ಕರ್ನಾಟಕ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿರುವ ಈ ಮಸೂದೆಯಲ್ಲಿ ಕೂಡ ಸಂವಿಧಾನಬಾಹಿರ ದುರ್ಬಳಕೆಗೆ ಅವಕಾಶವಿದೆ. ವಿಮರ್ಶೆ-ಟೀಕೆ ಮತ್ತು ದ್ವೇಷದ ನಡುವೆ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಆಳುವವರ ಪರ ಅನುಕೂಲಾಸ್ತ್ರವಾಗಿ ಬಳಸುವ ಸಾಧ್ಯತೆ ಇದೆ. ಈ ಮಾತಿಗೆ ಇತ್ತೀಚಿನ ಇತಿಹಾಸವೇ ಉದಾಹರಣೆ. ಹೀಗಾಗಿ ಸಾಂವಿಧಾನಿಕ ರಕ್ಷಣೆಗಳ ಅಡಿಯಲ್ಲಿಯೇ ಈ ಕಾನೂನಿನ ಬಳಕೆ ಆಗತಕ್ಕದ್ದು.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಸೂದೆ- 2025 ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಿದೆ. ಈ ಮಸೂದೆಯನ್ನು ಬಿಜೆಪಿ ಮತ್ತು ಹಿಂದುತ್ವವಾದಿ ಸಂಘಟನೆಗಳು ಉಗ್ರವಾಗಿ ಖಂಡಿಸಿವೆ ಮತ್ತು ಪ್ರತಿಭಟನೆಯ ಎಚ್ಚರಿಕೆ ನೀಡಿವೆ. ಸಹಜವಾಗಿಯೇ ಬಿಜೆಪಿ ಮತ್ತು ಸಂಘಪರಿವಾರಕ್ಕೆ ದ್ವೇಷಭಾಷಣ ಪ್ರತಿಬಂಧಿಸುವುದೆಂದರೆ ಕತ್ತು ಹಿಸುಕಿದಂತಾಗುವುದರಲ್ಲಿ ಅಚ್ಚರಿಯಿಲ್ಲ. ಯಾಕೆಂದರೆ ಬಿಜೆಪಿ ರಾಜಕಾರಣದ ತಳಹದಿಯೇ ದ್ವೇಷ. ಈ ಕೀಳು ಮೌಲ್ಯದ ಮೇಲೆಯೇ ಅವರು ತಮ್ಮ ಅಧಿಕಾರದ ಮಹಲು ಕಟ್ಟಿ ಗೋಪುರ ಇಟ್ಟಿದ್ದಾರೆ. ರಾಷ್ಟ್ರೀಯಮಟ್ಟದ ನಾಯಕರಿಂದ ಹಿಡಿದು ತಳಮಟ್ಟದ ಕಾರ್ಯಕರ್ತರವರೆಗೆ ಮುಸ್ಲಿಮರು ಮತ್ತು ಅನ್ಯಧರ್ಮೀಯರ ವಿರುದ್ಧ ದ್ವೇಷದ ಮಾತುಗಳನ್ನಾಡಿಸುವುದು, ನಿಂದಿಸುವುದು, ಬೆದರಿಸುವುದು ಅವರ ನಿತ್ಯದ ಚಾಳಿ. ಅದನ್ನು ಬಿಟ್ಟುಬಿಡಿ ಎಂದರೆ ನೀರಿನಿಂದ ಹೊರ ತೆಗೆದ ಮೀನಿನಂತೆ ವಿಲವಿಲ ಒದ್ದಾಡುವುದು ಸಹಜ. ಬಿಜೆಪಿ ಮತ್ತು ಮೋದಿ ಅಧಿಕಾರಕ್ಕೇರಿದ್ದೇ ಇತಿಹಾಸವನ್ನು ತಿರುಚಿ ಸುಳ್ಳು ಹೇಳುತ್ತಾ, ಹಿಂದೂ-ಮುಸ್ಲಿಂ ನಡುವೆ ದ್ವೇಷ ಬಿತ್ತಿ ಕಟಾವು ಮಾಡಿದ ಫಸಲಿನಿಂದ. ಈಗಲೂ ಸಂಸತ್ತೇ ಇರಲಿ, ಚುನಾವಣಾ ಪ್ರಚಾರವೇ ಇರಲಿ ಪ್ರಧಾನಿ ಮೋದಿಯವರು ನೆಹರೂ ಬಗ್ಗೆ ಸುಳ್ಳು ಹೇಳುವುದು, ಕಾಂಗ್ರೆಸ್‌ನವರು ಧರ್ಮದ್ರೋಹಿಗಳು, ದೇಶದ್ರೋಹಿಗಳು ಎಂದು ನಿಂದಿಸುವುದು ಮುಂದುವರಿದಿದೆ. ಮುಸಲ್ಮಾನರನ್ನು ನಿಂದಿಸದೆ, ಅವರ ವಿರುದ್ಧ ಹಿಂದೂಗಳಲ್ಲಿ ದ್ವೇಷ ಬಿತ್ತುವುದು, ಇದ್ದ ಪೂರ್ವಗ್ರಹವನ್ನು ಕೆಣಕಿ ಹೆಡೆ ಬಿಡಿಸುವುದು ಅವರ ಕಾರ್ಯಸೂಚಿಯ ಕೇಂದ್ರ. ಈ ಕೆಲಸ ಮಾಡದೆ ಹೋದರೆ ಅವರ ಚುನಾವಣಾ ಪ್ರಚಾರ ಅಪೂರ್ಣ. ಭಕ್ತಗಣವೂ ತೃಪ್ತವಾಗುವುದಿಲ್ಲ.
