ಉಚ್ಚ ಕುಲದವರು ಮಾತ್ರ ಒಳ್ಳೆಯವರೇ? ಉಳಿದವರ ಮೈಯಲ್ಲಿ ಹರಿಯುವುದು ಮಲಿನ ರಕ್ತವೇ? ಹಾಗಿದ್ದರೆ ಆಸ್ಪತ್ರೆಯಲ್ಲಿ ರೋಗಿಗೆ ರಕ್ತ ನೀಡುವ ಮುನ್ನ ಈ ರಕ್ತ ಯಾವ ಜಾತಿಯ ವ್ಯಕ್ತಿಯದು ಎಂದು ಯಾಕೆ ಕೇಳಲಾಗುತ್ತಿಲ್ಲ” ಎಂದು ಜಾತಿ ವ್ಯವಸ್ಥೆ- ಗಂಡಾಳಿಕೆಯನ್ನು’ಕಟಕಟೆಯಲ್ಲಿ’ ನಿಲ್ಲಿಸಿ ಬಿಹಾರದ ಯುವತಿ ತನುಪ್ರಿಯಾ ಎತ್ತಿದ ಪ್ರಶ್ನೆಗೆ ಉತ್ತರ ನೀಡುವ ಜಾತಿವಾದಿಗಳು ಯಾರಾದರೂ ಇದ್ದಾರೆಯೇ?
ತೆಲಂಗಾಣದ ಮಿರ್ಯಾಲಗೂಡದಲ್ಲಿ 2018 ಸೆಪ್ಟೆಂಬರ್ 14ರಂದು ನಡೆದ ಪ್ರಣಯ್ ಕುಮಾರ್ ಎಂಬ ಇಪ್ಪತ್ತ ಮೂರರ ಯುವಕನ ಹತ್ಯೆ ದೇಶವನ್ನೇ ಬೆಚ್ಚಿಬೀಳಿಸಿದ ಭೀಕರ ಮರ್ಯಾದೆಗೇಡು ಹತ್ಯೆ. ಮೇಲ್ಜಾತಿಯ ಅಮೃತ ವರ್ಷಿಣಿಯನ್ನು ಪ್ರೀತಿಸಿ ಮದುವೆಯಾಗಿದ್ದ ದಲಿತ ಯುವಕ ಪ್ರಣಯ್‌ನನ್ನು, ಅಮೃತಾ ತಂದೆ ಮಾರುತಿ ರಾವ್ ಸುಪಾರಿ ನೀಡಿ, ಐದು ತಿಂಗಳ ಗರ್ಭಿಣಿಯಾಗಿದ್ದ ಮಗಳ ಕಣ್ಣೆದುರೇ ಕೊಲೆ ಮಾಡಿಸಿದ್ದ. ಪತ್ನಿಯನ್ನು ವೈದ್ಯರ ಬಳಿಗೆ ತಪಾಸಣೆಗೆ ಕರೆದುಕೊಂಡು ಬಂದಿದ್ದ ಪ್ರಣಯ್‌ನನ್ನು ಆಸ್ಪತ್ರೆಯ ಹೊರಗೆ ಕೊಚ್ಚಿ ಹಾಕಲಾಗಿತ್ತು. ಈ ಕೃತ್ಯಕ್ಕೆ ಪತ್ನಿಯೇ ಪ್ರತ್ಯಕ್ಷ ಸಾಕ್ಷಿ. ಬಂಧಿತ ತಂದೆ 2020ರಲ್ಲಿ ಜಾಮೀನಿನಲ್ಲಿ ಹೊರ ಬಂದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ. 2025ರಲ್ಲಿ ಈ ಪ್ರಕರಣದ ಪ್ರಮುಖ ಆರೋಪಿಗೆ ಮರಣದಂಡನೆ ಹಾಗೂ ಉಳಿದವರಿಗೆ ಜೀವಾವಧಿ ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿದೆ. ಪತಿ ಕೊಲೆಯಾದ ನಂತರ ಆತನ ತಂದೆ ತಾಯಿಯ ಮನೆಯಲ್ಲೇ ವಾಸವಿದ್ದ ಅಮೃತಾ ನಡೆಸಿದ ಕಾನೂನು ಹೋರಾಟ ಅಸಾಧಾರಣವಾದುದು. ಶ್ರೀಮಂತ ತಂದೆಯ ಕೃತ್ಯವನ್ನು ಆಕೆ ಕ್ಷಮಿಸಿಲ್ಲ. ಆತನಿಗೆ ಶಿಕ್ಷೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಳು. ಪತಿಯ ಮನೆಯವರು ಅಮೃತಾಗೆ ಆಸರೆಯಾಗಿದ್ದರು.
