ರಾಜಧರ್ಮವನ್ನು ಪಾಲಿಸಬೇಕು ಎಂದು ಅಂದಿನ ಪ್ರಧಾನಿ ವಾಜಪೇಯಿ ಅವರು, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಬುದ್ಧಿ ಹೇಳಿದ್ದರು. ಅದೇ ನರೇಂದ್ರ ಮೋದಿಯವರೇ ಈಗ ಪ್ರಧಾನಮಂತ್ರಿಯಾಗಿದ್ದಾರೆ.
ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮಾ ಅವರು ತಲೆಬುರುಡೆಗೆ ಅಂಟಿದ ಟೋಪಿ ಧರಿಸಿದ ಪುರುಷರತ್ತ ಕೋವಿಯನ್ನು ಗುರಿಯಿಟ್ಟು ಗುಂಡು ಹಾರಿಸುವ ಎಐ ವಿಡಿಯೋವೊಂದನ್ನು ಆ ರಾಜ್ಯದ ಬಿಜೆಪಿ ಕಳೆದ ಶನಿವಾರ ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಮಾಡಿತು. 17 ಸೆಕೆಂಡುಗಳ ಈ ವಿಡಿಯೋ ಮೇಲೆ ‘ಪಾಯಿಂಟ್ ಬ್ಲ್ಯಾಂಕ್ ಶಾಟ್’, ‘ನೋ ಮರ್ಸಿ’ ಎಂಬ ಬರೆಹವಿತ್ತು. ದಯೆ ದಾಕ್ಷಿಣ್ಯವಿಲ್ಲ- ಸೀದಾ ಗುಂಡು ಹಾರಿಸುವುದೇ ಸೈ ಎಂಬ ಅರ್ಥದ ಬರೆಹವಿದು. ‘ವಿದೇಶೀ ಮುಕ್ತ ಅಸ್ಸಾಮ್’ ಎಂಬ ಘೋಷಣೆಗಳು ವಿಡಿಯೋದ ಹಿನ್ನೆಲೆಯಲ್ಲಿ ಮೊಳಗಿದ್ದವು. ಯಾರ ಕೋವಿಯಿಂದ ಹಾರಿದ ಗುಂಡು, ಕೊಂದಿದ್ದು ಯಾರನ್ನು ಎಂಬ ಸಂದೇಶ ನಿಚ್ಚಳವಿತ್ತು.
ಅಸ್ಸಾಮ್ ಬಿಜೆಪಿ ಈ ವಿಡಿಯೋವನ್ನು ಮರುದಿನ ಸದ್ದಿಲ್ಲದೆ ಡಿಲೀಟ್ ಮಾಡಿತು. ವಿಡಿಯೋ ಕುರಿತು ತಮಗೇನೂ ತಿಳಿಯದು ಎಂದು ಸರ್ಮ ಹೇಳಿದ್ದಾರೆ. ಆದರೆ ವಿಡಿಯೋವನ್ನು ಖಂಡಿಸುವುದಿರಲಿ, ಕ್ಷೀಣ ಆಕ್ಷೇಪವನ್ನು ಕೂಡ ಅವರು ಪ್ರಕಟಿಸಿಲ್ಲ. ಅವರಿಂದ ಇಂತಹ ನಿರೀಕ್ಷೆ ಯಾರಿಗೂ ಇರಲಾರದು. ಈ ವಿಡಿಯೋದಷ್ಟೇ ಕ್ರೂರ ಮತ್ತು ಅಮಾನುಷ ಟೀಕೆ ಟಿಪ್ಪಣಿಗಳು, ಭರ್ತ್ಸನೆಗಳು, ನಿಂದನೆಗಳನ್ನು ಅವರು ಮುಸಲ್ಮಾನರ ವಿರುದ್ಧ ಮಾಡುತ್ತಲೇ ಬಂದಿದ್ದಾರೆ. ತಮ್ಮ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಿದರೆ ತಮ್ಮ ಅಭ್ಯಂತರವಿಲ್ಲ, ಅಗತ್ಯ ಬಿದ್ದರೆ ದಸ್ತಗಿರಿಯಾಗಲೂ ತಾನು ತಯಾರು ಎಂದಿದ್ದಾರೆ. ನಾಲ್ಕರಿಂದ ಐದು ಲಕ್ಷ ಮಿಂಯಾ ಮುಸ್ಲಿಮರನ್ನು ಮತದಾರರ ಪಟ್ಟಿಯಿಂದ ತೆಗೆದೇ ತೆಗೆಯುತ್ತೇವೆ ಎಂದೂ ಸಾರಿದ್ದಾರೆ. ಮುಸಲ್ಮಾನರ ಮೇಲೆ ಊಟತಿಂಡಿಯ ಜಿಹಾದ್, ರಸಗೊಬ್ಬರ ಜಿಹಾದ್, ಜಮೀನಿನ ಜಿಹಾದ್ ಆರೋಪ ಮಾಡಿದ್ದಾರೆ. ತರಕಾರಿಗಳ ಬೆಲೆ ಏರಿಕೆಗೆ ಮಿಂಯಾಗಳೇ ಕಾರಣವೆಂದು ದೂರಿದ್ದಾರೆ. ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ಸೀಮೆಗಳಲ್ಲಿ ಹಿಂದೂಗಳಿಗೆ ಕೋವಿ ಲೈಸೆನ್ಸ್ ನೀಡಬೇಕೆಂದಿದ್ದಾರೆ. ನಂಜಿನ ಎಣ್ಣೆಯಲ್ಲಿ ಅದ್ದಿ ತೆಗೆದು ಅದಕ್ಕೆ ಕೊಳ್ಳಿ ಇಟ್ಟಂತಿರುತ್ತವೆ ಅವರ ಮಾತುಗಳು. ಕೋಮು ಧೃವೀಕರಣವೊಂದೇ ಸರ್ಮ ಮತ್ತು ಅವರ ಪಕ್ಷದ ಚುನಾವಣಾ ಯಶಸ್ಸಿನ ಮರ್ಮ.
ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯಲ್ಲಿ ಮಿಂಯಾಗಳಿಗೆ ಕಷ್ಟಕೋಟಲೆ ನೀಡುವುದೇ ತಮ್ಮ ಉದ್ದೇಶವಾಗಿದ್ದು, ಜನ ಕೂಡ ಅವರಿಗೆ ಕಿರುಕುಳ ಕೊಡಬೇಕೆಂದು ಸರ್ಮ ಇತ್ತೀಚಿನ ಸಭೆಯೊಂದರಲ್ಲಿ ಆಗ್ರಹಪಡಿಸಿದ್ದರು. ಸೈಕಲ್ ರಿಕ್ಷಾ ದರ ಐದು ರುಪಾಯಿಯಿದ್ದರೆ, ನಾಲ್ಕು ರುಪಾಯಿಯನ್ನು ಮಾತ್ರವೇ ಕೊಡಿ ಎಂದೂ ಕರೆ ನೀಡಿದ್ದರು. ಅವರು ಗುರಿ ಇಟ್ಟದ್ದು ರಿಕ್ಷಾ ಎಳೆಯುವ ಬಂಗಾಳಿ ಮೂಲದ ಮುಸಲ್ಮಾನರನ್ನು ಕುರಿತು.
ದ್ವೇಷ- ಹಿಂಸೆಗೆ ಪ್ರಚೋದನೆ ನೀಡುತ್ತದೆಯೆಂದು ಭಾರೀ ಪ್ರತಿಭಟನೆ ಖಂಡನೆ ಪ್ರಕಟವಾದವು. ನರಮೇಧಕ್ಕೆ ನೀಡಿರುವ ಕರೆಯಿದು ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಅಸ್ಸಾಮ್ ನ ಒಳಗೆ ಮತ್ತು ಹೊರಗೆ ಈ ವಿಡಿಯೋ ವಿರುದ್ಧ ದೂರುಗಳು ದಾಖಲಾಗಿವೆ. ಸಿಪಿಐಎಂ- ಸಿಪಿಐ ಸುಪ್ರೀಮ್ ಕೋರ್ಟಿನ ಕದ ಬಡಿದಿವೆ. ಸರ್ಮ ಅವರ ದ್ವೇಷ ಪ್ರಚೋದನೆಯ ಭಾಷಣಗಳು ಮತ್ತು ವಿಡಿಯೋ ವಿರುದ್ಧ ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಯಬೇಕೆಂದು ಕೋರಿದೆ.
