ಕರ್ನಾಟಕ ರಾಜ್ಯ ಇದುವರೆಗೆ ಒಬ್ಬ ಮಹಿಳಾ ಸ್ಪೀಕರ್ ಕಂಡಿದೆ. ಗುಂಡ್ಲುಪೇಟೆಯ ಶಾಸಕಿ ಕೆ.ಎಸ್.ನಾಗರತ್ನಮ್ಮ ಅವರು 1972 ರಿಂದ 1978ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ ಚರಿತ್ರೆ ಸೃಷ್ಟಿಸಿದ್ದರು. 1980ರಿಂದ ಮೂರು ವರ್ಷಗಳ ಕಾಲ ಕರ್ನಾಟಕ ವಿಧಾನ ಪರಿಷತ್ತಿಗೆ ಬಸವರಾಜೇಶ್ವರಿ ಅಧ್ಯಕ್ಷರಾಗಿದ್ದರು. ಆ ಪರಂಪರೆ ಅಲ್ಲಿಗೇ ನಿಂತು ಬಿಟ್ಟಿದೆ.
ಇಡೀ ದೇಶದಲ್ಲಿ ಅತ್ಯುತ್ತಮ ವಿಧಾನಪರಿಷತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ವಿಧಾನ ಪರಿಷತ್‌ಗೆ ಮಹಿಳೆಯರೂ ಸಭಾಪತಿಯಾಗಲಿ ಎಂದು ಪರಿಷತ್ ಇತಿಹಾಸ ಬಿಂಬಿಸುವ ಕಿರುಚಿತ್ರ ಬಿಡುಗಡೆ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಅವರ ಆಶಯ ಚೆನ್ನಾಗಿಯೇ ಇದೆ. ಆದರೆ, ರಾಜಕೀಯ ಪಕ್ಷಗಳು, ಅವುಗಳ ಮುಖಂಡರುಗಳು, ಒಂದು ರಾಶಿ ಆಕಾಂಕ್ಷಿಗಳು, ಅದಕ್ಕಾಗಿ ನಾನಾ ಬಗೆಯ ಲಾಬಿ, ಒತ್ತಡ, ಬೆದರಿಕೆ ತಂತ್ರಗಳ ನಡೆಸುವ ಪುರುಷರ ನಡುವೆ ಮಹಿಳೆಯರನ್ನು ಮುಕ್ತ ಮನಸ್ಸಿನಿಂದ ಸಭಾಪತಿ ಅಥವಾ ಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ ಎಂಬುದು ಕನಸಿನ ಮಾತು.
ಕರ್ನಾಟಕ ರಾಜ್ಯ ಇದುವರೆಗೆ ಇಬ್ಬರು ಮಹಿಳಾ ಸ್ಪೀಕರ್ ಕಂಡಿದೆ. ಗುಂಡ್ಲುಪೇಟೆಯ ಶಾಸಕಿ ಕೆ.ಎಸ್.ನಾಗರತ್ನಮ್ಮ ಅವರು 1972 ರಿಂದ 1978ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ ಚರಿತ್ರೆ ಸೃಷ್ಟಿಸಿದ್ದರು. 1980ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಬಸವರಾಜೇಶ್ವರಿ ಅವರು ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಮುನ್ನಡೆಸಿದ್ದರು. ದಾವಣಗೆರೆ ಮತ್ತು ಮಾಯಕೊಂಡದ ಶಾಸಕಿಯಾಗಿದ್ದ ನಾಗಮ್ಮ ಕೇಶವಮೂರ್ತಿ ಅವರು ವಿಧಾನಸಭೆಯ ಉಪಾಧ್ಯಕ್ಷೆ ಮತ್ತು ವಿಧಾನ ಪರಿಷತ್ತಿನ ಉಪಸಭಾಪತಿ ಆಗಿ ಕಾರ್ಯನಿರ್ವಹಿಸಿದ್ದರು. ಆ ಪರಂಪರೆ ಅಲ್ಲಿಗೇ ನಿಂತು ಬಿಟ್ಟಿದೆ. ಅಲ್ಲಿಂದೀಚೆಗೆ ನಲುವತ್ತು ವರ್ಷಗಳಲ್ಲಿ ಅದೆಷ್ಟೋ ಸರ್ಕಾರಗಳು ಬಂದು ಹೋದವು. ಅನೇಕ ಅರ್ಹ ಮಹಿಳೆಯರು ಶಾಸಕಿಯರಾಗಿ, ಸಚಿವೆಯರಾಗಿ ಕೆಲಸ ಮಾಡಿದ್ದಾರೆ. ಆದರೆ, ಅವರನ್ನು ಸಭಾಧ್ಯಕ್ಷರ ಪೀಠದಿಂದ ಬಹು ದೂರವೇ ಇಡಲಾಗಿದೆ. ಸಚಿವ ಸ್ಥಾನ ಕೊಡುವಾಗಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತ್ರ ನೀಡಲಾಗುತ್ತಿದೆ. ಇದೊಂದು ಬಗೆಯ ಪರಂಪರೆಯ ಹೆಸರಿನ ಹುನ್ನಾರವೇ ಸರಿ. ಹಾಗೆ ನೋಡಿದರೆ ಶಾಸಕಿಯಾದ ಮೊದಲ ಅವಧಿಯಲ್ಲಿಯೇ ಬಿಜೆಪಿಯ ಶೋಭಾ ಕರಂದ್ಲಾಜೆ ಅವರನ್ನು ಗ್ರಾಮೀಣಾಭಿವೃದ್ಧಿ ಖಾತೆ ನೀಡಲಾಗಿತ್ತು. ಬದಲಾದ ಸನ್ನಿವೇಶದಲ್ಲಿ ಕೆಳಗಿಳಿದ ಅವರಿಗೆ, ನಂತರ ಇನ್ನೂ ಪ್ರಬಲ ಇಂಧನ ಖಾತೆಯನ್ನು ನೀಡಲಾಗಿತ್ತು. ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಉಮಾಶ್ರೀ ಮಹಿಳಾ ಇಲಾಖೆ ಸಚಿವೆಯಾಗಿದ್ದರೆ, ಈಗ ಲಕ್ಷ್ಮೀ ಹೆಬ್ಬಾಳ್ಕರ್ ಆ ಖಾತೆ ಹೊಂದಿದ್ದಾರೆ. ಬಿಜೆಪಿ -ಕಾಂಗ್ರೆಸ್ ಎರಡೂ ಪಕ್ಷಗಳು ಒಂದು ಮಂತ್ರಿ ಸ್ಥಾನ ಮಾತ್ರ ಮಹಿಳೆಗೆ ನೀಡುವ ನಾಮಕಾವಸ್ಥೆ ಪ್ರಾತಿನಿಧ್ಯ ಮುಂದುವರಿಸಿವೆ.
ಮಹಿಳೆಯರಿಗೆ ಶೇಕಡಾ 33ರಷ್ಟು ರಾಜಕೀಯ ಮೀಸಲಾತಿ ನೀಡುವ ಮಸೂದೆ ಕಾಂಗ್ರೆಸ್ ಪಕ್ಷದ ಕನಸಿನ ಕೂಸು. ಈ ಕನಸನ್ನು ನನಸು ಮಾಡಲು ಪ್ರಾಮಾಣಿಕವಾದ ಪ್ರಯತ್ನ ಮಾಡಿದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ರಾಜಕೀಯ ಮೀಸಲಾತಿ ನೀಡುವ ಮಸೂದೆಯನ್ನು ಮೊದಲ ಬಾರಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು 1989ರಲ್ಲಿಯೇ ಲೋಕಸಭೆಯಲ್ಲಿ ಮಂಡಿಸಿದ್ದರು. ಆದರೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಲು ಸಾಧ್ಯವಾಗಿರಲಿಲ್ಲ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಸ್ಥಾನಗಳಲ್ಲಿ ಶೇಕಡಾ 33ರಷ್ಟನ್ನು ಮಹಿಳೆಯರಿಗೆ ಮೀಸಲಾತಿ ನೀಡುವ ಐತಿಹಾಸಿಕ ಮಸೂದೆ 1993ರಲ್ಲಿ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಕಾಲದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅನುಮೋದನೆಗೊಂಡು ಅನುಷ್ಠಾನಗೊಂಡಿದೆ.
2010ರಲ್ಲಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿರುವ ಮಹಿಳಾ ಮೀಸಲಾತಿ ಮಸೂದೆಯನ್ನೇ ಲೋಕಸಭೆಯಲ್ಲಿ ಮಂಡಿಸಬೇಕಾಗಿತ್ತು. ಅದು ಸಾಧ್ಯವಾಗಿರಲಿಲ್ಲ. ಆದರೆ ನಂತರ ಬಂದ ಮೋದಿಯವರು ಹತ್ತು ವರ್ಷಗಳಲ್ಲಿ ಅದರ ಗೋಜಿಗೆ ಹೋಗಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಗೆ ನಾಲ್ಕು ತಿಂಗಳಿರುವಾಗ ವಿಶೇಷ ಅಧಿವೇಶನ ಕರೆದು ಲೋಕಸಭೆಯಲ್ಲಿ ಮಂಡಿಸಿ ಮಸೂದೆ ಜಾರಿಗೊಳಿಸುವ ಭಾರೀ ನಾಟಕ ನಡೆಯಿತು. ಆದರೆ ಮೂಲ ಮಸೂದೆಯಲ್ಲಿ ಬಹಳಷ್ಟು ತಿದ್ದುಪಡಿ ತಂದಿದ್ದಲ್ಲದೇ, ಲೋಕಸಭೆಯಲ್ಲಿ ಚರ್ಚೆಗಿಡದೇ ಅಂಗೀಕರಿಸಲಾಗಿದೆ. ಅದು ಜಾರಿಯಾಗಲು ಇನ್ನೂ 20 ವರ್ಷ ಕಾಯಬೇಕಿದೆ.
