2015ರ ಸೆಪ್ಟಂಬರ್ 28ರ ರಾತ್ರಿ ಅಖ್ಲಾಕ್ ಮತ್ತು ಆತನ 22 ವರ್ಷ ವಯಸ್ಸಿನ ಮಗ ದಾನಿಶ್ ನಿದ್ರಿಸುತ್ತಿದ್ದ ಹೊತ್ತು. ದೊಣ್ಣೆಗಳು, ಖಡ್ಗಗಳು, ನಾಡ ಪಿಸ್ತೂಲುಗಳನ್ನು ಹಿಡಿದ ಗುಂಪೊಂದು ಮನೆಗೆ ನುಗ್ಗಿತು. ಆಕಳೊಂದನ್ನು ಕೊಂದು ತಿಂದಿರುವುದಾಗಿ ಕುಟುಂಬವನ್ನು ನಿಂದಿಸಿತು. ರೆಫ್ರಿಜರೇಟರನ್ನು ತೆರೆದು ಅಲ್ಲಿ ಕಂಡ ಮಾಂಸವನ್ನು ಗೋಮಾಂಸ ಎಂದು ಸಾರಿತು. ಅದು ಕುರಿ ಮಾಂಸವೆಂದು ಕುಟುಂಬವು ಸಾಕ್ಷ್ಯಾಧಾರಗಳೊಂದಿಗೆ ವಾದಿಸಿದರೂ ಕೇಳಲಿಲ್ಲ.
2015ರ ಮಾತು. ದೆಹಲಿಗೆ ಅಂಟಿಕೊಂಡಿರುವ ಉತ್ತರ ಪ್ರದೇಶದ ಗಡಿಭಾಗದ ದಾದ್ರಿಯ ಬಿಸಾದ ಗ್ರಾಮದ ಮೊಹಮ್ಮದ್ ಅಖ್ಲಾಕ್ ನನ್ನು ಕಟ್ಟರ್ ಹಿಂದುತ್ವವಾದಿಗಳ ಗುಂಪೊಂದು ಜಜ್ಜಿ ಕೊಂದಿತ್ತು. ಮನೆಯ ರೆಫ್ರಿಜರೇಟರಿನಲ್ಲಿ ಗೋಮಾಂಸ ಇಟ್ಟಿದ್ದನೆಂಬ ಅನುಮಾನವಷ್ಟೇ ಈ ಹತ್ಯೆಯ ಹಿಂದಿನ ಕಾರಣವಾಗಿತ್ತು. ಈ ಹತ್ಯೆಯ ಎಲ್ಲ 18 ಮಂದಿ ಆಪಾದಿತರು ಜಾಮೀನಿನ ಮೇಲೆ ಹೊರಗಿದ್ದಾರೆ.
2016ರಲ್ಲಿ ಅಖ್ಲಾಕ್ ಕುಟುಂಬದ ವಿರುದ್ಧ ಗೋಹತ್ಯೆ ನಿಷೇಧ ಕಾನೂನಿನ ಅನ್ವಯ ಕೇಸು ದಾಖಲಾಗಿತ್ತು. ಈ ಕೇಸು ಈಗಲೂ ನ್ಯಾಯಾಲಯದ ಮುಂದೆ ಬಾಕಿ ಇದೆ.
ಹತ್ಯೆಯ ಕುರಿತ ವಿಚಾರಣೆ ಹತ್ತು ವರ್ಷಗಳ ನಂತರವೂ ತೆವಳುತ್ತಿದೆ. ಈ ನಡುವೆ ಹತ್ಯೆಯ ಆಪಾದಿತರ ಮೇಲಿನ ಆಪಾದನೆಗಳನ್ನು ಕೈಬಿಡುವಂತೆ ಉತ್ತರಪ್ರದೇಶದ ಬಿಜೆಪಿ ಸರ್ಕಾರ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಸಂಗತಿಯನ್ನು ಆಕಸ್ಮಿಕವಾಗಿ ಗೊತ್ತು ಮಾಡಿಕೊಂಡ ಅಖ್ಲಾಕ್ ಕುಟುಂಬ ಆಘಾತಕ್ಕೀಡಾಗಿದೆ. ಅಖ್ಲಾಕ್‌ಗೆ ನ್ಯಾಯ ಬೇಕೆಂದು ಹತ್ತು ವರ್ಷಗಳ ಕಾಲ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಅಲೆದಿರುವ ಕುಟುಂಬಕ್ಕೆ ಇದೀಗ ದಿಕ್ಕೇ ತೋಚದಾಗಿದೆ.
