ಒಕ್ಕೂಟ ಸರ್ಕಾರ ಕರ್ನಾಟಕಕ್ಕೆ ಬಗೆಯುತ್ತ ಬಂದಿರುವ ಅಗಾಧ ಅನ್ಯಾಯ ಪರಂಪರೆ ಈ ಬಜೆಟ್ಟಿನಲ್ಲೂ ಕೊನೆಗೊಂಡಿಲ್ಲ. ಉತ್ತರದ ರಾಜ್ಯಗಳಿಗೆ ಹಂಚಿಕೆಯ ಮಹಾಪೂರವನ್ನೇ ಹರಿಸಿದ್ದಾರೆ ಮೋದಿ. ಕರ್ನಾಟಕಕ್ಕೆ ಮತ್ತೆ 10-15 ಸಾವಿರ ಕೋಟಿ ರುಗಳ ಕತ್ತರಿ ಆಡಿಸಿದ್ದಾರೆ. ಬಿಹಾರಕ್ಕೆ ಒಂದೂವರೆ ಲಕ್ಷ ಕೋಟಿ ರುಪಾಯಿ ಸಿಕ್ಕಿದೆಯಾದರೆ, ಕರ್ನಾಟಕಕ್ಕೆ ದಕ್ಕಿದ್ದು 63 ಸಾವಿರ ಕೋಟಿ ರುಪಾಯಿ ಮಾತ್ರ.
ಮೋದಿ ಸರ್ಕಾರ ಭಾನುವಾರದಂದು (ಫೆ.1) ತನ್ನ 2026-27ರ ವಾರ್ಷಿಕ ಆಯವ್ಯಯ ಮುಂಗಡಪತ್ರವನ್ನು ಮಂಡಿಸಿತು. ಈ ಮುಂಗಡಪತ್ರ ಬಹುತೇಕ ವಲಯಗಳಿಂದ ಅತೀವ ನಿರಾಸೆ ಮತ್ತು ಟೀಕೆಯನ್ನು ಎದುರಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಲವೂ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕಟುವಾಗಿ ಟೀಕಿಸಿದ್ದಾರೆ. ರಾಜ್ಯಕ್ಕೆ ಮೋದಿ ಸರ್ಕಾರ ‘ಚೊಂಬು’ ನೀಡಿದೆ ಎಂದು ಕಹಿ ಮಾತಾಡಿದ್ದಾರೆ. ಈ ಕಹಿ ಮಾತು ಕೇವಲ ಕಾಂಗ್ರೆಸ್ ಮುಖ್ಯಮಂತ್ರಿಯೊಬ್ಬರು, ಬಿಜೆಪಿಯ ಕೇಂದ್ರ ಸರ್ಕಾರದ ಕುರಿತು ಮಾಡುವ ದೇಶಾವರಿ ರಾಜಕೀಯ ಟೀಕೆ ಅಲ್ಲ.
ಕಳೆದ ಐದು ವರ್ಷಗಳಲ್ಲಿ 15ನೆಯ ಹಣಕಾಸು ಆಯೋಗದ ಶಿಫಾರಸು ಮತ್ತು ಕೇಂದ್ರದ ಮೋದಿ ಸರ್ಕಾರ ಒಟ್ಟಾಗಿ ಕರ್ನಾಟಕದ ಜನತೆಗೆ ಬಗೆದಿರುವ ಅನ್ಯಾಯ ಅಗಾಧ ಪ್ರಮಾಣದ್ದು. ಹಾಗೆ ನೋಡಿದರೆ ಕರ್ನಾಟಕದ ಜನ ಕಳೆದ ವಿಧಾನಸಭೆಗೆ ಬಿಜೆಪಿ ಮಿತ್ರಪಕ್ಷಗಳಿಗೇ ಅಧಿಕಾರ ನೀಡಿದ್ದರು. ಸತತ ಮೂರನೆಯ ಅವಧಿಗೆ ಮೋದಿಗೆ ಅತಿ ಹೆಚ್ಚಿನ ಲೋಕಸಭಾ ಸೀಟುಗಳನ್ನು ಗೆಲ್ಲಿಸಿ ಬೆಂಬಲ ನೀಡುತ್ತ ಬಂದಿದ್ದಾರೆ.