ಇದು ದೇಶವನ್ನೇ ಬೆಚ್ಚಿ ಬೀಳಿಸಿದ್ದ, ಅತಿ ಕ್ರೂರ ಪ್ರಕರಣ. ಆದರೆ ಈ ಪೈಶಾಚಿಕ ಕೃತ್ಯ ಸಮಾಜದಲ್ಲಿ ಭಯವನ್ನಾಗಲಿ, ಬದಲಾವಣೆಯನ್ನಾಗಲಿ ಮೂಡಿಸಿಲ್ಲ ಎಂಬುದಕ್ಕೆ ಆ ನಂತರ ಕರ್ನಾಟಕವೂ ಸೇರಿ ದೇಶದೆಲ್ಲೆಡೆ ನಡೆಯುತ್ತಿರುವ ಸಾಲು ಸಾಲು ಮರ್ಯಾದೆಗೇಡು ಹತ್ಯೆಗಳೇ ಸಾಕ್ಷಿ.
ಈಗ ಈ ಪ್ರಕರಣ ನೆನಪಿಸಲು ಕಾರಣವಿದೆ. ತೆಲಂಗಾಣದ ಘಟನೆಯನ್ನೇ ಹೋಲುವ ಪ್ರಕರಣವೊಂದು ಕಳೆದ ವರ್ಷ ಬಿಹಾರದಲ್ಲಿ ನಡೆದಿತ್ತು. ಬ್ರಾಹ್ಮಣ ತಂದೆಯೊಬ್ಬ ಮಗಳು ಅತಿಹಿಂದುಳಿದ ಜಾತಿಯ ಯುವಕನನ್ನು ಪ್ರೇಮಿಸಿ ವಿವಾಹವಾದಳೆಂದು ಮಗಳ ಗಂಡನನ್ನು ಗುಂಡಿಟ್ಟು ಕೊಂದಿದ್ದ. 2025ರ ಏಪ್ರಿಲ್‌ನಲ್ಲಿ ಈ ಜೋಡಿಯ ಮದುವೆಯಾಗಿತ್ತು. ಇಬ್ಬರೂ ನರ್ಸಿಂಗ್ ಪದವಿ ಓದುತ್ತಿದ್ದರು. ಆಗಸ್ಟ್‌ನಲ್ಲಿ ಒಂದು ದಿನ ಕಾಲೇಜಿನ ಹಾಸ್ಟೆಲ್‌ಗೆ ನುಗ್ಗಿದ್ದ ಯುವತಿಯ ತಂದೆ ಪ್ರೇಮ್ ಶಂಕರ್ ಝಾ ಅಳಿಯ ರಾಹುಲ್ ಎದೆಗೆ ಗುಂಡಿಟ್ಟಿದ್ದ. ಮಗಳ ಕಣ್ಣೆದುರೇ ಈ ಕೊಲೆ ನಡೆದಿತ್ತು. ಮಗಳನ್ನು ಜೀವಂತವಾಗಿ ಬಿಟ್ಟಿದ್ದ ತಂದೆ. ಆದರೆ, ಆಕೆಯ ಗಂಡನ ಮನೆಯವರು ತಮ್ಮ ಮಗನಂತೆ ನೋಡಿಕೊಳ್ಳುತ್ತಿದ್ದಾರೆ.
ಆ ಯುವತಿಯನ್ನು ಇತ್ತೀಚೆಗೆ ಬಿಬಿಸಿ ಸಂದರ್ಶನ ಮಾಡಿದೆ. ಆಕೆ ಬಿಚ್ಚಿಟ್ಟ ಕಟು ಸತ್ಯ ಅತಿ ಕರಾಳ. ಮಗಳ ಪ್ರೇಮಿಯನ್ನು ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗಟ್ಟಲು ಆಕೆಯ ಹೆತ್ತವರು ಪ್ರಯತ್ನಿಸಿದ್ದರು. ಹೆತ್ತವರೇ ನಿರಂತರವಾಗಿ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆಕೆ ಹೇಳಿಕೊಂಡಿದ್ದಾಳೆ.
“ಪತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ನನ್ನ ಮೇಲೆ ತಂದೆ ತಾಯಿ ಒತ್ತಡ ಹೇರಿದ್ದರು. ಒಮ್ಮೆಯೂ ಅನುಚಿತವಾಗಿ ಮೈ ಮುಟ್ಟದ ಪ್ರೇಮಿಯ ಮೇಲೆ ಅತ್ಯಾಚಾರ ಮಾಡಿದನೆಂದು ಅದು ಹೇಗೆ ದೂರು ನೀಡಲು ಸಾಧ್ಯ? ಜಾತಿಯೇ ಸರ್ವಸ್ವವೇ? ಉಚ್ಚ ಕುಲದವರು ಮಾತ್ರ ಒಳ್ಳೆಯವರೇ? ಉಳಿದವರ ಮೈಯಲ್ಲಿ ಹರಿಯುವುದು ಮಲಿನ ರಕ್ತವೇ? ಹಾಗಿದ್ದರೆ ಆಸ್ಪತ್ರೆಯಲ್ಲಿ ರೋಗಿಗೆ ರಕ್ತ ನೀಡುವ ಮುನ್ನ ಈ ರಕ್ತ ಯಾವ ಜಾತಿಯ ವ್ಯಕ್ತಿಯದು ಎಂದು ಯಾಕೆ ಕೇಳಲಾಗುತ್ತಿಲ್ಲ” ಎಂದು ಜಾತಿ ವ್ಯವಸ್ಥೆ- ಗಂಡಾಳಿಕೆಯನ್ನು ‘ಕಟಕಟೆಯಲ್ಲಿ’ ನಿಲ್ಲಿಸಿ ತನು ಪ್ರಿಯಾ ಎತ್ತಿದ ಪ್ರಶ್ನೆಗೆ ಉತ್ತರ ನೀಡುವ ಜಾತಿವಾದಿಗಳು ಯಾರಾದರೂ ಇದ್ದಾರೆಯೇ?
ಕಳೆದ ತಿಂಗಳು ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ದಲಿತ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಕ್ಕೆ ಮಾನ್ಯ ಎಂಬ ಏಳು ತಿಂಗಳ ಗರ್ಭಿಣಿ ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರರು ಆಕೆಯ ಗಂಡನ ಮುಂದೆಯೇ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಮದುವೆ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಬಂದಿದ್ದರು ಮಾನ್ಯ ಮತ್ತು ಗಂಡ ವಿವೇಕಾನಂದ. ಸೀಮಂತ ಮಾಡುವುದಾಗಿ ನಂಬಿಸಿ ಕರೆಸಿಕೊಂಡಿದ್ದ ಮಾನ್ಯಳ ಕುಟುಂಬದವರು ಸಂಜೆ ದಂಪತಿ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದ್ದರು. ಗರ್ಭಿಣಿ ಮಾನ್ಯಾ ಸಾವನ್ನಪ್ಪಿದ್ದಳು. ವಿವೇಕಾನಂದ ಬದುಕುಳಿದಿದ್ದು, ಆರೋಪಿಗಳೆಲ್ಲ ಬಂಧಿತರಾಗಿದ್ದಾರೆ. ಈ ಪ್ರಕರಣದ ನಂತರ ರಾಜ್ಯದಲ್ಲಿ ಕಠಿಣ ಕಾನೂನು ತರಬೇಕು ಎಂಬ ಕೂಗೆದ್ದಿದೆ.