ಆರೋಪಿಗಳನ್ನು ಗುರುತಿಸಿ ನ್ಯಾಯಾಲಯದ ಮುಂದೆ ನುಡಿಯಲಾಗಿರುವ ಸಾಕ್ಷ್ಯಗಳಲ್ಲಿ ಸಾಕಷ್ಟು ಅಸ್ಥಿರತೆಗಳು, ಅಸಂಬದ್ಧತೆಗಳಿವೆ. ಹತ್ಯೆಗೀಡಾದ ಅಖ್ಲಾಕ್‌ನ ಪತ್ನಿ ತನ್ನ ದೂರಿನಲ್ಲಿ ಆಪಾದಿತರು 10 ಮಂದಿ ಎಂದು ಹೆಸರಿಸಿದರೆ, ಮಗಳು ಶಯಿಸ್ತಾ 16 ಮಂದಿ ಎಂದಿದ್ದಾಳೆ. ಮಗ ದಾನಿಶ್ ಪ್ರಕಾರ ಆಪಾದಿತರ ಸಂಖ್ಯೆ 19 ಮಂದಿ. ಒಂದೇ ಹಳ್ಳಿಯಲ್ಲಿ ವಾಸವಿದ್ದರೂ ಸಾಕ್ಷಿಗಳ ಸಾಕ್ಷ್ಯದಲ್ಲಿ ಈ ವ್ಯತ್ಯಾಸ ಕಂಡು ಬಂದಿದೆ. ಆಪಾದಿತರಿಂದ ಐದು ದೊಣ್ಣೆಗಳು, ಕಬ್ಬಿಣದ ಸರಳುಗಳು, ಹಾಗೂ ಇಟ್ಟಿಗೆಗಳನ್ನು ಮಾತ್ರವೇ ವಶಪಡಿಸಿಕೊಳ್ಳಲಾಗಿದೆ. ಅಖ್ಲಾಕ್ ಪತ್ನಿ ನೀಡಿರುವ ದೂರಿನಂತೆ ಖಡ್ಗಗಳು ಪಿಸ್ತೂಲುಗಳು ಸಿಕ್ಕಿಲ್ಲ ಎಂದಿದ್ದಾರೆ ಪೊಲೀಸರು. ಅಷ್ಟೇ ಅಲ್ಲದೆ ಅಖ್ಲಾಕ್ ಮನೆಯಿಂದ ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಆದಿತ್ಯನಾಥ ಸರ್ಕಾರ ಕಳೆದ ತಿಂಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ರಾಜ್ಯ ಸರ್ಕಾರದ ಈ ಕೋರಿಕೆಯನ್ನು ಮಾನ್ಯ ಮಾಡಬೇಕೇ ಬೇಡವೇ ಎಂಬ ಕುರಿತು ನ್ಯಾಯಾಲಯ ಮುಂಬರುವ ಡಿಸೆಂಬರ್ ಎರಡನೆಯ ವಾರ ತೀರ್ಮಾನಿಸಲಿದೆ.
ಘಟನೆಯ ನಂತರದ ಗದ್ದಲ ಗೊಂದಲಗಳ ನಡುವೆ ನೀಡಲಾದ ದೂರುಗಳಲ್ಲಿ ಈ ವ್ಯತ್ಯಾಸ ಕಂಡು ಬಂದಿರುವುದು ಅಸಹಜವೇನೂ ಅಲ್ಲ. ಎಲ್ಲ ಸಾಕ್ಷಿಗಳು, ಎಲ್ಲ ಆಪಾದಿತರನ್ನು ನೋಡಿರಲಾರರು. ಆಪಾದಿತರ ವಿರುದ್ಧ ಪುರಾವೆಗಳು ಇವೆಯೇ ಇಲ್ಲವೇ ಎನ್ನುವುದನ್ನಷ್ಟೇ ನೋಡಬೇಕಿದೆ ಎಂಬುದು ಅಖ್ಲಾಕ್ ಪರ ವಕೀಲರ ವಾದ.