ಆದರೂ ಮೋದಿ ಸರ್ಕಾರ ರಾಜ್ಯದ ಜನತೆಯನ್ನು ಶಿಕ್ಷಿಸುತ್ತ ಬಂದಿರುವುದು ಬಹುದೊಡ್ಡ ಒಗಟು. ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಯನ್ನೇ ಸತತವಾಗಿ ಅಧಿಕಾರಕ್ಕೆ ತರಬೇಕಿತ್ತು ಎಂಬ ಧೋರಣೆ ಈ ಒಗಟಿನ ಹಿಂದೆ ಇದ್ದಂತಿದೆ. ಈ ಧೋರಣೆಯು ಸರ್ವಾಧಿಕಾರಿ ಮನಸ್ಥಿತಿಯಿಂದ ಮೂಡುವಂತಹುದೇ ವಿನಾ ಜನತಾಂತ್ರಿಕ ನೆಲೆಯಿಂದ ಅಲ್ಲ. ಹೆಸರಿಗೆ ಜನತಂತ್ರದ ಜನನಿ ಎಂಬ ಪಟ್ಟ ಬೇಕು, ಆದರೆ ಸರ್ವಾಧಿಕಾರ ಮುಂದುವರೆಯಬೇಕು ಎಂಬುದು ಕಪಟ ನಾಟಕವಲ್ಲದೆ ಬೇರೇನೂ ಅಲ್ಲ.
ಮೋದಿ ಸರ್ಕಾರ ಭಾನುವಾರ ಮಂಡಿಸಿರುವ ಬಜೆಟ್ ನಲ್ಲಿ 15ನೆಯ ಹಣಕಾಸು ಆಯೋಗದ ವಿಕೃತ ಶಿಫಾರಸನ್ನು ಸರಿಪಡಿಸುವ ಪ್ರಯತ್ನ ನಡೆದಿದೆ. ಆದರೆ ಪೂರ್ಣರೂಪದಲ್ಲಿ ಸರಿಪಡಿಸಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ದೊರೆಯಬೇಕಿದ್ದ ತೆರಿಗೆ ಹಂಚಿಕೆಯು ನೆನ್ನೆಯ ತನಕ 2021ರ ಶೇಕಡಾವಾರು ಮೊತ್ತದಲ್ಲೇ ಸ್ಥಗಿತವಾಗಿತ್ತು.
ಉತ್ತರದ ರಾಜ್ಯಗಳಿಗೆ ಹಂಚಿಕೆಯ ಮಹಾಪೂರವನ್ನೇ ಹರಿಸಿದ್ದಾರೆ ಮೋದಿ. ಕರ್ನಾಟಕಕ್ಕೆ ಮತ್ತೆ ಕತ್ತರಿ ಆಡಿಸಿದ್ದಾರೆ. ಬಿಹಾರಕ್ಕೆ ಒಂದೂವರೆ ಲಕ್ಷ ಕೋಟಿ ರುಪಾಯಿ ಸಿಕ್ಕಿದೆಯಾದರೆ, ಕರ್ನಾಟಕಕ್ಕೆ ದಕ್ಕಿದ್ದು 63 ಸಾವಿರ ಕೋಟಿ ರುಪಾಯಿ ಮಾತ್ರ. ನ್ಯಾಯವಾಗಿ ನೋಡಿದರೆ ಕರ್ನಾಟಕದಿಂದ ಸಂಗ್ರಹಿಸುವ ಪ್ರತಿ ನೂರು ರುಪಾಯಿಗಳಿಂದ ಕನಿಷ್ಠ ಐದು ರೂಪಾಯಿಯನ್ನಾದರೂ ಮೋದಿ ಸರ್ಕಾರ ವಾಪಸು ನೀಡಬೇಕಿತ್ತು.
