ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರು ವಿಧಾನಮಂಡಲ ಮತ್ತು ಸಂಸತ್ತಿನ ಜಂಟಿ ಅಧಿವೇಶನಗಳನ್ನು ಉದ್ದೇಶಿಸಿ ಮಾಡುವ ಭಾಷಣಗಳನ್ನು ರಾಜ್ಯಪಾಲರು ಅಥವಾ ರಾಷ್ಟ್ರಪತಿಯವರು ಬರೆದಿರುವುದಿಲ್ಲ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಬರೆದ ಭಾಷಣಗಳನ್ನು ಓದುತ್ತಾರೆ. ಇದು ಅನೂಚಾನವಾಗಿ ನಡೆದುಕೊಂಡ ಬಂದ ಸಂವಿಧಾನಾತ್ಮಕ ಕರ್ತವ್ಯ. ಈವರೆಗಿನ ರಾಜ್ಯಪಾಲರು- ರಾಷ್ಟ್ರಪತಿಯವರು ಈ ಸಂವಿಧಾನಾತ್ಮಕ ಪರಂಪರೆಯನ್ನು ಮೀರದೆ ಅನುಸರಿಸಿಕೊಂಡು ಬಂದಿದ್ದಾರೆ. ರಾಜ್ಯ ಸರ್ಕಾರ ತಯಾರು ಮಾಡಿಕೊಟ್ಟ ಭಾಷಣವನ್ನು ಜಂಟಿ ಅಧಿವೇಶನದಲ್ಲಿ ಓದುವುದು ರಾಜ್ಯಪಾಲರ ಕರ್ತವ್ಯ ಎಂದು ಸಂವಿಧಾನದ 176(1) ಅನುಚ್ಛೇದ ಸಾರುತ್ತದೆ.
ರಾಜ್ಯಪಾಲರುಗಳ ಅಸಹನೆ ಅಸಹಕಾರ ವಿಶೇಷವಾಗಿ ಪ್ರತಿಪಕ್ಷಗಳ ಸರ್ಕಾರಗಳಿಗೆ ಮೀಸಲು. ಪ್ರತಿಪಕ್ಷಗಳ ಸರ್ಕಾರಗಳಿಗೆ ಅಡ್ಡಿ ಆತಂಕಗಳನ್ನು ಒಡ್ಡುವುದು ಕೇಂದ್ರ ಬಿಜೆಪಿ ಸರ್ಕಾರ ನೇಮಕ ಮಾಡಿದ ರಾಜ್ಯಪಾಲರ ನೇರ ಕಾರ್ಯಸೂಚಿಯೇ ಆಗಿಬಿಟ್ಟಿದೆ.
ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ತೀವ್ರ ವಿವಾದಿತ ವ್ಯಕ್ತಿ. ಕಳೆದ ಮೂರು ವರ್ಷಗಳ ತಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯಪಾಲ ಪದವಿ ಶ್ರೇಷ್ಠ, ಚುನಾಯಿತ ರಾಜ್ಯ ಸರ್ಕಾರ ಕನಿಷ್ಠ ಎಂಬಂತೆ ನಡೆದುಕೊಂಡು ಬಂದಿದ್ದಾರೆ. ಕಳೆದ ತಿಂಗಳು ಅವರು ವಿಧಾನಸಭೆಯಿಂದ ಸತತ ನಾಲ್ಕನೆಯ ಸಲ ‘ವಾಕೌಟ್’ ಮಾಡಿದ್ದಾರೆ. ಇದೇನೂ ಹೆಮ್ಮೆಪಡುವ ವಿಷಯ ಅಲ್ಲ.
ಇತ್ತೀಚಿನ ತನಕ ಕೇರಳದ ಎಡಂಪಂಥೀಯ ಸರ್ಕಾರವನ್ನು ಮಗ್ಗುಲ ಮುಳ್ಳಿನಂತೆ ಕಾಡಿದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಕೂಡ ಆರ್.ಎನ್.ರವಿ ಅವರದೇ ಪ್ರವೃತ್ತಿ ಹೊಂದಿದ್ದರು. ಕೇರಳ ಸರ್ಕಾರವೂ ಅವರ ವಿರುದ್ಧ ಸುಪ್ರೀಮ್ ಕೋರ್ಟ್ ಕದ ಬಡಿದಿತ್ತು.
