ಮುಸ್ಲಿಮರು ಮಾಡದ ತಪ್ಪಿಗೆ ಬಂಧನದ ಶಿಕ್ಷೆ ಅನುಭವಿಸುತ್ತಿದ್ದಾರೆ. ಸಾಮಾಜಿಕವಾಗಿ ಘನತೆಯೂ ಮಣ್ಣುಪಾಲು. ಮಾನಸಿಕ ಹಿಂಸೆಯ ಜೊತೆಗೆ ತಮ್ಮ ಆಸ್ತಿ ಕಳೆದುಕೊಂಡಿದ್ದಾರೆ. ನೆಲಸಮಗೊಂಡ ಕಟ್ಟಡ ಇರುವ ಜಾಗ ಅಕ್ರಮ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬುದು ಬುಲ್ಡೋಜರ್ ಬಾಬಾನ ಸರ್ಕಾರದ ಸಾಮಾನ್ಯ ಡೈಲಾಗ್. ಇದು ನವ ಯುಪಿ ಮಾದರಿ.
ಮೋದಿ ಭಾರತವು ಇಸ್ಲಾಮೋಫೋಬಿಯಾವನ್ನು ಸಾಂಕ್ರಾಮಿಕ ಶಿಖರಕ್ಕೆ ಏರಿಸಿದೆ. ರಾಜಕೀಯ ಲಾಭಕ್ಕಾಗಿ ಜನನಾಯಕರೆನಿಸಿಕೊಂಡವರು ಮಾಡುವ ಹುಸಿ ಭಾಷಣ, ಅಂಧಾಭಿಮಾನಿಗಳ ಮಿದುಳನ್ನು ಕೆಡಿಸಿ ಕೊಳೆಯಿಸಿಬಿಟ್ಟಿವೆ. ನ್ಯಾಯಾಲಯಗಳಿಂದ ಹೊರಬೀಳುವ ವಿಳಂಬಿತ ತೀರ್ಪುಗಳೂ ಇಸ್ಲಾಮೋಫೋಬಿಯಾದ ಕರಾಳತೆಯನ್ನು ದಟ್ಟಗೊಳಿಸಿ ಬಿಚ್ಚಿಟ್ಟಿವೆ.
ದೇಶದ್ರೋಹ ಪ್ರಕರಣ ಸೇರಿದಂತೆ ದೊಂಬಿ, ದರೋಡೆ, ಅತ್ಯಾಚಾರ, ಕಳ್ಳತನ ಪ್ರಕರಣಗಳಲ್ಲಿ ಪುರಾವೆ ಇಲ್ಲದಿದ್ದರೂ ಸಿಕ್ಕ ಸಿಕ್ಕ ಮುಸ್ಲಿಮರನ್ನು ಬಂಧಿಸಿ ವರ್ಷಗಟ್ಟಲೆ ಜೈಲಿನ್ಲಲಿಟ್ಟು, ಜಾಮೀನು ಅರ್ಜಿಯನ್ನು ಮುಂದಕ್ಕೆ ತಳ್ಳುತ್ತಾ ಕೊನೆಗೆ ದಶಕಗಳ ನಂತರ ಖುಲಾಸೆಗೊಳಿಸುವ ಪ್ರಕರಣಗಳು ಮತ್ತೆ ಮತ್ತೆ ಈ ದೇಶದ ಆತ್ಮಸಾಕ್ಷಿಗೆ ಕಳಂಕ ತರುತ್ತಿದೆ. ಈ ಕರಾಳ ಕಳಂಕಿತ ಕೃತ್ಯದ ಸರಣಿಗೆ ಇತ್ತೀಚೆಗೆ ಮತ್ತೆರಡು ಪ್ರಕರಣಗಳು ಸೇರಿವೆ.
2002ರ ಅಕ್ಷರಧಾಮ ದೇವಾಲಯದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮೂವರು ಮುಸ್ಲಿಂ ವ್ಯಕ್ತಿಗಳನ್ನು ಕಳೆದ ವಾರ ಅಹಮದಾಬಾದ್‌ನ ವಿಶೇಷ ಭಯೋತ್ಪಾದನಾ ತಡೆ ಕಾಯ್ದೆ (ಪೋಟಾ) ನ್ಯಾಯಾಲಯವು ಖುಲಾಸೆಗೊಳಿಸಿದೆ.
