ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ ಆದಿವಾಸಿಗಳು-ಬುಡಕಟ್ಟು ಜನರ ಪ್ರಮಾಣ ದುಪ್ಪಟ್ಟಿಗಿಂತ ಹೆಚ್ಚು. ಶೇ. 14.8. ಹಿಂದುತ್ವವು ದಲಿತರನ್ನು ದೂರವಿಟ್ಟು ಆದಿವಾಸಿ-ಬುಡಕಟ್ಟು ಜನರನ್ನು ತನ್ನ ಹುನ್ನಾರಗಳಿಗೆ ಬಳಸಿಕೊಂಡು ಬಂದಿದೆ. ಎಪ್ಪತ್ತರ ದಶಕದಲ್ಲಿ ಗುಜರಾತಿನಲ್ಲೂ ದಲಿತ ಪ್ಯಾಂಥರ್ ತಲೆಯೆತ್ತಿತು. ಕೆಲವೇ ವರ್ಷಗಳಲ್ಲಿ ಶಿಥಿಲಗೊಂಡು ಕರಗಿ ಹೋಯಿತು.
ಹತ್ತು ವರ್ಷಗಳ ಹಿಂದೆ ಗೋಹತ್ಯೆ ಮಾಡಿದ ಶಂಕೆಯ ಮೇರೆಗೆ ಏಳು ಮಂದಿ ದಲಿತರನ್ನು ಅರೆಬೆತ್ತಲೆಗೊಳಿಸಿ ಕಟ್ಟಿ ಹಾಕಿ ಅಮಾನುಷವಾಗಿ ಥಳಿಸಿದ ಪ್ರಕರಣದ ತೀರ್ಪು ಹೊರಬಿದ್ದಿದೆ. ಐವರು ಆರೋಪಿಗಳನ್ನು ಶಿಕ್ಷಿಸಿರುವ ನ್ಯಾಯಾಲಯ ಉಳಿದ 35 ಮಂದಿಯನ್ನು ಖುಲಾಸೆಗೊಳಿಸಿದೆ. ಅಪರಾಧಿಗಳಿಗೆ ವಿಧಿಸಬೇಕಿರುವ ಶಿಕ್ಷೆಯ ಪ್ರಮಾಣವನ್ನು ಮಂಗಳವಾರ ಪ್ರಕಟಿಸುವುದಾಗಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿಗ್ನೇಶ್ ಪಾಂಡ್ಯ ಸಾರಿದ್ದಾರೆ.
ರಮೇಶ್ ಜಾಧವ್, ರಾಕೇಶ್ ಜೋಶಿ. ನಾಗಜಿಭಾಯಿ ವಣಿಯ, ಪ್ರಮೋದಗಿರಿ ಗೋಸ್ವಾಮಿ ಹಾಗೂ ಬಲವಂತಗಿರಿ ಗೋಸ್ವಾಮಿ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಮಾನಿಸಿದೆ.
ಗುಜರಾತಿನ ಊನಾದಲ್ಲಿ ಊನಗೊಂಡ ‘ಅಸ್ಪೃಶ್ಯ ಭಾರತ’ವನ್ನು ಮರೆಯಲಾಗದು. 2016, ಜುಲೈ 11ರಂದು ಗುಜರಾತ್‌ನ ಗೀರ್‌ಸೋಮನಾಥ ಜಿಲ್ಲೆಯ ಊನಾದ ಬಳಿ ಇರುವ ಮೋಟಾಸಮಾಧಿಯಾಲ ಎಂಬ ಹಳ್ಳಿಯಲ್ಲಿ ದಲಿತ ಸಮುದಾಯದವರು ಸತ್ತ ದನದ ಚರ್ಮವನ್ನು ಸುಲಿಯುವ ಕೆಲಸವನ್ನು ಎಂದಿನಂತೆ ಮಾಡುತ್ತಿದ್ದರು. ಅದು ತಲೆತಲಾಂತರದಿಂದ ಬಂದ ಕಸುಬಾಗಿತ್ತು. ಸತ್ತ ದನವನ್ನು ಬೇರೆಯ ಜಿಲ್ಲೆಯಿಂದ ತಂದಿದ್ದರು. ಆಗ ಎರಡು ಕಾರಿನಲ್ಲಿ ಬಂದ ಗೋರಕ್ಷಕ ಗೂಂಡಾಗಳು ದಾಂಧಲೆ ಎಬ್ಬಿಸಿದರು. ಮತಾಂಧತೆಯ ಅಮಲೇರಿದ್ದ ಮೇಲ್ಜಾತಿ ಗೋರಕ್ಷಕ ಪಡೆಯು ದಲಿತರನ್ನು ಕಾರಿಗೆ ಕಟ್ಟಿಹಾಕಿ ದೊಣ್ಣೆ ಮತ್ತು ಕಬ್ಬಿಣದ ಸರಳುಗಳಿಂದ ಥಳಿಸಿತು. ಊನಾ ಪಟ್ಟಣಕ್ಕೆ ಕರೆತಂದು ಎಲ್ಲರೆದುರು ಬಟ್ಟೆ ಬಿಚ್ಚಿ ಭೀಕರವಾಗಿ ಬಾರಿಸಿದ್ದರು. ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದರು. ಕೇಸರಿ ಪಡೆಯ ಈ ದುಂಡಾವರ್ತನೆಯನ್ನು ಖಂಡಿಸಿ ಗುಜರಾತ್‌ನಲ್ಲಿ ದಲಿತರು ಬೀದಿಗಿಳಿದಿದ್ದರು. ಸತ್ತ ಪ್ರಾಣಿಗಳ ಕಳೇಬರವನ್ನು ರಸ್ತೆಗೆ ಎಸೆದಿದ್ದರು. ರಸ್ತೆ ರಸ್ತೆಗಳಲ್ಲಿ ಕಳೇಬರಗಳನ್ನು ಎಸೆದಿದ್ದರಿಂದ ಒಂದು ವಾರ ಕಾಲ ಗುಜರಾತ್ ಗಬ್ಬು ನಾರತೊಡಗಿತ್ತು!
ದೌರ್ಜನ್ಯ ಅಪಮಾನಗಳಿಂದ ನೊಂದ ದಲಿತ ಯುವಕರು ಆತ್ಮಹತ್ಯೆಗೆ ಯತ್ನಿಸುತ್ತಾರೆ. ಅದರಲ್ಲಿ ಒಬ್ಬ ಸತ್ತೇ ಹೋಗುತ್ತಾನೆ. ಅಹಮದಾಬಾದ್‌ನಿಂದ ಊನಾವರೆಗೆ ಕೈಗೊಂಡ ದಲಿತ ಅಸ್ಮಿತೆ ಯಾತ್ರೆಯು ಐತಿಹಾಸಿಕ ಘಟನೆ. ಸತ್ತ ಪ್ರಾಣಿಗಳ ವಿಲೇವಾರಿ ಮಾಡುವುದಿಲ್ಲ ಎಂದು ದಲಿತರು ಪ್ರತಿಜ್ಞೆ ಕೈಗೊಳ್ಳುತ್ತಾರೆ. ದಲಿತರ ಮೇಲೆ ಬಾಂಬ್ ಎಸೆದು ದಾಳಿ ಮಾಡಲಾಗುತ್ತದೆ. ದಲಿತರ ಮೇಲೆಯೇ ಎಫ್‌ಐಆರ್ ಹಾಕಲಾಗುತ್ತದೆ. ಬಿಜೆಪಿ ಸರ್ಕಾರ ದಲಿತರನ್ನು ದಮನ ಮಾಡಲು ಯತ್ನಿಸಿದ ರೀತಿ ಅದು. ದನದ ವಿಚಾರದಲ್ಲಿ ದಲಿತರು ಸಿಡಿದೆದ್ದರಿಂದ ಬಿಜೆಪಿ ಚುನಾವಣೆಗಳಲ್ಲಿ ಮತ್ತೆ ಗೆಲ್ಲುತ್ತದೆ.