ಬಿಜೆಪಿ ಸರ್ಕಾರ ನೇಮಕ ಮಾಡಿದ ರಾಜ್ಯಪಾಲರೇ ಅಲ್ಲಿಯೂ ಮೋಶಾ ಕಾರ್ಯಸೂಚಿಯ ಜಾರಿಗಾಗಿ ಸಮಯ ಕಾಯುತ್ತಿರುತ್ತಲೇ ಇರುತ್ತಾರೆ. ಆರಿಫ್ ಮೊಹಮ್ಮದ್ ಖಾನ್ ಅವರ ಜಾಗಕ್ಕೆ ಬಂದಿರುವ ರಾಜೇಂದ್ರ ಅರ್ಲೇಕರ್ ಕೂಡ ಕೇರಳದ ವಾಮರಂಗ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಇಡಿಯಾಗಿ ಓದಿಲ್ಲ. ಕೇಂದ್ರ ಸರ್ಕಾರದ ವಿರುದ್ಧದ ಭಾಗಗಳನ್ನು ಓದದೆ ಕೈಬಿಟ್ಟಿದ್ದಾರೆ.
ರಾಷ್ಟ್ರಪತಿ ಕೂಡ ವರ್ಷಕ್ಕೊಮ್ಮೆ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣವನ್ನು ಕೇಂದ್ರ ಸರ್ಕಾರವೇ ಸಿದ್ಧಪಡಿಸಿ ನೀಡುತ್ತದೆ. ರಾಷ್ಟ್ರಪತಿಯವರು ಅದನ್ನು ಚಾಚೂ ತಪ್ಪದೆ ಓದುತ್ತಾರೆ. ಇಂತಹ ಭಾಷಣದಲ್ಲಿ ಪ್ರತಿಪಕ್ಷಗಳನ್ನು ಕಟುವಾಗಿ ಟೀಕಿಸುವ, ನಿಂದಿಸುವ ಅಂಶಗಳೂ ಇರುತ್ತವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಭಾಷಣವನ್ನು ಇಡಿಯಾಗಿ ಓದುವುದು ಬೆಳೆದು ಬಂದಿರುವ ಶಿಷ್ಟಾಚಾರ. ಮುರ್ಮು ಅವರನ್ನು ಬಿಜೆಪಿ ನೇತೃತ್ವದ ಮೋಶಾ ಸರ್ಕಾರವೇ ಆರಿಸಿರುವುದು ಹೌದು. ಒಂದು ವೇಳೆ ಮುರ್ಮು ಜಾಗದಲ್ಲಿ ಪ್ರತಿಪಕ್ಷಗಳು ಆಯ್ಕೆ ಮಾಡಿದ ರಾಷ್ಟ್ರಪತಿಯವರು ಇದ್ದಿದ್ದ ಸಂದರ್ಭದಲ್ಲಿ ಕೂಡ ಮೋಶಾ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನೇ ಓದಲೇಬೇಕಿತ್ತು.
ತಮಿಳುನಾಡಿನ ರಾಜ್ಯಪಾಲ ರವಿ ಅವರು ಮೂರು ವರ್ಷಗಳಿಂದ ಅವರು ವಾಕೌಟ್ ಮಾಡಿದ್ದಕ್ಕೆ ನೀಡಿರುವ ಸಮರ್ಥನೆ- ಅಧಿವೇಶನದ ಆರಂಭದಲ್ಲಿ ‘ತಮಿಳ್ ತಾಯ್ ವಾಳತ್ತು’ ಎಂಬ ತಮಿಳುನಾಡಿನ ನಾಡಗೀತೆಯನ್ನು ನುಡಿಸಲಾಯಿತು. ರಾಷ್ಟ್ರಗೀತೆಯನ್ನು ಮುಕ್ತಾಯದ ಹಂತಕ್ಕೆ ‘ತಳ್ಳಲಾಯಿತು.’ 2024 ಮತ್ತು 2025ರ ಅಧಿವೇಶನಗಳಲ್ಲಿ ಈ ಕಾರಣ ನೀಡಿಯೇ ಸಭಾತ್ಯಾಗ ಮಾಡಿದ್ದರು.