14ನೆಯ ಹಣಕಾಸು ಆಯೋಗ ರಾಜ್ಯಕ್ಕೆ ಮಾಡಿದ್ದ ಶೇ.4.71ರ ಹಂಚಿಕೆಗೆ ಅನ್ಯಾಯವಾಗಿ ಕತ್ತರಿ ಹಾಕಿದ್ದ 15ನೆಯ ಹಣಕಾಸು ಆಯೋಗ ಅದನ್ನು ಶೇ.3.64ಕ್ಕೆ ಇಳಿಸಿತ್ತು. ಇದೀಗ ಈ ಶೇಕಡಾವಾರು ಹಂಚಿಕೆಯನ್ನು ಶೇ.4.13ಕ್ಕೆ ಹೆಚ್ಚಿಸಲಾಗಿದೆ. ಆದರೆ 14ನೆಯ ಹಣಕಾಸು ನೀಡಿದ್ದ 4.71ರಷ್ಟು ಶೇಕಡಾವಾರನ್ನು ಈಗಲೂ ಮುಟ್ಟಿಲ್ಲ. 0.58ರಷ್ಟು ಅನ್ಯಾಯದ ಅಂತರ ಮುಂದುವರೆದೇ ಇದೆ. ಹಳೆಯ ಅನ್ಯಾಯವನ್ನೇ ಸರಿಪಡಿಸಿಲ್ಲವೆಂದರೆ ಹೊಸ ಹೆಚ್ಚಳದ ನಿರೀಕ್ಷೆ ಬಹುದೂರವೇ ಉಳಿಯಿತು.
ತಾನು ದೇಶಾದ್ಯಂತ ಸಂಗ್ರಹಿಸುವ ಎಲ್ಲ ತೆರಿಗೆಗಳನ್ನು ಕೇಂದ್ರ ಸರ್ಕಾರ ತನ್ನ ಮನಸಿಗೆ ತೋಚಿದಂತೆ ಹಂಚಲು ಬರುವುದಿಲ್ಲ. ರಾಜ್ಯಗಳ ಪಾಲಿನ ಹಂಚಿಕೆಯು ಸಂವಿಧಾನಾತ್ಮಕ ಪ್ರಕ್ರಿಯೆಗಳ ಮೂಲಕ ನಡೆಯುತ್ತದೆ. ಅದಕ್ಕೆಂದೇ ಪ್ರತಿ ಐದು ವರ್ಷಗಳಿಗೊಮ್ಮೆ ಹಣಕಾಸು ಆಯೋಗವನ್ನು ರಚಿಸಲಾಗುತ್ತದೆ. ಹಂಚಿಕೆಯಲ್ಲಿ ಈ ಆಯೋಗದ ಶಿಫಾರಸುಗಳೇ ಮುಖ್ಯ ಪಾತ್ರ ವಹಿಸಬೇಕು. ಕೇಂದ್ರ ಸರ್ಕಾರ ಹೆಚ್ಚೆಂದರೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಅಷ್ಟೇ.