ಪ್ರಕರಣದ 41 ಆಪಾದಿತರ ಪೈಕಿ ನಾಲ್ವರು ಊನಾ ಪೊಲೀಸ್ ಠಾಣೆಯ ಪೊಲೀಸರಾಗಿದ್ದರು. ಒಬ್ಬ ಸಬ್ ಇನ್ಸ್ ಪೆಕ್ಟರ್ ನಿರ್ಮಲ್ ಸಿನ್ಹ್ ಝಲಾ ವಿಚಾರಣೆಯ ಅವಧಿಯಲ್ಲೇ ಮೃತಪಟ್ಟಿದ್ದನು. ಉಳಿದ ಮೂವರು ಖುಲಾಸೆಯಾಗಿದ್ದಾರೆ.
ಅಪಾದಿತರು ಇನ್ನೂ ಬಹಳ ಮಂದಿ ಇದ್ದರು. ಆದರೆ ದೂರಿನಲ್ಲಾಗಲಿ, ಸಾಕ್ಷ್ಯ ಪುರಾವೆಗಳಲ್ಲಾಗಲಿ, ಅವರ ಅಪರಾಧವನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಅವರು ದಂಡನೆಯಿಂದ ತಪ್ಪಿಸಿಕೊಂಡಿದ್ದಾರೆ.
ತೀರ್ಪು ಅತ್ಯಂತ ದುಃಖದಾಯಿ ಆಗಿದ್ದು, ಇದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು. ಅಗತ್ಯ ಬಿದ್ದರೆ ಸುಪ್ರೀಮ್ ಕೋರ್ಟಿಗೂ ಹೋಗುತ್ತೇವೆ ಎಂದು ದೂರುದಾರ ಮತ್ತು ಸಂತ್ರಸ್ತರಲ್ಲಿ ಒಬ್ಬರಾದ ವಾಶ್ರಮ್ ಸರವಯ್ಯಾ ಅಸಮಾಧಾನ ಪ್ರಕಟಿಸಿದ್ದಾರೆ.
ತೀರ್ಪು ಸಮಾಧಾನಕರವಾಗಿಲ್ಲ, ನಮ್ಮ ಮೇಲೆ ಜರುಗಿದ ದೌರ್ಜನ್ಯವನ್ನು ಇಡೀ ದೇಶವೇ ನೋಡಿದೆ. ಪ್ರಪಂಚದ ಗಮನಕ್ಕೆ ಬಂದಿದೆ ಎಂದಿದ್ದಾರೆ, ವಾಶ್ರಮ್ ಸರವಯ್ಯ ಅವರ ತಂದೆ ಬಾಲು ಸರವಯ್ಯಾ.
ಈ ಅಮಾನುಷ ದೌರ್ಜನ್ಯದ ಘಟನೆಯ ನಂತರ 2018ರಲ್ಲಿ, ವಾಶ್ರಮ್ ತನ್ನ ಸೋದರ ಮತ್ತು ಇತರೆ ಬಂಧುಗಳೊಂದಿಗೆ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮಕ್ಕೆ ಶರಣಾಗುತ್ತಾನೆ. ಘಟನೆಯ ನಂತರವೂ ಪೀಡಿತರಿಗೆ ಸರ್ಕಾರದಿಂದ ಸೂಕ್ತ ರಕ್ಷಣೆ ದೊರೆಯಲಿಲ್ಲವೆಂದು ದೂರಿರುತ್ತಾನೆ.
ತನಿಖೆ ನಡೆಸಿದ ಗುಜರಾತ್ ಸಿಐಡಿ 41 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುತ್ತದೆ. ಕೊಲೆ ಪ್ರಯತ್ನ, ಕ್ರಿಮಿನಲ್ ಸಂಚು, ತೀವ್ರವಾಗಿ ಗಾಯಗೊಳಿಸುವ ಪ್ರಯತ್ನ, ಡಕಾಯಿತಿ, ಅಪಹರಣ, ಅಕ್ರಮ ಬಂಧನ, ಗಲಭೆ, ಅಪಾಯಕರ ಹತಾರುಗಳ ಬಳಕೆ, ಫೋರ್ಜರಿ, ಸಾಕ್ಷ್ಯಪುರಾವೆ ನಾಶ, ಕ್ರಿಮಿನಲ್ ಬೆದರಿಕೆ, ದಲಿತರ ಮೇಲೆ ದೌರ್ಜನ್ಯದ ಕೇಸುಗಳನ್ನು ದಾಖಲಿಸಿಕೊಳ್ಳಲಾಗಿತ್ತು.
