ಮಾಧ್ಯಮಗಳು, ರಾಜಕಾರಣಿಗಳು, ಮತೀಯವಾದಿ ರಾಜಕೀಯ ಪಕ್ಷಗಳ ಬೆಂಬಲಿಗರು ಮಾಡುವ ದ್ವೇಷದ ಅಭಿಯಾನವು ಉಂಟುಮಾಡುವ ದುರಂತಗಳ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಿದೆ
ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆಯ ಬಳಿ ಬಾಂಬ್ ಸ್ಫೋಟ ಸಂಭವಿಸಿ ಹನ್ನೆರಡು ಮಂದಿ ಮೃತಪಟ್ಟ ಘಟನೆ ದೇಶವನ್ನು ಬೆಚ್ಚಿ ಬೀಳಿಸಿತ್ತು. ಪುಲ್ವಾಮಾ, ಪಹಲ್ಗಾಮ್ ಘಟನೆಗಳ ಬಳಿಕ ದೇಶದಲ್ಲಿ ನಡೆದ ಭೀಕರ ಭಯೋತ್ಪಾದನಾ ಕೃತ್ಯ ಇದಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿಯೊಂದಿಗೆ ಸಂಪರ್ಕದಲ್ಲಿದ್ದ ಶಂಕೆಯ ಮೇಲೆ ಹರಿಯಾಣದ ನುಹ್‌ನಲ್ಲಿ ಮೂವರು ವೈದ್ಯರನ್ನು ಮತ್ತು ಒಬ್ಬ ರಸಗೊಬ್ಬರ ವ್ಯಾಪಾರಿಯನ್ನು ವಶಕ್ಕೆ ಪಡೆಯಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ವಿಚಾರಣೆಗೆ ಒಳಪಟ್ಟ ಡಾ.ರೆಹಾನ್, ಡಾ.ಮುಹಮ್ಮದ್, ಡಾ.ಮುಸ್ತಕೀಮ್ ಹಾಗೂ ರಸಗೊಬ್ಬರ ವ್ಯಾಪಾರಿ ದಿನೇಶ್ ಸಿಂಗ್ಲಾ ಅವರನ್ನು ಬಿಡುಗಡೆ ಮಾಡಲಾಗಿದೆ. ಈ ನಾಲ್ವರಿಗೂ ಮತ್ತು ಘಟನೆಗೂ ಯಾವುದೇ ಸಂಬಂಧ ಕಂಡುಬಂದಿಲ್ಲ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಆದರೆ ಬಂಧಿತರಾದವರ ಬದುಕಿಗೆ ಈ ಸಮಾಜ ಕಪ್ಪುಚಿಕ್ಕೆ ಇಟ್ಟಾಗಿದೆ. ಅದನ್ನು ಅಳಿಸಿ ಹಾಕುವುದು ಕಷ್ಟದ ಮಾತು.
ಯಾವುದಾದರೂ ಭಯೋತ್ಪಾದನಾ ಕೃತ್ಯ ಘಟಿಸಿದಾಗ, ಮುಸ್ಲಿಮರತ್ತ ಬೊಟ್ಟು ಮಾಡಿ, ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಇದೇ ಮೊದಲೇನೂ ಅಲ್ಲ. ಸರ್ಕಾರದ ಮಟ್ಟದಿಂದಲೇ ಹರಿದು ಬರುವ ಕಲ್ಪಿತ ಕಥಾನಕಗಳಿಗೆ ಮಾಧ್ಯಮಗಳು ಭಾರೀ ಪ್ರಚಾರ ಕೊಡುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದುತ್ವ ಬೆಂಬಲಿತ ನಕಲಿ ಹಾಗೂ ಅಸಲಿ ಖಾತೆಗಳು ಆಕ್ಟೀವ್ ಆಗುತ್ತವೆ; ಬಂಧಿತ ವ್ಯಕ್ತಿಗಳ ಚಾರಿತ್ರ್ಯಹರಣ ಮಾಡಲು ಶುರು ಮಾಡುತ್ತವೆ. ಮುಸ್ಲಿಮರ ವಿರುದ್ಧ ದ್ವೇಷಕಾರುವ ಪೋಸ್ಟರ್‌ಗಳು ಹಂಚಿಕೆಯಾಗುತ್ತವೆ. ಸತ್ಯ ಏನೆಂಬುದು ಗೊತ್ತಾಗುವ ವೇಳೆಗೆ ಕಾಲ ಮಿಂಚಿ ಹೋಗಿರುತ್ತದೆ.