ಹಣಕಾಸು ಆಯೋಗ ಎಂಬುದು ಸಂವಿಧಾನದ 280ನೇ ವಿಧಿಯ ಅಡಿಯಲ್ಲಿ ರಚಿತವಾಗುವ ಒಂದು ಅರೆ ನ್ಯಾಯಾಂಗ ಸಂಸ್ಥೆ. ಈ ಪ್ರಕ್ರಿಯೆಯನ್ನು ತೆರಿಗೆ ಸಂಗ್ರಹಣೆಗೆ ತಗಲುವ ವೆಚ್ಚಗಳನ್ನು ಕಳೆದ ನಂತರದ ನಿವ್ವಳ ಆದಾಯದಲ್ಲಿ ರಾಜ್ಯಗಳಿಗೆ ಸಲ್ಲಬೇಕಾದ ಪ್ರಮಾಣವನ್ನು ಆಯೋಗ ತೀರ್ಮಾನಿಸುತ್ತದೆ. ಹೆಚ್ಚುವರಿ ಸೆಸ್ ಮತ್ತು ಸರ್ಛಾರ್ಜ್ ಗಳನ್ನು ಈ ವ್ಯಾಪ್ತಿಗೆ ಸೇರಿಸದೆ ಕೇಂದ್ರ ಸರ್ಕಾರ ಸಂಪೂರ್ಣ ತನಗೇ ಇಟ್ಟುಕೊಂಡಿದೆ. ಶೇಕಡಾವಾರು ಹಂಚಿಕೆಯನ್ನು ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಅಗತ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಶಿಫಾರಸು ಮಾಡಲಾಗುವುದು.
ಪ್ರಸ್ತುತ 16ನೇ ಹಣಕಾಸು ಆಯೋಗದ ಅವಧಿ 2026-2031ರ ನಡುವಣ ಐದು ವರ್ಷಗಳು. ಈ ಆಯೋಗವು ರಾಜ್ಯಗಳ ಪಾಲನ್ನು ಶೇ.41 ಎಂದು ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಈ ಶಿಫಾರಸನ್ನು ಅಂಗೀಕರಿಸಿದೆ. ಬಡರಾಜ್ಯಗಳಿಗೆ ಹೆಚ್ಚಿನ ಹಂಚಿಕೆಯ ಸಮಾನತೆ ತತ್ವ, ಕಾರ್ಯಕ್ಷಮತೆ ಮತ್ತು ದಕ್ಷತೆಯ ಅಂಶಗಳು ಹಂಚಿಕೆಯಲ್ಲಿ ಸಮತೋಲನ ಸೂತ್ರವನ್ನು ರೂಪಿಸುತ್ತವೆ.
ಪ್ರತಿ ಆಯೋಗದ ಅವಧಿಯಲ್ಲಿ ಸಲಹೆಗಳು, ದತ್ತಾಂಶ ಮತ್ತು ನೀತಿ ಆದ್ಯತೆಗಳ ಆಧಾರದಲ್ಲಿ ಮಾನದಂಡಗಳು ಮತ್ತು ಹೆಚ್ಚುವರಿ ತೂಕ ನೀಡಿಕೆಯ ಅಂಶಗಳು ಬದಲಾಗುತ್ತವೆ.
