ರಾಹುಲ್ ಗಾಂಧಿಯವರ ಆಪಾದನೆಗಳನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ. ನಾಲ್ಕು ಲಕ್ಷದಷ್ಟು ದೂರುಗಳು ದಾವೆಗಳನ್ನು ಚುನಾವಣೆ ಮುನ್ನ ಇತ್ಯರ್ಥಪಡಿಸಲಾಗಿದೆ. ರಾಹುಲ್ ಮಾಡಿರುವ ದಾವೆಗಳು ಆಕ್ಷೇಪಗಳನ್ನು ಮತದಾನಕ್ಕೆ ಮುನ್ನ ನಿಗದಿತ ಅವಧಿಯ ಒಳಗೆ ಸಲ್ಲಿಸಲಾಗಿಲ್ಲ ಎಂದು ಪ್ರತಿಕ್ರಿಯಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈವರೆಗೆ ಕೇಳಿ ಅರಿಯದಂತಹ ಮಹಾನ್ ‘ಮತಗಳ್ಳತನ’ವನ್ನು ದೇಶದ ಮುಂದೆ ಬಯಲು ಮಾಡಿದ್ದಾರೆ. ಅವರು ಈವರೆಗೆ ಬಹಿರಂಗಪಡಿಸಿರುವ ಎಲ್ಲ ಮತಚೌರ್ಯಗಳನ್ನು ಮೀರಿಸಿದ ಚೌರ್ಯವಿದು.
2024ರಲ್ಲಿ ನಡೆದ ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ 25 ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಕಳವು ಮಾಡಲಾಗಿದ್ದು, ಈ ಮೂಲಕ ಸರ್ಕಾರವನ್ನೇ ಅಪಹರಿಸಲಾಗಿದೆ ಎಂಬುದು ಅವರ ಆಪಾದನೆಯ ಸಾರ. ಮತದಾರರ ಪಟ್ಟಿಯಲ್ಲಿ ಮಾಡಿರುವ ಈ ‘ಅಫರಾತಫರಾ’ಗಳು ಕಾಂಗ್ರೆಸ್ಸಿನಿಂದ ಗೆಲುವನ್ನು ಕಿತ್ತುಕೊಂಡು ಬಿಜೆಪಿ ಕೈಗಿಟ್ಟಿವೆ. ಅಂತಿಮವಾಗಿ ಈ ಚುನಾವಣೆಗಳ ಎಂಟು ಕ್ಷೇತ್ರಗಳಲ್ಲಿ ಬಿಜೆಪಿಯು ಕಾಂಗ್ರೆಸ್ಸಿಗಿಂತ ಕೇವಲ 22,779 ಹೆಚ್ಚುವರಿ ಮತಗಳನ್ನು ಗಳಿಸಿತ್ತು ಅಷ್ಟೇ. ಈ ಎಂಟು ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಬಹುಮತವು ಕಾಂಗ್ರೆಸ್ ಪಾಲಾಗುತ್ತಿತ್ತು. ಹರಿಯಾಣದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯು ಕಾಂಗ್ರೆಸ್ಸಿಗಿಂತ ಗಳಿಸಿದ ಹೆಚ್ಚು ಮತಗಳ ಸಂಖ್ಯೆ 1.12 ಲಕ್ಷ ಮಾತ್ರ. ಈ ವ್ಯತ್ಯಾಸದ ಸಂಖ್ಯೆ ಕೂಡ ನಕಲಿ ವೋಟುಗಳ ಸೃಷ್ಟಿಯೇ ಆಗಿರುತ್ತದೆ ಎಂದು ರಾಹುಲ್ ಪುರಾವೆಗಳನ್ನೂ, ಜ್ವಲಂತ ಉದಾಹರಣೆಗಳನ್ನೂ ನೀಡಿದ್ದಾರೆ.