ಪೀಡಿತರಿಗೆ ನೌಕರಿ, ಪರಿಹಾರ ಧನ, ಜಮೀನು ನೀಡುವುದಾಗಿ ತಾನು ನೀಡಿದ್ದ ಯಾವ ಭರವಸೆಯನ್ನೂ ಗುಜರಾತ್ ಸರ್ಕಾರ ಈಡೇರಿಸಲಿಲ್ಲ.
ಪ್ರಚಂಡ ಮಾತಿನ ಮಲ್ಲರಾದ ಮೋದಿಯವರು ಹಲವು ವಿಷಯಗಳ ಕುರಿತು ಓತಪ್ರೋತವಾಗಿ ‘ಮನ್ ಕೀ ಬಾತ್’ ಆಡುತ್ತಾರೆ. ಎರಡೂ ಕೈಗಳನ್ನು ಹಲವು ಭಂಗಿಗಳಲ್ಲಿ ಎತ್ತಿ ಇಳಿಸಿ ಭಾಷಣಗಳನ್ನು ಕುಟ್ಟಿ ಕೆಡವುತ್ತಾರೆ. ಆದರೆ ದೇಶವನ್ನು ಸಮಾಜವನ್ನು ಸುಡುವ ಹಲವು ವಿಷಯಗಳ ಕುರಿತು ತಿಂಗಳುಗಟ್ಟಲೆ ಮೌನ ತಳೆಯುತ್ತಾರೆ. ಈ ಮಹಾಮೌನಗಳ ಹಿಂದಿನ ರಹಸ್ಯ ಏನಿರುತ್ತದೆಂದು ಯಾವಾಗಲಾದರೊಮ್ಮೆ ‘ಮನ್ ಕೀ ಬಾತ್’ ನಲ್ಲಿ ದೇಶವಾಸಿಗಳಿಗೆ ಜ್ಞಾನೋದಯ ಮಾಡಿಸುವ ಕೃಪೆ ತೋರಬೇಕು.
ರೋಹಿತ್ ವೇಮುಲನ ಆತ್ಮಹತ್ಯೆಯ ದುರಂತ ದೇಶದ ಆತ್ಮಸಾಕ್ಷಿಯನ್ನು ಕೆಣಕಿತ್ತು. ಆದರೆ ಮೋದಿಯವರು ಬಾಯಿ ಬಿಡಲು ಬಹುಕಾಲ ಬೇಕಾಯಿತು. ಗುಜರಾತಿನ ಊನಾದಲ್ಲಿ ಘಟನೆ ಕುರಿತು ಅವರು ತುಟಿ ತೆರೆದದ್ದು, ಪ್ರಕರಣ ನಡೆದ ಒಂದು ತಿಂಗಳ ನಂತರ.
ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ ಆದಿವಾಸಿಗಳು-ಬುಡಕಟ್ಟು ಜನರ ಪ್ರಮಾಣ ದುಪ್ಪಟ್ಟಿಗಿಂತ ಹೆಚ್ಚು. ಶೇ. 14.8. ಹಿಂದುತ್ವವು ದಲಿತರನ್ನು ದೂರವಿಟ್ಟು ಆದಿವಾಸಿ-ಬುಡಕಟ್ಟು ಜನರನ್ನು ತನ್ನ ಹುನ್ನಾರಗಳಿಗೆ ಬಳಸಿಕೊಂಡು ಬಂದಿದೆ. ಎಪ್ಪತ್ತರ ದಶಕದಲ್ಲಿ ಗುಜರಾತಿನಲ್ಲೂ ದಲಿತ ಪ್ಯಾಂಥರ್ ತಲೆಯೆತ್ತಿತು. ಕೆಲವೇ ವರ್ಷಗಳಲ್ಲಿ ಶಿಥಿಲಗೊಂಡು ಕರಗಿ ಹೋಯಿತು.