ಅಖ್ಲಾಕ್ ಮನೆಯಲ್ಲಿ ಸಿಕ್ಕಿದ್ದು ಗೋಮಾಂಸ ಅಲ್ಲವೆಂದು ತರುವಾಯ ನಡೆದ ತನಿಖೆಗಳಿಂದ ರುಜುವಾತಾಗಿತ್ತು. ಆದರೆ ಅಖ್ಲಾಕ್ ದೋಷಿಯೆಂದು ‘ಪಾಂಚಜನ್ಯ’ ಎಂಬ ಆರೆಸ್ಸೆಸ್ ನಿಯತಕಾಲಿಕ ತೀರ್ಪು ನೀಡಿಬಿಟ್ಟಿತ್ತು. ಅಖ್ಲಾಕ್ ನಡೆಸಿದ್ದ ಗೋಹತ್ಯೆ ನಿಮ್ಮ ಕಣ್ಣಿಗೆ ಕಾಣಲಿಲ್ಲವೇ…ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆಂಬುದು ನ್ಯೂಟನ್ ನಿಯಮ. ಶೇ.80ರಷ್ಟು ಜನರ ಭಾವನೆಗಳನ್ನು ಗೌರವಿಸದೆ ಹೋದರೆ ಇಂತಹ (ಅಖ್ಲಾಕ್ ಹತ್ಯೆ) ಪ್ರತಿಕ್ರಿಯೆಗಳನ್ನು ತಡೆಯುವುದು ಸಾಧ್ಯವಿಲ್ಲ ಎಂದು ನಂಜು ಕಾರಿತ್ತು.
2015ರ ಸೆಪ್ಟಂಬರ್ 28ರ ರಾತ್ರಿ ಅಖ್ಲಾಕ್ ಮತ್ತು ಆತನ 22 ವರ್ಷ ವಯಸ್ಸಿನ ಮಗ ದಾನಿಶ್ ನಿದ್ರಿಸುತ್ತಿದ್ದ ಹೊತ್ತು. ದೊಣ್ಣೆಗಳು, ಖಡ್ಗಗಳು, ನಾಡ ಪಿಸ್ತೂಲುಗಳನ್ನು ಹಿಡಿದ ಗುಂಪೊಂದು ಮನೆಗೆ ನುಗ್ಗಿತು. ಆಕಳೊಂದನ್ನು ಕೊಂದು ತಿಂದಿರುವುದಾಗಿ ಕುಟುಂಬವನ್ನು ನಿಂದಿಸಿತು. ರೆಫ್ರಿಜರೇಟರನ್ನು ತೆರೆದು ಅಲ್ಲಿ ಕಂಡ ಮಾಂಸವನ್ನು ಗೋಮಾಂಸ ಎಂದು ಸಾರಿತು. ಅದು ಕುರಿ ಮಾಂಸವೆಂದು ಕುಟುಂಬವು ಸಾಕ್ಷ್ಯಾಧಾರಗಳೊಂದಿಗೆ ವಾದಿಸಿದರೂ ಕೇಳಲಿಲ್ಲ. ಅಖ್ಲಾಕ್ ನನ್ನು ಸಾಯುವ ತನಕ ಬಡಿಯಲಾಯಿತು. ಮಗ ದಾನಿಶ್ ಗಂಭೀರವಾಗಿ ಗಾಯಗೊಂಡ. ಆಗ ಊರು ತೊರೆದ ಅಖ್ಲಾಕ್ ಕುಟುಂಬ ಈಗಲೂ ಹಿಂದಿರುಗಿಲ್ಲ.
ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಹಂತಕರನ್ನು ತ್ವರಿತವಾಗಿ ಬಂಧಿಸಲಾಯಿತು. ಆದರೆ ಛಾರ್ಜ್ ಶೀಟ್ ಸಲ್ಲಿಕೆಗೆ ಮೂರು ತಿಂಗಳು ಹಿಡಿದಿತ್ತು. 19 ಮಂದಿ ಆಪಾದಿತರ ಪೈಕಿ ಒಬ್ಬನು ಮೃತಪಟ್ಟಿದ್ದಾನೆ. ಅವನ ಮೃತದೇಹಕ್ಕೆ ರಾಷ್ಟ್ರಧ್ವಜವನ್ನು ಹೊದಿಸಿ ಸಮ್ಮಾನಿಸಲಾಗಿತ್ತು!
ಚಿಕ್ಕಪ್ಪ, ದೊಡ್ಡಪ್ಪ, ಮಾವ ಎಂದು ಕರೆದಿದ್ದ ಅನೇಕ ಹಿಂದೂಗಳ ನೆರೆಹೊರೆಯಾಗಿತ್ತು ಅಖ್ಲಾಕ್ ಕುಟುಂಬ. ಪಕ್ಕದಲ್ಲ, ಪಕ್ಕದ ಮನೆ ಅರುಣ್ ಎಂಬಾತನದು. ಆತ ಕೂಡ ಆರೋಪಿಗಳಲ್ಲೊಬ್ಬ.