ಈ ಮತಗಳ್ಳತನವು ಕೇಂದ್ರೀಯ ಕಾರ್ಯಾಚರಣೆಯ ಮೂಲಕ ನಡೆದಿದೆ. ಹರಿಯಾಣದಲ್ಲಿ ಚಲಾಯಿಸಲಾಗಿರುವ ಮತಗಳ ಪೈಕಿ ಶೇ.12.5ರಷ್ಟು ಮತಗಳು ನಕಲಿ ಎಂದು ಅವರು ಆಪಾದಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ 1,24,177 ಮತದಾರರ ಫೋಟೋಗಳು ಅವರ ಫೋಟೋಗಳಲ್ಲ. ಚುನಾವಣಾ ಆಯೋಗ ಈ ತಪ್ಪುಗಳನ್ನು ಸರಿಪಡಿಸುವುದು ಸಾಧ್ಯವಿತ್ತು. ಆದರೆ ಬೇಕೆಂದೇ ಸರಿ ಮಾಡಿಲ್ಲ ಎಂದಿದ್ದಾರೆ.
ರಾಹುಲ್ ಆಪಾದನೆಗಳನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ. ನಾಲ್ಕು ಲಕ್ಷದಷ್ಟು ದೂರುಗಳು ದಾವೆಗಳನ್ನು ಚುನಾವಣೆ ಮುನ್ನ ಇತ್ಯರ್ಥಪಡಿಸಲಾಗಿದೆ. ರಾಹುಲ್ ಮಾಡಿರುವ ದಾವೆಗಳು ಆಕ್ಷೇಪಗಳನ್ನು ಮತದಾನಕ್ಕೆ ಮುನ್ನ ನಿಗದಿತ ಅವಧಿಯ ಒಳಗೆ ಸಲ್ಲಿಸಲಾಗಿಲ್ಲ ಎಂದು ಪ್ರತಿಕ್ರಿಯಿಸಿದೆ. ರಾಹುಲ್ ತಮ್ಮ ಈ ಎಲ್ಲ ದೂರುಗಳು-ದಾವೆಗಳು ಆಕ್ಷೇಪಣೆಗಳನ್ನು ಪ್ರಮಾಣಪತ್ರದ ಮೂಲಕ ಸಲ್ಲಿಸಬೇಕೆಂಬ ತನ್ನ ಹಳೆಯ ವಾದವನ್ನು ಮುಂದೆ ಮಾಡಿದೆ.
ಐದು ಲಕ್ಷಕ್ಕೂ ಹೆಚ್ಚಿನ ಮತಗಳ ಈ ಕಳವನ್ನು ಪತ್ತೆ ಹಚ್ಚಲು ತಮ್ಮ ಸಂಶೋಧನಾ ತಂಡ ತಿಂಗಳುಗಳ ಕಾಲ ಶ್ರಮಿಸಬೇಕಾಯಿತು. ಸ್ಥಳಗಳಿಗೇ ಹೋಗಿ ತಾಳೆ ನೋಡಬೇಕಾಯಿತು. ಹೀಗಾಗಿ ಚುನಾವಣೆಗೆ ಮುನ್ನ ನೀಡಿದ್ದ ನಿಗದಿತ ಅವಧಿಯ ಒಳಗಾಗಿ ಈ ತಗಾದೆಗಳನ್ನು ಸಲ್ಲಿಸುವುದು ಸಾಧ್ಯವಾಗಲಿಲ್ಲ ಎಂಬುದು ರಾಹುಲ್ ಸಮಜಾಯಿಷಿ.
