ಮಲಯಾಳಂ ಅಭಿವೃದ್ಧಿ ಮಸೂದೆಯು ಕೇರಳಿಗರಲ್ಲಿ ಅಭಿಮಾನವನ್ನು ಮೂಡಿಸಬೇಕೇ ವಿನಾ ದುರಭಿಮಾನ ಬಿತ್ತುವುದು ಸಲ್ಲದು. ಕಾಸರಗೋಡು ಕನ್ನಡಿಗರ ಭಾಷಾ ಅಲ್ಪಸಂಖ್ಯಾತ ಹಕ್ಕುಗಳಿಗೆ ಸಂವಿಧಾನದ ರಕ್ಷಣೆಯಿದೆ ಎಂಬುದನ್ನು ಕೇರಳ ಸರ್ಕಾರ ಮರೆಯದಿರಲಿ. ಕರ್ನಾಟಕದ ಮೇಲ್ಪಂಕ್ತಿಯನ್ನು ಅನುಸರಿಸಲಿ, ಮಲಯಾಳಂ ಹೇರಿಕೆ ನಿಲ್ಲಿಸಲಿ…
ಕೇರಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ ಹತ್ತನೆಯ ತರಗತಿವರೆಗಿನ ಮಕ್ಕಳಿಗೆ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆ ಕಡ್ಡಾಯ ಆಗಲಿದೆ. ಆಡಳಿತದಿಂದ ಮೊದಲುಗೊಂಡು ನ್ಯಾಯಾಂಗ, ಮಾಹಿತಿ ತಂತ್ರಜ್ಞಾನ ವಲಯದ ತನಕ ಮಲಯಾಳಂ ಭಾಷೆಯನ್ನು ಅಮಲುಗೊಳಿಸಿ ಅಭಿವೃದ್ಧಿಪಡಿಸಲಾಗುವುದು. ಮಲಯಾಳಂ ಕೇರಳದ ಏಕೈಕ ಅಧಿಕೃತ ಭಾಷೆಯಾಗಲಿದೆ.
ಈ ಸಂಬಂಧದಲ್ಲಿ 2025ರ ಮಲಯಾಳಂ ಭಾಷಾ ಮಸೂದೆಯನ್ನು ಕೇರಳದ ವಿಧಾನಸಭೆ ಅಂಗೀಕರಿಸಿದೆ. ಈ ಮಸೂದೆಯ ಹೆಸರೇ ಮಲಯಾಳಂ ಅಭಿವೃದ್ಧಿ ಮಸೂದೆ. ಮಲಯಾಳಂ ಕೇರಳ ನೆಲದ ಭಾಷೆ. ತನ್ನ ನೆಲದ ಭಾಷೆಯ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೇರಳ ಸರ್ಕಾರ ಜರುಗಿಸುವುದು ಸಹಜ ಸ್ವಾಭಾವಿಕ. ಆದರೆ ಈ ಕ್ರಮಗಳು ಭಾರತದ ಗಣರಾಜ್ಯ ಒಕ್ಕೂಟವು ಅಳವಡಿಸಿಕೊಂಡಿರುವ ಒಕ್ಕೂಟ ತತ್ವಗಳ ಸಂವಿಧಾನದ ಮೇರೆಗಳನ್ನು ಮೀರಬಾರದು.