ದೆಹಲಿ ಕೇಸ್‌ನಲ್ಲಿ ವಿಚಾರಣೆಗೆ ಒಳಪಟ್ಟ ಮುಸ್ಲಿಂ ವೈದ್ಯರ ನೆಪದಲ್ಲಿ ಏನೆಲ್ಲ ಅಪಪ್ರಚಾರ ನಡೆದಿದೆ ಎಂಬುದನ್ನು ನೋಡಿದರೆ ಆತಂಕವಾಗುತ್ತದೆ. ”ಯಾರೂ ಮುಸ್ಲಿಂ ವೈದ್ಯರ ಬಳಿ ಹೋಗಬೇಡಿ. ಅವರು ವಿಷದ ಇಂಜೆಕ್ಷನ್ ಕೊಟ್ಟು ನಿಮ್ಮನ್ನು ಸಾಯಿಸುತ್ತಾರೆ” ಎನ್ನುವಂತಹ ನಕಲಿ ನಿರೂಪಣೆಗಳನ್ನು ಹರಿಬಿಟ್ಟಿರುವುದು ಸಮಾಜದ ವಿಕೃತಿಗೆ ಹಿಡಿದ ಕನ್ನಡಿ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್‌ನ ಇತಿಹಾಸವನ್ನೇ ತಿರುಚುತ್ತಿರುವ ಭಾಗವತ್!
ಪಾಕಿಸ್ತಾನದ ಪರವಾಗಿ ಗೂಢಾಚಾರಿಕೆ ಮಾಡಿದ, ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ ಆರೋಪದಲ್ಲಿ ಮುಸ್ಲಿಮೇತರ ಧರ್ಮಿಯರು ಸಿಕ್ಕಿಬಿದ್ದಾಗ ಇಷ್ಟು ಪ್ರಚಾರ ಸಿಗುವುದಿಲ್ಲ. ಆದರೆ ಆರೋಪಿ ಮುಸ್ಲಿಂ ಆಗಿದ್ದಾಗ ಇಲ್ಲಸಲ್ಲದ ಕಥೆಗಳು ಹುಟ್ಟುತ್ತವೆ. ಅಮಾಯಕರು ಬಂಧಿತರಾಗುತ್ತಾರೆ. ಆರೋಪ ಸಾಬೀತಾಗದೆ ವಿನಾಕಾರಣ ಜೈಲು ಶಿಕ್ಷೆ ಅನುಭವಿಸಿದ ಮುಸ್ಲಿಮರನ್ನು ನೋಡಿದರೆ ಹೃದಯ ಇದ್ದವರು ಮರುಗದೆ ಇರುವುದಿಲ್ಲ.
2001ರ ಡಿಸೆಂಬರ್‌ನಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಮುಸ್ಲಿಮರ ಶಿಕ್ಷಣದ ಕುರಿತು ಅಖಿಲ ಭಾರತ ಅಲ್ಪಸಂಖ್ಯಾತ ಶಿಕ್ಷಣ ಮಂಡಳಿ ಆಯೋಜಿಸಿದ್ದ ಸಭೆಗೆ ಹೋದ 127 ಮಂದಿಯನ್ನು ಬಂಧಿಸಲಾಗಿತ್ತು. ಎಲ್ಲರ ಮೇಲೂ ಭಯೋತ್ಪಾದಕ ಚಟುವಟಿಕೆಯ ಆರೋಪ ಹೊರಿಸಲಾಯಿತು. ಇವರೆಲ್ಲರೂ ನಿಷೇಧಿತ ಸಂಘಟನೆ ‘ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ’ (ಸೆಮಿ) ಸದಸ್ಯರಾಗಿದ್ದಾರೆ ಎಂದು ದೂರಲಾಗಿತ್ತು. ಆದರೆ 19 ವರ್ಷಗಳ ನಂತರ, ಅಂದರೆ 2021ರಲ್ಲಿ ಸೂರತ್‌ನ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿತು. ಕೋರ್ಟ್ ತೀರ್ಪು ನೀಡುವುದರೊಳಗೆ ಐವರು ಸಾವನ್ನಪ್ಪಿದ್ದರು!