ಆಯೋಗ ಹೇಳುವ ಈ ಪ್ರಮಾಣ ಪತ್ರದ ಕತೆಯಾದರೂ ಏನು ಎಂದು ಸಂಕ್ಷಿಪ್ತವಾಗಿ ತಿಳಿಯೋಣ. ಚುನಾವಣಾ ಕಾಯಿದೆಯ 20(3)(ಬಿ) ನಿಯಮದ ಪ್ರಕಾರ ಪುರಾವೆಗಳು- ಆಕ್ಷೇಪಗಳು ಅಥವಾ ದಾವೆಗಳನ್ನು ನಿರ್ದಿಷ್ಟ ದೂರುದಾರ ವ್ಯಕ್ತಿಯು ಪ್ರಮಾಣಪತ್ರದ ಮೂಲಕವೇ ಸಲ್ಲಿಸಬೇಕು. ಈ ಆಕ್ಷೇಪಗಳು ಮತ್ತು ದಾವೆಗಳು ಬಹುತೇಕ ದೂರುದಾರರು ತಮ್ಮ ಹೆಸರುಗಳನ್ನು ಮತದಾರರ ಯಾದಿಯಿಂದ ತಪ್ಪಾಗಿ ಕೈಬಿಟ್ಟ, ತಪ್ಪಾಗಿ ಸೇರಿಸಿದ್ದ ಅಥವಾ ದುರ್ಬಳಕೆ ಮಾಡಿದ ಕುರಿತಾಗಿರುತ್ತವೆ. ಹೀಗೆ ಪ್ರಮಾಣಪತ್ರದ ಮೂಲಕ ಸಲ್ಲಿಸಲಾದ ದೂರು- ದಾವೆ-ಆಕ್ಷೇಪಗಳ ಕುರಿತು ಆಯೋಗ ತನಿಖೆ ನಡೆಸುತ್ತದೆ. ರಾಹುಲ್ ಅವರೂ ಹೀಗೆ ಪ್ರಮಾಣಪತ್ರದ ಮೂಲಕ ತಮ್ಮ ದೂರು-ದಾವೆಗಳನ್ನು ಸಲ್ಲಿಸಿದರೆ ತನಿಖೆ ಮಾಡುವುದಾಗಿ ಆಯೋಗ ಹೇಳಿದೆ. ಅವರು ಪ್ರಮಾಣಪತ್ರದ ಮೂಲಕ ಸಲ್ಲಿಸಿದರೆ ಮಾತ್ರವೇ ತನಿಖೆ ನಡೆಸುತ್ತೇವೆಂಬ ಆಯೋಗದ ನಿಲುವುದ ಸರಿಯಲ್ಲ. ದೇಶದ ಲೋಕಸಭೆಯ ಪ್ರತಿಪಕ್ಷದ ನಾಯಕ ಈಗಾಗಲೆ ಸಂವಿಧಾನದ ಹೆಸರಿನಲ್ಲಿ ಶಪಥ ಸ್ವೀಕರಿಸುವವರು. ಅವರು ತಮ್ಮ ದೂರುಗಳನ್ನು ಮತ್ತೊಂದು ಶಪಥ ಪತ್ರದ ಮೂಲಕ ಸಲ್ಲಿಸಬೇಕೇ? ಅವರು ಹೇಳುವುದು ತಪ್ಪು, ತಾನು ಹೇಳುವುದೇ ಸರಿ ಎಂಬುದು ಆಯೋಗದ ನಿಲುವಾಗಿದ್ದರೆ, ಸವಿವರ ಸಮಜಾಯಿಷಿ ನೀಡಲಿ, ಪೂರಕ ಪುರಾವೆಗಳನ್ನೂ ಸಾರ್ವಜನಿಕಗೊಳಿಸಲಿ. ಅದನ್ನು ಬಿಟ್ಟು, ಆಗಲೇ ಯಾಕೆ ದೂರು ನೀಡಲಿಲ್ಲ ಎಂದು ತಕರಾರು ತೆಗೆಯುವುದು ಉತ್ತರ ಎನಿಸಿಕೊಳ್ಳುವುದಿಲ್ಲ.