ಬಾಳ್ ಕನ್ನಡ ತಾಯ್, ಏಳ್ ಕನ್ನಡ ತಾಯ್, ಆಳ್ ಕನ್ನಡ ತಾಯ್ । ಕನ್ನಡಿಗರೊಡತಿ ಓ ರಾಜೇಶ್ವರೀ ಎಂಬ ಕುವೆಂಪು ಕವಿತೆಯ ಮಾದರಿಯದು ‘ತಮಿಳ್ ತಾಯ್ ವಾಳತ್ತು’ ನಾಡಗೀತೆ. ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ…. ಎಂಬ ನಾಡಗೀತೆಯನ್ನು ಗುರುವಾರ ಆರಂಭ ಆಗುವ ಕರ್ನಾಟಕ ವಿಧಾನಮಂಡಲ ಅಧಿವೇಶನದ ಆರಂಭದಲ್ಲಿ ನುಡಿಸಿದರೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪ್ರತಿಭಟಿಸಿ ಹೊರನಡೆಯುವರೇ? ಹಾಗೊಮ್ಮೆ ಹೊರನಡೆದರೆ ಅಂತಹ ನಡೆಯನ್ನು ಕನ್ನಡಿಗರಾದರೂ ಒಪ್ಪುವರೇ?
ಬುಧವಾರ ತಡ ಸಂಜೆಯ ಹೊತ್ತಿಗೆ ತಮಿಳುನಾಡು- ಕೇರಳದ ಮತ್ತೊಂದು ಬಗೆಯ ಪುನರಾವರ್ತನೆ ಕರ್ನಾಟಕದಲ್ಲೂ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ನಾಳೆಯಿಂದ ಆರಂಭ ಆಗುವ ಜಂಟಿ ಅಧಿವೇಶನದಲ್ಲಿ ಇಡಿಯಾಗಿ ಓದುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಮನರೇಗ ಯೋಜನೆಯನ್ನು ಅಸಲು ರೂಪದಲ್ಲಿ ಉಳಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರೆದಿರುವ ವಿಶೇಷ ಅಧಿವೇಶನವಿದು. ಗ್ರಾಮೀಣ ಬಡವರ ಪರವಿದ್ದ ಮನರೇಗ ಯೋಜನೆಯ ರೂಪ ಮತ್ತು ಸಾರವನ್ನು ‘ಜಜ್ಜಿ ವಿಕೃತಗೊಳಿಸಿ’ ವಿಬಿ ಜಿ ರಾಮ್ ಜಿ ಎಂಬ ಹೊಸ ಹೆಸರಿನಿಂದ ಕರೆದಿದೆ ಮೋದಿ ಸರ್ಕಾರ. ರಾಜ್ಯಪಾಲರು ರಾಷ್ಟ್ರಪತಿಯವರ ಪ್ರತಿನಿಧಿಯೇ ವಿನಾ ಕೇಂದ್ರ ಸರ್ಕಾರ ಏಜೆಂಟರಲ್ಲ. ಮೋದಿ ಸರ್ಕಾರ ಮನರೇಗ ಯೋಜನೆಯನ್ನು ತಿರಸ್ಕರಿಸಿದರೆ ಅದರ ಅರ್ಥ ರಾಜ್ಯಪಾಲರು ಅದೇ ಹಾದಿಯನ್ನು ತುಳಿಯುವುದು ಸಂವಿಧಾನಾತ್ಮಕ ನಡವಳಿಕೆ ಅಲ್ಲ. ಮನರೇಗ ಯೋಜನೆಯನ್ನು ಬಡವರ ವಿರುದ್ಧ ವಿಕೃತಗೊಳಿಸಿರುವ ನಡೆಯನ್ನು ವಿರೋಧಿಸಲೆಂದೇ ಕರೆದಿರುವ ಅಧಿವೇಶನವಿದು. ಕೇಂದ್ರ ಸರ್ಕಾರದ ವಿರುದ್ಧವಿರುವ ಸಾಲುಗಳನ್ನು ಪ್ಯಾರಾಗಳನ್ನು ಬಿಟ್ಟು ಉಳಿದ ಭಾಗವನ್ನು ಓದುವುದಾಗಿಯೂ ಇಲ್ಲದೆ ಹೋದರೆ ಓದುವುದೇ ಇಲ್ಲ ಎಂಬುದಾಗಿಯೂ ರಾಜ್ಯಪಾಲ ಥಾವರ್ ಚಂದ್ ತಳೆದಿರುವ ನಿಲುವು ಸಂವಿಧಾನಬಾಹಿರ. ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅಸಮರ್ಥರು ಎಂದಾದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವದೇ ಲೇಸು.