ಕರ್ನಾಟಕದಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಯತ್ನಾಳ್, ಈಶ್ವರಪ್ಪ, ಸಿ ಟಿ ರವಿ, ಪ್ರತಾಪ್ ಸಿಂಹ ತರಹದ ಆರೆಸ್ಸೆಸ್ ಹಿನ್ನೆಲೆಯ ರಾಜಕಾರಣಿಗಳು ಹೇಗೆಲ್ಲ ಕೋಮುದ್ವೇಷದ ಭಾಷಣ ಮಾಡುತ್ತಿದ್ದಾರೆ ಎಂಬುದನ್ನು ರಾಜ್ಯ ಕಂಡಿದೆ. ದ್ವೇಷ ಕೆರಳಿಸುವವರಿಗೆ ಪ್ರಚಾರ ಸಿಗುತ್ತದೆ. ಪಕ್ಷದಲ್ಲಿ ಸ್ಥಾನಮಾನ ಸಿಗುತ್ತದೆ, ಚುನಾವಣೆ ಟಿಕೆಟ್ ಗಳು ದೊರೆಯುತ್ತವೆ. ಕಡೆಗೆ ಹಣದ ಹೊಳೆಯೂ ಹರಿಯುತ್ತದೆ. ಹೀಗಾಗಿ ಎಷ್ಟೆಷ್ಟು ದಟ್ಟ ದ್ವೇಷ ಕಟ್ಟಿ ನಿಲ್ಲಿಸುತ್ತಾರೋ, ಅಷ್ಟಷ್ಟು ಫಾಯಿದೆಗಳು. ಬಿಜೆಪಿಯಿಂದ ದ್ವೇಷಕ್ಕೆ ದೊರೆಯುತ್ತಿರುವ ಪ್ರೋತ್ಸಾಹದ ಅಣುವಿನಷ್ಟು ಪ್ರಮಾಣವೂ ಪ್ರೀತಿಗೆ ಇಲ್ಲದಾಗಿದೆ.
ಹಲವಾರು ಪ್ರಕರಣಗಳು ದಾಖಲಾದರೂ ಸಮಾಜ ಘಾತಕ ವ್ಯಕ್ತಿಗಳಿಗೆ ಹಿಂದುತ್ವದ ಕಾರ್ಯಕರ್ತ ಎಂಬ ನೆಪದಲ್ಲಿ ಬಿಜೆಪಿ ರಕ್ಷಣೆ ನೀಡುತ್ತಿದೆ. ನ್ಯಾಯಾಲಯಗಳು ದ್ವೇಷ ಭಾಷಣವನ್ನು ಗಂಭೀರವಾಗಿ ಪರಿಗಣಿಸದಿರುವಷ್ಟು ಹಗೆತನದ ಕಾವಳ ಕವಿದಿದೆ. ದಕ್ಷಿಣ ಕನ್ನಡದ ಕಡಬದ ಮಸೀದಿ ಒಳಗೆ ನುಗ್ಗಿ ಜೈಶ್ರೀರಾಮ್ ಘೋಷಣೆ ಕೂಗಿದ ಪ್ರಕರಣದಲ್ಲಿ ಒಂದೇ ತಿಂಗಳಿನಲ್ಲಿ ಕರ್ನಾಟಕ ಹೈಕೋರ್ಟ್ ಎಫ್‌ಐಆರ್ ಗೆ ತಡೆ ನೀಡಿತ್ತು. ಆ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಧೀಶರು, “ಮಸೀದಿಯಲ್ಲಿ ಜೈಶ್ರೀರಾಮ್ ಎಂದು ಕೂಗಿದರೆ ಯಾರದ್ದೋ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆ” ಎಂದು ಕೇಳಿದ್ದರು. ಇಂತಹ ನಿದರ್ಶನಗಳು ದೇಶದಾದ್ಯಂತ ಅನುರಣಿಸುತ್ತಲೇ ಇರುವುದು ಕಳವಳದ ವಿದ್ಯಮಾನ. ಹೀಗಾಗಿ ಅದಕ್ಕೊಂದು ಪ್ರತ್ಯೇಕ ಕಾನೂನು ತರುವ ರಾಜ್ಯ ಸರ್ಕಾರದ ಉದ್ದೇಶ ಸರಿಯಾಗಿದೆ.