ಕೇರಳದ ಅಧಿಸೂಚಿತ ಪ್ರದೇಶಗಳಲ್ಲಿನ ತಮಿಳು ಮತ್ತು ಕನ್ನಡ ಭಾಷಾ ಅಲ್ಪಸಂಖ್ಯಾತರು ಕೇರಳ ರಾಜ್ಯ ಸಚಿವಾಲಯ, ಇಲಾಖಾ ಮುಖ್ಯಸ್ಥರು ಹಾಗೂ ಸ್ಥಳೀಯ ಕಚೇರಿಗಳೊಂದಿಗೆ ತಮ್ಮ ತಮ್ಮ ಭಾಷೆಗಳಲ್ಲೇ ವ್ಯವಹರಿಸಬಹುದು ಮತ್ತು ಈ ಸಂಬಂಧದ ಜವಾಬುಗಳನ್ನು ಆಯಾ ಭಾಷೆಗಳಲ್ಲೇ ನೀಡಲಾಗುವುದು. ರಾಜ್ಯದ ಶಾಲೆಗಳಲ್ಲಿ ಓದುತ್ತಿರುವ ಮಲೆಯಾಳಿ ಮಾತೃಭಾಷೆಯಲ್ಲದ ವಿದ್ಯಾರ್ಥಿಗಳು, ಆಯಾ ಶಾಲೆಗಳಲ್ಲಿ ಲಭ್ಯವಿರುವ ಇತರೆ ಭಾಷೆಗಳಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಬಹುದು. ಈ ಕುರಿತು ರಾಷ್ಟ್ರೀಯ ಶೈಕ್ಷಣಿಕ ಪಠ್ಯಕ್ರಮದ ಮಾರ್ಗಸೂಚಿಗಳನ್ನು ಅನುಸರಿಸಬಹುದು ಎಂದು 2025ರ ಮಲಯಾಳಂ ಅಭಿವೃದ್ಧಿ ಮಸೂದೆ ವಿವರಿಸಿದೆ. ಕೇರಳದಲ್ಲಿ ಓದುತ್ತಿರುವ ಮಲಯಾಳಂ ಮಾತೃಭಾಷೆಯಲ್ಲದ ಇತರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ಅಥವಾ ವಿದೇಶೀ ವಿದ್ಯಾರ್ಥಿಗಳಿಗೆ ಹೈಯರ್ ಸೆಕೆಂಡರಿ, ಒಂಬತ್ತು ಮತ್ತು ಹತ್ತನೆಯ ತರಗತಿಗಳ ಮಲಯಾಳಂ ಪರೀಕ್ಷೆಗಳಿಂದ ವಿನಾಯತಿ ನೀಡಲಾಗಿದೆ.
2015ರಲ್ಲಿ ಇಂತಹುದೇ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಅದಕ್ಕೆ ಕೇಂದ್ರ ಸರ್ಕಾರದ ಸಮ್ಮತಿ ದೊರೆತಿರಲಿಲ್ಲ. ಮಸೂದೆಗಳಿಗೆ ಸಮ್ಮತಿ ನೀಡಿಕೆಯನ್ನು ಅನಿರ್ದಿಷ್ಟ ಕಾಲ ವಿಳಂಬಗೊಳಿಸುವಂತಿಲ್ಲ ಎಂಬ ಸುಪ್ರೀಮ್ ಕೋರ್ಟ್ ತೀರ್ಪಿನ ನಂತರ 2015ರ ಮಸೂದೆಯನ್ನು ಕೇಂದ್ರ ಸರ್ಕಾರ ವಾಪಸು ಕಳಿಸಿತ್ತು. ಆ ನಂತರ ರಾಜ್ಯ ಸರ್ಕಾರ ಮಸೂದೆಯ ಈಗಿನ ಆವೃತ್ತಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿದೆ.
ಯಾವುದೇ ರಾಜ್ಯದಲ್ಲಿನ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಮೂಲಭೂತ ಹಕ್ಕುಗಳನ್ನು ಹೊಂದಿದ್ದಾರೆ. ಸಂವಿಧಾನದ 29 ಮತ್ತು 30ನೆಯ ಕಲಮುಗಳು ಈ ಹಕ್ಕುಗಳನ್ನು ಎತ್ತಿ ಹಿಡಿದಿವೆ. ಇಂತಹ ಅಲ್ಪಸಂಖ್ಯಾತರ ಮಕ್ಕಳಿಗೆ ಅವರದೇ ಮಾತೃಭಾಷೆಯಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಬೇಕೆಂದು ಸಂವಿಧಾನದ 350 ʼಎʼ ಕಲಮು ವಿಧಿಸಿದೆ. ಈ ಹಿತರಕ್ಷಣೆಗಳ ಪಾಲನೆ ಆಗಿದೆಯೇ ಎಂದು ವರದಿ ಮಾಡಲು ವಿಶೇಷಾಧಿಕಾರಿಯನ್ನು ನೇಮಿಸುವ ಅಧಿಕಾರವನ್ನು 350 ಬಿ ಕಲಮು ಕೇಂದ್ರ ಸರ್ಕಾರಕ್ಕೆ ನೀಡಿದೆ.