16ನೇ ಹಣಕಾಸು ಆಯೋಗ ಅನುಸರಿಸಿದ ಮಾನದಂಡಗಳು ಮತ್ತು ಹೆಚ್ಚುವರಿ ತೂಕನೀಡಿಕೆಯ ಅಂಶಗಳ ಪೈಕಿ ರಾಜ್ಯಗಳ ನಡುವಿನ ತಲಾದಾಯ ಅಂತರವನ್ನು ಗಣನೆಗೆ ತೆಗೆದುಕೊಂಡು ಬಡರಾಜ್ಯಗಳಿಗೆ ಹೆಚ್ಚು ಪಾಲು ನೀಡಲಾಗುವುದು. ಈ ಅಂಶದ ಪ್ರಕಾರ ಗರಿಷ್ಠ ತೂಕ ನೀಡಿಕೆಯ ಪ್ರಮಾಣ ಶೇ.42.5ರಷ್ಟು. ಜನಸಂಖ್ಯಾ ನಿಯಂತ್ರಣದಲ್ಲಿ ಉತ್ತಮ ಸಾಧನೆಗೆ ಪ್ರೋತ್ಸಾಹದ ಅಂಶ, ಆಯಾ ರಾಜ್ಯದ ಒಟ್ಟು ಭೂವಿಸ್ತೀರ್ಣ, ಒಟ್ಟು ಜನಸಂಖ್ಯೆ ಹಾಗೂ ಆಯಾ ರಾಜ್ಯ ಉಳಿಸಿಕೊಂಡಿರುವ ಕಾಡಿನ ಪ್ರಮಾಣವನ್ನು ಪರಿಗಣಿಸಲಾಗುವುದು. ಸಾಮಾಜಿಕ ಮತ್ತು ಭೌತಿಕ ಮೂಲಸೌಲಭ್ಯಗಳು ಸರಿಯಾಗಿ ವಿಕಾಸ ಆಗದಿರುವ ರಾಜ್ಯಗಳಿಗೆ ಹೆಚ್ಚಿನ ಹಂಚಿಕೆ ಮಾಡಲಾಗುತ್ತದೆ. ರಾಜ್ಯಗಳ ಹೆಚ್ಚು ತೆರಿಗೆ ಸಂಗ್ರಹದ ಸಾಮರ್ಥ್ಯಗಳು, ಆರ್ಥಿಕ ಶಿಸ್ತನ್ನು ಪಾಲಿಸುವ ರಾಜ್ಯಗಳು, ದೇಶದ ಜಿಡಿಪಿಗೆ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಿಗೆ ಹೆಚ್ಚಿನ ಹಂಚಿಕೆ ಮಾಡಬೇಕಾಗುತ್ತದೆ.
ಈ ಅಂಶಗಳನ್ನು ಆಧರಿಸಿ ಮಾಡಲಾಗುವ ಹಂಚಿಕೆಯನ್ನು ಭಾರತದ ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ಪ್ರಮಾಣೀಕರಿಸುತ್ತದೆ. ಈ ಒಟ್ಟು ಪ್ರಕ್ರಿಯೆಯು ರಾಜ್ಯದಿಂದ ರಾಜ್ಯಕ್ಕೆ ಕೇಂದ್ರ ಸರ್ಕಾರ ವಿವೇಚನಾ ರಹಿತವಾಗಿ ತನ್ನ ಮನಸಿಗೆ ಬಂದಂತೆ ತೆರಿಗೆ ಆದಾಯವನ್ನು ಹಂಚಿಕೆ ಮಾಡದಂತೆ ನಿರ್ಬಂಧಿಸುತ್ತದೆ.
ಆದರೆ 15ನೆಯ ಹಣಕಾಸು ಆಯೋಗವು ಮೋದಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಸೇರಿಕೊಂಡು ದೇಶದ ಅನೇಕ ಪ್ರಗತಿಶೀಲ ರಾಜ್ಯಗಳಿಗೆ ಅನ್ಯಾಯ ಮಾಡಿದ ಆಪಾದನೆ ಹೊತ್ತಿದೆ. ಇಂತಹ ರಾಜ್ಯಗಳ ವಿತ್ತೀಯ ಶಿಸ್ತುಗಳು ತಲೆಕೆಳಗಾಗಿ ಹೋಗಿವೆ.
ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. 14ನೆಯ ಹಣಕಾಸು ಆಯೋಗ ಮಾಡಿದ್ದ ಹಂಚಿಕೆಗೆ ಹೋಲಿಸಿದರೆ, 15ನೆಯ ಹಣಕಾಸು ಆಯೋಗದ ಹಂಚಿಕೆಯಲ್ಲಿ ಏಕಾಏಕಿ ಶೇ.23ರಷ್ಟು ಪಾಲು ಖೋತಾ ಆಯಿತು. 14ನೆಯ ಹಣಕಾಸು ಆಯೋಗ ಮಾಡಿದ್ದ ಶೇ.4.71 ಹಂಚಿಕೆಯನ್ನು 15ನೆಯ ಹಣಕಾಸು ಆಯೋಗ ಶೇ.3.64ಕ್ಕೆ ಇಳಿಸಿ ಕರ್ನಾಟಕಕ್ಕೆ ಪರಮ ಅನ್ಯಾಯ ಬಗೆಯಿತು. ಕೇಂದ್ರ ಸರ್ಕಾರವು ರಾಜ್ಯಗಳಿಗೆ 100 ರುಪಾಯಿ ಹಂಚಿಕೆ ಮಾಡಿದರೆ ಅದರಲ್ಲಿ ನಾಲ್ಕು ರುಪಾಯಿ 71 ಪೈಸೆ ಕರ್ನಾಟಕಕ್ಕೆ ಸಿಗುತ್ತಿತ್ತು. ಈ ಪ್ರಮಾಣವನ್ನು 15ನೆಯ ಹಣಕಾಸು ಆಯೋಗ ಮೂರು ರುಪಾಯಿ 64 ಪೈಸೆಗೆ ಇಳಿಸಿಬಿಟ್ಟಿತ್ತು. ಪರಿಣಾಮವಾಗಿ ಪ್ರತಿ ವಿತ್ತೀಯ ವರ್ಷದಲ್ಲಿ 80 ಸಾವಿರ ಕೋಟಿ ರುಪಾಯಿಯ ಅಗಾಧ ಪಾಲಿನಿಂದ ಕರ್ನಾಟಕ ವಂಚಿತವಾಯಿತು.
ತಲಾವಾರು ಆರ್ಥಿಕ ಉತ್ಪಾದಕತೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯದಿಂದ ಕೇಂದ್ರ ಸರ್ಕಾರವು ತೆರಿಗೆ ಮತ್ತು ಸೆಸ್ ರೂಪದಲ್ಲಿ ಪ್ರತಿ ವರ್ಷ 4.50 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿ ರುಪಾಯಿಯನ್ನು ಸಂಗ್ರಹಿಸುತ್ತದೆ. ಆದರೆ ಇಡೀ ದೇಶದಲ್ಲಿಯೇ ಕೇಂದ್ರದಿಂದ ಅತ್ಯಂತ ಕಡಿಮೆ ತೆರಿಗೆ ಪಾಲು ಮತ್ತು ಅನುದಾನ ಪಡೆಯುವ ರಾಜ್ಯ ಕರ್ನಾಟಕವೇ ಆಗಿರುವುದು ಬಹು ದೊಡ್ಡ ವಿಡಂಬನೆ.