ಬಾಬ್ರಿ ಮಸೀದಿ ಧ್ವಂಸದ ಪ್ರತೀಕಾರದ ಸಂಚು, ಪಾಕಿಸ್ತಾನ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳ ತರಬೇತಿ ಪಡೆದ ಆರೋಪದ ಮೇಲೆ 1994ರಲ್ಲಿ ಮಹಾರಾಷ್ಟ್ರದ ಭೂಸಾವಲ್ ಪ್ರದೇಶದ 11 ಮಂದಿ ಮುಸ್ಲಿಮರನ್ನು ಅರೆಸ್ಟ್ ಮಾಡಲಾಗಿತ್ತು. ಐದು ತಿಂಗಳು ಯಾವುದೇ ಚಾರ್ಜ್‌ಶೀಟ್ ಹಾಕಲಿಲ್ಲ. ಇಪ್ಪತ್ತು ವರ್ಷಗಳ ಕಾಲ ಆರೋಪಿಗಳನ್ನು ಬಂಧನದಲ್ಲಿ ಇಡಲಾಯಿತು. 2019ರಲ್ಲಿ ನಾಸಿಕ್‌ನ ವಿಶೇಷ ಟಾಡಾ ನ್ಯಾಯಾಲಯವು ಈ 11 ಮಂದಿ ಮುಸ್ಲಿಮರೂ ನಿರಪರಾಧಿಗಳು ಎಂದು ಘೋಷಿಸಿತು.
1996ರ ಮೇನಲ್ಲಿ ನವದೆಹಲಿಯ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಸ್ಫೋಟ ಸಂಭವಿಸಿ 13 ಜನರು ಸಾವನ್ನಪ್ಪಿದರು. ಮಾರನೇ ದಿನ ರಾಜಸ್ಥಾನದ ಸ್ಯಾಮ್ಲೇಟಿ ಗ್ರಾಮದ ಬಳಿ ಮತ್ತೊಂದು ಸ್ಫೋಟ ಸಂಭವಿಸಿತು, ಇದರಲ್ಲಿ 14 ಜನರು ಸಾವನ್ನಪ್ಪಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಭಟ್ ಮತ್ತು ಇತರ ಕಾಶ್ಮೀರಿಗಳನ್ನು ಬಂಧಿಸಲಾಗಿತ್ತು. ಯಾವುದೇ ಸಾಕ್ಷ್ಯಾಧಾರ ಇಲ್ಲವೆಂದು 23 ವರ್ಷಗಳ ಬಳಿಕ ಆರೋಪ ಮುಕ್ತ ಮಾಡಲಾಯಿತು.
2006ರ ಜುಲೈ 11ರಂದು ಮುಂಬೈನ ಪಶ್ಚಿಮ ಮಾರ್ಗದ ರೈಲುಗಳಲ್ಲಿ ಸರಣಿ ಬಾಂಬ್‌ಗಳು ಸ್ಫೋಟಗೊಂಡು 189 ಜನರು ಸಾವನ್ನಪ್ಪಿದ್ದರು ಮತ್ತು 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಎಲ್ಲ 12 ಮುಸ್ಲಿಂ ವ್ಯಕ್ತಿಗಳನ್ನು ಬಾಂಬೆ ಹೈಕೋರ್ಟ್ 2025ರಲ್ಲಿ ಖುಲಾಸೆಗೊಳಿಸಿತು. ಕಾರಣ- ಸಾಕ್ಷ್ಯಾಧಾರದ ಕೊರತೆ!
ಶಬ್ಬೀರ್ ಗಂಗಾವಲಿ ಅವರ ಪ್ರಕರಣ ಇಂತಹದ್ದೇ ಆಗಿತ್ತು. ಕರಾವಳಿಯ ಭಟ್ಕಳದ ಮೌಲಾನಾ (ಮುಸ್ಲಿಂ ಧಾರ್ಮಿಕ ವಿದ್ವಾಂಸ) ಎಂಬ ಕಾರಣಕ್ಕಾಗಿ ಶಬ್ಬೀರ್ ಅವರನ್ನು ನವೆಂಬರ್ 2008ರಲ್ಲಿ ಬಂಧಿಸಲಾಯಿತು. 2008ರ ಮುಂಬೈ ದಾಳಿಯಲ್ಲಿ 164 ಜನರು ಸಾವನ್ನಪ್ಪಿದರು ಮತ್ತು 308 ಜನರು ಗಾಯಗೊಂಡರು ಎಂಬ ಆರೋಪದ ಮೇಲೆ ಅವರು ಏಳೂವರೆ ವರ್ಷಗಳ ಕಾಲ ಜೈಲಿನಲ್ಲಿ ಇರಬೇಕಾಯಿತು. ಬಂಧಿತರಾಗಿದ್ದ ಸಂದರ್ಭದಲ್ಲಿ ಹಲವು ಸಲ ಥಳಿತಕ್ಕೊಳಗಾದರು. ಸುಳ್ಳು ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು. ಏಪ್ರಿಲ್ 2017ರಲ್ಲಿ ಅವರು ಅಂತಿಮವಾಗಿ ಜೈಲಿನಿಂದ ಹೊರಬಂದರು, ಎಲ್ಲಾ ಆರೋಪಗಳಿಂದ ಮುಕ್ತರಾದರು.