ಇದುವರೆಗಿನ ಐಪಿಸಿ ಸೆಕ್ಷನ್‌ಗಳಲ್ಲಿ ಇದ್ದ ಸಡಿಲ ಕೊಂಡಿಗಳನ್ನು ಕಿತ್ತು ಹಾಕಿ ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ ಅಥವಾ ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ದ್ವೇಷದ ಮಾತುಗಳನ್ನು ಆಡುವುದು ಅಥವಾ ಪ್ರಚೋದನೆ ನೀಡುವುದನ್ನು ಗಂಭೀರ ಶಿಕ್ಷೆಯಡಿ ತರಲಾಗಿದೆ. ಅಂತಹ ವ್ಯಕ್ತಿಗೆ ಮೊದಲನೇ ಬಾರಿಯ ಅಪರಾಧಕ್ಕೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕುಕೃತ್ಯವನ್ನು ಮತ್ತೆ ಮತ್ತೆ ಮಾಡಿದರೆ ಹತ್ತು ವರ್ಷಗಳವರೆಗೆ ಶಿಕ್ಷೆ ನೀಡುವ ಅವಕಾಶ ಇದೆ. ದ್ವೇಷ ಭಾಷಣಕೋರರಿಗೆ ಇದು ನಿಜವಾಗಿಯೂ ನಡುಕ ಹುಟ್ಟಿಸುವ ಕಾನೂನು. ಸಮಾಜದಲ್ಲಿ ಶಾಂತಿ ಕದಡಿ, ಸುಡುವ ಮನೆಯ ಗಳುವ ಹಿರಿದು ರಾಜಕೀಯ ಬೇಳೆಬೇಯಿಸಿಕೊಳ್ಳುವ ನೀಚತನಕ್ಕೆ ಕಡಿವಾಣ ಹಾಕಲೇಬೇಕು. ಇಲ್ಲಿಯ ತನಕ ಪುಟ್ಟ ಸೆಕ್ಷನ್‌ಗಳಡಿ ಕೇಸು ದಾಖಲೆಯಾಗಿ ವಿಷ ಹಿಂಡುವವರು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುವ ಅವಕಾಶ ಇತ್ತು.
ಹೊಸ ಮಸೂದೆಯ ಪ್ರಕಾರ, ದ್ವೇಷ ಭಾಷಣ ಪ್ರಕರಣಗಳನ್ನು ಜೆಎಂಎಫ್‌ಸಿ ನ್ಯಾಯಾಲಯಗಳು ವಿಚಾರಣೆ ನಡೆಸಲಿವೆ. ಡಿವೈಎಸ್‌ಪಿ ಶ್ರೇಣಿಗಿಂತ ಮೇಲ್ಪಟ್ಟ ಅಧಿಕಾರಿ, ಅಂದರೆ ಎಸ್‌ಪಿಗೆ ತನಿಖೆಯ ಹೊಣೆ ನೀಡಲಾಗಿದೆ.
