಯೇ ದಾಟಿರುವ ಬೆಂಗಳೂರು ಹದ್ದು ಮೀರಿ ಬೆಳೆದಿದೆ. ಈ ಎಲ್ಲ ಬೆಳವಣಿಗೆ ಬೆಂಗಳೂರಿನ ಪಾಲಿಗೆ ವರವೂ ಆಗಿದೆ, ಶಾಪವೂ ಎನಿಸಿದೆ. ನೀರು ನೆರಳು ಗಾಳಿ ಗಂಧ ಹಸಿರು ವಲಯ ಎಲ್ಲಕ್ಕೂ ಕುತ್ತು ತಂದಿದೆ.  

ಆಳುವವರು-ಖಾಸಗಿ ಕುಳಗಳ ಜೊತೆ ಕೈ ಮಿಲಾಯಿಸಿ ಕಾಲಕಾಲಕ್ಕೆ ಬೆಂಗಳೂರಿನ ರಿಯಲ್ ಎಸ್ಟೇಟನ್ನು ಬಗೆದು ಮುಕ್ಕಿದ್ದಾರೆ. ಈ ಲೂಟಿ ಈಗಲೂ ನಿಂತಿಲ್ಲ. ಈ ದಿಸೆಯಲ್ಲಿ ಹೊಸಹೊಸ ಯೋಜನೆಗಳು ಮೈತಳೆಯುತ್ತಲೇ ಬಂದಿವೆ. ಅವುಗಳ ಹೆಸರಿನಲ್ಲಿ ಬೆಂಗಳೂರಿನ ಸಾರ್ವಜನಿಕ ಜಮೀನು ಪರಭಾರೆಯ ಪರಂಪರೆಗೆ ಕಡಿವಾಣ ಹಾಕುವ ಭೂಪರೇ ಹುಟ್ಟಿಲ್ಲ. ಕಬ್ಬನ್ ಪಾರ್ಕ್, ಲಾಲ್ ಬಾಗ್, ಸ್ವಾತಂತ್ರ್ಯ ಉದ್ಯಾನ, ಜಿ.ಕೆ.ವಿ.ಕೆ., ಬೆಂಗಳೂರು ವಿವಿ, ರೇಸ್ ಕೋರ್ಸ್ ನಂತಹ ಬೆರಳೆಣಿಕೆಯ ಕೆಲವೇ ಸಾರ್ವಜನಿಕ ಆವರಣಗಳು ಮಹಾನಗರದ ಶ್ವಾಸಕೋಶಗಳಾಗಿ ಉಳಿದಿವೆ. ಭೂದಾಹದ ತೀವ್ರ ಒತ್ತಡಕ್ಕೆ ಸಿಲುಕಿ ಇವುಗಳಲ್ಲಿ ಕೆಲವು ಒತ್ತುವರಿಗೂ ಒಳಗಾಗಿವೆ. 1,300 ಎಕರೆಗಳಷ್ಟು ವಿಶಾಲ ಪ್ರದೇಶವಾದ ಗಾಂಧೀ ಕೃಷಿವಿಜ್ಞಾನ ಕೇಂದ್ರವನ್ನು ರಿಯಲ್ ಎಸ್ಟೇಟ್ ಗೆ ಧಾರೆ ಎರೆದು, ಈ ಕೇಂದ್ರವನ್ನು ಹೊರವಲಯಕ್ಕೆ ಸಾಗಹಾಕುವ ದುಷ್ಟ ಸಂಚೊಂದು ಕಾರ್ಯರೂಪಕ್ಕೆ ಬಾರದೆ ಹೋದದ್ದು ಬೆಂಗಳೂರಿಗರ ಅದೃಷ್ಟ ಅಷ್ಟೇ. ಇಂತಹ ಹುನ್ನಾರದ ಉದಾಹರಣೆಗಳು ನೂರಾರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನೈಸ್ ರಸ್ತೆಯ ಮೂಲ ಒಪ್ಪಂದದಲ್ಲಿ ಖಾಸಗಿಯವರ ಮೇಲುಗೈಗೆ ಅವಕಾಶ ಕೊಟ್ಟು ಸಾವಿರಾರು ಎಕರೆಗಳಷ್ಟು ಸರ್ಕಾರಿ ಜಮೀನಿನ ‘ಚಿನ್ನದ ಗಣಿ’ಯನ್ನು ಖಾಸಗಿ ಕುಳಕ್ಕೆ ಒಪ್ಪಿಸಿ ಕುಳಿತಾಗಿದೆ. ಎಷ್ಟು ಹಳಹಳಿಸಿದರೂ ಈ ಜಮೀನು ಮತ್ತೆ ಸಾರ್ವಜನಿಕ ಒಡೆತನಕ್ಕೆ ಮರಳಿ ದಕ್ಕೀತೇ?