2023ರಿಂದ ಇಲ್ಲಿಯ ತನಕ ರಾಜ್ಯಪಾಲರ ಭಾಷಣದಲ್ಲಿದ್ದ ಪೆರಿಯಾರ್ (ತಮಿಳುನಾಡಿನ ಕ್ರಾಂತಿಕಾರಿ ಸಮಾಜಸುಧಾರಕ ಇವಿ ರಾಮಸ್ವಾಮಿ ನಾಯ್ಕರ್), ಅಣ್ಣಾ (ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ), ಬಿ.ಆರ್.ಅಂಬೇಡ್ಕರ್ ಹಾಗೂ ಕಲೈಂಗರ್ (ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ) ಅವರ ಹೆಸರುಗಳನ್ನು ಓದಲು ತಮಿಳುನಾಡಿನ ರಾಜ್ಯಪಾಲ ರವಿ ಅವರು ನಿರಾಕರಿಸಿದ್ದರು. ನೀತಿಗಳೂ ಇರಲಿಲ್ಲ, ಕಾರ್ಯಕ್ರಮಗಳೂ ಆಗಿರಲಿಲ್ಲ. ಕೇವಲ ಪ್ರಾಪಗ್ಯಾಂಡ ಆಗಿತ್ತು. ಸುಳ್ಳುಗಳಿಂದ ತುಂಬಿತ್ತು ಎಂದು ಪತ್ರಿಕೆಗಳಿಗೆ ನೆಪ ಹೇಳಿದ್ದರು. ನೆನ್ನೆಯೂ ಇದೇ ನೆಪಗಳನ್ನು ಒಡ್ಡಿದ್ದಾರೆ.
ನಾಡಗೀತೆಯನ್ನು ಆರಂಭದಲ್ಲಿ ಹಾಡಿ, ಮುಕ್ತಾಯದ ಹಂತದಲ್ಲಿ ರಾಷ್ಟ್ರಗೀತೆಯನ್ನು ಹಾಡುವ ಪರಂಪರೆಯನ್ನು ತಮಿಳುನಾಡು ಸದನದ್ದು. ನಾಡಗೀತೆಯನ್ನು ಆರಂಭದಲ್ಲೇ ಹಾಡಿದ್ದು ರಾಜ್ಯಪಾಲ ರವಿ ಪಾಲಿನ ಅಸಲಿ ಸಮಸ್ಯೆ. ಹಾಗಿದ್ದರೆ ರಾಷ್ಟ್ರಗೀತಗೆ ಮುನ್ನ ನಮಸ್ತೇ ಸದಾ ವತ್ಸಲೇ ಮಾತೃಭೂಮೇ ಎಂಬ ಆರೆಸ್ಸೆಸ್ ಪ್ರಾರ್ಥನೆಯನ್ನು ರಾಷ್ಟ್ರಗೀತೆಗೆ ಮುನ್ನ ಹಾಡಿದರೆ ಅಂತಹ ಸಭೆಗಳಿಂದಲೂ ರಾಜ್ಯಪಾಲ ರವಿ ಹೊರನಡೆಯುತ್ತಾರೆಯೇ ಎಂದು ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯವಾದಿ ಸಂಜಯ ಹೆಗಡೆ ಪ್ರಶ್ನಿಸಿದ್ದರು.