ಗೋಹತ್ಯೆಯ ಸುತ್ತ ವರ್ಷಗಟ್ಟಲೆ ಕಟ್ಟಿದ್ದ ಮುಸ್ಲಿಮ್ ದ್ವೇಷದ ವಿಷ ಬಹಿರಂಗ ಹಿಂಸಾಚಾರವನ್ನು ಕೈ ಮಾಡಿ ಕರೆದಿತ್ತು. ಅಖ್ಲಾಕ್ ಹತ್ಯೆಯು ಇಂತಹುದೇ ಭಯಾನಕ ಗುಂಪು ಹತ್ಯೆಗಳ ದೀರ್ಘ ಸರಣಿಗೆ ಚಾಲನೆ ನೀಡಿತ್ತು. ಅಖ್ಲಾಕ್ ನನ್ನು ಪಾತಕಿಯೆಂದು ತೀರ್ಮಾನಿಸಿ, ಆತನ ಹಂತಕರನ್ನು ಹಿಂದೂ ಧರ್ಮ ರಕ್ಷಕರೆಂದು ಸಮ್ಮಾನಿಸುವ ವ್ಯವಸ್ಥೆಯೇ ಸೃಷ್ಟಿಯಾಯಿತು. ಆಳುವ ಸರ್ಕಾರಗಳ ತಲೆಯಾಳುಗಳೇ ಈ ವ್ಯವಸ್ಥೆಗೆ ನೀರೆರೆದರು ಸ್ವಯಂಘೋಷಿತ ಗೋ ರಕ್ಷಕರು ಇಂದು ದೇಶವಿಡೀ ಮುಸಲ್ಮಾನರನ್ನು ಗೋಹತ್ಯೆಯಿರಲಿ, ಗೋವುಗಳ ಸಾಗಣೆ ಮಾಡಿದರೂ ಮುಸಲ್ಮಾನರನ್ನು ಹಾದಿಬೀದಿಗಳಲ್ಲಿ ಬಡಿದು ಜಜ್ಜಿ ಕೊಲ್ಲುತ್ತಿದ್ದಾರೆ. ರಾಜಕೀಯ ಆಶ್ರಯ ಪಡೆದು ನ್ಯಾಯಪ್ರಕ್ರಿಯೆ ಮತ್ತು ಶಿಕ್ಷೆಯಿಂದ ಜಾರಿಕೊಳ್ಳುತ್ತಿದ್ದಾರೆ. ಹಿಡಿದು ನ್ಯಾಯಾಂಗದ ಕಟಕಟೆಯಲ್ಲಿ ನಿಲ್ಲಿಸಬೇಕಾದವರೇ ಇವರನ್ನು ಕಾಪಾಡುತ್ತಿದ್ದಾರೆ.
ಕಾನೂನು ಹೋರಾಟ ನಡೆಸಿರುವ ಅಖ್ಲಾಕ್ ಸೋದರ ಮೊಹಮ್ಮದ್ ಜಾಮ್ ಈಗಾಗಲೆ ಹೈರಾಣಾಗಿದ್ದಾರೆ. ಆದರೆ ಸೋಲು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಜಜ್ಜಿದ ಅಖ್ಲಾಕ್ ತಲೆಬರುಡೆಯೇ ಜಾಮ್ ಕಂಡ ಕಟ್ಟಕಡೆಯ ದೃಶ್ಯ. ಅಸ್ಸಲಾಂ ಅಲೈಕುಮ್ ಎಂದು ಅಭಿವಾದಿಸಿದೆ. ಆದರೆ ಬುರುಡೆ ಪ್ರತಿಕ್ರಿಯಿಸಲಿಲ್ಲ ಎಂದು ಕಣ್ಣೀರಾಗುತ್ತಾರೆ.
ಎರಡು ವರ್ಷಗಳ ನಂತರ ಹರಿಯಾಣದ ದನದ ವ್ಯಾಪಾರಿ ಪೆಹ್ಲೂಖಾನ್ ನನ್ನು ರಾಜಸ್ಥಾನದ ಅಲ್ವರ್ ನಲ್ಲಿ 200 ಮಂದಿಯ ‘ಗೋರಕ್ಷಕ’ರ ಗುಂಪೊಂದು ಹೀಗೆಯೇ ಜಜ್ಜಿ ಕೊಂದಿತು.