ಈ ಎಲ್ಲದರ ನಡುವೆ ಬೆಂಗಳೂರಿನ ವಾಹನ ಸಂಚಾರದಟ್ಟಣೆ ವಿಶ್ವದಲ್ಲೇ ಕುಖ್ಯಾತಿ ಗಳಿಸಿ ಬಹು ಕಾಲ ಉರುಳಿದೆ. ಲಕ್ಷಗಳ ಜನಸಂಖ್ಯೆಗೆ ಸೂಕ್ತವೆನಿಸಿದ್ದ ರಸ್ತೆಗಳು ಈಗ ಕೋಟಿಯ ಭಾರಕ್ಕೆ ಸಿಕ್ಕಿ ಕಿಕ್ಕಿರಿದು ಕಿರಿದೆನಿಸತೊಡಗಿವೆ. ಏದುಬ್ಬಸಪಡತೊಡಗಿವೆ. ಒಂದೆಡೆ ಸಾರ್ವಜನಿಕ ಸಾರಿಗೆಯ ತೀವ್ರ ವೈಫಲ್ಯ, ಇನ್ನೊಂದೆಡೆ ರಿಯಲ್ ಎಸ್ಟೇಟ್- ಐಟಿ-ಬಿಟಿಯ ಹಣದ ಹೊಳೆ ಹರಿದು ಕಾರುಗಳ ಖರೀದಿ ಮುಗಿಲು ಮುಟ್ಟಿದೆ. ವಾಹನ ಸಂಚಾರ ದಟ್ಟಣೆ ಆಮೆಯಂತೆ ತೆವಳುತ್ತಿದೆ. ಮುಖ್ಯರಸ್ತೆಗಳಲ್ಲಿ ಪ್ರಯಾಣ ಒಂದು ಶಿಕ್ಷೆಯಾಗಿ ಪರಿಣಮಿಸಿದೆ. ಹೆಜ್ಜೆಹೆಜ್ಜೆಗೆ ಗುಂಡಿ ಬಿದ್ದಿರುವ ರಸ್ತೆಗಳು ಪ್ರಯಾಣಿಕರ ಸಹನೆಯನ್ನು ಹಗಲಿರುಳು ವಾರ-ತಿಂಗಳು-ವರ್ಷಗಟ್ಟಲೆ ಪರೀಕ್ಷಿಸುತ್ತಿವೆ. ಬಡಾವಣೆಗಳ ಒಳರಸ್ತೆಗಳು ಎಡಬಲಕ್ಕೆ ನಿಲ್ಲಿಸಲಾದ ಸಾಲುಸಾಲು ಕಾರುಗಳಿಂದ ಉಸಿರು ಕಟ್ಟಿವೆ.

ಹೊಸ ರಸ್ತೆಗಳು, ವರ್ತುಲ ರಸ್ತೆಗಳು, ಫ್ಲೈಓವರ್ ಗಳು, ಏಕಮುಖ ಸಂಚಾರ, ಸಿಗ್ನಲ್ ಗಳ ಸ್ಥಾಪನೆ ಮುಂತಾದ ಯಾವುದೇ ಕ್ರಮಗಳು ಸಾರಿಗೆ ದಟ್ಟಣೆಯ ದೈತ್ಯ ಸಮಸ್ಯೆಗೆ ಮೂಗುದಾರ ತೊಡಿಸಲು ವಿಫಲವಾಗಿವೆ. ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೊಂದರ ಕೊರತೆಯೇ ಈ ವೈಫಲ್ಯದ ಹಿಂದಿನ ಮುಖ್ಯ ಕಾರಣ ಎನ್ನಲಾಗಿದೆ. ಮೆಟ್ರೋ ವಿಸ್ತರಣೆ ಮತ್ತು ಬೆಂಗಳೂರು ವರ್ತುಲ ರೇಲ್ವೆ ಯೋಜನೆಗಳನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸಬೇಕಿದೆ.

ರಾಜ್ಯವನ್ನು ಆಳುತ್ತ ಬಂದಿರುವ ಸರ್ಕಾರಗಳು ರಾಜಕೀಯ ಪಕ್ಷಗಳ ದೂರದರ್ಶಿತ್ವ ಹಾಗೂ ಇಚ್ಛಾಶಕ್ತಿಯ ಕೊರತೆ, ಎಷ್ಟು ತಿಂದು ತೇಗಿದರೂ ತಣಿಯದ ಭೂದಾಹ, ಹಣದ ಹಪಾಹಪಿ ಬೆಂಗಳೂರಿನ ಕೆರೆಕುಂಟೆಗಳನ್ನು ತಿಂದು ತೇಗಿವೆ. ರಸ್ತೆರಸ್ತೆಗಳನ್ನು ನರಕ ಮಾಡಿವೆ. 

ಬೆಂಗಳೂರಿನ ಇಂದಿನ ಅಂದಾಜು ಜನಸಂಖ್ಯೆ 1.44 ಕೋಟಿ. ನೋಂದಾಯಿತ ಮೋಟಾರು ವಾಹನಗಳ ಸಂಖ್ಯೆ 1.23 ಕೋಟಿ. ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯ ಅಂಕಿ ಅಂಶಗಳ ಪ್ರಕಾರವೇ ಪ್ರತಿನಿತ್ಯ ಹೊಸದಾಗಿ ಸುಮಾರು 2000 ಮೋಟಾರು ವಾಹನಗಳು ಬೆಂಗಳೂರಿನ ಬೀದಿಗೆ ಇಳಿಯುತ್ತಿವೆ. ಈ ಪೈಕಿ ದ್ವಿಚಕ್ರವಾಹನಗಳು 1,300 ಮತ್ತು ಕಾರುಗಳು 500. ರಾಜ್ಯದ ಆರ್ಧಕ್ಕಿಂತ ಹೆಚ್ಚು ಕಾರುಗಳ ನೋಂದಣಿ ಬೆಂಗಳೂರಿನಲ್ಲಿ ಆಗಿದೆ. 2024-25ರ ಅಧಿಕೃತ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿನ ಒಟ್ಟು ಮೋಟಾರು ವಾಹನಗಳ ಸಂಖ್ಯೆ 3,34 ಕೋಟಿ. ಈ ಪೈಕಿ ಬೆಂಗಳೂರಿನದೇ ಸಿಂಹಪಾಲು. ಬೆಂಗಳೂರಿನಲ್ಲಿನ ಕಾರುಗಳ ಸಂಖ್ಯೆ 25.37 ಲಕ್ಷ. ಪ್ರತಿ ಐದನೆಯ ವಾಹನ ಕಾರೇ ಆಗಿದೆ.

ವಾಹನ ಸಂಖ್ಯೆಯ ಈ ಗಗನ ಜಿಗಿತದ ವೇಗದ ಜೊತೆಗೆ ಜೊತೆಗೆ ಬೆಂಗಳೂರಿನ ರಸ್ತೆ ಮೂಲಸೌಕರ್ಯ ಹೆಜ್ಜೆ ಹಾಕಬೇಕಿತ್ತು. ಆದರೆ ಹಾಗಾಗಿಲ್ಲ. ವಾಹನ ದಟ್ಟಣೆ ಪ್ರತಿ ಕಿಲೋಮೀಟರಿಗೆ 2023ರಲ್ಲಿ 761 ರಿಂದ 2024ರಲ್ಲಿ 823ಕ್ಕೆ ಏರಿದೆ. ರಸ್ತೆ ಅಷ್ಟೇ ಇದೆ, ಆದರೆ ಅವುಗಳ ಮೇಲೆ ಸಂಚರಿಸುವ ವಾಹನಗಳು ಹಿಂದೆಂದಿಗಿಂತ ಹೆಚ್ಚಿವೆ. ರಸ್ತೆಗಳನ್ನು ಅಗಲಗೊಳಿಸುವುದು, ಪಾರ್ಕಿಂಗ್ ಶುಲ್ಕ ವಿಧಿಸುವುದು, ಸರಿ-ಬೆಸ ಸಂಖ್ಯೆಯ ವಾಹನ ಸಂಚಾರ ನಿರ್ಬಂಧ ಹೇರುವುದು ಹಂಗಾಮಿ ಕ್ರಮಗಳೇ ವಿನಾ ದೂರಗಾಮಿ ಪರಿಹಾರಗಳಾಗಲಾರವು.