ರಾಜ್ಯಪಾಲ ರವಿ ಅವರು ತಮಿಳುನಾಡು ವಿಧಾನಸಭೆ ರಾಜ್ಯದ ಆಗು ಹೋಗುಗಳಿಗೆ ಸಂಬಂಧಿಸಿದಂತೆ ಅಂಗೀಕರಿಸಿದ ಸಾಲು ಸಾಲು ವಿಧೇಯಕಗಳಿಗೆ ವರ್ಷಗಟ್ಟಲೆ ಅಂಗೀಕಾರ ನೀಡದೆ ಬಾಕಿ ಇರಿಸಿಕೊಂಡು ರಾಷ್ಟ್ರಪತಿಯವರಿಗೆ ಕಳಿಸಿದ್ದರು. ಈ ಸಂಬಂಧದಲ್ಲಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ರವಿಯವರ ಈ ವರ್ತನೆಯನ್ನು ಸುಪ್ರೀಮ್ ಕೋರ್ಟು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಸಂವಿಧಾನಬಾಹಿರ ನಡೆಯಲ್ಲವೇ ಎಂದು ಪ್ರಶ್ನಿಸಿತ್ತು.
ಕೇಂದ್ರ ಸರ್ಕಾರದ ನಿಲುವಿಗೆ ಅಥವಾ ಕಾಯಿದೆ ಕಾನೂನುಗಳಿಗೆ ಹೋಲಿಸಿ ಸಮಂಜಸವಾಗಿಲ್ಲ ಎಂದು ಈ ವಿಧೇಯಕಗಳನ್ನು ಬಾಕಿ ಇಟ್ಟುಕೊಳ್ಳುವುದು ಸಲ್ಲದು ಎಂದಿತ್ತು. ವಿಧಾನಸಭೆ ಎರಡನೆಯ ಸಲ ಅಂಗೀಕರಿಸಿ ಕಳಿಸಿದ ವಿಧೇಯಕಗಳಿಗೆ ಅಂಕಿತ ಹಾಕುವುದು ಸಂವಿಧಾನದ 200ನೆಯ ಕಲಮಿನ ಪ್ರಕಾರ ಕಡ್ಡಾಯ ಕರ್ತವ್ಯ. ಈ ಕರ್ತವ್ಯವನ್ನು ಉಲ್ಲಂಘಿಸಿದ್ದಾರೂ ಹೇಗೆ ಪ್ರಶ್ನೆಯನ್ನು ಕೇಳಿತ್ತು.
ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರು ವಿಧಾನಮಂಡಲ ಮತ್ತು ಸಂಸತ್ತಿನ ಜಂಟಿ ಅಧಿವೇಶನಗಳನ್ನು ಉದ್ದೇಶಿಸಿ ಮಾಡುವ ಭಾಷಣಗಳನ್ನು ರಾಜ್ಯಪಾಲರು ಅಥವಾ ರಾಷ್ಟ್ರಪತಿಯವರು ಬರೆದಿರುವುದಿಲ್ಲ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಬರೆದ ಭಾಷಣಗಳನ್ನು ಓದುತ್ತಾರೆ. ಅನೂಚಾನವಾಗಿ ನಡೆದುಕೊಂಡ ಬಂದ ಸಂವಿಧಾನತ್ಮಕ ಕರ್ತವ್ಯ. ಈವರೆಗಿನ ರಾಜ್ಯಪಾಲರು ರಾಷ್ಟ್ರಪತಿಯವರು ಈ ಸಂವಿಧಾನಾತ್ಮಕ ಪರಂಪರೆಯನ್ನು ಮೀರದೆ ಅನುಸರಿಸಿಕೊಂಡು ಬಂದಿದ್ದಾರೆ. ಕೆ.ಆರ್. ನಾರಾಯಣನ್ ರಾಷ್ಟ್ರಪತಿಯಾಗಿದ್ದ ಕೆಲ ವರ್ಷಗಳಲ್ಲಿ ಕೇಂದ್ರದಲ್ಲಿ ವಾಜಪೇಯಿ ಅವರ ಸರ್ಕಾರವಿತ್ತು. ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿದ್ದ ಕೆಲ ವರ್ಷಗಳ ಕಾಲ ಮೋದಿ ಸರ್ಕಾರವಿತ್ತು. ಈಗಲೂ ಅವರದೇ ಸರ್ಕಾರವಿದೆ. ವಾಜಪೇಯಿ ಸರ್ಕಾರ ಮತ್ತು ಮೋದಿ ಸರ್ಕಾರಗಳು ಬರೆದಿದ್ದ ಭಾಷಣಗಳನ್ನು ಕಾಂಗ್ರೆಸ್ ಹಿನ್ನೆಲೆಯವರಾದರೂ ಓದಿದರು. ಸಂವಿಧಾನಾತ್ಮಕ ಕರ್ತವ್ಯವನ್ನು ಎತ್ತಿ ಹಿಡಿಯಲಿಲ್ಲವೇ? ರಾಜ್ಯ ಸರ್ಕಾರ ತಯಾರು ಮಾಡಿಕೊಟ್ಟ ಭಾಷಣವನ್ನು ಜಂಟಿ ಅಧಿವೇಶನದಲ್ಲಿ ಓದುವುದು ರಾಜ್ಯಪಾಲರ ಕರ್ತವ್ಯ ಎಂದು ಸಂವಿಧಾನದ 176(1) ಅನುಚ್ಛೇದ ಸಾರುತ್ತದೆ.
“ನೀವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಿ” ಎಂದು ಸುಪ್ರೀಮ್ ಕೋರ್ಟು ವರ್ಷದ ಹಿಂದೆ ಪಂಜಾಬಿನ ರಾಜ್ಯಪಾಲರಿಗೆ ಚಾಟಿ ಬೀಸಿದ್ದ ಬೆಳವಣಿಗೆ ದೊಡ್ಡ ಅಲೆಗಳನ್ನು ಎಬ್ಬಿಸಬೇಕಿತ್ತು. ಚುನಾಯಿತ ರಾಜ್ಯ ಸರ್ಕಾರಗಳನ್ನು ಕೆಡವುವ ರಾಜಕಾರಣದಲ್ಲಿ ರಾಜ್ಯಪಾಲರು ಸಕ್ರಿಯವಾಗಿ ಭಾಗಿಗಳಾಗುತ್ತಿದ್ದಾರೆಂದು ಸುಪ್ರೀಮ್ ಕೋರ್ಟು ಕಳವಳ ವ್ಯಕ್ತಪಡಿಸಿತ್ತು. ರಾಜ್ಯಪಾಲರ ಪಕ್ಷಪಾತ, ಪೂರ್ವಗ್ರಹದ ನಡೆಗಳ ಕುರಿತು ಸರ್ವೋಚ್ಚ ನ್ಯಾಯಾಲಯ ಬಿರುನುಡಿಗಳನ್ನು ಬಹುಕಾಲದಿಂದ ಆಡುತ್ತ ಬಂದಿದೆ.
ತಮಿಳುನಾಡು, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ ಹೀಗೆ ಹಲವು ರಾಜ್ಯಗಳು ರಾಜ್ಯಪಾಲರು ಪಕ್ಷ ರಾಜಕಾರಣದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಸುಪ್ರೀಮ್ ಕೋರ್ಟ್ ಕದ ಬಡಿದಿವೆ. ಸಂವಿಧಾನದ ಅಡಿಪಾಯವನ್ನೇ ಅಲುಗಿಸುವ ಕೃತ್ಯಗಳಲ್ಲಿ ರಾಜ್ಯಪಾಲರು ತೊಡಗಿದ್ದಾರೆಂಬ ಆರೋಪ ಕಳೆದ ಏಳೆಂಟು ವರ್ಷಗಳಲ್ಲಿ ಅತ್ಯಧಿಕವಾಗಿ ಕೇಳಿಬರುತ್ತಿದೆ.