ದನಗಳನ್ನು ಖರೀದಿಸಿ ತನ್ನ ರಾಜ್ಯ ಹರಿಯಾಣಕ್ಕೆ ಸಾಗಿಸುತ್ತಿದ್ದ ಪೆಹಲೂಖಾನ್. ಸಂಬಂಧಪಟ್ಟ ಕಾನೂನು ನಿಯಮ ನಿಬಂಧನೆಗಳನ್ನು ಪಾಲಿಸಿಯೇ ಖರೀದಿಸಿದ್ದ. ಸಾಗಾಟಕ್ಕೆ ಅನುಮತಿ ಪತ್ರವೂ ಆತನ ಬಳಿ ಇತ್ತು. ಆದರೆ ಗೋರಕ್ಷಕರೆಂದು ಹೇಳಿಕೊಳ್ಳುವ ಕೋಮುದ್ವೇಷಿ ಹಂತಕರಿಗೆ ಇದ್ಯಾವುದೂ ಬೇಕಿರಲಿಲ್ಲ. ವ್ಯಾನಿನಲ್ಲಿ ದನಗಳಿದ್ದವು ಮತ್ತು ಅವುಗಳನ್ನು ಸಾಗಿಸುತ್ತಿದ್ದವರು ಮುಸಲ್ಮಾನರು ಎಂಬ ಎರಡು ಸಂಗತಿಗಳೇ ಸಾಕಿತ್ತು.
ಪೆಹ್ಲೂಖಾನ್ ನನ್ನು ಬಡಿದು ಕೊಂದರೆಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲವೆಂದು 2019ರಲ್ಲಿ ಅಲ್ವರ್ ಜಿಲ್ಲಾ ನ್ಯಾಯಾಲಯ ಆರೂ ಮಂದಿ ಆಪಾದಿತರನ್ನು ಖುಲಾಸೆಗೊಳಿಸಿತು.. ಆರೋಪಿಗಳ ಮೇಲಿನ ಆಪಾದನೆಯನ್ನು ಸೂಕ್ತ ಸಾಕ್ಷ್ಯಾಧಾರಗಳ ಸಹಿತ ಸಾಬೀತು ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದಿತು. ದೇಶದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ ಹಿಡಿದಿರುವ ಇಳಿಜಾರಿನ ದಾರಿಯತ್ತ ಈ ಪ್ರಕರಣಗಳ ವಿಚಾರಣೆಗಳು ಬೆರಳು ಮಾಡಿವೆ
ಆರೋಪಿಗಳನ್ನು ಗುರುತಿಸಿ ಬಂಧಿಸಲು ಪೊಲೀಸರು ಅವಲಂಬಿಸಿದ ಮೊಬೈಲ್ ವಿಡಿಯೋ ಚಿತ್ರೀಕರಣವನ್ನು ಸಾಕ್ಷ್ಯಾಧಾರ ಎಂದು ಒಪ್ಪಿಕೊಳ್ಳಲು ನ್ಯಾಯಾಲಯ ನಿರಾಕರಿಸಿದೆ ಯಾಕೆಂದರೆ ವಿಡಿಯೋ ಚಿತ್ರೀಕರಿಸಿದ್ದ ಫೋನನ್ನು, ಇಲ್ಲವೇ ವಿಡಿಯೋ ತಮಗೆ ದೊರೆತ ಫೋನುಗಳನ್ನು ಸಾಕ್ಷ್ಯಗಳನ್ನಾಗಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸದೆ ದೊಡ್ಡ ಕರ್ತವ್ಯಲೋಪ ಎಸಗಿದ್ದಾರೆ. ಈ ವಿಡಿಯೋ ತಮಗೆ ದೊರೆತದ್ದು ಹೇಗೆಂದು ಇಬ್ಬರು ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಪರಸ್ಪರ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾರೆ. ವಿಡಿಯೋ ಚಿತ್ರೀಕರಿಸಿದ ಮೊಬೈಲ್ ಫೋನನ್ನು ವಶಪಡಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲದಿರುವುದು ಮತ್ತು ಈ ಫೋನಿಗೂ ಅದರ ಒಡೆಯನಿಗೂ ಸಂಬಂಧವನ್ನು ಸಾಧಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇದು ಗಂಭೀರ ಕರ್ತವ್ಯಲೋಪವನ್ನು ಸೂಚಿಸುತ್ತದೆ ಎಂಬುದಾಗಿ ನ್ಯಾಯಾಧೀಶೆ ಸರಿತಾ ಸ್ವಾಮಿ ಟೀಕಿಸಿದ್ದಾರೆ.