ಆರ್ಥಿಕ ಅಭಿವೃದ್ಧಿಯನ್ನು ಬೆಂಗಳೂರಿನ ಆಚೆಗೆ ಪಸರಿಸುವುದೇ ನಿಜ ಪರಿಹಾರ ಎನ್ನುವುದು ನಗರ ಸಾರಿಗೆ ಪರಿಣಿತರ ಅಭಿಪ್ರಾಯ.

ಬೆಂಗಳೂರು ಮಹಾನಗರದ ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ 16.75 ಕಿ.ಮೀ. ದೂರದ ಅವಳಿ-ಸುರಂಗ ಮಾರ್ಗ ನಿರ್ಮಿಸುವುದು ರಾಜ್ಯ ಸರ್ಕಾರದ ಯೋಜನೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಯೋಜನೆಯನ್ನು ಅತ್ಯಂತ ಆಕ್ರಮಣಕಾರಿಯಾಗಿ ಮುನ್ನಡೆಸತೊಡಗಿದ್ದಾರೆ.

ಯೋಜನೆಯ ಹಾಲಿ ಅಂದಾಜು ವೆಚ್ಚ 17,800 ಕೋಟಿ ರುಪಾಯಿ. ಈ ಅಂದಾಜು ವೆಚ್ಚ ಐವತ್ತು ಸಾವಿರ ಅಥವಾ ಲಕ್ಷ ಕೋಟಿಗೆ ಏರಿದರೂ ಆಶ್ಚರ್ಯವಿಲ್ಲ. ಹತ್ತಾರು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಯಾವುದೇ ಯೋಜನೆಗಳ ವೆಚ್ಚ ಏರಿಕೆಯನ್ನು ಗಮನಿಸಿದರೆ ಈ ಸಂಗತಿ ಸಂಶಯಾತೀತ.

ಬೆಂಗಳೂರಿಗೆ ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ರೂಪಿಸಿ ಜಾರಿಗೆ ತರುವ ದೂರದರ್ಶಿತ್ವ ಕೆಲಸದ ಬದಲು ಹುತ್ತವ ಬಡಿಯುವ ಕೇಮೆ ಎಂದು ಮೇಲುನೋಟಕ್ಕೇ ಕಾಣ ಬರುತ್ತದೆ. 17,800 ಕೋಟಿ ರುಪಾಯಿಗಳ ಪೈಕಿ ಶೇ.60ರಷ್ಟು ಹಣಕಾಸನ್ನು ಖಾಸಗಿ ಬಂಡವಾಳದಿಂದ ರೂಢಿಸುವ ವರದಿಗಳಿವೆ.

ಬೆಂಗಳೂರು ಮಹಾನಗರದ ಅತ್ಯಂತ ಸೂಕ್ಷ್ಮ ಹಸಿರು ವಲಯ ಪಟ್ಟಿಯಲ್ಲಿ ಹದಿನೈದು ಅಂತಸ್ತುಗಳ ಗಗನಚುಂಬಿ ಕಟ್ಟಡಗಳು ತಲೆಯತ್ತಲಿವೆ. ಸುರಂಗ ರಸ್ತೆ ಯೋಜನೆಗೆ ಖಾಸಗಿ ಹರಾಜುದಾರರನ್ನು ಆಕರ್ಷಿಸಲು ಕಟ್ಟಡ ನಿಯಮಗಳಲ್ಲಿ ರಾಜ್ಯ ಸರ್ಕಾರ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ.