ಆದರೆ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿರುವುದು ಮತ್ತೊಂದು ದೊಡ್ಡ ಸಮಸ್ಯೆಯನ್ನೇ ಹುಟ್ಟು ಹಾಕಲಿದೆ. ಈ ಕುರಿತು ಸಮಾಜದ ಸ್ವಸ್ಥ ನಾಗರಿಕ ವಲಯದಲ್ಲಿ ಆತಂಕ ಉಂಟಾಗಿದೆ. ಈ ಆತಂಕ ನಿರಾಧಾರವೇನೂ ಅಲ್ಲ. ಅಧಿಕಾರ ಹಿಡಿದವರ ಕೈಗೊಂಬೆಗಳಂತೆ ವರ್ತಿಸುವ ಪೊಲೀಸ್ ವ್ಯವಸ್ಥೆ ಮತ್ತು ಕಾನೂನು ಪಾಲಕರ ಸಾರ್ವಜನಿಕ ನಡವಳಿಕೆಗಳು, ಬಡವರು- ಶೋಷಿತರು ಮಹಿಳೆಯರನ್ನು ಪೊಲೀಸ್ ಠಾಣೆಗಳು ನಡೆಸಿಕೊಂಡಿರುವ ಬಹುದೊಡ್ಡ ಕೆಟ್ಟ ಪರಂಪರೆಯೇ ಬೇರು ಬಿಟ್ಟಿದೆ. ಅದರ ವಿಷಫಲಗಳನ್ನು ಈಗಾಗಲೇ ಈ ಸಮಾಜ ಅನುಭವಿಸುತ್ತಿದೆ. ಅಪರಾಧಿಗಳನ್ನು ನಿರಪರಾಧಿಗಳಂತೆ ಮಾಡಲು ಸಾಕ್ಷ್ಯ ನಾಶ ಮಾಡಲು, ನಿರಪರಾಧಿಗಳನ್ನು ಅಪರಾಧಿಗಳು ಎಂಬಂತೆ ಬಿಂಬಿಸಲು ಸಾಕ್ಷ್ಯ ಸೃಷ್ಟಿಸುವ ಲಕ್ಷಾಂತರ ಪ್ರಕರಣಗಳನ್ನು ಕಂಡಿದ್ದೇವೆ. ಸಾಮಾಜಿಕ ಹೋರಾಟಗಾರರನ್ನು ದೇಶದ್ರೋಹದ ಅಪರಾಧಿಗಳು ಎಂದು ಬಿಂಬಿಸಿ ವರ್ಷಗಟ್ಟಲೆ ಜೈಲಿಗಟ್ಟಲಾಗುತ್ತಿದೆ. ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಗುಲ್ಫಿಶಾ ಫಾತೀಮಾ ಮಾತ್ರವಲ್ಲದೆ ತಮ್ಮ ಹಕ್ಕುಗಳಿಗಾಗಿ ಹೋರಾಡಿದ ಅಸಂಖ್ಯ ಆದಿವಾಸಿಗಳು ಕಂಬಿಗಳ ಹಿಂದೆ ಕೊಳೆಯುತ್ತಿದ್ದಾರೆ. ದ್ವೇಷ ಪೂರ್ವಗ್ರಹಗಳನ್ನೇ ಉಸಿರಾಡಿ ಅದನ್ನೇ ಉಂಡು ಹೊದೆಯುತ್ತಿರುವ ನಾಗರಿಕ ಸಮಾಜ ಇವರನ್ನೆಲ್ಲ ಮರೆತೇ ಬಿಟ್ಟಿದೆ. ಇಂತಹ ಬಲಿಪಶುಗಳ ಗಣನೀಯ ಸಂಖ್ಯೆಯ ಪ್ರಕರಣಗಳನ್ನು ನ್ಯಾಯಾಲಯಗಳು ಬಯಲಿಗೆಳೆದು ನ್ಯಾಯ ನೀಡಿರುವುದೂ ಉಂಟು. ಆದರೆ ನ್ಯಾಯದ ಚಕ್ರ ತಿರುಗುವುದು ವಿಳಂಬವಾಗುತ್ತಿದೆ. ನ್ಯಾಯ ಸಿಕ್ಕರೆ, ಅದು ಸಿಗುವ ಹೊತ್ತಿಗೆ ಈ ಚಕ್ರದಡಿ ಸಿಕ್ಕಿದವರು ಸತ್ತೇ ಹೋಗಿರುತ್ತಾರೆ. ವಿಳಂಬವಾಗಿ ಸಿಗುವ ನ್ಯಾಯವು, ನ್ಯಾಯವನ್ನು ನಿರಾಕರಿಸಿದಂತೆಯೇ ಎಂಬ ವಿವೇಕದ ಮಾತೊಂದು ನೆಲೆ ನಿಂತಿದೆ.