ಈ ಎರಡು ಅಂಶಗಳು ವಿಚಾರಣೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು ಅದರ ದಿಕ್ಕನ್ನೇ ಬದಲಿಸಿವೆ. ಉದ್ದೇಶಪೂರಿತ ಗೊಂದಲಗಳನ್ನು ಸೃಷ್ಟಿಸಲಾಗಿದೆ. ಪೆಹಲೂಖಾನನ್ನು ಬಡಿದು ಕೊಂದ ಮೊಬೈಲ್ ಫೋನ್ ವಿಡಿಯೋವನ್ನು ಫೊರೆನ್ಸಿಕ್ ಪರೀಕ್ಷೆಗೆ ನೀಡಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಆದರೆ ಅದನ್ನು ಜೈಪುರದಲ್ಲಿಯೇ ಫೊರೆನ್ಸಿಕ್ ಪರೀಕ್ಷೆಗೆ ಒಪ್ಪಿಸಲಾಗಿತ್ತು ಎಂಬುದು ತಡವಾಗಿ ಬಳಕೆಗೆ ಬಂದಿತು. ತನ್ನ ನೇತೃತ್ವದ ಗುಂಪೊಂದು ಪೆಹಲೂಖಾನ್ ನನ್ನು ಒಂದೂವರೆ ತಾಸಿನ ಕಾಲ ಬಡಿದು ಕೊಂದದ್ದು ಹೌದೆಂದು ಎನ್.ಡಿ.ಟೀವಿ ನಡೆಸಿದ್ದ ಗುಪ್ತ ಕ್ಯಾಮೆರಾ ಕುಟುಕು ಕಾರ್ಯಾಚರಣೆಯಲ್ಲಿ ವಿಪಿನ್ ಯಾದವ್ ಎಂಬಾತ ಒಪ್ಪಿಕೊಂಡಿದ್ದ. ಈ ಎರಡೂ ವಿಡಿಯೋಗಳು ಅಸಲಿ ಎಂಬುದಾಗಿ ಜೈಪುರದ ವಿಧಿವಿಜ್ಞಾನ ಪ್ರಯೋಗಾಲಯ ಪ್ರಮಾಣೀಕರಿಸಿತ್ತು. ಈ ಪ್ರಮಾಣೀಕರಣವನ್ನು ಕೇಸಿನ ದಾಖಲೆಗಳಿಗೆ ಲಗತ್ತಿಸಲಾಗಿದೆ. ಆದರೆ ಛಾರ್ಜ್ ಶೀಟ್ ಸಲ್ಲಿಸಿ ಎರಡೂವರೆ ತಿಂಗಳುಗಳ ನಂತರ ಮತ್ತು ಪೆಹಲೂಖಾನ್ ಹತ್ಯೆಯಾದ ಎಂಟು ತಿಂಗಳ ನಂತರ ಹತ್ಯೆಯ ವಿಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಪೊಲೀಸರ ಈ ಕೃತ್ಯ ವಿಚಾರಣೆಯನ್ನು ಹಳ್ಳ ಹಿಡಿಸುವ ಪ್ರಜ್ಞಾಪೂರ್ವಕ ನಡೆಯಲ್ಲದೆ ಮತ್ತೇನೂ ಆಗಿರಲು ಸಾಧ್ಯವಿಲ್ಲ. ಮರಣಕ್ಕೆ ಮುನ್ನ ಪೆಹಲೂಖಾನ್ ನೀಡಿದ್ದ ಹೇಳಿಕೆಯಲ್ಲಿ ಹೆಸರಿಸಿದ್ದ ಎಲ್ಲ ಆರೂ ಮಂದಿ ಹಂತಕರನ್ನು ಬಿಡುಗಡೆ ಮಾಡಲಾಗುತ್ತದೆ. ಅವರ ಬದಲಿಗೆ ಇತರರನ್ನು ಬಂಧಿಸಿ ಅವರ ಮೇಲೆ ಆಪಾದನೆ ಹೊರಿಸಿ ನ್ಯಾಯಾಲಯದ ಮುಂದೆ ಆರೋಪಿಗಳೆಂದು ನಿಲ್ಲಿಸಲಾಗುತ್ತದೆ. ಕುಟುಕು ಕಾರ್ಯಾಚರಣೆಯ ವಿಡಿಯೋದಲ್ಲಿ ಹತ್ಯೆಯ ನೇತೃತ್ವ ತಾನೇ ವಹಿಸಿದ್ದು ಎಂದು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ವಿಪಿನ್ ಯಾದವ್ ನ ಜಾಮೀನನ್ನು ರದ್ದು ಮಾಡಬೇಕು ಎಂಬ ಪೊಲೀಸರ ಕೋರಿಕೆಯನ್ನು ರಾಜಸ್ತಾನ್ ಹೈಕೋರ್ಟ್ ತಳ್ಳಿ ಹಾಕಿತ್ತು.