ಟೆಂಡರ್ ದಾಖಲೆ ದಸ್ತಾವೇಜುಗಳ ಪ್ರಕಾರ ರಾಜ್ಯ ಸರ್ಕಾರ ಆಯಕಟ್ಟಿನ ಐದು ಪ್ರಮುಖ ಸ್ಥಳಗಳಲ್ಲಿ (ಹೆಬ್ಬಾಳ, ರೇಸ್ ಕೋರ್ಸ್, ಅರಮನೆ ಮೈದಾನ, ಲಾಲ್ ಬಾಗ್, ಸಿಲ್ಕ್ ಬೋರ್ಡ್ ಜಂಕ್ಷನ್) ವಾಣಿಜ್ಯ ಅಭಿವೃದ್ಧಿ ಗೋಪುರಗಳನ್ನು ನಿರ್ಮಿಸಲು  ಆರು ಎಕರೆ ಜಮೀನು ನೀಡಲಾಗುವುದು. ಈ ಪೈಕಿ ನಾಲ್ಕು ಸರ್ಕಾರಿ ಆಸ್ತಿಗಳು, ಐದನೆಯದನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಒಟ್ಟು 25 ಸಾವಿರ ಚದರ ಗಜಗಳಷ್ಟು ನಿವೇಶನದ ಮೇಲೆ ದಟ್ಟ ವಾಣಿಜ್ಯ ವಲಯಗಳು ತಲೆಯೆತ್ತಲಿವೆ. ಹಾಲಿ ನಿಯಮಗಳ ಪ್ರಕಾರ ಇವು ಹಸಿರುವ ವಲಯಗಳು ಇಲ್ಲವೇ ಸೂಕ್ಷ್ಮ ವಲಯಗಳು ಎಂಬುದು ಗಮನಾರ್ಹ. 44 ವರ್ಷಗಳ ನಂತರ ಈ ಆಸ್ತಿಗಳನ್ನು ಅವು ಎಲ್ಲಿವೆಯೋ, ಯಾವ ಸ್ಥಿತಿಗತಿಯಲ್ಲಿವೆಯೋ ಅದೇ ಸ್ಥಿತಿಗತಿಯಲ್ಲಿ ಸರ್ಕಾರಕ್ಕೆ ಹಿಂತಿರುಗಿಸಬೇಕು. ನೆಲದ ವಿಸ್ತೀರ್ಣ ಮತ್ತು ಅಂತಸ್ತುಗಳ ಅಭಿವೃದ್ಧಿಯ ಅನುಪಾತಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ಈಗ ಜಾರಿಯಲ್ಲಿರುವ ನಿಯಮಗಳು ಈ ಐದು ಪ್ರಮುಖ ಸ್ಥಳಗಳಿಗೆ ಅನ್ವಯಿಸುವುದಿಲ್ಲವಂತೆ. ಈ ನಿಯಮಗಳಲ್ಲಿ ಭಾರೀ ರಿಯಾಯಿತಿ ನೀಡಲಾಗುವುದು. ನಿರ್ಮಿತ ಆವರಣ (ಬಿಲ್ಟ್ ಅಪ್ ಏರಿಯಾ) ಐದು ಪಟ್ಟು ಹೆಚ್ಚಲಿದೆ ಎಂದು ಟೆಂಡರ್ ದಸ್ತಾವೇಜುಗಳು ಸಾರಿರುವುದಾಗಿ ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

ಇಷ್ಟೇ ಅಲ್ಲದೆ ಸುರಂಗ ರಸ್ತೆಗೆ ಬಸ್ಸುಗಳೂ ಸೇರಿದಂತೆ ಪ್ರಯಾಣಿಕರನ್ನೊಳಗೊಂಡ ಎಲ್ಲ ವಾಹನಗಳಿಂದ 34 ವರ್ಷಗಳ ಕಾಲ ಟೋಲ್ ವಸೂಲು ಮಾಡಬಹುದು. ಸುರಂಗ ನಿರ್ಮಾಣದ ವೆಚ್ಚ ವಸೂಲಿ ಆಗದೆ ಹೋದರೆ, 34 ವರ್ಷಗಳ ಅವಧಿಯನ್ನು 44 ವರ್ಷಗಳಿಗೆ ವಿಸ್ತರಿಸುವ ಅವಕಾಶವೂ ಟೆಂಡರಿನಲ್ಲಿದೆ. ಜಾಹೀರಾತು ಹಕ್ಕುಗಳನ್ನೂ ಹೂಡಿಕೆದಾರರಿಗೆ ಬಿಟ್ಟುಕೊಡಲಾಗುವುದು.

ಹೊಸ ವಾಣಿಜ್ಯ ಚಟುವಟಿಕೆಗಳಿಗೆ ಎಡೆಮಾಡಿಕೊಡುವ ಈ ಯೋಜನೆಯು ಈಗಾಗಲೇ ಇರುವ ವಾಹನಸಂಚಾರ ದಟ್ಟಣೆಯನ್ನು ತಗ್ಗಿಸುವ ಬದಲು ಹೆಚ್ಚಿಸುತ್ತದೆ ಎಂಬುದು ಪರಿಣಿತರ ಅಭಿಮತ.