ನವಸರ್ಜನ್ ಟ್ರಸ್ಟ್ 2013ರಲ್ಲಿ 1,589 ಹಳ್ಳಿಗಳ ಸಮೀಕ್ಷೆ ನಡೆಸಿತು. ವರದಿಯ ಪ್ರಕಾರ ಅರ್ಧಕ್ಕೂ ಹೆಚ್ಚು ಸಂಖ್ಯೆಯ ಹಳ್ಳಿಗಳಲ್ಲಿ ಬಾವಿ, ದೇವಾಲಯ, ಚಹಾ ಅಂಗಡಿ, ಪಂಚಾಯತ್ ಕಚೇರಿಗಳು, ಕ್ಷೌರದ ಮಳಿಗೆಗಳು, ಮಧ್ಯಾಹ್ನದ ಬಿಸಿಯೂಟ ದಲಿತರ ಪಾಲಿಗೆ ಎಟುಕದಷ್ಟು ದೂರ ಉಳಿದಿವೆ. ಪರಿಸ್ಥಿತಿಯಲ್ಲಿ ಈಗಲೂ ಯಾವ ಬದಲಾವಣೆಯೂ ಆಗಿಲ್ಲ.
ಗುಜರಾತ್ ಎಲ್ಲ ಗುಜರಾತಿಗರ ಪಾಲಿಗೆ ಅನುಕರಣೀಯ ಅಭಿವೃದ್ಧಿ ಮಾದರಿ ಆಗಿಲ್ಲ. ಗುಜರಾತಿನ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ತಮ್ಮ ರಾಜ್ಯವು ಅಭಿವೃದ್ಧಿಗೊಂದು ಮಾದರಿ ಎಂದು ಎದೆ ಉಬ್ಬಿಸಿ ಸಾರಿದ್ದರು. ಆದರೆ ಅವರು ಕೈಗೊಂಡ ಸಾರ್ವಜನಿಕ ನೀತಿ ನಿರ್ಧಾರಗಳು ಮತ್ತು ಅನುಸರಿಸಿದ ರಾಜಕಾರಣವು ಅಸಮಾನತೆಗಳನ್ನು ಇನ್ನಷ್ಟು ಮತ್ತಷ್ಟು ಹಿಗ್ಗಿಸಿದವೇ ವಿನಾ ಕುಗ್ಗಿಸಲಿಲ್ಲ. ಪ್ರಭುತ್ವವು ಕಾರ್ಪೊರೇಟ್ ವಲಯದೊಂದಿಗೆ ಶಾಮೀಲಾಗುವುದು ಗುಜರಾತಿನ ಹಳೆಯ ಪರಂಪರೆ. ಮೋದಿಯವರ ಹಯಾಮಿನಲ್ಲಿ ಈ ಪರಂಪರೆ ರಭಸಗತಿ ಗಳಿಸಿತು. ದೈಹಿಕ ಶ್ರಮ ಅಗ್ಗವಾಯಿತು, ಉದ್ಯಮಗಳಿಗೆ ಭೂ ಸ್ವಾಧೀನ ಸುಲಭ ದರಕ್ಕೆ ಸಲೀಸಾಗಿ ದಕ್ಕಿತು. ತೆರಿಗೆ ರಿಯಾಯಿತಿಗಳ ಮಳೆ ಸುರಿಯಿತು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಶಿಕ್ಷಣ ಮತ್ತು ಸ್ವಾಸ್ಥ್ಯ ವಲಯಗಳಿಗೆ ಗುಜರಾತ್ ಸರ್ಕಾರ ಮಾಡಿದ ವೆಚ್ಚ ಕಡಿಮೆ. ಮೋದಿಯವರ ಈ ತೆರನಾದ ಆರ್ಥಿಕ-ರಾಜಕಾರಣದ ಲಾಭ ಪಡೆದದ್ದು ಗುಜರಾತಿನ ಮಧ್ಯಮ ಮತ್ತು ನವಮಧ್ಯಮ ವರ್ಗಗಳು.