ಹೀಗಾಗಿ 14ನೆಯ ಹಣಕಾಸು ಕರ್ನಾಟಕಕ್ಕೆ ಹಂಚಿಕೊಟ್ಟಿದ್ದ ಶೇ.4.71 ರಷ್ಟು ಪಾಲು ರಾಜ್ಯಕ್ಕೆ ಮೊದಲು ಸಿಗಬೇಕು. ಆಗ 15ನೆಯ ಹಣಕಾಸು ಆಯೋಗ ಮಾಡಿದ್ದ ಅನ್ಯಾಯವನ್ನು ಸರಿಪಡಿಸಿದಂತಾಗುತ್ತದೆ. ಆದರೆ ಈ ಅವಧಿಯಲ್ಲಿ ರಾಜ್ಯದಿಂದ ಸಂದಾಯ ಆಗುತ್ತಿರುವ ತೆರಿಗೆ ಮತ್ತು ಸೆಸ್ ಪ್ರಮಾಣವೂ ಅಧಿಕವಾಗಿರುತ್ತದೆ. ಅದಕ್ಕೆ ತಕ್ಕಂತೆ ಹಂಚಿಕೆಯಲ್ಲಿ ಏರಿಕೆಯೂ ಆಗಬೇಕಾಗುತ್ತದೆ. ಹದಿನೈದನೆಯ ಹಣಕಾಸು ಆಯೋಗದ ಅನ್ಯಾಯವನ್ನು ಸರಿಪಡಿಸಬೇಕು ಮತ್ತು ಸರಿಪಡಿಸಿದ ಮೊತ್ತವನ್ನು ಮೀರಿ ಹೆಚ್ಚಿಸಬೇಕು ಕೂಡ. ಅದೇ ನೈಜ ನ್ಯಾಯ ಸಲ್ಲಿಕೆ. 14ನೆಯ ಹಣಕಾಸು ಆಯೋಗ ಹಂಚಿ ಕೊಟ್ಟಿದ್ದ ಶೇ.4.71ಗಿಂತ 0.001ರಷ್ಟು ಕಡಿಮೆ ಹಂಚಿಕೆ ಮಾಡಿದರೂ ರಾಜ್ಯಕ್ಕೆ ದೊಡ್ಡ ಅನ್ಯಾಯದ ಮುಂದುವರಿಕೆ ಎಂದೇ ಭಾವಿಸಬೇಕಾಗುತ್ತದೆ. 15ನೆಯ ಹಣಕಾಸು ಆಯೋಗವು ಕರ್ನಾಟಕಕ್ಕೆ 5,495 ಕೋಟಿ ವಿಶೇಷ ಅನುದಾನ ಮತ್ತು ಬೆಂಗಳೂರಿನ ಪೆರಿಫರಲ್ ರಸ್ತೆಗೆ ಮತ್ತು ಕೆರೆಗಳ ಅಭಿವೃದ್ಧಿಗೆ ತಲಾ 3 ಕೋಟಿ ರುಪಾಯಿಗಳನ್ನು ನೀಡುವಂತೆ ಶಿಫಾರಸು ಮಾಡಿತ್ತು.
ಆದರೆ ಮೋದಿ ಸರ್ಕಾರ ಈ 11,495 ಕೋಟಿ ರುಪಾಯಿಯನ್ನು ಕೂಡ ನೀಡದೆ ವಂಚಿಸಿತು. ಕೇಂದ್ರ ಸರ್ಕಾರದ ಈ ವಂಚನೆಯಿಂದ ಕೇಂದ್ರದ ಯೋಜನೆಗಳಲ್ಲಿ ರಾಜ್ಯ ಸರ್ಕಾರ ನೀಡಬೇಕಾದ ಶೇ.40ರಷ್ಟು ಪಾಲಿನ ಭರಿಸುವಿಕೆಗೆ 23,402 ಕೋಟಿ ರುಪಾಯಿಯ ಹೆಚ್ಚುವರಿ ಹೊರೆಯನ್ನು ಕರ್ನಾಟಕ ಹೊರಬೇಕಾಯಿತು.
ಸೆಸ್ ಮತ್ತು ಸರ್ಛಾರ್ಜುಗಳ ಮೂಲಕವೂ ಕೇಂದ್ರ ಸರ್ಕಾರ ಐದೂವರೆ ಲಕ್ಷ ಕೋಟಿ ರುಪಾಯಿ ಸಂಗ್ರಹಿಸಿದೆ. ಈ ಎಲ್ಲ ಅಂಶಗಳನ್ನೂ ಲೆಕ್ಕ ಹಾಕಿದರೆ ರಾಜ್ಯಗಳಿಗೆ ಹಂಚಿಕೆ ಆಗುತ್ತಿರುವ ತೆರಿಗೆ ಪಾಲಿನ ವಾಸ್ತವ ಪ್ರಮಾಣ ಶೇ.42 ಅಲ್ಲ, ಬದಲಿಗೆ ಕೇವಲ ಶೇ.30 ಮಾತ್ರ.
ಇದನ್ನೂ ಓದಿ ಗಂಭೀರತೆ ಕಳೆದುಕೊಂಡು ಮೀಮ್ಸ್ ಮಟ್ಟಕ್ಕಿಳಿಯಿತೇ ಕೇಂದ್ರ ಬಜೆಟ್!