2002 ಸೆಪ್ಟೆಂಬರ್ 24, ರಂದು ಅಕ್ಷರಧಾಮ ದೇವಾಲಯದ ಮೇಲೆ ದಾಳಿ ನಡೆದಾಗ ಅಹಮದಾಬಾದ್ ನಿವಾಸಿಗಳಾದ ಸುಲೇಮಾನ್ ಅಜ್ಮೇರಿ, ಮುಹಮ್ಮದ್ ಫಾರೂಕ್, ಮುಹಮ್ಮದ್ ಹಫೀಜ್ ಶೇಖ್ ಭಾರತದಲ್ಲಿ ಇರಲೇ ಇಲ್ಲ. ಅವರು ಕೊಲ್ಲಿ ರಾಷ್ಟ್ರದಲ್ಲಿ ಕೆಲಸದಲ್ಲಿದ್ದರು ಎಂದು ಹೇಳಲಾಗಿದೆ. 2019 ರಲ್ಲಿ ಅವರು ಅಹಮದಾಬಾದ್‌ಗೆ ಹಿಂದಿರುಗಿದ ನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು.
ನ್ಯಾಯಾಧೀಶ ಹೇಮಾಂಗ್ ಆರ್. ರಾವಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಪೋಟಾ ನ್ಯಾಯಾಲಯವು, ಅಬ್ದುಲ್ ರಶೀದ್ ಸುಲೇಮಾನ್ ಅಜ್ಮೇರಿ, ಮುಹಮ್ಮದ್ ಫಾರೂಕ್, ಮುಹಮ್ಮದ್ ಹಫೀಜ್ ಶೇಖ್ ಮತ್ತು ಮುಹಮ್ಮದ್ ಯಾಸಿನ್ ಅಲಿಯಾಸ್ ಯಾಸಿನ್ ಭಟ್ ಅವರನ್ನು ಖುಲಾಸೆಗೊಳಿಸಿತು.
ಸುಪ್ರೀಂ ಕೋರ್ಟ್ ಈ ಹಿಂದೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಪ್ರಾಥಮಿಕ ಸಾಕ್ಷ್ಯಾಧಾರಗಳ ಕೊರತೆಯ ಆಧಾರದ ಮೇಲೆ ಖುಲಾಸೆಗೊಳಿಸಿತ್ತು. ಖುಲಾಸೆಗೊಂಡು ಆರು ವರ್ಷದವರೆಗೆ ಬಿಡುಗಡೆಯಾಗಲು ಕಾಯಬೇಕಾದ ಈ ಪರಿಸ್ಥಿತಿಗೆ ಅವರು ಮುಸ್ಲಿಮರು ಎಂಬ ಒಂದೇ ಒಂದು ಕಾರಣ ಎಂಬುದು ಭಾರತಕ್ಕೆ ಹೆಮ್ಮೆ ತರುವ ಸಂಗತಿಯಲ್ಲ.
ಈ ಅಮಾಯಕ ʼಆರೋಪಿʼಗಳ ಪರವಾಗಿ ಜಾಮಿಯತ್ ಉಲೇಮಾ-ಎ-ಹಿಂದ್ ಸಂಘಟನೆಯು ಕಾನೂನು ಹೋರಾಟ ಮುಂದುವರಿಸಿತ್ತು.
ಇಂದು ಮತ್ತೊಂದು ಪ್ರಕರಣದಲ್ಲಿ ಮುಸ್ಲಿಂ ರಾಜಕಾರಣಿ ಖುಲಾಸೆಯಾಗಿದ್ದಾರೆ. 2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಇದೀಗ ಅವರನ್ನು ಖುಲಾಸೆಗೊಳಿಸಿದೆ.