ಮೋದಿಯವರ ಗೆಲುವಿನ ಬೀಗದ ಕೈಗಳು ಈ ವರ್ಗಗಳು. ಶೇ.30ರಷ್ಟಿರುವ ಮುಸಲ್ಮಾನರು, ದಲಿತರು, ಆದಿವಾಸಿಗಳು ಈ ಗುಜರಾತ್ ಮಾದರಿಯ ವಿಕಾಸದಿಂದ ಬಹುತೇಕ ಹೊರಗೆ ಉಳಿದರು. ವಿಕಾಸವಿಲ್ಲದ ಬೆಳವಣಿಗೆ ಮತ್ತು ಸಾಮಾಜಿಕ-ರಾಜಕೀಯ ಧ್ರುವೀಕರಣವೇ ಗುಜರಾತ್ ಮಾದರಿ ಎನ್ನುತ್ತಾರೆ ಪ್ರಸಿದ್ಧ ರಾಜಕೀಯ-ಸಾಮಾಜಿಕ ವಿಶ್ಲೇಷಕ ಕ್ರಿಸ್ಟೋಫೆ ಜಫರ್ಲೋ.
1970ರಲ್ಲಿ ಜೀನಾಭಾಯಿ ದರ್ಜಿ ಮತ್ತು ಮಾಧವ ಸಿನ್ಹ ಸೋಲಂಕಿಯ ಆಗಮನದ ತನಕ ಕಾಂಗ್ರೆಸ್ ಪಕ್ಷದಲ್ಲಿ ಸರ್ದಾರ ವಲ್ಲಭ ಭಾಯಿ ಪಟೇಲ್, ಕೆ.ಎಂ.ಮುನ್ಷಿ, ಮುರಾರ್ಜಿ ದೇಸಾಯಿ, ಗುಲ್ಜಾರಿಲಾಲ್ ನಂದಾ ಅವರಂತಹ ಹಿರಿಯ ಕಾಂಗ್ರೆಸಿಗರ್ಯಾರೂ ದಲಿತರ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ದರ್ಜಿ ಮತ್ತು ಸೋಲಂಕಿ 1972ರಲ್ಲಿ ಅತ್ಯಂತ ಬಲಿಷ್ಠ ಜಾತಿ ಮೈತ್ರಿಯಾದ KHAMನ್ನು (ಕ್ಷತ್ರಿಯ, ಹರಿಜನ, ಆದಿವಾಸಿ ಹಾಗೂ ಮುಸ್ಲಿಂ) ಕಟ್ಟಿ ನಿಲ್ಲಿಸಿದರು. 1980ರ ವಿಧಾನಸಭಾ ಚುನಾವಣೆಯಲ್ಲಿ 141 ಮತ್ತು 1985ರಲ್ಲಿ ಕಾಂಗ್ರೆಸ್ ಪಕ್ಷ 149 ಸೀಟು ಗೆದ್ದು ವಿಕ್ರಮ ಸ್ಥಾಪಿಸಿತ್ತು.
ಆದರೆ, 1995ರಿಂದ ಗುಜರಾತಿನಲ್ಲಿ ಬಿಜೆಪಿಗೆ ಸೋಲೇ ಇಲ್ಲ. ಮೋದಿ ನಿರ್ಮಿತ ಕೇಸರಿ ಅಚ್ಚಿನ ಧಬಾಧುಬಿಯಲ್ಲಿ ಗುಜರಾತಿನ ಇತರೆ ರಾಜಕೀಯ ರಂಗುಗಳು ಕರಗಿ ಹೋಗಿ ದಶಕಗಳೇ ಉರುಳಿವೆ. ಊನಾ ಪ್ರಕರಣದ ನಂತರ ಸಿಡಿದ ದಲಿತ ಪ್ರತಿಭಟನೆ ಮತ್ತು ಹೊಮ್ಮಿದ ಜಿಗ್ನೇಶ್ ಮೆವಾನಿ ನಾಯಕತ್ವ ಆಳುವ ಬಿಜೆಪಿಯನ್ನು ತುಸುಮಟ್ಟಿಗಾದರೂ ಅಧೀರಗೊಳಿಸಿತ್ತು. ಅವರನ್ನು ಹಣಿಯುವ ಸರ್ವಪ್ರಯತ್ನಗಳನ್ನೂ ಬಿಜೆಪಿ ಸರ್ಕಾರ ನಡೆಸಿತು.