ಎಷ್ಟು ಮತದಾನ ನಡೆಯಿತು ಎಂಬ ಮಾಹಿತಿಯನ್ನು ಸಾರ್ವಜನಿಕಗೊಳಿಸದೆ, ಗುಟ್ಟಾಗಿಟ್ಟುಕೊಂಡು ತಿಂಗಳುಗಳ ನಂತರ ಬಿಡುಗಡೆ ಮಾಡುವ ಮರ್ಮವಾದರೂ ಏನು? ಚುನಾವಣೆಗಳು ನಡೆದ 45 ದಿನಗಳ ನಂತರ ಎಲ್ಲ ಸಿಸಿ ಟಿವಿ ಚಿತ್ರೀಕರಣಗಳನ್ನೂ ‘ಡಿಲೀಟ್’ ಮಾಡುವುದಾದರೂ ಯಾತಕ್ಕೆ?
ಚುನಾವಣಾ ಆಯೋಗದ ಡೇಟಾ ಕುರಿತು ವ್ಯಕ್ತವಾಗುವ ಯಾವುದೇ ಸಂದೇಹಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸೂಕ್ಷ್ಮ ಪರಿಶೀಲನೆಗೆ ಒಳಪಡಿಸಬೇಕು. ಅಂತಹ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ. ಚಲಾಯಿತ ಮತಗಳು ಮತ್ತು ಎಣಿಸಲಾದ ಮತಗಳ ಸಂಖ್ಯೆಗಳು ಯಾಕೆ ಪರಸ್ಪರ ತಾಳೆಯಾಗುತ್ತಿಲ್ಲ ಎಂಬುದಾಗಿ ಯೂಟ್ಯೂಬರ್ ಒಬ್ಬರು ಆಯೋಗಕ್ಕೆ ಪ್ರಶ್ನೆ ಕೇಳಿದ್ದರು. ಪ್ರತಿಕ್ರಿಯೆಯಾಗಿ ಆಯೋಗವು ತನ್ನ ಅಂತರ್ಜಾಲ ತಾಣದಿಂದ ಸಂಬಂಧಪಟ್ಟ ಡೇಟಾವನ್ನೇ ತೆಗೆದು ಹಾಕಿತ್ತು.
2019ರ ಚುನಾವಣೆಗಳು ಮತ್ತು ವಿಶೇಷವಾಗಿ 2024ರ ಲೋಕಸಭಾ ಚುನಾವಣೆಗಳ ನಂತರ ಚುನಾವಣಾ ಆಯೋಗದ ಪಾರದರ್ಶಕ ನಡೆಯು ತೀವ್ರ ಶಂಕೆಗೆ ಗುರಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ಕೇಂದ್ರ ಸರ್ಕಾರದ್ದೇ ನಿರ್ಣಾಯಕ ಪಾತ್ರ. ಪ್ರಧಾನಮಂತ್ರಿ, ಗೃಹಮಂತ್ರಿ ಹಾಗೂ ಪ್ರತಿಪಕ್ಷದ ನಾಯಕನನ್ನು ಈ ಆಯ್ಕೆ ಸಮಿತಿ ಹೊಂದಿರುತ್ತದೆ. ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯನ್ನು ಈ ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡಲಾಯಿತು. ಇಬ್ಬರು ಆಯುಕ್ತರು ಮತ್ತು ಮುಖ್ಯ ಆಯುಕ್ತರ ಆಯ್ಕೆ ಪ್ರಕ್ರಿಯೆ ಸರ್ಕಾರದ ಅಧೀನದಲ್ಲಿರುವ ತನಕ ಆಯೋಗದ ಕೆಲಸ ಕಾರ್ಯಗಳು ಪಾರದರ್ಶಕ ಆಗುವುದು ಸಾಧ್ಯವಿಲ್ಲ.