ಯಾವುದೇ ರಾಜ್ಯವು ಅಲ್ಲಿನ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಚ್ಯುತಿ ಉಂಟು ಮಾಡದೆ ರಾಜ್ಯಭಾಷೆಯ ಅಭಿವೃದ್ಧಿಗೆ ಕೈಗೊಳ್ಳುವ ಕ್ರಮಗಳಿಗೆ ಯಾರ ಆಕ್ಷೇಪಣೆಯೂ ಇರಕೂಡದು. ಆಯಾ ರಾಜ್ಯದ ಆಡಳಿತ ಮತ್ತು ಸಾರ್ವಜನಿಕ ವಲಯಗಳಲ್ಲಿ ಸಂಬಂಧಿಸಿದ ಭಾಷೆಗಳಿಗೆ ನ್ಯಾಯಬದ್ಧ ಸ್ಥಾನ ಸಿಗಲೇಬೇಕು. ಕೇರಳ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ತೆಲಂಗಾಣ ಮುಂತಾದ ಬಹುತೇಕ ರಾಜ್ಯಗಳಲ್ಲಿ ಹಲವು ಭಾಷಾ ಅಲ್ಪಸಂಖ್ಯಾಕ ಜನರನ್ನು ಹೊಂದಿವೆ. ಯಾವುದೇ ಸರ್ಕಾರಗಳ ಭಾಷಾ ನೀತಿಗಳು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸುವಂತಿಲ್ಲ. ಸಂವಿಧಾನವೇ ಕಲ್ಪಿಸಿರುವ ಹಕ್ಕುಗಳಿವು. ಕೇಂದ್ರ ಸರ್ಕಾರದ ಹಿಂದಿ ಭಾಷಾ ಹೇರಿಕೆ ಕೂಡ ಇದೇ ಪರಿಧಿಗೆ ಸೇರುತ್ತದೆ. ರಾಜ್ಯಗಳು ಇಲ್ಲವೇ ಕೇಂದ್ರ ಸರ್ಕಾರ ರೂಪಿಸುವ ಭಾಷಾ ನೀತಿಗಳು ರಾಜ್ಯ ರಾಜ್ಯಗಳ ನಡುವೆ ಘರ್ಷಣೆಗೆ ದಾರಿ ಮಾಡಿಕೊಡಬಾರದು ಎಂಬುದು ಸಂವಿಧಾನದ ಆಶಯ. ಭಾಷೆಗಳು ಮತ್ತು ರಾಜ್ಯಗಳ ನಡುವೆ ಸಾಮರಸ್ಯ ಕಲ್ಪಿಸುವ ಈ ವಿಧಿನಿಷೇಧಗಳನ್ನು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಭಾಷೆಗಳ ಕುರಿತು ಆಯಾ ರಾಜ್ಯ ಸರ್ಕಾರಗಳು ಅಭಿಮಾನ ಬೆಳೆಸಬೇಕೇ ವಿನಾ ದುರಭಿಮಾನಕ್ಕೆ ನೀರೆರೆಯುವುದು ಸರ್ವಥಾ ಸಲ್ಲದು.
ಆದರೆ, ಕೇರಳವು ತನ್ನ ಗಡಿ ಭಾಗದ ಕನ್ನಡ ಶಾಲೆಗಳಲ್ಲೂ ಮಾಧ್ಯಮವಾಗಿ ಮತ್ತು ಪ್ರಥಮ ಭಾಷೆಯನ್ನಾಗಿ ಮಲಯಾಳಂ ಅನ್ನು ಕಡ್ಡಾಯಗೊಳಿಸಿದೆ ಎಂಬುದು ಕನ್ನಡಿಗರ ದೂರು. ಭಾಷಾ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳಿಗೆ ಕುತ್ತು ತರುವ ಕ್ರಮವಿದು ಎಂದು ಕರ್ನಾಟಕ ಸರ್ಕಾರ ವಿರೋಧ ಪ್ರಕಟಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.