ಜಡ್ಡುಗಟ್ಟಿದ ರೂಢಿವಾದಿ ಮನಸ್ಥಿತಿಗಳು ಜೈಲಿಗೆ ಹೋದರೂ, ಗಲ್ಲು ಶಿಕ್ಷೆಗೆ ಗುರಿಯಾದರೂ ಸರಿ, ತಾವೇ ಹೆತ್ತ ಮಕ್ಕಳನ್ನು ಕೊಲೆ ಮಾಡಲು ಹೇಸುತ್ತಿಲ್ಲ, ಕರುಳ ಕುಡಿಗಳೆಂಬ ಮಮಕಾರವೂ ಇಲ್ಲದೆ ಪಾಷಾಣ ಹೃದಯಿಗಳಾಗಿದ್ದಾರೆ. ಮಾನವೀಯತೆಯನ್ನು ಜಾತಿವ್ಯವಸ್ಥೆ ಹೇಗೆಲ್ಲ ನಾಶ ಮಾಡುತ್ತಿದೆ ಎಂಬುದು ದುರಂತದ ಸಂಗತಿ. ದಲಿತ, ಒಬಿಸಿ, ಮುಸ್ಲಿಂ ಸಮುದಾಯಗಳಲ್ಲಿ ಯುವಕ, ಯುವತಿಯರ ಮಧ್ಯೆ ಪ್ರೇಮಪ್ರಕರಣ ಮನೆಯವರ ವಿರೋಧ ಲೆಕ್ಕಿಸದೇ ವಿವಾಹವಾದ ಜೋಡಿಗಳನ್ನು ಬೇರ್ಪಡಿಸಲು ಮಚ್ಚು ಬೀಸುವ ಕ್ರೂರ ಮನಸ್ಥಿತಿ ಎಲ್ಲ ಸಮುದಾಯಗಳಲ್ಲಿಯೂ ಬೆಳೆಯುತ್ತಿದೆ. ಇದು ಆತಂಕಕಾರಿ ಸಂಗತಿ.
ಇತ್ತೀಚೆಗೆ ಸಭೆಯೊಂದರಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಹೋರಾಟಗಾರ್ತಿ ಕೆ ನೀಲಾ ಅವರು ಮರ್ಯಾದೆಗೇಡು ಹತ್ಯೆ ತಡೆಯಲು ಕಠಿಣ ಕಾನೂನು ರೂಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಈ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧರಿಸುವ ಭರವಸೆ ನೀಡಿದ್ದಾರೆ. ಕರ್ನಾಟಕ ಸರ್ಕಾರ ಆದಷ್ಟು ಬೇಗ ಮರ್ಯಾದೆಗೇಡು ಹತ್ಯೆ ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸಬೇಕು. ಅದು ಬೇರೆ ರಾಜ್ಯಗಳಿಗೂ ಮಾದರಿಯಾಗುವಂತಿರಲಿ. ಯಾವುದೇ ಕಾನೂನು ತಂದರೂ ಜನಮನಗಳು ಬದಲಾಗುವುದು ಅತ್ಯಗತ್ಯ.
ಬ್ರಾಹ್ಮಣ ಮಧುವರಸನ ಮಗಳು ಲಾವಣ್ಯ ಮತ್ತು ದಲಿತ ಹರಳಯ್ಯನ ಮಗ ಶೀಲವಂತರ ಮದುವೆಯನ್ನು ಬಸವಣ್ಣನವರ ವಚನ ಚಳವಳಿ ಆಗು ಮಾಡಿತ್ತು. ಆದರೆ ಈ ಕ್ರಾಂತಿಯ ವಿರುದ್ಧ ಸಂಪ್ರದಾಯವಾದಿಗಳ ಪ್ರತಿಕ್ರಾಂತಿ ನಡೆಯಿತು. ವಧುವರನ ಸಹಿತ ಈ ಮದುವೆಯ ಹಿಂದಿದ್ದ ಎಲ್ಲರನ್ನೂ ಅತ್ಯಂತ ಕ್ರೂರವಾಗಿ ಬಲಿ ತೆಗೆದುಕೊಂಡಿತು. ಕಲ್ಯಾಣವು ಕಟುಕರ ವೈದಿಕರ ನಾಡಾಗಿ ಹೋಗುತ್ತದೆ.
ಜಾತಿ ತಾರತಮ್ಯ ನಿವಾರಣೆಗೆ ಸಾಮಾಜಿಕ ಕ್ರಾಂತಿಯ ಅಗತ್ಯವಿದೆ. ಜಾತಿ ತಾರತಮ್ಯ, ಮೇಲು ಕೀಳಿನ ಭಾವನೆ ತೊಡೆದ ದಿನ ಮರ್ಯಾದೆಗೇಡು ಹತ್ಯೆಗೆ ಸ್ವಯಂ ಕಡಿವಾಣ ಬೀಳಲಿದೆ. ಅಷ್ಟೇ ಅಲ್ಲ ಬಹುತೇಕ ಸಮಾಜದಲ್ಲಿರುವ ಮೌಢ್ಯ, ಅಸಮಾನತೆ ನಿವಾರಣೆಯಾಗಲಿದೆ.