ಉತ್ತರಪ್ರದೇಶದಲ್ಲಿ ವಾಸವಿರುವ 5000 ಮತದಾರರನ್ನು ಬಿಹಾರದ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಕಳೆದ ಆಗಸ್ಟ್ ತಿಂಗಳಲ್ಲಿ ತನಿಖಾ ವರದಿ ಪ್ರಕಟಿಸಿತ್ತು. ಬಿಹಾರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳ ಜಾಗದಲ್ಲಿ ಕೇವಲ ವಿರಾಮ ಚಿಹ್ನೆಗಳನ್ನು ಉಳಿಸಲಾಗಿದೆ ಎಂದು ‘ನ್ಯೂಸ್ ಲಾಂಡ್ರಿ’ ವರದಿ ಮಾಡಿತ್ತು.
ಸ್ವೀಡನ್ ನ ‘ವಿ-ಡೆಮ್ ಇನ್ಸ್ಟಿಟ್ಯೂಟ್’ ಜಗತ್ತಿನಾದ್ಯಂತ ಚುನಾವಣೆಗಳು ಎಷ್ಟು ಮುಕ್ತವಾಗಿ ಮತ್ತು ನ್ಯಾಯಯುತವಾಗಿ ನಡೆಯುತ್ತವೆಂದು ಅಧ್ಯಯನ ಮಾಡಿ ಚುನಾವಣಾ ಜನತಂತ್ರ ಸೂಚ್ಯಂಕವನ್ನು ನಿರ್ಧರಿಸುತ್ತವೆ. ಭಾರತದ ಸ್ಥಾನ 2014-2024ರ ನಡುವೆ 0.62ರಿಂದ 0.4ಕ್ಕೆ ಕುಸಿದಿದೆ. ಸೊನ್ನೆಯಿಂದ ಶುರುವಾಗುವ ಸೂಚ್ಯಂಕ ಒಂದಕ್ಕೆ ಪೂರ್ಣಗೊಳ್ಳುತ್ತದೆ. ಅರ್ಥಾತ್ ‘ಒಂದು’ ಸೂಚ್ಯಂಕ ಪಡೆಯುವ ಗಳಿಸುವ ದೇಶ ಅತ್ಯಂತ ಜನತಾಂತ್ರಿಕ.
2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅದೇ ವರ್ಷದ ಜುಲೈ ತಿಂಗಳಲ್ಲಿ ‘ವೋಟ್ ಫರ್ ಡೆಮಾಕ್ರಸಿ’ ಎಂಬ ‘ಸಿವಿಲ್ ಸೊಸೈಟಿ ಗ್ರೂಪ್’ ನೀಡಿದ್ದ ವರದಿ ಆತಂಕ ಹುಟ್ಟಿಸುವಂತಹುದಾಗಿತ್ತು. ದೇಶದ ನಿವೃತ್ತ ಐಎಎಸ್ ಐಪಿಎಸ್ ಅಧಿಕಾರಿಗಳನ್ನು ಮತ್ತು ಅತ್ಯಂತ ಮೇಲ್ಮಟ್ಟದ ಸಂಸ್ಥೆಗಳ ಶಿಕ್ಷಣವೇತ್ತರಿಂದ ಕೂಡಿರುವ ಸಂಸ್ಥೆಯಿದು. ಮತದಾನದಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಒಟ್ಟು ಚಲಾಯಿತ ಮತಗಳ ಸಂಖ್ಯೆ ಮತ್ತು ಕೆಲ ದಿನಗಳ ಪರಿಷ್ಕರಣೆಯ ನಂತರ, ಇದೇ ಆಯೋಗ ಬಿಡುಗಡೆ ಮಾಡಿದ ಒಟ್ಟು ಚಲಾಯಿತ ಮತಗಳಲ್ಲಿ 4.6 ಕೋಟಿ ಮತಗಳ ಅಂತರ ಕಂಡು ಬಂದಿತ್ತು.