“ಕೇರಳ ಸರ್ಕಾರದ ನೀತಿಯಿಂದ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯಲ್ಲಿ ಶಿಕ್ಷಣ ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ಈ ನೀತಿಯು ದಮನ ಮಾಡಲಿದೆ. ಇಂತಹ ನಡೆಯನ್ನು ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ. ಕಾಸರಗೋಡು ಆಡಳಿತಾತ್ಮಕವಾಗಿ ಕೇರಳಕ್ಕೆ ಸೇರಿದ್ದರೂ, ಭಾವನಾತ್ಮಕವಾಗಿ ಕರ್ನಾಟಕಕ್ಕೆ ಸೇರಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ, ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು” ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ ನಿರಾಧಾರ ಅಲ್ಲ ಎಂಬುದನ್ನು ಕೇರಳ ಸರ್ಕಾರ ತಿಳಿಯಬೇಕು. 2025ರ ಮಲಯಾಳಂ ಅಭಿವೃದ್ಧಿ ಮಸೂದೆಯು ಮಲಯಾಳಂ ಮಾತೃಭಾಷೆ ಅಲ್ಲದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಮಕ್ಕಳ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡಿದೆ. ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯಾಗಿ ಅಲ್ಲದೆ ಹೋದರೆ, ದ್ವಿತೀಯ ಭಾಷೆಯಾಗಿ ಕಲಿಯುವ ಅವಕಾಶವನ್ನು ಈ ಮಸೂದೆ ಕನ್ನಡದ ಅಥವಾ ಇತರೆ ಮಾತೃಭಾಷೆಯ ಮಕ್ಕಳಿಗೆ ಕಲ್ಪಿಸಬೇಕಿತ್ತು. ಇಂತಹ ಅವಕಾಶವನ್ನು ಕರ್ನಾಟಕ ಇತರೆ ಮಾತೃಭಾಷಾ ಮಕ್ಕಳಿಗೆ ನೀಡಿದೆ. ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂಬುದಾಗಿ ಕುವೆಂಪು ಬಹು ಹಿಂದೆಯೇ ಬರೆದ ನಾಡಗೀತೆಯು ಕನ್ನಡತನದ ಗಡಿರೇಖೆಗಳನ್ನು ಗುರುತಿಸಿದೆ. ಜನಾಂಗೀಯ ಮತ್ತು ಭಾಷಾ ಸಾಮರಸ್ಯವನ್ನು ಎತ್ತಿ ಹಿಡಿದಿದೆ.
ಕರ್ನಾಟಕದ ಈ ನಡೆ ಕೇರಳಕ್ಕೆ ಮೇಲ್ಪಂಕ್ತಿ ಆಗಬೇಕು. ಪಿಣರಾಯಿ ವಿಜಯನ್ ಈ ಸಕಾರಣ ತಕರಾರನ್ನು ಪ್ರತಿಷ್ಠೆಯ ಪ್ರಶ್ನೆ ಆಗಿಸಿಕೊಳ್ಳದೆ ಮಸೂದೆಗೆ ಅಗತ್ಯ ತಿದ್ದುಪಡಿ ತರಬೇಕು. ‘ಬಹುಭಾಷಾ ಭಾರತ’ದ ಬಾವುಟವನ್ನು ಎತ್ತಿ ಹಿಡಿಯಬೇಕು.