ಅಸ್ಸಾಮ್ ವಿಧಾನಸಭಾ ಚುನಾವಣೆ ಒಂದೆರಡು ತಿಂಗಳುಗಳಲ್ಲೇ ನಡೆಯಬೇಕಿದೆ. ಪ್ರತಿಪಕ್ಷಗಳು ಒಡೆದು ದುರ್ಬಲವಾಗಿವೆ. ಅಭಿವೃದ್ಧಿಯ ಕೆಲಸ ಕಾರ್ಯಗಳ ಬಲದಿಂದಲೇ ಗೆಲ್ಲುವ ವಿಶ್ವಾಸ ಬಿಜೆಪಿಗೆ ಇಲ್ಲ. ಧೃವೀಕರಣದ ಕಾರ್ಯಸೂಚಿ ಇಟ್ಟುಕೊಂಡೇ ಎರಡು ಸಲ ಗೆದ್ದಿರುವವರು ಇದೀಗ ಮೂರನೆಯ ಸಲವೂ ಆರಿಸಿ ಬರಲು ಅದೇ ಹಳೆಯ ತಂತ್ರಗಳಿಗೆ ಮೊರೆ ಹೋಗಿದ್ದಾರೆ. ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಛೂ ಬಿಡುವ ಮಂತ್ರ. ಧೃವೀಕರಣದ ಕಿಚ್ಚು ಹಚ್ಚಲೆಂದೇ ಆಡುತ್ತಿರುವ ಮಾತುಗಳು ಮತ್ತು ಮಾಡಿರುವ ವಿಡಿಯೋ ಇದು ಎಂಬುದು ಸ್ಪಷ್ಟ.
ಈ ಪರಿಯ ದ್ವೇಷವು ದಿನ ಬೆಳಗಾಗುವುದರ ಒಳಗೆ ಮೈ ತಳೆದು ಹೂಂಕರಿಸಿಲ್ಲ. ವರ್ಷಗಟ್ಟಲೆ ಇಂತಹ ವಾತಾವರಣವನ್ನು ವ್ಯವಸ್ಥಿತವಾಗಿ ರೂಪಿಸಿ ಪೋಷಿಸಿ ಪ್ರೋತ್ಸಾಹಿಸುತ್ತ ಬರಲಾಗಿದೆ.
ಮಂತ್ರಿಯಾಗಿ ಅಥವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರು ಸಂವಿಧಾನದ 164 (3) ಅನುಚ್ಛೇದದಡಿ ಪ್ರಮಾಣವಚನ ಸ್ವೀಕರಿಸಬೇಕಾಗುತ್ತದೆ. ಎಲ್ಲ ರೀತಿಯಿಂದಲೂ ಎಲ್ಲ ಜನರಿಗೂ ಸಂವಿಧಾನದ ಪ್ರಕಾರ ನ್ಯಾಯ ಒದಗಿಸುವ, ಯಾರ ಕುರಿತೂ ಭಯ ಮತ್ತು ಪಕ್ಷಪಾತ, ದುರ್ಭಾವನೆ ಇಲ್ಲದಂತೆ ನಡೆದುಕೊಳ್ಳುವ ಅಂಶಗಳು ಈ ಪ್ರಮಾಣವಚನದ ಭಾಗಗಳು. ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇನೆಂದು ಪ್ರಮಾಣ ಮಾಡುವುದರ ಅರ್ಥವೇನೆಂದರೆ ಸಂವಿಧಾನದ 14ನೆಯ ಅನುಚ್ಛೇದದ ಪ್ರಕಾರ ಸಮಾನತೆ, ಮತ್ತು 25ನೆಯ ಅನುಚ್ಛೇದದ ಪ್ರಕಾರ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಒಡಹುಟ್ಟಿದ ಭಾವವನ್ನು ಎತ್ತಿ ಹಿಡಿಯುವುದೇ ಆಗಿದೆ. ಎಲ್ಲ ಧರ್ಮಗಳು, ಜಾತಿಗಳ ಜನರನ್ನು ಸಮಾನವಾಗಿ, ಪೂರ್ವಗ್ರಹವಿಲ್ಲದೆ ನಡೆಸಿಕೊಳ್ಳುವುದೇ ಆಗಿದೆ. ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಭಂಗ ಬರದಂತೆ ನಡೆದುಕೊಳ್ಳುವುದೇ ಆಗಿದೆ.
ಮುಖ್ಯಮಂತ್ರಿ ಸರ್ಮ ಅವರು ಈ ಪ್ರಮಾಣ ವಚನವನ್ನು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ನಡೆಸಿ ತೋರಿಸಿದ್ದಾರೆಯೇ?