ಮತದಾರರು ಆರಿಸಿದ ವಿಧಾನಸಭೆಗೆ ಕೇಂದ್ರದಿಂದ ನೇಮಕವಾಗುವ ರಾಜ್ಯಪಾಲರು ಅವಹೇಳನ ಮಾಡುವುದು, ಚುನಾಯಿತ ಸರ್ಕಾರಗಳು ಕೆಲಸ ಮಾಡದಂತೆ ತಡೆಯುವುದು ದುಷ್ಟಕೃತ್ಯ. ರಾಜ್ಯ ಸರ್ಕಾರಗಳ ಆಡಳಿತದಲ್ಲಿ ವಿನಾಕಾರಣ ಮೂಗುತೂರಿಸುವ ಜನತಂತ್ರ ವಿರೋಧಿ ನಡೆ. ಸಂವಿಧಾನವನ್ನು ಕಾಯಬೇಕಾದವರೇ ಅದರ ಆಶಯಗಳನ್ನು ಕೆಡವುವ ದುರುಳತನ.
ರಾಜ್ಯಪಾಲರಾಗಿ ನೇಮಕಗೊಳ್ಳುವ ಮುನ್ನ ಆ ವ್ಯಕ್ತಿ ಯಾವುದೇ ಪಕ್ಷದ ಸದಸ್ಯನಾಗಿರಬಹುದು, ಭಿನ್ನ ‘ಸೈದ್ಧಾಂತಿಕ ಚಿಂತನೆಯ ಶಾಲೆ’ಗೆ ಸೇರಿದಾತನೇ ಇರಬಹುದು. ಆದರೆ ಒಮ್ಮೆ ರಾಜ್ಯಪಾಲ ಹುದ್ದೆಗೆ ನೇಮಕ ಹೊಂದಿದ ನಂತರ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಆದರೆ ಇಂದಿನ ಬಹುತೇಕ ರಾಜ್ಯಪಾಲರು ರಾಜ್ಯದ ಹಿತಕ್ಕಿಂತ ತಮ್ಮನ್ನು ನೇಮಕ ಮಾಡಿದ ರಾಜಕೀಯ ಪಕ್ಷದ ಹಿತವನ್ನೇ ಕಾಯುತ್ತಿದ್ದಾರೆ.
ರಾಜ್ಯಪಾಲರು ರಬ್ಬರ್ ಸ್ಟ್ಯಾಂಪುಗಳಲ್ಲ, ಆದರೆ ಅವರು ರಾಜ್ಯ ಸರ್ಕಾರಗಳ ತಲೆಯ ಮೇಲೆ ಕುಳಿತುಕೊಂಡು ಕಾರುಬಾರು ನಡೆಸುವ ‘ಸೂಪರ್ ಸರ್ಕಾರ’ಗಳೂ ಅಲ್ಲ. ರಾಜ್ಯಪಾಲರು ರಾಜ್ಯಗಳಲ್ಲಿ ರಾಷ್ಟ್ರಪತಿಯವರ ಪ್ರತಿನಿಧಿಗಳೇ ವಿನಾ ಕೇಂದ್ರ ಸರ್ಕಾರದ ರಾಜಕೀಯ ಏಜೆಂಟರಲ್ಲ.
ಸಂವಿಧಾನದ ಪ್ರಕಾರ ಚುನಾಯಿತ ವಿಧಾನಸಭೆ ಮತ್ತು ಸರ್ಕಾರಗಳಲ್ಲೇ ನೈಜ ಅಧಿಕಾರ ಅಂತರ್ಗತ. ಈ ಅಧಿಕಾರವನ್ನು ರಾಜ್ಯಪಾಲರು ಗೌರವಿಸಬೇಕು. ಆಯಾ ರಾಜ್ಯದ ಮತದಾರರು ಆರಿಸಿದ ಸರ್ಕಾರಗಳನ್ನು ರಾಜ್ಯಪಾಲರು ಪುರಸ್ಕರಿಸಬೇಕು. ರಾಜ್ಯಪಾಲರ ಹುದ್ದೆ ಜನಾದೇಶಕ್ಕಿಂತ ದೊಡ್ಡದಲ್ಲ. ರಾಜ್ಯಪಾಲರ ಹುದ್ದೆಗಳನ್ನು ಅಲಂಕರಿಸುವವರು ಈ ದುರಹಂಕಾರವನ್ನು ತೊರೆಯಬೇಕು.