ಮುಂದಿನ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ನಡೆದ ನಂತರವಷ್ಟೇ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಮಸೂದೆಯಲ್ಲಿಯೇ ಹೇಳಿರುವುದರಿಂದ ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಕನಿಷ್ಠ 20 ವರ್ಷ ಬೇಕಾಗಬಹುದು. ದೇಶದಲ್ಲಿ ಮುಂದಿನ ಜನಗಣತಿ 2026ರಲ್ಲಿ ಮತ್ತು ಕ್ಷೇತ್ರ ಮರುವಿಂಗಡಣೆ 2031ರಲ್ಲಿ ನಡೆಯುವ ಸಾಧ್ಯತೆ ಇದೆ. ಆ ನಂತರ ಮಹಿಳೆಯರು ಸಭಾಧ್ಯಕ್ಷ ಸ್ಥಾನದಲ್ಲಿ ಕಾಣಿಸಿಕೊಳ್ಳಬಹುದು ಎಂಬ ದೂರದೂರದ ನಿರೀಕ್ಷೆ ಇಟ್ಟುಕೊಳ್ಳಬಹುದೇನೋ.
ಈ ದೇಶ ಇತಿಹಾಸ ಗಮನಿಸಿದರೆ ಏಕೈಕ ಮಹಿಳಾ ಪ್ರಧಾನಿ ಇಂದಿರಾಗಾಂಧಿಯವರು ಮೂರು ಸಲ ಭಾರತದ ಪ್ರಧಾನಿಯಾಗಿದ್ದರು. ಹಾಗೆಯೇ ಲೋಕಸಭೆಯ ಸ್ಪೀಕರ್ ಪೀಠದಲ್ಲಿ ಕುಳಿತುಕೊಳ್ಳುವ ಅವಕಾಶ ಮೀರಾ ಕುಮಾರ್ ಅವರೊಬ್ಬರಿಗೆ ಮಾತ್ರ ಲಭಿಸಿದೆ. ಅವರು 2009-2014ರವರೆಗೆ ಐದು ವರ್ಷ ಲೋಕಸಭೆಯ ಅಧಿವೇಶನವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಸುಚೇತಾ ಕೃಪಲಾನಿ, ಸುಷ್ಮಾ ಸ್ವರಾಜ್, ಜಯಲಲಿತಾ, ಉಮಾಭಾರತಿ, ರಬಡೀದೇವಿ, ಮಾಯಾವತಿ, ಮಮತಾ ಬ್ಯಾನರ್ಜಿ, ಶೀಲಾ ದೀಕ್ಷಿತ್, ವಸುಂಧರಾ ರಾಜೇ ಸಿಂಧ್ಯ ಮುಖ್ಯಮಂತ್ರಿಗಳಾಗಿ ದೊಡ್ಡ ದೊಡ್ಡ ರಾಜ್ಯಗಳನ್ನು ಮುನ್ನಡೆಸಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ರೇಖಾ ಶರ್ಮ ಆ ಸಾಲಿಗೆ ಸೇರಿದ್ದಾರೆ. ಆದರೆ, ಹೀಗೆ ಅವಕಾಶ ಪಡೆಯುವವರ ಪ್ರಮಾಣ ದಶಕದಿಂದ ಇಳಿಕೆಯಾಗುತ್ತಾ ಸಾಗುತ್ತಿದೆ. ತೀರಾ ಹಣಬಲ, ಜಾತಿಬಲ ತೋಳ್ಬಲದ ಮುಂದೆ ಮಹಿಳೆಯರು ಚುನಾವಣೆಗಳಲ್ಲಿ ಜಯಿಸಿ ಬರುವುದು ಸುಲಭದ ಮಾತಲ್ಲ. ಇಂತಹ ಕಾಲದಲ್ಲಿ ಕೆಲವು ಅವಕಾಶಗಳನ್ನು ಪುರುಷರು ತಾವಾಗಿಯೇ ಹಿಂದೆ ಸರಿದು, ಮಹಿಳೆಯರಿಗೆ ಜಾಗ ಬಿಡುವುದು ಸಮಾನತೆಯೆತ್ತ ಇರಿಸುವ ಪುಟ್ಟ ಹೆಜ್ಜೆ ಮಾತ್ರ. ಸದ್ಯ ಕರ್ನಾಟಕದ ವಿಧಾನ ಪರಿಷತ್ತಿಗೆ ಮಹಿಳೆಯೊಬ್ಬರು ಸಭಾಧ್ಯಕ್ಷರಾಗಲಿ. ಅಂತಹ ಮುಕ್ತ ಮನಸ್ಸು ಅಧಿಕಾರಸ್ಥರಿಗೆ ಬರಲಿ.