ಇದನ್ನೂ ಓದಿರಿ: ‘ಜನ ಗಣ ಮನ’ಕ್ಕೆ ಬಿಜೆಪಿ ತಿರಸ್ಕಾರ; ರವೀಂದ್ರನಾಥ ಟ್ಯಾಗೋರ್‌ಗೆ ಅಪಚಾರ!
ಇಂತಹ ನೂರಾರು ಉದಾಹರಣೆಗಳನ್ನು ಹೇಳುತ್ತಾ ಹೋಗಬಹುದು. ಯುಎಪಿಎ, ಟಿಎಡಿಎ, ಎಂಸಿಒಸಿಎ ಥರದ ಕಠಿಣ ಕಾನೂನುಗಳನ್ನು ಎದುರಿಸುತ್ತಾ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿರುವ ನೂರಾರು ಮುಸ್ಲಿಮರಿದ್ದಾರೆ. ಅವರ ಕುಟುಂಬಗಳು ಬೀದಿಪಾಲಾಗಿವೆ. ದೋಷಮುಕ್ತರಾಗಿ ಹೊರಬಂದರೂ ಬದುಕು ಕಳೆದುಕೊಂಡವರೇ ಹೆಚ್ಚು. ಮಾಡದ ತಪ್ಪಿಗೆ ಅನುಭವಿಸಿದ ಶಿಕ್ಷೆ ಒಂದು ಕಡೆಯಾದರೆ, ಇಡೀ ಸಮಾಜವೇ ಇಂಥವರನ್ನು ಹೊರಗಿಡುತ್ತಾ ಹೋಗುತ್ತದೆ. ದೇಶದ್ರೋಹದ ಆರೋಪ ಹೊತ್ತು ಬದುಕುವುದು ದುಸ್ತರವಾಗುತ್ತದೆ.
”ಎಲ್ಲ ಮುಸ್ಲಿಮರು ಭಯೋತ್ಪಾದಕಲ್ಲ, ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರೇ” ಎನ್ನುವುದು ಸಮಾಜದ ಹೀನ ದೃಷ್ಟಿಕೋನ. ಇದು ಸಮಾಜದಲ್ಲಿ ಬಲವಂತವಾಗಿ ತುರಕಲ್ಪಟ್ಟ ಅಭಿಪ್ರಾಯವೂ ಹೌದು. ಈ ದೇಶದ ಚರಿತ್ರೆಯನ್ನು ತೆಗೆದು ನೋಡಿದರೆ, ಹಿಂದುತ್ವ ಗುಂಪುಗಳು ಮಾಡಿರುವ ಭಯೋತ್ಪಾದನಾ ಚಟುವಟಿಕೆಗಳು ಹೇರಳವಾಗಿ ಸಿಗುತ್ತವೆ. ದುರದೃಷ್ಟವಶಾತ್ ಭಯೋತ್ಪಾದನಾ ಘಟನೆಯೊಂದು ನಡೆದ ತಕ್ಷಣವೇ ಮುಸ್ಲಿಮರೇ ಇದನ್ನು ಮಾಡಿದ್ದಾರೆಂದು ನಿರ್ಧರಿಸುವಷ್ಟು ಪೂರ್ವಗ್ರಹ ಪೀಡಿತ ವ್ಯವಸ್ಥೆ ನಮ್ಮದಾಗಿಬಿಟ್ಟಿದೆ. ಸತ್ಯ ತಿಳಿಯುವಷ್ಟರಲ್ಲಿ ಕಾಲವೇ ಉರುಳಿ, ಬದುಕು ದಿಕ್ಕಾಪಾಲಾಗಿರುತ್ತದೆ. ಮಾಧ್ಯಮಗಳು, ರಾಜಕಾರಣಿಗಳು, ಮತೀಯವಾದಿ ರಾಜಕೀಯ ಪಕ್ಷಗಳ ಬೆಂಬಲಿಗರು ಮಾಡುವ ದ್ವೇಷದ ಅಭಿಯಾನವು ಉಂಟುಮಾಡುವ ದುರಂತಗಳ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಿದೆ.