ದಲಿತರ ವಿರುದ್ಧ ದೌರ್ಜನ್ಯದ ಈ ಕುಖ್ಯಾತ ಪ್ರಕರಣದ ವಿಚಾರಣೆ 2019ರ ತನಕ ನನೆಗುದಿಯ ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು. ತ್ವರಿತ ವಿಚಾರಣೆ ನಡೆಸುವಂತೆ ಆಗ್ರಹಪಡಿಸಿ ಊನಾ ಪೀಡಿತರು ಆಗ್ರಹಿಸಿದ್ದರು. ವಿಚಾರಣೆ ನ್ಯಾಯಯುತವಾಗಿ ನಡೆದಿಲ್ಲವೆಂಬ ಪೀಡಿತರ ದೂರಿನಲ್ಲಿ ಹುರುಳಿದೆ. ಪೀಡಿತರು ಮೌಖಿಕ ನಿವೇದನೆಯ ಅವಕಾಶವನ್ನು ನ್ಯಾಯಾಲಯ ಮತ್ತೆ ಮತ್ತೆ ತಿರಸ್ಕರಿಸಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಮೂಲಕ ಲಿಖಿತವಾಗಿ ಸಲ್ಲಿಸಿದರೆ ಸಾಕೆಂದಿತ್ತು.
ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿದ್ದ ಕಿರಣ್ ಸಿಂಗ್ ದರ್ಬಾರ್ ಎಂಬುವನನ್ನು 2016ರಲ್ಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಪೊಲೀಸ್ ಇನ್ಸ್ ಪೆಕ್ಟರ್ ನಿರ್ಮಲ್ ಸಿಂಗ್ ಝಲಾ, ನಿತಿನ್ ಕೊಠಾರಿ, ನಟವರಸಿಂಗ್ ಮೆರ್ ಹಾಗೂ ನರೇಂದ್ರ ಪಾಂಡೆ ಎಂಬ ಮತ್ತೊಬ್ಬ ಸಬ್ ಇನ್ಸ್‌ಪೆಕ್ಟರ್‌ನನ್ನು ಕೂಡ ಆಗಲೇ ಜಾಮೀನಿನ ಮೇರೆಗೆ ಹೊರಬಿಟ್ಟಿದ್ದರು. ನಾಗಜಿಭಾಯಿ ವಣಿಯಾಗೆ 2020ರಲ್ಲಿ ಜಾಮೀನು ದೊರೆತಿತ್ತು. ನಾಲ್ವರು ಇತರೆ ಆಪಾದಿತರಿಗೆ 2019ರಲ್ಲೇ ಷರತ್ತುಬದ್ಧ ಜಾಮೀನು ಸಿಕ್ಕಿತ್ತು.
ರಮೇಶ್ ಸರವಯ್ಯಾ ಮತ್ತು ಅಶೋಕ್ ಸರವಯ್ಯಾ ಎಂಬ ಇಬ್ಬರು ಪೀಡಿತರ ಮೇಲೆ 2018ರ ಏಪ್ರಿಲ್ ನಲ್ಲಿ ಹಲ್ಲೆ ನಡೆದಿತ್ತು. ಹಲ್ಲೆ ನಡೆಸಿದವನು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕಿರಣ್ ಸಿಂಗ್ ದರ್ಬಾರ್. ಕೇಸನ್ನು ವಾಪಸು ಪಡೆಯಬೇಕೆಂದು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದನು. ಈ ಪೀಡಿತರು ತಮಗೆ ವಿಷ ಕೊಟ್ಟು ಕೊಂದು ಹಾಕುವಂತೆ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದ್ದರು.
ಹತ್ತು ವರ್ಷಗಳ ನಂತರ ಕಡೆಗೂ ತೀರ್ಪು ಹೊರಬಿದ್ದಿದೆ. ಆದರೆ ದಲಿತ ದಮನಿತರಿಗೆ ನ್ಯಾಯ ಆಕಾಶಕುಸುಮ ಎಂಬ ಕಟುಸತ್ಯವನ್ನು ಅದು ಸಾರಿದೆ.