ಅಸಲಿಗೆ, ದ್ವೇಷಭಾಷಣ ಎಂಬ ಪದಪ್ರಯೋಗ ಬಂದದ್ದೇ ಇತ್ತೀಚೆಗೆ. ಹೀಗಾಗಿ ಅದೊಂದು ಅಪರಾಧಗಳು ಮತ್ತು ಶಿಕ್ಷೆಗಳ ಪಟ್ಟಿಯಲ್ಲಿ ಅದು ಇರಲಿಲ್ಲ. ಭಾರತೀಯ ನ್ಯಾಯ ಸಂಹಿತಾದಲ್ಲಿ ಪರಸ್ಪರ ವೈರತ್ವ ಬೆಳೆಸಿ ಪ್ರೋತ್ಸಾಹಿಸುವ ವಿರುದ್ಧ ಕಾನೂನು ಉಂಟು. ಆದರೆ ದ್ವೇಷ ಭಾಷಣದ ವಿರುದ್ಧ ವಿಶೇಷ ಕಾನೂನು ರೂಪಿಸಲು ಮುಂದಾದ ಕೀರ್ತಿ ಕರ್ನಾಟಕದ್ದೇ. 2025ರ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ನಿಯಂತ್ರಣ ಮತ್ತು ತಡೆ ಮಸೂದೆಯು ದ್ವೇಷ ಭಾಷಣದ ವ್ಯಾಖ್ಯಾನವನ್ನು ಕರಾರುವಾಕ್ಕಾಗಿ ಮಾಡುತ್ತದೆ. ಕಳೆದ ಒಂದು ದಶಕದ ಭಾರತೀಯ ಬದುಕನ್ನು ಪೂರ್ವಗ್ರಹಗಳು ಮತ್ತು ಶತ್ರುಭಾವದ ವಾತಾವರಣವು ಆವರಿಸಿದೆ.
ದ್ವೇಷಭಾಷಣವು ಸಾರ್ವಜನಿಕವಾಗಿ ಮಾತು, ಬರೆಹ, ದೃಶ್ಯ-ಶ್ರವಣ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮ ಮುಖಾಂತರ ನಡೆಯುವ ಕ್ರಿಯೆ. ಧರ್ಮ, ಜಾತಿ, ಜನಾಂಗ, ವರ್ಣ, ಭಾಷೆ, ಲಿಂಗ, ಲೈಂಗಿಕ ದೃಷ್ಟಿಕೋನ, ಬುಡಕಟ್ಟು, ಜನ್ಮಸ್ಥಳ ಹಾಗೂ ವಸತಿಯ ಸ್ಥಳ ಕುರಿತು ವ್ಯಕ್ತಿಗಳ ನಡುವೆ ಅಥವಾ ಗುಂಪುಗಳ ನಡುವೆ ಹಾನಿ, ವಿರಸ, ದ್ವೇಷವನ್ನು ಹುಟ್ಟಿ ಹಾಕುವ ದುಷ್ಕೃತ್ಯಕ್ಕೆ ತಡೆ ಬೀಳಲಿದೆ.
ಆದರೆ ಈ ಕಾನೂನು ಪೊಲೀಸರಿಗೆ ಕೈಗೆ ಒಪ್ಪಿಸಿರುವ ಮತ್ತೊಂದು ಕರಾಳ ಕಾನೂನುಗಳ ಸಾಲಿಗೆ ಸೇರಕೂಡದು.
ಯಾಕೆಂದರೆ ದ್ವೇಷ ಎಂಬುದನ್ನು ಕಾನೂನು ಸುವ್ಯವಸ್ಥೆಯ ಪಾಲಕರು ತಮಗೆ ಬೇಕಾದಂತೆ ಅರ್ಥೈಸಿಕೊಂಡು, ಭಿನ್ನಮತೀಯರು ಮತ್ತು ವಿಮರ್ಶಕರ ಮೇಲೆ ಈ ಅಸ್ತ್ರದ ದುಷ್ಪ್ರಯೋಗ ಮಾಡುವ ಸಂಭವವನ್ನು ತಳ್ಳಿ ಹಾಕಲು ಬರುವುದಿಲ್ಲ.