ಡಿಎನ್‌ಎ ಪರೀಕ್ಷೆಯಲ್ಲಿ ಅವರು ವಿರುದ್ಧ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಕೋರ್ಟ್ ಹೇಳಿದೆ. ಆದರೆ, ಪ್ರಕರಣ ನಡೆದ ಬಳಿಕ ಯೋಗಿ ಸರ್ಕಾರದ ಬುಲ್ಡೋಜರ್ ಮೊಯಿನ್ ಖಾನ್ ಅವರಿಗೆ ಸೇರಿದ್ದ ಬೇಕರಿ, ವಾಣಿಜ್ಯ ಕಟ್ಟಡವನ್ನು ನೆಲಸಮ ಮಾಡಿತ್ತು. ಬೇಕರಿಯ ನೌಕರ ಅತ್ಯಾಚಾರ ಪ್ರಕರಣ ದೋಷಿಯಾಗಿದ್ದಾನೆ. ಆದರೆ ಮೊಯಿನ್ ಅವರನ್ನು ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿತ್ತು. ಅಯೋಧ್ಯೆಯಲ್ಲಿಯೇ ಬಿಜೆಪಿಗೆ ಮಣ್ಣು ಮುಕ್ಕಿಸಿದ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರ ಆಪ್ತ ಮೊಯಿನ್ ಖಾನ್ ಎಂಬುದನ್ನು ಗಮನಿಸಬೇಕು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇದನ್ನು ರಾಜಕೀಕರಣಗೊಳಿಸಿದ್ದು ನೀಚತನ. ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ್ದ ಯೋಗಿ, ತಕ್ಕ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ ಎರಡು ದಿನದಲ್ಲಿ ಬುಲ್ಡೋಜರ್ ಪ್ರತಾಪ ತೋರಿದ್ದರು. ಈಗ ಮೊಯಿನ್ ಖುಲಾಸೆಗೊಂಡಿದ್ದಾರೆ. ಈಗ ಯೋಗಿ ಸರ್ಕಾರದ ಬಳಿ ಉತ್ತರವಿದೆಯೇ?
ಮಾಡದ ತಪ್ಪಿಗೆ ಬಂಧನದ ಶಿಕ್ಷೆ, ಸಾಮಾಜಿಕವಾಗಿ ಘನತೆಯೂ ಮಣ್ಣುಪಾಲು. ಮಾನಸಿಕ ಹಿಂಸೆಯ ಜೊತೆಗೆ ತಮ್ಮ ಆಸ್ತಿ ಕಳೆದುಕೊಂಡಿದ್ದಾರೆ. ನೆಲಸಮಗೊಂಡ ಕಟ್ಟಡ ಇರುವ ಜಾಗ ಅಕ್ರಮ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಯೋಗಿ ಸರ್ಕಾರ ಹೇಳಿದೆ. ಇದು ಬುಲ್ಡೋಜರ್ ಬಾಬಾನ ಸರ್ಕಾರದ ಸಾಮಾನ್ಯ ಡೈಲಾಗ್. ಮುಸ್ಲಿಂ ಆರೋಪಿಗಳ ಮನೆ, ಕಟ್ಟಡ ನೆಲಸಮ ಮಾಡಿ ನಂತರ ಒತ್ತುವರಿ ತೆರವು ಎಂದು ಹೇಳುವುದು ಇದು ನವ ಯುಪಿ ಮಾದರಿ.