ಆಸ್ಟ್ರೇಲಿಯಾದ ಸಿಡ್ನಿ ಮತ್ತು ಜಪಾನಿನ ಟೋಕಿಯೋ ನಗರಗಳಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳು ವಾಹನ ಸಂಚಾರ ದಟ್ಟಣೆಯನ್ನು ಸಲೀಸುಗೊಳಿಸಿದ ವರದಿಗಳಿಲ್ಲ. ಟೋಕಿಯೋದಲ್ಲಿ 18.5 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ 20 ವರ್ಷ ಹಿಡಿಯಿತು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 21 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಿಸಲಾಗಿದೆ. ಇನ್ನೂ ಹಲವಾರು ನಗರಗಳಲ್ಲಿ ಕಡಿಮೆ ಉದ್ದದ ಸುರಂಗ ರಸ್ತೆಗಳಿವೆ.

ಬೆಂಗಳೂರಿನ ಯೋಜನೆ ಕುರಿತಂತೆ ಪರಿಸರ ಸೇರಿದಂತೆ ಹತ್ತು ಹಲವು ನಿಜ ಆತಂಕಗಳು ಸಾರ್ವಜನಿಕರನ್ನು ಕಾಡಿವೆ. ಈ ಯೋಜನೆಯೇ ನಿರರ್ಥಕ ಎಂಬ ವಾದವೂ ಉಂಟು. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಒಂದು ಸ್ಥಳದಲ್ಲಿ ನಿವಾರಿಸಿ ಮತ್ತೊಂದು ಸ್ಥಳದಲ್ಲಿ ಅದಕ್ಕಿಂತಲೂ ದೊಡ್ಡ ದಟ್ಟಣೆಗಳನ್ನು ಹುಟ್ಟಿ ಹಾಕುತ್ತವೆ ಎಂಬ ವಾದವಿದೆ.

ಇದನ್ನೂ ಓದಿ ದೇಶದಲ್ಲಿ ಆಕಸ್ಮಿಕ ಸಾವು ಪ್ರಮಾಣ ಶೇ.70ರಷ್ಟು ಏರಿಕೆ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿತ!

ಕರ್ನಾಟಕದ ಸರ್ಕಾರಗಳನ್ನು ಕಮಿಷನ್ ವಸೂಲು ಮಾಡುವ ಆರೋಪಗಳು ಮುತ್ತಿಕೊಂಡಿವೆ. ಕಳೆದ ಬಿಜೆಪಿ ಸರ್ಕಾರದ ಮೇಲೆ ಶೇ.40ರಷ್ಟು ಕಮಿಷನ್ ಆರೋಪ ಹೊರಿಸಿದ್ದ ಕಾಂಗ್ರೆಸ್ ಸರ್ಕಾರದ ಮೇಲೆ ಅದಕ್ಕಿಂತಲೂ ಹೆಚ್ಚಿನ ಕಮಿಷನ್ ಪಡೆಯುತ್ತಿರುವ ಆರೋಪವನ್ನು ಬಿಜೆಪಿ ಹೊರಿಸಿದೆ.

ವೃಥಾ ಭಾರೀ ಭ್ರಷ್ಟಾಚಾರದ ಶಂಕೆಗೆ ಆಸ್ಪದ ನೀಡುವುದು ತರವಲ್ಲ. ತನ್ನ ಉದ್ದೇಶಗಳು ಪಾವನವಾಗಿದ್ದಲ್ಲಿ ಸರ್ಕಾರ ಯಾರಿಗೆ ಮತ್ತು ಯಾತಕ್ಕಾಗಿ ಹೆದರಬೇಕು?  ಎಲ್ಲ ಅತಂಕಗಳು ಆರೋಪಗಳು ಹಾಗೂ ಕಾಳಜಿಗಳ ಹಿನ್ನೆಲೆಯಲ್ಲಿ ಇಡೀ ಯೋಜನೆಯನ್ನು ರಾಜ್ಯ ಸರ್ಕಾರ ಸಾರ್ವಜನಿಕ ಚರ್ಚೆಗೆ ಇಡುವುದು ಅತ್ಯಗತ್ಯ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....