ಸ್ವಾತಂತ್ರ್ಯಾನಂತರ ರಾಜ್ಯಗಳ ಮರುವಿಂಗಡಣೆ ಭಾಷಾವಾರು ಆದಾಗಲೂ ಕಾಸರಗೋಡು ಪ್ರದೇಶ ಕೇರಳಕ್ಕೆ ಸೇರಿಹೋಗಿತ್ತು. ಮಹಾರಾಷ್ಟ್ರ-ಕರ್ನಾಟಕ-ಕೇರಳ ರಾಜ್ಯಗಳ ನಡುವಿನ ಗಡಿವಿವಾದ ಇತ್ಯರ್ಥಕ್ಕಾಗಿ ನೇಮಕಗೊಂಡಿದ್ದ ಮಹಾಜನ್ ಆಯೋಗದ ವರದಿಯು ಕಾಸರಗೋಡು ಭಾಗವನ್ನು ಕರ್ನಾಟಕಕ್ಕೆ ಸೇರಿಸುವಂತೆ 1967ರಲ್ಲಿ ಶಿಫಾರಸು ಮಾಡಿತ್ತು. ಕಾಸರಗೋಡು ಕನ್ನಡದ ನೆಲವೆಂದು ರುಜುವಾತುಪಡಿಸಿತ್ತು. ಕಾಸರಗೋಡು ತಾಲ್ಲೂಕಿನ ಚಂದ್ರಗಿರಿ-ಪಯಸ್ವಿನೀ ನದಿಗಳ ದಕ್ಷಿಣದ ಅಭಯಾರಣ್ಯ ಮತ್ತು ಆಡೂರು ಅರಣ್ಯಸಾಲಿನ ದಕ್ಷಿಣದ ಎಂಟು ಗ್ರಾಮಗಳ ವಿನಾ ಉಳಿದ ಭಾಗವೆಲ್ಲ ಮೈಸೂರು ರಾಜ್ಯಕ್ಕೆ ಸೇರತಕ್ಕದ್ದು ಎಂದು ಮಹಾಜನ್ ಆಯೋಗ ವರದಿ ಹೇಳಿತ್ತು. ಕನ್ನಡಿಗರೇ ಇಲ್ಲಿನ ಬಹುಭಾಷಿಕರೆಂದು ಸಾರಿತ್ತು. ಆದರೆ ಈ ಶಿಫಾರಸು ಜಾರಿಗೆ ಬಂದಿಲ್ಲ. ತಮ್ಮ ಮೇಲೆ ದಬ್ಬಾಳಿಕೆ ನಡೆಸಿ ಮಲಯಾಳಂ ಭಾಷೆಯನ್ನು ಹೇರಲಾಗುತ್ತಿದೆ. ಅಲ್ಲಿನ ಜಾನಪದ ಕಲೆಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಹತ್ತು ವರ್ಷಗಳ ಹಿಂದಿನ ವರದಿಗಳ ಪ್ರಕಾರ ಕಾಸರಗೋಡು ತಾಲ್ಲೂಕು ಮಂಜೇಶ್ವರ ವ್ಯಾಪ್ತಿಯಲ್ಲಿ ಕನ್ನಡವೊಂದೇ ಮಾಧ್ಯಮವಾಗಿರುವ 61 ಪ್ರಾಥಮಿಕ ಶಾಲೆಗಳಿದ್ದವು. ಮಲಯಾಳ ಮಾಧ್ಯಮ ಶಾಲೆಗಳ ಸಂಖ್ಯೆ ಕೇವಲ ಐದು ಆಗಿತ್ತು. ಕುಂಬಳೆ ಸೀಮೆಯಲ್ಲಿ ಕನ್ನಡ ಮಾಧ್ಯಮದ 63 ಶಾಲೆಗಳಿದ್ದವು. ಚಂದ್ರಗಿರಿಯ ದಕ್ಷಿಣ ಭಾಗದಲ್ಲಿದ್ದ ಕನ್ನಡ ಮಾಧ್ಯಮ ಶಾಲೆಗಳು 64. ಭಾಷಾ ಅಲ್ಪಸಂಖ್ಯಾಕರಾಗಿರುವ ಕನ್ನಡಿಗರ ಸಾಂವಿಧಾನಿಕ ಹಕ್ಕುಗಳನ್ನು ಕೇರಳ ಕಾಪಾಡಬೇಕೇ ವಿನಾ ಕೊಲ್ಲಕೂಡದು.