ಬಿಜೆಪಿ ಮತ್ತು ಸಂಘಪರಿವಾರದ ಮುಸ್ಲಿಂ ದ್ವೇಷ ಈ ದೇಶದ ಏಕತೆ ಮತ್ತು ಸೌಹಾರ್ದ ಪರಂಪರೆಗೆ ಮಾರಕವಷ್ಟೇ ಅಲ್ಲ, ವಿಶ್ವದ ಮಟ್ಟದಲ್ಲಿ ಭಾರತದ ಗೌರವವನ್ನು ಹಾಳು ಮಾಡುತ್ತದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಸ್ವತಃ ಮೋದಿಯವರು ಮುಸ್ಲಿಮರ ಮೇಲೆ ತನ್ನ ಹೃದಯದಲ್ಲಿದ್ದ ವಿಷವನ್ನು ಬಹಿರಂಗವಾಗಿ ಕಾರಿಕೊಂಡಿದ್ದರು. ಮೊನ್ನೆಯಷ್ಟೇ ಮೋದಿ ಸರ್ಕಾರದ ಮಂತ್ರಿ ಅನುರಾಗ್ ಠಾಕೂರ್ “ಮುಸ್ಲಿಮರು ಭಾರತದಲ್ಲಿ ಉಳಿಯಬೇಕಿದ್ದರೆ ವಂದೇ ಮಾತರಂ ಹಾಡಬೇಕು” ಎಂದು ಹೇಳಿದ್ದಾರೆ. ಹಿಂದೂರಾಷ್ಟ್ರ ಮಾಡುವ ಆರೆಸ್ಸೆಸ್, ಹಿಂದುತ್ವವಾದಿ ಸಂಘಟನೆಗಳ ಕೋಮುವಾದಿ ಅಜೆಂಡಾ ಹೀಗೆ ಮುಸ್ಲಿಂ ದ್ವೇಷದ ಮೂಲಕ ಹೊರಬರುತ್ತಿದೆ. ಮುಸ್ಲಿಮರನ್ನು ಗೋಮಾಂಸ ಮಾರುತ್ತಾರೆ, ಗೋಕಳ್ಳತನ ಮಾಡ್ತಾರೆ ಎಂದು ಜಜ್ಜಿ ಕೊಲ್ಲುವುದು, ಗಲಭೆ ನಡೆದರೆ ಸಾಮೂಹಿಕವಾಗಿ ಮುಸ್ಲಿಂ ಯುವಕರನ್ನು ಬಂಧಿಸುವುದು, ಕಲ್ಲು ಹೊಡೆಯುವವರು, ಬಾಂಬ್ ಇಡುವವರು ಎಂಬ ಹಣೆಪಟ್ಟಿ ಕಟ್ಟಿ ಹೀನಾಯವಾಗಿ ಅವಮಾನಿಸುವುದು ಈ ಹತ್ತು ವರ್ಷಗಳಲ್ಲಿ ವಿಪರೀತವಾಗಿ ಹೆಚ್ಚಾಗಿದೆ.
ಮೋದಿಯವರು ಅತ್ತ ಮುಸ್ಲಿಂ ರಾಷ್ಟ್ರಗಳಿಗೆ ಭೇಟಿ ನೀಡಿ ಅಲ್ಲಿ ತನ್ನ ಆಪ್ತ ಸ್ನೇಹಿತ ಅದಾನಿಗೆ ಉದ್ಯಮ ವಿಸ್ತರಣೆಗೆ ನೆರವಾಗಿವುದು, ಮುಸ್ಲಿಂ ಮುಖಂಡರನ್ನು ಬಾಚಿ ತಬ್ಬಿಕೊಳ್ಳುವುದು, ಮುಸ್ಲಿಮರು ಮತ್ತು ತಾನು ಭಾಯಿ ಭಾಯಿ, ಜನ್ಮ ಜನ್ಮಾಂತರದ ಸಂಬಂಧ ಎಂದು ಬೊಗಳೆ ಬಿಡುವುದು; ಇತ್ತ ದೇಶದ ಪ್ರಜೆಗಳಾದ ಮುಸ್ಲಿಮರ ಮೇಲೆ ಬುಲ್ಡೋಜರ್ ಹರಿಸುವುದು, ದೇಶದ್ರೋಹದ ಕಾನೂನಿನಡಿ ಅವರ ಧ್ವನಿ ಹತ್ತಿಕ್ಕುವುದು. ಇದು ಮೋದಿಯವರ ಗೋಸುಂಬೆತನ ತೋರಿಸುತ್ತದೆ. ಅಪರಾಧವನ್ನೇ ಎಸಗದ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅವರ ಬದುಕನ್ನೇ ನಾಶಪಡಿಸುವ ಸರ್ಕಾರಗಳಿಗೆ ನ್ಯಾಯಾಲಯವೇ ತಕ್ಕ ಪಾಠ ಕಲಿಸಬೇಕಿದೆ.