ಬಾಂಗ್ಲಾ ದೇಶೀಯರ ಅಕ್ರಮ ವಲಸೆಯ ಸಮಸ್ಯೆಯನ್ನು ಅಸ್ಸಾಮ್ ಎದುರಿಸಿರುವುದು ಸಂಪೂರ್ಣ ನಿರಾಧಾರವೇನೂ ಅಲ್ಲ. ಆದರೆ ಹಿಂದೂ ವಲಸಿಗರದು ಬಹುದೊಡ್ಡ ಸಂಖ್ಯೆ ಎಂದು ಅಂಕಿ ಅಂಶಗಳು ಹೇಳಿವೆ. ಮುಖ್ಯಮಂತ್ರಿಯವರು ಆಡುತ್ತ ಬಂದಿರುವ ದ್ವೇಷದ ಮಾತುಗಳು ಅಕ್ರಮ ವಲಸೆಯ ಜೊತೆಗೆ ಮುಸಲ್ಮಾನ ಅಸ್ಮಿತೆಯನ್ನು ತಳುಕು ಹಾಕಿವೆ. ಆದರೆ ಎನ್.ಆರ್.ಸಿ. ದತ್ತಾಂಶಗಳು ಹೇಳುವ ಸತ್ಯವೇ ಬೇರೆ. ಎನ್.ಆರ್.ಸಿ.ಯಿಂದ ಹೊರಗಿಡಲಾಗಿರುವವರ ಪೈಕಿ ಮುಸ್ಲಿಮರಲ್ಲದವರೇ ಬಹುಸಂಖ್ಯಾತರು ಎಂಬುದಾಗಿ ಎಡಪಕ್ಷಗಳು ಸುಪ್ರೀಮ್ ಕೋರ್ಟಿಗೆ ಅರಿಕೆ ಮಾಡಿಕೊಂಡಿವೆ.
ವಲಸೆ ಸಮಸ್ಯೆಗೆ ದ್ವೇಷಭಾಷಣ ಪರಿಹಾರವಲ್ಲ ಎಂಬ ಮಾತನ್ನೂ ಸುಪ್ರೀಮ್ ಕೋರ್ಟ್ ಈ ಹಿಂದೆ ಆಡಿದೆ. ದ್ವೇಷ ಭಾಷಣ ಮಾಡುವವರ ಮೇಲೆ ಔಪಚಾರಿಕ ದೂರಿಗಾಗಿ ಕಾಯದೆ, ನೇರವಾಗಿ ಎಫ್.ಐ.ಆರ್.ದಾಖಲಿಸಬೇಕೆಂದು ಪೊಲೀಸರಿಗೆ 2022ರ ಅಕ್ಟೋಬರ್ ತಿಂಗಳಲ್ಲಿ ನಿರ್ದೇಶನ ನೀಡಿತ್ತು. ಎಫ್.ಐ.ಆರ್. ದಾಖಲಿಸದೆ ಹೋದರೆ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಸರ್ಮ ಅವರೇ ಮುಖ್ಯಮಂತ್ರಿ. ಹೀಗಿದ್ದಾಗ ವಿಡಿಯೋ ಮಾಡಿರುವವರ ವಿರುದ್ಧ ಎಫ್.ಐ.ಆರ್. ದಾಖಲಿಸುವ ನಿರೀಕ್ಷೆಗೆ ಆಧಾರವೇ ಇಲ್ಲ. ಇಂತಹ ಸ್ಥಿತಿಯಲ್ಲಿ ತನ್ನ ಮುಖ್ಯಮಂತ್ರಿಯನ್ನು ಹದ್ದುಬಸ್ತಿನಲ್ಲಿಡುವುದು ಭಾರತೀಯ ಜನತಾ ಪಾರ್ಟಿಯ ಹೊಣೆಗಾರಿಕೆ. ರಾಜಧರ್ಮವನ್ನು ಪಾಲಿಸಬೇಕು ಎಂದು ಅಂದಿನ ಪ್ರಧಾನಿ ವಾಜಪೇಯಿ ಅವರು, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಬುದ್ಧಿ ಹೇಳಿದ್ದರು. ಅದೇ ನರೇಂದ್ರ ಮೋದಿಯವರೇ ಈಗ ಪ್ರಧಾನಮಂತ್ರಿಯಾಗಿದ್ದಾರೆ. ಅವರ ಆಪ್ತ ಸಹವರ್ತಿ ಅಮಿತ್ ಶಾ ಅವರೇ ದೇಶದ ಗೃಹಮಂತ್ರಿಯಾಗಿದ್ದಾರೆ. ಇವರಿಬ್ಬರೂ ಕೇಂದ್ರ ಸರ್ಕಾರ ಮಾತ್ರವಲ್ಲದೆ ಭಾರತೀಯ ಜನತಾ ಪಾರ್ಟಿಯನ್ನು, ರಾಜ್ಯ ಬಿಜೆಪಿ ಸರ್ಕಾರಗಳನ್ನು ತಮ್ಮ ಉಕ್ಕಿನ ಮುಷ್ಠಿಯಲ್ಲಿ ಇರಿಸಿಕೊಂಡಿದ್ದಾರೆ.
ಹೀಗಿರುವಾಗ ರಾಜಧರ್ಮ ಪಾಲಿಸಬೇಕು ಎಂಬ ಬುದ್ಧಿ ಮಾತನ್ನು ಯಾರು ಹೇಳಬೇಕು, ಯಾರಿಗೆ ಹೇಳಬೇಕು?