ಮಾನ್ಯ ಪ್ರಧಾನಮಂತ್ರಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕಾಲವೂ ಒಂದಿತ್ತು. ಆಗ ಅವರು ರಾಜ್ಯ ಸರ್ಕಾರಗಳ ತೆರಿಗೆ ಹಂಚಿಕೆ ಪಾಲನ್ನು ಶೇ.50ಕ್ಕೆ ಹೆಚ್ಚಿಸಬೇಕು. ಕೇಂದ್ರ ಸರ್ಕಾರ ಸಂಗ್ರಹಿಸುವ ಸೆಸ್ ಮತ್ತು ಸರ್ಛಾರ್ಜ್ ಗಳಲ್ಲಿ ದೊಡ್ಡ ಪಾಲನ್ನು ರಾಜ್ಯಗಳಿಗೆ ನೀಡಬೇಕು ಎಂದು ಆಗ್ರಹಿಸಿದ್ದರು.
ಮುಖ್ಯಮಂತ್ರಿಯಾಗಿ ಮಾಡಿದ್ದ ಆಗ್ರಹವನ್ನು ಪ್ರಧಾನಿ ಆದ ನಂತರ ಮರೆತರೇಕೆ ಮೋದಿಯವರು? ಸೊಸೆ ಅತ್ತೆಯಾದ ತಕ್ಷಣ ತಾನೂ ಒಂದು ಕಾಲಕ್ಕೆ ಸೊಸೆಯಾಗಿದ್ದುಕೊಂಡು ಗಂಡಾಳಿಕೆಯ ಕುತಂತ್ರದಿಂದ ಅತ್ತೆಯ ಕೋಪಕ್ಕೆ ತುತ್ತಾಗಿದ್ದಳು ಎಂಬ ಅಂಶವನ್ನೇ ಮರೆಯುವಂತೆ.
ಜಿ.ಎಸ್.ಟಿ..ಸೆಸ್ ಪರಿಹಾರ ನೀಡುತ್ತೇನೆಂಬ ವಚನವನ್ನೂ ಕೇಂದ್ರ ಸರ್ಕಾರ ಮುರಿದಿದೆ. ಈ ಬಾಬತ್ತಿನಲ್ಲಿ ರಾಜ್ಯ ಸರ್ಕಾರ ಪ್ರತಿ ವರ್ಷ 20 ಸಾವಿರ ಕೋಟಿ ರುಪಾಯಿಗಳನ್ನು ಕಳೆದುಕೊಳ್ಳುತ್ತಿದೆ.
ಈ ಎಲ್ಲದರ ಒಟ್ಟು ಸಾರಾಂಶವೆಂದರೆ ಕರ್ನಾಟಕವು ಕಳೆದ 2020ರಿಂದಲೂ ಕೇಂದ್ರದ ಆರ್ಥಿಕ ಅನ್ಯಾಯಗಳಿಗೆ ಸಿಲುಕಿ ಹೈರಾಣಾಗಿದೆ. ರಾಜ್ಯವು ಪ್ರಸಕ್ತ 16ನೆಯ ಹಣಕಾಸು ಆಯೋಗದ ಮುಂದೆ ತನಗಾಗಿರುವ ಈ ಎಲ್ಲ ಅನ್ಯಾಯಗಳನ್ನೂ ಸರಿಪಡಿಸುವಂತೆ ಅಹವಾಲು ಸಲ್ಲಿಸಿತ್ತು.
ತನ್ನ ಸಂಪನ್ಮೂಲಗಳಲ್ಲಿ ಕರ್ನಾಟಕ ಸಿಂಹ ಪಾಲನ್ನು ಬೇಡುವ ಮಾತು ದೂರವೇ ಉಳಿಯಿತು. ನೂರು ರುಪಾಯಿಯಲ್ಲಿ ಐದು ರುಪಾಯಿಯನ್ನು ವಾಪಸು ಕೊಡುತ್ತಿಲ್ಲ ಮೋದಿ ಸರ್ಕಾರ.