ಇದನ್ನೂ ಓದಿ SIR ಹೆಸರಿನಲ್ಲಿ ನಡೆಯುತ್ತಿರುವುದು ರಕ್ತರಹಿತ ನರಮೇಧ: ಪರಕಾಲ ಪ್ರಭಾಕರ್
ಪೆಹಲೂಖಾನ್ ಸಾಯುವ ಮುನ್ನ ನೀಡಿದ್ದ ಹೇಳಿಕೆಯಲ್ಲಿ ತನ್ನ ಹತ್ಯೆಯಲ್ಲಿ ಭಾಗಿಗಳಾಗಿದ್ದ ಆರು ಮಂದಿ ಆರೋಪಿಗಳ ಹೆಸರುಗಳನ್ನು ಹೇಳಿದ್ದ. ಈ ಆರೂ ಮಂದಿಯನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದರು. ಕೇಸು ದಾಖಲಿಸಿದ ನಂತರ ಪೊಲೀಸರು ಹೆಸರಿಸಿದ್ದ ಒಂಬತ್ತು ಮಂದಿ ಆರೋಪಿಗಳ ಪೈಕಿ ಮೂವರು ಅಪ್ರಾಪ್ತ ವಯಸ್ಕರು. ಉಳಿದ ಆರು ಮಂದಿಯನ್ನು ನ್ಯಾಯಾಲಯ ಸಂದೇಹದ ಲಾಭ ನೀಡಿ ಖುಲಾಸೆ ಮಾಡಿತು.
ಆರೋಪಿಗಳ ಖುಲಾಸೆಯ ತೀರ್ಪು ಹೊರಬೀಳುತ್ತಿದ್ದಂತೆ, ನ್ಯಾಯಾಲಯದ ಹೊರಗೆ ಸೇರಿದ್ದ ಜನ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಾರೆ. ಆರೋಪಿಗಳ ಕುರಿತು ಸಹಾನುಭೂತಿ ತೋರುತ್ತಾರೆ. ಹಾಡಹಗಲಲ್ಲಿ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ನಡೆದ ಹತ್ಯೆಯ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ಪಾರಾಗುವುದು ಭಾರತ ಮಾತೆಗೆ ಜೈಕಾರ ಹೇಳುವ ಸಂಭ್ರಮದ ಸುದ್ದಿಯೇ ಎಂಬ ಪ್ರಶ್ನೆಗೆ ಯಾರು ಉತ್ತರ ಕೊಡಬೇಕು?
ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಕಾರಣವನ್ನು ಖಾಸಗಿ ವೈದ್ಯರು ಹೃದಯಾಘಾತ ಎಂತಲೂ, ಸರ್ಕಾರಿ ವೈದ್ಯರು ಥಳಿಸುವಿಕೆ ಎಂದು ಬರೆದಿರುವುದು,, ಆರೋಪಿಗಳು ಖುಲಾಸೆಯಾದ ಕೂಡಲೇ ಕೂಗಲಾದ ಭಾರತ್ ಮಾತಾ ಕೀ ಜೈ ಘೋಷಣೆಗಳು ಕಾಣದ ಕಹಿ ಸತ್ಯವೊಂದರತ್ತ ಇಷಾರೆ ಮಾಡುತ್ತವೆ. ಪೆಹಲೂಖಾನ್ ಸಾಯುವ ಮುನ್ನ ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟ ವೈದ್ಯ ಮತ್ತು ಮ್ಯಾಜಿಸ್ಟ್ರೇಟ್ ಸಹಿ ಹಾಕಲು ನಿರಾಕರಿಸಿದ್ದ ಕಾರಣಗಳ ತನಿಖೆಯಾಗಿಲ್ಲ. ಈ ಹತ್ಯೆಯ ಪ್ರತ್ಯಕ್ಷ ಸಾಕ್ಷಿಗಳಾದ ಪೆಹಲೂನ ಇಬ್ಬರು ಗಂಡು ಮಕ್ಕಳನ್ನು ಕರೆಯಿಸಿ ಅವರ ಮುಂದೆ ಆಪಾದಿತರನ್ನು ಗುರುತಿಸುವ ಐ.