2024ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದ 79ಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವಿನ ಅಂತರವು ಮೇಲ್ಕಂಡ ‘ಸ್ವರೂಪದ ಅಂತರ’ಕ್ಕಿಂತ ಕಡಿಮೆ ಇದ್ದಿತು. ಹೀಗಾಗಿ ಚುನಾವಣಾ ಆಯೋಗದ ಪರಿಷ್ಕೃತ ಅಂತರವು ಎನ್.ಡಿ.ಎ.ಗೆ 79ಕ್ಕಿಂತಲೂ ಹೆಚ್ಚಿನ ಸೀಟುಗಳನ್ನು ಗೆಲ್ಲಲು ನೆರವಾಗಿದೆಯೆಂದು ವರದಿ ತಿಳಿಸಿತ್ತು.
ಮತದಾರ ದುರುಪಯೋಗ ಕೈಚಳಕವು 2019ರ ಬಿಜೆಪಿಗೆ ಗೆಲುವಿಗೆ ನೆರವಾಗಿದೆಯೆಂದು ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಬ್ಯಸಾಚಿ ದಾಸ್ ಅವರು ಸಂಶೋಧನಾ ಪ್ರಬಂಧವೊಂದನ್ನು ಪ್ರಕಟಿಸಿದ್ದರು. ಪ್ರಕಟಣೆಯ ನಂತರ ಮೋದಿ ಸರ್ಕಾರದ ಐ.ಬಿ. (ಇಂಟೆಲಿಜನ್ಸ್ ಬ್ಯೂರೋ) ಅಧಿಕಾರಿಗಳು ಸಬ್ಯಸಾಚಿ ಅವರ ‘ವಿಚಾರಣೆ’ ನಡೆಸಿದ್ದರು. ವಿಶ್ವವಿದ್ಯಾಲಯವು ದಾಸ್ ಅವರ ಪ್ರಬಂಧಕ್ಕೂ ತನಗೂ ಸಂಬಂಧವಿಲ್ಲವೆಂದು ಕೈ ತೊಳೆದುಕೊಂಡಿತ್ತು. ದಾಸ್ ರಾಜೀನಾಮೆ ನೀಡಬೇಕಾಯಿತು.
ರಾಹುಲ್ ಗಾಂಧೀ ಪ್ರಮಾಣಪತ್ರದ ಮೂಲಕ ತಮ್ಮ ಆಪಾದನೆಗಳನ್ನು ಸಲ್ಲಿಸುವರೇ ಇಲ್ಲವೇ ಎಂಬುದು ಅವರ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಚುನಾವಣಾ ಆಯೋಗವು ರಾಹುಲ್ ಆಪಾದನೆಗಳಿಗೆ ಪುರಾವೆಗಳ ಸಹಿತ ಸಮಜಾಯಿಷಿ ನೀಡಬೇಕೇ ವಿನಾ, ಅವುಗಳಲ್ಲಿ ಹುರುಳಿಲ್ಲ-ನಿರಾಧಾರ ಎಂದು ಗುಡಿಸಿ ಹಾಕುವುದು ಸಲ್ಲದು.
ದಾಖಲೆಗಳು ಮತ್ತು ಅಂಕಿ-ಅಂಶಗಳ ಸಹಿತ ರಾಹುಲ್ ಮಂಡಿಸಿರುವ ಆಪಾದನೆಗಳು ಗಂಭೀರ ಸ್ವರೂಪದವು. ಹಿಂದೆ ಯಾವುದೇ ರಾಜಕಾರಣಿಯು ಆಯೋಗದ ವಿರುದ್ಧ ಇಂತಹ ಆಪಾದನೆಗಳನ್ನು ಮಾಡಿರುವ ದಾಖಲೆ ಇಲ್ಲ.
ಚುನಾವಣಾ ಆಯೋಗ ಮೋದಿ ಪಂಜರದ ಗಿಳಿಯಾಗಿ ಹೋಗಿದೆ. ಅದನ್ನು ಬಿಡುಗಡೆ ಮಾಡಲು ಜನಶಕ್ತಿಯೇ ಎಚ್ಚರಗೊಳ್ಳಬೇಕಿದೆ.