ಹಿಟ್ಲರನ ಆಡಳಿತದ ಕಾಲದಲ್ಲಿ ನೆಲೆಸಿದ್ದ ‘ಯಹೂದಿ ವಿರೋಧಿ ಭಾವನೆ’ಯ (Anti Semetic) ನಿಗ್ರಹವನ್ನೇ ನೆಪ ಮಾಡಿಕೊಂಡು ಭಾರತವೂ ಸೇರಿದಂತೆ ಪ್ರಪಂಚದ ಬಹಳಷ್ಟು ದೇಶಗಳಲ್ಲಿ ಪ್ಯಾಲೆಸ್ತೀನಿಯರ ಪರ ಭಾಷಣ ಮತ್ತು ಶಾಂತಿಯುತ ಮೆರವಣಿಗೆಗಳಿಗೆ ಅವಕಾಶವನ್ನೇ ನಿರಾಕರಿಸುವ ಪೊಲೀಸ್ ಮನಸ್ಥಿತಿಯನ್ನು ಕಾಣಬಹುದು. ಕಾಂಗ್ರೆಸ್ ಶಾಸಿತ ಕರ್ನಾಟಕ ರಾಜ್ಯವೂ ಈ ಮಾತಿಗೆ ಹೊರತಲ್ಲ. ಯಾರೂ ದ್ವೇಷ ಪೂರ್ವಗ್ರಹವನ್ನು ಹರಡಕೂಡದು ಎಂಬ ಮಾತನ್ನು ತಾತ್ವಿಕವಾಗಿ ಎಲ್ಲರೂ ಒಪ್ಪುತ್ತಾರೆ. ಆದರೆ ಪರಸ್ಪರರ ವಿರುದ್ಧ ಇದೇ ಆರೋಪ ಹೊರಿಸುತ್ತಾರೆ. ವಿಶೇಷವಾಗಿ ಟೀಕಿಸುವವರು, ವಿಮರ್ಶಕರು, ಯಥಾಸ್ಥಿತಿಯನ್ನು ವಿರೋಧಿಸುವವರು, ವಿರೋಧಪಕ್ಷಗಳು ಈ ವಸ್ತುನಿಷ್ಠವಲ್ಲದ ಹಗೆಗೆ ಬಲಿಯಾಗುತ್ತವೆ. ಮಸೂದೆಯಲ್ಲಿ ದ್ವೇಷದ ವ್ಯಾಖ್ಯೆಗೆ ನಿರ್ದಿಷ್ಟತೆ ಇಲ್ಲದಿರುವುದು ಮತ್ತು ಒಳಿತು-ಕೆಡುಕು ಎರಡನ್ನೂ ಗುಡಿಸಿ ಹಾಕುವ ಸಾರಾಸಗಟು ಸ್ವಭಾವ ಹೊಂದಿರುವುದು ಕಾಣಬರುತ್ತದೆ. ಮಸೂದೆಯು ಈ ಬಹುದೊಡ್ಡ ಕೊರತೆಯನ್ನು ನೀಗಿಸಿಕೊಳ್ಳಬೇಕಿದೆ.
ಕರ್ನಾಟಕ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿರುವ ಈ ಮಸೂದೆಯಲ್ಲಿ ಕೂಡ ಸಂವಿಧಾನಬಾಹಿರ ದುರ್ಬಳಕೆಗೆ ಅವಕಾಶವಿದೆ. ವಿಮರ್ಶೆ-ಟೀಕೆ ಮತ್ತು ದ್ವೇಷದ ನಡುವೆ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಆಳುವವರ ಪರ ಅನುಕೂಲಾಸ್ತ್ರವಾಗಿ ಬಳಸುವ ಸಾಧ್ಯತೆ ಇದೆ. ಈ ಮಾತಿಗೆ ಇತ್ತೀಚಿನ ಇತಿಹಾಸವೇ ಉದಾಹರಣೆ. ಹೀಗಾಗಿ ಸಾಂವಿಧಾನಿಕ ರಕ್ಷಣೆಗಳ ಅಡಿಯಲ್ಲಿಯೇ ಈ ಕಾನೂನಿನ ಬಳಕೆ ಆಗತಕ್ಕದ್ದು. ಸುಪ್ರೀಮ್ ಕೋರ್ಟ್ ವಿಧಿಸಿರುವ ಪ್ರಕಾರ ಹಿಂಸೆಗೆ ಪ್ರಚೋದನೆ ಅಥವಾ ಸುವ್ಯವಸ್ಥೆಗೆ ಬೆದರಿಕೆಯ ಭಾಷಣವು ದ್ವೇಷ ಭಾಷಣದ ಪರಿಧಿಯಲ್ಲಿ ಬರುತ್ತದೆ. ಹೀಗಾಗಿ ಸರ್ಕಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣದ ನಡುವೆ ನಿಚ್ಚಳ ಗೆರೆ ಎಳೆದುಕೊಳ್ಳಬೇಕಿದೆ.