ಡಿ.ಪರೇಡ್ ನಡೆಯದಿರುವುದು ಪ್ರಶ್ನಾರ್ಹ ಕರ್ತವ್ಯಚ್ಯುತಿ. ಈ ಸಾಕ್ಷಿಗಳಿಗೆ ಪ್ರಾಣ ಬೆದರಿಕೆ ಹಾಕಲಾದ ನಂತರ ಅವರಿಗೆ ರಕ್ಷಣೆ ಒದಗಿಸಿಲ್ಲ. ಬಂಧಿಸಲಾಗಿದ್ದ ಆರೋಪಿಗಳು ಘಟನೆ ನಡೆದ ದಿನ ಹತ್ಯೆಯ ಸ್ಥಳದಲ್ಲೇ ಇದ್ದರು ಎಂಬುದಾಗಿ ಅವರ ಮೊಬೈಲ್ ಫೋನುಗಳ ಕರೆಗಳ ವಿವರಗಳು ಹೇಳುತ್ತವೆ. ಪೆಹಲೂ ಖಾನನ್ನು ಥಳಿಸಲು ಬಳಸಿದ ದೊಣ್ಣೆಯು ಮಹತ್ವದ ಸಾಕ್ಷ್ಯ. ಆದರೆ ಅದು ಪೊಲೀಸರ ವಶದಿಂದ ಮಾಯವಾಗುತ್ತದೆ. ಈ ಕರ್ತವ್ಯಲೋಪಕ್ಕೆ ಸಂಬಂಧಿಸಿದ ಪೊಲೀಸರ ಮೇಲೆ ಯಾವುದೇ ಕ್ರಮ ಜರುಗುವುದಿಲ್ಲ. ಕಳಪೆ ತನಿಖೆ ನಡೆಸುವ ಮೂಲಕ ಕೇಸು ಬಿದ್ದು ಹೋಗುವಂತೆ ಮಾಡಲು ಪೊಲೀಸರ ಮೇಲೆ ಪ್ರಭಾವ ಬೀರಿದ ಶಕ್ತಿಗಳು ಯಾವುವೆಂದು ಬಯಲಾಗಬೇಕಿದೆ. ಕಳೆದ ಹಲವು ವರ್ಷಗಳಿಂದ ದೇಶಾದ್ಯಂತ ಗುಂಪುಹತ್ಯೆಗಳು ನ್ಯಾಯಬದ್ಧ ಎಂದು ಸಾರುವ ವಾತಾವರಣ ಸೃಷ್ಟಿಯಾಗಿದೆ. ಝಾರ್ಖಂಡದ ಗುಂಪು ಹತ್ಯೆ ಆರೋಪಿಗಳನ್ನು ಅಂದಿನ ಕೇಂದ್ರ ಮಂತ್ರಿ ಜಯಂತ್ ಸಿನ್ಹಾ ಸನ್ಮಾನಿಸಿದರೂ ಅದು ತಪ್ಪೆಂದು ಸರ್ಕಾರದ ಎತ್ತರದ ಸ್ಥಾನದಲ್ಲಿರುವವರು ಹೇಳುವುದಿಲ್ಲ.
ರಾಜಸ್ತಾನದ ಪೊಲೀಸರು ಅಪರಾಧಿಗಳೊಂದಿಗೆ ಶಾಮೀಲಾಗಿ ಸಾಕ್ಷ್ಯಾಧಾರಗಳನ್ನು ಹೂತು ಹಾಕಿ ವಿಚಾರಣೆಯ ದಾರಿ ತಪ್ಪಿಸಿರುವುದು ಮೇಲ್ನೋಟಕ್ಕೇ ಸ್ಪಷ್ಟವೇದ್ಯ. ರಾಜಸ್ತಾನದ ಅಂದಿನ ಕಾಂಗ್ರೆಸ್ ಸರ್ಕಾರವೂ ಈ ಪ್ರಕರಣದ ದೊಡ್ಡ ದೋಷಿ. ತನಿಖೆ ಹಿಡಿದಿರುವ ಅಡ್ಡದಾರಿಯನ್ನು ಗಮನಿಸದೆ ತೋರಿರುವ ನಿರ್ಲಕ್ಷ್ಯ ಅಕ್ಷಮ್ಯ.





